ಏನಿದೀ ದಿವ್ಯದೃಶ್ಯ:
ಧನ್ಯ ಚತರ್ ಅಸ್ಯ!
ಸಾಧಕನಿಗೆ ಮಾತ್ರ ಸಾಧ್ಯ;
ಪ್ರತಿಭಾನಕೆ ಮಾತ್ರ ವೇದ್ಯ;
ಕೃಪೆಗಲ್ಲದೆ ತಾನ್ ಅಬೋಧ್ಯ:
ಈ ದೃಶ್ಯ ಸ್ವಾರಸ್ಯ
ಉಪನಿಷದ್ ರಹಸ್ಯ!
ನೂರು ಕಣ್ಣು ಸೋಲದು,
ನೂರು ಹೃದಯ ಸಾಲದು
ಇದರ ಚೆಲುವ ಪಾರಲು,
ಇದರ ರಸವ ಹೀರಲು!
ಮತ್ತೆ ಮತ್ತೆ ತಿರುಗಿ ತಿರುಗಿ
ನಟ್ಟು ನಿಂತು ನೋಡಿದೆ
ಕಣ್ಣಾಗಿ ನೋಡಿದೆ,
ಧನ್ಯ ನಾ ಧನ್ಯನೆಂದು
ನಮಸ್ಕಾರ ಮಾಡಿದೆ!
ಏನಿದೀ ದಿವ್ಯದೃಶ್ಯ:
ಧನ್ಯ ಚತರ್ ಅಸ್ಯ!


ಹೋದ ಇರುಳು ಶಿವನ ರಾತ್ರಿ:
ಅವನ ಧವಳ ತನು ವಿಭೂತಿ
ತಾನೆ ಆಯಿತಿಳಾ ಯಾತ್ರಿ
ಎಂಬಂತಿದೆ ಹೇಮಂತನ
ಶ್ರೀಮಂತಿಕೆಯೀ ಧರಿತ್ರಿ!
ಅಂದು ಅಲ್ಲಿ ಪಂಚವಟಿಯ
ಗೋದಾವರೀ ನದೀತಟಿಯ
ವಟಮೂಲದ ಪರ್ಣಕುಟಿಯ
ಎಲೆವಾಗಿಲ ತೆರೆದು ಸೀತೆ
ರಘುನಾಥಗೆ ತೋರ್ದದೊಂದು
ಮಂಜು ದೃಶ್ಯ ಮಹಾಶ್ವೇತೆ
ಅವತರಿಸಿಹಳಿಲ್ಲಿ ಇಂದು! ….
ಅಃ ಅಃ ಅಃ
ಏನಿದೀ ದಿವ್ಯದೃಶ್ಯ:
ಧನ್ಯ ಚುತುರ್ ಅಸ್ಯ!

೨೬. ೦೨. ೧೯೪೯