ಇಂದು “ಕದ್ರಿ”ಯೆಂದೇ ಪರಿಚಿತವಾಗಿರುವ ಈ ಸ್ಥಳ ಮಂಗಳೂರು ನಗರಕ್ಕೆ ಸೇರಿದ ಭಾಗವಾಗಿದೆ. ಹಿಂದೆ ಕದ್ರಿಯು ಮಂಗಳೂರು ಪಟ್ಟಣದ ಹೊರವಲಯದಲ್ಲಿತ್ತು. ಕಾಲಕ್ರಮದಲ್ಲಿ ನಗರ ವಿಸ್ತಾರಗೊಂಡು, ಅದು ಮಂಗಳೂರು ಪಟ್ಟಣದ ಒಂದು ಭಾಗವಾಗಿ ಬಿಟ್ಟಿದೆ. ಪ್ರಾಚೀನ ಶಾಸನ, ಗ್ರಂಥಗಳಲ್ಲಿ “ಕದರಿಕಾ”, “ಸುವರ್ಣ ಕದಲೀ ಕ್ಷೇತ್ರ” ಇತ್ಯಾದಿಯಾಗಿ ಈ ಕ್ಷೇತ್ರವನ್ನು ಕರೆಯಲಾಗಿದೆ. ಅದರಂತೆ ಕದಲಿ – ಕದರಿಕಾ ರೂಪಗಳಿಂದ ಇವತ್ತಿನ ‘ಕದಿರೆ’ ಅಥವಾ ‘ಕದ್ರಿ’ ನಿಷ್ಪನ್ನವಾಗಿದೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಸ್ಥಳಪುರಾಣದ ಪ್ರಕಾರ ಪರಶುರಾಮನ ಕಾಲದಲ್ಲಿ ಅಲ್ಲಿ ನಿಬಿಡವಾದ ಕದಳೀ (ಬಾಳೆ) ವನವಿತ್ತೆಂದೂ ಅದರ ಹಣ್ಣುಗಳು ಸೂರ್ಯಕಾಂತಿಗೆ ಸುವರ್ಣಮಯವಾಗಿ ಹೊಳೆಯುತ್ತಿದ್ದುದರಿಂದ ಅದು ‘ಸುವರ್ಣ ಕದಳೀಕ್ಷೇತ್ರ’ ವೆನಿಸಿತೆಂದೂ ಹೇಳಲಾಗುತ್ತದೆ. (ಅನಂತರಾಮು ಕೆ.; ೧೯೯೭; ಪು. ೮೭೦) ಅಂದರೆ ‘ಕದಲಿ’ ಅಥವಾ ‘ಕದಳಿ’ಯಿಂದಲೇ ‘ಕದರಿ’ – ‘ಕದ್ರಿ’ ರೂಪ ನಿಷ್ಟನ್ನವಾಯಿತೆಂದು ಕೆಲವು ವಿದ್ವಾಂಸರ ಅಭಿಮತ.

ಆದರೆ ಗೋವಿಂದ ಪೈಗಳ ಪ್ರಕಾರ ‘ಕದ್ರಿ’ ಅಥವಾ ‘ಕದರಿಕಾ’ ರೂಪ ಕದಲಿಕಾ – ಕದಲಿಯಿಂದ ಬಂದುದಲ್ಲ. ಅದರ ಮೂಲ ರೂಪ ‘ಕದರ’ ಎಂದಿರಬೇಕು. ಕದರ ಎಂದರೆ ಬಿಳಿಯ ಕಗ್ಗಲೀ ಮರ (ಬಿಳಿಯ ಖೈರಿಯ ಮರ)’. ‘ಕದರೀ’ ಅಥವಾ ‘ಕದರಿಕಾ’ ಎಂದರೆ ಅಂತ ಮರಗಳುಳ್ಳ ಠಾವು. ತಮ್ಮ ವಾದಕ್ಕೆ ಪುಷ್ಟಿಯಾಗಿ ಅವರು ಅಮರಕೋಶದ “ಕದರ: ಖದಿರೇ ಸಿತೇ” (II – 376) ಮತ್ತು ಹೇಮಚಂದ್ರನ ‘ಅನೇಕಾರ್ಥ ಸಂಗ್ರಹ’ದ (೧೧೨೯) “ಕದರ – ಶ್ವೇತ ಖದಿರೇ” ಎಂಬ ಉಲ್ಲೇಖಗಳನ್ನು ಕೊಡುತ್ತಾರೆ. (ಗೋ.ಸಂ. ಸಂ. ಪು. ೬೫೬).

