ಇಂದು ಶೈವ ಕೇಂದ್ರವಾಗಿ, ಮಂಜುನಾಥನ ನೆಲೆಯಾಗಿ ಸಹಸ್ರಾರು ಭಕ್ತಾದಿಗಳನ್ನು ತನ್ನಡೆಗೆ ಆಕರ್ಷಿಸುತ್ತಿರುವ ಕದ್ರಿ ಇದಕ್ಕೂ ಮಲುನ್ನ ಎರಡು ಪ್ರಮುಖ ಧಾರ್ಮಿಕ ಪರಂಪರೆಗಳನ್ನು ದಾಟಿ ಬಂದಿದೆಯೆಂಬುದನ್ನು ಸಂಶೋಧಕರು ಈಗಾಗಲೇ ಪ್ರತಿಪಾದಿಸಿದ್ದಾರೆ. ಹಾಗೆನ್ನುವುದಕ್ಕೆ ನಂಬಲರ್ಹ ಕುರುಹುಗಳೂ ಕದ್ರಿಯಲ್ಲಿವೆ. ಅವುಗಳಲ್ಲಿ ಮೊದಲನೆಯದು ಬೌದ್ಧ ಧರ್ಮವಾದರೆ ಎರಡನೆಯದು ನಾಥಪಂಥ.

ಕದ್ರಿಯಲ್ಲಿ ಕಂಚಿನಿಂದ ನಿರ್ಮಿಸಿದ ಅವಲೋಕಿತೇಶ್ವರ (ಲೋಕೇಶ್ವರ), ಮಂಜುಘೋಷ (ಮಂಜುಶ್ರೀ) ಮತ್ತು ಧ್ಯಾನಿ ಬುದ್ಧರ ಮೂರ್ತಿ ಶಿಲ್ಪಗಳಿವೆ. ಇವಲ್ಲದೆ ಬುದ್ಧನ ಕೆತ್ತನೆಯುಳ್ಳ ಶಿಲಾ ಸ್ತಂಭವೂ ಅಲ್ಲಿದೆ. ಇವುಗಳನ್ನು ದಕ್ಷಿಣ ಭಾರತದ ಅತ್ಯಂತ ಸುಂದರ ಮೂರ್ತಿ ಶಿಲ್ಪಗಳೆಂದು ವಿದ್ವಾಂಸರು ಪರಿಗಣಿಸಿದ್ದಾರೆ. (ವಸಂತ ಕುಮಾರ ತಾಳ್ತಜೆ; ೧೯೮೮; ಪು. ೧೬೪) ಲೋಕೇಶ್ವರ ಮೂರ್ತಿಯ ಪೀಠದಲ್ಲಿ ಕ್ರಿ.ಶ. ೧೦೬೮ ನೆಯ ಇಸವಿಗೆ ಸೇರಿದ ಅಲೂಪ ಕುಂದವರ್ಮನ ಸಂಸ್ಕೃತ ಶಾಸನವೊಂದಿದೆ.

“ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್‌ ಪ್ರಭುಃ
ಶ್ರೀಮತ್‌ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ”.

ಎಂಬ ಈ ಶಾಸನದ ಸಾಲುಗಳ ಪ್ರಕಾರ “ಶೋಭಾಯುಕ್ತವಾದ ಕದರಿಕಾ ಎಂಬಲ್ಲಿಯ ಅತ್ಯಂತ ಮನೋಹರವಾದ ವಿಹಾರದಲ್ಲಿ ಲೋಕೇಶ್ವರನೆಂಬ ದೇವರ ಪ್ರತಿಮೆಯನ್ನು ಅರಸನು ಪ್ರತಿಷ್ಠಾಪಿಸಿದನು” ಎಂದು ತಿಳಿದು ಬರುತ್ತದೆ. ಇಲ್ಲಿರುವ ‘ಲೋಕೇಶ್ವರ’ ‘ವಿಹಾರ’ ಮುಂತಾದ ಪ್ರಯೋಗಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿದವುಗಳಾಗಿವೆ. ಮೈತ್ರೇಯ, ಲೋಕೇಶ್ವರ (ಅವಲೋಕಿತೇಶ್ವರ) ಮತ್ತು ಮಂಜುಘೋಷ (ಮಂಜುಶ್ರೀ) ಎಂಬ ಮೂವರು ಪ್ರಸಿದ್ಧ ಬೋಧಿಸತ್ವರ

