ಭಾರತದ ವಿವಿಧೆಡೆಗಳಲ್ಲಿ ನಾಥ ಪಂಥೀಯ ಮಠಗಳಿವೆ. ಅವುಗಳಿಗೆ ಸಂಬಂಧಿಸಿದ ‘ಬಾರಹ್‌ ಪಂಥ್‌’ ಯೋಗಿ ಮಹಾಸಭಾದ ಪ್ರಮುಖ ಕಾರ್ಯಾಲಯವು ಹರಿದ್ವಾರದಲ್ಲಿದೆ. ಪ್ರತಿ ೧೨ ವರ್ಷಗಳಿಗೊಮ್ಮೆ ಆ ಮಠಗಳಿಗೆ ನೂತನ ಸನ್ಯಾಸಿಗಳನ್ನು ನಿಯುಕ್ತಿಗೊಳಿಸುವ ವಿಶಿಷ್ಟ ಕಾರ್ಯಕ್ರಮವೊಂದು ನಡೆಯುತ್ತದೆ. ನೂರಾರು ಸಾಧುಸಂತರಿಂದೊಡಗೂಡಿದ “ಝಂಡಿ” ಎಂದು ಕರೆಯಲಾಗುವ ಕೂಟವೊಂದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ತ್ಯ್ರಂಬಕೇಶ್ವರದಿಂದ ಹೊರಡುತ್ತದೆ. ಗುರುವು ಸಿಂಹರಾಶಿಯನ್ನು ಪ್ರವೇಶಿಸುವಾಗ ತ್ಯ್ರಂಬಕೇಶ್ವರದ್ಲಿ ‘ಕುಂಭಮೇಳವು ನಡೆಯುತ್ತದೆ.

[1] ಆಗ ನಾಥ ಪಂಥದ ಸತ್ಯನಾಥಿ, ರಾಮನಾಥಿ, ಧರ್ಮನಾಥಿ, ಪಾವನಾಥಿ, ಪಾಗಲನಾಥಿ, ರಾವಲನಾಥಿ, ಕಪಲಾನಿ, ಗಂಗಾನಾಥಿ, ನಟೇಶ್ವರಿ, ಆಯಿಪಂಥಿ, ಬೈರಾಗಿ, ಮನ್ನಾಥಿ ಎಂಬ ಹನ್ನೆರಡು ಕವಲುಗಳಿಗೆ ಸೇರಿದ ‘ಬಾರಹಪಂಥಿ’ ಸಾಧುಗಳು – ಅವಧೂತ ಯೋಗಿಗಳು ಅಲ್ಲಿ ಒಗ್ಗೂಡುತ್ತಾರೆ. ಕುಂಭಮೇಳವು ಮುಗಿದು ನಾಗಪಂಚಮಿಯು ಕಾಲಿಟ್ಟೊಡನೆ ಝಂಡಿಯು ತನ್ನ ಪಾದಯಾತ್ರೆಯನ್ನು ಪ್ರಾರಂಭಿಸುತ್ತದೆ. ಆ ಝಂಡಿಯ ಪ್ರವರ್ತಕನು ಪರಶುರಾಮನೆಂಬ ನಂಬಿಕೆ ನಾಥಯೋಗಿಗಳಲ್ಲಿದೆ. ಆದುದರಿಂದ ಅದನ್ನು ‘ಪರಶುರಾಮ ಝಂಡಿ’ ಯೆಂದು ಕರೆಯುತ್ತಾರೆ.

