ಸಂದೇಹಿಯ ಪ್ರಾರ್ಥನೆ

ಓ ದೇವರೆ, ನೀನಿದ್ದರೆ,
ನನ್ನಾತ್ಮವನದು ಇದ್ದರೆ,
ಸಂರಕ್ಷಿಸು, ಬಲವಿದ್ದರೆ!
ಪ್ರಾರ್ಥನೆಯಿದು ನಿನಗೆ,
ಸಂದೇಹವೆ ಆರಾಧನೆ
ಮೇಣ್ ಸಾಧನೆ ನನಗೆ.

೨೦-೧೨-೧೯೨೯

 

ಬಿಂಕ

ನೀ ಕಲಿಸಿದುಲಿಯನ್ನೆ ನಾನುಲಿಯಲೊಮ್ಮೊಮ್ಮೆ
ನನಗೆ ಹೆಮ್ಮೆ:
ರವಿಯ ಮರುಬಿಂಬಿಸುವ ಕನ್ನಡಿಗೆ ನನ್ನಂತೆ
ಬಿಂಕವಂತೆ!

೨೦-೯-೧೯೩೧

 

ಕವಿಮಾನಸ

ಮಮ ಮಾಯಾಮಯ ಮನಮಂದಿರದಲಿ
ಶತಚಂದ್ರೋದಯವಾಗುತ್ತಿವೆ;
ಮಮ ಮನ ಮಾನಸ ಕಮಲಾಕರದಲಿ
ಶತ ಸುಮ ವಿಕಷಿತವಾಗುತಿವೆ!

೨೭-೯-೧೯೩೧

 

ಮುತ್ತಿನ ಮುಗುಳು

ಅಂತದ ತುಟಿಯಲಿ ಅನಂತವೊತ್ತಿದ
ಮುತ್ತಿನ ಮುಗುಳಾನು!

೨೭-೯-೧೯೩೧

 

ಮುನ್ನುಡಿ

ತುತ್ತತುದಿಯ ಮೌನಕೇಕೆ
ಇಷ್ಟು ದೊಡ್ಡ ಮುನ್ನುಡಿ?
ರೂಪವಿಲ್ಲದಾತ್ಮಕೇಕೆ
ಜಗದ ರನ್ನಗನ್ನಡಿ?

೫-೧೦-೧೯೩೧

 

ನಾನು ನೀನು

ನೀಲ ನಭವ ನೋಡಿ ನೋಡಿ
ನಯನ ನೀಲವಾಗಿದೆ;
ಪಯಿರು ಪಸುರಿನೊಡನೆ ಆಡಿ
ಜೀವ ಪಚ್ಚೆಯಾಗಿದೆ:
ಅಂತೆ ನಿನ್ನ ಚಿಂತೆ ಮಾಡಿ
ನಾನು ನೀನೆ ಆಗಿದೆ!

೬-೧೦-೧೯೩೧

 

ದೇಹ ಆತ್ಮ

ನಿನ್ನ ದೇಹದ ಪಾಪವೆಲ್ಲವು
ದೇಹದೊಡನೇ ಅಳಿವುದು.
ಆದರಾತ್ಮದ ಕುಂದುಕೊರತೆಯ
ಆತ್ಮದೊಡನೇ ಉಳಿವುದು.

೨೯-೧೧-೧೯೩೧

 

ಶತರೂಪಿ

ನೂರು ರೂಪದಿ ನಿಂದು ಕಣ್ಗೆ ಮೆರೆಯುವೆ ನೀನು,
ಸೌಂದರ್ಯ ರೂಪಿ.
ನೂರು ಭಾವದಿ ಬಂದು ಎದೆಯ ತುಂಬುವೆ ನೀನು,
ಹೇ ಸತ್ಯರೂಪಿ.

೧೩-೧೦-೧೯೩೨

 

ನನ್ನ ಮನಮಂದಿರವನೆಲ್ಲ

ನನ್ನ ಮನಮಂದಿರವನೆಲ್ಲ ನೀ ತುಂಬಿರುವೆ;
ಬೇರೊಬ್ಬರಿಗೆ ಅಲ್ಲಿ ತಾವಿಲ್ಲವೋ!
ಜಗವೆಲ್ಲ ಬೇಡುತಿಹುದೆಡೆಯ ಪಡೆಯಲು ಅಲ್ಲಿ;
ನೀ ತುಂಬಿದಾಮೇಲೆ ತಾವೆಲ್ಲಿಯೋ?

