ಸೌಂದರ್ಯವೆನ್ನ ಹರಿ! ಸೌಂದರ್ಯವೆನ್ನ ಹರ!
ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ!
ಸೌಂದರ್ಯವೇ ಪುಣ್ಯ; ಸೌಂದರ್ಯವೇ ಸ್ವರ್ಗ;
ಸೌಂದರ್ಯವೇ ನನ್ನ ಚರಮಮೋಕ್ಷ!
ಸೌಂದರ್ಯವಿಲ್ಲದಿಹ ಲೋಕ ರೌರವ ನರಕ;
ಸೌಂದರ್ಯವಿರೆ ನರಕವದುವೆ ನಾಕ.
ಸೌಂದರಕಿಂತಲಧಿಕತರ ದೇವರುಮಿಲ್ಲ;
ಸೌಂದರ್ಯವಿಲ್ಲದಿರೆ ದೇವರಲ್ಲ!

ನನ್ನಾತ್ಮ ಸೌಂದರ್ಯ; ನಿನ್ನಾತ್ಮ ಸೌಂದರ್ಯ;
ನಾನಿಲ್ಲ, ನೀನಿಲ್ಲ; ಸೌಂದರ್ಯಮಿಹುದೆಲ್ಲ!
ಸೌಂದರ್ಯವಾನಂದ! ಸೌಂದರ್ಯವೈಶ್ವರ್ಯ!
ವಿಶ್ವಕ್ಕೆ ತಾಯಾರು ಬಲ್ಲೆಯೇಂ? — ಸೌಂದರ್ಯ!

೧೦.೧೨.೧೯೨೯