ಮ.ಸು. ಕೃಷ್ಣಮೂರ್ತಿಯವರು ಹೇಳುವಂತೆ “ಬೌದ್ಧ ಧರ್ಮದ ತಾಂತ್ರಿಕ ರೂಪವೇ ಸಿದ್ಧ ಮಾರ್ಗ (ವಜ್ರಯಾನ) ವಾದರೆ ಅದರ ಭಗ್ಮಾವೇಶಷಗಳ ಮೇಲೆ ಒಡಮೂಡಿತು ನಾಥಪಂಥ. ಈ ರೀತಿ ನಾಥಪಂಥ ಬೌದ್ಧ ಸಿದ್ಧ ಪರಂಪರೆಯ ಶೈವ ರೂಪಾಂತರ” (ಕೃಷ್ಣಮೂರ್ತಿ ಮ.ಸು.;೧೯೮೨; ಮುನ್ನುಡಿ) ಅಥರ್ವವೇದ ಹಾಗೂ ತೈತ್ತೀರಿಯ ಬ್ರಾಹ್ಮಣದಲ್ಲಿ ‘ನಾಥ’ ಶಬ್ದವು ರಕ್ಷಕ, ಆಶ್ರಯದಾತ ಇತ್ಯಾದಿ ಅರ್ಥಗಳಲ್ಲಿ ಬಳಕೆಗೊಂಡಿದೆ. ಮಹಾಭಾರತದಲ್ಲಿ ಒಡೆಯ, ಪತಿ ಮುಂತಾದ ಅರ್ಥಗಳಲ್ಲಿ ಪ್ರಯೋಗವಾಗಿದೆ. ಬೋಧಿ ಚರ್ಯಾವತಾರದಲ್ಲಿ ಬುದ್ಧನನ್ನು ಕುರಿತು ಈ ಶಬ್ದವನ್ನು ಬಳಸಲಗಿದೆ. ಜೈನರು ಮತ್ತು ವೈಷ್ಣವರಲ್ಲಿ ಕೂಡ ಅತ್ಯಂತ ದೊಡ್ಡ ದೇವರು ಎಂಬರ್ಥದಲ್ಲಿ ಇದು ಬಳಕೆಯಾಗಿದೆ. ‘ಪರವರ್ತೀ’ ಕಾಲದಲ್ಲಿ ಯೋಗ ಪರವಾದ ಪಾಶುಪತ ಶೈವ ಮತವೇ ನಾಥ ಸಂಪ್ರದಾಯವಾಗಿ ರೂಪುಗೊಂಡಿತು. ಆಗ ‘ನಾಥ’ ಶಬ್ದ ‘ಶಿವ’ ಎಂಬ ಅರ್ಥದಲ್ಲಿ ಪ್ರಚಲಿತವಾಯಿತು. ರಾಜಗುಹ್ಯ ಎಂಬ ಗ್ರಂಥದ ವ್ಯಾಖ್ಯೆಯ ಪ್ರಕಾರ ಅನಾದಿ ಪರಶಿವ ವಸ್ತುವಿಗೆ ನಾಥ ಎಂಬುದು ಪರ್ಯಾಯ ನಾಮ. ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಕ್ಷನಾಥನು (ಗೋರಖನಾಥ) ಈ ಪಂಥದ ಪ್ರವರ್ತಕನೆಂದು ಹೇಳಲಾಗುತ್ತದೆ. ಆದರೆ ಆತ ನಾಥಪಂಥದ ಸಂಸ್ಥಾಪಕನಲ್ಲ. ನಾಥ ಸಂಪ್ರದಾಯದ ಯೋಗಿಗಳು ರಸಾಯನವನ್ನು ಹುಡುಕಿ, ಅದರಿಂದ ತಮ್ಮ ಕಾಯವನ್ನು ಅಜರಾಮರಗೊಳಿಸಬಹು ಎಂದು ನಂಬಿದ್ದರು. ನಾಥ ಸಂಪ್ರದಾಯವನ್ನು ಸಿದ್ಧಮತ, ಸಿದ್ಧಮಾರ್ಗ ಯೋಗಮಾರ್ಗ ಅವಧೂತ ಮತ, ಅವಧೂತ ಸಂಪ್ರದಾಯ ಎಂದು ಮುಂತಾಗಿ ಕರೆಯಲಾಗುತ್ತದೆ.

