ಸಾಮಾನ್ಯವಾಗಿ ಎಲ್ಲಾ ಕ್ಷೇತ್ರ – ದೇವಾಲಯಗಳ ಬಗೆಗೂ ಅವುಗಳದ್ದೇ ಆದ ಜಾನಪದ ಹುಟ್ಟಿಕೊಂಡಿರುತ್ತದೆ. ಅಂಥ ಜಾನಪದವು ಐತಿಹ್ಯ – ಪುರಾಣ, ಆಚರಣೆ, ನಂಬಿಕೆ – ನಿಷೇಧಗಳ ರೂಪದಲ್ಲಿರುತ್ತದೆ. ಕದ್ರಿಗೆ ಸಂಬಂಧಿಸಿದಂತೆಯೂ ಈ ರೀತಿಯ ಹತ್ತು ಹಲವು ಜಾನಪದ ಸಂಗತಿಗಳು ಪ್ರಚಲಿತವಿವೆ. ಅವುಗಳ ಹರಹು ಪುರಾಣ ಪುರುಷ ಪರಶುರಾಮನಿಂದ ಹಿಡಿದು ದೀಪ ಹಚ್ಚುವ ಆಳಿನ ವರೆಗೂ ವ್ಯಾಪಿಸಿದೆ.

ಕದ್ರಿಯೂ ಸೇರಿದಂತೆ ಈ ಕರಾವಳಿ ಭೂಪ್ರದೇಶವು ಪರಶುರಾಮ ಸೃಷ್ಟಿಯ ಪ್ರದೇಶವೆಂಬ ಐತಿಹ್ಯವು ಜನಜನಿತವಾಗಿದೆ. ಕದ್ರಿಗೇ ವಿಶಿಷ್ಟವಾಗಿ ಪರಶುರಾಮ ಸೃಷ್ಟಿಯ ಐತಿಹ್ಯ ಪ್ರಚಲಿತವಿರುವುದನ್ನು ನಾವು ಕಾಣುತ್ತೇವೆ. ಅಲ್ಲಿನ ಜೋಗಿ ಮಠದ ಎದುರುಗಡೆಯ ಬಯಲಿನಲ್ಲಿ “ಪರಶುರಾಮನ ಕಟ್ಟೆ” ಎಂದು ಕರೆಯಲಾಗುವ ಕಟ್ಟೆಯೊಂದಿದೆ. ಅಲ್ಲಿ ನಿಂತು ಪರಶುರಾಮನು ತನ್ನ ಬೆರಳ ಸಂಕೇತ ಮಾತ್ರದಿಂದ ಸಾಗರವನ್ನು ಹಿಂದಕ್ಕೆ ಸರಿಸಿದನೆಂದು ಹೇಳಲಾಗುತ್ತದೆ. ಅದರ ನೆನಪಿಗೆಂಬಂತೆ ಈಗಲೂ ‘ರಾಜರು’ (ಮಠಾಧಿಪತಿಗಳು) ವರ್ಷಕ್ಕೊಮ್ಮೆ ಬ್ಯಾಂಡು – ವಾಲಗದೊಂದಿಗೆ ಸಮುದ್ರಪೂಜೆಗೆ ಹೋಗುವ ಪರಿಪಾಠವಿದೆ.

