ನಗರದ ಗಡಿಬಿಡಿಯಲಿ ನಾ ಸಿಲುಕಲು
ಮನ ಮಲೆನಾಡಿಗೆ ಓಡುವುದು!
ಮುದ್ದಿಸುವೆಲರೊಳು ಕುಣಿಯುವ ತೆರೆಯೊಲು
ಸುಖಶಾಂತಿಯೊಳೋಲಾಡುವುದು!
ಬೇಡನ ಬಲೆಯಿಂ ಬಿಡುಗಡೆ ಹೊಂದಿದ
ತರುಣ ಕುರಂಗದ ಜವದಿಂದ
ಸಂತೆಯ ಸದ್ದಿನ ಸುಳಿಯೊಳು ನಾನಿರೆ
ಮಲೆನಾಡಿಗೆ ಮನ ಓಡುವುದು.
ನಲ್ಲನನಪ್ಪುವ ನಲ್ಲೆಯ ತೆರದಲಿ
ತಾಯಿಯನಪ್ಪುವ ಮಗುವಿನ ತೆರದಲಿ
ಗಂಗೆಯನಪ್ಪುವ ಯಮುನೆಯ ತೆರದಲಿ
ದೇವರನಪ್ಪುವ ಭಕ್ತನ ತೆರದಲಿ
ಮನ ಮಲೆನಾಡನು ಕೂಡುವುದು;
ಕರಗಿ ಮುಳುಗಿ ತೇಲಾಡುವುದು!
ಮಲೆಯೊಳು ಬನದೊಳು ಬೆರೆಯುವುದು;
ಪುರದ ಅಶಾಂತಿಯು ತೊರೆಯುವುದು.

ಕೆರೆಗಳು ತೊರೆಗಳು ಹೊಳೆಗಳು ಕೊಳಗಳು
ಜನಗಳು ಬನಗಳು ಬೆಟ್ಟಗಳು;
ಬಾನು, ಮುಗಿಲು, ಹೊಳೆಹೊಳೆಯುವ ನೇಸರು,
ಮಾಲೆಮಾಲೆಯಲಿ ಘಟ್ಟಗಳು;
ಹಸುರು ಕಡಲ ಪೆರ್ದೆರೆಗಳ ತೆರೆದಲಿ
ಹಬ್ಬಿರುವಕಡೆಯ ತೋಟಗಳು,
ಹಾಡುವ ಹಕ್ಕಿಗಳೆಸೆಯುವ ಹೂಗಳು,
ನೆರೆ ಮನಮೋಹಿಪ ನೋಟಗಳು;
ಮುಚ್ಚಿದ ಕಣ್ಣೊಳು ಮೊಳೆಯುವುವು!
ಬೆಚ್ಚಿದ ಮನವನು ಸೆಳೆಯುವುವು.
ಕರೆಯುತ ಕೈಬೀಸಭಯವ ನೀಡಿ
ಜೀವಕೆ ಶಾಂತಿಯ ಮಾಲೆಯ ಸೂಡಿ
ತಲ್ಲಣಿಪೆದೆಯನು ಸಂತೈಸಿ
ಮುದ್ದಿಪವೆನ್ನನು ಓಲೈಸಿ!