ಕ್ರಿ.ಶ. ೬೦೦ ರಿಂದ ೧೨೦೦ರವರೆಗಿನ ಕಾಲಘಟ್ಟದಲ್ಲಿ ಭಾರತೀಯ ಧಾರ್ಮಿಕ ಸಂಸ್ಕೃತಿಯಲ್ಲಿ ಇದ್ದಕ್ಕಿಂದ್ದಂತೆ ತಾಂತ್ರಿಕ ಸಾಧನೆಗಳು ತಲೆದೋರಿದುವು. ವೈದಿಕ, ಅವೈದಿಕ, ವೈಶ್ಣವ, ಶೈವ, ಬೌದ್ಧ, ಜೈನ ಈ ಎಲ್ಲಾ ಧರ್ಮಗಳೂ ತಾಂತ್ರಿಕ ಸೃಷ್ಟಿ ತತ್ವ, ತಾಂತ್ರಿಕ ದೇವಮಂಡಲ, ತಾಂತ್ರಿಕ ಯಂತ್ರ ವಿಧಾನ, ತಾಂತ್ರಿಕ ಮಂತ್ರ ಸಾಧನೆ, ತಾಂತ್ರಿಕ ಆಚಾರ ವಿಧಾನ ಹಾಗೂ ಹಠಯೋಗೀ ಸಾಧನೆಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆಶ್ರಯ ನೀಡತೊಡಗಿದುವು. ಇವೆಲ್ಲವನ್ನೂ ಅನುಲಕ್ಷಿಸಿ ಕೆಲವು ವಿದ್ವಾಂಸರು ಈ ಕಾಲಘಟ್ಟವನ್ನು ‘ತಂತ್ರಯುಗ’ ಇಲ್ಲವೆ ‘ತಾಂತ್ರಿಕ ಕಾಲ’ ಎಂದು ಕರೆದಿದ್ದಾರೆ. (ಕೃಷ್ಣಮೂರ್ತಿ ಮ.ಸು.೧೯೮೨ ಪುಟ.೮೫ – ೮೬) ಹೆಚ್ಚುಕಡಿಮೆ ಇದೇ ವೇಳೆಗೆ ಅಂದರೆ ಕ್ರಿ.ಶ. ೭ – ೮ನೇ ಶತಮಾನದ ಸಂದರ್ಭದಲ್ಲಿ ಬೌದ್ಧ ಧರ್ಮದ ಸಿದ್ಧ ಮಾರ್ಗವಾದ ‘ವಜ್ರಯಾನ’ ದಿಂದ ನಾಥಪಂಥವು ಹುಟ್ಟಿಕೊಂಡಿರಬೇಕು.

ಗೋವಿಂದ ಪೈಯವರು ಹೇಳುವ ಮಾತು ಕೂಡ ಇದಕ್ಕೆ ಪೂರಕವಾಗಿದೆ. ಅವರ ಪ್ರಕಾರ: “ನಾಥಪಂಥವಾದರೊ ಬೌದ್ಧಧರ್ಮದ ಮಹಾಯಾನ ಶಾಖೆಯ ವಜ್ರಯಾನವೆಂಬ ಪಂಗಡದಿಂದ ಸಿದ್ಧವಾಯಿತು. ಆತ ಏವ ಅದು ತಾಂತ್ರಿಕ ಶೈವಮಾರ್ಗವಾಗಿ ಪರಿಣಮಿಸುವ ಮುಂಚೆ ತಾಂತ್ರಿಕ ಬೌದ್ಧ ಮಾರ್ಗದ ಪ್ರಕಾರವಾಗಿದ್ದ ಕಾರಣ, ಅದಕ್ಕೆ ಬೌದ್ಧವೂ, ಬ್ರಾಹ್ಮಣವೂ ಅವೆರಡೂ ಧರ್ಮಗಳ ತಂತ್ರಗಳು ಹೊಂದಿಕೆಯಾಗಿವೆ. ನಾಥಪಂಥವು ಬೌದ್ಧ ಧರ್ಮದಿಂದ ಶೈವ ಧರ್ಮಕ್ಕೆ ಮಾರ್ಪಟ್ಟ ವಿಧಾನದಲ್ಲಿ ಅದು ಕೆಲಮಟ್ಟಿಗೆ ಬೌದ್ಧ ಪರಿಭಾಷೆಯನ್ನು ಬಳಸಿಕೊಂಡಿತಷ್ಟೇ ಅಲ್ಲ; ಬೌದ್ಧವೂ ಶೈವವೂ ಧರ್ಮಗಳ ಆಚಾರಗಳನ್ನೂ ಸಿದ್ಧಾಂತಗಳನ್ನೂ ಸಹಜವಾಗಿ ಹೀರಿಕೊಂಡಿತು. ಹೀಗಾಗಿ ನಾಥಪಂಥದ ಆದ್ಯ ಗುರುಗಳು ವಜ್ರಯಾನದ ದೇವತೆಗಳು ಹಾಗೂ ಗುರುಗಳೊಂದಿಗೆ ಸಮೀಕರಿಸಲ್ಪಟ್ಟರು. ತಿಬೇಟದಲ್ಲೂ, ನೇಪಾಲದಲ್ಲೂ ನಾಥಪಂಥದ ಪ್ರವರ್ತಕನಾದ ಮತ್ಸ್ಯೇಂದ್ರನಾಥನು ಮಹಾಯಾನದ ದೇವತೆಯಾದ ಅವಲೋಕಿತೇಶ್ವರನೆಂಬ ಲೋಕೇಶ್ವರನೊಡನೆ ಸಮೀಕರಿಸಲ್ಪಟ್ಟು ದೇವತೆಯಾದನು. ಹಾಗೂ ಬಂಗಾಲದಲ್ಲಿ ಆತನೂ ಆತನ ಶಿಷ್ಯನಾದ ಗೋರಕ್ಷನಾಥನೂ ಬೌದ್ಧ ಸಂತರೆಂದು ಭಾವಿಸಲ್ಪಟ್ಟರು” (ಗೋ.ಸಂ.ಸಂ.ಪು. ೬೬೨ ಮತ್ತು ಪು. ೬೭೦).

ಮೇಲೆ ನೋಡಿದಂತೆ ಗೋರಖನಾಥನಿಂದ

[1] ಪ್ರವರ್ತಿತವಾದ ಬಾರಹಪಂಥಿ ಮಾರ್ಗಗಳು (ದ್ವಾದಶ ಪಂಥಗಳು) ನಾಥ ಸಂಪ್ರದಾಯ ಎಂದು ಪ್ರಸಿದ್ಧವಾದವು. ಈ ಸಂಪ್ರದಾಯದ ಸಾಧಕರು ತಮ್ಮ ಹೆಸರಿನೊಡನೆ ‘ನಾಥ’ ಶಬ್ದವನ್ನು ಸೇರಿಸಿಕೊಳ್ಳುತ್ತಾರೆ. ಕಿವಿಯನ್ನು ಚುಚ್ಚಿಸಿಕೊಳ್ಳುವುದರಿಂದ ‘ಕನಘಟಾ’ (ಕಿವಿ ಹರುಕರು) ಎಂದೂ ‘ದರ್ಶನ್‌’ ಎಂಬ ಪವಿತ್ರ ಉಂಗುರವನ್ನು ಧರಿಸಿಕೊಳ್ಳುವುದರಿಂದ ‘ದರ್ಶನಿಸಾಧು’ ಎಂದೂ ಕರೆಯಲ್ಪಡುತ್ತಾರೆ. ಇವರಲ್ಲಿ ಗೃಹಸ್ಥರೂ ಇದ್ದಾರೆ; ವಿರಕ್ತರೂ ಇದ್ದಾರೆ. ಕಿವಿ ಚುಚ್ಚಿಸಿಕೊಳ್ಳದವರನ್ನು ‘ಔಘಡ್‌’ ಎಂದು ಕರೆಯುತ್ತಾರೆ. ನಾಥ ಸಿದ್ಧರ ಪಟ್ಟಿಯಲ್ಲಿ ಕನ್ನಡ ನಾಡಿನ ಸಂತರಾದ ರೇವಣಸಿದ್ಧ ಹಾಗೂ ಅಲ್ಲಮ ಪ್ರಭುವಿನ ಹೆಸರುಗಳೂ ಬರುತ್ತವೆ. ಗೋರಕ್ಷನಾಥನು ಕನ್ನಡ ನಾಡಿನವನಾಗಿರಬೇಕೆಂಬ ಅಭಿಪ್ರಾಯ ಒಂದಿದೆ. ಆದರೆ ಅದು ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಕ್ಷನಾಥನೆ? ಅಥವಾ ಆ ಪರಂಪರೆಯಲ್ಲಿ ಬಂದ ನಂತರದ ಇನ್ನೋರ್ವ ಗೋರಕ್ಷನಾಥನೇ? ಎಂಬ ಬಗ್ಗೆ ಖಚಿತ ಆಧಾರಗಳಿಲ್ಲ. ಕನ್ನಡ ನಾಡಿನ ಶಿವಶರಣ (ಸಿದ್ಧ)ರಾದ ರೇವಣಸಿದ್ಧ ಹಾಗೂ ಅಲ್ಲಮ ಪ್ರಭುವಿನ ಸಮಕಾಲೀನನಾಗಿದ್ದು ಅವರೀರ್ವರೊಡನೆ ಸಂವಾದ ನಡೆಸಿ, ಗರ್ವಭಂಗಕ್ಕೊಳಗಾದ ಗೋರಕ್ಷನಾಥನ ಉಲ್ಲೇಖ ನಮ್ಮ ಸಾಹಿತ್ಯ ಕೃತಿಗಳಲ್ಲಿ ಸಿಗುತ್ತದೆ. ಇದು ಹೌದೆಂದಾದಲ್ಲಿ ಈ ಗೋರಕ್ಷಕನಾಥ ಮತ್ಸ್ಯೇಂದ್ರನಾಥನ ಶಿಷ್ಯನಾಗಿರಲಾರ; ಆ ಪರಂಪರೆಯಲ್ಲಿನ ನಂತರದ ಒಬ್ಬ ಯೋಗಿಯಾಗಿರಬಹುದು. ಎಂತಿದ್ದರೂ ಮತ್ಸ್ಯೇಂದ್ರನಾಥ ಮತ್ತು ಗೋರಕ್ಷನಾಥರು ಜೊತೆಗೂಡಿ ಕನ್ನಡ ನಾಡಿಗೆ ಬಂದಿದ್ದರೆಂಬುದು ಮಂಗಳೂರು – ಕದ್ರಿಗೆ ಸಂಬಂಧಿಸಿದ ಐತಿಹ್ಯ ಒಂದರಲ್ಲಿ ಉಲ್ಲೇಖಿತವಾಗಿದೆ.

ಆ ಐತಿಹ್ಯದ ಪ್ರಕಾರ: ಮತ್ಸ್ಯೇಂದ್ರ ಮತ್ತು ಗೋರಖನಾಥರು ಕೇರಳದಲ್ಲಿ ಸಂಚರಿಸುತ್ತ ಧರ್ಮ ಪ್ರಚಾರ ಮಾಡುತ್ತಿದ್ದಾಗ ಅಲ್ಲಿಯ ರಾಜಕುಮಾರಿ ಪರಿಮಳಾ ಎಂಬಾಕೆ ಅವರ ಶಿಷ್ಯೆಯಾಗಿ ಅವರನ್ನನುಸರಿಸಿ ಬರುತ್ತಾಳೆ. ಅವರು ಕೇರಳದಿಂದ ಕರಾವಳಿಯ ದಾರಿಯಲ್ಲೇ ಬಂದು ನೇತ್ರಾವತಿಯನ್ನು ದಾಟಿ ಈಗಿನ ಮಂಗಳೂರಿನ ಬೋಳಾರದ ಆಸುಪಾಸಿಗೆ ಬರುತ್ತಾರೆ. ಆ ವೇಳೆಗೆ ಗೋರಖನಾಥನು ಪರಿಮಳಾಗೆ ‘ಮಂಗಳ’ ಎಂಬುದಾಗಿ ಪುನರ್ನಾಮಕರಣ ಮಾಡಿರುತ್ತಾನೆ. ಅಲ್ಲಿಗೆ ಬರುವಾಗ ‘ಮಂಗಳಾ’ ಒಂದೆಡೆ ನಿಂತುಬಿಡುತ್ತಾಳೆ. ಮಂಗಳಾ ನೆಲೆ ನಿಂತಲ್ಲೇ ದೇವರಲ್ಲಿ ಐಕ್ಯಗೊಂಡುದರಿಂದಾಗಿ ಅಲ್ಲಿ ಕಟ್ಟಿದ ದೇವಸ್ಥಾನವು ‘ಮಂಗಳಾದೇವಿ’ ಹೆಸರಲ್ಲೂ, ಆ ಊರು ‘ಮಂಗಳೂರು’ ಹೆಸರಲ್ಲೂ ಪ್ರಸಿದ್ಧವಾಗುತ್ತವೆ. ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರು ಮುಂದುವರೆದು ಕದರಿಗೆ ಹೋಗಿ ಅಲ್ಲಿ ಕೆಲ ಕಾಲ ತಪಶ್ಚರ್ಯದಲ್ಲಿ ತೊಡುಗುತ್ತಾರೆ. ಈ ಜಿಲ್ಲೆಯ ಇತಿಹಾಸ ಬರೆದ ಗಣಪತಿರಾವ್‌ ಐಗಳ್‌ ಮತ್ತು ಬಿ.ಎ. ಸಾಲೆತ್ತೂರ್ ಅವರುಗಳೂ ಪ್ರಸ್ತುತ ಐತಿಹ್ಯವನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸುತ್ತಾರೆ.

