ಅರುಣಿಮ ದಿಕ್ತಟಗತ ಓ ದ್ಯುಮಣಿ, ಮಾಗಿಯ ರವಿ,
ಬಾ ….  ತುಸು ತಳುವಿ:

ನಸುನೀಲಿಯ ಮುಗಿಲುಣ್ಣೆಯ ಹೊದೆದು
ಚಾಮುಂಡಿಯ ಗಿರಿಮಂಚದ ಮೇಲೆ
ಪರಶಿವನಾಲಿಂಗನದಲಿ ತಾಯಿ,
ಲಲಿತೆ, ಶಿವದಯಿತೆ,  
‘ಕಾಮೇಶ್ವರ ಪ್ರೇಮರತ್ನಮಣಿ ಪ್ರತಿಪಣಸ್ತನೀ,
ನಾಭ್ಯಲವಾಲ ರೋಮಾ ಲಲಿತಾಫಲ ಕುಚದ್ವಯೀ,
ಅರುಣಾರುಣ ಯೌಸುಂಭವಸ್ತ್ರ ಭಾಸ್ವತ್ ಕಟೀತಟೀ,
ರತ್ನಕಿಂಕಿಣಿಕಾ ರಮ್ಯ ರಶನಾ ದಾಮ ಭೂಷಿತೆ,
ಕಾಮೇಶಜ್ಞಾತ ಸೌಭಾಗ್ಯಮಾರ್ದವೋರದ್ವಯಾನ್ವಿತೆ’  
ತ್ರಿಜಗನ್‌ಮಾತೆ
ತನ್ನ ಸುಖದಲಿ ಲೋಕತ್ರಯಸುಖಿ ತಾನಾಗಿ
ಮಲಗಿರುವಳೊ ಆನಂದಮಯೀ!

ಚಳಿ! ಚಳಿ! ಚಳಿ! ಹುಹುಹು! ಮಾಗಿಯ ಚಳಿ!
ಅರುಣಿಯ ದಿಕ್ತಟಗತ ಓ ದ್ಯುಮಣಿ, ಶೈಶಿರ ರವಿ,
ಬಾ …. ತುಸು ತುಳುವಿ!

೨೭. ೧೧. ೧೯೬೧