-೧-

ಚರಿತ್ರೆಯ ಗತಿ ಯಾವಾಗಲೂ ಪ್ರಗತಿಗಾಮಿಯಾಗಿರುತ್ತದೆ ಎಂದು ಹೇಳಲು ಬಾರದು. ಸಾಂಪ್ರದಾಯಿಕವಾದ ಹಾದಿಯನ್ನು ತಿರಸ್ಕರಿಸಿ, ತನ್ನ ಕಾಲವನ್ನೂ ಮೀರಿ ಅದ್ಭುತವಾದ ಪ್ರಗತಿಪರ ಮನೋಧರ್ಮಕ್ಕೆ ಹೊರಳಿದ ಚರಿತ್ರೆ, ಇದ್ದಕ್ಕಿದ್ದ ಹಾಗೆ ಮತ್ತೆ ಹಿಮ್ಮರಳಿ ಸಂಪ್ರದಾಯಕ್ಕೇ ಜೋತುಬೀಳುವ ಸಂದರ್ಭಗಳೂ ಉಂಟು. ಕನ್ನಡ ಸಾಹಿತ್ಯ ಪಂರಪರೆಯ ಒಂದು ಹಂತದಲ್ಲಿ ಕಾಣಿಸಿಕೊಂಡ ವಚನ ಚಳುವಳಿ ಹಾಗೂ ಅನಂತರದ ಹರಿದಾಸ ಚಳುವಳಿ ಈ ಮಾತಿಗೆ ನಿದರ್ಶನವಾಗಿದೆ.

ವಚನ  ಚಳುವಳಿಗಾಗಲಿ ಹರಿದಾಸ ಚಳುವಳಿಗಾಗಲೀ ಮೂಲ ಪ್ರೇರಣೆ ಒಂದೇ: ಅದು ಧರ್ಮಶ್ರದ್ಧೆ, ಹಾಗೂ ಅದರ ಅಂಗವಾದ ಭಕ್ತಿ. ಒಂದಕ್ಕೆ ಹರ ಭಕ್ತಿ ಮೂಲ ದ್ರವ್ಯವಾದರೆ ಇನ್ನೊಂದಕ್ಕೆ ಹರಿಭಕ್ತಿ. ಆದರೆ ವಚನಕಾರರ ಆಂದೋಲನ ಸಂಪ್ರದಾಯವನ್ನು ಪ್ರಶ್ನಿಸಿದಷ್ಟು, ಪ್ರತಿಭಟಿಸಿದಷ್ಟು ಮತ್ತು ವೈಚಾರಿಕವಾದಷ್ಟು ದಿಟ್ಟತನವನ್ನು ಹರಿದಾಸ ಚಳುವಳಿ ತೋರಿಸಲಿಲ್ಲ. ವೈದಿಕ ಧರ್ಮದ ತಿರುಳಾದ ವರ್ಣಾಶ್ರಮ ಧರ್ಮವನ್ನು ಪರಿಶುದ್ಧವಾದ ವಿಷ್ಣುಭಕ್ತಿಯ ತಳಹದಿಯ ಮೇಲೆ ನಿಲ್ಲಿಸಿದ ಮಧ್ವಾಚಾರ್ಯರ ಸಿದ್ಧಾಂತದ ಪ್ರತಿಪಾದನೆಯನ್ನು ಉದ್ದೇಶವಾಗಿ ಉಳ್ಳ ಈ ಹರಿದಾಸ ಚಳುವಳಿ ‘ಭಕ್ತಿ’ಯ ಮೇಲೆ ಒತ್ತುಕೊಟ್ಟ ಕಾರಣದಿಂದ, ‘ವರ್ಣಾಶ್ರಮ ಧರ್ಮ’ದ ಚೌಕಟ್ಟಿನಲ್ಲಿಯೆ ಒಂದಷ್ಟು ಉದಾರತೆಯನ್ನು ತಂದಿತಾದರೂ, ತನಗಿಂತ ಹಿಂದಿನ ಶರಣ ಚಳವಳಿಯಂತೆ, ವರ್ಣಾಶ್ರಮಧರ್ಮದ ಕಲ್ಪನೆಯನ್ನೆ ಮುರಿದು, ವ್ಯಕ್ತಿವ್ಯಕ್ತಿಗಳ ನಡುವಣ ತಾರತಮ್ಯವನ್ನು ತಿರಸ್ಕರಿಸಿ, ಸಮಾನತೆಯನ್ನು ಪ್ರತಿಪಾದಿಸುವಷ್ಟು ಪ್ರಗತಿಗಾಮಿಯಾಗಲಿಲ್ಲ. ಇಂಥ ಒಂದು ಸಂದರ್ಭದಲ್ಲಿ, ಬಹುಮಟ್ಟಿಗೆ ಪ್ರತಿಷ್ಠಿತ ಸಾಮಾಜಿಕ ವರ್ಗದವರಿಂದ ರೂಪುಗೊಂಡ ಈ ಆಂದೋಲನದಲ್ಲಿ, ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದು ಸೇರಿಕೊಂಡ ಕನಕದಾಸರಂಥವರು, ಅಂದಿನ ಇತರ ಪ್ರಮುಖ ಹರಿದಾಸರೊಂದಿಗೆ ಅಥವಾ ಕೀರ್ತನಕಾರರೊಂದಿಗೆ ಹೆಗಲೆಣೆಯಾಗಿ ನಿಂತದ್ದು ಒಂದು ಆಶ್ಚರ್ಯವೇ ಸರಿ. ಅಷ್ಟೇ ಅಲ್ಲ, ಈ ಪ್ರತಿಷ್ಠಿತರ ಆಂದೋಲನದ ನಡುವೆ, ಅಪ್ರತಿಷ್ಠಿತ ವರ್ಗದ ಈ ಭಕ್ತ ತನ್ನ ವ್ಯಕ್ತಿ ವಿಶಿಷ್ಟತೆಗಾಗಿ ಎದುರಿಸಬೇಕಾಗಿ ಬಂದ ಸವಾಲುಗಳೂ ಸಂಘರ್ಷಗಳೂ ಸ್ವಾರಸ್ಯವಾಗಿವೆ.

ಕನಕದಾಸರ ವಿಶಿಷ್ಟತೆ ಇರುವುದು ಅವರು ದಾಸರಲ್ಲಿ (ಕೀರ್ತನಕಾರರಲ್ಲಿ) ಕವಿಗಳು ಎಂಬ ಸಂಗತಿಯಲ್ಲಿ. ಇದು ದಾಸ ಪರಂಪರೆಯ ಇತರರಿಂದ ಅವರನ್ನು ಪ್ರತ್ಯೇಕಿಸುವ ಮುಖ್ಯ ಲಕ್ಷಣವಾಗಿದೆ. ಅವರು ತಮ್ಮ ಕೀರ್ತನೆಗಳ ಮೂಲಕ ಅಂದಿನ ಹರಿದಾಸ ಪರಂಪರೆಯಲ್ಲಿ ಸುಭದ್ರವಾದ ಸ್ಥಾನವನ್ನು ಗಳಿಸಿಕೊಂಡಂತೆಯೇ, ತಮ್ಮ ಕಾವ್ಯ ನಿರ್ಮಿತಿಯಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಎರಡನೆಯದಾಗಿ, ಕೀರ್ತನಕಾರರಾದ ಅವರು, ಆ ಸಂಪ್ರದಾಯದ ಇತರರಂತೆ ಕೇವಲ ‘ಮಾಧ್ವಭಕ್ತಿ’ ಹಾಗೂ ‘ಸಿದ್ಧಾಂತ’ಗಳಿಗೆ ಕಟ್ಟು ಬೀಳದೆ, ಒಂದು ಉದಾರವಾದೀ ಧಾರ್ಮಿಕ ನಿಲುವನ್ನು ಪ್ರಕಟಿಸುತ್ತಾರೆ. ತಾವು ‘ಕುರುಬರು’ ಎಂಬ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ತಮ್ಮ ಭಕ್ತಿಯ ನಿಲುವನ್ನು-

ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವೆ ನಮ್ಮಜ್ಜ ನರಕುರಿಯ ಹಿಂಡುಗಳ||

ಎಂಬಂಥ ರೂಪಕದಲ್ಲಿ ಹೇಳಬಲ್ಲವರಾಗಿದ್ದಾರೆ. ಭಕ್ತ ಭಗವಂತನ ಸಂಬಂಧವನ್ನು,  ಕುರಿ ಕುರುಬ ರೂಪಕದಲ್ಲಿ ಹೇಳುವುದು ಕನಕದಾಸರಂಥವರಿಗೆ ಮಾತ್ರ ಸಾಧ್ಯ; ಈ ಬಗೆಯ ಅವೈದಿಕ ಪರಂಪರೆಯ ಪ್ರತೀಕಗಳನ್ನು ಬೇರೆಯವರು ಕೊಡಲಾರರು. ವೈದಿಕ ಸಂಪ್ರದಾಯದ ಕೀರ್ತನಕಾರರ ಅಭಿವ್ಯಕ್ತಿ ಏನಿದ್ದರೂ ‘ಗೋವು’ ‘ಗೋಪಾಲಕ’ನ ರೂಪಕದ ಮೂಲಕ ಸಾಧ್ಯ. ಕನಕದಾಸರು, ಈ ಕೀರ್ತನೆಯಲ್ಲಿ ಈ ರೂಪಕವನ್ನು ವಿಸ್ತರಿಸುವ ಕ್ರಮವೂ ತುಂಬ ಸ್ವಾರಸ್ಯವಾಗಿದೆ; ಅವರ ಶೂದ್ರತ್ವಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ‘ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡ ಬನ್ನಿರೇ’ ಎಂಬ ಧಾಟಿಯ ಮತ್ತು ಗ್ರಾಮ್ಯ ಭಾಷೆಯಲ್ಲಿ ಅವರು ಬರೆದ ಇನ್ನೂ ಹಲವು ಕೀರ್ತನೆಗಳನ್ನು ನೋಡಿದಾಗ, ಮತ್ತು ರಾಮಧಾನ್ಯ ಚರಿತೆಯ ವಸ್ತು ನಿರ್ವಹಣೆಯನ್ನು ಗಮನಿಸಿದಾಗ, ಕನಕದಾಸರು ಅಂದಿನ ಅಪ್ರತಿಷ್ಠಿತ ಸಾಮಾಜಿಕಸ್ತರದಿಂದ ಬಂದ ಏಕೈಕ ಕೀರ್ತನಕಾರರು ಎಂಬುದು ಖಚಿತವಾಗುತ್ತದೆ.

