ಶ್ರೀ ಕೃಷ್ಣದೇವರಾಯ ವಿಜಯನಗರದ ಸಾಮ್ರಾಟನಾಗಿದ್ದ ಕಾಲ. ಅವನ ವೈಭವ, ಅವನ ರಾಜ್ಯದ ವೈಭವ ಚರಿತ್ರೆಯಲ್ಲಿ ಪ್ರಸಿದ್ಧ. ಅವನಿಂದ ರತ್ನಗಳ ಅಭಿಷೇಕ ಮಾಡಿಸಿಕೊಂಡ ಶ್ರೀ ವ್ಯಾಸರಾಯರು ಅವನ ಗುರುಗಳು.

ಅವರಿಗೆ ಹಲವರು ಶಿಷ್ಯರು. ಅವರಲ್ಲಿ ಒಬ್ಬರು ಕನಕದಾಸ ಎಂಬುವರು. ಕನಕದಾಸರನ್ನು ಕಂಡರೆ ವ್ಯಾಸರಾಯರಿಗೆ ತುಂಬ ವಾತ್ಸಲ್ಯ. ಆದರೆ ಅವರ ಇತರ ಶಿಷ್ಯರಿಗೆ ಕನಕದಾಸರನ್ನು ಕಂಡರೆ ಹೊಟ್ಟೆ ಉರಿ. ಕಾರಣ ಕನಕದಾಸರು ಹುಟ್ಟಿದ್ದು ಕೆಳಗಿನ ಜಾತಿ, ತಾವು ಮೇಲಿನ ಜಾತಿಯವರು ಎಂಬ ಅಹಂಕಾರ.

ಒಂದು ಸಲ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರನ್ನೆಲ್ಲಾ ಕರೆದು, “ಇಂದು ಏಕಾದಶಿ, ಹಸಿವಿನ ಬಾಧೆಯನ್ನು ತಡೆಯಲು ಆಗದು. ಒಂದೊಂದು ಬಾಳೆ ಹಣ್ಣನ್ನು ನಿಮ್ಮ ಕೈಗೆ ಹಾಕುತ್ತೇನೆ; ಯಾರೂ ಇಲ್ಲದ ಸಳ್ಥಕ್ಕೆ ಹೋಗಿ ಯಾರೂ ನೋಡದಂತೆ ಈ ಹಣ್ಣು ತಿನ್ನಿರಿ” ಎಂದು ಹೇಳಿದರು. ಶಿಷ್ಯರಿಗೆ ಬಾಳೆಹಣ್ಣುಗಳನ್ನು ಕೊಟ್ಟರು. ಕನಕದಾಸರನ್ನು ಬಿಟ್ಟು ಇತರ ಶಿಷ್ಯರು – ಒಬ್ಬ ದನದ ಕೊಟ್ಟಿಗೆಯಲ್ಲಿ, ಮತ್ತೊಬ್ಬ ಕತ್ತಲೆ ಕೊಣೆಯಲ್ಲಿ, ಮೂರನೆಯವನು ಊರ ಹೊರಗೆ ಬಯಲಿನಲ್ಲಿ – ಹೀಗೆ ಬಾಳೆಹಣ್ಣನ್ನು ತಿಂದು ಬಂದರು.

ವ್ಯಾಸರಾಯರು ಎಲ್ಲರನ್ನೂ ಕರೆದು, “ನನ್ನ ಮಾತನ್ನು ನಡೆಸಿದಿರಾ? ಯಾರೂ ಇಲ್ಲದ ಕಡೆ ಹಣ್ಣು ತಿಂದಿರಾ?” ಎಂದು ಕೇಳಿದರು.

“ಓಹೋ, ಹಣ್ಣು ತಿಂದು ಬಂದೆವು. ಹಣ್ಣು ತಿನ್ನುವಾಗ ನಮ್ಮನ್ನು ಯಾರೂ ನೋಡಲಿಲ್ಲ” ಎಂದು ಶಿಷ್ಯರು ಹೆಮ್ಮೆಯಿಂದ ಹೇಳಿದರು.

“ಕನಕ, ನೀನು ಎಲ್ಲಿ ತಿಂದೆಯಪ್ಪಾ ನಿನಗೆ ಕೊಟ್ಟ ಬಾಳೆಹಣ್ಣನ್ನು ಕನಕದಾಸರು ಅವರ ಮುಂದಿಟ್ಟು,

“ಸ್ವಾಮೀ, ಯಾರೂ ಇಲ್ಲದ ಸ್ಥಳ ನನಗೆ ತೋರಲಿಲ್ಲ ಎಲ್ಲಿ ಹೋದರಲ್ಲಿ ಭಗವಂತನ ಕಣ್ಣುಗಳು ನನ್ನ ಮೇಲೆ, ನನ್ನ ಆಚರಣೆಯ ಮೇಲೆ ನೆಟ್ಟಿವೆ. ಭಗವಂತನು ಇಲ್ಲದ ಸ್ಥಳವೆಲ್ಲಿ? ಅದುದರಿಂದ ಹಣ್ಣು ತಿನ್ನದೆ ಮರಳಿ ತಂದಿದ್ದೇನೆ” ಎಂದರು.