ಲೋಕೇಶ್ವರ ವಿಗ್ರಹದ ಪೀಠದಲ್ಲಿರುವ ಅಲೂಪರ ಲೇಖದ ಕುರಿತು ಚರ್ಚಿಸುವ ಸಂದರ್ಭದಲ್ಲಿ ಗೋವಿಂದ ಪೈಯವರು ‘ಕದ್ರಿ’ ಸ್ಥಳನಾಮಕ್ಕೆ ಸಂಬಂಧಿಸಿದ ಈ ವಾದಸರಣಿಯನ್ನು ಮಂಡಿಸುತ್ತಾರೆ. ಅದನ್ನು ಸ್ವತಃ ಅವರ ಮಾತುಗಳಲ್ಲೇ ಗಮನಿಸಬಹುದಾಗಿದೆ. “ಈ ಲೇಖದ ಕೊನೆಯ ಶ್ಲೋಕದಲ್ಲಿ ‘ಶ್ರೀಮತ್‌ ಕದರಿಕಾ ನಾಮ್ನಿ’ ಎಂಬಲ್ಲಿಯ “ಕದರಿಕಾ” ಎಂಬುದು ಕದ್ರಿಯ ಹೆಸರೆಂಬುದರಲ್ಲಿ ಸಂಶಯವಿಲ್ಲ. ಕದ್ರೆಯ ಪ್ರಾಚೀನ ಹೆಸರು ‘ಕದಲ ಈ’, ಕದಲಿಕಾ’, ಕದಲೀವನ’ ಎಂದು ಇದ್ದಿತು ಅಥವಾ ಇದ್ದಿರಬೇಕೆಂದು ಹಲವರ ಅಭಿಪ್ರಾಯವಿದೆ; ಮತ್ತು ಕದ್ರೆಯಲ್ಲಿರುವ “ಬಾಳೆಬೈಲು” ಎಂಬ ಗ್ರಾಮದ ಹೆಸರನ್ನು ಆ ಊಹೆಗೆ ಸಾಕ್ಷಿಯಾಗಿ ಹೇಳುವುದುಂಟು. ಆದರೆ ಇದು ಸರಿಯಾಗಿರದು. ಏಕೆಂದರೆ ಬಾಳೆಗೆ ಸಂಸ್ಕೃತದಲ್ಲಿ ‘ಕದಲಿ’ ಎಂದು ಹೆಸರಲ್ಲದೆ, ‘ಕದರಿ’ ಎಂದು ಯಾವ ಕೋಶದಲ್ಲಿಯೂ ಇಲ್ಲ; ಅಥವಾ ‘ರ – ಲಯೋರಭೇದ:’ಎಂದಿಟ್ಟುಕೊಂಡು ರ – ಲ ಕಾರಗಳ ವ್ಯತ್ಯಯದಿಂದ ‘ಕದಲಿ’ ಎಂಬಾ ಹಳೆಯ ಹೆಸರು ಕಾಲಕ್ರಮೇಣ ‘ಕದಲಿ’ ಎಂದಾಗಿರಬಹುದೋ ಎಂದು ಶಂಕಿಸಲಾದರೂ ಕಾರಣವಿಲ್ಲ. ಏಕೆಂದರೆ ರ – ಲ ಗಳ ವ್ಯತ್ಯಯವು ಅರ್ಥಬಾಧಕವಾಗದ ಕೆಲವೆಡೆಗಳಲ್ಲಿ ಮಾತ್ರ. ಅದಾದರೂ ಬಹಳ ವಿರಳವಾಗಿ ತಾನೆ ಮಾಡಲ್ಪಡುತ್ತದಲ್ಲದೆ ಸರ್ವತ್ರ ಮಾಡಲ್ಪಡದು. ಅಥವಾ ಹಾಗೆ ಮಾಡಿದರೆ ಅರ್ಥವು ಅನರ್ಥವಾಗದಿರದು. ಉದಾ: ೧. ಗರ = ವಿಷ: ಗಲ = ಕೊರಳು ೨. ದಲ = ಕೊಂಚ; ದರ = ಎಸಳು ೩. ಶರ = ಬಾಣ, ನೀರು, ಮೊದೆ; ಶಲ = ಮುಳ್ಳು ಹಂದಿಯ ಮುಳ್ಳು ೪. ಬಂಧುರ = ಸೊಗಸಾದ; ಬಂಧುಮು = a bastard, ೫. ಮುಕುರ = ಕನ್ನಡಿ; ಮುಕುಲ = ಮೊಗ್ಗೆ

[1], ೬. ಶಬರ = ಬೇಡ; ಶಬಲ = ಚಿತ್ರವರ್ಣದ ಇತ್ಯಾದಿ”. (ಗೋ.ಸಂ.ಸಂ. ಪು ೬೫೫ – ೫೬)

‘ಕದರ’ ರೂಪದಿಂದ ‘ಕದರಿ’ ನಿಷ್ಪನ್ನವಾಗಿರಬೇಕೆಂಬ ತಮ್ಮ ವಾದವನ್ನೂ ಪೈಯವರು ಉದಾಹರಣೆ ಸಹಿತ ಸಮರ್ಥಿಸುತ್ತಾರೆ.

“ಬದರ = ಬೊಗರಿ (ಅಥವಾ ಎಳಚಿ)ಯ ಮರ; ಬದರೀ ಅಥವಾ ಬದರಿಕಾ ಎಂದರೆ ಆ ಮರಗಳುಳ್ಳ ಪ್ರದೇಶ (ಬದರಿಕಾಶ್ರಮ). ಕದ್ರೆಯ ನೆರೆಯಲ್ಲಿರುವ ‘ಕರಿಂಗಲ್‌ ಪಾಡಿ’ ಎಂಬ ಗ್ರಾಮದ ಆ ಹೆಸರಲ್ಲಿಯ ‘ಕರಿಂಗಲ್‌’ ಎಂಬ ತುಳು ಶಬ್ದವು ಕಪ್ಪು ಅಥವಾ ಕೆಂಪು ಖೈರಿಯ ಮರದ ಹೆಸರು. ಇದಕ್ಕೆ ಕನ್ನಡದಲ್ಲಿ ಕಗ್ಗಲಿ ಎಂದೂ ತರೆಯದ ಮರವೆಂದೂ ಮಲೆಯಾಳಿಯಲ್ಲಿ ‘ಕರಿಙ್ಙಲಿ’ ಎಂದೂ ತಮಿಳಿನಲ್ಲಿ ‘ಕರುಂಗಾಳಿ’ ಎಂದೂ ಹೆಸರು. ಅತ ಏವ ಹಿಂದಣ ಒಂದಾನೊಂದು ಕಾಲದಲ್ಲಿ ಈಗ ಕದ್ರೆ ಇರುವ ಆ ಗುಡ್ಡದ ಪ್ರದೇಶದಲ್ಲಿ ಬಿಳಿಯ ತರೆಯದ ಮರಗಳ ದಪ್ಪಾನೆ ಕಾಡು ಬೆಳೆದಿದ್ದು, ಆ ದೆಸೆಯಿಂದಲೇ ಅದಕ್ಕೆ “ಕದರೀ” “ಕದರಿಕಾ” “ಕದರೀವನ” ಎಂದು ಹೆಸರಾಯಿತೆಂದೂ ಅದರ ಬಳಿಯಲ್ಲಿರವ ತಗ್ಗಿನಲ್ಲಿ ಕಗ್ಗಲಿ ಎಂಬ ಕಪ್ಪು ಖೈರಿಯ ಮರಗಳು ನಿಬಿಡವಾಗಿದ್ದು, ಅಲ್ಲಿ ಯತ್ಕಿಂಚಿತ್ತಾದರೂ ಜನರ ವಸತಿ ಇದ್ದುದರಿಂದ ಆ ಪಾಡಿ ಅಥವಾ ಹಾಡಿ ಎಂದರೆ ಹಳ್ಳಿಗೆ ಆ ಕಾರಣದಿಂದ ಕರಿಂಗಲ್‌ಪಾಡಿ ಎಂದು ಹೆಸರಾಗಿರಬೇಕೆಂದೂ ಬಹುತೇಕವಾಗಿ ನಿರ್ಧರಿಸಬಹುದು. ಕದ್ರೆಯ ಜೋಗಿಮಠದಲ್ಲಿರುವ ಶಾ.ಶ. ೧೩೬೭ನೆಯ ಮನ್ಮಥ ಸಂ. ಅಂದರೆ ಕ್ರಿ.ಶ. ೧೪೭೫ನೆಯ ಇಸವಿಯ ವಿಜಯನಗರದ ಪ್ರೌಢ ವಿರೂಪಾಕ್ಷರಾಯನ ಶಾಸನದಲ್ಲಿ ‘ಮಂಗಳೂರು ರಾಜ್ಯಕ್ಕೆ ಆದಿಸ್ತಾನವಹ ಕದಿರೆಯ’ ಎಂದೂ ‘ಈ ಕದಿರೆಯಲ್ಲಿ’ ಎಂದೂ ಕದ್ರೆಯನ್ನು ‘ಕದಿರೆ’ ಎಂದು ಉಲ್ಲೇಖಿಸಿದೆ. ಅದಕ್ಕೆ ‘ಕದಲಿ’ ಎಂದು ಹೆಸರಿದ್ದಂತೆ ಎಲ್ಲಿಯೂ ತೋರುವುದಿಲ್ಲ”. (ಗೋ.ಸಂ.ಸಂ.ಪು. ೬೫೬) ಗೋವಿಂದ ಪೈಯವರು ಇಲ್ಲಿ ಪುರಾಣ ಪ್ರಣೀತ ಸಂಗತಿಗಳಿಗೆ ಅಷ್ಟಾಗಿ ಅಂಟಿಕೊಳ್ಳದೆ, ಇತಿಹಾಸ ಹಾಗೂ ಭಾಷಾ ವೈಜ್ಞಾನಿಕ ದೃಷ್ಟಿಕೋನದಿಂದ ಪ್ರಸ್ತುತ ಸ್ಥಳನಾಮವನ್ನು ವಿಶ್ಲೇಷಿಸಿದ್ದಾರೆ.

