ಅಲೌಕ ಶಾಂತಿಯ ಅಚಂದ್ರ ರಾತ್ರಿ
ಅಸಂಖ್ಯ ತಾರಾ ಕಟಾಕ್ಷ ನೇತ್ರಿ.
ಕೃತ್ತಿಕೆಯಿಂತಿದೆ ಪುರವನ ಧಾತ್ರಿ
ವಿದ್ಯುದೀಪಸ್ತಬಕಜಟಿ!
ಸಿಂಜಿನಿ ರಂಜಿತ ಸುರಧನು ವಂಕಿಮೆ
ವೀಣಾ ಕ್ವಣಿತಾರೋಹಣ ಕೃತಿ ಸಮೆ
ಕುಣಿವಳ್, ಕಾಣ್ ಅದೊ, ಸಲಿಲ ತಿಲೋತ್ತಮೆ
ಚಂಚಚ್ಚಾರು ಸುವರ್ಣ ನಟಿ!

ಬಣ್ಣಬಣ್ಣಗಳ ನೀರಿನ ಧಾರೆ
ನೆಯ್ಯುತ್ತಿರೆ ನವರತ್ನದ ಸೀರೆ,
ಕುಣಿನವಿಲಂದದಿ ತುಂತುರ್ನೀರೆ
ಮನಮೋಹಿಸುವಳೊ ಜಲಜಾತೆ!
ಹಳದಿಯ ಕೆಂಪಿನ ನೀಲಿಯ ಪಚ್ಚೆಯ
ನಾನಾ ಭಾವದ ನಾನಾ ಇಚ್ಛೆಯ
ಕ್ಷಣಕ್ಷಣ ರಂಗಿನಿ, ಕ್ಷಣ ನಿಸ್ಸಂಗಿನಿ,
ರಾಗಿಣಿ, ವೈರಾಗಿಣಿ …. ಸೋತೆ!

ರಾಸಕ್ರೀಡೆಯ ಬೃಂದಾವನವೋ?
ಕೃಷ್ಣಗೋಪಿಯರ ಯಮುನಾ ತನುವೋ?
ನೆರೆದೀ ಪ್ರೇಮಿಗಳೋಕಳಿ ಮನವೋ?
ಪದ ಕಟಿ ಭ್ರೂ ವಿನ್ಯಾಸವಿದೋ?
ಚಿಮ್ಮುತ್ತಿದೆ ನೀರ್ಬಿಲ್ಲಿನ ಬುಗ್ಗೆ;
ದಾಳಿಡುತಿದೆ ಬಹುಬಣ್ಣದ ಲಗ್ಗೆ!
ನೀರ್ನರ್ತಕಿಯೋ? ರಸರತಿ ಸಖಿಯೋ?
ಪ್ರತಿಭಾ ಛಂದಃಪ್ರಾಸವಿದೋ?

ಹೊಮ್ಮಿತು: ಹೊಮ್ಮಿದೆ! ಚಿಮ್ಮಿತು: ಚಿಮ್ಮಿದೆ!
ಬಾಗಿದೆ; ಬಳುಕಿದೆ; ಬಿಂಕದಿ ಕೊಂಕಿದೆ!
ಕುಣಿದೆನ್, ತಣಿದೆನ್, ಚಣಚಣಕಾದೆನ್
ಕಾಮನ ಬಿಲ್ಲಿನ ರವಿರಶ್ಮಿ!
ದೃಷ್ಟಿಸಿ ಲೀನಯ್ಸನುಭವಿಸಿರೆಯಿರೆ,
ಒಯ್ಯನೆ ಬಗೆಯಂಚಿಗೆ ಸುರಿದುರ್ವರೆ
ಲಯವಾಗುಳಿದೆವಲ್ಲಿ ನಾವಿರ್ವರೆ:
ಝರ ಸುರನಟಿ ಮೇಣ್ — ಅಹಮಸ್ಮಿ!

೧೬. ೧೨. ೧೯೪೦