ಎಲ್ಲ ಶಿಷ್ಯರಿಗೂ ವ್ಯಾಸರಾಯರು, “ದೇವರು ಎಲ್ಲೆಲ್ಲಿಯೂ ಇದ್ದಾನೆ, ನಮ್ಮ ಎಲ್ಲ ಕೆಲಸಗಳನ್ನು ನೋಡುತ್ತಿರುತ್ತಾನೆ ಎಂದು ಹೇಳಿಕೊಡುತ್ತಿದ್ದರು. ಅದನ್ನು ನೆನಪಿಟ್ಟು ಅನುಸರಿಸಿದವರು ಕನಕದಾಸರೊಬ್ಬರೇ. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರಿಗೆ ಪರಮಾನಂದವಾಯಿತು. ಉಳಿದ ಶಿಷ್ಯಂದಿರು, “ಛೇ, ನಮಗೆ ಇಷ್ಟೂ ತಿಳಿಯಲಿಲ್ಲವಲ್ಲ” ಎಂದು ಕೈ ಕೈ ಹಿಸುಕಿಕೊಂಡರು.

ವ್ಯಾಸರಾಯರು ತಮ್ಮ ಶಿಷ್ಯರಿಗೆ ಬುದ್ಧಿ ಹೇಳಿದರು: “ಕನಕ ಸಾಮಾನ್ಯನಲ್ಲ. ಆತನನ್ನು ಕೆಣಕದಿರಿ; ಕೆಣಕಿ ಅಮೇಲೆ ದುಃಖ ಪಡಬೇಡಿ. ಕನಕದಾಸ ದೇವರನ್ನು ಸಾಕ್ಷಾತ್ ಕಂಡ ಪವಾಡ ಪುರುಷ”.

ಚಿಕ್ಕ ವಯಸ್ಸಿನಲ್ಲಿಯೇ ಡಣ್ಣಾಯಕ

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.

ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋದ ಕುರುಬರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.

ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು. (ತಿಮ್ಮಪ್ಪ ನಾಯಕರ ತಂದೆ ತಾಯಿಯ ವಿಷಯ, ಬಾಲ್ಯದ ವಿಷಯ ಇವುಗಳಲ್ಲಿಯೂ ಬೇರೆ ಬೇರೆ ಅಭಿಪ್ರಾಯಗಳಿವೆ.)

ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.

ಕನಕನಾಯಕ

ತಿಮ್ಮಪ್ಪನಾಯಕ ಸ್ವಭಾವದಿಂದ ಬಲು ಉದಾರಿ. ತನ್ನ ಗಳಿಕೆಯನ್ನೆಲ್ಲ ಬಡಬಗ್ಗರಿಗೆ ಹಂಚುವುದರಲ್ಲಿ ಆತನಿಗೆ ಬಹು ಆನಂದ.

ಒಂದು ಸಲ ಆತ ತನಗಾಗಿ ಒಂದು ಹೊಸ ಮನೆಯನ್ನು ಕಟ್ಟಿಕೊಳ್ಳಬೇಕು ಎಂದು ಒಂದು ಸ್ಥಳ ಆಯ್ದುಕೊಂಡ. ಅಲ್ಲಿ ಮನೆಕಟ್ಟಲು ಅಡಿಪಾಯ ತೋಡುವಾಗ ಭೂಮಿಯಲ್ಲಿ ಚಿನ್ನ, ವಜ್ರ, ವೈಢೂರ್ಯಗಳಿಂದ ತುಂಬಿದ ಕೊಪ್ಪರಿಗೆಯೊಂದು ಕಂಡಿತು. ಅಪಾರ ಸಂಪತ್ತು ತಿಮ್ಮಪ್ಪನಾಯಕನ ಕೈಸೇರಿತು. ತನ್ನ ಅದೃಷ್ಟದಿಂದಾಗಿ ದೊರಕಿದ ಆ ಕೊಪ್ಪರಿಗೆಯಲ್ಲಿಯ ಧನಕನಕವನ್ನೆಲ್ಲ ತಿಮ್ಮಪ್ಪನಾಯಕ ಬಡಬಗ್ಗರಿಗೆ ಧಾರಾಳವಾಗಿ ದಾನ ಮಾಡಿದ. ಈ ದಾನಶೂರತ್ವವನ್ನು ಕಂಡು ಜನರು ಈ ಬಂಗಾರದ ಮನುಷ್ಯನನ್ನು “ಕನಕನಾಯಕ” ಎಂದು ಹಾಡಿ ಹೊಗಳಿದರು. ಅಂದಿನಿಂದ ತಿಮ್ಮಪ್ಪನಾಯಕನೆಂಬ ಹೆಸರು ಜನ ಮನದಿಂದ ಮರೆಯಾಗಿ “ಕನಕನಾಯಕ” ನೆಂಬ ಅಡ್ಡ ಹೆಸರೇ ಗಟ್ಟಿಯಾಗಿ ಉಳಿದುಕೊಂಡಿತು.