[1] ಉಲ್ಲೇಖಗಳು ಬೌದ್ಧ ಧರ್ಮದಲ್ಲಿ ಸಿಗುತ್ತವೆ. ಇದರಂತೆ ‘ಲೋಕೇಶ್ವರ’, ಅಥವಾ ಅವಲೋಕಿತೇಶ್ವರ ಎಂದರೆ ಬೌದ್ಧ ಧರ್ಮದ ದೇವತೆ ಎಂದ ಹಾಗಾಯಿತು. ಇಲ್ಲಿನ ‘ವಿಹಾರ’ ಎಂಬ ಪರಿಭಾಷೆ ಕೂಡ ಕದ್ರಿಯು ಬೌದ್ಧ ಧರ್ಮದ ನೆಲೆಯಾಗಿದ್ದುದನ್ನು ಸಮರ್ಥಿಸುತ್ತದೆ. ಬೌದ್ಧ ದೇವಾಲಯಗಳನ್ನಲ್ಲದೆ ಬೇರೆ ಯಾವ ಧರ್ಮದ ದೇವಾಲಯಗಳನ್ನೂ ‘ವಿಹಾರ’ ಎನ್ನುವುದಿಲ್ಲ. ಈಗ ‘ಪಂಚ ಪಾಂಡವರ ಗುಹೆ’ ಎಂದು ಕರಿಯಲಾಗುವ ಚಿಕ್ಕಪುಟ್ಟ ಗುಹೆಗಳು ಕದ್ರಿ ಗುಡ್ಡದ ಮೇಲಿವೆ. ಇವು ಹಿಂದೆ ಬೌದ್ಧ ಭಿಕ್ಷುಗಳು ವಾಸವಾಗಿದ್ದ ತಾಣಗಳಾಗಿರಬಹುದು. ಹೀಗೆ ಕದ್ರಿಯಲ್ಲಿ ಲಭ್ಯವಿರುವ ಬೌದ್ಧ ಮೂರ್ತಿ ಶಿಲ್ಪಗಳ ಆಧಾರದಿಂದಲೂ, ಕುಂದವರ್ಮನ ಶಾಸನದಲ್ಲಿ ಪ್ರಸ್ತಾಪಿತವಾಗಿರುವ ‘ಲೋಕೇಶ್ವರ’, ‘ವಿಹಾರ’ ಮುಂತಾದ ಪಾರಿಭಾಷಿಕಗಳ ಆಧಾರದಿಂದಲೂ, ಇನ್ನಿತರ ಪುರಾವೆಗಳಿಂದಲೂ ಹಿಂದೆ ಅಲ್ಲಿ ಬೌದ್ಧ ಧರ್ಮ ಅಸ್ತಿತ್ವದಲ್ಲಿತ್ತೆಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಆದರೆ ಪ್ರಸ್ತುತ ವಿಷಯದಲ್ಲಿ ಹಲವಾರು ಸಮಸ್ಯೆಗಳೂ ಎದುರಾಗುತ್ತವೆ. ಅಳೂಪ ಕುಂದವರ್ಮನು ‘ಕದರಿಕಾ ಎಂಬಲ್ಲಿಯ ವಿಹಾರದಲ್ಲಿ ಲೋಕೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದನು’ ಎಂದು ಅರ್ಥ ಬರುವ ಶಾಸನದ ಸಾಲನ್ನು ಈಗಾಗಲೇ ಗಮನಿಸಲಾಗಿದೆ. ಅದೇ ಶಾಸನದ – –

“ಶ್ರೀ ಕುಂದವರ್ಮ ಗುಣವಾನಾಳುಪೇಂದ್ರೋ ಮಹೀಪತಿಃ ”
ಪಾದಾರವಿಂದ ಭ್ರಮರೋ ಬಾಲಚಂದ್ರ ಶಿಖಾಮಣೀಃ”

