ವರುಷಗಳ ಆಚೆಯಲಿ, ವರುಷಗಳ ಆಚೆಯಲಿ,
ಹೊಳೆಯ ನೀರೊಳು ತೇಲಿ ಓ ನಲಿದಾಡುವೆಳೆಯರಿರ,
ನಿಮ್ಮಂತೆ ನಾನು ನಲಿದಾಡಿದಾ, ಅಯ್ಯೊ ಆ
ವರುಷಗಳ ಹಿಂದಿನಾ ಕಾಲದಲಿ, ಬಾಲ್ಯದಲಿ,
ಮಧುರವಾದೆಳೆತನದ ಮಧುರತರ ಜೋತಿಯಲಿ,
ನೀವೆಲ್ಲರಿನ್ನುಮಾ ಬ್ರಹ್ಮಾಂಡ ಗರ್ಭದಲಿ
ಕನಸಾಗಿ ಸುಳಿಯುತಿದ್ದಾ ಕಳೆದ ಕಾಲದಲಿ.
ಈ ಹೊಳೆಯ ತಡಿಯಲ್ಲಿ, ಈ ಮಳಲ ದಿಣ್ಣೆಯಲಿ,
ಈ ತುಂಗೆಯಂಕದಲಿ, ಈ ರಾಮತೀರ್ಥದಲಿ,
ಹರಿಯುವೀ ಸಲಿಲದಲಿ, ಈ ಬಂಡೆಗಳ ಮೇಲೆ,
ಇದೊ ಇಲ್ಲಿ, ಇಲ್ಲಿಯೇ ನಿಮ್ಮಂತೆ ತೇಲಿದೆನು;
ನಿಮ್ಮಂತೆ ಆಡಿದೆನು; ನಿಮ್ಮಂತೆ ಚೀರಿದೆನು;
ನಿಮ್ಮಂತೆ ಮರುದನಿಯನನುಕರಿಸಿ ಕೂಗಿದೆನು;
ಬಂಡೆಗಳ ನೆಗೆನೆಗೆದು ಹಾರಿದೆನು, ಚಿಮ್ಮಿದೆನು;
ನಿಮ್ಮಂತೆ ಮೊರೆವ ನೀರಿನ ಕೂಡೆ ಹಾಡಿದೆನು;
ನಿಮ್ಮಂತೆಯೇ ಬಾಲ್ಯವನು ಸೂರೆಮಾಡಿದೆನು,
ವರುಷಗಳ ಆಚೆಯಲಿ, ವರುಷಗಳ ಆಚೆಯಲಿ,
ಅಯ್ಯೊ ಹಿಮ್ಮರಳದಾ ವರುಷಗಳ ಆಚೆಯಲ್ಲಿ!

ವರುಷಗಳ ಈಚೆಯಲಿ, ವರುಷಗಳ ಈಚೆಯಲಿ,
ಇಲ್ಲಿ, ನಾನಿಂದಿಲ್ಲಿಗೈತಂದು ಕುಳಿತಿಹೆನು,
ತೊರೆದ ತಾಯಿಯ ಮಡಿಲಿಗಿನ್ನೊಮ್ಮೆ ಬಂದು.
ಬಂದೆನೌ, ತುಂಗೆಯಮ್ಮಾ! ತುಂಗೆಯಮ್ಮಾ,
ಕಂದನು ಮನ್ನಿಸಮ್ಮಾ! ಮುದ್ದಿಸಮ್ಮಾ!
ಅಂದಿನಾ ಒಲ್ಮೆಯನು ಮರಳಿ ತೋರೆನಗಮ್ಮಾ.
ಎದೆಯು ಬಾಯ್ದಿಡುತಲಿದೆ ನೋಡಮ್ಮ, ಅಮ್ಮಾ!
ನಾ ನಿನ್ನನಗಲಿ ಹೋದುದು ನಿಜವೆ? ಹೇಳಮ್ಮ.
ಹೋದವನು ಮರಳಿ ಬಂದುದು ನಿಜವೆ? ತಿಳಿಸಮ್ಮ.
ನನಗೆಲ್ಲ ಕನಸಾಗಿ ಕಾಣುತಿಹುದಮ್ಮಾ:
ಏನು ಕನಸಮ್ಮಾ ಅದು ಏನು ಕನಸಮ್ಮಾ!

