ಕದ್ರಿ ಪ್ರದೇಶವನ್ನು ಒಂದು ಧಾರ್ಮಿಕ ಸಮುಚ್ಛಯವಾಗಿ ಪರಿಗಣಿಸಿದರೆ ಅಲ್ಲಿ ಮುಖ್ಯವಾಗಿ ಈಗ ಎರಡು ಧಾರ್ಮಿಕ ಘಟಕಗಳಿರುವುದನ್ನು ನಾವು ಗಮನಿಸಬಹುದು. ಕೆಳಗಡೆಯ ಮಂಜುನಾಥ ದೇವಾಲಯ ಮತ್ತು ಅದರ ಪರಿವಾರ ದೇವತೆಗಳದು ಒಂದು ಘಟಕವಾದರೆ, ಮೇಲ್ಗಡೆಯ ಗುಡ್ಡದಲ್ಲಿರುವ ಜೋಗಿಮಠ ಮತ್ತು ಅದರ ಅಂಗ ದೇವತೆಗಳದು ಇನ್ನೊಂದು ಘಟ   ಕ. ಕೆಳಗಡೆಯ ದೇವಾಲಯ ಶೈವ ಸಂಪ್ರದಾಯದ್ದಾದರೆ ಮೇಲ್ಗಡೆಯ ಜೋಗಿ ಮಠ ನಾಥ ಸಂಪ್ರದಾಯದ್ದು. ಶೈವ ಸಂಪ್ರದಾಯ ನಂತರದ ಬೆಳವಣಿಗೆಯೆಂದು ತೋರುತ್ತದೆ. ಬೌದ್ಧ ಧರ್ಮದ ಅವನತಿಯ ನಂತರ ಕದ್ರಿಯಲ್ಲಿ ನಾಥಪಂಥವು ಅಸ್ತಿತ್ವಕ್ಕೆ ಬಂತೆಂಬುದನ್ನು ಈಗಾಗಲೇ ಗಮನಿಸಲಾಗಿದೆ. ನಾಥಪಂಥವು ಅಸ್ತಿತ್ವಕ್ಕೆ ಬಂದ ಪ್ರಾರಂಭದ ಹಂತದಲ್ಲಿ ಈಗ ಮಂಜುನಾಥ ದೇವಾಲಯವಿರುವ ಪ್ರದೇಶವೂ ಜೋಗಿಮಠ (ಸಂಪ್ರದಾಯ)ದ ಅಧೀನದಲ್ಲೇ ಇದ್ದಿರಬೇಕೆಂದು ತೋರುತ್ತದೆ. ಇದಕ್ಕೆ ಕದ್ರಿಯಲ್ಲಿ ಈಗಲೂ ಪುರಾವೆಗಳಿವೆ.

ಇಂದಿಗೂ ಮಂಜುನಾಥ ದೇವಾಲಯದ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಜೋಗಿ ಅರಸರಿಗೆ

[1] ವಿಶೇಷ ಸ್ಥಾನಮಾನಗಳು ಸಲ್ಲುತ್ತವೆ. ತತ್ಸಂಬಂಧವಾಗಿ ಒಂದು ಐತಿಹ್ಯವೇ ಪ್ರಚಲಿತವಿದೆ: ಮಂಜುನಾಥನ ರಥೋತ್ಸವಕ್ಕೆ ಜೋಗಿ ಅರಸರು ಹೋಗಬೇಕು. ಕುದುರೆಮೇಲೆ ಕುಳಿತು ರಥದ ಮುಂದೆ ನಿಂತು “ಆವೋ ಬೇಠಾ ಮಂಜುನಾಥ” ಎಂದು ಮಿಣಿ ಹಿಡಿಯಬೇಕು. ಆಮೇಲೆ ರಥವೆಳೆದರೆ ಗುಡಗುಡನೆ ಹರಿಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಿದ್ದ ನೀಲೇಶ್ವರದ ತಂತ್ರಿಗಳು ಒಂದು ಬಾರಿ “ಆ ಜೋಗಿ ಅರಸನನ್ನೇಕೆ ಬೆಸಗೊಳ್ಳುವುದು! ತಂತ್ರ ತೂಗಿದರಾಯಿತು; ರಥ ಎಳೆದರಾಯಿತು” ಎಂದು ಅವರನ್ನು ಕರೆಯದೆ ಉಪೇಕ್ಷೆ ಮಾಡಿದರಂತೆ. ಆದರೆ ತಂತ್ರ ತೂಗಿ ಬಲಿಹರಣಮಾಡಿ ‘ಗೋವಿಂದಾ’ ಎನ್ನುತ್ತಾ ರಥವೆಳೆದರೆ ಅದು ಮಿಸುಕಾಡಲೇ ಇಲ್ಲವಂತೆ. ಆಗ ಯೋಗಿ ಅರಸರನ್ನು ಕಾಡಿ ಬೇಡಿ ಕರೆತರುವುದು ಅನಿವಾರ್ಯವಾಯಿತಂತೆ. ಅವರು ಬಂದು ತೇರಿನ ಮಿಣಿ ಹಿಡಿದಾಗ ರಥ ಹರಿಯಿತಂತೆ. ಬೇಸತ್ತ ತಂತ್ರಿಗಳು “ನನ್ನ ತಂತ್ರಕ್ಕಿಷ್ಟು ಶಕ್ತಿ ಸಾಕಾಗಲಿಲ್ಲವಲ್ಲಾ!” ಎಂದು ಕ್ರೋಧ – ಅವಮಾನಗಳಿಂದ ತಮ್ಮ ತಂತ್ರ ತೂಗುವ ಕೈಬಟ್ಟಲನ್ನೇ ಬೀಸಿ ಎಸೆದರಂತೆ. ಅದು ಸಮೀಪದ ಹೊಂಡಕ್ಕೆ ಹೋಗಿ ಬಿದ್ದುದರಿಂದ ಅದಕ್ಕೆ ‘ಕೈಬಟ್ಟಲು ಕೆರೆ’ ಎಂಬ ಹೆಸರು ಬಂತಂತೆ. ಅಲ್ಲಿಂದೀಚೆಗೆ ತಂತ್ರಿಗಳು ನೀಲೇಶ್ವರದಿಂದ ಕದ್ರಿಗೆ ಬರುವುದನ್ನೇ ನಿಲ್ಲಿಸಿ ಬಿಟ್ಟರಂತೆ. ಈಗಲೂ ಜೋಗಿ ಅರಸರು ಬಂದು ರಥದ ಹಗ್ಗಕ್ಕೆ ಪ್ರಥಮವಾಗಿ ಕೈನೀಡುವ ಸಂಪ್ರದಾಯವಿದೆ. ಅದಲ್ಲದೆ ಜಾತ್ರೆಯ ಕೊನೆಯ ದಿನ ಅವಭೃತ ಸ್ನಾನದ ಸಂದರ್ಭದಲ್ಲಿ ದೇವರು ಮೃಗಯಾ ವಿಹಾರಕ್ಕೆ ಹೋಗುವ ಶಾಸ್ತ್ರವಿದೆ. ಆಗ ಮಠದ ಅರಸರೇ ಸಾಂಕೇತಿಕ ಬೇಟೆಯಾಡುತ್ತಾರೆ. ಕಂಬವೊಂದಕ್ಕೆ ಎಳನೀರು ಗೊನೆಯನ್ನು ಕಟ್ಟಿ ಅರಸರು ಬಾಣಬ ಇಟ್ಟು ಅವುಗಳಲ್ಲಿ ಒಂದನ್ನು ನೆಲಕ್ಕೆ ಬೀಳಿಸುವುದೇ ಆ ಸಾಂಕೇತಿಕ ಬೇಟೆ.