ಇದರಿಂದಾಗಿ ಅವರು ವೈಚಾರಿಕವಾಗಿ ಹಾಗೂ ಸಾಮಾಜಿಕವಾಗಿ ಎದುರಿಸಬೇಕಾಗಿ ಬಂದ ಬಿಕ್ಕಟ್ಟುಗಳು, ಹಾಗೂ ಸಂಘರ್ಷಗಳು ಕಡಿಮೆಯೇನಲ್ಲ. ಇವು ಅವರ ಕೀರ್ತನೆಗಳಲ್ಲಿ ಮತ್ತು ಅವರನ್ನು ಕುರಿತ ಐತಿಹ್ಯಗಳಲ್ಲಿ ಕಾಣಿಸಿಕೊಂಡಿವೆ. ಒಂದೆಡೆ-

ಕನಕದಾಸನ ಮೇಲೆ ದಯಮಾಡಲು ವ್ಯಾಸ
ಮುನಿ ಮಠಿಕರೆಲ್ಲ ದೂರುತಿಹರೋ||

ಎಂಬ ಪುರಂದರದಾಸರ ಕೀರ್ತನೆಯ ದಾಖಲೆಯಲ್ಲಿ, ಗುರುವ್ಯಾಸರಾಯರು ಶೂದ್ರನಾದ ಕನಕದಾಸರ ಮೇಲೆ ವಿಶೇಷ ಪ್ರೀತಿ ತೋರಿಸಿದ ಕಾರಣದಿಂದ, ಅಂದಿನ ಸಂಪ್ರದಾಯಸL ಬ್ರಾಹ್ಮಣರು ತೋರಿದ ಪ್ರತಿಕ್ರಿಯೆಯ ಚಿತ್ರವೊಂದು ಬಿಚ್ಚಿಕೊಳ್ಳುತ್ತದೆ. ಅಂಥ ಸಂದರ್ಭದಲ್ಲಿಯೇ-

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರಾ?||
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ||
ಆತ್ಮಾಂತರಾತ್ಮ ನೆಲೆಯಾದಿ ಕೇಶವ
ಆತನೊಲಿದ ಮೇಲೆ ಯಾತರ ಕುಲವಯ್ಯ?||

ಎಂದು ಪ್ರಶ್ನೆ ಮಾಡುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲು  ಮಾಡುತ್ತ, ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತಾರೆ.

ಅವರ ಬಗ್ಗೆ ಪ್ರಚಲಿತವಾದ ಒಂದೆರಡು ದಂತಕತೆಗಳು ಅವರು ಏರಿದ ಎತ್ತರವನ್ನು ಸೂಚಿಸುತ್ತವೆ. ಬಾಳೆಯ ಹಣ್ಣನ್ನು ಯಾರೂ ಇಲ್ಲದೆಡೆ ತಿಂದು ಬನ್ನಿ ಎಂದು ಗುರುಗಳು ತಮ್ಮ ಶಿಷ್ಯರಿಗೆ ಹೇಳಿದಾಗ, ಆ ಹಣ್ಣನ್ನು ತಿನ್ನದೆ ತಮ್ಮ ಮುಂದೆ ಬಂದ ಶಿಷ್ಯ ಕನಕದಾಸನ ತಿಳುವಳಿಕೆಯನ್ನು ಗುರು ವ್ಯಾಸರಾಯರು ಮೆಚ್ಚಿಕೊಂಡದ್ದಾಗಲಿ, ಯಾರು ಮೊದಲು ವೈಕುಂಠಕ್ಕೆ ಹೋಗಬಲ್ಲರು ಎಂದು ಕನಕದಾಸನನ್ನು ಗುರುಗಳು ಪ್ರಶ್ನಿಸಿದಾಗ ‘ನಾನು ಹೋದರೆ ಹೋಗಬಹುದು’ ಎಂಬ ಉತ್ತರದ ಮೂಲಕ ಕನಕದಾಸರು ಸೂಚಿಸಿದ ಅಹಂ ನಿರಸನದ ಸಂಗತಿಯಾಗಲಿ, ಕನಕದಾಸರ ತತ್ವ ಜ್ಞಾನಕ್ಕೆ ಸಾಕ್ಷಿಯಾಗಿವೆ. ಉಡುಪಿಯ ‘ಕನಕನ ಕಿಂಡಿ’ಯ ಪ್ರಸಂಗವಂತೂ, ಸಾಮಾಜಿಕವಾಗಿ ಅಂದಿನ ಪ್ರತಿಷ್ಠಿತ ವರ್ಗದವರ ಧೋರಣೆಗೆ ಅರ್ಥವತ್ತಾದ ಒಂದು ಪ್ರತೀಕವಾಗಿದೆ. ವಚನ ಚಳುವಳಿಯ ಸಂದರ್ಭದಲ್ಲಿ ಈ ಬಗೆಯ ಧೋರಣೆಯನ್ನು ಪ್ರತಿಭಟಿಸಲೆಂದೇ, ಶರಣರು ದೇವಸ್ಥಾನಗಳನ್ನು ನಿರಾಕರಿಸಿದರು ಮತ್ತು ಕನಕದಾಸರಂಥವರು, ವಚನಕಾರರ ಚಳುವಳಿಯ ಸಂದರ್ಭದಲ್ಲಿ ಬದುಕಿದ್ದರೆ, ಈ ಬಗೆಯ ಪ್ರಸಂಗಗಳೆ ಉದ್ಭವಿಸುತ್ತಿರಲಿಲ್ಲವೆಂಬ ಸಂಗತಿಯನ್ನು ನೆನೆದರೆ, ಈ ಎರಡು ಕಾಲಮಾನಗಳ ಚರಿತ್ರೆಯ ಗತಿಯ ಸ್ವರೂಪ ಸ್ವಯಂ ಸ್ಪಷ್ಟವಾಗುತ್ತದೆ.

ಇಂಥ ಪರಿಸರದ ನಡುವೆಯೂ ಕನಕದಾಸರು ತಮ್ಮ ದಾರಿಯನ್ನು ತಾವೇ ಕಂಡುಕೊಂಡವರು. ಒಂದು ಕೀರ್ತನೆಯಲ್ಲಿ-

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ-ತುತ್ತು ಹಿಟ್ಟಿಗಾಗಿ||

ಎಂದು ಲೋಕಜೀವನವನ್ನು ವ್ಯಾಖ್ಯಾನ ಮಾಡುತ್ತಾ, ಅದೇ ಕೀರ್ತನೆಯ ಕೊನೆಯ ಚರಣಗಳಲ್ಲಿ-

ಉನ್ನತ ಕಾಗಿನೆಲೆಯಾದಿ ಕೇಶವನ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ

ಎನ್ನುತ್ತಾರೆ. ಈ ಕೀರ್ತನೆಯ ಮೊದಲ ಚರಣಗಳ ಮೂಲಕ ವಿವರಿತವಾಗುವ ಲೋಕ ಜೀವನ ಹಾಗೂ ಕೊನೆಯ ಚರಣಗಳ ಮೂಲಕ ಸೂಚಿತವಾಗುವ ಉದ್ದೇಶ, ಈ ಎರಡೂ ಮನುಷ್ಯನ ಅಸ್ತಿತ್ವದ, ಅಂದರೆ ‘ಇರುವ’ ಹಾಗೂ ನಿಜವಾಗಿ ‘ಇರಬೇಕಾದ’ ಎರಡು ನೆಲೆಗಳನ್ನು ಸೂಚಿಸುತ್ತದೆ.