೧೯-೧-೧೯೩೩

 

ಎರಡು ವರಗಳು

ಎರಡು ವರಗಳ ಹಿಡಿದು ನಿಂತಿರುವೆ, ದೇವಿ;
ಒಂದು ಕಾಮನಬಿಲ್ಲು, ಇನ್ನೊಂದು ಕಾವಿ!
ಒಂದು ಮುಗಿಲಲಿ ಮುಗುಳ್ನಗೆ ಬೀರಿ ಕರೆಯುತ್ತಿದೆ;
ಇನ್ನೊಂದು ಪಕ್ಕದೊಳೆ ನಿಂತು ಕಿವಿಗೊರೆಯುತಿದೆ
ಎರಡನೂ ನೀಡಿತ್ತ, ಓ ಎನ್ನ ದೇವಿ:
ಕೈಗೆ ಕಾಮನ ಬಿಲ್ಲು, ಮೈಗಿರಲಿ ಕಾವಿ!

೨೨-೭-೧೯೩೩

 

ಶ್ರದ್ಧೆ ಸಂದೇಹ

ನೂರಾರು ಮತಭಕ್ತರೊಣಗು ನಂಬುಗೆಗಿಂತ
ಸಜ್ಜನರ ಸಂದೇಹದಲಿ ಹೆಚ್ಚು ಶ್ರದ್ಧೆಯಿದೆ:
ತಿಳಿಯಲೆಳಸುವ ಸಾಧಕನ ಮನದಿ ಬುದ್ಧಿಯಿದೆ;
ತಿಳಿದಂತೆ ನಟಿಸುವಾತನೊ ಬರಿಯ ದಿಗ್‌ಭ್ರಾಂತ!

೨-೧೦-೧೯೩೩

 

ಕಲೆ ನಮ್ಮಾತ್ಮದ ಮೇವು

ಎತ್ತಣ ನೋವು? ಎಲ್ಲಿಯ ಸಾವು?
ದೇವರ ಹುಚ್ಚರೊ ನಾವು!
ಬಾಳೊಳು ಸಾವು ಬೆಲ್ಲದೆ ಬೇವು:
ಕಲೆ ನಮ್ಮಾತ್ಮದ ಮೇವು!

೨೭-೧೦-೧೯೩೩

 

ಆನೆ ಮತ್ತು ಕುರುಡರು

ಮುಟ್ಟಿಸೊಂಡಿಲನು ಮುಂಡಿಗೆ ಎಂಬ,
ಮುಟ್ಟಿ ಕಿವಿಗಳನು ಮೊರವೆಂದೆಂಬ,
ಮುಟ್ಟಿ ಹೊಟ್ಟೆಯನು ಗೋಡೆ ಇದೆಂಬ
ಕುರಡರ ಕಾಣ್ಕೆಯ ಕಾಣಯ್ಯ?

೧೫-೨-೧೯೩೪

 

ಮಠಾಧಿಪತಿ

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!

೧೫-೨-೧೯೩೪

 

ಒಂದು ಹೂವಿಗೆ

ನಿನ್ನ ಚೆಲುವು ನಿನಗೆ ಅಲ್ಲ,
ನಿನ್ನ ಪಡೆದ ಶಿವನಿಗೆ,
ಮತ್ತೆ ನಿನಗೆ ರಂಗವಾಗಿ
ಶಿವ ಮಾಡಿದ ಅವನಿಗೆ.
ಇದನೊಂದನು ಮರೆಯದಿರು:
ಮರೆತು ಬರಿದೆ ಮೆರೆಯದಿರು,
ಹೂವೇ — ಮುದ್ದು ಹೂವೇ!

೧೮-೭-೧೯೩೪

 

ಕಾಲ ಮತ್ತು ದೇಶ

ಕಾಲವೆಂದರೆ ಏನು? ರವಿಯ ದೂರಕೆ ನಾನು
ದಬ್ಬಿದೆನು: ಆ ಆತ್ಮಬಲವೆ ಕಾಲ!
ದೇಶವೆಂದರೆ ಏನು? ಒಲಿದು ಭೂಮಿಯ ನಾನು
ತಬ್ಬಿದೆನು: ಆ ಆತ್ಮದೊಲವೆ ದೇಶ!

೧೪-೧೧-೧೯೩೪

 

ದೇವರ ಸನ್ನಿಧಿ ಎಲ್ಲೆಲ್ಲು!

ಯಾರಾಗಿರು ನೀ, ಏನಾಗಿರು ನೀ,
ಎಲ್ಲಿದ್ದೀಯೋ ಅಲ್ಲೇ ನಿಲ್ಲು!
ನಿನಗಿದ್ದರೆ ಮನಸಿದ್ದರೆ ಕಣ್ಣು
ಮೇಲೆ ಕೆಳಗೆ ಸುತ್ತಲು ನೋಡು:
ನೀ ನೋಡುವ ಆ ಹುಲ್ಲು,
ನೀ ನಿಂತಿಹ ಈ ಕಲ್ಲು
ಎಲ್ಲವು ಸ್ವರ್ಗದ ನೆಲೆವೀಡು:
ದೇವರ ಸನ್ನಿಧಿ ಎಲ್ಲೆಲ್ಲು!

೧೭-೭-೧೯೩೫

 

ಕವಿಯ ಹೃದಯ

ಕನಸನೆಳೆದು ತಂದು ತಿರೆಗೆ
ಅದನು ನನಸುಗೈವ ವರೆಗೆ
ನುಡಿದೆ ನುಡಿವುದೆದೆಯ ವೀಣೆ;
ಎಂದಿಗದಕೆ ಬಿಡುವ ಕಾಣೆ.

೧೮-೯-೧೯೩೫

 

ಕ್ರಾಂತಿಮಂತ್ರ

ಕಡೆಯ ಪುರೋಹಿತನ ಕರುಳು
ಕಡೆಯ ದೊರೆಯ ಕೊರಳಿಗುರುಳು
ಬಿಗಿದ ಹೊರತು ಬರಿಯ ನೆರಳು
ಸ್ವಾತಂತ್ರ್ಯದ ಸ್ವರ್ಗವು!

೩-೧೦-೧೯೩೫

 

ಕವಿಯೂ ಚೆಲುವೂ

ಚೆಲುವೆ ಬಿಸುಪು, ಕವಿಯೆ ಬೆಣ್ಣೆ,
ಕರಗಿ ಕರಗಿ ಹರಿವನು!
ಕವಿಯೆ ಬೆಂಕಿ, ಚೆಲುವೆ ಎಣ್ಣೆ,
ದಗ್ಗದಗ್ಗನುರಿವನು!

೪-೧೦-೧೯೩೫

 

ನಿಷ್ಕಾರಣಂ

ನಾ ನಿನ್ನನೊಲಿದಿಹುದು ನಿನ್ನ ಚೆಲುವಿಕೆಗಲ್ಲ,
ನಿನ್ನ ಐಸಿರಿಗಲ್ಲ, ಮತಿಗಲ್ಲ, ಜಸಕಲ್ಲ:
ನಾ ನಿನ್ನನೊಲಿದಿಹೆನು ನಿಷ್ಕಾರಣಂ!
ಕಾರಣಗಳೆಲ್ಲವೂ ನಶ್ವರಗಳೆಂದು ತಿಳಿ.
ಕಾರಣಂಗಳಿಗೆಲ್ಲ ಮೊದಲ ಕಾರಣ ಒಲುಮೆ:
ಸೃಷ್ಟಿಗೆಮ್ಮೊಲ್ಮೆಯೆ ಮಹಾಕಾರಣಂ!

೧೪-೧೦-೧೯೩೫

 

ಪೂರ್ಣತೆ ಶೂನ್ಯತೆ

ನೀನು ಬಳಿಯಿರೆ ಸುಗ್ಗಿಯು,
ದೂರ ಹೋದರೆ ಮಾಗಿಯು.
ನೀನು ಬಳಿಯಿರೆ ಹೂಮಳೆ,
ದೂರ ಹೋದರೆ ಮಳಲಿಳೆ.
ನೀನು ಬಳಿಯಿರೆ ಪೂರ್ಣತೆ,
ದೂರ ಹೋದರೆ ಶೂನ್ಯತೆ.

೧೫-೧೦-೧೯೩೫

 

ಇದ್ದೊಂದು

ಇದ್ದೊಂದು ಹೃದಯವನು ಕದ್ದೊಯ್ದೆ ನೀನು:
ಅನ್ಯರಿಗೆ ಕೊಡಲಿನ್ನು ನನಗಿರುವುದೇನು?