ಮೇಲೆ ನೋಡಿದ ಐತಿಹ್ಯ ಹಾಗೂ ಸಂಪ್ರದಾಯಗಳ ಆಧಾರದಿಂದ ಮಂಜುನಾಥ ದೇವಾಲಯವೂ ಹಿಂದೆ ಜೋಗಿ ಸಂಪ್ರದಾಯ (ನಾಥ ಪಂಥ)ಕ್ಕೆ ಸೇರಿತ್ತೆಂದು ಹೇಳಲು ಸಾಧ್ಯವಾಗುತ್ತದೆ. ಈಗಣ ‘ಅರಸ’ರಾದ ಮೋಹನನಾಥಜೀಯವರ ಶಿಷ್ಯ ಅಲಕನಾಥರು ಹೇಳುವ ಪ್ರಕಾರ – “ಈ ಮಠಕ್ಕೆ ಬೇಕಾದಷ್ಟು ಆಸ್ತಿಯಿತ್ತು. ರಾಜರ ಮೇಲೆ ದಾದಾಗಿರಿ ಮಾಡಿ ಎಲ್ಲ ಕಿತ್ತುಕೊಂಡು ಬಿಟ್ಟರು”.. ಇದು ಮಠದ ಪರಂಪರೆಯು ವ್ಯಕ್ತಪಡಿಸುವ ಅಭಿಪ್ರಯಾವಾದರೂ ಇದನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ. ಹಿಂದೆ ದೇವಾಲಯದ ಪೂಜಾವಿಧಿಗಳನ್ನು ನಾಥ ಯೋಗಿಗಳೇ ಮಾಡುತ್ತಿದ್ದಿರಬೇಕು. ಒಟ್ಟು ಅಧಿಕಾರವೂ ಅವರಿಗೇ ಇದ್ದಿರಬೇಕು. ಈಗ ಪೂಜಾವಿಧಿ ಶಿವಳ್ಳಿ ಬ್ರಾಹ್ಮಣರ ಪಾಲಿಗೊದಗಿದೆ. ಎಂಡೋಮೆಂಟ್ ವತಿಯಿಂದ ಆಡಳಿತ ಸಮಿತಿ ರಚನೆಯಾಗಿದ್ದು, ಅದರಲ್ಲಿ ನಾಥ ಯೋಗಿಗಳೂ ಓರ್ವ ಸದಸ್ಯರಾಗಿದ್ದಾರೆ. ಉಳಿದಂತೆ ಬ್ರಾಹ್ಮಣ, ಬಂಟ, ಜೋಗಿ, ಹಾಗೂ ಪರಿಶಿಷ್ಟ ಜಾತಿಯ ಒಬ್ಬೊಬ್ಬ ಸದಸ್ಯರಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಪರಿಪಾಠವೂ ಬೆಳೆದಿದೆ. ಆಮಂತ್ರಣದಲ್ಲಿ ಮುಖ್ಯ ಆಗಮನಾಭಿಲಾಷಿಗಳಾಗಿ ಜೋಗಿ ಅರಸರ ಹೆಸರಿರುತ್ತದೆ. ಉದಾಹರಣೆಗೆ ಈ ಬಾರಿ ೧೪.೧.೧೯೯೯ ರಿಂದ ೨೨.೧.೧೯೯೯ ರ ತನಕ ನಡೆದ ವರ್ಷಾವಧಿ ಜಾತ್ರೆಯ ಆಮಂತ್ರಣವನ್ನೇ ಗಮನಿಸಬಹುದು. ಅದರಲ್ಲಿ “…. ಆಗಮಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಂಜುನಾಥ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಶ್ರೀ ಶ್ರೀ ರಾಜಾ ಮೋಹನನಾಥಜೀ ಕಪಲಾನಿ, ಮಠಾಧಿಪತಿ, ಶ್ರೀ ಯೋಗೀಶ್ವರ ಮಠ ಕದ್ರಿ” ಎಂದಿದೆ. ಇದು ದೇವಾಲಯದೊಂದಿಗೆ ಮಠಾಧಿಪತಿಗಳಿಗಿದ್ದ ಪಾರಂಪರಿಕ ಸಂಬಂಧದ ದ್ಯೋತಕವಾಗಿ ನಮಗೆ ಕಂಡು ಬರುತ್ತದೆ.