ಕೆಮ್ತೂರು ರಘುಪತಿ ಭಟ್ಟರು ‘ ಕದರ್’ ಎಂಬುದರಿಂದ ಕದರಿ – ಕದ್ರಿ ನಿಷ್ಪನ್ನವಾಯಿತೆನ್ನುತ್ತಾರೆ. ‘ಕದರ್’ ಎಂದರೆ ಬೆಟ್ಟ – ಗುಡ್ಡ – ಪರ್ವತ ಇತ್ಯಾದಿ ಅರ್ಥಗಳಿವೆಯೆಂದೂ. ಅದರಂತೆ ‘ಕದ್ರಿ’ ಎಂದರೆ ಕಾಡಿನಿಂದ ಕೂಡಿದ ಇಳಿಜಾರಾದ ಬೆಟ್ಟ ಪ್ರದೇಶ ಎಂಬ ಅರ್ಥ ಬರುತ್ತದೆಂದೂ ಅವರು ಹೇಳುತ್ತಾರೆ. (Raghupathi Kemtur; 1989; PP. 23). ಹೀಗೆ ‘ಕದ್ರಿ’ ಸ್ಥಳನಾಮದ ಕುರಿತು ಮುಖ್ಯವಾಗಿ ಮೂರು ಬಗೆಯ ವ್ಯಾಖ್ಯಾನ – ನಿಷ್ಪತ್ತಿಗಳನ್ನು ವಿದ್ವಾಂಸರು ಕೊಟ್ಟಿರುತ್ತಾರೆ. ಒಟ್ಟಿನಲ್ಲಿ ಸ್ಥಳದ ವೈಶಿಷ್ಟ್ಯದಿಂದಲಾಗಿಯೇ ಆ ಹೆಸರು ಬಂದಿದೆಯೆಂಬ ಅಂಶ ಮೇಲಿನ ಮೂರು ವ್ಯಾಖ್ಯಾನಗಳಿಂದಲೂ ವೇದ್ಯವಾಗುತ್ತದೆ. ‘ಭಾರದ್ವಾಜ ಸಂಹಿತೆ’ಯ “ಕದಲೀವನ ಮಹಾತ್ಮೆ”ಯಲ್ಲಿ ಉಲ್ಲೇಖಿತವಾಗಿರುವಂತೆ ಮೂಲತಃ ಕದ್ರಿಗೆ ‘ಸಿದ್ಧಾಶ್ರಮ’ ಎಂಬ ಹೆಸರಿತ್ತು. ಭಾರದ್ವಾಜ ಮುನಿಗಳು ಆಶ್ರಮ ಕಟ್ಟಿಕೊಂಡು, ಗುರುಕುಲ ನಡೆಸಿಕೊಂಡು ಬರುತ್ತಿದ್ದುದರಿಂದ ಆ ಪ್ರದೇಶವನ್ನು ‘ಸಿದ್ಧಾಶ್ರಮ’ವೆಂಬುದಾಗಿ ಕರೆಯುತ್ತಿದ್ದರೆಮದು ಹೇಳಲಾಗುತ್ತದೆ. (‘ಜನವಾಹಿನಿ’; ೧೩.೧.೯೯; ವಿಶೇಷ ಪುರವಣಿ) ಸಿದ್ಧರ ಆಶ್ರಮ ಆರ್ಥಾತ್‌ ನಾಥ ಪಂಥದ ಯೋಗಿಗಳ ಆಶ್ರಮ ಎಂದೂ ಇದನ್ನೂ ಅರ್ಥೈಸಿಕೊಳ್ಳಬಹುದಾಗಿದೆ. ನಾಥ ಪಂಥವನ್ನು ‘ಸಿದ್ಧಮತ’; ‘ಸಿದ್ಧವರ್ಗ’ ಇತ್ಯಾದಿಯಾಗಿ ಕರೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.[1] ತುಳು ಭಾಷೆಯಲ್ಲಿ ‘ಮುಗುರು’ ಎಂದರೆ ಮೊಗ್ಗು ಎಂಬ ಅರ್ಥವಿದೆ. ಇಲ್ಲಿ ಸಂಸ್ಕೃತದ ‘ಮುಕುಲ’ವೇ ಮುಗುರು ಆಗಿರಬಹುದಾದ ಸಾಧ್ಯತೆ ಇದೆ. ಇದು ಹೌದೆಂದಾದಲ್ಲಿ ಗೋವಿಂದ ಪೈ ಅವರ ವಾದಕ್ಕೆ ಅಪವಾದವಿದೆ ಎಂದ ಹಾಗಾಯಿತು.