ಸೂರ್ಯೋದಯದಲಿ ನಾನೂ ಮೂರ್ತಿಯು
ಬನಗಳ ಬೆಟ್ಟವನೇರಿದೆವು.
ಹರಟುತ ಹಾಡುತ ಚಿಮ್ಮುತ ತೇಲುತ
ಮೇಲಕೆ ಮೇಲಕೆ ಇನ್ನೂ ಮೇಲಕೆ
ಮುಗಿಲಿನ ಮಟ್ಟವ ಸೇರಿದೆವು.
ಎತ್ತಲೆಲ್ಲಿಯೂ ಸೊಬಗುವೀಡುಗಳು;
ಸುತ್ತಲೆಲ್ಲಿಯೂ ಹಸುರು ಕಾಡುಗಳು;
ಮೈಲಿ ಮೈಲಿಗಳ ದೂರದಲಿ
ಅಲೆಗಳ ಹಿಂಗಡೆ ಅಲೆಯಾಗುರುಳುತ,
ದೂರಕೆ ಸರಿದಂತೆಲ್ಲಾ ಮಾಸುತ,
ಮಬ್ಬಿನ ನೀಲಿಯ ಹೊದಿಕೆಯ ಹೊದೆಯುತ
ಕನಸಿನ ರೂಹಿನ ಬೆಟ್ಟಗಳು
ಮಾಲೆಮಾಲೆ ಮಲೆಘಟ್ಟಗಳು
ಮೆರೆದುವು ದೂರ ದಿಗಂತದಲಿ
ಮಲನಾಡಿನ ಹರಿದಂತದಲಿ!

ಕೆಳಗಡೆ ಕಣಿವೆ! ಚೆಲುವಿನ ಕಣಿವೆ!
ನಾವಿಹ ಬೆಟ್ಟದ ತಪ್ಪಲಲಿ!
ಕೊಯ್ದಿಹ ಗದ್ದೆಗಳು,
ಯೌಂಗಿನ ತೋಟಗಳು,
ಇಲ್ಲಿ ಅಲ್ಲಿ ತಲೆಯೆತ್ತಿಹ ಬಡವರ
ಬಿಂಕದ ಹುಲ್ಮನೆ ನೋಟಗಳು.
ಮನೆಮನೆಯಿಂದ ಸುನೀಲಾಕಾಶಕೆ

ಮೆಲ್ಲಗೇರ್ವ ಹೊಗೆವಳ್ಳಿಗಳು,
ನೀಲಿಯ ಕನಸಿನ ಬಳ್ಳಿಗಳು!
ಸುಸಿಲೆಳಬಿಸಿಲಲಿ ತಂಗಾಳಿಯಲಿ
ಕಣ್ದೆರೆದೇಳುವ ಹಳ್ಳಿಗಳು,
ಸಿರಿಮಲೆನಾಡಿನ ಹಳ್ಳಿಗಳು.

ಲಾವುಗೆ, ಚೋರ, ಹೂವಿನ ಹಕ್ಕಿ,
ಕೋಗಿಲೆ ಗಿಳಿಗಳ ಪರಿಷತ್ತು;
ಕಾಮಳ್ಳಿಯ ಕಾಜಾಣದ ವಿಧವಿಧ
ಗಾಯನ ಮೇಲವು ನೆರೆದಿತ್ತು.
ನಿಂತು ನಿಂತು ಸಹ್ಯಾದ್ರಿಯ ಚೆಲುವನು
ಬಗೆ ತಣಿವಂದದಿ ನೋಡಿದೆವು:
ವಿಶ್ವರೂಪಿ ವಿಶ್ವೇಶನ ಪೂಜೆಯ 
ವಿಶ್ವಪೂಜೆಯಲಿ ಮಾಡಿದೆವು!

೧೬.೫.೧೯೩೦