ಕದ್ರಿ ಮಠವನ್ನು ತಲುಪಲು ಆ ಝಂಡಿಯು ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಒಟ್ಟು ೧೧೬೦ ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸುತ್ತದೆ. ಮೊದಲೇ ನಿಶ್ಚಿತವಾದ ಊರುಗಳಲ್ಲಿ ಮೊಕ್ಕಾಂ ಹೂಡುತ್ತಾ ಅದು ತನ್ನ ಪಾದಯಾತ್ರೆಯನ್ನು ಮುಂದುವರಿಸುತ್ತದೆ. ತಮ್ಮ ಮಠಗಳು ಸಿಕ್ಕಿದಾಗ ಝಂಡಿಯು ಅಲ್ಲಿಗೆ ಹೊಸ ಸ್ವಾಮಿಗಳನ್ನು (ಪೀಠಾಧಿಪತಿಗಳನ್ನು) ನೇಮಿಸಿ, ಅಧಿಕಾರ ಪತ್ರವನ್ನು ಕೊಟ್ಟು ಹಳೆಯ ಪೀಠಾಧಿಪತಿಗಳನ್ನು ತನ್ನಕೂಟಕ್ಕೆ ಕೂಡಿಸಿಕೊಳ್ಳುತ್ತದೆ. ಬಹಳ ಸಮರ್ಥರಿದ್ದರೆ ಅವರನ್ನೇ ಪುನರ್ ನೇಮಕ ಮಾಡುತ್ತದೆ. ಪೀಠಾಧಿಪತಿಗಳಾಗುವವರು ಪಾತ್ರದೇವತೆಯನ್ನು ಕೈಯಲ್ಲಿ ಹಿಡಿದಿರುತ್ತಾರೆ. ಅವರು ಎಲ್ಲಿಯೂ ಅದನ್ನು ನೆಲದ ಮೇಲಿಡದೆ ಬರಿಗಾಲಲ್ಲಿ ಸಾಗಬೇಕು. ಕಾಲಿಗೆ ಮುಳ್ಳು ಚುಚ್ಚಿದರೆ ಬೇರೋಬ್ಬರು ಬಂದು ತೆಗೆಯಬೇಕು. ಮಠಗಳಿರುವಲ್ಲಿ ಮೂರು ನಾಲ್ಕು ದಿನ ನಿಲ್ಲುತ್ತಾ, ಮಠಗಳಿಲ್ಲದೆಡೆಗಳಲ್ಲಿ ಏಕರಾತ್ರಿ ಮಾತ್ರ ತಂಗುತ್ತಾ ೯೦ ಠಿಕಾಣಿಗಳನ್ನು ದಾಟಿ ಒಟ್ಟು ಏಳು ತಿಂಗಳು ಪ್ರಯಾಣ ಮಾಡಿ ಝಂಡಿಯು ಕದ್ರಿಯನ್ನು ಬಂದು ತಲುಪುತ್ತದೆ. ಝಂಡಿಯು ತಂಗುವೆಡೆಗಳಲ್ಲಿ ಅದರ ಸದಸ್ಯರ ಅನ್ನಪಾನಾದಿಗಳಿಗೆ ಭಕ್ತರು ಸಹಾಯ ಮಾಡುತ್ತಾರೆ. ಅನ್ಯರು ಅಟ್ಟುದನ್ನು ಸಂತರು ಉಣ್ಣುವುದಿಲ್ಲ. ಒಣಜೀನಸು (ಕಚ್ಚಾ ಪದಾರ್ಥ)ಗಳನ್ನು ಪಡೆದುಕೊಂಡು ತಾವೇ ಬೇಕಾದ್ದನ್ನು ಸಿದ್ಧಪಡಿಸಿಕೊಂಡು ಉಣ್ಣುತ್ತಾರೆ. ಝಂಡಿಯ ಮೇಲಸ್ತುವಾರಿಯನ್ನು ಕೊಠಾರಿ, ಕಾರುಭಾರಿ, ಪಂಚರು, ಭಂಡಾರಿಗಳು, ಮಹಂತರು ಮುಂತಾದ ೩೨ ಜನ ಪದಾಧಿಕಾರಿಗಳು ನೋಡಿಕೊಳ್ಳುತ್ತಾರೆ.

ಝಂಡಿಯ ಸದಸ್ಯರು ಗುಂಪು ಬಿಟ್ಟು ಹೋಗಬಾರದು; ಅಮಲು ಪದಾರ್ಥ ಸೇವಿಸಬಾರದು. ಭಂಗಿ ಮಾತ್ರ ಸೇವಿಸಬಹುದು. ಯೋಗಿಯೊಬ್ಬ ನಡುವೆ ಮೃತನಾದರೆ ಮುಂದಿನ ಮಠದ ವರೆಗೆ ಒಯ್ದು ಸಮಾಧಿ ಮಾಡುತ್ತಾರೆ. ಕದ್ರಿಯನ್ನು ತಲುಪುವ ಹೊತ್ತಿಗೆ ೧೭ ಮಠಗಳು ಸಿಗುತ್ತವೆ. ಯಾವ್ಯಾವ ಮಠಕ್ಕೆ ಯಾವ್ಯಾವ ಪಂಗಡದವರು ಪೀಠಾಧಿಪತಿಗಳಾಗಬೇಕೆಂಬ ಬಗ್ಗೆ ನಾಥಪಂಥೀಯರಲ್ಲಿ ಪುರಾತನ ಪದ್ಧತಿಯೊಂದಿದೆ.