ಎಂಬ ಶ್ಲೋಕದ ಪ್ರಕಾರ ಕುಂದವರ್ಮನು ಪರಮ ಶಿವಭಕ್ತನಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಹಾಗಿರುವಾಗ ಶೈವನಾದ ಕುಂದವರ್ಮನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಬೋಧಿಸತ್ವನ ಮೂರ್ತಿಯನ್ನು ಯಾಕೆ ಪ್ರತಿಷ್ಠಾಪಿಸಿದನೆಂಬ ಪ್ರಶ್ನೆಯೇಳುತ್ತದೆ. ಇಲ್ಲಿ ಇನ್ನೊಂದು ವಿಚಾರವನ್ನೂ ನಾವು ಗಮನಿಸಬೇಕಾಗುತ್ತದೆ. ಶೈವ ಧರ್ಮದ ನಾಥಪಂಥವು ಬೌದ್ಧ ಧರ್ಮದ ಮಹಾಯಾನ ಪರಂಪರೆಯ ವಜ್ರಯಾನ (ಮಂತ್ರಯಾನ) ಶಾಖೆಯಿಂದ ಹುಟ್ಟಿಕೊಂಡಿತೆಂದು ಹೇಳಲಾಗುತ್ತದೆ. ಅದೇ ರೀತಿ ಬೋಧಿಸತ್ವನಾದ ಲೋಕೇಶ್ವರನನ್ನೂ ನಾಥ ಪಂಥದ ಮತ್ಸ್ಯೇಂದ್ರನಾಥನನ್ನೂ ಸಮೀಕರಿಸುವ ಪ್ರಯತ್ನವೂ ಸಂಶೋಧಕರಿಂದ ನಡೆದಿದೆ. ಆದುದರಿಂದ ಕುಂದುವರ್ಮನಿಂದ ಪ್ರತಿಷ್ಠಾಪಿತವಾದ ಲೋಕೇಶ್ವರ ಮೂರ್ತಿಯು ಬೌದ್ಧ ಧರ್ಮದ ದೇವತೆಯಾದ ಲೋಕೇಶ್ವರನೊಡನೆ ಸಮೀಕೃತನಾದ ಶೈವ ಧರ್ಮ (ನಾಥಪಂಥ)ದ ಸಂತ ಮತ್ಸ್ಯೇಂದ್ರನಾಥನದೇ ಇರಬೇಕೆಂದು ಗೋವಿಂದ ಪೈಗಳು ಅಭಿಪ್ರಾಯ ಪಡುತ್ತಾರೆ. (ಗೋ. ಸಂ.ಸಂ. ಪು. ೬೭೦).

ಕೆ.ವಿ. ರಮೇಶರು ಅಭಿಪ್ರಾಯ ಪಡುವಂತೆ ಕುಂದವರ್ಮನು ಪ್ರತಿಷ್ಠಾಪಿಸಿದ ಲೋಕೇಶ್ವರ ಮೂರ್ತಿಯು ಬೋಧಿಸತ್ವನ ದೂ ಅಲ್ಲ; ಆತನೊಡನೆ ಸಮೀಕೃತನಾದ ಮತ್ಸ್ಯೇಂದ್ರನಾಥನದೂ ಅಲ್ಲ. ಅದು ಶಿವನದೇ ಮೂರ್ತಿ. ‘ಲೋಕೇಶ್ವರ’ ನೆಂದರೆ ‘ಅವಲೋಕಿತೇಶ್ವರ’ ನೆಂಬುದಕ್ಕಿಂತಲೂ ಶಿವನಿಗೇ ಇರುವ ಇನ್ನೊಂದು ಹೆಸರೆಂಬುದು ಅವರ ವಾದ. ಅದನ್ನು ಪುಷ್ಟೀಕರಿಸಲು ಅವರು ಕ್ರಿ.ಶ. ೧೨೧೫ರ ಮುಂಡ್ಕೂರು ಶಾಸನದಲ್ಲಿ ಶಿವನನ್ನು ‘ಲೋಕೇಶ್ವರ’ ಎಂದಿರುವುದನ್ನು ಉಲ್ಲೇಖಿಸುತ್ತಾರೆ. ಮೂರ್ತಿಯನ್ನು ನಿರ್ಮಿಸುವವರ ಮೇಲೆ ಬೌದ್ಧ ಮೂರ್ತಿಶಿಲ್ಪದ ಪ್ರಭಾವವಾಗಿರುವುದರಿಂದ ಕದ್ರಿಯ ಲೋಕೇಶ್ವರ ಮೂರ್ತಿಯು ಬೋಧಿಸತ್ವ ಪ್ರತಿಮೆಯ ಲಕ್ಷಣವನ್ನು ಹೊಂದಿದೆಯೆನ್ನುತ್ತಾರೆ. (Ramesh K.V. 1970; PP 294) ಕೆ.