ಬಾಯಿರದ ಬಣ್ಣಗಳಿಗೀವೆ ವಾಕ್‌ಶಕ್ತಿಯನು
ಮೌನೋಪದೇಶಕನೆ, ವರ್ಣಶಿಲ್ಪಿ.
ಕಿವಿ ಕೇಳಲಾರದಿರುವವ್ಯಕ್ತ ಗಾನವನು
ಕಂಗಳಾಲಿಸುವಂತೆ ಮಾಡುತಿರುವೆ!
ಮಾತು ಬಣ್ಣಿಸಲರಿಯದಿಹ ಭಾವ ಜಾಲವನು,
ಬಣ್ಣಗಳ ಕಬ್ಬಿಗನೆ, ಬಣ್ಣಿಸಿರುವೆ.
ಭೂತಕಾಲವ ಸುಲಿದು ವರ್ತಮಾನಕೆ ನೀಡಿ
ಭವಿತವ್ಯಕಿಣುಕುತಿಹೆ, ಚಿತ್ರಯೋಗಿ!
ಕಾಳಿದಾಸನ ಕಣ್ವನೀ ಕಣ್ವಗೆರಗೆ ಬರಲಿ!
ಮೇಣಾ ಶಕುಂತಲೆ ಇವಳ್ಗೆ ಸಖಿಯಾಗೆ ಬರಲಿ!
ಕಾಳಿದಾಸನೆ ನಿನ್ನೆಡೆಗೆ ಶಿಷ್ಯನಾಗೆ ಬರಲಿ!
ಕುಶಲತೆಯ ಗುಟ್ಟರಿಯೆ ಬೊಮ್ಮ ನಿನ್ನೆಡೆಗೆ ಬರಲಿ!

೩೦.೫.೧೯೨೯