ಸಂತತ ಶ್ಯಾಮಲ ತರುಗಳ ತಳಿರೊಳು
ಗಾನ ಲಹರಿಯ ತರಂಗದೊಲು
ಕೋಗಿಲೆಯುಲಿವುದನಾಲಿಸುವೆ.
ಲಾವುಗೆ ಗಿಣಿಗಳು ಹಾಡುತ ಹಾರಲು
ಮನವನು ಮುದದೊಳು ತೇಲಿಸುವೆ.
ಪೂತಿಹ ನಂದಿಯ ಮರದಲಿ ಮೊರೆಯುವ
ದುಂಬಿಗಳಳಿಗಳ ನೋಡುವೆನು;
ಕೊರಳ ದೊಂಟಿ ಟಣ್ ಟಣ್ ಎನೆ ಚಿಮ್ಮುತ
ಬಿಸಿಲೊಳು ಮಲಗಿಹ ಹೊಮ್ಮಿದ ಹಸುರಲಿ
ಕುಣಿಯುವ ಕರುಗಳ ಕೂಡುವೆನು.
ಪಿಳ್ಳಂಗೋವಿಯ ಮೈಮರೆದೂದುತ
ಬಸಿರಿ ಮರದ ಕರಿನೆಳಲಿನಲಿ
ದನಗಳ ಕಾಯುತ ಕುಳಿತಿಹ ಹೈದನ
ಸವಿಗೊರಲಿನ ಕಿರುಗೊಳಲಿನಲಿ
ಗಾನವಾಗಿ ನಾ ಸೇರುವೆನು,
ಗಾನಾನಂದವ ಹೀರುವೆನು!
ಹಾರಿ ಜಾರಿ ನೆಗೆದಾಡುತಲೋಡುವ
ಕಾಳ್ಪುರಗಳ ಜೊತೆ ಓಡುವೆನು;
ಅಲ್ಲಿ ನಿಂತು ಜಪ ಮಾಳ್ಪ ಬಲಾಕಗ-
ಲಾಳಿಯ ಸರಸಕೆ ಕಾಡುವೆನು.
ಕಾಡಿನ ದಟ್ಟ ತಳಿರ ಪಟದಲ್ಲಿ
ಬಿಳಿಯ ಚುಕ್ಕಿಗಳ ತೆರದಿಂದ
ಹಾರಾಡುತಲಿರೆ ಬೆಳ್ಳಕ್ಕಿಗಳು
ದಿಟ್ಟಿಪೆನವುಗಳ ಬೆರಗಿಂದ.
ಕೊಳದೊಳು ಬೆಳೆದಿಹ ತಾವರೆ ಹೂಗಳ
ಕೊಯ್ಯಲು ತೆಪ್ಪವ ಕಟ್ಟುವೆನು;
ಅಂಬಿಗನಂದದಿ ಬೊಂಬಿನ ಹುಟ್ಟಿನೊ-
ಳಲೆಯುತ ಸುಮಗಳನೊಟ್ಟುವೆನು!
ಒಮ್ಮೆ ಪೂತ ಹೊಸ ಅಸುಗೆಯ ಬನದಲಿ
ಜೊಂಪಗಳಾಯುತ ತಿರುಗುವೆನು;
ಒಮ್ಮೆ ಮೇಲೆ ನೇತಾಡುವ ಹೂಗಳು
ನಿಲುಕದಿರಲು ನಾ ಮರುಗುವೆನು.
ಒಮ್ಮೆ ಕಳಿತ ಬೆಮ್ಮಾರಲ ಹಣ್ಗಳ
ತಿದು ತಿಂದು ನೆರೆ ಹಿಗ್ಗುವೆನು;
ಒಮ್ಮೆ ಮುಳ್ಳಿನಾಲಿಂಗನ ಹೆಚ್ಚಲು
ನೋವಿಗೆ ನಾನುರೆ ಕುಗ್ಗುವೆನು.
ಬಾಲಕನಂದದಿ ತಿರುಗುವೆನೊಮ್ಮೆ;
ಯೋಗಿಯ ತೆರದಲಿ ಧ್ಯಾನಿಪೆನೊಮ್ಮೆ!
ದಳಪತಿಯಂದದಿ ಜಯಿಸುವೆನೊಮ್ಮೆ;
ಸೋತು ಶರಣು ಶರಣೆಂಬೆನು ಒಮ್ಮೆ!

