ಭಾರತದ ಧಾರ್ಮಿಕ ಇತಿಹಾಸವು ಬಹಳ ವಿಶಿಷ್ಟತೆಯಿಂದ ಕೂಡಿದುದಾಗಿದೆ. ಹಲವಾರು ಮತ – ಧರ್ಮಗಳು ಇಲ್ಲಿ ಹುಟ್ಟಿ ಬೆಳೆದುವು. ಅನ್ಯ ದೇಶಗಳಲ್ಲಿ ಹುಟ್ಟಿದ ಧರ್ಮಗಳೂ ಇಲ್ಲಿ ತಮ್ಮ ಪ್ರಭಾವವನ್ನು ಬೀರಿದುವು. ಇಲ್ಲಿನ ರಾಜಕೀಯ, ಸಾಂಸ್ಕೃತಿಕ ಅದೇರೀತಿ ಸಾಮಾಜಿಕ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಿದುವು. ಇವುಗಳಲ್ಲಿ ಕೆಲವು ರಾಜಾಶ್ರಯದಲ್ಲಿ ಬೆಳೆದರೆ ಮತ್ತೆ ಕೆಲವು ಸ್ವತಂತ್ರವಾಗಿ ಬೆಳೆದುವು. ಕೆಲವು ವೈದಿಕ ಧರ್ಮಗಳೆಂದು ಪರಿಗಣಿತವಾದರೆ ಇನ್ನು ಕೆಲವು ಅವೈದಿಕ ಧರ್ಮಗಳೆಂದು ಪರಿಗಣಿತವಾದುವು. ಪ್ರಮುಖ ಧರ್ಮಗಳಿಂದ ಮತ್ತೆ ಹಲವು ಉಪಧರ್ಮ – ಪಂಥಗಳು, ಶಾಖೆ – ಉಪಶಾಖೆಗಳು ಹುಟ್ಟಿಕೊಂಡುವು. ಆಯಾ ಧರ್ಮಗಳಿಗೆ ಸಂಬಂಧಪಟ್ಟಂತೆ ಧಾರ್ಮಿಕ ಕೇಂದ್ರಗಳೂ ಅಸ್ತಿತ್ವಕ್ಕೆ ಬಂದುವು.

ಯಾವುದೇ ಧರ್ಮವನ್ನೂ ಸಾರ್ವಕಾಲಿಕ, ಸಾರ್ವತ್ರಿಕ ಎನ್ನಲು ಸ್ವಲ್ಪ ಕಷ್ಟವಿದೆ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಇಲ್ಲಿ ಒಂದು ಕಾಲದಲ್ಲಿ ವಿಶೇಷ ಪ್ರಭಾವವನ್ನು ಬೀರಿದ್ದ ಬೌದ್ಧ, ಜೈನ ಧರ್ಮಗಳು ಈಗ ತಮ್ಮ ಪ್ರಭಾವವನ್ನು ಆ ಮಟ್ಟದಲ್ಲಿ ಉಳಸಿಕೊಂಡಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಒಂದು ಧರ್ಮವು ನಿರ್ದಿಷ್ಟ ಪ್ರದೇಶದ ಜನ ಸಮುದಾಯದ ಮೇಲೆ ಬೀರುವ ಪ್ರಭಾವದಲ್ಲಿ ಏರುಪೇರಾಗಬಹುದು. ಭಾರತವಂತೂ ಹಲವು ಧರ್ಮಗಳ ಕರ್ಮ ಭೂಮಿಯಾಗಿರುವುದರಿಂದ ಇಲ್ಲಿ ಈ ಬಗೆಯ ಏರು – ಪೇರುಗಳಿಗೆ, ಧರ್ಮ ಸಂಕರಗಳಿಗೆ, ಧಾರ್ಮಿಕ ಸ್ಥಿತ್ಯಂತರಗಳಿಗೆ ಸಾಕಷ್ಟು ಉದಾಹರಣೆಗಳಿವೆ. ಧರ್ಮ ಸಂಕರವಾಗಿ ವಿವಿಧ ಧರ್ಮಗಳಿಗೆ ಸಂಬಂಧಪಟ್ಟ ಬೇರೆ ಬೇರೆ ದೇವತೆಗಳು ಒಂದೇ ಕಡೆ ಆರಾಧನೆಗೊಳ್ಳಬಹುದು. ಧಾರ್ಮಿಕ ಸ್ಥಿತ್ಯಂತರವುಂಟಾಗಿ ಒಂದು ಧರ್ಮದ ದೇವತೆಯ ಬದಲಾಗಿ ಇನ್ನೊಂದು ಧರ್ಮದ ದೇವತೆ ಆರಾಧನೆಗೊಳ್ಳಬಹುದು. ಇಂಥವುಗಳಲ್ಲಿ ಕೆಲವು ಪರಸ್ಪರ ಅಂತರ್ ಸಂಬಂಧವುಳ್ಳ ಧರ್ಮಗಳಾದರೆ ಮತ್ತೆ ಕೆಲವು ಯಾವುದೇ ಸಂಬಂಧವಿರದ ಧರ್ಮಗಳಾಗಿರುತ್ತವೆ. ಇನ್ನು ಕೆಲವು ಧರ್ಮಗಳು ಸಂಕರದ ನಂತರ ಪರಸ್ಪರ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತವೆ. ಈ ಬಗೆಯ ಕೆಲವು ಸ್ಥಿತ್ಯಂತರಗಳು ಧಾರ್ಮಿಕ ಗೊಂದಲ – ತಿಕ್ಕಾಟ – ಘರ್ಷಣೆಗಳಿಗೆ ಎಡೆ ಮಾಡಿ ಕೊಟ್ಟಿದ್ದರೆ, ಮತ್ತೆ ಕೆಲವು ಕಾಲಚಕ್ರದೊಂದಿಗೆ ಸದ್ದಿಲ್ಲದೆ ಉರುಳುತ್ತಾ ಬಂದಿವೆ. ಇಂತಹ ಸ್ಥಿತ್ಯಂತರಗಳು ಭಕ್ತರಿಗೆ, ಜನ ಸಾಮಾನ್ಯರಿಗೆ ವಿಶೇಷ ಅನಿಸದಿದ್ದರೂ ವಿದ್ವತ್ವಲಯದಲ್ಲಿ ಹಲವು ಸಂಶೋಧಕರ ತಲೆ ಕೆಡಿಸಿವೆ. ಇಡಿಯ ಭಾರತದಲ್ಲಿರುವಂತ ಕರ್ನಾಟಕದಲ್ಲೂ ಈ ತೆರನಾದ ಅನೇಕ ಧಾರ್ಮಿಕ ಕೇಂದ್ರಗಳಿವೆ. ಅವುಗಳಲ್ಲಿ ಪ್ರಸ್ತುತ ಕದ್ರಿ ಕೂಡಾ ಒಂದು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿರುವ ಕದ್ರಿಯು ಮಧ್ಯಕಾಲೀನ ಭಾರತದ ಒಂದು ಪ್ರಮುಖ ಧಾರ್ಮಿಕ ಕೇಂದ್ರ. ನಮ್ಮ ಅನೇಕ ಧಾರ್ಮಿಕ ಕೇಂದ್ರಗಳ ಇತಿಹಾಸ ಬಹಳ ತೊಡಕಿನದಾಗಿರುತ್ತದೆ. ಅವುಗಳ ವಾಸ್ತವ ಇತಿಹಾಸ ಏನೆಂಬುದೇ ಬಿಡಿಸಲಾರದ ಒಂದು ಕಗ್ಗಂಟಾಗಿರುತ್ತದೆ. ಆ ಕಗ್ಗಂಟನ್ನು ಬಿಡಿಸುವತ್ತಲೇ ನಮ್ಮ ಬಹುಪಾಲು ಸಂಶೋಧನೆಗಳು ಕೇಂದ್ರೀಕೃತವಾದದ್ದೂ ಇದೆ. ನಿರ್ದಿಷ್ಟ ಧಾರ್ಮಿಕ ವ್ಯವಸ್ಥೆಯನ್ನು ನಂಬಿ, ಜೀವನದಲ್ಲಿ ಅಳವಡಿಸಿಕೊಂಡು, ಬದುಕುತ್ತಿರುವ ಜನ ಸಾಮಾನ್ಯರಿಗೆ ಅದೊಂದು ಸಮಸ್ಯೆಯಾಗಿ ಕಂಡು ಬರದಿದ್ದರೂ ಸಂಶೋಧಕರಿಗಂತೂ ಅದು ಬಹುದೊಡ್ಡ ತೊಡಕಿನ ವಿಷಯವಾಗಿ ಪರಿಣಮಿಸಿದೆ.