೮-೧೧-೧೯೩೫

 

ಲೋಕಕ್ಕೆ ಕವಿಯ ಪ್ರಾರ್ಥನೆ

ಹೊಟ್ಟೆಗಿಷ್ಟು ಹಿಟ್ಟು ಕೊಡಿ;
ನನ್ನ ನನಗೆ ಬಿಟ್ಟು ಬಿಡಿ.
ಹಾಡೆ, ಕೇಳಿ, ಹರುಷಪಡಿ;
ಇಷ್ಟೆ ಕವಿಯ ಪ್ರಾರ್ಥನೆ.

೫-೧-೧೯೩೬

 

ದೆವ್ವ ದೇವ

ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು;
ಪ್ರೇಮನಿಧಿಯಾಗಿರುವ ದೇವರಿಗೊಲುಮೆ ಸಾಕು.

೨೭-೮-೧೯೩೬

 

ಹಮ್ಮು

ಗೇರುಸೊಪ್ಪೆಯ ಮಹಾ ಜಲಪಾತವನು ನೋಡಿ
ನೀರರತ ಬಡವು ತೊರೆ ಎಂದಿತು: “ರಜಸ್ಸು!
ಒಂದಿಷ್ಟು ಸಭ್ಯ ಸಂಯಮವಿರದ ನಾಣ್ಗೇಡಿ!
ನೋಡೆನ್ನ ನಡತೆಯಲಿ ಎಷ್ಟಿದೆ ತಪಸ್ಸು?”

೫-೯-೧೯೩೬

 

ಒಲುಮೆ ರಾಹು

ನನ್ನಿಂದ ನೀನೆನಿತು ದೂರ ಓಡಿದರೇನು?
ಬೆನ್ನ ಬಿಡುವುದೆ ನಿನ್ನನೆನ್ನೊಲುಮೆ ರಾಹು?
ದೇಶದೇಶಾಂತರದಿ ಜನ್ಮಜನ್ಮಾಂತರದಿ
ಬಿಡದೆ ಬೆನ್ನಟ್ಟಿ ಹಿಡಿವುದು ನಿನ್ನನೆದೆಗಪ್ಪಿ
ನನ್ನೊಲುಮೆಗಿಚ್ಚು ನೀಳ್ದುರಿಯ ನೀಡು ಬಾಹು!

೨೬-೭-೧೯೩೭

 

ಒಳಗೂ ಹೊರಗೂ

ಮನೆಯ ಹೊರಗೋ ಹಸುರು ಹೊಲವು;
ಮನೆಯ ಒಳಗೋ ಹೊಸತು ಒಲವು!
ಹೊರಗೂ ಚೆಲುವು, ಒಳಗೂ ಚೆಲುವು:
ಕವಿಗೆ ಬೇಕೇನ್‌ ಬೇರೆ ಗೆಲುವು?

೭-೮-೧೯೩೭

 

ಮಾರ್ಗದರ್ಶಿ

ನಾ ನಡೆದ ಹಾದಿಯನು ಹಿಂತಿರುಗಿ ನೋಡಿದರೆ
ಬಗೆಯ ಬಾಯಲಿ ನೆನಹುಗಳ ಮೆಲಕು ಹಾಕಿದರೆ
ಹಜ್ಜೆಹೆಜ್ಜೆಗೆ ನೀನೆ ಕೈಹಿಡಿದು ನಡೆಸಿರುವೆ
ಎಂಬುದನು ನಾನರಿವೆ, ನನ್ನ ಗುರುವೆ!

೯-೧೨-೧೯೩೭

ಬುದ್ಧಿಸುಖಿ*

ಬುದ್ದಿಯೀಟಿಯ ಮೊನೆಯ ತುದಿಯಲಿ
ತತ್ತ್ವ ಕುಣಿಯುತಿದೆ;
ರಸ ಸಮಾಧಿಯೊಳೀಂಟಿ ಸಿದ್ಧಿಯು
ಸತ್ತ್ವ ತಣಿಯುತಿದೆ!
ಬದ್ಧಿ ಭಾವಗಳೆರಡರಲ್ಲಿಯು
ಅದ್ರಿಶಿರಕೆ ಸಮುದ್ರದಾಳಕೆ
ಮುಳುಗುತೇರುವ ಕವಿಯ ಕಣ್ಣಿಲಿ
ನೀರು ಹರಿಯುತಿದೆ!