ಕದ್ರಿ ಗುಡ್ಡದಲ್ಲಿರುವ ಜೋಗಿಮಠದ (ಪೀಠದ) ಮೊದಲ ಗುರು ಪರಶುರಾಮನೆಂಬ ನಂಬಿಕೆ ಅಲ್ಲಿನ ಮಠಾಧಿಪತಿಗಳಲ್ಲಿದೆ. ಆತನು ಅಲ್ಲಿ ೧೨ ವರ್ಷಗಳ ಕಾಲ ಯೋಗವನ್ನಾಚರಿಸಿದನೆಂದು ಹೇಳಲಾಗುತ್ತದೆ. ಅವರ ನಂಬಿಕೆಯ ಪ್ರಕಾರ ಅವನು ಸ್ಥಾಪಿಸಿದ ಯಜ್ಞಕುಂಡವನ್ನೇ ಇಂದು ‘ಪರಶುರಾಮ ಧುನಿ’ ಎಂದು ಕರೆಯಲಾಗುತ್ತದೆ. ಹನ್ನೆರಡು ವರ್ಷಗಳಿಗೊಮ್ಮೆ ನಾಥ ಪಂಥದ ಮಠಗಳಿಗೆ ನೂತನ ಸನ್ಯಾಸಿ (ಮಠಾಧಿಪತಿ)ಗಳನ್ನು ನೇಮಿಸುವ ವಿಶಿಷ್ಟ ಕಾರ್ಯಕ್ರಮವೊಂದು ನಡೆಯುತ್ತದೆ. ನೂರಾರು ಸಾಧು – ಸಂತರಿಂದೊಡಗೂಡಿದ ‘ಝಂಡಿ’ ಎಂದು ಕರೆಯಲಾಗುವ ಕೂಟವೊಂದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ತ್ಯ್ರಂಬಕೇಶ್ವರದಿಂದ ಹೊರಡುತ್ತದೆ. ಆ ‘ಝಂಡಿ’ಯು ಕದ್ರಿಗೂ ಬಂದು ಮಠಾಧಿಪತಿಗಳನ್ನು ನೇಮಿಸಿ ಹೋಗುತ್ತದೆ. ಇದರ ಪ್ರವರ್ತಕನು ಪರಶುರಾಮನಾದುದರಿಂದ ಇದನ್ನು ‘ಪರಶುರಾಮ ಝಂಡಿ’ಯೆಂದು ಕರೆಯಲಾಗುತ್ತದೆಂಬುದು ಅಲ್ಲಿನ ಮಠದ ಯೋಗಿಗಳ ಅಭಿಮತ. ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ಪರಶುರಾಮನಿಗೂ ಕದ್ರಿಯ ಜೋಗಿಮಠಕ್ಕೂ ಸಂಬಂಧ ಕಲ್ಪಿಸುವ ಪ್ರವೃತ್ತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.

ಕದ್ರಿಗುಡ್ಡದಲ್ಲಿ ಜೋಗಿಮಠವಿದ್ದರೆ ಕೆಳಗಡೆ ಮಂಜುನಾಥ ದೇವಾಲಯವಿದೆ. ಆ ದೇವಾಲಯದ ಎದುರುಗಡೆ ಸುಮಾರು ೩೫ ಅಡಿ ಎತ್ತರದ ಅದ್ಭುತವಾದ ಲೋಹ ನಿರ್ಮಿತ ದೀಪ ಸ್ತಂಭವೊಂದಿದೆ. ಅದರಲ್ಲಿ ಮೇಲಿಂದ ಕೆಳಗಿನ ತನಕ ಸಾಲು ಸಾಲಾಗಿ ದೀಪಗಳನ್ನು ಬೆಳಗಿಸಬಹುದಾಗಿದೆ. ಇದರ ಬಗ್ಗೆ ಐತಿಹ್ಯವೊಂದು ಪ್ರಚಲಿತವಿದೆ. ಹಿಂದೆ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭದಲ್ಲೊಮ್ಮೆ ಅದಕ್ಕೆ ಎಣ್ಣೆಹಾಕಿ ಬತ್ತಿ ಜೋಡಿಸಿದ ಕೆಲಸಗಾರನು ಮೇಲಿನಿಂದ ಹಚ್ಚಿಕೊಂಡು ಇಳಿಯುವುದರ ಬದಲು ಕೆಳಗಿನಿಂದ ದೀಪ ಹಚ್ಚುತ್ತಾ ಮೇಲೇರಿದನಂತೆ. ಕೊನೆಗೆ ಅಡಿಭಾಗದ ದೀಪದ ಕುಡಿಗಳ ಕಾವನ್ನು ತಾಳಲಾರದೆ ಅಲ್ಲಿನ ತೀರ್ಥ ಕುಂಡವೊಂದಕ್ಕೆ ಹಾರಿ, ಅಲ್ಲೇ ಕಲ್ಲಾಗಿ ಹೋದನಂತೆ. ಇದನ್ನು ಅರಿತವರು ಅರ್ಥಾತ್‌ ಈ ಐತಿಹ್ಯದ ಬಗ್ಗೆ ನಂಬಿಕೆಯುಳ್ಳವರು ಇಂದಿಗೂ ಆ ಕುಂಡದಲ್ಲಿ ಸ್ನಾನ ಮಾಡುವುದಿಲ್ಲ.

