ಈ ಬಂಡೆ ಆ ಕಾಡು
ಸ್ಪರ್ಧೆ ಹೂಡಿವೆ ನೋಡು,
ಟಗರುಗಳೆರಡು ಕಲೆತು
ಹಣೆಹಣೆಗೆ ಎಣೆಮಲೆತು
ಡಿಕ್ಕಿ ಹೊಡೆಯುವ ಮೊದಲು
ಮುಮ್ಮೆಯ್ಯನೆತ್ತಿದೊಲು
ಕಡಿದಾಗಿ ನಿಂತು
ಒಂದನೊಂದನು ನಿಡಿದು
ನಿಟ್ಟಿಪವದೆಂತು?

ಶತಮಾನಗಳೆ ಇಂತು
ಶತಮಾನಗಳು ನಿಂತು
ದಿಟ್ಟಿಗಾಳೆಗ ಹೂಡಿ
ಒಂದನೊಂದನು ಕಾಡಿ
ವೈರವೆ ಬಳಲುವಂತೆ
ವೈರಿಯನೊಲಿಸುವಂತೆ
ಕಾದಿಹವು ನೋಂತು,
ಸತ್ಯಾಗ್ರಹಿಗಳಂತೆ
ವಜ್ರವ್ರತವಂತು!

ದೊಡ್ಡರಿಬ್ಬರ ವೈರ
ದೊಡ್ಡದೆಂಬುದೆ ಧೈರ್ಯ:
ಬಳಿಬಳಿಯೆ ನಿಂತಿಂತು
ಒಬ್ಬರೊಬ್ಬರನೆಂತು
ಅರಿಯದಿರುವರು ಹೇಳು?
ಅರಿತರಾಯಿತು: ಬಾಳು
ಹಗೆಯಿಲ್ಲದೊಲುಮೆ.
ಅರಿವು ಮುರಿದರೆ: ಗೋಳು,
ಹೊಗೆ, ಬೆಂಕಿ, ಕುಲುಮೆ!

ಈ ಬಂಡೆ ಆ ಕಾಡು
ಸ್ನೇಹಕೆಳಸಿವೆ ನೋಡು:
ಅದರ ಹಣ್ಣನು ಹಕ್ಕಿ
ಕದುಕಿ ಈ ಎಡೆ ಬಿಕ್ಕಿ
ಬಿರುಕು ಬಿರುಕನು ತುಂಬಿ
ಹಬ್ಬುತಿದೆ ಹುಳು ಹಂಬಿ,
ಬಂಡೆಯನೆ ನಂಬಿ:
ತಬ್ಬುತಿದೆ ಹಗೆ ಹೋಗಿ
ಸಲುಗೆ ಕೆಳೆಯಾಗಿ!

೧೨. ೪. ೧೯೩೯