ಕನಸಲ್ಲ, ಕನಸಲ್ಲ, ಅದು ಬರಿಯ ಕನಸಲ್ಲ.
ನಡೆದುದೆಲ್ಲವನುಸುರುವೆನು ಕೇಳು, ಹೊಳೆಯಮ್ಮಾ:
ಕನಸಲ್ಲ, ಕನಸಲ್ಲ: ಕನಸಾದರವರೆಲ್ಲಿ?
ಕನಸಲ್ಲ, ಕನಸಲ್ಲ: ಕನಸಾದರಿವರಾರು?
ಇಲ್ಲಿ, ಈಗಿಲ್ಲಿರುವ ಅಪರಿಚಿತ ಜನರು?
ಕನಸಾದರವರೆಲ್ಲಿ? ಆ ನನ್ನ ಸ್ನೇಹಿತರು,
ಆ ಮುಗ್ಧ ವದನಗಳು, ಸೌಂದರ್ಯ ಮೂರ್ತಿಗಳು,
ವಿಪಿನ ಕ್ರಿಡೋನ್ಮತ ಸಲಿಲಲೀಲಾಮತ್ತ
ಮಧುರ ಬಾಲ್ಯೋನ್ಮತ್ತ ಸ್ಮರಣೀಯ ವ್ಯಕ್ತಿಗಳು,
ಆ ನನ್ನ ಸ್ನೇಹಿತರು, ಕನಸಾನರವರೆಲ್ಲಿ?
ಆ ನನ್ನ ಪಿತನೆಲ್ಲಿ? ಆ ನನ್ನ ತಾಯೆಲ್ಲಿ?
ಬಡವರಿಗೆ ಕರುಣೆಯೋಲಿರ್ದ ಆ ಅವರೆಲ್ಲಿ?
ಆ ತಮ್ಮದಿರು ತಂಗಿಯರು ಎಲ್ಲಿ? ಅವರೆಲ್ಲಿ?
ನನ್ನ ಬಾಳ್ ಬಾನಂಗಳದಿ ತಿಂಳೋಲ್ ಬಂದು
ನೋಡಿ ತಣಿಯುವ ಮುನ್ನ ಮಾಯಾವಾದಾ ನನ್ನ
ಮೋಹನಾಂಗಿಯು ಎಲ್ಲಿ? ಮೋಹನದ ಕನಸೆಲ್ಲಿ?
ಹೇಳಮ್ಮಾ; ಹೇಳಮ್ಮಾ! ಅಂದು ನೋಡದ ನಿನ್ನ
ಈ ತೀರ್ಥವಿಹುದಿಲ್ಲಿ; ಈ ತೀರವಿಹುದಿಲ್ಲಿ;
ಈ ಬಂಡೆ ಇಹುದಿಲ್ಲಿ; ಈ ಲಿಖಿತವಿಹುದಿಲ್ಲಿ;
ಆ ಬೆಟ್ಟವಿಹುದಲ್ಲಿ; ಆ ಕಾಡು ಇಹುದಲ್ಲಿ;
ನೋಡಲ್ಲಿಯೇ ತಳಿತ ಅರಳಿಬರವಿಹುದಲ್ಲಿ;
ಅಂದಿನಾ ಕೋಗಿಲೆಯೆ ಇಂದುಲಿಯುತಿಹುದಲ್ಲಿ.
ಅಮ್ಮಾ, ನಿನ್ನವರು ಎಲ್ಲರೂ ಇಹರಿಲ್ಲಿ;
ನನ್ನವರನೊಬ್ಬರನು ಕಾಣೆನಲ್ಲಮ್ಮಾ!
ನನ್ನವರು ಎಲ್ಲಿ? ಹೇಳೆನ್ನವರು ಅವರೆಲ್ಲಿ?

ಕನಸಲ್ಲ; ಹೋದಕಾಲವು ಬರಿಯ ಕನಸಲ್ಲ.
ಅಂದಿನಾ ಕಂದ ನಾನಂದಿನಂತಿಲ್ಲಮ್ಮ!
ಬೇರೆ ಗೆಳೆಯರು ನನಗೆ ಇಂದಿರುವರಮ್ಮಾ!
ಬೇರೆಯಾದರ್ಶವೊಂದೆನ್ನ ನಪ್ಪಿಹುದಮ್ಮಾ
ಹಾಡುವಾನಂದವೊಂದೆನಗೆ ಬಂದಿಹುದಮ್ಮಾ!
ಸುಜ್ಞಾನದಿಂದ, ಸಂಸ್ಕ್ರತಿಯಿಂದ, ದೊಡ್ಡವರ
ಸತ್ಸಂಗದಿಂದ, ಗುರುಮಂತ್ರ ಬಲದಿಂದ,
ಆತ್ಮಸಾಧನೆಯಿಂದ, ಪರರ ಬೋಧನೆಯಿಂದ,
ಸ್ವಂತ ಅನುಭವದಿಂದ, ಇತರರನುಭವದಿಂದ,
ರತಿಯ ದರ್ಶನದಿಂದ, ರಸಯೋಗ ಸುಖದಿಂದ,
ಸರಸತಿಯ ಕೃಪೆಯಿಂದ, ನರರೊಲುಮೆಯಿಂದ,
ಪರಮಾತ್ಮನನುರಾಗದಭಿಸಾರದಿಂದ,
ಅಂದಿನಾ ಕಂದ ನಾನಿಂದಲ್ಲವಮ್ಮಾ!
ಕಳೆದ ಕಾಲವು ಬರಿಯ ಕನಸಲ್ಲವಮ್ಮಾ!
ಕನಸಾದರಾ ಸುಖವು ಘೋರ ಸುಖವಮ್ಮಾ!
ಮಧುರ ಭೀಷಣವಮ್ಮಾ! ಸಿಡಿಲು ಸಕ್ಕರೆಯಮ್ಮ!