ವಿ. ರಮೇಶರ ಈ ವಾದಕ್ಕೆ ಸ್ವತಃ ಕುಂದವರ್ಮನ ಶಾಸನದಲ್ಲಿ ಆತನನ್ನು ಪರಮ ಶಿವಭಕ್ತನೆಂದಿರುವುದೂ ಪುಷ್ಟಿಯನ್ನೊದಗಿಸಬಹುದು. ಆದರೆ ‘ವಿಹಾರ’ ಎಂಬ ಪಾರಿಭಾಷಿಕದ ಪ್ರಯೋಗ, ಬೋಧಿಸತ್ವನ ಎಲ್ಲಾ ಲಕ್ಷಣಗಳೂ ಚಾಚೂ ತಪ್ಪದಂತೆ ಆ ಮೂರ್ತಿಯಲ್ಲಿ ಬಿಂಬಿತವಾಗಿರುವುದು – ಇವನ್ನೆಲ್ಲಾ ಗಮನಿಸಿದರೆ ಗೋವಿಂದ ಪೈಗಳಂದಂತೆ ಅದು ಲೋಕೇಶ್ವರನೊಡನೆ ಸಮೀಕೃತನಾದ ಮತ್ಸ್ಯೇಂದ್ರನಾಥನ ಮೂರ್ತಿ ಯಾಕಾಗಿರಬಾರದು? ಎಂಬ ಅನುಮಾನಕ್ಕೆಡೆಯಾಗುತ್ತದೆ. ಬೋಧಿಸತ್ವನಾದ ಅವಲೋಕಿತೇಶ್ವರನ ವಿಗ್ರಹದ ಜಡೆಯಲ್ಲಿ ಹಾಗೂ ಪ್ರಭಾವಳಿಯಲ್ಲಿ ಧ್ಯಾನಿಬುದ್ಧಾನಾದ ಅಮಿತಾಭನ ಚಿಕ್ಕ ಮೂರ್ತಿ ಇರುವಂತೆ ಮತ್ಸ್ಯೇಂದ್ರನಾಥನ ಜಡೆಯಲ್ಲಿ, ಅದೇ ರೀತಿ ಪ್ರಭಾವಳಿಯಲ್ಲಿ ಆತನ ಗುರುವಾದ ಶಿವನ ಚಿಕ್ಕ ಮೂರ್ತಿ ಇರಬಹುದಾದ ಸಾಧ್ಯತೆಯನ್ನು ಗೋವಿಂದ ಪೈಗಳು ಪ್ರತಿಪಾದಿಸುತ್ತಾರೆ. (ಗೋ.ಸಂ.ಸಂ. ಪು. ೬೭೦) ಒಟ್ಟಿನಲ್ಲಿ ಕ್ರಿ.ಶ. ೧ ರಿಂದ ೭ ನೆಯ ಶತಾಮಾನದ ವರೆಗೆ ಬೌದ್ಧ ಧರ್ಮವು ಭಾರತದಲ್ಲೆಲ್ಲ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂಬುದನ್ನು ನೆನಪಿಸಿಕೊಂಡರೆ ಕದ್ರಿಯಲ್ಲಿ ಅದು ಆ ಕಾಲಘಟ್ಟದಲ್ಲಿ ತನ್ನ ಪ್ರಭಾವವನ್ನು ಬೀರಿದ್ದಿರಬೇಕೆಂದು ಹೇಳಬಹುದಾಗಿದೆ. ಕ್ರಿ.ಶ. ೮ನೆಯ ಶತಮಾನದ ವೇಳೆಗೆ ಅದರ ಪ್ರಭಾವ ಇಳಿಮುಖವಾಗತೊಡಗಿತೆಂದು ಹೇಳಲಾಗುತ್ತದೆ. ಹಿಂದೆ ಮಹಾಯಾನ ಬೌದ್ಧ ಧರ್ಮ ಇದ್ದೆಡೆಯಲ್ಲೆಲ್ಲಾ ಅದರ ಕ್ಷೀಣ ದೆಸೆಯ ನಂತರ ಅದರಿಂದಲೇ ಹುಟ್ಟಿಬಂದ ನಾಥಪಂಥವು ಅಸ್ತಿತ್ವಕ್ಕೆ ಬಂದಿರಬೇಕು. ಕದ್ರಿಗೂ ಇದೇ ಮಾತು ಅನ್ವಯವಾಗುತ್ತದೆ. ಅಂದರೆ ಹಿಂದೆ ಅಲ್ಲಿ ಬೌದ್ಧಧರ್ಮವು ಇತ್ತೆಂಬುದರಲ್ಲಿ ಅನುಮಾನವಿಲ್ಲ. ತತ್ಸಂಬಂಧವಾಗಿ ಈಗಾಗಲೇ ವಿವಿಧ ವಿದ್ವಾಂಸರು ನಡೆಸಿದ ಚರ್ಚೆಗಳನ್ನು ಗಮನಿಸಿದರೆ ಪ್ರಸ್ತುತ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ.

