ನನ್ನ ನಿನ್ನ
ಮುನ್ನಿನೊಲುಮೆಯ ಸವಿಯ ಜೇನು
ಇನ್ನು ಬೇಸರವಾಯಿತೇನು?
ಎದೆಯ ತಾವರೆ ಬಾಡಿತೇನು?
ಮೊದಲ ಚೆಲುವದಕಿಲ್ಲವೇನು?
ಅಥವ ಬೇರೆಯ ಹೂವು ನಿನ್ನ
ಮನವ ಸೆಳೆಯುತೆ? ಹೇಳು, ಚಿನ್ನ!
ದೂರವಾಗುವ ಶಂಕೆಯಿಂದಲೆ
ನೀರು ಚಿಮ್ಮಿರೆ ಕಣ್ಣಲಿ,
ದೂರವಾದರೆ, ಹೇಳಲೇನದು,
ಹೊರಳುವುದು ಮೈ ಮಣ್ಣಲಿ!

೪.೬.೧೯೩೫