೨೮-೧೨-೧೯೩೭

—-
* ಎಡ್ಡಿಂಗ್‌ಟನ್ ಮತ್ತು ಜೀನ್ಸ್ ಅದರ ವಿಜ್ಞಾನಗ್ರಂಥಗಳನ್ನೋದುತ್ತಾ.

 

ಒಬ್ಬನೆಯೆ ಬಂದೆ

ಕಣಿಗಿಲೆಯ ಗಿಡದಲ್ಲಿ ಹೂ ಗೋಂಚಲಾಗರಳಿ
ರಂಜಿಸಿರೆ (ಕವಿಯಂತೆ ನಾನು!) ಕಂಡೆದೆ ಬೆಂದೆ:
ತಂತಿ ಬರೆ, ಜೊತೆಗೂಡಿ ನಾವಿಬ್ಬರೂ ತೆರಳಿ,
ನಲ್ಲೆ ತವರೊಳಗುಳಿಯೆ, ನಾನೊಬ್ಬನೆಯೆ ಬಂದೆ!

೬-೩-೧೯೩೮

 

ವಿರಹಿ ಕವಿ

ಎದೆಯೊಳೊಂದು ಮಸೆವ ಬಾಣ;
ಕೊರಲೊಳೊಂದು ಕೊರೆವ ಗಾಣ!
ಕುದಿಯುತಿಹವು ಪಂಚ ಪ್ರಾಣ:
ಹೊಮ್ಮಲಹುದೆ ಕವಿಯ ಗಾನ?

೧೬-೩-೧೯೩೮

 

ದೃಷ್ಟಿ ವಿಷಾಹಿ

ಬಿಡು ಸಾಕೀ ಹುಡುಗಾಟದ ದೃಷ್ಟಿ;
ಕಾಮರಾಜ್ಯದಲಿ ದೃಷ್ಟಿಯೆ ಸೃಷ್ಟಿ;
ನೋಟಹುತ್ತದಿಂ ಬೇಟದ ಹಾವು
ಮೂಡಿತ್ತೆನೆ ನಿನಗದೆ ವಿಷಮೇವು.
ರಾವಣನನೆ ತಿಂದಿತೊ ಆ ನೋವು!
– ತಪ್ಪದೊ ನಿನ್ನಾತ್ಮಕೆ ಸಾವು!

೨೮-೯-೧೯೩೮

 

ವೀಣಾ ವಿಶಾರದೆಗೆ

ಗಾನಮಧು ತುಂಬಿ ಸಿಡಿಯುವ ತಂತಿ ಮಿಡಿಯಲ್ಕೆ
ಹಾತೊರೆವ ವಲ್ಲಕೀ ವಧುವಿನಂತೆ
ನೀನೆಸೆವುದನು ನೋಡಿ ಕಾತರಿಪ ಕವಿಯೆನಗೆ
ವೈಣಿಕನದಾರೆಂಬುದೊಂದೆ ಚಿಂತೆ!

೩-೫-೧೯೪೨

 

ಶ್ರೀ ಶಂಕರಾಚಾರ್ಯ ಶಿವಮಾನಸ ಪೂಜಾ

ನೀನಾತ್ಮಂ; ಮತಿ ಗಿರಿಜೆ; ಸಹಚರರ್ ಪ್ರಾಣಗಳ್;
ಮನೆ ಶರೀರಂ; ವಿಷಯೋಪಭೋಗರಚನೆಯೆ ಪೂಜೆ;
ನಿದ್ರೆಯೆ ಸಮಾಧಿ; ಸಂಚಲನೆ ತಾಂ ಪ್ರದಕ್ಷಿಣಂ;
ನುಡಿವುದೆಲ್ಲಂ ನುತಿ, ನೆಗಳ್ಕೆಯಖಿಲಂ ನಿನಗೆ,
ಓ ಗುರುವೆ, ತಾನಪ್ಪುದಾರಾಧನೆ!