ಮಂಜುನಾಥ ದೇವಾಲಯದ ಲಿಂಗ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆಯೂ ಐತಿಹ್ಯವೊಂದನ್ನು ಹೇಳಲಾಗುತ್ತದೆ. ನಾಥಪಂಥದ ಪ್ರವರ್ತಕ ಶ್ರೇಷ್ಠನಾದ ಮತ್ಸ್ಯೇಂದೆರನಾಥನು ಅಲ್ಲಿ ಮಂಜುನಾಥನನ್ನು ಪ್ರತಿಷ್ಠಾಪಿಸಬೇಕೆಂದು ಲಿಂಗವನ್ನು ತರಲು ತನ್ನ ಶಿಷ್ಯರನ್ನು ಕಾಶೀ ಕ್ಷೇತ್ರಕ್ಕೆ ಕಳುಹಿಸಿಕೊಟ್ಟನಂತೆ. ಆದರೆ ಅದೇ ವೇಳೆಗೆ ಶಿವನು ಆತನಿಗೆ ಕನಸಿನಲ್ಲಿ ‘ಕಾಣಿಸಿಕೊಂಡು ನಾನು ಕದಲಿಯ ರಸ ರೂಪದಲ್ಲಿ ಲಿಂಗಸ್ವರೂಪಿಯಾಗಿದ್ದೇನೆ; ಪ್ರತಿಷ್ಠಾಪಿಸಿ ಆರಾಧಿಸು’ ಎಂದು ಸೂಚಿಸಿದನಂತೆ. ಅದೇ ರೀತಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತಂತೆ. ಶಿಷ್ಯರು ಕಾಶಿಯಿಂದ ತಂದ ಲಿಂಗವನ್ನು ನವತಟಾಕಗಳ ಪೈಕಿ ಒಂದರಲ್ಲಿ ನೆಲೆಗೊಳಿಸಿದರಮತೆ. ಅದನ್ನೇ ಕಾಲಾಂತರದಲ್ಲಿ ಅಣ್ಣಪ್ಪ (ದೈವ)ನು ವಾದಿರಾಜರ ಪ್ರೇರಣೆಯಂತೆ ಧರ್ಮಸ್ಥಳಕ್ಕೆ ಕೊಂಡೊಯ್ದನೆಂದು ಇನ್ನೊಂದು ಸ್ಥಳಪುರಾಣ ವಿವರಿಸುತ್ತದೆ.

ಕದ್ರಿಯ ಶಿವಲಿಂಗಕ್ಕೆ ‘ಮಂಜುನಾಥ’ ಎಂಬ ಹೆಸರು ಬಂದುದಕ್ಕೆ ಸ್ಥಳೀಯ ಜನಪದರು ಬೇರೆಯದೆ ಆದ ವಿವರಣೆಯನ್ನು ಕೊಡುತ್ತಾರೆ. ಹಿಂದೆ ಇಲ್ಲಿ ‘ಮಂಜು’ ಎಂಬ ಜೋಗಿ (ಸನ್ಯಾಸಿ)ಯೊಬ್ಬನಿದ್ದ. ಅವನು ಅಸುನೀಗಿದಾಗ ಅಲ್ಲೇ ಆತನನ್ನು ಸಮಾಧಿ ಮಾಡಲಾಯಿತು. ನಂತರದಲ್ಲಿ ಅದೇ ಸಮಾಧಿಯನ್ನು ಮಂಜುನಾಥ ದೇವರಾಗಿ ಆರಾಧಿಸಲಾಯಿತು. ಕಾಲಕ್ರಮದಲ್ಲಿ ಅಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಲಾಯಿತು. ಇತ್ಯಾದಿ ವಿವರಗಳನ್ನು ಅವರು ನೀಡುತ್ತಾರೆ. ಮತ್ಸ್ಯೇಂದ್ರನಾಥನೆಂಬ ನಾಥಪಂಥದ ಯೋಗಿ ಶ್ರೇಷ್ಠನ ಹೆಸರೇ ಜನಪದರ ಬಾಯಲ್ಲಿ ಮಚ್ಚೇಂದ್ರನಾಥ (ಮಚ್ಚೀಂದ್ರ ನಾಥ) ಎಂದಾಗಿ ಕಾಲಕ್ರಮದಲ್ಲಿ ‘ಮಂಜಿನಾಥ’ (ಮಂಜುನಾಥ) ರೂಪವನ್ನು ಪಡೆದಿರಬೇಕೆಂಬ ಕೆಲವು ವಿದ್ವಾಂಸರ ಅಭಿಪ್ರಾಯಕ್ಕೂ ಸ್ಥಳೀಯ ಜನಪದರು ನೀಡುವ ವಿವರಣೆಗೂ ಒಂದು ರೀತಿಯ ಸಂಬಂಧವಿದೆಯೆಂದು ತೋರುತ್ತದೆ. ಆದರೆ ಗೋವಿಂದ ಪೈಗಳಂತಹ ಹಿರಿಯ ಸಂಶೋಧಕರು ಬೋಧಿಸತ್ವನಾದ ಮಂಜುಶ್ರೀ ಅಥವಾ ಮಂಜು ಘೋಷನಿಂದಲಾಗಿ ಕದ್ರಿಯ ಶಿವಲಿಂಗಕ್ಕೆ ‘ಮಂಜುನಾಥ’ ಎಂಬ ಹೆಸರು ಬಂದಿದೆಯೆಂಬ ಚರ್ಚೆಯನ್ನು ಮುಂದಿಡುತ್ತಾರೆ