ಎರಡು ದಡದ ವನಮಾಲೆಯ ಮೆರೆದು
ತಡಿಯೆರಡದ ಎರೆಮಣ್ಣನು ಕೊರೆದು
ಬಳುಕಿ ಬಾಗಿ ತಿರುತಿರುಗುತ ಹರಿದು
ಹಾರಿಯರೆಯ ಭೋರೆನ್ನುತ ಮೊರೆದು
ತೆರೆಯಾಟದಿ ಕಬ್ಬಿಗನನು ಕರೆದು
ತಿಳಿದು ತಿಳಿಯದ ರಹಸ್ಯವನೊರೆದು
ಹರಿಯುವ ತುಂಗೆಯ ಹಕ್ಕೆಯಲಿ
ತೇಲುವೆ ತೆರೆಗಳ ತೆಕ್ಕೆಯಲಿ!
ಹಬ್ಬಿದ ಮಳಲಿನ ದಿಣ್ಣೆಯ ಮೇಲೆ
ಓಡಿ ಆಡಿ ಮಿಗಿಲಾಗಲು ಲೀಲೆ
ಸರಸಕೆ ಕಿಟ್ಟನೆ ಕಿರಿಚುವೆನು;
ಬಳಿಯಿಹ ಗಿರಿಗಳು ಮರುದನಿ ಬೀರೆ
ಹೃದಯಾನಂದವು ಮೇರೆಯ ಮೀರೆ
ಅಣಕಿಸಿ ಗಿರಿಗಳನರಚುವೆನು!
ಬಳಿಯಿಹ ಬಂಡೆಯ ನೆತ್ತಿಯನೇರಿ
ನೀರ್ಗೆ ದುಢುಮ್ಮನೆ ಹಾರುವೆನು;
ತೆರೆಗಳ ಬಗೆಬಗೆದೀಜುತ ಹೋರಿ
ಅಡಗಿದರೆಯನರಿತೇರುವೆನು!

ತಿಳಿಯಾಳದ ಆಗಸದಲಿ ನೇಸರು
ತಳತಳಿಸುತಲಿರೆ, ಬಿಸಿಲಿನ ಬೇಸರು
ನಾಡಿಗೆ ಮೂರ್ಛೆಯ ನೀಡುವುದು.
ಬಾನು ಬೆಟ್ಟ ಬನ ಹೊಳೆ ಕೆರೆ ಹಳ್ಳಿ
ತೋಟ ಗದ್ದೆ ಹೊಲ ಮರ ಗಿಡ ಬಳ್ಳಿ
ಎಲ್ಲ ಕನಸಿನೊಡಗೂಡುವುದು!
ತಣ್ಣೆಲರೊಯ್ಯನೆ ಬೀಸಿ ಬರೆ
ಮಗುವಿನಂತೆ ಮಲಗುವುದು ತಿರೆ.
ಕೂಡೆ ಬಿರುಗಾಳಿ ಭೋರೆನುತೆದ್ದು
ನಾದನೆ ನಡುಗಿಪುದನಿಲನ ಸದ್ದು!
ತರಗೆಲೆಗಳು ಸುಟ್ಟುರೆಯೊಳು ಹಾರಿ
ಕೆಂಧೂಳಿಯು ದೆಸೆದೆಸೆಗಳನೇರಿ
ಮುಂಗಾರದು ಮೈದೋರುವುದು.
ದೂರ ದಿಗಂತದಿ ಕರ್ಬೊಗೆಯಂತೆ,
ಹಿಂಡಾಗೈತಹ ಗಜದಳಂತೆ
ಕಾರ್ಮುಗಿಲೊಡ್ಡಾಗೇರುವುದು!
ಹಾರಿಯೇರಿ ಬಹು ವೇಗದಿ ಬಂದು
ಬಾನೊಲಗೆಲ್ಲೆಡೆ ಮುತ್ತುವುವು!
ಬೇಟೆಯನರಸುವ ಸಿಂಹಗಳಂತೆ,
ಹೊರಳುತಲುರಳುತ ನುಗ್ಗುತ ಚಿಮ್ಮುತ,
ಹಾರಿ ಹೋರಿ ಹರಿಹರಿಯುತ ಸರಿಯುತ,
ಮುಡಿಗೆದರಸುರನ ಹುಡುಕುವಳಂತೆ
ಕಾಳಿಯ ತೆರದಲಿ ಸುತ್ತುವುವು!
ಹೊಳೆಯುವ ಸೂರ್ಯನು ಕಣ್ಮರೆಯಾಗಿ
ಬೆದರಿ ಬಿಸಿಲು ಹಿಂಜರಿಯುವುದು;
ರಾಹುವಿನಂದದಿಕತ್ತಲು ಬೇಗನೆ
ನಾಡನು ನುಂಗುತ ಹರಿಯುವುದು!
ಮುಂಗಾರಸುರನು ಹೂಂಕರಿಪಂದದಿ
ಗುಡುಗು ಮೊಳಗಿ ಕಿವಿ ಬಿರಿಯುವುದು.
ರಾಕ್ಷಸನಕ್ಷಿಯ ಕಾಂತಿಯ ತೆರದಲಿ
ಮಿಂಚು ಮಿಂಚಿ ಕಣ್ಣಿರಿಯುವುದು.
ಬಲೆಗೊಳಗಾಗಿಹ ಕೇಸರಿಯಂದದಿ
ಬಿದಿರಿನ ಮೆಳೆಗಳ ಹೊದರಿನಲಿ
ಬೀಸಿ ಕೆರಳಿ ಬಿರುಗಾಳಿಯು ಗರ್ಜಿಸಿ
ಭೋರೆಂದೊದರುವುದದಟಿನಲಿ.
ಮೇಯುವ ತುರುಗಳು ಬಾಲವನೆತ್ತಿ
ರೊಪ್ಪಕೆ ಭರದಲಿ ಹಾರುವುವು.
ಗೋಪರು ಕೊಳಲನು ಯೌಂಕುಳಲೊತ್ತಿ
ಕಂಬಳಿಯ ಕೊಪ್ಪೆಯ ಬಿಗಿಯುತ ಸುತ್ತಿ
ಮರಗಳ ಮರೆಯನು ಸೇರುವರು!
ಮಿಗಗಳು ಮೇವನು ತೊರೆಯುವುವು;
ಖಗಗಳು ಗಾನವ ಮರೆಯುವುವು.
ಕೆರಳಿ ಕಾರು ಕಲ್ಲೆಸೆಯುವ ತೆರದಲಿ
ಆಲಿಯ ಕಲ್ಲುಗಳುದುರುತ ಭರದಲಿ
ಬಯಲಲಿ ಗಿರಿಯಲಿ ಕಾಡಿನಲಿ
ಮನೆಯಲಿ ಹೆಂಚಿನ ಮಾಡಿನಲಿ
ಕಂಚಿನಂಗಡಿಗೆ ಕಳ್ಳರು ನುಗ್ಗಿದ
ತೆರದಲಿ ಸದ್ದನು ಮಾಡುವುವು;
ಹೊಳೆದು ಕರಗಿ ಮೆಲ್ಲನೆ ಮರೆಯಾಗಿ
ಹರಿಯುವ ನೀರನು ಕೂಡುವುವು.
ನೆಲ್ಲಿಯ ಕಾಯ್ಗಳ ಹೋಲುವ ಹನಿಗಳ
ಮುಂಗಾರಿನ ಮಳೆ ಕರೆಯುವುದು;
ಭೋರ್ ಭೋರ್ ಎನ್ನುತ ಬಾನೊಡೆದಂದದಿ
ಮುಗಿಲು ಕರಗಿ ನೀರ್ ಸುರಿಯುವುದು.
“ಬಾರೋ ಬಾರೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ!”
ಕುಣಿವೆಳಮಕ್ಕಳು ಹಾಡುವರು,
ಹಿರಿಯರು ಮನದೊಳೆ ಕೂಡುವರು.
ಆಲಿಯ ಕಲ್ಗಳನಾಯುವರು,
ನುಂಗುತ ಮಳೆಯಲಿ ತೋಯುವರು.
ಅಡಕೆಯ ಮರಗಳು ಗಾಳಿಯ ರಭಸಕೆ
ಭೂದೇವಿಗೆ ತಲೆ ಬಾಗುವುವು;
ಅಡವಿಯ ಹಿರಿ ಹೆಮ್ಮರಗಳು ಹೊಡೆತಕೆ
ಬಳುಕುತ ತಲೆಕೆಳಗಾವುವು.
ಬತ್ತಿದ ತೊರೆಗಳು ಹೆಮ್ಮೆಯೊಳುಕ್ಕುತ
ಕಾವಿಯನುಡುವುವು ಯೋಗಿಯೊಲು;
ಕೊಚ್ಚಿ ದಡವ ಭೋರ್ಗರೆಯುತ ಮೊರೆಯುತ
ತಿರುಗಿ ಹರಿಯುವುವು ಭೋಗಿಯೊಲು.
ಕಾರ ಮುಗಿಲು ಕೆಲ ಸಾರುವುದು;
ಮತ್ತೆ ಬಿಸಿಲು ಮೈದೋರುವುದು,
ಖಗಗಳು ಹಾಡನು ತೊಡಗುವುವು;
ಮಿಗಗಳು ಹಕ್ಕೆಯನಗಲುವುವು.
ಮಿಂದ ತಳಿರ ಹಸುರಿಂಪಾಗುವುದು;
ಹೊಸ ಜೀವದ ಕಳೆ ಸೊಂಪಾಗುವುದು,
ಮುಗಿಲಲಿ ಮಳೆಬಿಲ್ ಮೂಡುವುದು;
ನಾಡೆಲ್ಲಾ ನಲಿದಾಡುವುದು!