೨೮-೯-೧೯೪೩

 

ವಸಂತೋದಯ

ಮರಗಳಲ್ಲಿ ಚಿಗುರಿಹುದು ತಳಿರ ಸೊಂಪು;
ಕೇಳುತಿದೆ ಕೋಗಿಲೆಯ ಕೊರಲ ಇಂಪು;
ತೀಡುತಿದೆ ತೆಂಕಣದ ಗಾಳಿ ತಂಪು:
ಜೀವಕ್ಕೆ ಆಹ ಇನಿಯಳ ಕದಂಪು
ಸೋಂಕಿದಂದದಿ ಸೊಗಯಿಸಿದೆ ಅಲಂಪು!

೧೨-೧-೧೯೬೩

 

ಪುನರ್ಭೇಟಿ*

ಮಸಣಿತಮ್ಮ, ಮಲ್ಲಿತಮ್ಮ, ಚಾಮಯ್ಯ, ಚೌಡಯ್ಯ,
ಅಪ್ರಸಿದ್ಧರು ಇವರು, ಅಜ್ಞಾತರಿವರು,
ಇವರ ಕಾಲಡಿಯಲ್ಲಿ ನುಸುಳಲರ್ಹರೆ ಅವರು
ಆ ಕುಪ್ರಸಿದ್ಧರು, ಆ ಲೋಕ ಕುಖ್ಯಾತರಾ
ಚೆಂಗೇಷ್‌ಖಾನ್‌, ಘಜ್ನಿಮಹ್ಮೂದ್‌,
ನೆಪೋಲಿಯನ್‌, ಹಿಟ್ಲರ್?

೧೬-೧೦-೧೯೬೪

—-
* ಸೋಮನಾಥಪುರ ದೇವಾಲಯಕ್ಕೆ.

 

ಷಷ್ಟಿಪೂರ್ತಿ

ಪ್ರಲಯದಿಂದ ಸೃಷ್ಟಿಗೆ,
ಸರ್ವಕಾಮ ಇಷ್ಟಿಗೆ,
ಷಷ್ಠಿಯಿಂದ ಷಷ್ಟಿಗೆ
ಹರಿದೆ ಪೂರ್ಣದೃಷ್ಟಿಗೆ,
ತನ್ನ ತಾನೆ ತುಷ್ಟಿಗೆ!

೨೭-೮-೧೯೬೫

 

ಭಾದ್ರಪದ

ಹಸುರು ಹಾಸಿದ ನೆಲದ
ಶಾದ್ವಲದ ಹಾಸ;
ತಿಲಕ ವೃಕ್ಷದ ಸಾಲು;
ಬುಡವೆಲ್ಲ ಹೂ ಹಾಲು:
ಭಾದ್ರಪದ ಮಾಸ!

೧೦-೯-೧೯೬೫

 

ಚುನಾವಣೆ

ಅಂದು ಹೂವಿನ ಹಾರ,
ಇಂದು ಕಲ್ಲೇಟು:
ಏನಿದೀ ಗ್ರಹಚಾರ?
ಹಾಳು ಈ ಓಟು!

೯-೨-೧೯೬೭

 

ಫಣಿರಮಣಿ

ಬಳೆಗಳ ಟಿಂಟಿಣಿ ನೂಪುರ ಕಿಂಕಿಣಿ
ಬಂದಳು ಕುಣಿಕುಣಿದಾ ತರುಣಿ:
ಒಲವಿನ ಕಣ್ಮಣಿ ಚೆಲುವಿನ ಹೊಂಗಣಿ
ಹೆಡೆಯಾಡುವ ಫಣಿ ಆ ರಮಣಿ!

 

ಯಂ ಶೈವಾಃ

ಶಿವನೆಂದಾ ಶೈವರಾರನ್ ಸಮುಪಾಸಿಪರ್, ಬ್ರಹ್ಮವೆಂದಾ ವೇದಾಂತಿಗಳ್,
ಜಿನನೆಂದಾ ಜೈನಶಾಸನರತರ್, ಕರ್ತನೆಂದಾ ನೈಯಾಯಿಕರ್,
ಗುರುವೆಂದಾ ಬುದ್ಧನು ಬೌದ್ಧರ್, ಕರ್ಮವೆಂದಾ ಮೀಮಾಂಸಕರ್,
ಹರಿಯೆಂಬಾ ದೇವಂ ವಾಂಛಿತ ಫಲಂಗಳಂ ನೀಡುಗಾ ತ್ರೈಲೋಕ್ಯನಾಥಂ!