ಕದ್ರಿಯಲ್ಲಿ ಶಿವಲಿಂಗವನ್ನು ‘ಮಂಜುನಾಥ’ನೆಂದು ಕರೆದು ಆರಾಧಿಸಲಾಗುತ್ತದೆ. ಆದರೆ ಶಿವನಿಗೆ ಸಂಬಂಧಪಟ್ಟ ಯಾವುದೇ ಪುರಾಣಗಳಲ್ಲೂ ಆತನಿಗೆ ‘ಮಂಜುನಾಥ’ ಎಂಬ ಹೆಸರಿರುವ ಬಗ್ಗೆ ಉಲ್ಲೇಖಗಳಿಲ್ಲ. ದೇವಾಲಯಗಳ ಕುರಿತು ಹೇಳುವುದಾದರೆ ಕದ್ರಿ, ಧರ್ಮಸ್ಥಳಗಳಂತಹ ಕೆಲವಡೆಗಳಲ್ಲಿ ಮಾತ್ರ ಶಿವನನ್ನು ‘ಮಂಜುನಾಥ’ನೆಂದು ಕರೆಯಲಾಗುತ್ತದೆ. ಧರ್ಮಸ್ಥಳವಂತೂ ಕದ್ರಿಯ ಸಂಬಂಧದಿಂದ ‘ಮಂಜುನಾಥ’ ದೇವರನ್ನು ಹೊಂದಿದೆ. ಕದ್ರಿಯಲ್ಲಿ ಶಿವನನ್ನು ‘ಮಂಜುನಾಥ’ನೆಂಬ ಹೆಸರಿನಿಂದ ಯಾಕೆ ಕರೆಯಲಾಗಿದೆ? ಎಂಬುದಕ್ಕೆ ಉತ್ತರವನ್ನು ಹುಡುಕುತ್ತಾ ಹೋದಾಗ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಈಗಾಗಲೇ ನಾವು ಗಮನಿಸಿದಂತೆ ‘ಮಂಜುನಾಥ’ ಹೆಸರಿನ ‘ಮಂಜು’ ರೂಪವು ಕದ್ರಿಗೆ ಬೌದ್ಧ ಧರ್ಮದ ಜತೆಗಿದ್ದ ಸಂಬಂಧವನ್ನು ತಿಳಿಯಪಡಿಸುತ್ತದೆ. ಬೋಧಿಸತ್ವನಾಥ ಮಂಜುಶ್ರೀ ಅಥವಾ ಮಂಜುಘೋಷನ ಹೆಸರಿನಿಂದಲೇ ‘ಮಂಜುನಾಥ’ ನಿಷ್ಪನ್ನವಾಗಿರಬೇಕೆಂದು ವಿದ್ವಾಂಸರು ತರ್ಕಿಸಿದ್ದಾರೆ. ಇಲ್ಲಿನ ‘ನಾಥ’ ಪ್ರತ್ಯಯವು ನಾಥ ಸಂಪ್ರದಾಯದೊಂದಿಗೆ ಕದ್ರಿಗಿದ್ದ ಸಂಬಂಧವನ್ನು ಶ್ರುತಪಡಿಸುತ್ತದೆ.[2] ಒಟ್ಟಿನಲ್ಲಿ ಬೌದ್ಧ ಮತ್ತು ನಾಥ ಸಂಪ್ರದಾಯಗಳೆರಡರ ಪ್ರಭಾವದಿಂದಲೇ ಕದ್ರಿಯ ಶಿವಲಿಂಗಕ್ಕೆ ‘ಮಂಜುನಾಥ’ ಎಂಬ ಹೆಸರು ಬಂತೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಇಂದು ಶಿವನನ್ನು ಬಿಟ್ಟರೆ ಬೇರೆ ಯಾವ ಧರ್ಮದ, ಯಾವ ದೇವತೆಯನ್ನೂ ಲಿಂಗರೂಪದಲ್ಲಿ ಆರಾಧಿಸುತ್ತಿಲ್ಲ. ಹಾಗಾದರೆ ಬೌದ್ಧ ಮತ್ತು ನಾಥ ಪಂಥಗಳಿದ್ದ ಕದ್ರಿಯಲ್ಲಿ ಶಿವಲಿಂಗವನ್ನು ಯಾರು? ಮತ್ತು ಯಾಕಾಗಿ ಪ್ರತಿಷ್ಠಾಪಿಸಿದರೆಂಬ ಪ್ರಶ್ನೆಯೇಳುತ್ತದೆ. ಈಗಾಗಲೇ ನೋಡಿದಂಥೆ ಪರಮ ಶಿವಭಕ್ತನಾದ ಕುಂದವರ್ಮನು ಪ್ರತಿಷ್ಠಾಪಿಸಿದುದು ‘ಲೋಕೇಶ್ವರ’ ಮೂರ್ತಿಯನ್ನು. ‘ಲೋಕೇಶ್ವರ’ ನೆಂದರೆ ಬೋಧಿಸತ್ವನಾದ ಅವಲೋಕಿತೇಶ್ವರ ಎಂಬುದನ್ನು ಈ ಹಿಂದೆಯೇ ಗಮನಿಸಲಾಗಿದೆ. ನಾಥ ಯೋಗಿಯಾದ ಮತ್ಸ್ಯೇಂದ್ರನಾಥನಿಂದ ಕದ್ರಿಯಲ್ಲಿ ಶಿವಲಿಂಗವು ಪ್ರತಿಷ್ಠಾಪಿತವಾಯಿತೆಂಬುದನ್ನು ವಿವರಿಸುವ ಐತಿಹ್ಯವೊಂದು ಪ್ರಚಲಿತವಿದೆ[3]. ಗೋವಿಂದ ಪೈಯವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. (ಗೋ.ಸಂ.ಸಂ; ಪು.೬೬೪, ೬೭೨) ಮತ್ಸ್ಯೇಂದ್ರನಾಥನು ಶಿವಲಿಂಗವನ್ನು ಪ್ರತಿಷ್ಠಾಪಿಸುವುದಕ್ಕೆ ಕಾರಣವೂ ಇದೆ. ಪುರಾಣಗಳ ಪ್ರಕಾರ ಶಿವನು ಆತನ ಗುರು. ಆದುದರಿಂದ ಸಹಜವಾಗಿಯೇ ಆತನು ಶಿವನನ್ನು ಲಿಂಗರೂಪದಲ್ಲಿ ಪ್ರತಿಷ್ಠಾಪಿಸಿರಬೇಕು. ಸಾಮಾನ್ಯವಾಗಿ ನಾಥ ಸಂಪ್ರದಾಯದ ಮಠಗಳಲ್ಲಿ ಮತ್ಸ್ಯೇಂದ್ರನಾಥನ ಮೂರ್ತಿಯ ಜಡೆಯಲ್ಲೂ, ಪ್ರಭಾವಳಿಯಲ್ಲೂ ಶಿವನ ಚಿಕ್ಕ ಮೂರ್ತಿಯನ್ನು ರಚಿಸಿರುತ್ತಾರೆ. ಕದ್ರಿ ಗುಡ್ಡದಲ್ಲಿರುವ ಮತ್ಸ್ಯೇಂದ್ರನಾಥನ ಮೂರ್ತಿಯಲ್ಲೂ ಇಂಥ ರಚನೆ ಇದೆ. ಹೀಗೆ ನಾಥ ಯೋಗಿಗಳಿಂದ ಪ್ರತಿಷ್ಠಾಪಿತವಾದ ಶಿವಲಿಂಗಕ್ಕೆ ಗುಡಿ ನಿರ್ಮಾಣವಾಗಿ, ಕಾಲಕ್ರಮದಲ್ಲಿ ಸ್ಥಳೀಯ ಬ್ರಾಹ್ಮಣರ ಪ್ರಭಾವದಿಂದಲಾಗಿ ಅಲ್ಲಿನ ಪೂಜಾವಿಧಿಗಳೆಲ್ಲ ವೈದಿಕೀಕರಣಗೊಂಡಿರಬೇಕು. ಇದೇ ಹಂತದಲ್ಲಿ ದೇವಾಲಯವು ನಾಥ ಪಂಥದ ನೇರ ಹಿಡಿತದಿಂದ ಬೇರ್ಪಟ್ಟು, ಪ್ರತ್ಯೇಕ ಶೈವ ಕೇಂದ್ರವಾಗಿ ಬೆಳೆದಿರಬೇಕು.

