ಮೊದಲನೆ ಕೋಗಿಲೆ ಅದೊ ಕೂಗುತಿದೆ:
ಇಂಚರಕೋತು ಎದೆಸೋತು
ಮಲೆ ತಲೆದೂಗುತಿದೆ!

ಚೈತ್ರದೂತನುಲಿ ತೆರೆತೆರೆವೋಗಿ
ಎಚ್ಚರಿಸುತಿದೆ; ಚರಿಸುತದೆ
ತರು ನಾಡಿಯ ತಾಗಿ!

ಕನಸುಗಳೆಲ್ಲಾ ಕಣ್‌ದೆರೆಯುತಿವೆ;
ಚೆಂದಳರಂತೆ ಅಲರಂತೆ
ಮೋಹವ ಕರೆಯುತಿವೆ!

ಗರುಕಿನ ಮಸಿಚೆಲ್ಲಿದ ನೆಲದಲ್ಲಿ
ಹೊಸ ಹಸುರಾಸೆ ಹೋರುತಿದೆ,
ಬಾಳಿಗೆ ಹಾರುತಿದೆ!

ಬರಲು ಹರೆಯ ಬೂರುಗದಲಿ ಅರಳೆ
ಕಾಯ್ಪಿಗೊಣಗಿ ಕಾಯೊಡೆಯುತಿದೆ,
ಬಿಣ್ಪಿಗೆ ಸಿಡಿಯುತಿದೆ!

ಮೊಳ್‌ಪೊದೆಯಲಿ ಬೆಮ್ಮಾರಲ ಕಾಯಿ
ಮೊದಲ ಮಳೆಯ ಹಾರೈಸುತಿದೆ,
ಹಣ್ಣಲು ಬಯಸುತಿದೆ!

ಎಲ್ಲೆಲ್ಲಿಯು ಮಲೆನಾಡಿನ ಬಾಯಿ
ನಿಡುಬಯಸಿದೆ ನೀರಡಸಿದೊಲು:
ನುಡಿಯೂ ಬರಿ ತೊದಲು!

ಎಲ್ಲರ ಬಯಕೆಗಳೆಲ್ಲಾ ಸೇರಿ
ಊದಿದುವೋ ಎನೆ ತುತ್ತೂರಿ
ಉಲಿಯುತ್ತಿದೆ ಸಾರಿ:

ಅದೊ ಮೊದಲನೆ ಕೋಗಿಲೆ ಕೂಗುತಿದೆ!
ಇಂಚರಕೋತು ಎದೆಸೋತು
ಮಲೆ ತಲೆದೂಗುತಿದೆ!

೧೨. ೪. ೧೯೩೯