ಎಂ. ಗೋವಿಂದ ಪೈಯವರು ಕದ್ರಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. (ಗೋ.ಸಂ.ಸಂ.ಪು. ೬೫೧ – ೬೭೨) “ಕದ್ರಿಯಲ್ಲಿರುವ ಅಲೂಪರದೊಂದು ಲೇಖ”(೧೯೨೭), “ಕದಿರೆಯ ಮಂಜುನಾಥ”(೧೯೪೭) ಮತ್ತು “ಧರ್ಮಸ್ಥಳದ ಶಿವಲಿಂಗಕ್ಕೆ ಮಂಜುನಾಥ ಎಂಬ ಹೆಸರು ಹೇಗೆ ಬಂತು?”(೧೯೫೦) ಎಂಬೀ ಲೇಖನಗಳಲ್ಲಿ ಅವರು ಮುಖ್ಯವಾಗಿ ಧರ್ಮ ಹಾಗೂ ದೇವತೆಗಳ ಬಗೆಗೆ ಚರ್ಚಿಸುತ್ತಾರೆ. ತಮ್ಮ ಮೊದಲ ಲೇಖನದಲ್ಲಿ ಕದ್ರಿಯಲ್ಲಿ ಹಿಂದೆ ಬೌದ್ಧ ಧರ್ಮವಿತ್ತೆಂಬುದಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಪ್ರಸ್ತುತ ಲೇಖನದಲ್ಲಿ ಲೋಕೇಶ್ವರ ವಿಗ್ರಹದ ಬಗೆಗೆ ಬರೆಯುತ್ತಾ “ಇದು ಬಹುಶಃ ತ್ರಿಮೂರ್ತಿಗಳ ಏಕೀಭೂತವಾದ ಪ್ರತಿಮೆಯಾಗಿರಬೇಕೆಂದು ಕಾಣುತ್ತದೆ”. (ಗೋ.ಸಂ.ಸಂ.ಪು.೬೫೧) ಎಂದ ಪೈಯವರು “ಕದಿರೆಯ ಮಂಜುನಾಥ” ಎಂಬ ಲೇಖನದಲ್ಲಿ ಇದು “ಬ್ರಹ್ಮನೂ ಅಲ್ಲ, ವಿಷ್ಣುವೂ ಅಲ್ಲ; ಶಿವನೂ ಅಲ್ಲ; ಆ ಮೂವರ ಸಮಸ್ತವಾದ ತ್ರಿಮೂರ್ತಿಯೂ ಅಲ್ಲ”. (ಪು.೬೬೧) ಎಂದು ಕಾರಣ ಸಹಿತ ವಾದಿಸುತ್ತಾರೆ. ಅಲ್ಲಿಯ ಇನ್ನೊಂದು ವಿಗ್ರಹವು ಬುದ್ಧನದೇ ಎನ್ನುವ ಅವರು ಇದು ಬುದ್ಧನದೂ ಅಲ್ಲವೆನ್ನುತ್ತಾರೆ.

ಅವರು ತತ್ಸಂಬಂಧವಾದ ತಮ್ಮ ಚರ್ಚೆಯನ್ನು ಮುಂದುವರಿಸುತ್ತಾ “ಮಹಾಯಾನ ಶಾಖೆಯ ಬೌದ್ಧ ಪುರಾಣಗಳಲ್ಲಿ ಮುಂದೆ ಬುದ್ಧರಾಗಲಿಕ್ಕಿರುವ ದೇವತಾಕಲ್ಪರಾದ ಬೋಧಿಸತ್ವ ಎಂಬ ವ್ಯಕ್ತಿಗಳನ್ನು ಕುರಿತು ಹೇಳಿದೆ. ಅವರಲ್ಲಿ ಪ್ರಸಿದ್ಧರೆಂದರೆ – ೧) ಮೈತ್ರೇಯ ೨) ಅವಲೋಕಿತೇಶ್ವರ, ಅಥವಾ ಲೋಕೇಶ್ವರ ಮತ್ತು ೩) ಮಂಜುಶ್ರೀ ಅಥವಾ ಮಂಜುಘೋಷ ಎಂಬ ಈ ಮೂವರು. ಕದಿರೆಯ ಈ ಮೂರ್ತಿಯಾದರೊ ನಿಶ್ಚಯವಾಗಿಯೂ ಇದರಲ್ಲಿ ಲೋಕೇಶ್ವರನೂ ಎಂಬ ಅವಲೋಕಿತೇಶ್ವರನದೇ ವಿಗ್ರಹವಾಗಿರಬೇಕು” (ಅದೇ) ಎಂದು ಅಭಿಪ್ರಾಯಪಡುತ್ತಾರೆ. “ವಿಹಾರ”ವು ಬೌದ್ಧ ಪರಿಭಾಷೆಯೆಂಬುದನ್ನು ಇಲ್ಲಿ ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಬೌದ್ಧ ಧರ್ಮವು ತುಳು ನಾಡಿಗೆ ಬಂದು ನೆಲೆಸಿದ್ದುದಕ್ಕೆ ಬೇರಾವ ಪುರಾವೆಗಳೂ ಇಂದು ಕಂಡುಬರದಿರುವುದರಿಂದಲೂ ಕುಂದವರ್ಮನನ್ನು ಪರಮಶಿವಭಕ್ತನೆಂದು ಶಾಸನದಲ್ಲಿ ವರ್ಣಿಸಿರುವುದರಿಂದಲೂ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಉತ್ತರಭಾರತದ ಬೌದ್ಧೇತರ ಪಂಥವಾದ ನಾಥಪಂಥದವರಿಂದ ಆ ವಿಗ್ರಹ ನಿರ್ಮಿತವಾಗಿರಬೇಕೆಂಬ ನಿರ್ಣಯಕ್ಕೆ ಬರುತ್ತಾರೆ(ಅದೇ). ಕೊನೆಗೆ, ಬೌದ್ಧ ಧರ್ಮದ ದೇವತೆಯಾದ ಲೋಕೇಶ್ವರನೊಡನೆ ಸಮೀಕೃತನಾದ ಶೈವ ಧರ್ಮದ (ನಾಥ ಪಂಥದ) ಸಂತನಾದ ಮತ್ಸ್ಯೇಂದ್ರನಾಥನದು’ ಎನ್ನುತ್ತಾರೆ. ಪರಮ ಶಿವಭಕ್ತನಾದ ಅಳೂಪ ಕುಂದವರ್ಮನು ‘ಲೋಕೇಶ್ವರ’ ಪ್ರತಿಮೆಯನ್ನು ಪ್ರತಿಷ್ಠಾಪಿಸಿದುದನ್ನು ಅವರು ಈ ರೀತಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಪೈಯವರ ವಾದವನ್ನೇ ಮುಂದುವರಿಸಿದ ವಸಂತಕುಮಾರ ತಾಳ್ತಜೆ ಅವರು ಬೌದ್ಧ ಧರ್ಮದ ತರುವಾಯ ಕದ್ರಿಯಲ್ಲಿ ನಾಥಪಂಥ ಪ್ರಚುರವಾಯಿತು ಎಂಬುದನ್ನು ಖಚಿತಪಡಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಅವಲೋಕಿತೇಶ್ವರ – ಲೋಕೇಶ್ವರ ವಿಚಾರವನ್ನೂ, ಮಂಜುಶ್ರೀ – ಮಂಜುನಾಥ ವಿಚಾರವನ್ನೂ ಮುಖ್ಯವಾಗಿ ಚರ್ಚೆಗೆ ಎತ್ತಿಕೊಳ್ಳುತ್ತಾರೆ. ಈ ಎರಡು ಅಂಶಗಳು “ಬೌದ್ಧ – ಶೈವ ಕೊಳುಕೊಡೆಗಳ ಒಳ್ಳೆಯ ಉದಾಹರಣೆಗಳಾಗುತ್ತವೆ” ಎನ್ನುತ್ತಾರೆ. (ವಸಂತ ಕುಮಾರ ತಾಳ್ತಜೆ;೧೯೮೮;ಪು. ೧೫೨)