ತನಗೆ ಕೊಪ್ಪರಿಗೆ ದೊರೆತದ್ದು ಶ್ರೀ ಆದಿಕೇಶವನ ದಯದಿಂದಲೇ ಎಂದು ಕನಕನಾಯಕ ಭಾವಿಸಿದ್ದ. ತನ್ನ ವೇಲೆ ಇಷ್ಟು ಕೃಪೆ ತೋರಿದ ದೇವರಿಗೆ ಒಂದು ದೇವಾಲಯವನ್ನು ಕಟ್ಟಿಸಬೇಕೆಂದು ಆತ ಬಯಸಿದ.

ಬಾಡವು ಹೆದ್ದಾರಿಯಲ್ಲಿ ಇರುವುದರಿಂದ ಮತ್ತು ಆಯಕಟ್ಟಿನ ಪ್ರದೇಶವಾಗಿದ್ದುದರಿಂದ ಬಹಮನೀ ಸುಲ್ತಾನರು ಆಗಾಗ ಬಾಡದ ಮೇಲೆ ದಾಳಿ ಮಾಡುತ್ತಿದ್ದರು. ಇವರ ಕಿರುಕುಳದಿಂದ ದೇವಾಲಯಕ್ಕೆ ಹಾನಿ ತಟ್ಟೀತು ಎನ್ನಿಸಿತು ಕನಕನಾಯಕನಿಗೆ. ಶ್ರೀ ಆದಿಕೇಶವನ ದೇವಾಲಯವನ್ನು ಬಾಡದಲ್ಲಿ ಕಟ್ಟಿಸದೆ ಸಮೀಪದಲ್ಲಿಯೇ ನಿಸರ್ಗ ಸೌಂದರ್ಯದ ಬೀಡಾಗಿದ್ದ ಕಾಗಿನಲ್ಲಿ ಅಥವಾ ಕಾಗಿನೆಲೆ ಎಂಬ ಊರಿನಲ್ಲಿ ಕಟ್ಟಿಸಿದನು.

ನನ್ನ ದಾಸನಾಗು

ಕನಕನಾಯಕನ ಇಷ್ಟ ದೈವವಾದ ಆದಿಕೇಶವ ಆಗಾಗ ಕನಕನ ಕನಸಿನಲ್ಲಿ ಕಂಡು,

“ಕನಕಾ, ನನ್ನ ದಾಸನಾಗು, ನನ್ನ ದಾಸನಾಗು” ಎಂದು ಆದೇಶ ನೀಡುತ್ತಿದ್ದ.

ಆದರೆ ಡಣ್ಣಾಯಕನಾದ ಕನಕನಾಯಕ, “ಕೈಯಲ್ಲಿ ಕತ್ತಿ ಹಿಡಿದು ವೈರಿಗಳನ್ನು ಸದೆಬಡಿಯುವುದನ್ನು ಬಿಟ್ಟು “ಟಿಂವ್ ಟಿಂವ್” ಎಂದು ತಂಬೂರಿ ಮೀಟುತ್ತ ಭಿಕ್ಷೆ ಬೇಡಿ ತಿನ್ನುವ ದಾಸನಾಗಲೇ ನಾನು? ಎಂದಿಗೂ ಸಾಧ್ಯವಿಲ್ಲ” ಎಂದು ಹೇಳಿಕೊಳ್ಳುತ್ತಿದ್ದ.

ಆದರೆ ಭಗವಂತನ ಇಚ್ಛೆಗೆ ಎದುರಂಟೆ? ಒಂದು ಸಲ ವೈರಿ ಸೈನ್ಯ ಕನಕನಾಯಕನ ಪಾಳೆಯನ್ನು ಮುತ್ತಿಗೆ ಹಾಕಿತು. ಕನಕನಾಯಕ ಜೀವದ ಮೇಲಿನ ಆಸೆ ಬಿಟ್ಟು ಹೋರಾಡಿದ. ಆತನ ಸೈನಿಕರೆಲ್ಲರು ಹೋರಾಡಿ ಮಡಿದರು. ಸ್ವತಃ ಕನಕನಾಯಕನಿಗೂ ಏಟುಗಳು ಬಿದ್ದವು ಆತ ರಣರಂಗದಲ್ಲಿ ಅರೆಜೀವವಾಗಿ ಬಿದ್ದಿದ್ದ. ಆಗ ಆತನಿಗೆ ಅಶರೀರವಾಣಿ ಕೇಳಿತು.