ಮೊದಲ ನೆಲೆಯಿಂದ ಅಂದರೆ ‘ಹೊಟ್ಟೆಗಾಗಿ’, ‘ಗೇಣು ಬಟ್ಟೆಗಾಗಿ’ ಬದುಕುವ ಹಂತದಿಂದ, ‘ಮುಕ್ತಿಗಾಗಿ ಆನಂದಕ್ಕಾಗಿ’ ಬದುಕುವ ಹಂತಕ್ಕೆ ಏರಬೇಕಾದರೆ ಇರುವ ಸಾಧನವೆಂದರೆ ‘ಉನ್ನತ ಕಾಗಿನೆಲೆಯಾದಿ ಕೇಶವನ ಧ್ಯಾನವನ್ನು ಮನಮುಟ್ಟಿ’ ಮಾಡುವ ಧರ್ಮಶ್ರದ್ಧೆ ಅಥವಾ ಭಕ್ತಿ. ಈ ನೆಲೆಯಲ್ಲಿಯೆ ವ್ಯಕ್ತಿ ಬೇರೊಂದು ಅಧಿದೈವಕ್ಕೆ ದಾಸನಾಗುತ್ತಾನೆ. ಹೀಗೆ ತನಗಿಂತ ದೊಡ್ಡದಾದ ದೈವಕ್ಕೆ ‘ದಾಸ’ನಾಗುವುದು ಅಥವಾ ಶರಣಾಗುವುದೆಂದರೆ ವಾಸ್ತವವನ್ನು ಹಾಗೂ ವಾಸ್ತವದ ‘ಅಧೀನತೆ’ಗಳನ್ನು ಮೀರುವುದು. ಈ ‘ಅಧೀನತೆ’ಗಳನ್ನು ಮೀರುವುದರಿಂದ ಒದಗುವ ದಿಟ್ಟತನ, ಪ್ರತಿಭಟನೆಯ ಕೆಚ್ಚು, ಸಂಪ್ರದಾಯ ವಿರೋಧೀ  ಧೋರಣೆಗಳು, ಸ್ವಾತ್ಮವಿಮರ್ಶೆ ಮತ್ತು ಲೋಕವಿಮರ್ಶೆ, ಸಾಮಾನ್ಯ ಜನದೊಂದಿಗೆ ಬೆರೆಯುವ ಹಾಗೂ ಅವರಿಗೆ ಅರ್ಥವಾಗುವ ಭಾಷೆಯ ಮೂಲಕ ಪರಮಾರ್ಥವನ್ನು ತಿಳಿಸುವ ಲಕ್ಷಣಗಳು ವ್ಯಕ್ತಿತ್ವದೊಳಕ್ಕೆ ಮೈಗೂಡಿಕೊಳ್ಳುತ್ತವೆ. ಅಂದಿನ ಭಕ್ತಿ ಪಂಥದ ಕೊಡುಗೆಯಾದ ಈ ಎಲ್ಲ ಲಕ್ಷಣಗಳೂ ಕನಕದಾಸರ ವ್ಯಕ್ತಿತ್ವದಲ್ಲಿ ಮೇಳವಿಸಿವೆ.

-೨-

ಪುರಂದರದಾಸರ ಕೀರ್ತನೆಗಳ ಸಂಖ್ಯೆಗೆ ಹೋಲಿಸಿದರೆ ಕನಕದಾಸರ ಕೀರ್ತನೆಗಳು ಹೆಚ್ಚೇನೂ ಇಲ್ಲ; ಆದರೆ ಕನಕದಾಸರ ಕೀರ್ತನೆಗಳ ಸತ್ವವನ್ನು ಗಮನಿಸಿದರೆ, ಅವು ಪುರಂದರದಾಸರ ಕೀರ್ತನೆಗಳ ಸತ್ವದೊಂದಿಗೆ ಸಮಸ್ಪರ್ಧಿಯಾಗಬಲ್ಲವು. ಹಾಗೆ ನೋಡಿದರೆ ಪುರಂದರದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತಿನೆಗಳಲ್ಲಿ ಕಾವ್ಯಗುಣ ಒಂದು ಕೈ ಮಿಗಿಲಾಗಿಯೇ ಇರುವಂತೆ ತೋರುತ್ತದೆ. ಅದಕ್ಕೆ  ಕಾರಣ ಕನಕದಾಸರು ಪ್ರಧಾನತಃ ಕವಿಗಳು ಎನ್ನುವುದೇ ಆಗಿದೆ. ಪುರಂದರದಾಸರ ಕೀರ್ತನೆಗಳಲ್ಲಿಯಂತೆ ಮುಖ್ಯವಾದ ಕಾವ್ಯಗುಣ ಕೇವಲ ಪಲ್ಲವಿಯಲ್ಲಿ ಮಡುಗಟ್ಟಿ, ಉಳಿದ ಚರಣಗಳಲ್ಲಿ ಅದರ ಸಮರ್ಥನೆಯ ತರ್ಕವಾಗಿಯೋ ಅಥವಾ ಪಲ್ಲವಿಯಲ್ಲಿನ ಧ್ವನಿಯನ್ನು ವಾಚ್ಯವಾಗಿ ವಿವರಿಸುವ ಪದ್ಧತಿಯಲ್ಲಿಯೋ ಪರ‍್ಯವಸಾನವಾಗುವುದು ಕನಕದಾಸರಲ್ಲಿ ಕಡಮೆಯೆಂದೇ ಹೇಳಬಹುದು. ಕನಕದಾಸರಲ್ಲಿ ಕಂಡುಬರುವ ಆಶ್ಚರ್ಯ, ಜಿಜ್ಞಾಸೆ, ಕಲ್ಪಕತೆಗಳು ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು. ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎನ್ನುವ ಅವರ ಕೀರ್ತನೆಯಲ್ಲಿ ಹೆಜ್ಜೆ ಹೆಜ್ಜೆಗೂ ವಿಸ್ತರಿಸುತ್ತಾ ಹೋಗುವ ಆಶ್ಚರ್ಯಮೂಲವಾದ ಜಿಜ್ಞಾಸೆ ತನ್ನ ವಿಚಾರದ ವಿಲಾಸದಿಂದ, ತಾತ್ವಿಕ ಜಿಜ್ಞಾಸೆಯಲ್ಲದೆ ಸೌಂದರ್ಯದ ಜಿಜ್ಞಾಸೆಯೂ ಆಗಿ, ಕಡೆಗೆ ಈ ಲೋಕದ ಮೂಲಭೂತ ವಿಸ್ಮಯದ ಹೊಳಹಿನಲ್ಲಿ ನಿಲುಗಡೆಯನ್ನು ಕಂಡುಕೊಳ್ಳುವ ರೀತಿ ಅಪೂರ್ವವಾಗಿದೆ. ‘ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೇ’ -ಎಂದು ಪಶ್ಚಿಮರಂಗನಾಥನನ್ನು ಕುರಿತು ಕಟ್ಟಿದ ಕೀರ್ತನೆಯೊಳಗಣ ಕಲ್ಪಕತೆ ಮೆಚ್ಚತಕ್ಕದ್ದಾಗಿದೆ. ರಂಗನಾಥನನ್ನು ಕುರಿತು ಅವರು ಹಾಕಿದ ಪ್ರಶ್ನೆಗೆ ಅವರು ಪುರಾಣ ಪ್ರಪಂಚದಿಂದ ಎತ್ತಿಕೊಂಡ ಉತ್ತರಮಾಲಿಕೆ ಪುರಂದರದಾಸರನ್ನು ಅನುಕರಿಸಿದರೂ, ‘ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನ ಎಬ್ಬಿಸುವರೊಬ್ಬರನು ಕಾಣೆ’ -ಎನ್ನುವ ವಿಷಾದಪೂರ್ಣವಾದ ಮುಕ್ತಾಯ ಅಭೂತಪೂರ್ವ- ವಾಗಿದೆ; ಕನಕದಾಸರು ದಾಸರಲ್ಲಿ ಕವಿಗಳು ಎನ್ನುವ ಮಾತಿಗೆ ಜೀವಂತಸಾಕ್ಷಿಯಾಗಿದೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ -ಎಂಬ ಕೀರ್ತನೆಯಲ್ಲಿನ ನಿಸ್ಸಂಶಯ ಶ್ರದ್ಧೆ, ಅದು ತಾರ್ಕಿಕವಾಗಿ ಸಮರ್ಥಿತವಾಗಿರುವ ರೀತಿ ಪರಿಣಾಮಕಾರಿಯಾಗಿದೆ. ಅವರ ಗುಣ ವಿಶಿಷ್ಟವಾದ ಕೆಲವೇ ಕೀರ್ತನೆಗಳನ್ನು ಬಿಟ್ಟರೆ, ಅವರನ್ನು ಹರಿದಾಸ ಪರಂಪರೆಯೊಳಗೆ ನಿಲ್ಲಿಸುವಂಥ ಇನ್ನೊಂದು ಕೃತಿ ‘ಹರಿಭಕ್ತಿಸಾರ’. ನೂರಹತ್ತು ಪದ್ಯಗಳ ಈ ಕೃತಿ ಭಾವಗೀತಾತ್ಮಕವಾದ ಖಂಡಕಾವ್ಯದಂತಿದೆ. ವಾಸ್ತವವಾಗಿ ಇದು ಷಟ್ಪದೀ ರೂಪದ ಶತಕವಲ್ಲದೆ ಬೇರೆ ಅಲ್ಲ. ‘ದೇವ ರಕ್ಷಿಸು ನಮ್ಮನನವರತ’ ಎಂದು ಕಡೆಯಾಗುವ ಒಂದೊಂದು ಪದ್ಯದಲ್ಲೂ ಕನಕದಾಸರ ಭಕ್ತಹೃದಯದ ಮೊರೆ ಅತ್ಯಂತ ಸಹಜವಾಗಿ, ಕರುಣಾಪೂರ್ಣವಾಗಿ ಕಿವಿಗೆ ಬೀಳುತ್ತದೆ. ಅದು ತನ್ನ ಕಳಕಳಿಯಿಂದ ಹರಿಹರನ ಪಂಪಾಶತಕ, ರಕ್ಷಾಶತಕಗಳ ನೆನಪನ್ನು ತರುತ್ತದೆ. ಹರಿಭಕ್ತಿಸಾರದ ನಿರರ್ಗಳವಾದ ಓಟ, ಅದರಲ್ಲಿ ವ್ಯಕ್ತವಾಗಿರುವ ಜೀವದ ಅನಿತ್ಯತಾಭಾವ, ಅನನ್ಯ ಶರಣಾಗತಿ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಇದುವರೆಗೂ ವೃತ್ತರೂಪದಲ್ಲಿ ಪರಿಚಿತವಾದ ಶತಕ, ಕನಕದಾಸರಲ್ಲಿ ಷಟ್ಪದೀ ರೂಪಧಾರಣೆ ಮಾಡಿದ್ದು ಒಂದು ವಿಶೇಷದ ಸಂಗತಿಯಾಗಿ ತೋರುತ್ತದೆ.