ಅವಲೋಕಿತೇಶ್ವರ – ಲೋಕೇಶ್ವರ ವಿಚಾರವಾಗಿ ಚರ್ಚಿಸುತ್ತಾ ಅವರು “ಇನ್ನೀಗ ಈ ವಿಗ್ರಹದಲ್ಲಿ ಶಿವಪರವಾದ ಸೂಚನೆಗಳಿವೆಯೇ ಎಂದರೆ ಅವೇನೂ ಕಾಣಿಸದು. ನೊಸಲಲ್ಲಿ ಚಂದ್ರಲಾಂಛನ, ಸರ್ಪಾಭರಣ ಇತ್ಯಾದಿ ಯಾವ ಚಿಹ್ನೆಗಳೂ ಇಲ್ಲ. ಹಾಗಾಗಿ ಇದು ಬೌದ್ಧ ಅವಲೋಕಿತೇಶ್ವರನ ವಿಗ್ರಹ ಎನ್ನಲು ಯಾವ ಅಡ್ಡಿಯೂ ಕಾಣಿಸದು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ (ಅದೇ ಪು. ೧೫೩). ಕದ್ರಿ ದೇವಸ್ಥಾನದ ಒಳಪೌಳಿಯ ಎಡಭಾಗದ ಜಗಲಿಯಲ್ಲಿ ಪೂರ್ವಾಭಿಮುಖವಾಗಿ ಮಂಜುಶ್ರೀ ವಿಗ್ರಹವೂ, ಅದಕ್ಕೆದುರಾಗಿ ಪಶ್ಚಿಮಾಭಿಮುಖವಾಗಿ ಬುದ್ಧನ ಪ್ರತಿಮೆಯೂ ಇವೆ. ಮಂಜುಶ್ರೀ ವಿಗ್ರಹಕ್ಕೆ ನಾಲ್ಕು ಕೈಗಳಿವೆ. ವಸಂತಕುಮಾರ್ ತಾಳ್ತಜೆ ಅವರು ಇದೇ ವಿಗ್ರಹವನ್ನು ಕೇಂದ್ರವಾಗಿರಿಸಿಕೊಂಡು ಮಂಜುಶ್ರೀ – ಮಂಜುನಾಥ ವಿಚಾರವಾದ ಚರ್ಚೆಯನ್ನು ನಡೆಸುತ್ತಾರೆ. ಚೀಣೀ ಪದವಾದ ‘ಮಾನ್‌ – ಚು’ ಎಂಬುದರಿಂದ ಮಂಜುಶ್ರೀ ಬಂದಿರಬಹುದು ಎಂಬ ಎಸ್‌. ಶ್ರೀಕಂಠಶಾಸ್ತ್ರಿಯವರ ಊಹೆಯನ್ನು ಉಲ್ಲೇಖಿಸುತ್ತಾ “ಮಾನ್‌ – ಚು>ಮಂಚಿ>ಮಂಜು ಶ್ರೀ> ಮಂಜುನಾಥ ಆಗಿರಬೇಕು. ಬೋಧಿಸತ್ವ ಮಂಜುಶ್ರೀಯಿಂದಲೇ ‘ಮಂಜುನಾಥ’ ಹೆಸರು ಬಂತು. ಶಿವ ಸಂಬಂಧವಾದ ಹೆಸರುಗಳಲ್ಲಿ ಎಲ್ಲಿಯೂ ಮಂಜುನಾಥ ದೊರೆಯದಿರುವುದು ಇದಕ್ಕೆ ಪೂರಕವಾದ ವಿರೋಧ ಸಾಕ್ಷ್ಯವೇ ಆಗುತ್ತದೆ” ಎನ್ನುತ್ತಾರೆ. (ಅದೇ; ಪು.೧೫೪)

ಇದಲ್ಲದೆ ಕದರಿಯ ಪರಿಸರದಲ್ಲೆ ದೊರೆತ ಸುಮಾರು ಕ್ರಿ.ಶ. ೯ನೆಯ ಶತಮಾನದ ಮಂಜುಘೋಷನ ವಿಗ್ರಹವನ್ನೂ, ಇದೇ ಜಿಲ್ಲೆಯ ಮೂಡು ಬಿದಿರೆಯ ಪುತ್ತಿಗೆಯಲ್ಲಿ ದೊರೆತ ಅಕ್ಷೋಭ್ಯ ಬೋಧಿಸತ್ವ ವಿಗ್ರಹವನ್ನೂ ಆಧಾರವಾಗಿರಿಸಿಕೊಂಡು, “ಕದರಿಯೂ ಬೋಧಿಸತ್ವ ಮಂಜುಶ್ರೀಯ ಆರಾಧನಾ ಕೇಂದ್ರವಾಗಿದ್ದು, ಸುಮಾರು ಕ್ರಿ.