(ಕುಕ್ಕನಹಳ್ಳಿಯ ಕೆರೆಯ ಬಳಿ)

ತೆರೆ ತೆರೆ ತೆರೆ ನಗುತಿದೆ ಕೆರೆ
ಕಿಡಿ ಕಿಡಿ ಕಿಡಿ ನಗೆಸೂಸಿ,
ನಡುಹಗಲಿನ ಮಾಗಿಯ ಇನ
ಕರೆದಿರೆ ಕಿರಣದ ರಾಶಿ.
ತೆಂಕಣ ದೆಸೆಯಲಿ ಅದೊ ಎಸೆದಿದೆ ದೂರದ ನೀಲಗಿರಿ,
ಕರೆಬಾನಿನ ನೀಲಿಯ ಮನಸಿನ ಕನಸೋ ಎಂಬ ಪರಿ!

ಸರಸಿಯ ಬಳಿ ಹಿರಿಬಯಲಲಿ
ತುರು ನೆಲಕಿಟ್ಟಿವೆ ಬಾಯಿ;
ಮರದಡಿಯಲಿ ತಣ್ಣೆಳಲಲಿ
ಮಲಗಿರುವನು ದನಗಾಹಿ.
ಅರಳಿಯ ಮರದಲಿ ಮರ್ಮರಗೈದಿದೆ ದಣಿದಿಹ ಗಾಳಿ
ಬಹುದೂರದ ನವ ನೀರದಗಳ ಆಗಮನವ ಹೇಳಿ!

ಮೇಗಡೆ ರವಿ, ಕೆಳಗಡೆ ಕವಿ,
ನೋಟಕರಿಬ್ಬರೆ ಇಲ್ಲಿ:
ಉಳಿದೆಲ್ಲರು ನಟನಟಿಯರು,
ಮುಳುಗಿಹರಭಿನಯದಲ್ಲಿ.
ನಡು ಹಗಲಿನ ಮಾಗಿಯ ಇನ ಕರೆದಿರೆ ಕಿರಣದ ರಾಶಿ,
ತೆರೆ ತೆರೆ ತೆರೆ ನಗುತಿದೆ ಕೆರೆ ಕಿಡಿ ಕಿಡಿ ಕಿಡಿ ನಗೆಸೂಸಿ!

೨೦.೨. ೧೯೩೩