ಕನಕದಾಸ ಸಾಹಿತ್ಯದ ಇನ್ನೊಂದು ಮುಖ ಅವರ ನಳಚರಿತ್ರೆ, ಮೋಹನ ತರಂಗಿಣಿ ಹಾಗೂ ರಾಮಧಾನ್ಯ ಚರಿತೆ. ಇವು ಮೂರೂ ವಸ್ತುನಿಷ್ಠ ಕೃತಿಗಳು. ಇವು ಭಕ್ತಿಸಾಹಿತ್ಯವಲ್ಲ ಅವರ ಕೀರ್ತನೆಗಳಂತೆ; ಇವು ಭಕ್ತಿಪರಂಪರೆಗೆ ಸೇರಿದ ಕವಿ ನಿರ್ಮಿತ ಕೃತಿಗಳು. ಇವುಗಳಲ್ಲಿ ನಳಚರಿತ್ರೆ ಮತ್ತು ಮೋಹನ ತರಂಗಿಣಿಗಳ ವಸ್ತು, ಪುರಾಣೇತಿಹಾಸದಿಂದ ಎತ್ತಿಕೊಂಡುದಾದರೆ, ಅವರ ರಾಮಧಾನ್ಯ ಚರಿತೆ ಸ್ವತಂತ್ರವಾದ, ಕವಿಕಲ್ಪನಾಸಿದ್ಧವಾದ ಕೃತಿ. ಹೀಗೆ ವಸ್ತು ವೈವಿಧ್ಯದ ದೃಷ್ಟಿಯಿಂದಲೂ ಕನಕದಾಸರ ವಿಶಿಷ್ಟತೆ ಎದ್ದು ಕಾಣುವಂಥಾದ್ದು.

ನಳಚರಿತ್ರೆ, ಮೋಹನತರಂಗಿಣಿಗಳು ಕನಕದಾಸರು ಭಕ್ತಿಯ ಪ್ರತಿಪಾದನೆಗೆ ಖಂಡಿತ ಬರೆದವಲ್ಲ; ಹುಡುಕಿ ನೋಡಿದವರಿಗೆ ಕೃಷ್ಣಭಕ್ತಿ ಅವುಗಳಲ್ಲಿ ಕಾಣಿಸಿದರೂ, ಅದು ಕೇವಲ ನಿಮಿತ್ತಮಾತ್ರ. ಮುಖ್ಯವಾಗಿ ಅವು ಪ್ರೇಮದ ಕಥೆಗಳು. ನಳ ಚರಿತ್ರೆಯಲ್ಲಿ ನಳದಮಯಂತಿಯರ ಪ್ರೇಮ; ಮೋಹನ ತರಂಗಿಣಿಯ ಕೃಷ್ಣ ರುಕ್ಮಿಣಿಯ, ರತಿ-ಮನ್ಮಥರ, ಉಷಾ-ಅನಿರುದ್ಧರ ಶೃಂಗಾರ. ನಳಚರಿತ್ರೆ ಪ್ರಥಮತಃ ಪ್ರೇಮದ ಕಥೆ. ನಳದಮಯಂತಿಯರ ನಡುವೆ ಇದ್ದ ಗಾಢವಾದ ಪ್ರೇಮವನ್ನೂ, ಅದರ ಮೇಲೆ ಬಿದ್ದ ಕಲಿಪುರುಷನ ಅಥವಾ ವಿಧಿಯ ಕರಾಳ ಛಾಯೆಯನ್ನೂ, ಆದರೂ ಆ ಕತ್ತಲಿನಲ್ಲಿ ನಿಶ್ಚಲವಾದ ದೀಪ್ತಿಯಿಂದ ವರ್ಧಿಸಿದ ಆ ಪ್ರೀತಿಯ ಮಹೋನ್ನತಿಯನ್ನೂ ಕನಕದಾಸರು ಚಿತ್ರಿಸಿದ್ದಾರೆ. ನಳನ ಪಾತ್ರದಲ್ಲಿ ದಮಯಂತಿಯ ಬಗ್ಗೆ ಗಾಢವಾದ ಪ್ರೀತಿ ಇದೆ; ಆದರೆ ಆ ಪ್ರೀತಿಯಲ್ಲಿ ಸ್ವಾರ್ಥದ ಕಲುಷವಿಲ್ಲ. ತನಗಿಂತ ಅಧಿಕರಾದ ಇಂದ್ರಾದಿಗಳೂ ಅವಳನ್ನು ಬಯಸಿದಾಗ, ದಮಯಂತಿಯ ಬಗೆಗೆ ತನಗಿದ್ದ ಪ್ರೀತಿಯನ್ನೂ ಅವರಿಗಾಗಿ ಬದಿಗೊತ್ತಿ, ಅವರ ಪರವಾಗಿ ಪ್ರಣಯದೌತ್ಯವನ್ನು ವಹಿಸುವಂಥ ಮನಃಸ್ಥೈರ್ಯ ಅವನಲ್ಲಿದೆ. ಅದು ಅತ್ಯಂತ ಪ್ರಶಂಸನೀಯವಾಗಿದೆ. ಎರಡನೆಯ ಸಲ ದಮಯಂತಿಗೆ ಸ್ವಯಂವರವಾಗಲಿದೆ ಎಂದು ಕೇಳಿದಾಗಲೂ ಅಷ್ಟೆ. ಹೃದಯಕ್ಕೆ ಹೃದಯವಾಗಿ ಬೆಸೆದುಕೊಂಡ ತನ್ನಾಕೆಯನ್ನು, ಅವಳಿಗೆ ಆದರಿಂದ ಸುಖವಾಗುವುದಾದರೆ, ಕುರೂಪಿಯಾಗಿ ಬಾಹುಕನ ವೇಷದಲ್ಲಿರುವ ತನ್ನನ್ನು ಬಿಟ್ಟು ಬೇರೆಯವರನ್ನು ವರಿಸಲಿ ಎಂದು ಸಾರಥ್ಯ ವಹಿಸಿ ದಮಯಂತೀ ಸ್ವಯಂವರಕ್ಕೆ ಋತುವರ್ಣ ರಾಜನನ್ನು ಒಯ್ಯುತ್ತಾನೆ. ತಾನು ಜೂಜಿನಲ್ಲಿ ಸೋತು ರಾಜ್ಯಭ್ರಷ್ಟನಾಗಿ ಕಾಡಿನಲ್ಲಿರುವಾಗಲೂ ಸುಕುಮಾರಿಯಾದ ದಮಯಂತಿ ತನ್ನ ಜೊತೆಗಿದ್ದು ಕಷ್ಟಪಡುವುದು ಬೇಡವೆಂದೂ, ತಾನು ಬಿಟ್ಟರೆ ಅವಳು ತವರು ಮನೆಗಾದರೂ ಹೋಗಿ ಸುಖವಾಗಿರಲಿ ಎಂದೂ ನಡುಗಾಡಿನಲ್ಲಿ ಅವಳನ್ನು ತೊರೆದು ಹೋಗುತ್ತಾನೆ. ಹೀಗೆ ನಳನ ಪಾತ್ರದಲ್ಲಿ ತ್ಯಾಗಮೂಲವಾದ ಪ್ರೀತಿ ಒಂದು ವಿಶಿಷ್ಟ ಲಕ್ಷಣವಾಗಿ ತೋರುತ್ತದೆ. ಈ ಒಂದು ಅಂಶವೆ ಕನಕದಾಸರ ಮನಸ್ಸನ್ನು ತಟ್ಟಿರಬೇಕು. ಕನಕದಾಸರು ಈ ತ್ಯಾಗಮೂಲವಾದ ಪ್ರೇಮದ ಪ್ರತಿಪಾದನೆಗೆ ನಳಚರಿತ್ರೆಯನ್ನು ಬರೆದ ಹಾಗೆ ತೋರುವುದೇ  ಹೊರತು ಭಕ್ತಿಪ್ರತಿಪಾದನೆಗೆ ಅಲ್ಲ- ಆ ಬಗ್ಗೆ ಒಂದೇ ಒಂದು ಪವಾಡಸದೃಶವಾದ ಪ್ರಸಂಗವಿದ್ದರೂ.[1] ಪ್ರೀತಿ, ಆದರ ಗಾಢತೆ, ಒಲಿದವರ ನಡುವೆ ಬಂದ ವಿಧಿಯ ಕರಾಳ ಛಾಯೆ, ಅದರಲ್ಲಿಯೂ ಎದ್ದು ತೋರುವ ದಮಯಂತಿಯ ಪ್ರೇಮನಿಷ್ಠೆ, ನಳನ ತ್ಯಾಗಮೂಲವಾದ ಪ್ರೇಮ- ಇದೇ ಕಾವ್ಯದ ತಿರುಳು. ಪ್ರೀತಿಯಲ್ಲಿ ಕಂಡುಬರುವ ದೈವಿಕತೆಯೆ ಕವಿಗೆ ಪ್ರಧಾನವಾದ ವಿಷಯ. ಇದು ತ್ಯಾಗಮೂಲವಾದ ಶೃಂಗಾರ.

ನಳಚರಿತ್ರೆ ತ್ಯಾಗಮೂಲವಾದ ಶೃಂಗಾರದ ಕಥೆಯಾದರೆ, ಮೋಹನ ತರಂಗಿಣಿ ಭೋಗಮೂಲವಾದ ಶೃಂಗಾರದ ಕಥೆ. ಒಂದರಲ್ಲಿ ಮಾನವ ಪಾತ್ರಗಳ ತ್ಯಾಗ ಮೂಲವಾದ ಶೃಂಗಾರವಿದ್ದರೆ, ಇನ್ನೊಂದರಲ್ಲಿ ದೈವೀ ಪಾತ್ರಗಳ ಭೋಗಮೂಲವಾದ ಶೃಂಗಾರವಿದೆ. ಆದರೆ ಈ ದೈವೀ ಪಾತ್ರಗಳ ಹಿನ್ನೆಲೆ ಮಾತ್ರ ಸಮಕಾಲೀನ ವಾಸ್ತವವಾಗಿರುವುದೇ ಮೋಹನ ತರಂಗಣಿಯ ವೈಶಿಷ್ಟ್ಯವಾಗಿದೆ. ನಳಚರಿತ್ರೆಯ ಹಿನ್ನೆಲೆ ಪೌರಾಣಿಕವಾಗಿದೆ. ಪಾತ್ರಗಳು ಮಾನವೀಯವಾಗಿವೆ; ಮೋಹನ ತರಂಗಿಣಿಯಲ್ಲಿ ಪಾತ್ರಗಳು ಪೌರಾಣಿಕವಾಗಿವೆ, ಹಿನ್ನೆಲೆ ಸಮಕಾಲೀನವಾಗಿದೆ. ಒಂದರಲ್ಲಿ ಮಾನವರು ಪ್ರೇಮದಿಂದ ದೈವಿಕವಾಗಿ ತೋರುತ್ತಾರೆ, ಇನ್ನೊಂದರಲ್ಲಿ ದೇವತೆಗಳು ಭೋಗದಿಂದ ಮಾನವರಾಗಿ ತೋರುತ್ತಾರೆ.

ನಳಚರಿತ್ರೆಯನ್ನು ಬರೆಯುವಲ್ಲಿ ಕನಕದಾಸರಲ್ಲಿ ಕಂಡುಬಂದ ಆ ಅಶೃಂಖಲ ಸಹಜತೆ ಮೋಹನ ತರಂಗಿಣಿಯನ್ನು ಬರೆಯುವಲ್ಲಿ ಕಾಣದಂತಾಗಿದೆ. ಮೋಹನ ತರಂಗಿಣಿಯಲ್ಲಿ ಮಹಾಕಾವ್ಯದ ಸಮಸ್ತ ಸಂಪ್ರದಾಯಗಳನ್ನೂ ತುರುಕುವ ರಭಸವಿದೆ. ಇದನ್ನು ಬರೆಯುವಾಗ ಕನಕದಾಸರೊಳಗಿನ ‘ಕವಿ’ ಬಹುಮಟ್ಟಿಗೆ ಪ್ರಜ್ಞಾಪೂರ್ವಕವಾಗಿದ್ದಾನೆ. ಹೀಗಾಗಿ ಮೋಹನ ತರಂಗಿಣಿ ಕಾವ್ಯವಾಗಿ ಅಂಥ ಅಖಂಡತೆಯನ್ನು ಪಡೆದಿಲ್ಲ; ಬಹುಮಟ್ಟಿಗೆ ಅಷ್ಟಾದಶವರ್ಣನೆಗಳ ಮಗ್ಗದಲ್ಲಿ ನೇಯ್ದ ಪುರಾಣ ಸಾಮಗ್ರಿಗಳ ಒಂದು ತೇಪೆಯಾಗಿದೆ. ಇದರ ವಿಶಿಷ್ಟತೆಯೇನಿದ್ದರೂ, ಅದರ ಹಿನ್ನೆಲೆಯಾಗಿ ಬಂದಿರುವ ವಿಜಯನಗರದ ಕಾಲದ ಸಮಕಾಲೀನ ಜೀವನದ ವಾಸ್ತವ ಚಿತ್ರವಷ್ಟೇ. ಅದೂ ಸಹ ಅಷ್ಟಾದಶವರ್ಣನೆಯ ರಥವನ್ನೇರಿದೆ. ಆದರೆ ನಳಚರಿತ್ರೆ ಗಿರುವಂಥ ಸಂಕ್ಷಿಪ್ತತೆ, ಮಾರ್ದವತೆ, ಸರಳತೆ ಇದಕ್ಕಿಲ್ಲವಾಗಿದೆ. ನಳಚರಿತ್ರೆ ಮಾತ್ರ ಹೃದಯಸ್ಪರ್ಶಿಯಾದ ಒಂದು ಖಂಡಕಾವ್ಯದ ಸೊಗಸನ್ನು ತುಂಬಿಕೊಂಡು ನಿಂತಿದೆ.

ನಳಚರಿತ್ರೆಯ ಮತ್ತು ಮೋಹನ ತರಂಗಿಣಿಯ ಪ್ರಧಾನವಸ್ತು ಶೃಂಗಾರವಾದರೆ, ರಾಮಧಾನ್ಯಚರಿತೆಯ ವಸ್ತು ಕೇವಲ ಚಮತ್ಕಾರ. ಈ ಕೃತಿಯ ವಸ್ತು ಕವಿಕಲ್ಪನಾ ಸಿದ್ಧವಾದದ್ದು; ಅದಷ್ಟೇ ಅದರ ವೈಶಿಷ್ಟ್ಯ. ರಾಗಿ ಎಂಬ ಶಬ್ದಕ್ಕೆ ರಾಘವ ಎಂಬುದು ಮೂಲವಿರಬಹುದೆಂಬಂತೆ ಭಾವಿಸಿದ ಅಪನಿಷ್ಟತ್ತಿಯ ನೆಲೆಗಟ್ಟಿನ ಮೇಲೆ ಕಟ್ಟಿದ ಸ್ವಚ್ಛಂದ ಕಲ್ಪನೆ ಇದರ ವಸ್ತು. ರಾಗಿಯ ಮಹಾತ್ಮೆಯನ್ನು ಎತ್ತಿ ಹಿಡಿಯಲು ಉದ್ದೇಶಪೂರ್ವಕವಾಗಿ ಹೆಣೆದ ಕತೆ ಇದು. ರಾಗಿ ಭತ್ತಗಳಲ್ಲಿ ರಾಗಿಯ ಶ್ರೇಷ್ಠತೆಯನ್ನು ವಿಸ್ತರಿಸಲು ಕನಕದಾಸರು ನಿರ್ಮಿಸಿದ ಮಹಾಭಾರತ ರಾಮಾಯಣಗಳ ಹಿನ್ನೆಲೆಯಿಂದ ವಸ್ತುವಿಗೆ ಗಾಂಭೀರ್ಯವೇನೂ ಬಂದಿಲ್ಲ; ಕೇವಲ ಗಾಂಭೀರ್ಯದ ಸೋಗು ಬಂದಿದೆ. ಬೇರೊಂದು ನಿಲುವಿನಿಂದ ನೋಡುವುದಾದರೆ ಇದು  ಪರಂಪರಾಗತವಾದ ಪುರಾಣಕಥಾ ನಿರೂಪಣೆಗಳ ವಿಡಂಬನೆಯಾಗುತ್ತದೆ. ಆದರೆ ಅದು ಕನಕದಾಸರ ಪ್ರಕೃತವಾದ ಉದ್ದೇಶವಲ್ಲ ಎನ್ನುವುದು ಸ್ಪಷ್ಟವಾಗಿಯೇ ಇದೆ. ರಾಗಿ ಭತ್ತಗಳಂಥ ಧಾನ್ಯಗಳಲ್ಲಿ ರಾಗಿಯೇ ಶ್ರೇಷ್ಠ ಎನ್ನುವುದನ್ನು ಎತ್ತಿಹಿಡಿಯಲು ಅವರು ಸಾಮಾನ್ಯ ಜಾನಪದ ಕಥಾ ವೃತ್ತಾಂತವೊಂದನ್ನು ಹಿನ್ನೆಲೆಯನ್ನಾಗಿ ಮಾಡಿ ಕೊಂಡಿದ್ದರೆ ಕವಿಯ ಉದ್ದೇಶ ಇನ್ನೂ ಹೆಚ್ಚು ಸಮರ್ಪಕವಾಗಿ ನೆರವೇರುತ್ತಿತ್ತೆಂದು ತೋರುತ್ತದೆ. ಆದರೆ ಈ ಕೃತಿಯ ಮೂಲಕ ಕನಕದಾಸರು, ಬಡವರು ತಿನ್ನುವ ರಾಗಿಯ ಶ್ರೇಷ್ಠತೆಗೆ ಮೆಚ್ಚಿ ರಾಮನು ತನ್ನ ಹೆಸರನ್ನೇ (ರಾಘವ) ರಾಗಿಗೆ ಕೊಟ್ಟನೆಂದು ಹೇಳುವುದರ ಮೂಲಕ ದೇವರೂ ಸಹ ಬಡವರ ಬಂಧು ಎಂಬ ತತ್ವವನ್ನು ಪ್ರಕಟಿಸಿದ್ದಾರೆ- ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಈ ತತ್ವವಾಗಲಿ, ಅದನ್ನು ಪ್ರತಿಪಾದಿಸಿರುವ ರೀತಿಯಾಗಲಿ, ಅವರ ಬೇರೆಯ ಕೃತಿಗಳಿಗೆ ಹೋಲಿಸಿದರೆ ಅಂಥ ಯಾವ ಘನತೆಯನ್ನೂ ಪಡೆದಿಲ್ಲವೆಂದೇ ಹೇಳಬೇಕು. ಇದರವಸ್ತು ಸ್ವಕಲ್ಪಿತವಾದದ್ದೆಂಬಷ್ಟರಿಂದಲೇ ಅದಕ್ಕೆ ಮಹತ್ವ ಪ್ರಾಪ್ತವಾಗುವುದಿಲ್ಲ; ಎತ್ತಿಕೊಂಡ ವಸ್ತುವಿನ ಸಮರ್ಪಕವಾದ, ಸಂಭಾವ್ಯವೆನಿಸುವ ನಿರ್ವಹಣೆಯಿಂದ ಬೆಲೆ ಬರುತ್ತದೆ. ಆದರೆ ಈ ಕೃತಿಯಲ್ಲಿ ಆ ಒಂದು ಕಲೆಗಾರಿಕೆ ಕಾಣದಾಗಿದೆ. ರಾಗಿ ಭತ್ತಗಳ ವ್ಯಕ್ತೀಕರಣವೂ ಮೈತುಂಬಿಕೊಂಡು ಜೀವಂತವಾಗಿ ನಮ್ಮೆದುರು ನಿಲ್ಲುವುದಿಲ್ಲ; ಉದ್ದಕ್ಕೂ ರಾಗಿಯನ್ನು ‘ನರೆದಲಗ’ನೆಂದೂ, ಭತ್ತವನ್ನು ‘ವ್ರೀಹಿ’ ಎಂದೂ, ಪ್ರೌಢತೆಗೋಸ್ಕರ ಕರೆದಿರುವುದು ಅಷ್ಟೇನೂ ಹಿತವಾಗಿಲ್ಲ. ವನವಾಸಕಾಲದಲ್ಲಿ ಧರ್ಮರಾಯನಿಗೆ ಶಾಂಡಿಲ್ಯ ಮಹರ್ಷಿಗಳು ಇದನ್ನು ಹೇಳಿದರೆಂಬ ನಿಷ್ಕಾರಣವಾದ ಹಿನ್ನೆಲೆಯನ್ನು ಕಲ್ಪಿಸಿಕೊಂಡು,[2] ಶ್ರೀರಾಮನು ರಾಗಿ ಭತ್ತಗಳ ವಿವಾದದಲ್ಲಿ ದೇವಾಧಿದೇವತೆಗಳ ಹಾಗೂ ಋಷಿ-ಮುನಿಗಳ ಸಹಾಯದಿಂದ ಅವುಗಳ ಗುಣಾವಗುಣಗಳನ್ನು ಪರೀಕ್ಷಿಸಿ, ರಾಗಿಯೇ ಶ್ರೇಷ್ಠವೆಂದು ತೀರ್ಮಾನಿಸಿ ಅದಕ್ಕೆ ತನ್ನ ಹೆಸರನ್ನೇ (ರಾಘವ) ಕೊಟ್ಟನೆಂದೂ, ಅದು ಹರಿಹರ ಬ್ರಹ್ಮಾದಿಗಳು ಭಾಗವಹಿಸುವಂಥ ಲೋಕೋತ್ತರ ಘಟನೆಯಾಯಿತೆಂದೂ ವಿಸ್ತರಿಸಿರುವ ಈ ಕಥಾ ನಿರ್ಮಿತಿ, ವಸ್ತುವಿನ ಹಾಗೂ ಹಿನ್ನೆಲೆಯ ಸಮತೂಕವಿಲ್ಲದೆ ತತ್ತರಿಸುತ್ತದೆ. ಸಾಮಾನ್ಯ ಜಾನಪದ ಕಥೆಯ ಹಿನ್ನೆಲೆಯಿಂದ, ಸಾಂಗತ್ಯದಲ್ಲೋ ಅಥವಾ ಕೀರ್ತನೆಯ ಧಾಟಿಯಲ್ಲೋ ಬರೆದು ಇನ್ನೂ ಜನಪ್ರಿಯವನ್ನಾಗಿ ಮಾಡಬಹುದಾಗಿದ್ದ ಈ ವಸ್ತುವನ್ನು ಕನಕದಾಸರು ಯಾಕೆ ಇಂಥ ಪೌರಾಣಿಕ ಗಡಿಬಿಡಿಯ ಹಿನ್ನೆಲೆಯಲ್ಲಿ, ಅದೂ ಷಟ್ಪದಿಯಲ್ಲಿ ಬರೆದರು ಎನ್ನುವ ಪ್ರಶ್ನೆಯೇ ಇದರ ವಿಶಿಷ್ಟತೆಯಾಗಿ ಕಾಡುತ್ತದೆ.