[1] (ಗೋ.ಸಂ.ಸಂ.ಪು. ೬೬೩)

ಬಹುತೇಕ ಧಾರ್ಮಿಕ ಕ್ಷೇತ್ರ ಅಥವಾ ದೇವಾಲಯಗಳಿಗೆ ಸಂಬಂಧಿಸಿದಂತೆ ಅವುಗಳದ್ದೇ ಆದ ವಿಶಿಷ್ಟ ಸ್ಥಳ ಪುರಾಣಗಳೂ ಹುಟ್ಟಿಕೊಂಡಿರುತ್ತವೆ. ಇಂತಹ ಸ್ಥಳಪುರಾಣಗಳನ್ನು ಜಾನಪದದೊಳಗಡೆ ಸಮಾವೇಶಗೊಳಿಸುವ ಬಗೆಗೆ ಗೊಂದಲವಿದೆಯಾದರೂ ಅಭಿಜಾತ ಸಾಹಿತ್ಯ ಅಲ್ಲವೆಂಬ ಕಾರಣಕ್ಕಾಗಿ ಅವುಗಳನ್ನಿಲ್ಲಿ ಪ್ರಸ್ತಾಪಿಸಬಹುದಾಗಿದೆ[2]’. ಕದ್ರಿಗೆ ಸಂಬಂಧಿಸಿದಂತೆಯೂ ಈ ಬಗೆಯ ಸ್ಥಳಪುರಾಣ ಪ್ರಚಲಿತವಿದೆ. ಅದನ್ನು ಸ್ಥಳ ಮಹಾತ್ಮೆ, ಕ್ಷೇತ್ರಮಹಾತ್ಮೆ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ. “ಭಾರದ್ವಾಜ ಸಂಹಿತೆ”, “ಗೋರಕ್ಷಪದ್ಧತಿ” ಗಳಂತಹ ಸಂಸ್ಕೃತ ಗ್ರಂಥಗಳಲ್ಲಿ ಕದ್ರಿಗೆ ಸಂಬಂಧಿಸಿದ ಸ್ಥಳಪುರಾಣಗಳು ಸೇರ್ಪಡೆಯಾಗಿವೆ. ಇಲ್ಲಿಯ ಸ್ಥಳಪುರಾಣವನ್ನಾಧರಿಸಿ “ಕದ್ರಿಕ್ಷೇತ್ರ ಮಹಾತ್ಮೆ”ಯೆಂಬ ಯಕ್ಷಗಾನ ಪ್ರಸಂಗವೂ ರಚನೆಯಾಗಿ ಪ್ರದರ್ಶನಗೊಳ್ಳುತ್ತಿದೆ [3].

