ನಿಮಗೋಸುಗವೆ ನನ್ನ ಮನೆ ಸಿಂಗರಿಸಿದೆ;
ನಿಮಗೋಸುಗವೆ ನನ್ನ ತನು ಸಿಂಗರಿಸಿದೆ.
ಮಂದಿ ಜನರಾರಿಲ್ಲಿ ಬರರು; ಭಯಬೇಡಿ, ಬನ್ನಿ;
ಕವಿಗಳಿರ, ಋಷಿಗಳಿರ, ಹೇ ಮಹಾಪುರುಷರಿರ,
ಜಗದಖಿಲ ಮಹಿಮರಿರ, ಕೃಪೆಮಾಡಿ ಬನ್ನಿ!

ಬಣ್ಣಬಣ್ಣದ ಹೂವು ಕಣ್ಣೊಸಗೆಯಾಗಿದೆ;
ತರತರದ ಪರಿಮಳದ ಕೆಂಪುಹೊಗೆ ತುಂಬಿದೆ;
ನೀಲಾಂಜನಾದಿಗಳ ದೀಪದುತ್ಸವವಿದೆ;
ಗೌರವ ಕಲೋಪಾಸಕನ ಪೂಜೆಯೂ ತಾನಿದೆ!

ಸಿಂಗಾರಮಾಡಿಕೊಂಡಿಹನು ಕವಿ ನಿಮಗಾಗಿ:
ಊರ ಕಣ್ಣನು ಸೆಳೆವ ಬಿಂಕಕಲ್ಲ.
ಬಾಳುವನು ಬರೆಯುವನು ನಿಮ್ಮ ಮೆಚ್ಚುಗೆಗಾಗಿ:
ಊರ ಮೆಚ್ಚುಗೆಗಳುವ ಮಂಕನಲ್ಲ!

೨೩. ೧೦. ೧೯೩೮