“ಕನಕಾ, ಈಗಲಾದರೂ ಹೇಳು, ನನ್ನ ದಾಸನಾಗುವಿಯಷ್ಟೇ?”

“ಓ, ಇದು ನನ್ನೊಡೆಯ ಶ್ರೀ ಆದಿಕೇಶವನ ಪ್ರಶ್ನೆ!” ಎಂದುಕೊಂಡ ಕನಕನಾಯಕ.

ದರ್ಪದ ಡಣ್ಣಾಯಕತನದ ಗದ್ದುಗೆ! ರಾಜ ಠೀವಿಯ ಕುದುರೆ ಸವಾರಿ!! ಮಿರಮಿರನೆ ಮಿರುಗುವ ಕತ್ತಿಯನ್ನು ಝಳಪಿಸುವ ವೈಖರಿ!!! ರಾಜವೈಭವ ಒಂದು ಕಡೆಯಾದರೆ,

“ಟಿಂವ್ ಟಿಂವ್ ಎಂದು ತಂಬೂರಿ ಮಿಡಿತ! ವೈರಾಗ್ಯದ ಕಾವಿಬಟ್ಟೆ! ಭಿಕ್ಷಾಟನೆ! ಹರಿದಾಸತ್ವದ ಈ ಲಕ್ಷಣಗಳು ಇನ್ನೊಂದು ಕಡೆಗೆ.

“ಕನಕಾ, ಬೇಗ ಹೇಳು. ಈಗಲಾದರೂ ನನ್ನ ದಾಸನಾಗುವಿಯಷ್ಟೇ?” ಅಶರೀರವಾಣಿ ಮತ್ತೆ ಮತ್ತೆ ಅದೇ ಪ್ರಶ್ನೇಯನ್ನು ಕೇಳುತ್ತಿದೆ.

ಕನಕನಾಯಕನಿಗೆ ಒಮ್ಮೆಲೆ ಹೊಳೆಯಿತು: ತಾನು ಡಣ್ಣಾಯಕನಾಗಿರುವುದಕ್ಕಿಂತಲೂ ದಾಸನಾಗಿ ಬಾಳುವುದೇ ದೇವರ ಸಂಕಲ್ಪವಿದ್ದಂತಿದೆ. ಬಹುಶಃ ದಾಸನಾಗುವುದರಿಂದಲೇ ತನ್ನ ಜೀವನ ಸಾರ್ಥಕವಾದೀತು. ಕನಕನಾಯಕ ತನಗರಿವಿಲ್ಲಚಂತೆಯೇ ನುಡಿದ, “ದೇವಾ, ನಾನು ದಾಸನಾಗುವೆ. ನಾನು ನಿನ್ನ ದಾಸನಾಗುವೆ. ನನ್ನದು ಒಂದೇ ಒಂದು ಬೇಡಿಕೆ. ನಾನು ಕರೆದ ಕೂಡಲೆ ನೀನು ನನಗೆ ದರ್ಶನವನ್ನು ದಯಪಾಲಿಸಬೇಕು. ನಾನು ಇಷ್ಟಪಡುವ ರೂಪದಲ್ಲಿ ನೀನು ಕಾಣಿಸಿಕೊಳ್ಳಬೇಕು.”

“ತಥಾಸ್ತು” ಅಶರೀರವಾಣಿ ಉಲಿಯಿತು.

ಕನಕನಾಯಕನ ಮೈಮೇಲಿನ ಗಾಯಗಳ ಮೇಲೆ ಯಾರೋ ಪ್ರೇಮದಿಂದ ಕೈ ಸವರಿದಂತಾಯ್ತು. ಸ್ವಲ್ಪ ಸಮಯದಲ್ಲಿಯೇ ಆತನ ಗಾಯಗಳು ಮಾಯವಾದವು. ಆತ ಚೇತರಿಸಿಕೊಂಡು ಎದ್ದ. ಆತ ಗಾಯಗೊಂಡು ಬಿದ್ದದ್ದು ಕನಕನಾಯಕನಾಗಿ, ಆತನ ಗಾಯಗಳು ಮಾಯವಾಗಿ ಆತ ಎದ್ದದ್ದು ಕನಕದಾಸರಾಗಿ!

 

"ದೇವಾ, ನಿನ್ನ ದಾಸನಾಗುವೆ......"