ಸ್ವತಃ ಕದ್ರಿಯ ಸ್ಥಳಪುರಾಣದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳ ಪುರಾಣಗಳಲ್ಲೂ ಕದ್ರಿಯ ಉಲ್ಲೇಖ ಬರುತ್ತದೆ. ಅಂತಹ ಉಲ್ಲೇಖವೊಂದನ್ನು ಎಂ. ಗೋವಿಂದ ಪೈ ಅವರು ತಮ್ಮ “ಕದಿರೆಯ ಮಂಜುನಾಥ” ಎಂಬ ಲೇಖನದಲ್ಲಿ ಕೊಡುತ್ತಾರೆ. (ಗೋ. ಸಂ.ಸಂ.ಪು ೬೫೯) ಅದರಂತೆ ತುಳು ನಾಡಿನ ಮಂಜೇಶ್ವರದ ಸ್ಥಳಪುರಾಣವಾದ “ಮಂಜುಳ ಕ್ಷೇತ್ರ ಮಹಾತ್ಮ್ಯ” (ಸಂಸ್ಕೃತ)ದ ೧ನೆಯ ಮತ್ತು ಮೂರನೆಯ ಅಧ್ಯಾಯಗಳಲ್ಲಿ ವಿರೂಪಾಕ್ಷನೆಂಬ ದಾಕ್ಷಿಣಾತ್ಯ ಸಾರಸ್ವತ ಬ್ರಾಹ್ಮಣನೊಬ್ಬನು ಗೋವೆಯಿಂದ ಹೊರಟು ದಕ್ಷಿಣಾಭಿಮುಖವಾಗಿ ತೀರ್ಥಾಟನೆ ನಡೆಸುವ ವಿವರಣೆ ಬರುತ್ತದೆ. ಆತನು ರಾಮೇಶ್ವರಕ್ಕೆ ಹೋಗುತ್ತಿದ್ದ ದಾರಿಯಲ್ಲಿ ಕದಿರೆಗೆ ಹೋಗಿ, ಕದಿಳೀವನ ನಾಯಕನಾದ ಶಂಕರ ಅಥವಾ ಮಂಜುನಾಥನನ್ನು ಪೂಜಿಸಿ, ಅಲ್ಲಿಂದ ಮಂಗಳೂರಿನ ನೇತ್ರಾವತಿ ನದೀ ತೀರಕ್ಕೆ ಹೋದುದಾಗಿ ಅಲ್ಲಿ ವಿವರಿಸಲಾಗಿದೆ.[1] ತತ್ಸಂಬಧವಾದ ಚರ್ಚೆಯನ್ನು ಬೇರೆಡೆಯಲ್ಲಿ ಉಲ್ಲೇಖಿಸಲಾಗಿದೆ.

[2] ಸ್ಥಳಪುರಾಣಗಳಲ್ಲಿ ಕೆಲವು ಸಂಸ್ಕೃತ ಭಾಷೆಯಲ್ಲಿದ್ದು ಗ್ರಂಥಸ್ಥವಾಗಿರುವುದರಿಂದಲೂ, ‘ಶಿಷ್ಟ’ ಎನ್ನಬಹುದಾದ ಎಂಬ ಅಂಶಗಳು ಅಲ್ಲಿ ಸಾಕಷ್ಟಿರುವುದರಿಂದಲೂ ಅವುಗಳನ್ನು ಜಾನಪದದೊಳಗಡೆ ಸೇರಿಸುವ ಬಗೆಗೆ ಗೊಂದಲ ಉಂಟಾಗುತ್ತದೆ. ಆದರೂ ಒಂದು ಹಂತದಲ್ಲಿ ಬಾಯ್ದೆರೆಯಲ್ಲಿಯೇ ಹುಟ್ಟಿ, ಪ್ರಚಲಿತವಿದ್ದು, ಕಾಲಾನಂತರದಲ್ಲಿ ಅವು ‘ಶಿಷ್ಟ’ರಿಂದ ಪರಿಷ್ಕೃತಗೊಂಡು, ‘ಸಂಸ್ಕೃತಿಕರಣ’ಗೊಂಡು ಬೆಳಿದರಿಬಹುದಾದ ಸಾಧ್ಯತೆಯಿದೆ ಎಂಬದನ್ನು ನಾವು ತಳ್ಳಿಹಾಕುವಂತಿಲ್ಲ.

[3] ಹೆಚ್ಚು ಕಡಿಮೆ ತುಳುನಾಡಿನ ಎಲ್ಲಾ ಕ್ಷೇತ್ರ – ದೇವಾಲಯಗಳ ಸ್ಥಳಪುರಾಣಗಳೂ ಇಂದು ಯಕ್ಷಗಾನ ಪ್ರಸಂಗಗಳಾಗಿ ಪ್ರದರ್ಶನಗೊಳ್ಳುತ್ತಿವೆ. ಕೆಲವು ತುಳುನಾಡೇತರ ಪ್ರದೇಶಗಳ ಕ್ಷೇತ್ರ ಮಹಾತ್ಮೆಗಳೂ ಯಕ್ಷಗಾನ ಪ್ರಸಂಗಗಳಾದುದುಂಟು. ಉದಾ. ‘ತಿರುಪತಿ ಕ್ಷೇತ್ರ ಮಹಾತ್ಮೆ.’