ಧರ್ಮಸ್ಥಳದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲೂ

[1] ಮಂಜುನಾಥ ದೇವಾಲಯವಿದೆ. ವಾದಿರಾಜರ ಪ್ರೇರಣೆಯಂತೆ ಅಣ್ಣಪ್ಪ ದೈವವು ಕದ್ರಿಯಿಂದ ಶಿವಲಿಂಗವನ್ನು (ಮಂಜುನಾಥ) ತಂದು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಿದುದಾಗಿ ಕ್ಷೇತ್ರಮಹಾತ್ಮೆಯು ವಿವರಿಸುತ್ತದೆ.[2] ಉಳಿದಂತೆ ಬೌದ್ಧ ಧರ್ಮ ಅಥವಾ ನಾಥಪಂಥಕ್ಕೆ ಸಂಬಂಧಿಸಿದಂತೆ ಈ ಎರಡು ಕ್ಷೇತ್ರಗಳೊಳಗೆ ಯಾವುದೇ ರೀತಿಯ ಸಂಬಂಧವಿದ್ದಂತಿಲ್ಲ.

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಾಥಪಂಥಕ್ಕೆ ಸೇರಿದ ‘ಜೋಗಿಮಠ’ವಿದೆ. ಮಠದ ವಿಶಾಲ ಪರಿಸರದಲ್ಲಿ ಕಾಶಿ ಕಾಲಭೈರವನ ಸನ್ನಿಧಿ, ಮಂಜುನಾಥೇಶ್ವರ ಲಿಂಗ, ಪರಶುರಾಮ ಧುನಿ, ತೂಗುಮಂಚ, ಮುಖವಾಡ, ಖಡ್ಗ – ತ್ರಿಶೂಲಗಳು, ಹಿಂದಿನ ಸನ್ಯಾಸಿಗಳ ಸಮಾಧಿಗಳು, ಗೋಶಾಲೆ[3] – ಇತ್ಯಾದಿಗಳಿವೆ. ವಿಟ್ಲದ ಅರಸರು ಈ ಮಠಕ್ಕೆ ನೂರೊಂದು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದರೆಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ಮಠದ ಸಾಧುಗಳು ಊರೂರಿಗೆ ಹೋಗಿ ಭಕ್ತರಿಗೆ ಉಪದೇಶ ಮಾಡುತ್ತಿದ್ದರಂತೆ. ಆಗಾಗ ಭಕ್ತರನ್ನು ಮಠಕ್ಕೆ ಬರಮಾಡಿಕೊಂಡು, ಧಾರ್ಮಿಕ ಸಭೆಗಳನ್ನು ನಡೆಸಿ, ಊಟೋಪಚಾರಗಳಿಂದ ಸಂತೈಸುತ್ತಿದ್ದರಂತೆ. ಇಲ್ಲಿನ ಪರಂಪರೆಯಲ್ಲಿ ರಾಜಾಲಕ್ಷ್ಮೀನಾಥರೆಂಬವರು ೪೮ ವರ್ಷಗಳಷ್ಟು ದೀರ್ಘ ಕಾಲ ಪೀಠಾಧಿಪತಿಗಳಾಗಿದ್ದು, ಬೇಕಾದಷ್ಟು ಸಮಾಜಸೇವೆ ಮಾಡಿ, ಜನಾನುರಾಗಿಗಳೆನಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಜೋಗಿ ಸಮುದಾಯದವರು ಮಾತ್ರವಲ್ಲದೆ ಇತರರೂ ಮಠವನ್ನು ಪ್ರೀತಿಸುವಂತೆ, ಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುವಂತೆ ಅವರು ಮಾಡಿದ್ದರೆಂದು ಸುತ್ತಲಿನ ವಯೋವೃದ್ಧ ಜನ ಹೇಳುತ್ತಿದ್ದಾರೆ.[4] ಸಾಮಾನ್ಯವಾಗಿ ೧೨ ವರ್ಷಗಳಿಗೊಮ್ಮೆ “ಝಂಡಿ” ಬಂದಾಗ ಕದ್ರಿಯಲ್ಲೇ ವಿಟ್ಲದ ಜೋಗಿ ಅರಸರಿಗೂ ಪಟ್ಟವಾಗುತ್ತದೆ. ೧೯೯೨ ರಲ್ಲಿ ಈಗಿನ ಮಠಾಧಿಪತಿಗಳಾದ ಲಾಲಾನಾಥಜೀಯವರಿಗೆ ಕದ್ರಿಯಲ್ಲೇ ಪಟ್ಟವಾಯಿತು. ಆದರೂ “ಝಂಡಿ”ಯು ವಿಟ್ಲದವರೆಗೂ ಬಂದಿತ್ತು. ೨೦೦೨ ನೇ ಇಸವಿಯಲ್ಲಿ ಮತ್ತೆ “ಝಂಡಿ” ಬರಲಿದ್ದು, ನೂತನ ಮಠಾಧಿಪತಿಗಳ ನೇಮಕವಾಗಲಿದೆ. ಇಲ್ಲಿ ನಾಥಪಂಥದ ‘ಸತ್ಯನಾಥ’ ಶಾಖೆಗೆ ಸೇರಿದ ಸಾಧುಗಳು ಪೀಠಾಧಿಪತಿಗಳಾಗುತ್ತಾರೆ.