ಪ್ರಸ್ತುತ ಕದ್ರಿ ಕೂಡ ಇದಕ್ಕೆ ಹೊರತಲ್ಲ. ಬೌದ್ಧ – ನಾಥ – ಶೈವ ಧರ್ಮ – ಪಂಥಗಳು ಅಲ್ಲಿ ಹಂತ ಹಂತವಾಗಿ ಬೆಳೆದು ಬಂದ ಬಗೆಯನ್ನು ಈಗಾಗಲೇ ಸಂಶೋಧಕರು ಗುರುತಿಸಿದ್ದಾರೆ. ಅದಕ್ಕೆ ಸಾಧಕ – ಬಾಧಕಗಳಾಗುವ ಪುರಾವೆಗಳನ್ನೂ ಸಾದರ ಪಡಿಸಿದ್ದಾರೆ. ಗಣಪತಿರಾವ್‌ ಐಗಳ್‌, ಎಂ. ಗೋವಿಂದ ಪೈ, ಗುರುರಾಜ ಭಟ್ಟ, ಕೆ.ವಿ. ರಮೇಶರಂಥ ಸಂಶೋಧಕರು ಅಲ್ಲಿರುವ ಶಾಸನ, ವಿಗ್ರಹಗಳ ಆಧಾರದಿಂದ ತಮ್ಮ ಚರ್ಚೆಗಳನ್ನು ಬೆಳೆಸಿದ್ದಾರೆ. ನಂತರದಲ್ಲಿ ಕರ್ನಾಟಕದ ಬೌದ್ಧ ಸಂಸ್ಕೃತಿಯ ಬಗೆಗೆ ಸಂಶೋಧನೆ ನಡೆಸಿದ ತಾಳ್ತಜೆ ವಸಂತ ಕುಮರ ಅವರು ಕೂಡ ಕದ್ರಿಯು ಮೂಲತಃ ಬೌದ್ಧ ಸಂಸ್ಕೃತಿಯ ನೆಲೆಯಾಗಿತ್ತೆಂಬುದನ್ನು ಪ್ರತಿಪಾದಿಸುತ್ತಾರೆ. ಇತ್ತೀಚೆಗೆ “ದಕ್ಷಿಣದ ಸಿರಿನಾಡು” ಎಂಬ ತಮ್ಮ ಗ್ರಂಥದಲ್ಲಿ ಕೆ. ಅನಂತರಾಮು ಅವರು ಕದ್ರಿಯ ವರ್ತಮಾನದ ಸ್ಥಿತಿ – ಗತಿಗಳ ವಿವರಣೆಯನ್ನು ನೀಡಿದ್ದಾರೆ. ಇವಲ್ಲದೆ ಇನ್ನೂ ಅನೇಕ ಕಡೆ ಕದ್ರಿಗೆ ಸಂಬಂಧಿಸಿದ ಪ್ರಾಸಂಗಿಕ ಉಲ್ಲೇಖಗಳು ಸಿಗುತ್ತವೆ. ಕಡವ ಶಂಭು ಶರ್ಮರ ‘ಗೋರಕ್ಷ ಪದ್ಧತಿ’, ‘ಭಾರದ್ವಾಜ – ಸಂಹಿತೆ’ ಎಂಬ ಸಂಸ್ಕೃತ ಗ್ರಂಥಗಳಲ್ಲಿ ಕದ್ರಿಗೆ ಸಂಬಂಧಿಸಿದ ಪೌರಾಣಿಕ ವಿವರಗಳಿವೆ. ಇವುಗಳನ್ನೆಲ್ಲಾ ಪರಾಮರ್ಶಿಸಿ, ಅಷ್ಟಿಷ್ಟು ಜಾನಪದ ಸಂಗತಿಗಳನ್ನೂ ಬಳಸಿಕೊಂಡು ಕದ್ರಿಯ ಧಾರ್ಮಿಕ – ಸಾಂಸ್ಕೃತಿಕ ಅಧ್ಯಯನವೊಂದನ್ನು ನಡೆಸಲು ಇಲ್ಲಿ ಉದ್ದೇಶಿಸಲಾಗಿದೆ.