ಶ. ೧೦ನೆಯ ಶತಮಾನದವರೆಗೂ ವಜ್ರಯಾನೀ ಬೌದ್ಧ ಧರ್ಮ ಇಲ್ಲಿ ಪ್ರಚಾರದಲ್ಲಿ ಇದ್ದಿರಬೇಕು. ಇದೇ ವಜ್ರಯಾನದ ಆರಾಧನಾ ಕ್ರಮಗಳನ್ನು ಒಂದೆಡೆಯಿಂದ ಶೈವ ಶಾಖೆಯೂ ಇನ್ನೊಂದೆಡೆಯಿಂದ ಬೌದ್ಧ – ಶೈವ ಜನ್ಯವಾದ ನಾಥಪಂಥವೂ ತಮ್ಮಲ್ಲಿ ಸೇರಿಸಿಕೊಂಡುವು. ಹಾಗಾಗಿ ಇಲ್ಲಿಯ ಲೇಕೇಶ್ವರನೇ ಮುಂದೆ ತ್ರಿಲೋಕೇಶ್ವರನಾದ. ಈಗ ಈ ಲೋಕೇಶ್ವರ ವಿಗ್ರಹಕ್ಕೆ ತ್ರಿಲೋಕೇಶ್ವರ ಎಂಬ ಅಭಿದಾನವೀಯಲಾಗಿದೆ!… ಮಂಜುಶ್ರೀಗೆ ಬ್ರಹ್ಮನೆಂದೂ, ಬುದ್ಧನಿಗೆ ವ್ಯಾಸನೆಂದೂ ಇಲ್ಲಿ ಪುನರ್ನಾಮ ಕರಣಗಳಾಗಿವೆ!! ಪ್ರಾಯಶಃ ೧೦ನೆಯ ಶತಮಾನದ ವರೆಗೆ ಇದ್ದ ಬೌದ್ಧಾಲಯವೇ ಬಳಿಕ ೧೨೦೧೩ನೆಯ ಶತಮಾನಗಳಲ್ಲಿ ಶಿವಾಲಯವಾಗಿ ಪರಿವರ್ತಿತವಾಯಿತು. ಹಾಗೆ ಪರಿವರ್ತಿತವಾಗುವ ಕಾಲಕ್ಕೆ ಗರ್ಭಗುಡಿಯ ಮೂಲ ವಿಗ್ರಹವನ್ನು ಭಿನ್ನಗೊಳಿಸಿದೆ, ಅದನ್ನು ಹೊರಜಗಲಿಗೆ ಸಾಗಹಾಕಿರಬೇಕು. ಕರ್ನಾಟಕದಲ್ಲಿ ಶೈವಶಾಖೆಯೂ ಬೌದ್ಧ ಪ್ರಭಾವಕ್ಕೆ ಒಳಗಾಗಿ ಅದರ ದೇವತಾವರ್ಗದ ಅವಲೋಕಿತೇಶ್ವರ (ಲೋಕೇಶ್ವರ)ನನ್ನೂ, ಮಂಜುಶ್ರೀಯನ್ನೂ ತ್ರಿಲೋಕೇಶ್ವರ ಹಾಗೂ ಮಂಜುನಾಥ ಹೆಸರಲ್ಲಿ ಸ್ವೀಕರಿಸಿವೆ” ಎಂದು ಅಭಿಪ್ರಾಯ ಪಡುತ್ತಾರೆ. (ಅದೇ; ಪು.೧೫೪ – ೧೫೫). ಪರಮ ಶಿವಭಕ್ತನಾದ ಅಳುಪ ಕುಂದವರ್ಮನು ಬೌದ್ಧದೇವತೆಯ ಪ್ರತಿಮೆಯನ್ನು ಸ್ಥಾಪಿಸುದುದಕ್ಕೆ ಅವರು ಆ ಕಾಲದ ಇತಿಹಾಸದಲ್ಲಿ ಸರ್ವೇ ಸಾಮಾನ್ಯವಾದ ಪರಮತ ಸಹಿಷ್ಣುತೆಯ ಕಾರಣವನ್ನು ಕೊಡುತ್ತಾರೆ. ಕದರಿಯ ಶಾಸನದಲ್ಲಿರುವ “ವಿಹಾರ” ಮತ್ತು “ದೇವ” ಎಂಬೆರೆಡು ಪದಗಳೂ ಬೌದ್ಧ ಪರಿಭಾಷೆಗಳೆನ್ನುತ್ತಾರೆ (ಅದೇ; ಪು.೧೫೬)[1] ಬುದ್ಧರಾಗಲಿರುವ ದೇವಾತಾ ಕಲ್ಪರನ್ನು ‘ಬೋಧಿಸತ್ವ’ರೆನ್ನುತ್ತಾರೆ. ಬೌದ್ಧ ಧರ್ಮದ ಮಹಾಯಾನದಲ್ಲಿ ಈ ಬೋಧಿಸತ್ವರ ಆರಾಧನೆ ಇದೆ.