ಮರುದಿನ ಬೆಳಗಿನ ನೇಸರು ಮೂಡೆ
ಮೂಡಣ ದೆಸೆಯೊಳು ನರುಗೆಂಪಾಡೆ
ಎಳಬಿಸಿಲೆಲ್ಲೆಡೆ ತಳತಳಿಸೆ
ಹೊಸ ತಳಿರೊಲೆಯುತ ನಳನಳಿಸೆ
ಹೆಗಲೊಳು ನೇಗಿಲು ಜೊತಕವ ಹೊತ್ತು
ಮುಂದೆ ನಡೆಯುತಿರೆ ಜೋಡಿಯ ಎತ್ತು
ರೈತನು ಗದ್ದೆಯ ಸೇರುವನು;
ಉಳುವನು; ಬಿತ್ತವ ಬೀರುವನು!

ಕಣ್ಣೊಡೆದೊಯ್ಯನೆ ಬೀಜದ ಹರುಷವು
ನೆಲದಿಂದೊಯ್ಯನೆ ಚಿಮ್ಮುವುದು;
ಮೊಳೆಯುತ, ಕಣ್ಣಿಗೆ ತಂಪನು ನೀಡುತ,
ಮುದ್ದು ಹಸುರು ಹೊರಹೊಮ್ಮುವುದು.
ಹಸುರು, ಹಸುರು, ಹಸುರೆಲ್ಲಿಯು ಹಸುರು!
ಮಲೆನಾಡಿನ ಬಾಳದು ಬರಿ ಹಸುರು!
ಹಸುರು ತುಂಬಿ ತುಳುಕಾಡುವುದು:
ಬಿಸಿಲು ಕೂಡ ಹಸುರಾಗುವುದು!

ಹೊಲಗಳು ಹೊಲಗಳು, ಹಳದಿಯ ಹೊಲಗಳು,
ಬತ್ತದ ಪೈರಿನ ಬಿತ್ತರ ಹೊಲಗಳು,
ತಲೆದೂಗುತ ಕಂಗೊಳಿಸುವುವು!
ತೆನೆ ತೆನೆ ತೆರೆ ತೆರೆ ಹೊನ್ನಿನ ತೆನೆಗಳು
ಓಲಾಡುತ ಕಳಕಳಿಸುವುವು!

ನಗರದ ಗಡಿಬಿಡಿಯಲಿ ನಾ ಸಿಲುಕಲು
ಮಲೆನಾಡಿಗೆ ಮನ ಓಡುವುದು!
ಮುದ್ದಿಸುವೆಲರೊಳು ಕುಣಿಯುವ ತೆರೆಯೊಳು
ಸುಖಶಾಂತಿಯೊಳೋಲಾಡುವುದು!

೨೬. ೧೦. ೧೯೨೮