ಕದ್ರಿ ಧಾರ್ಮಿಕ ಸಮುಚ್ಚಯದ ಎರಡನೆಯ ಘಟಕವೆಂದರೆ ‘ಕದ್ರಿಗುಡ್ಡ’. ಇದು ಇಂದು ನಾಥ ಪಂಥದ ಸ್ವತಂತ್ರ ಕೇಂದ್ರವಾಗಿ ನಮಗೆ ಕಂಡು ಬರುತ್ತದೆ. ಅಲ್ಲಿರುವ ನಾಥ ಪಂಥದ ಮಠವನ್ನು ಸ್ಥಳೀಯವಾಗಿ ‘ಜೋಗಿಮಠ’ ಎಂದು ಕರೆಯುತ್ತಾರೆ. ನಾಥ ಯೋಗಿಗಳನ್ನು ‘ಜೋಗಿ’ಗಳೆನ್ನುತ್ತಾರೆ. ಮಠಾಧಿಪತಿಗಳನ್ನು ‘ಜೋಗಿಅರಸ’ ರೆಂದು ಕರೆಯುತ್ತಾರೆ. ಕದ್ರಿ ಪರಿಸರದಲ್ಲಿ ‘ಜೋಗಿ’ ಎಂಬ ಒಂದು ಜನ ಸಮುದಾಯವೂ ಇದೆ. ಇದು ನಾಥ ಪಂಥದ ಪ್ರಭಾವಕ್ಕೊಳಗಾದ ಸ್ಥಳೀಯ ಸಮುದಾಯವೊಂದರ ಪರಂಪರೆಯಾಗಿರಬಹುದಾದ ಸಾಧ್ಯತೆ ಇದೆ. ಜೋಗಿ ಮಠದ ಪೀಠಾಧಿಪತಿಗಳು ಉತ್ತರ ಭಾರತದವರು. ಅವರು ಹಿಂದಿ ಮಾತನಾಡುತ್ತಾರೆ. ಆದರೆ ಸ್ಥಳೀಯ ಜೋಗಿ ಸಮುದಾಯದವರು ತುಳು ಭಾಷೆಯನ್ನಾಡುತ್ತಾರೆ. ಜೋಗಿ ಅರಸರು ಮತ್ತು ಅವರ ಶಿಷ್ಯರು ಸನ್ಯಾಸಿಗಳಾಗಿರುತ್ತಾರೆ; ಸ್ಥಳೀಯ ಜೋಗಿ ಸಮುದಾಯದವರು ಹೆಚ್ಚಾಗಿ ಗೃಹಸ್ಥರಾಗಿರುತ್ತಾರೆ. ನಾಥ ಪಂಥದ ಪ್ರಭಾವ ಈಗಲೂ ಸ್ಥಳ ಈಯ ‘ಜೋಗಿ’ ಸಮುದಾಯದ ಜನರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ ಮಚ್ಚೇಂದ್ರನಾಥ; ಗೋಪಾಲನಾಥ, ಕೇಶವನಾಥ ಮುಂತಾದ ಅವರ ಹೆಸರುಗಳನ್ನೇ ಗಮನಿಸಬಹುದು. ನಾಥ ಪಂಥದ ಸನ್ಯಾಸಿಗಳ, ಅದೇ ರೀತಿ ವ್ಯಕ್ತಿಗಳ ಹೆಸರುಗಳ ಕೊನೆಯಲ್ಲಿ ಸಾಮಾನ್ಯವಾಗಿ ‘ನಾಥ’ ಎಂಬ ಪ್ರತ್ಯಯವಿರುತ್ತದೆ.