ದಕ್ಷಿಣ ಕನ್ನಡದ ಕದ್ರಿ,ವಿಟ್ಲಗಳಲ್ಲದೆ ಕುಂದಾಪುರ ತಾಲೂಕಿನ ಹಲೋರಿ ಎಂಬಲ್ಲೂ ನಾಥ ಪಂಥದ ಮಠವಿತ್ತು. ಆದರೆ ಈಗ ಅಲ್ಲಿ ಮಠ ಅಸ್ತಿತ್ವದಲ್ಲಿಲ್ಲ. ಉತ್ತರ ಕರ್ನಾಟಕದ ಬೇಡಕೀಹಾಳ, ಕಪ್ಪತಗುಡ್ಡ, ಕಲ್ಯಾಣ ಮೊದಲಾದೆಡೆಗಳಲ್ಲೂ ನಾಥಪಂಥದ ಅವಶೇಷಗಳಿವೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂ ಕಿನ ಹಂಡಿಬಡಂಗನಾಥ ಮಠವು ಬಹಳ ಪ್ರಸಿದ್ಧವಾಗಿದೆ. ಕೃಷ್ಣರಾಜನಗರ ಬಳಿಯ ಕಪ್ಪಡಿ ಕ್ಷೇತ್ರದಲ್ಲಿ ಇಂದಿಗೂ ನಾಥ ಪಂಥದ ಮಠವಿದೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯು ಹಿಂದೆ ನಾಥಪಂಥದ ಕೇಂದ್ರವಾಗಿತ್ತೆಂಬುದಕ್ಕೆ ಈಗಲೂ ಅಲ್ಲಿ ಕುರುಹುಗಳಿವೆ. ಈಗ ಆದಿಚುಂಚನಗಿರಿಯು ಪ್ರಸಿದ್ಧ ಭೈರವ ಕ್ಷೇತ್ರ. ಭೈರವ – ಕಾಲಭೈರವ ನಾಥ ಪಂಥೀಯರ ದೇವರೆಂಬುದನ್ನು ಈ ಹಿಂದೆಯೇ ಗಮನಿಸಲಾಗಿದೆ. ಆದಿಚುಂಚನಗಿರಿಯಲ್ಲಿ ಇಂದು ಮಠಾಧಿಪತಿಗಳಾಗಿರುವವರು ಉತ್ತರಭಾರತದ ನಾಥ ಪಂಥಕ್ಕೆ ಸೇರಿದ ಸಾಧುಗಳಲ್ಲ. ಬದಲಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸ್ವಾಮಿಗಳು ಅಲ್ಲಿ ಮಠಾಧಿಪತಿಗಳಾಗಿದ್ದಾರೆ. ಆದರೂ ಅವರ ಹೆಸರಿನ ಜತೆಗೆ “ನಾಥ” ಎಂಬ ಪ್ರತ್ಯಯವು ಸೇರಿಕೊಂಡಿರುವುದು ಹಿಂದಿನ ಪರಂಪರೆಯ ಕುರುಹೆಂದು ಹೇಳಬಹುದು. ಈಗಿರುವ ಬಾಲಗಂಗಾಧರನಾಥ ಸ್ವಾಮಿಗಳ ಹೆಸರನ್ನೇ ಇಲ್ಲಿ ಉದಾಹರಿಸಬಹುದು. ಅಷ್ಟು ಮಾತ್ರವಲ್ಲದೆ ಈಗಲೂ ಅಲ್ಲಿ ನಾಥ ಸಂಪ್ರದಾಯದವರಾದ ಜೋಗಿಗಳಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ನುಂಕೆಮಲೆಯೂ ನಾಥಪಂಥದ ಕೇಂದ್ರವಾಗಿದ್ದಿರಬೇಕು. ಈಗ ಅಲ್ಲಿ ಸಿದ್ದೇಶ್ವರ ದೇವಾಲಯವಿದೆ. ಇದನ್ನು ಭೈರವ ದೇವಸ್ಥಾನವೆಂದೂ ಕರೆಯುತ್ತಾರೆ. ಹೀಗೆ ಒಂದು ಕಾಲದಲ್ಲಿ ಕರ್ನಾಟಕದಲ್ಲೂ ನಾಥಪಂಥವು ವ್ಯಾಪಕವಾಗಿ ನೆಲೆಗೊಂಡಿತ್ತೆಂದು ಹೇಳಬಹುದಾಗಿದೆ. ಮುಂದೆ ಇದರ ಕೆಲವು ಅಂಶಗಳು ವೀರಶೈವದಲ್ಲಿ ಲೀನವಾದಂತೆ ತೋರುತ್ತದೆ.[1] ಧರ್ಮಸ್ಥಳಕ್ಕೆ ಹಿಂದೆ ‘ಕುಡುಮ’ ಎಂಬ ಹೆಸರಿತ್ತೆಂದೂ ವಾದಿರಾಜರೇ ಅಲ್ಲಿಗೆ ‘ಧರ್ಮಸ್ಥಳ’ ವೆಂಬ ಹೆಸರಿರಿಸಿದರೆಂದೂ ಹೇಳಲಾಗುತ್ತದೆ.

[2] ಈ ಕುರಿತಾದ ಇನ್ನಷ್ಟು ವಿವರವನ್ನು ‘ಜಾನಪದದಲ್ಲಿ ಕದ್ರಿ’ ಎಂಬ ಉಪವಿಭಾಗದಲಿ ನೀಡಲಾಗಿದೆ.

[3] ಗೋರಕ್ಷನಾಥನ ಕಲ್ಪನೆಯಿಂದ ‘ಗೋಶಾಲೆ’ಯ ಸಂಪ್ರದಾಯ ಬೆಳೆದು ಬಂದಿರಬೇಕೆಂದು ತೋರುತ್ತದೆ.

[4] ಆದರೆ ಇತ್ತೀಚಿನ ದಿನಗಳಲ್ಲಿ ವಿಟ್ಲದ ಜೋಗಿ ಮಠದ ಜತೆಗೆ ಸ್ಥಳೀಯರು ಅಂತಹ ಭಾವನಾತ್ಮಕ ಸಂಬಂಧವನ್ನೇನೂ ಇರಿಸಿಕೊಂಡಂತಿಲ್ಲ. ನಂತರದ ಯೋಗಿ ಅರಸರೊಬ್ಬರು (ಬಹುಶಃ ೧೯೮೧ ರಲ್ಲಿ ಪಟ್ಟಕ್ಕೆ ಬಂದವರಿರಬೇಕು.) ಸ್ಥಳೀಯರೊಂದಿಗೆ (ಅದರಲ್ಲೂ ಮಹಿಳೆಯರೊಂದಿಗೆ) ಅನೈತಿಕವಾಗಿ ನಡೆದುಕೊಂಡಿದ್ದರೆಂದು ಹೇಳಲಾಗುತ್ತಿದ್ದು, ಆ ಕಾರಣಕ್ಕಾಗಿಯೇ ಜನರು ಮಠದೊಂದಿಗೆ ಸಂಪರ್ಕವಿರಿಸಿಕೊಳ್ಳಲು ಅಷ್ಟಾಗಿ ಬಯಸುತ್ತಿಲ್ಲವೆಂದು ತೋರುತ್ತದೆ. ಹಾಗೆಂದು ಈಗಿನ ಮಠಾಧಿಪತಿಗಳ ಬಗ್ಗೆ ಜನರಿಗೆ ಸದಭಿಪ್ರಾಯವಿದೆ.