ಗುರುಗಳು ಬೇಕು

 

“ಈಶ ನಿನ್ನ ಭಜನೆ

ಆಶೆಯಿಂದ ಮಾಡುವೆನು

ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ ಎಂದು ಶ್ರೀ ಆದಿಕೇಶವನನ್ನು ಭಜಿಸಿ, ಹಾಡುತ್ತ ಕಾಗಿನೆಲೆಗೆ ಕನಕದಾಸರು ಬಂದರು. ಅಲ್ಲಿ ತಾವೇ ಸ್ಥಾಪಿಸಿದ ಶ್ರೀ ಆದಿಕೇಶವ ದೇವಾಲಯದಲ್ಲಿ ದೇವರ ಸ್ತುತಿ ಪೂಜೆಗಳಲ್ಲಿ ಕಾಲ ಕಳೆಯಲು ಪ್ರಾರಂಭಿಸಿದರು.

ಕನಕದಾಸರಿಗೆ, “ಗುರುಗಳ ಉಪದೇಶ ಪಡೆಯದೆ, ಶ್ರೀ ಹರಿಯ ಕರುಣೆ ಪಡೆಯಲಾಗದು” ಎಂದು ಭಾವನೆ ಮನಸ್ಸಿನಲ್ಲಿ ಮೂಡಿತು. “ಯಾರಿಂದ ಉಪದೇಶ ಪಡೆಯಲಿ? ಎಂದು ಯೋಚಿಸಲು ಪ್ರಾರಂಭಿಸಿದರು.

ಹಿಂದೆಯೇ ಹೇಳಿದಂತೆ ಆಗ ಶ್ರೀ ವ್ಯಾಸರಾಯರು ವಿಜಯನಗರದ ಪ್ರಸಿದ್ಧ ಅರಸ ಕೃಷ್ಣದೇವರಾಯನ ಗುರುಗಳಾಗಿದ್ದರು. ಅವರ ಕೀರ್ತಿ ದಶದಿಕ್ಕುಗಳಲ್ಲಿಯೂ ಹರಡಿತು. ಅವರ ಘನ ಮಹಿಮೆಯನ್ನು ಕೇಳಿ ಬಲ್ಲ ಕನಕದಾಸರಿಗೆ, ಅವರಿಂದ ಗುರೂಪದೇಶ ಪಡೆಯಬೇಕೆಂದು ಇಚ್ಛೆ ಆಯಿತು. ಕನಕದಾಸರು ಶ್ರೀ ವ್ಯಾಸರಾಯರನ್ನು ಕಾಣಲೆಂದು ವಿಜಯನಗರಕ್ಕೆ ಹೊರಟರು.

ಕನಕದಾಸರು ವ್ಯಾಸರಾಯರ ಶಿಷ್ಯರಾಗಲು ಹೋದಾಗ ಒಂದು ವಿಶೇಷವಾದ ಘಟನೆ ನಡೆಯಿತು ಎಂದು ಭಕ್ತರು ಹೇಳುತ್ತಾರೆ.

ಶ್ರೀ ಕೃಷ್ಣದೇವರಾಯನು ಶ್ರೀ ವ್ಯಾಸರಾಯರಿಗೆ ಮದನಪಲ್ಲಿಯ ಹತ್ತಿರದ ಒಂದು ಹಳ್ಳಿಯನ್ನು ಉಂಬಳಿಯಾಗಿ ಕೊಟ್ಟದ್ದನು. ಅಲ್ಲಿ ಒಂದು ಕೆರೆಯನ್ನ ಕಟ್ಟಿಸುವುದರಲ್ಲಿ ಶ್ರೀ ವ್ಯಾಸರಾಯರು ನಿರತರಾಗಿದ್ದರು. ಆ ಪ್ರದೇಶದಲ್ಲಿದ್ದ ದೊಡ್ಡ ದೊಡ್ಡ ಬಂಡೆಗಲ್ಲುಗಳು ಕೆರೆಯ ಕೆಲಸಕ್ಕೆ ತಡೆಯಾಗಿದ್ದವು. ಇವನ್ನು ಬದಿಗೆ ಸರಿಸುವುದು ಹೇಗೆ ಎಂದು ಯೋಚಿಸುತ್ತ ನಿಂತಿದ್ದ ಶ್ರೀ ವ್ಯಾಸರಾಯರ ಬಳಿಗೆ ಬಂದರು ಕನಕದಾಸರು.

ಸ್ವಾಮಿ, ನಾನು ಕನಕನೆಂಬ ಕುರುಬ. ತಮ್ಮಿಂದ ಗುರುಮಂತ್ರ ಪಡೆಯಲು ಬಂದಿದ್ದೇನೆ. ದಯೆತೋರಿ ಗುರುಮಂತ್ರ ಕರುಣಿಸಿ” ಎಂದು ಕೇಳಿದರು.