ಅಂದಿನಿಂದಿಂದಿನೆಡೆಗೊಯ್ಯನೆಯೆ ಬಾ, ಮನಸೆ!
ಸಾಕು ಬಿಡು, ಸಾಕು ಬಿಡು, ನಡೆ, ಹೋಗು, ಓ ಕನಸೆ!
ಮನ್ನಿಸಮ್ಮಾ ನನ್ನ, ಕನಸುಣಿಯು ನಾನು;
ಹಗಲುಗನಸಿಗೆ ಸಿಕ್ಕಿ ನಿದ್ದೆಯಲಿ ತೊಳಲಿದೆನು;
ಇರ್ಪ ನೋಟವ ತೊರೆದು, ಇರ್ದ ನೋಟವ ನೆನೆದು,
ಎತ್ತೆತ್ತಲೋ ಅಲೆದು ಹುಚ್ಚು ಹಿಡಿದವನಂತೆ
ಮೈಮರತು ಸರಿಪಟ್ಟೆಯೊಳೆ ಹೊಲಬುಗೆಟ್ಟಿದ್ದೆ!
ಮನ್ನಿಸಮ್ಮಾ ನನ್ನ, ಕನಸುಣಿಯು ನಾನು;
ತುಂಗೆಯಮ್ಮಾ ನಿನಗೆ ಎನಿತು ಋಣಿಯಯೌ ನಾನು!

ಎನಿತು ಚೆಲಿವೀ ನೋಟ? ಎನಿತು ಚೆಲುವೀ ನೋಟ!
ವರ್ತುಳ ಮನೋಹರಂ, ಪಾವನಂ, ಸುಂದರಂ!
ಗೆಳೆಯನೇ, ನಿಲ್ಲಿಲ್ಲಿ; ಸೊಬಗಿನೀ ದೇಗುಲದಿ
ಎದೆಯ ಕೀಳ್ಬಗೆಗಳನು ತೂರಿ ನಿಲ್ಲಿಲ್ಲಿ.
ಸೌಂದರ್ಯ ಸ್ವರ್ಗವಿದು; ಸುತ್ತಲೂ ತಿರುತಿರುಗಿ
ದಿಟ್ಟಿಸೈ; ಕೈಮುಗಿದು ತಲೆಬಾಗಿ ಇನ್ನೊಮ್ಮೆ
ದಿಟ್ಟಿಸೈ; ಎದೆ ತುಂಬಿ ಭಕ್ತಿಯಲಿ ದಿಟ್ಟಿಸೈ!
ವಿಶ್ಚದಾ ವರ್ಣಶಿಲ್ಪಿಯ ಚಿತ್ರಶಾಲೆಯಿದು,
ಪರುಶುರಾಮನ ಪರಮತೀರ್ಥವಿದು ದಿಟ್ಟಿಸೈ.
ಮಾತೃ ಹತ್ಯಾ ದೋಷವನು ತೊಳೆದ ತೀರ್ಥವಿದು
ದಿಟ್ಟಿಸೈ. ಮಲೆಯ ನಾಡೊಳು ಬಳಿದ ಕಬ್ಬಿಗನ
ಬಾಲ್ಯದಾನಂದವಿದು, ಯೌವನದ ಹೆಮ್ಮೆಯಿದು,
ಮುದಿತನದ ಶಾಂತಿಯಿದು, ಮರಣದಾ ಮುಕ್ತಿಯಿದು,
ಶ್ರೀರಾಮತೀರ್ಥವಿದು, ಗೆಳೆಯನೇ ದಿಟ್ಟಿಸೈ,
ಮೈಮರೆತು ಸೊನ್ನೆಯಪ್ಪನ್ನವರಮೀಕ್ಷಿಸೈ!

೨.೬.೧೯೩೦