ನರ್ತಿಸಿದಳು ಸ್ವರಸುರನಾರಿ,
ಲಾಸ್ಯವಿನ್ಯಾಸದ ವೈಯಾರಿ:
ಕೇಳಿರೆ ಕಿವಿ, ಕಂಡನು ಕವಿ,
ರಸ ಸಂಚಾರಿ!


ಪೀತಾಂಬರದುಡೆ, ಹೂ ತುಂಬಿದ ಜಡೆ,
ದಂತದಿ ಕೈಗಯ್ದಿಹ ಮೈ,
ಗೆಡೆಹಾವಿನ ಹೆಡೆ ಎಣೆಯಾಡುವ ನಡೆ,
ತೈತಕತೈಗುಲಿಯುವ ಕೈ!


ಧುಮು ಧಮು ಧುಮು ಕೇಳ್: ಜಲಪಾತದ ಬೀಳ್!
ಕಾಣ್ ಅದೊ ಗಿರಿಯಿಂದರುಳವ್ವ ಝರಿ!
ಬೆಳ್ಳಂಗೆಡೆವುದು ಬೆಳ್‌ನೆಯ್ಯಂದಿದಿ,
ಮುಂಜಾಗಲ್ ಮಲೆಪಸುರ್ದರಿ!


ದೂರದ ಮೊರೆ: ಏನದು? ಕಡಲಿನ ಕರೆ;
ತೆರೆ ತೆರೆ ತೆರೆ ಬಂದುದು ಬಳಿಸಾರಿ.
ಸುಳಿ, ನೊರೆ, ತುಂತುರು, ನೀಲ ಅನಂತತೆ:
ಬಂದಪ್ಪಿತು ಸುಖರಸ ಲಯವಾರಿ!


ಕಣ್‌ ಮುಚ್ಚಿತು ನಿಶೆ, ಕಣ್‌ದೆರೆಯಿತು ಉಷೆ,
ಇಂದ್ರಿಯ ದಿಗಂತದೊಳದೊ ಸೂರ್ಯೋದಯ!
ನೀಲಾಂಬರ ರಮೆ ಮೇಘತಿಲೋತ್ತಮೆ:
ಆಲಿಸು! ನಂದನವನ ಖಗಹೃದಯ!


ಶಿಲೆ ಶಿಲೆ ಶಿಲೆ ಸೇರಿ, ತರು ತರು ತರು ಏರಿ,
ಶೈಲಾರಣ್ಯಧ್ಯಾನವ ತೋರಿ,
ಪರ್ವಿದವದೊ ಪರ್ವತ ಪಂಕ್ತಿ
ರಾಶಿ ರಾಶಿ ದಿಗ್ದಂತಿ!


ಬಂದನುಭವ ಬರುವನುಭವ
ಭವ ಭವ ಭವದನುಭವ ಸಾಗರದಿ
ದೇವಾಸುರೆ ಫಣಿಮಂದರೆ
ಮೋಹಿನಿಯೋಲಮೃತದ ಕರದಿ:
ನರ್ತಿಸಿದಳು ಸ್ವರ ಸುರನಾರಿ:
ಲಾಸ್ಯವಿನ್ಯಾಸದ ವೈಯಾರಿ;
ಕೇಳಿರೆ ಕಿವಿ, ಕಂಡನು ಕವಿ,
ರಸ ಸಂಚಾರಿ!

೦೨. ೧೨. ೧೯೩೯