ಶ್ರೀ ವ್ಯಾಸರಾಯರು ಈ ಹೊಸಬನನ್ನು ನೋಡಿದರು. ಮನಸ್ಸು ಹಗುರವಾಗಿದ್ದಿತೇನೋ! ನಗುನಗುತ್ತಾ,

“ಓಹೋ, ನೀನು ಕರುಬನೋ? “ಬ್ಯಾ” “ಮ್ಯಾ” ಎಂಬ ಕುರಿಮಂತ್ರ ನಿನಗೆ ಬರ್ತಾ ಇರಬಹುದು. ಇನ್ನು ಕೋಣಮಂತ್ರವೇ ನಿನಗೆ ಮುಂದಿನ ಪಾಠ, ಸರಿಯಷ್ಟೇ?” ಎಂದರು.

“ಸರಿ ಸ್ವಾಮೀ, ಹಾಗೇ ಆಗಲಿ, ನಾನು ಕೋಣ ಮಂತ್ರವನ್ನೇ ಸಿದ್ಧಸಿಕೊಳ್ಳುವೆ” ಎಂದೆನ್ನುತ್ತ ಅಲ್ಲಿಯೇ “ಕೋಣ, ಕೋಣ” ಎಂದು ಜಪ ನಡೆಸಿದರು ಕನಕದಾಸರು.

ಏನಾಶ್ಚರ್ಯ! ಸಾಕ್ಷಾತ್ ಯಮಧರ್ಮರಾಜನ ವಾಹನವಾದ ಕೋಣವು ಪ್ರತ್ಯಕ್ಷವಾಯಿತು. ಬಲಿಷ್ಠವಾದ ಈ ದೈವೀ ಕೋಣವನ್ನು ಕಾಣುತ್ತಲೇ ಶ್ರೀ ವ್ಯಾಸರಾಯರು ಆನಂದಬಾಷ್ಪಗರೆದರು. ಶ್ರೀ ವ್ಯಾಸರಾಯರಿಗೆ ಅಂತರ್ ಜ್ಞಾನದಿಂದ ತಿಳಿಯಿತು, “ಈ ಕನಕ ಬೇರಾರು ಅಲ್ಲ; ಸಾಕ್ಷಾತ್ ಯಮಧರ್ಮರಾಯನ ಅವತಾರ” ಎಂದು. ಕನಕದಾಸರನ್ನು ಪ್ರೀತಿ, ಗೌರವದಿಂದ ನೋಡಿದರು.

“ಕನಕಾ, ಈ ಬಂಡೆಗಲ್ಲುಗಳನ್ನೆಲ್ಲ ಬದಿಗೆ ಸರಿಸುವಂತೆ ಈ ಕೋಣಕ್ಕೆ ಆಜ್ಞಾಪಿಸು,” ಶ್ರೀ ವ್ಯಾಸರಾಯರೆಂದರು.

ಕನಕದಾಸರು ಕೋಣದೆಡೆಗೆ ದೃಷ್ಟಿ ಹರಿಸಿದರು. ತನ್ನ ಯಜಮಾನನ ಇಂಗಿತವನ್ನು ಅರಿತ ಕೋಣ ಶ್ರೀ ವ್ಯಾಸರಾಯರ ಆಜ್ಞೆಯನ್ನು ಪರಿಪಾಲಿಸಿತ. ಬಂಡೆಗಲ್ಲುಗಳನ್ನು ಬದಿಗೆ ಸರಿಸಿ ಕೆರೆಗೆ ಹದವಾದ ಸ್ಥಳ ಮಾಡಿಕೊಟ್ಟಿತು. ಅಲ್ಲಿ ನಿರ್ಮಿತವಾದ ಕೆರೆಯೇ  “ವ್ಯಾಸಸಮುದ್ರ”. ಬಂಡೆಗಲ್ಲಿನಲ್ಲಿಯ ತೂಬೇ “ಕನಕನತೂಬು”. ಹೀಗೆಂದು ಹಲವರ ನಂಬಿಕೆ.

