೬-೧೨-೧೯೫೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ಸಜೀಪಾ ಎಂಬಲ್ಲಿ ಗೋಪಾಲನಾಥ್‌ ಜನಿಸಿದರು. ಇದರ ಮೂಲಸ್ಥರಾದ ಹಿರಿಯರು ಕದ್ರಿಯವರಾದ್ದರಿಂದ ಇವರ ಹೆಸರಿನೊಂದಿಗೆ ಸೇರಿ ಕದ್ರಿ ಉಳಿದು ಬಂದಿದೆ. ಇವರ ಮನೆತನದ ಎಲ್ಲರೂ ನಾಗಸ್ವರ ವಿದ್ವಾಂಸರೇ. ಸೋದರ ಮಾವ ಸ್ಯಾಕ್ಸೋಫೋನ್‌ನುಡಿಸುವುದನ್ನು ಕೇಳಿ ಆಕರ್ಷಿತರಾದ ಕದ್ರಿ ಅವರಿಂದಲೇ ಸಂಗೀತದ ಓಂಕಾರ ಆರಂಭಿಸಿದರು. ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಗಾಯನದ ಶಿಕ್ಷಣ ಪಡೆದುದನ್ನು ಸ್ಯಾಕ್ಸೋಫೋನ್‌ನಲ್ಲಿ ನುಡಿಸಿ ಅಭ್ಯಾಸ ಮಾಡುತ್ತಿದ್ದರು. ಹೀಗೆ ಸಾಧಿಸುತ್ತಿದ್ದ ಕದ್ರಿ ಮುಂದೆ ಮದರಾಸಿನಲ್ಲಿ ಟಿ.ವಿ. ಗೋಪಾಲಕೃಷ್ಣನ್‌ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಕರ್ನಾಟಕ ಹಿಂದೂಸ್ಥಾನಿ ಸಂಗೀತ ಪದ್ಧತಿಗಳೆರಡನ್ನೂ ಅಭ್ಯಾಸ ಮಾಡಿದರು. ತಮ್ಮ ವಾದ್ಯದಲ್ಲಿ ಪ್ರಯೋಗ ಮುಂದುವರೆಸಿ ಪ್ರಾವೀಣ್ಯತೆ ಪಡೆದರು.

ಕರ್ನಾಟಕ ಶೈಲಿಯ ಗಮಕ ಜಾರುಸ್ವರಗಳು ಸುಲಭವಾಗಿ ಮೂಡುವಂತೆ ಉಪಕರಣದಲ್ಲಿ ಪ್ರಾಯೋಗಿಕ ಬದಲಾವಣೆಗಳನ್ನು ಆಳವಡಿಸಿದರು. ಭಾರತ ಹಾಗೂ ಪಾಶ್ಚಾತ್ಯ ವಾದ್ಯಗಳನ್ನು ಸೇರಿಸಿ ದಕ್ಷಿಣಾವಿಯರಾಗದಲ್ಲಿ ಪಲ್ಲವಿ ಸಂಯೋಜಿಸಿ ‘ಕರ್ನಾಟಕ ಜಾಜ್‌’ ಎಂಬ ಕಾರ್ಯಕ್ರಮಗಳನ್ನು ವಿದೇಶಗಳಲ್ಲಿ ನೀಡಿದರು. ದೇಶದ-ಹೊರ ದೇಶಗಳ ಎಲ್ಲಾ ಪ್ರಮುಖ ಕೇಂದ್ರಗಳಲ್ಲೂ, ನಗರಗಳಲ್ಲೂ ಅಸಂಖ್ಯಾತ ಕಛೇರಿಗಳನ್ನು, ಪ್ರಾತ್ಯಕ್ಷಿಕೆಗಳನ್ನು ಸಂಗೀತ ಕಾರ್ಯಗಾರಗಳನ್ನೂ ನಡೆಸಿರುವ ಕೀರ್ತಿ ಇವರದು.

ಅನೇಕಾನೇಕ ಸ್ವದೇಶಿ, ವಿದೇಶಿ ಶಿಷ್ಯರಿಗೆ ತರಬೇತಿ ನೀಡುತ್ತಿರುವ ಕದ್ರಿ ಸ್ಯಾಕ್ಸೋ ಫೋನ್‌  ಕಲಾವಿದನ ಬದುಕನ್ನು ಆಧರಿಸಿ ತೆಗೆದ ಚಿತ್ರದಲ್ಲಿ ಸಂಪೂರ್ಣ ತಾವೇ ವಾದ್ಯ ನುಡಿಸಿದ್ದರು. ಈ ಚಿತ್ರದ ಹಾಡುಗಳು ಬಹು ಜನಪ್ರಿಯವಾದುವು. ಇವರ ಪ್ರತಿ ಕಛೇರಿಗೂ ಉತ್ತಮ ವಿಮರ್ಶೆ ಪ್ರತಿಕ್ರಿಯೆಗಳು ದೊರೆತು ಒಂದು ವಿದೇಶಿ ವಾದ್ಯ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಭದ್ರಸ್ಥಾನ ಪಡೆಯಲು ಸಾಧ್ಯವಾಯಿತು.

ಭಿನ್ನ ಪ್ರಯೋಗಗಳಲ್ಲಿ ನಿರತರಾಗಿರುವ ಕದ್ರಿ ಕಂಚಿ ಹಾಗೂ ಶೃಂಗೇರಿ ಶಂಕರಾಚಾರ್ಯ ಸಂಸ್ಥಾನಗಳ ಆಸ್ಥಾನ ವಿದ್ವಾಂಸರು. ಎಲ್ಲೆಡೆಯೂ ಪ್ರತಿಷ್ಠಿತ ಸಭೆ-ಸಂಸ್ಥೆ-ಸಂಘಗಳಿಂದ ಅಸಂಖ್ಯ ಪ್ರಶಸ್ತಿ ಗೌರವ ಸನ್ಮಾನಗಳನ್ನು ಸಂಪಾದಿಸಿರುವ ಶ್ರೀಯುತರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ‘ಪದ್ಮ’ ಪುರಸ್ಕಾರಗಳನ್ನೂ ಪಡೆದಿದ್ದಾರೆ.