ಕನಕದಾಸರ ಕೃತಿಗಳ ನಿಜವಾದ ವಿಶೇಷತೆ ಇರುವುದು ಅವುಗಳು ಪ್ರಕಟಿಸುವ ಸಮಕಾಲೀನ ಜೀವನದ ಚಿತ್ರಣದಲ್ಲಿ. ಸಾಮಾಜಿಕ ಪ್ರಜ್ಞೆ ಎಂದರೆ ಕೇವಲ ರಾಜ ಮಹಾರಾಜರ ಭೋಗ-ವೈಭವ ಜೀವನ ಪ್ರಜ್ಞೆ ಎನ್ನುವ ಭ್ರಮೆಯ ಗರಬಡಿದ ಎಷ್ಟೋ ಕವಿಗಳ ರಚನೆಯಿಂದ ಬೇಸತ್ತವರಿಗೆ, ಕನಕದಾಸರ ಕೃತಿಗಳಲ್ಲಿ ಸಮಕಾಲೀನ ಜೀವನದ ಯಥಾವತ್ತಾದ ಸಹಜ ವರ್ಣನೆಗಳನ್ನು ಕಂಡು ನಿಜಕ್ಕೂ ಸಂತೋಷವಾಗುತ್ತದೆ. ಅವರ ಕೀರ್ತನೆಗಳಲ್ಲಿ ತಕ್ಕಮಟ್ಟಿಗೆ ಹಾಗೂ ‘ಮೋಹನ ತರಂಗಿಣಿ’ಯಲ್ಲಿ ವಿಶೇಷವಾಗಿ ಇದು ಕಾಣಿಸುತ್ತದೆ. ‘ಮೋಹನ ತರಂಗಿಣಿ’ಯ ರಚನೆ ಅಷ್ಟಾದಶ ವರ್ಣನೆಯ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡರೂ, ಅದರಲ್ಲಿ ಹಿನ್ನೆಲೆಯಾಗಿ ಕಂಡು ಬರುವ ಜನಜೀವನದ ಚಿತ್ರ, ಕನಕದಾಸರ ಸಮಕಾಲೀನವಾದ ವಿಜಯನಗರದ ಜನ ಜೀವನದ ಚಿತ್ರವೇ ಆಗಿದೆ. ನಿದರ್ಶನಕ್ಕೆ ಪುರವರ್ಣನೆ ಹಾಗೂ ವನವಿಹಾರ ವರ್ಣನೆ ಇವೆರಡನ್ನು ನೋಡಿದರೆ ಸಾಕು: ಪುರವರ್ಣನೆಯ ನೆಪದಲ್ಲಿ ಕನಕದಾಸರು ಮೋಹನತರಂಗಿಣಿಯ ಮೂರು- ನಾಲ್ಕನೆಯ ಸಂಧಿಯಲ್ಲಿ ತಮ್ಮ ಕಾಲದ ಊರಿನ ಒಂದು ಭಾಗದ ಚಿತ್ರವನ್ನೇ ತೆರೆದಿದ್ದಾರೆ: ಗೋಧಿ ಕಡಲೆ ರಾಶಿಯನ್ನು ಹಾಕಿಕೊಂಡ ಅಂಗಡಿಗಳು; ಚಿಪ್ಪಿಗರ ಅಂಗಡಿಗಳು; ಕಂಚುಗಾರರ ಅಂಗಡಿಗಳು; ಬಳೆದೊಡಿಸುವ ಬಳೆಗಾರರ ಅಂಗಡಿಗಳು; ರತ್ನಾಭರಣದ ಅಂಗಡಿಗಳು; ಹಣದ ರಾಶಿಯನ್ನು ಮುಂದೆ ಸುರಿದುಕೊಂಡು ಕೂತ ವರ್ತಕರು; ಹಡಗಿನ ವ್ಯವಹಾರದಲ್ಲಿ ಗಳಿಸಿದ ಹಣವನ್ನು ತೂಕಮಾಡುವ ವಣಿಜರು- ಇದು ಒಂದು ದೃಶ್ಯ. ಬ್ರಾಹ್ಮಣರ ಕೇರಿಗೆ ಬಂದರೆ, ಅಲ್ಲಿ ಮನೆಯ ಮುಂದೆ ತುಳಸೀ ಕಟ್ಟೆಯಿದೆ; ಅಲ್ಲಿ ಪೂಜೆ ಭಜನೆ ಸಾಗಿದೆ: ಹೋಮ ಮಾಡುವ ಬ್ರಾಹ್ಮಣರು, ಕನ್ನಡಕ ಹಾಕಿ ಕೊಂಡು ಸಣ್ಣವರಿಗೆ ಪಾಠ ಹೇಳುವ ಉಪಾಧ್ಯಾಯರು, ಸ್ನಾನಮಾಡಿ ಪಟ್ಟೆನಾಮ ಹಾಕಿಕೊಂಡ ಶ್ರೀವೈಷ್ಣವರು. ಊಟದ ಮನೆಯ ಮುಂದೆ ಹೊಟ್ಟೆ ಮುಂದು ಮಾಡಿಕೊಂಡು ಬಾಗಿಲು ಹಿಡಿಸದೆ ನುಗ್ಗಾಡುವ ಹೊಸ ವಿಘ್ನರಾಜನ ಬಳಗದಂತಿರುವ ಬ್ರಾಹ್ಮಣರು- ಇದಿಷ್ಟೇ ಸಾಕು ಈ ಚಿತ್ರಗಳು ಎಂಥ ವಾಸ್ತವತೆಯ ಉಸಿರಾಡುತ್ತಿವೆ ಎನ್ನುವುದಕ್ಕೆ. ಇನ್ನೊಂದು ನಿದರ್ಶನ, ವನವಿಹಾರ ವರ್ಣನೆಯದು: ಇಲ್ಲಿಯೂ ಅಷ್ಟಾದಶವರ್ಣನೆಯ ಪ್ರಕಾರ ವನವಿಹಾರ ವರ್ಣನೆ ನಡೆದಿದೆ ಕೃಷ್ಣನ ಅರಮನೆಯ ರಾಣಿಯರಿಂದ. ಆದರೆ ಇಲ್ಲಿನ ಸ್ತ್ರೀಯರು ಬೇರೆಯ ಕವಿಗಳ ಕಾವ್ಯದಲ್ಲಿಯಂತೆ ಉದ್ಯಾನದ ಹೂವು-ತಳಿರುಗಳನ್ನು ಕಿತ್ತು ಬಳಲಿ ಬೆಂಡಾಗುವ ಸುಕುಮಾರಿಯರಲ್ಲ; ಹೂವುಗಳನ್ನು ಕೇವಲ ಸಿಂಗಾರಕ್ಕಾಗಿ ಮಾತ್ರ ಬಳಸಿ ತೃಪ್ತರಾದವರಲ್ಲ. ಇವರು ‘ಕೈದಣಿವನಕ ನಾನಾ ಪುಷ್ಪಂಗಳ ಕೊಯ್ದು ಪೊಟ್ಟಣವ ಕಟ್ಟಿದರು.’ ಅಷ್ಟೇ ಅಲ್ಲ, ‘ಅಂಬೆ ಹಳದಿ ಕಾರ್ಗೆಣಸು ನೀರುಳ್ಳಿ ಕೊತ್ತುಂಬರಿ ಕರಿಬೇವು ಸಹಿತ, ಸಿಂಬೆ ಕೂಗಲಿ ಪಿಪ್ಪಲಗಾಯ ಕೊಯ್ದರು ನಿಂಬೆಯ ಕಳಿವಣ್ಗಳೊಡನೆ’. [೪-೫೯, ೬೧] ಇವರು ಕೇವಲ ವಿಲಾಸಕ್ಕೆ ಬಂದವರಲ್ಲ; ಕೃಷ್ಣನ ಅರಮನೆಯ ಈ ಹೆಂಗಸರು ಅಡುಗೆಮನೆಯನ್ನು ನೆನಪಿನಲ್ಲಿರಿಸಿಕೊಂಡ ಗೃಹಿಣಿಯರು. ಆದುದರಿಂದಲೇ ಇವರು ‘ನೀರುಳ್ಳಿ ಕೊತ್ತುಂಬರಿ ಕರಿಬೇವು ಸಹಿತ’ ಕೊಯ್ದು ಪೊಟ್ಟಣ ಕಟ್ಟಿದ್ದಾರೆ. ಉಳಿದ ಕಾವ್ಯಗಳಲ್ಲಿ ಕಂಡುಬರುವ ವನವಿಹಾರವರ್ಣನೆಯಲ್ಲಿ ಕಾಣಿಸುವ ವಿಲಾಸಿನಿಯರಿಂದ ಭಿನ್ನವಾದ ಈ ಗರತಿಯರ ವ್ಯವಹಾರದಲ್ಲಿ ಜನಸಾಮಾನ್ಯರ ನಡವಳಿಕೆ ಇದೆ; ಆ ನಡವಳಿಕೆ ಸಹಜವಾಗಿದೆ, ಹಿತವಾಗಿದೆ. ಅಷ್ಟಾದಶ ವರ್ಣನೆಯ ಇಕ್ಕಟ್ಟಿನಲ್ಲಿ ಕಾವ್ಯದ ರಚನೆ ಸಿಕ್ಕಿಕೊಂಡರೂ, ಇಂಥ ಜನಜೀವನದ ಯಥಾರ್ಥವಾದ ಚಿತ್ರಗಳನ್ನು ಕೊಡುವುದರ ಮೂಲಕ ಕನಕದಾಸರು ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಪ್ರಕಟಿಸಿ ಅಭಿನಂದನೀಯರಾಗಿದ್ದಾರೆ.[3]