ಅದರಂತೆ ದಕ್ಷಿಣಕನ್ನಡದ ವಿಟ್ಲ ಮಠದಲ್ಲಿ ಸತ್ಯನಾಥ ಪಂಥದವರೂ ಹಲವರಿ ಮಠದಲ್ಲಿ ಧರ್ಮನಾಥ ಪಂಥದವರೂ ಪೀಠವೇರುತ್ತಾರೆ. ಕದ್ರಿ ಪೀಠವು ದಕ್ಷಿಣದ ಎಲ್ಲ ಪೀಠಗಳಿಗಿಂತ ಸರ್ವೋನ್ನತವಾದುದೆಂದು ಹೇಳಲಾಗುತ್ತದೆ. ಆದುದರಿಂದಲೇ ಅದನ್ನು ರಾಜಪೀಠವೆನ್ನುತ್ತಾರೆ. ಅದಕ್ಕೆ ಕಪಲಾನಿ, ಗಂಗಾನಾಥಿ, ನಟೇಶ್ವರಿ, ಬಯರಾಗಿ ಈ ಯಾವುದೇ ಪಂಥದವರೂ ಪೀಠಾಧಿಪತಿಗಳಾಗಬಹುದು. ಪ್ರಕೃತ ಅಲ್ಲಿ ಕಪಲಾನಿ ಶಾಖೆಗೆ ಸೇರಿದ ಮೋಹನನಾಥಜೀಯವರು ಪೀಠಾಧಿಪತಿಗಳಾಗಿದ್ದಾರೆ. ಕದ್ರಿ ಮಠದ ಎದುರಿಗಿರುವ ಶಿಲಾಪೀಠದ ಮೇಲೆ ಪೀಠಾಧಿಪತಿಗಳನ್ನು ಕುಳ್ಳಿರಿಸಿ ಬ್ರಾಹ್ಮಣ ತಂತ್ರಿ – ಪುರೋಹಿತರಿಂದ[2] ಅಭಿಷೇಕಪೂರ್ವಕವಾದ ರಾಜಪಟ್ಟಾಭಿಷೇಕವನ್ನು ವೈಭವದಿಂದ ನೆರವೇರಿಸುತ್ತಾರೆ. ಕದ್ರಿಯಲ್ಲಿ ಪಟ್ಟಾಭಿಷೇಕವು ನೆರವೇರಿದ ಮೇಲೆ ಝಂಡಿಯನ್ನು ವಿಸರ್ಜಿಸಲಾಗುತ್ತದೆ. ಭಕ್ತರಿಂದ ಅದುವರೆಗೆ ಲಭಿಸಿದ ಕಾಣಿಕೆಗಳನ್ನು ಅವರಿಗೆಲ್ಲಾ ಹಂಚಿ ಬಿಡುತ್ತಾರೆ. ಆ ಸಾಧುಗಳು ತೀರ್ಥಯಾತ್ರೆ ಮಾಡುತ್ತಾ ತಮತಮಗೆ ತೋರಿದ ಬಗೆಗಳಲ್ಲಿ ತಂತಮ್ಮ ನೆಲೆಗಳನ್ನು ಸೇರಿಕೊಳ್ಳುತ್ತಾರೆ. ಝಂಡಿಯು ಹೊರಟಾಗ ಸುಮಾರು ೬೦೦ ಮಂದಿ ಸಾಧುಗಳಿರುತ್ತಾರೆ. ಸಾಮಾನ್ಯವಾಗಿ ನಾಸಿಕದವರೆಗೆ ಎಲ್ಲರೂ ಬರುತ್ತಾರೆ. ಅಲ್ಲಿಂದ ಮುಂದಕ್ಕೆ ತಮ್ಮ ಕೈಲಾದಷ್ಟು ದೂರ ಬಂದು ಒಂದಷ್ಟು ಜನ ಕಳಚಿಕೊಳ್ಳುತ್ತಾರೆ.

