ಕೊಟಡಿಯ ಮುಂದೆಯೆ ಕೇಳಿತು ಝೇಂಕೃತಿ;
ಕಿವಿಗಿಂಪೆರೆದೆದೆ ತೆರೆವಾ ಜೇನ್‌ಕೃತಿ!
ಜೇನೀಂಟುತ್ತಿವೆ ಹೂವತಿಥಿ?
ಬಾಗಿಲು ತೆರೆದೆರೆ ಎಂತಹ ನೋಟ:
ಸೂರ್ಯಕಾಂತಿಯಾ ಹೂವಿನ ತೋಟ;
ಹಳದಿಯ ಹಸುರಿನ ಬೇಟದ ಕೂಟ;
ಹೊನ್ನಿನ ಪಚ್ಚೆಯ ಕುಣಿಕುಣಿವಾಟ!
ಕಬ್ಬಗನಕ್ಷಿಗೆ ಹಬ್ಬದ ಊಟ;
ಆತ್ಮಕೊ ಕಬ್ಬನಹಾಲೂಟ!


ಕಿವಿ ನಿಮಿರಾಲಿಸೆ ಅದೊ ಅದೆ ಝೇಂಕೃತಿ;
ಕಿವಿಗಿಂಪೆರೆದೆದೆ ತೆರೆವಾ ಜೇನ್‌ಕೃತಿ!
ಹೌದದೊ ಹೂವಿಗೆ ಜೇನತಿಥಿ!
ಹೃದಯದ ರಸದೌತಣಕೈತಂದಿವೆ,
ಒಂದೋ ಎರಡೋ? — ಸಾವಿರ ಬಂದಿವೆ;
ಬರುತಿವೆ, ಹೋಗುತ್ತಿವೆ; ಹಾರುತ್ತಿವೆ;
ಚಿನ್ನದ ಏರಿಯ ಕೊಳಕಿಳಿಯುತ್ತಿವೆ;
ಮಕರಂದದ ಮಡುವನು ಕುಡಿಯುತ್ತಿವೆ
ಸಾವಿರ ಸಾವಿರ ಹೂವತಿಥಿ!


ನೋಡುತ ಕೇಳುತ ಹಿಗ್ಗುತ ನಿಂತೆ;
ಹಾರಿದೆ ಹೀರಿದೆನಳಿಯಂತೆ!
ಮೈಸೂರಲಿ ಮಲೆನಾಡನು ಕಂಡೆ;
ಆ ರಸದೂಟವನಿಲ್ಲಿಯೆ ಉಂಡೆ;
ಕೊಡಿಮಿಂಚಾದುದು ಬೇಸರಬೂದಿ
ಸ್ಮೃತಿಚೈತ್ರಪ್ರಾಣಾನಿಲ ಊದಿ!
ನನ್ನಾ ಮನೆಗಾದನೆ ನಾನತಿಥಿ?
ದೂರದ ಸೀಮೆಯ ಬಯಲತಿಥಿ?

೧೭.೫.೧೯೩೮