ನಾನು ಹೋದರೆ ಮೋಕ್ಷಕ್ಕೆ ಹೋಗಬಹುದು

ವ್ಯಾಸರಾಯರ ಶಿಷ್ಯವೃಂದದಲ್ಲಿ ಕನಕದಾಸರ ಸೇರ್ಪಡೆಯಾಯ್ತು. ತಮ್ಮ ಶಿಷ್ಯವರ್ಗದಲ್ಲಿ ಕನಕದಾಸರ ಮೇಲೆಯೇ ಶ್ರೀ ವ್ಯಾಸರಾಯರಿಗೆ ಬಹು ಪ್ರೇಮ. ಹೀಗಾಗಿ ಸಹಪಾಠಿಗಳಿಗೆ ಕನಕದಾಸರ ವಿಷಯದಲ್ಲಿ ಎಲ್ಲಿಲ್ಲದ ಅಸೂಯೆ, ದ್ವೇಷ ಹುಟ್ಟಿ ಬೆಳೆಯಿತು. “ಈ ಕುರುಬ ದಾಸಯ್ಯನ ಮೇಲೆ ಗುರುಗಳಿಗೆ ಏಕೆ ಇಷ್ಟೊಂದು ವ್ಯಾಮೋಹ?” ಎಂದು ಇತರ ಶಿಷ್ಯರು ಪಿಸುಮಾತಿನಲ್ಲಿ “ಗುಸುಗುಸು” ಆಡುತ್ತಿದ್ದರು.

ಶಿಷ್ಯರ ಹೊಟ್ಟೆಕಿಚ್ಚಿನ ಮಾತುಗಳು ವ್ಯಾಸರಾಯರ ಕಿವಿಗೂ ಬಿದ್ದವು. ಕನಕದಾಸರ ಯೋಗ್ಯತೆಯನ್ನು ತಮ್ಮ ಶಿಷ್ಯರಿಗೆ ಮನಗಾಣಿಸಿಕೊಡಬೇಕೆಂದು ವ್ಯಾಸರಾಯರು ಒಂದು ಹಂಚಿಕೆ ಹೂಡಿದರು. ಒಂದು ದಿನ ಅವರ ಮಧ್ಯೆ ವ್ಯಾಸರಾಯರು ಕುಳಿತುಕೊಂಡಿದ್ದಾಗ, “ಮೋಕ್ಷಕ್ಕೆ ಹೋಗಲು ಯಾರು ಅರ್ಹರು?” ಎಂಬುದರ ಬಗೆಗೆ ವಾದ ನಡೆಯಿತು. ವ್ಯಾಸರಾಯರು ಕನಕದಾಸರನ್ನು ಕೇಳಿದರು.

“ಕನಕಾ, ನಾನು ಮೋಕ್ಷಕ್ಕೆ ಹೋಗಬಹುದೇ?”

ಕನಕದಾಸರು ವ್ಯಾಸರಾಯರನ್ನು ಒಂದು ಕ್ಷಣ ನೋಡಿ, “ಇಲ್ಲ” ಎಂಬಂತೆ ತಲೆ ಆಡಿಸಿದರು.

ಇತರ ಶಿಷ್ಯರಿಗೆ ದಿಗ್ಬ್ರಮೆ. ಗುರುಗಳ ಯೋಗ್ಯತೆಯನ್ನೇ ಶಂಕಿಸುವಷ್ಟು ಅಹಂಕಾರವೇ ಈತನಿಗೆ ಎನ್ನಿಸಿತು ಅವರಿಗೆ. ಕನಕದಾಸರನ್ನು ಗುರುಗಳು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದು ಅವರ ಭಾವನೆ.

“ಸರಿ, ಪುರಂದರದಾಸರಾದರೂ ಮೋಕ್ಷಕ್ಕೆ ಹೋದಾರು, ಅಲ್ಲವೆ” ಪುರಂದರದಾಸರೆಡೆಗೆ ಬೆರಳು ತೋರಿ ವ್ಯಾಸರಾಯರು ಕನಕದಾಸರನ್ನು ಪ್ರಶ್ನಿಸಿದರು.

“ಊಹೂಂ” ಕನಕದಾಸರು ತಲೆಯಾಡಿಸಿದರು.

ಅಲ್ಲಿ ನೆರೆದ ಶಿಷ್ಯರಿಗೆ ಸಿಟ್ಟು ಭುಗಿಲೆಂದು ಉಕ್ಕಿತು. ಆದರೆ ಗುರುಗಳಾದ ಶ್ರೀ ವ್ಯಾಸರಾಯರ ಮುಖ ಪ್ರಸನ್ನವಾಗಿದ್ದಿತು, ಗಂಭೀರವಾಗಿದ್ದಿತು. ಶ್ರೀ ಪುರಂದರದಾಸರ ನಸುನಗೆಯೂ ಮಾಸಲಿಲ್ಲ.

“ಅದು ಬಿಡಪ್ಪ ಕನಕ. ನೀನಾದರೂ ಮೋಕ್ಷಕ್ಕೆ ಹೋಗುವಿತಾನೇ?” ವ್ಯಾಸರಾಯರು ಮತ್ತೊಂದು ಪ್ರಶ್ನೆ ಎಸೆದರು.