ಕನಕದಾಸರು ತಮ್ಮ ಸುತ್ತಣ ಜೀವನದ ಬಗ್ಗೆ ಹೇಗೆ ಜೀವಂತ ಪ್ರಜ್ಞೆಯುಳ್ಳವರಾಗಿದ್ದರೋ ಅಷ್ಟರಮ್ಟಟಿಗೆ ತಮ್ಮ ಸುತ್ತಣ ಜನಭಾಷೆಯ ಬಗೆಗೂ ಎಚ್ಚರವನ್ನು ಕಾಯ್ದುಕೊಂಡಂತೆ ತೋರುತ್ತದೆ. ಆದುದರಿಂದಲೇ ಅವರ ಕೃತಿಗಳ ಶೈಲಿ ಬಹುಮಟ್ಟಿಗೆ ದೇಸೀಯತೆಯ ಲಕ್ಷಣಗಳನ್ನು ತುಂಬಿಕೊಂಡಿದೆ. ಅವರ ಶೈಲಿಯಲ್ಲಿ ‘ನಾಡೊಳಗುಳ್ಳ ಜಾಣಜಾಣೆಯರೊಡನಾಡುವ ಸವಿಮಾತುಗಳ’ನ್ನು ‘ಪಾಡುಗಬ್ಬ’ವಾಗಿ ವಿಸ್ತರಿಸುವ ಜಾಣ್ಮೆ ಕಂಡುಬರುತ್ತದೆ. ಅವರಲ್ಲಿ ಕೇವಲ ಸುಶಿಕ್ಷಿತ ಸಮಾಜದ ಭಾಷೆ ಮಾತ್ರವಲ್ಲ. ಅವರು ಹುಟ್ಟಿ ಬೆಳೆದು ಬಂದ ಅಶಿಕ್ಷಿತ ಸಮಾಜದ ಭಾಷೆಯೂ ಯಥಾವತ್ತಾಗಿ ಬಂದಿದೆ. ‘ದೇವೀ ನಮ್ಮ ದ್ಯಾವರು ಬಂದರು. ಬನ್ನೀರೇ ನೋಡ ಬನ್ನೀರೇ’. ‘ಆತನೊಲಿದ ಮ್ಯಾಲೆ ಯಾತರ ಕುಲವಯ್ಯ’- ಎನ್ನುವಂಥ ಅಭಿವ್ಯಕ್ತಿಗಳು ಇದಕ್ಕೆ ನಿದರ್ಶನ. ಅಷ್ಟೇ ಅಲ್ಲ, ಅವರು ಸಾಕಷ್ಟು ಪೂರ್ವಕವಿಗಳ ಕಾವ್ಯಾಭ್ಯಾಸ ಮಾಡಿ ಪ್ರೌಢಭಾಷೆಯ ‘ವ್ಯುತ್ಪತ್ತಿ’ಯನ್ನು ಪಡೆದವರಾಗಿದ್ದರೂ, ಅವರ ಕೃತಿಗಳಲ್ಲಿ “ಆಡಂಬರವಿಲ್ಲದ ಸಂಸ್ಕೃತವು ತಿಳಿಯಾದ ತಿರುಳ್ಗನ್ನಡದೊಂದಿಗೆ ಹೊಂದಿದ ಸಮರಸತೆ”[4] ಯನ್ನು ಗುರುತಿಸಬಹುದು. ಸರಳತೆ, ಹೃದ್ಯತೆಗಳೇ ಅವರ ಶೈಲಿಯ ವಿಶಿಷ್ಟತೆ. ಎಲ್ಲಿಯೂ ಅವರ ಭಾಷೆ ಪೆಡಸಾಗಿಲ್ಲ; ಎತ್ತಿಕೊಂಡ ವಸ್ತು-ಭಾವಗಳಿಗೆ ಉಚಿತವಾಗಿ, ಸರಳವಾದ ಮಾತುಗಳಲ್ಲಿ ವಿಶೇಷವಾದ ಅರ್ಥವನ್ನು ವಿಸ್ತರಿಸುತ್ತಾ ಹೋಗುತ್ತದೆ. ‘ಮನವೆನ್ನ ಮಾತ ಕೇಳದು ಕಾಣೊ ಗೋವಿಂದ’; ‘ಅಹುದಾದರ ಹುದೆನ್ನಿ ಅಲ್ಲವಾದರಲ್ಲವೆನ್ನಿ’; ‘ದೇವರಿಲ್ಲದ ಗುಡಿಯು ಹಾಳುಬಿದ್ದಂಗಡಿಯು……’ ಕರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು’; ‘ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ’; ‘ತೊರೆದು ಜೀವಿಸಬಹುದೆ ಹರಿ ನಿಮ್ಮ ಚರಣಗಳ’ -ಈ ಮಾತುಗಳಲ್ಲಿರುವ ಲಾಲಿತ್ಯ ಮತ್ತು ಸರಳತೆ; ‘ಬೀಜ ವೃಕ್ಷದೊಳಾಯ್ತು, ವೃಕ್ಷಕ್ಕೆ ಬೀಜವಾರಿಂದಾಯ್ತು’; ‘ಸತ್ತವರಿಗಳಲೇಕೆ ತನ್ನನು ಹೆತ್ತವರು ಹೊತ್ತವರುಗಳು ಸತ್ತುಹೋಗುವರಲ್ಲದುಳಿವರೆ?’; ‘ಎಂಜಲೆಂಜಲು ಎಂಬರಾನುಡಿ ಎಂಜಲಲ್ಲವೆ’; ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’; ‘ಆತನೊಲಿದಮೇಲೆ ಯಾತರ ಕುಲವಯ್ಯ?’ -ಈ ಪ್ರಶ್ನ ಶೈಲಿಯಲ್ಲಿ  ಪ್ರಕಟವಾಗುವ ವೈಚಾರಿಕ ಮನೋಧರ್ಮ; ‘ಹೂಡಿರಲು ಮರ ಮುಟ್ಟು ಮಾಂಸದ ಗೋಡೆ ಚರ್ಮದ ಹೊದಿಕೆ ನರಗಳ ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನಿರುತಿರಲು’; ‘ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡಿಯುವಂತೆ ಉಳ್ಳೆ ಪೊರೆಯಂತೆ ನೋಡೊ ಸಂಸಾರದಾಟವೊ’; ‘ತುರುಗಿದ ಕಾಯಿ ಪಣ್ಗಳ ಸಾಲ ವೃಕ್ಷವ ಮುರಿದು ದೂಳಿಯ ಚಲ್ಲಿಕೊಳುತ, ಸುರಿವ ಸೊಂಡಿಲ ನೀರ್ಗರೆಯುತ ಬಂದುದು ಬಿರುಗಾಳಿ ಮದಗಜದಂತೆ’; ಈ ವರ್ಣನೆಗಳಿಂದ ಮೈದಾಳಿ ನಿಲ್ಲುವ ಪ್ರತಿಮಾ ವೈಭವ- ಇವುಗಳು ಕನಕದಾಸರ ಶೈಲಿಯ ವಿಶಿಷ್ಟತೆಯನ್ನು ಎತ್ತಿಹಿಡಿದು ಅವರು ನಿಜವಾದ ಕವಿಗಳು ಎನ್ನುವುದನ್ನು ತೋರಿಸುತ್ತವೆ. ಅಷ್ಟೇ ಅಲ್ಲ, ಆ ಒಂದು ಶತಮಾನದಲ್ಲಿ ಪ್ರಚಲಿತವಾದ ವಿವಿಧ ಛಂದೋ ರೂಪಗಳಲ್ಲಿ ಕನಕದಾಸರು ಸಲೀಸಾಗಿ ಬರೆಯಬಲ್ಲರು; ಕೀರ್ತನೆಗಳ ಧಾಟಿಯಲ್ಲಿ, ಸಾಂಗತ್ಯದಲ್ಲಿ ಅವರ ಪ್ರಯೋಗ ಗಮನಾರ್ಹವಾಗಿದೆ. ಷಟ್ಪದಿ-ಕೀರ್ತನೆ- ಸಾಂಗತ್ಯ ಈ ಮೂರು ರೀತಿಗಳಲ್ಲೂ ಪ್ರಧಾನವಾದ ದೇಸೀಯತೆ, ತಿಳಿಯಾಗಿ ನಿರರ್ಗಳವಾಗಿ ಎಂಥ ಸಾಮಾನ್ಯ ಓದುಗನ ಮನಸ್ಸನ್ನೂ ಸೂರೆಗೊಳ್ಳುವಂತಿದೆ. ಅವರ ಷಟ್ಪದಿಗಳಲ್ಲಿ ಕುಮಾರವ್ಯಾಸನ ಪ್ರಭಾವವಿದೆ;[5] ಅವರ ಕೀರ್ತನೆಗಳಲ್ಲಿ ಪುರಂದರದಾಸರ ಛಾಯೆಯಿದೆ; ಅವರ ‘ಕನಕನ ಮುಂಡಿಗೆ’ಗಳೆಂಬ ಕೆಲವು ರಚನೆಗಳಲ್ಲಿ ಬೆಡಗಿನ ವಚನಗಳ ಅನುಕರಣವಿದೆ. ಆದರೆ ಈ ನೆಳಲು ಬೆಳಕಿನ ನಡುವೆ ಕನಕದಾಸರು ತಮ್ಮ ತೇಜಸ್ಸನ್ನು ಕಳೆದುಕೊಂಡಿಲ್ಲ. ಅವರು ತಮ್ಮ ಕವಿವಿಶಿಷ್ಟವಾದ ಸಹಜಪ್ರತಿಭೆಯಿಂದ, ಮನಸ್ಸಿನ ಉದಾರತೆಯಿಂದ, ವಸ್ತು ವೈವಿಧ್ಯ ಹಾಗೂ ಛಂದೋ ವೈವಿಧ್ಯಗಳಿಂದ, ಸಮಕಾಲೀನ ಜೀವನ ಪ್ರಜ್ಞೆಯಿಂದ, ಪಂಥಬದ್ಧವಲ್ಲದ ಉದಾತ್ತ ವ್ಯಕ್ತಿತ್ವದಿಂದ ದಾಸಪರಂಪರೆಯಲ್ಲಿ ಮಾತ್ರವಲ್ಲದೆ ಕನ್ನಡ ಕವಿಗಳ ಪಂಕ್ತಿಯಲ್ಲಿಯೂ ವಿಶಿಷ್ಟವಾದ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ.