ಮಠದ ಪರಿಸರವು ಗುಡ್ಡ, ಶ್ಮಶಾನ, ಜಲಸಂಪದ ಮತ್ತು ಮಠದಿಂದ ಕೂಡಿದೆ. ಮಠದ ಪ್ರಮುಖ ದೇವರು ಕಾಲಭೈರವೇಶ್ವರ. ‘ಪರಶುರಾಮ ಧುನಿಯೂ’[4] ಅಲ್ಲಿದೆ. ಮಠದ ಮುಂದಿನ ಬಯಲಿನಲ್ಲಿ ವಿಲಕ್ಷಣವೂ, ವೈವಿಧ್ಯಮಯವೂ ಆದ ಸಣ್ಣಪುಟ್ಟ ತರೆದ ಗುಡಿಗಳಿವೆ. ಅವುಗಳಲ್ಲಿ ನಾಥವರ್ಯರ ವಿಗ್ರಹಗಳಿವೆ. ಅವುಗಳನ್ನು ಜ್ವಾಲಾನಾಥ, ಗೋರಕ್ಷನಾಥ, ಚೌರಂಗಿನಾಥ, ಮತ್ಸ್ಯೇಂದ್ರನಾಥ ಮೊದಲಾದವರ ವಿಗ್ರಹಗಳೆನ್ನುತ್ತಾರೆ. ಮಠದಲ್ಲಿ ಐಕ್ಯರಾದ ‘ಜೋಗಿ ಅರಸರ’ ಕೆಲವು ಸಮಾಧಿಗಳೂ ಅಲ್ಲಿವೆ. ಸ್ವಲ್ಪ ದೂರದಲ್ಲಿ ‘ಸೀತಾಕುಂಡ’ವಿದ್ದು ಕೆಳಗಡೆಯ ದೇವಾಲಯದ ಮುಂದಿರುವ ತೀರ್ಥಕೆರೆಗಳಿಗೆ ಅದರಿಂದಲೇ ನೀರು ಹರಿದು ಹೋಗುತ್ತದೆ. ಅಲ್ಲಿರುವ ಕಟ್ಟೆಯೊಂದನ್ನು ‘ಪರಶುರಾಮ ಕಟ್ಟೆ’[5]ಯೆಂದು ಕರೆಯುತ್ತಾರೆ. ‘ಪಾಂಡವರ ಗುಹೆ’ ಎಂದು ಕರೆಯಲಾಗುವ ಚಿಕ್ಕ ಗುಹೆಗಳೊಳಗಡೆ ಕೊರೆದು ನಿರ್ಮಿಸಲಾದ ಪ್ರಾಚೀನವೆನಿಸುವ ರಚನೆಗಳಿವೆ. ಅಲ್ಲಿಂದ ಕೆಳಕ್ಕಿಳಿದರೆ ಪಾತಾಳ ಭೈರವನ ಗುಡಿಯಿದೆ. ಆ ಗುಡಿಯೊಳಗಡೆ ಪ್ರವೇಶಿಸುವಾಗ ತಲೆಯಮೇಲೆ ವಸ್ತ್ರವಿರಬೇಕೆಂಬ ನಂಬಿಕೆಯಿದೆ.[6] ಅಲ್ಲಿ ‘ಕೈಬಟ್ಟಲು ಕೆರೆ’ ಎಂದು ಕರೆಯಲಾಗುವ ಒಂದು ಹೊಂಡವಿದೆ. ಮಠದಲ್ಲಿ ‘ರೋಟ್‌’ ಎಂಬ ಮಧುರ ಖಾದ್ಯವೊಂದನ್ನು ಪ್ರಸಾದವಾಗಿ ಹಂಚುತ್ತಾರೆ. ಇದನ್ನು ಗೋಧಿ ಹಿಟ್ಟು, ತುಪ್ಪ, ಸಕ್ಕರೆ, ದ್ರಾಕ್ಷಿ, ಬಾದಾಮಿ ಹಾಗೂ ಗೋಡಂಬಿಗಳಿಂದ ತಯಾರಿಸುತ್ತಾರೆ. ಇದಲ್ಲದೆ ಹಣೆಗಿಟ್ಟುಕೊಳ್ಳಲು ಭಸ್ಮ ಪ್ರಸಾದವಿರುತ್ತದೆ.