ನಿನ್ನಮ್ಮನನು ನಾನು ಎಂತು ಒಲಿದೆನೊ ಅಂತೆ
ನಿನ್ನನೊಲಿಯುವ ಇನಿಯ ನಿನಗೂ ದೊರೆಯುವಂತೆ
ಹರಕೆಗೈಯಲಿ ನಿನಗೆ ಶ್ರೀ ಜಗನ್ಮಾತೆ:
ನಿನ್ನತನವನು ನೀನು ಅವನಿಗರ್ಪಿಸುವೋಲೆ
ತನ್ನತನವನು ಅವನು ನಿನಗರ್ಪಿಸಲಿ, ಬಾಲೆ,
ನಿನ್ನನರ್ಪಿಸಿ ನೀನ ಆಗು ಸೊನ್ನೆ;
ತನ್ನನರ್ಪಿಸಿ ಅಕ್ಕೆ ಅವನು ಸೊನ್ನೆ:
ಪಕ್ಕಪಕ್ಕದೆ ಬರೆಯೆ,
ಸೊನ್ನೆ ಎರಡೂ ನೆರೆಯೆ
ಮೂಡುವುದು ತಾನಲ್ತೆ ಆನಂತ್ಯ ಚಿಹ್ನೆ?
ದಾಂಪತ್ಯ ಜೀವನದಿ ನೀನಾಗು ಧನ್ಯೆ!

೦೧. ೦೭. ೧೯೬೫