ಮತ್ಸ್ಯೇಂದ್ರನಾಥ ಹಾಗೂ ಗೋರಖನಾಥರ ಕಾಲ ಸುಮಾರು ಕ್ರಿ.ಶ. ೧೦ – ೧೨ನೇ ಶತಮಾನವಾಗಿರಬೇಕೆಂದು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ. (ವಸಂತಕುಮಾರ ತಾಳ್ತಜೆ:೧೯೮೮;ಪು. ೧೬೪) ಇವರ ಪ್ರಭಾವದಿಂದಲೇ ಕದ್ರಿಯು ನಾಥಪಂಥದ ನೆಲೆಯಾಗಿ ರೂಪುಗೊಂಡಿರಬೇಕು. ಮತ್ಸ್ಯೇಂದ್ರನಾಥನು ಕದಲಿ ದೇಶಕ್ಕೆ ಹೋಗಿ ಅಲ್ಲಿಯ ಸುಂದರಿಯರ ಮೋಹಜಾಲಕ್ಕೆ ಸಿಕ್ಕಿ ಬಿದ್ದನೆಂದೂ, ಆಗ ಗೋರಖನಾಥ ಅಲ್ಲಿಗೆ ಹೋಗಿ ತನ್ನ ಗುರುವನ್ನು ಉದ್ಧರಿಸಿದನೆಂದೂ ಕತೆಗಳಿವೆ. ಇದರಂತೆ ಮತ್ಸ್ಯೇಂದ್ರನಾಥನು ನಾರೀ ಸಾಧನೆಯುಳ್ಳ ತಂತ್ರ ಸಾಧನೆಯಲ್ಲಿ ತೊಡಗಿದ್ದಿರಬೇಕು; ಆಗ ಗೋರಖನಾಥನು ಆತನನ್ನು ಎಚ್ಚರಿಸಿ ಕರೆತಂದಿರಬೇಕು – ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತದೆ. (ಕೃಷ್ಣಮೂರ್ತಿ ಮ.ಸು: ೧೯೮೨ ಪು. ೧೭೫/೧೭೬) ಕೇರಳ ಕಡೆಯಿಂದ ಮತ್ಸ್ಯೇಂದ್ರನಾಥ ಮತ್ತು ಗೋರಖರ ಜತೆ ಮಂಗಳೂರಿಗೆ ಬಂದ ಪರಿಮಳಾ (ಮಂಗಳಾ)ಳ ಕಥೆಗೂ ಈ ಅಭಿಪ್ರಾಯ ಅನ್ವಯವಾಗಬಹುದು.[1] ಗೋರಖನಾಥ ಓರ್ವ ಮಹಾನ್‌ ಯೋಗಿ. ಯೋಗ ಮಾರ್ಗವನ್ನು ಒಂದು ಜೀವಂತ ಧರ್ಮವನ್ನಾಗಿ ಮಾಡಿದ ಶ್ರೇಯಸ್ಸು ಇವನಿಗೆ ಸಲ್ಲುತ್ತದೆ. ಓರ್ವ ಧಾರ್ಮಿಕ ಯುಗ ಪ್ರವರ್ತಕನಾಗಿ ಗೋರಖನಾಥನು ನಮಗೆ ಮುಖ್ಯನಾಗುತ್ತಾನೆ. ಈತನಿಂದಲಾಗಿಯೇ ನೇಪಾಳದ ಗೋರ್ಖಾ (ಗೂರ್ಖಾ) ಜನಾಂಗಕ್ಕೆ ಆ ಹೆಸರು ಬಂತೆಂದು ಹೇಳಲಾಗುತ್ತದೆ.