ಪರಿಶೀಲನ (೧೯೬೭)

* * *


[1] ಕಾಡಿನಲ್ಲಿ ನಳನು ಬಿಟ್ಟುಹೋದ ನಂತರ ದಮಯಂತಿ ಕೆಲವು ವರ್ತಕರ ಜೊತೆ ಸೇರಿ ಪ್ರಯಾಣವನ್ನು ಮುಂದುವರಿಸುತ್ತಾಳೆ; ಒಮ್ಮೆ ಕಾಡಿನಲ್ಲಿ ಬಿಡಾರ ಬಿಟ್ಟಿರುವಾಗ ರಾತ್ರಿ ಕಾಡಾನೆಗಳು ನುಗ್ಗಿ ಧಾಳಿಮಾಡುತ್ತವೆ. ಆಗ ದಮಯಂತಿ  ‘ವನಜನಾಭ ಮುಕುಂದ’ ಎಂದು ಪ್ರಾರ್ಥಿಸುತ್ತಾಳೆ. ಅನೆಗಳು ಚದುರಿ ಹೋಗುತ್ತವೆ. ‘ದೈವವ ನೆನೆವ ಭಕ್ತರಿಗುಂಟೆ ಭಯ’ ಎನ್ನುತ್ತಾನೆ ಕವಿ; ನಳಚರಿತ್ರೆ: ೫-೫೦.

[2] ಜೂಜಿನಲ್ಲಿ ಸೋತು, ಸತಿ ಮತ್ತು ಸಹೋದರರೊಂದಿಗೆ ವನವಾಸದಲ್ಲಿದ್ದ ಧರ್ಮರಾಜ, ಧೌಮ್ಯಋಷಿಗಳ ಎದುರು ತನ್ನ ಪಾಡನ್ನು ಹಳಿದುಕೊಂಡಾಗ, ಅವರು ಅವನನ್ನು ಸಂತೈಸಲು, ಹಿಂದೆ ನಳಮಹಾರಾಜ ಸತಿಯನ್ನಗಲಿ ಕಟ್ಟಡವಿಯಲ್ಲಿ ಪಾಡುಪಟ್ಟನೆನ್ನುವ ಕಥಾ ವೃತ್ತಾಂತವನ್ನು ಹೇಳಿದಂತೆ ಕನಕದಾಸರು ನಿರೂಪಿಸಿದ್ದಾರೆ, ನಳಚರಿತ್ರೆಯಲ್ಲಿ. ಅಲ್ಲಿ ಆ ಋಷಿಗಳು ಆ ಕಥೆಯನ್ನು ಧರ್ಮರಾಯನಿಗೆ ಹೇಳಲು ತಕ್ಕ ಕಾರಣವಿದೆ. ಆದರೆ ರಾಮಧಾನ್ಯ ಚರಿತೆಯಲ್ಲಿ ಶಾಂಡಿಲ್ಯ ಮಹರ್ಷಿಗಳು ಅಂಥ ಯಾವ ಕಾರಣವೂ ಕೋರಿಕೆಯೂ ಇಲ್ಲದೆ ‘ರಘುನಂದನನ ಚರಿತೆ’ಯನ್ನರುಹಲು ರಾಮಧಾನ್ಯ ಅಥವಾ ರಾಗಿಯ ಚರಿತ್ರೆಯನ್ನೇ ಹೇಳುತ್ತಾರೆ.

[3] ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ‘ಕರ್ನಾಟಕ ಜನಜೀವನ’ ಎಂಬ ಗ್ರಂಥದಲ್ಲಿ ‘ಕನಕದಾಸರು ಕಂಡ ವಿಜಯನಗರ’ -ಎಂಬ ವಿಸ್ತಾರವಾದ ಪ್ರಬಂಧವಿದೆ. ಕುತೂಹಲವುಳ್ಳವರು ನೋಡಬಹುದು.

[4] ಡಾ. ರಂ.ಶ್ರೀ. ಮುಗಳಿ: ಕನ್ನಡ ಸಾಹಿತ್ಯ ಚರಿತ್ರೆ, ಪುಟ ೨೯೦.

[5] ಹರಿಭಕ್ತಿಸಾರ. ರಾಮಧಾನ್ಯ ಚರಿತದಲ್ಲಿ ಅಲ್ಲಲ್ಲಿ, ನಳಚರಿತ್ರೆಯಲ್ಲಿ ವಿಶೇಷವಾಗಿ ಕುಮಾರ ವ್ಯಾಸನ ಪ್ರಭಾವವಿದೆ. ನಳ-ಪುಷ್ಕರ ಇವರ ದ್ಯೂತ ಪ್ರಸಂಗದಲ್ಲಿ (ಸಂಧಿ ೪- ಪದ್ಯ ೩೦, ೩೧, ೩೩, ೩೪, ೩೭) ಕುಮಾರವ್ಯಾಸರ ಸಭಾಪರ್ವದ ಪ್ರಭಾವ ಎದ್ದು ಕಾಣುತ್ತದೆ.