ಇತ್ತೀಚಿಗೆ ೧೯೯೨ರಲ್ಲಿ ಕದ್ರಿಗೆ ಝಂಡಿಯು ಬಂದಿತ್ತು. ಕದ್ರಿಯನ್ನು ತಲುಪುವಾಗ ಅದರಲ್ಲಿ ೩೨೫ ಮಂದಿ ಸಾಧುಗಳಿದ್ದರು. ಕಾಲಭೈರವನ ಉಪಾಸಕರಾದ ಅವರು ಆತನ ವಾಹನವಾದ ಕಪ್ಪುನಾಯಿಯೊಂದನ್ನು ತಮ್ಮೊಡನೆ ಕರೆತಂದಿದ್ದರು. ಮಠಕ್ಕೆ ಪ್ರದಕ್ಷಿಣೆ ಬರುವ ಸಂದರ್ಭದಲ್ಲಿ ಆ ನಾಯಿಯನ್ನು ಪುಷ್ಟಮಾಲಿಕೆಯಿಂದ ಅಲಂಕರಿಸಿ ಮುಂಚೂಣಿಯಲ್ಲಿ ನಡೆಸುತ್ತಿದ್ದರು. ಅಖಿಲ ಭಾರತ ಬಾರಹಪಂಥದ ಪ್ರಮುಖರೂ, ಲೋಕಸಭಾ ಸದಸ್ಯರೂ ಆಗಿದ್ದ ಮಹಂತ ಅವೈದ್ಯನಾಥಜೀಯವರು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಿಂದಿನ ಪೀಠಾಧಿಪತಿಗಳಾಗಿದ್ದ ಸೋಮನಾಥಜೀಯವರಿಂದ ನೂತನ ಪೀಠಾಧಿಪತಿಗಳಾದ ಮೋಹನನಾಥಜೀಯವರು ಪಟ್ಟದ ಕತ್ತಿಯನ್ನು ಸ್ವೀಕರಿಸಿದರು. ವಿಟ್ಲ ಮಠದ ಲಾಲನಾಥಜೀಯವರಿಗೂ ಕದ್ರಿ ಮಠದಲ್ಲಿಯೇ ಪಟ್ಟವಾಯಿತು.

ಈಗಾಗಲೇ ನಾವು ಗಮನಿಸಿರುವಂತೆ ಕದ್ರಿಯ ಜೋಗಿ ಅರಸರು ಉತ್ತರ ಭಾರತದವರಾದ್ದರಿಂದ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ಹಿಂದಿಯಲ್ಲೇ ವ್ಯವಹರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಜನರ ಸಂಪರ್ಕದಿಂದಾಗಿ ಅಲ್ಪಸ್ವಲ್ಪ ಕನ್ನಡ ಕಲಿತಿದ್ದಾರೆ. ಮಠಾಧಿಪತಿಗಳಾಗಲಿ, ಅವರ ಶಿಷ್ಯರಾಗಲಿ ಭಿಕ್ಷಾಟನೆಗೆ ಹೋಗುವುದಿಲ್ಲ. ಪಾದಕಾಣಿಕೆಯಾಗಿ ಬಂದ ಪದಾರ್ಥಗಳಿಂದಲೇ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಅವರು ಶುದ್ಧ ಶಾಖಾಹಾರಿಗಳು. ಅವರೇ ಹೇಳುವ ಪ್ರಕಾರ ಸ್ಥಳೀಯ ‘ಜೋಗಿ’ ಸಮಾಜದವರು ಅವರ ಶಿಷ್ಯರು. ಅವರು ಮಠಕ್ಕೆ ಬಂದು ಶಿಷ್ಯ ದೀಕ್ಷೆ ಪಡೆಯುತ್ತಾರೆ. ನವದಂಪತಿಗಳಾದವರು ಮಠಕ್ಕೆ ಬಂದು ಪಾದಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಸನ್ಯಾಸದೀಕ್ಷೆ ಪಡೆಯಲಿರುವವರು ಮೊದಲು