[1] ಕದ್ರಿ ಗುಡ್ಡದಲ್ಲಿರುವ ನಾಥಪಂಥದ ಮಠಕ್ಕೆ ಸ್ಥಳೀಯವಾಗಿ ‘ಜೋಗಿ ಮಠ’ ಎನ್ನುತ್ತಾರೆ. ಆ ಮಠದ ಪೀಠಾಧಿಪತಿಗಳನ್ನು ‘ಜೋಗಿ ಅರಸರು’., ‘ರಾಜರು’ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

[2] ನಾಥ ಯೋಗಿಯ ಹೆಸರಾದ ‘ಮತ್ಸ್ಯೇಂದ್ರನಾಥ’ ರೂಪದಿಂದ ‘ಮಂಜುನಾಥ’ ಎಂಬ ಹೆಸರು ನಿಷ್ಪನ್ನವಾಯಿತೆಂದೂ ಹೇಳಲಾಗುತ್ತದೆ. (ಮತ್ಸ್ಯೇಂದ್ರನಾಥ – ಮಚ್ಚೇಂದ್ರನಾಥ – ಮಚ್ಚೀಂದ್ರನಾಥ – ಮಂಜುನಾಥ – ಮಂಜುನಾಥ). ಇದು ಹೌದೆಂದಾದಲ್ಲಿ ಮೇಲೆ ನೋಡಿದ ‘ಮಂಜುಶ್ರೀ’ ದೇವತೆಯ ಪ್ರಭಾವವನ್ನು ತಿಳಿಯಪಡಿಸುವ ವಾದಕ್ಕೆ ಪುಷ್ಟಿ ದೊರೆಯುವುದಿಲ್ಲ.

[3] ‘ಜಾನಪದದಲ್ಲಿ ಕದ್ರಿ’ ಎಂಬ ಉಪವಿಭಾಗದಲ್ಲಿ ಈ ಐತಿಹ್ಯವನ್ನು ಉಲ್ಲೇಖಿಸಲಾಗಿದೆ.

[4] ‘ಪರಶುರಾಮ ಧುನಿ’ಯ ಕುರಿತಂತೆ ಪ್ರಚಲಿತವಿರುವ ಐತಿಹ್ಯವನ್ನು ‘ಜಾನಪದದಲ್ಲಿ ಕದ್ರಿ’ ಎಂಬ ಉಪವಿಭಾಗದಲ್ಲಿ ವಿವರಿಸಲಾಗಿದೆ.

[5] ಇದರ ಬಗೆಗೂ ‘ಜಾನಪದದಲ್ಲಿ ಕದ್ರಿ’ ಎಂಬ ಉಪವಿಭಾಗದಲ್ಲಿ ವಿವರಣೆಯಿದೆ.

[6] ಸಿಖ್‌ ಹಾಗೂ ಇಸ್ಲಾಂ ಧರ್ಮದ ದೇವಾಲಯಗಳಿಗೆ ಪ್ರವೇಶಿಸುವಾಗಲೂ ತಲೆಯ ಮೇಲೆ ವಸ್ತ್ರವಿರಬೇಕೆಂಬ ನಂಬಿಕೆಯಿದೆ.