ಇದುವರೆಗೆ ನೋಡಿದ ಪ್ರಕಾರ ಕದ್ರಿಯಲ್ಲಿ ಬೌದ್ಧ, ನಾಥ ಹಾಗೂ ಶೈವ ಪಂಥಗಳು ಕಾಲಕಾಲಕ್ಕೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡುವು. ಅಲ್ಲಿ ಬೌದ್ಧಧರ್ಮವಿದ್ದುದನ್ನು ಈಗ ದೇವಾಲಯದಲ್ಲಿರುವ ಮೂರ್ತಿಶಿಲ್ಪ, ವಾಸ್ತುಶಿಲ್ಪ ಹಾಗೂ ಶಾಸನಗಳ ಆಧಾರದಿಂದ ಸಾಬೀತುಪಡಿಸಲಾಗುತ್ತದೆ. ಸುತ್ತು ಮುತ್ತಣ ಜನರ ಮೇಲೆ ಬೌದ್ಧ ಧರ್ಮವು ಪ್ರಭಾವ ಬೀರಿದುದಕ್ಕೆ ಇಂದು ಅಲ್ಲಿ ಯಾವುದೇ ರೀತಿಯ ಕುರುಹುಗಳಿಲ್ಲ. ಆದರೆ ನಾಥಪಂಥವು ಈಗಲೂ ಅಲ್ಲಿ ಜೀವಂತವಾಗಿದೆ. ಕದ್ರಿಗುಡ್ಡದಲ್ಲಿ ನಾಥಪಂಥೀಯ ಮಠವಿದೆ. ಕದ್ರಿಯ ಆಸುಪಾಸಿನಲ್ಲಿ ನಾಥಪಂಥೀಯರಾದ “ಜೋಗಿ” ಜನ ಸಮುದಾಯದವರಿದ್ದಾರೆ. ಹೀಗಿದ್ದರೂ ಕದ್ರಿಯಲ್ಲ ಈಗ ಜನಾಕರ್ಷಣೆಯ ಕೇಂದ್ರವಾಗಿರುವುದು ಮಂಜುನಾಥ ದೇವಾಲಯ. ಶಿವ ದೇವಾಲಯವಾಗಿರುವುದರಿಂದ ಇದನ್ನು ಶೈವ ಧರ್ಮಕ್ಕೆ ಸೇರಿದುದೆನ್ನಬಹುದು. ಆದರೆ ಶೈವರು, ವೈಷ್ಣವರು, ಸ್ಮಾರ್ತರೆನ್ನದೆ “ಹಿಂದು”ಗಳಾದ ಎಲ್ಲರೂ ಈ ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ. ಇಲ್ಲಿ ಪೂಜಾರಿಗಳಾಗಿರುವವರೂ ವೈಷ್ಣವರಾದ ಶಿವಳ್ಳಿ ಬ್ರಾಹ್ಮಣರು. ಪ್ರತಿ ವರ್ಷ ಧನುರ್ಮಾಸ ೩೦ ರಿಂದ ಮಕರ ಮಾಸ ೮ರವರೆಗೆ

[1] ಇಲ್ಲಿ ಒಂಬತ್ತು ದಿನಗಳ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಆ ಸಂದರ್ಭದಲ್ಲಿ ನಾಥಪಂಥೀಯ ಪೀಠಾಧಿಪತಿಗಳಿಗೂ ವಿಶೇಷ ಸ್ಥಾನಮಾನಗಳು ಸಲ್ಲುತ್ತವೆ. ಮೂಲತಃ ಕದ್ರಿಯ ಶಿವಾಲಯ ಕೂಡ ನಾಥ ಪಂಥೀಯರಿಂದಲೇ ಹುಟ್ಟಿಕೊಂಡಿತೆಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಆದರೆ ಇಂದು ನಾಥಪಂಥ ಮತ್ತು ಅದಕ್ಕೆ ಸಂಬಂಧಿಸಿದ ಮಠ ಅಲ್ಲಿ ಗೌಣವಾಗಿ ಮಂಜುನಾಥ ದೇವಾಲಯವೇ ಪ್ರಧಾನವಾಗಿದೆ. ದೇವಾಲಯಕ್ಕೆ ಬಂದ ಎಲ್ಲಾ ಭಕ್ತಾದಿಗಳು ಗುಡ್ಡದ ಮೇಲಿರುವ ಮಠಕ್ಕೆ ಹೋಗುವುದಿಲ್ಲ. ಮಠವು ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯದಿದ್ದುದೇ ಇದಕ್ಕೆ ಕಾರಣವೆಂದು ಹೇಳಬಹುದು. ದೇವಾಲಯವಾದರೆ ಅಸಂಖ್ಯ ಭಕ್ತರನ್ನು ಆಕರ್ಷಿಸುವ ರೀತಿಯಲ್ಲಿ ವಿನೂತನವಾಗಿ ಬೆಳೆಯುತ್ತಲಿದೆ. ಅಲ್ಲಿ ಭಕ್ತರು ಒಂದು ಬಗೆಯ ‘ಭ್ರಾಮಕ ನೆಮ್ಮದಿ’ಯನ್ನು ಕಂಡು ಕೊಳ್ಳುತ್ತಾರೆ. ಅಂತಹ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಕದ್ರಿಯ ಮಂಜುನಾಥ ದೇವಾಲಯವು ಇಂದು ನಾಥಪಂಥದ ನೇರ ಹಿಡಿತದಿಂದ ತಪ್ಪಿಸಿಕೊಂಡು ಸಂಪೂರ್ಣವಾಗಿ ವೈದಿಕೀಕರಣಗೊಂಡು ಬೆಳೆದು ನಿಂತಿದೆ. ಧಾರ್ಮಿಕ ನಂಬಿಕೆಯ ಕಾರಣವೋ ಏನೋ! ಕೆಲವು ವಿಶೇಷ ಸಂದರ್ಭಗಳಲ್ಲಷ್ಟೆ ನಾಥಪಂಥೀಯ ಸ್ವಾಮಿಗಳ ಹಸ್ತಕ್ಷೇಪ ದೇವಾಲಯದಲ್ಲಿ ಕಂಡು ಬರುತ್ತದೆ. ಹೀಗೆ ‘ಧರ್ಮ’ದ “ಅವಸ್ಥಾಂತರ”ಕ್ಕೆ ಕದ್ರಿಯು ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ನಾಡಿನಾದ್ಯಂತ ಇರಬಹುದಾದ ಇಂಥ ಧಾರ್ಮಿಕ ಸ್ಥಿತ್ಯಂತರದ ಕೇಂದ್ರಗಳ ಬಗೆಗೆ ಕೂಲಂಕುಷವಾಗಿ ಅಧ್ಯಯನ ನಡೆಸಿದರೆ ವಿಶಿಷ್ಟವಾದ ಧಾರ್ಮಿಕ ಇತಿಹಾಸವೊಂದು ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.
[1] ಇದು ಜನವರಿ ೧೪ ರಿಂದ ೨೨ ರವರೆಗಿನ ಕ್ಯಾಲೆಂಡರ್ ಅವಧಿಗೆ ಸರಿ ಹೊಂದುತ್ತದೆ.