ಮಠಾಧಿಪತಿಗಳ ಶಿಷ್ಯರಾಗಿ ಮಠದಲ್ಲಿರುತ್ತಾರೆ. ಅವರಿಗೆ ಪ್ರಾರಂಭದಲ್ಲೇ ಕರ್ಣಛೇಧನ ಮಾಡಿಸಿ ಅದರೊಳಗೆ ಮಣ್ಣಿನ ಉಂಡೆಯನ್ನು ಕೂರಿಸುತ್ತಾರೆ. ಈ ಧಾರ್ಮಿಕ ವಿಧಿಯನ್ನು ‘ಕನ್‌ ಫಟ್‌’ ಎನ್ನುತ್ತಾರೆ. ಕಿವಿಯ ತೂತು ದೊಡ್ಡದಾಗಿ ಜೋತು ಬಿದ್ದ ಮೇಲೆ ಮಣ್ಣಿನ ಉಂಡೆಯನ್ನು ತೆಗೆದು ಮೃಣ್ಮಯ ಕುಂಡಲವನ್ನು ತೊಡಿಸುತ್ತಾರೆ. ಹೀಗೆ ಮಾಡುವುದರಿಂದ ಕಾಮತೃಷ್ಣೆ ತಗ್ಗುತ್ತದೆ; ಕುಂಡಲಿನಿ ಶಕ್ತಿ ಬೇಗೆ ಜಾಗೃತವಾಗುತ್ತದೆ ಎಂಬ ನಂಬಿಕೆ ಮಠದ ಸಾಧುಗಳಲ್ಲಿರುತ್ತದೆ. ಶಿಷ್ಯರಾದವರು ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ ‘ಸಿಂಗನಾದ’ (ಸಿಂಗಿನಾದ) ಎಂಬ ತುತ್ತೂರಿಯೊಂದನ್ನು ತಮ್ಮ ಕೊರಳಲ್ಲಿ ತೂಗುಹಾಕಿ ಕೊಂಡಿರುತ್ತಾರೆ. ಊಟಕ್ಕೆ ಮೊದಲು ದೇವರನ್ನು ಪ್ರಾರ್ಥಿಸಿ ಅದನ್ನು ಊದುತ್ತಾರೆ.[1] ಇದಕ್ಕೆ ಹಿನ್ನೆಲೆಯಾಗಿ ಪೌರಾಣಿಕ ಸನ್ನಿವೇಶವೊಂದನ್ನು ಹೇಳಲಾಗುತ್ತದೆ. ದೇವ – ದಾನವರು ಅಮೃತಮಥನ ಮಾಡಿ ಪಡೆದ ಅಮೃತವು ರಾಕ್ಷಸರ ಕೈಗೆ ಸಿಗಬಾರದೆಂದು ದೇವತೆಗಳು ಅಮೃತಕುಂಭವನ್ನು ತಾವೇ ಅಪಹರಿಸಿಕೊಂಡು ಓಟಕಿತ್ತರಂತೆ. ರಾಕ್ಷಸರು ಬಿಡದೆ ಅವರನ್ನು ಬೆನ್ನಟ್ಟಿದರಂತೆ. ಆಯಾಸ ಗೊಂಡಾಗ ದೇತೆಗಳು ಆ ಕುಂಭವನ್ನು ಕ್ಷಣಕಾಲ ಅಲ್ಲಲ್ಲಿ ಇರಿಸಿ ದಣಿವಾರಿಸಿಕೊಳ್ಳುತ್ತಿದ್ದರಂತೆ. ರಕ್ಕಸರು ಇನ್ನೇನು ಹಿಡಿದೇಬಿಟ್ಟರು ಎನ್ನುವಾಗ ಮುಂದೆ ಮುಂದೆ ಓಡಿದರಂತೆ. ಹಾಗೆ ಅಮೃತ ಕುಂಭವನ್ನಿರಿಸಿದ ತ್ಯ್ರಂಬಕೇಶ್ವರ, ಪ್ರಯಾಗ, ಉಜ್ಜೈನಿ, ಹರಿದ್ವಾರಗಳು ಪುಣ್ಯಕ್ಷೇತ್ರಗಳೆನಿಸಿ ಅಲ್ಲಿ ‘ಕುಂಭಮೇಳ’ ಎಂಬ ಮಹಾಜಾತ್ರೆ ೧೨ ವರ್ಷಗಳಿಗೊಮ್ಮೆ ನಡೆಯುವಂತಾಯಿತಂತೆ.

[2] ಬ್ರಾಹ್ಮಣ ಪುರೋಹಿತರಿಂದ ಪಟ್ಟಾಭಿಷೇಕವನ್ನು ಮಾಡಿಸುವುದು ಇತ್ತೀಚಿನ ಬೆಳವಣಿಗೆಯಾಗಿರಬೇಕೆಂದು ತೋರುತ್ತದೆ.