ಕನಕದಾಸರ ಉತ್ತರಕ್ಕಾಗಿ ಶಿಷ್ಯಗಣ ಕಿವಿತೆರೆದು ಕಾಯುತ್ತಿತ್ತು.

“ನಾನು ಹೋದರೆ ಹೋಗಬಹುದು,” ಕನಕದಾಸರು ಉತ್ತರಿಸಿದರು.

“ಎಂಥ ಸೊಕ್ಕು!” ಶಿಷ್ಯಗಣವೆಲ್ಲ ಕೋಪದಿಂದ ಕೂಗಿತು.

ವ್ಯಾಸರಾಯರು ಕೈ ಎತ್ತಿ ಸದ್ದು” ಎಂದರು.

“ಅದು ಹೇಗೆ ಮಗು, ನೀನು ಮಾತ್ರ ಮೋಕ್ಷಕ್ಕೆ ಹೋಗುವುದು?” ನಸುನಗುತ್ತ ವ್ಯಾಸರಾಯರು ಕೇಳಿದರು.

“ಮಹಾಸ್ವಾಮೀ, ನಾನು ಅಂದದ್ದು “ನಾನು” ಹೋದರೆ ಹೋಗಬಹುದು ಎಂದು. ನಾನು ಕನಕದಾಸ ಹೋಗುತ್ತೇನೆ ಎಂದಲ್ಲ. ನಾನು ಎಂಬ ಅಹಂಭಾವ, ಸ್ವಾರ್ಥ ಹೋದರೆ ಮನುಷ್ಯ ಮೋಕ್ಷಕ್ಕೆ ಹೋಗಬಹುದು ಎಂಬುದೇ ನನ್ನ ಅಭಿಪ್ರಾಯ.”

ವ್ಯಾಸರಾಯರು ಕನಕದಾಸರನ್ನು ಮೆಚ್ಚಿಕೆಯಿಂದ ನೋಡಿದರು. ಪುರಂದರದಾಸರು “ಭಲೆ, ಭಲೆ” ಎಂದರು. ಉಳಿದ ಶಿಷ್ಯರು ಕನಕದಾಸರ ಮಾತಿನ ನಿಜವಾದ ಅರ್ಥ ನಮಗೆ ತಿಳಿಯಲಿಲ್ಲವಲ್ಲ ಎಂದು ನಾಚಿದರು.

ವ್ಯಾಸರಾಯರು ದೇವರ ಪೂಜೆ ನೈವೇದ್ಯಾದಿಗಳನ್ನು ಮುಗಿಸಿದ ಕೂಡಲೇ ಕನಕದಾಸರನ್ನು ಕರೆದು ಎಲ್ಲರಿಗಿಂತಲೂ ಮೊದಲು ಅವರಿಗೆ ತೀರ್ಥ, ಪ್ರಸಾದ ಕೊಡುವ ವಾಡಿಕೆಯನ್ನು ಹಾಕಿಕೊಂಡಿದ್ದರು. ಕನಕದಾಸರಿಗೆ ಸಲ್ಲುತ್ತಿದ್ದ ಈ ಅಗ್ರಪ್ರಾಶಸ್ತ್ಯವನ್ನು ಕಂಡು ಉಳಿದ ಶಿಷ್ಯಂದಿರು ಮನದಲ್ಲಿಯೇ ಕರುಬುತ್ತಿದ್ದರು. ವ್ಯಾಸರಾಯರು ಆಗಾಗ ತಮ್ಮ ಶಿಷ್ಯಂದಿರಲ್ಲಿ ಪರೀಕ್ಷೆಗಳನ್ನೊಡ್ಡಿ, ಕನಕದಾಸರ ಸೂಕ್ಷ್ಮಪ್ರಜ್ಞೆಯನ್ನು ಬೆಳಕಿಗೆ ತಂದು, ಅವರು ತಮ್ಮ ಪ್ರೀತಿಗೆ, ಅಗ್ರ ಪ್ರಾಶಸ್ತ್ಯಕ್ಕೆ ಹೇಗೆ ಸುಯೋಗ್ಯರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದರು. ಇಂಥ ಒಂದು ಪ್ರಸಂಗವನ್ನು ಸ್ವತಃ ಪುರಂದರದಾಸರೇ ತಮ್ಮ ಒಂದು ಪದದದಲ್ಲಿ ನಿವೇದಿಸಿದ್ದಾರೆ.

“ಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬರೋ” ಎಂಬ ಪಲ್ಲವಿಯಿಂದ ಪುರಂದರದಾಸರ ಒಂದು ಹಾಡು ಆರಂಭವಾಗುತ್ತದೆ.

ವ್ಯಾಸರಾಯರು ಶಿಷ್ಯರಿಗೆ ಏಕಾದಶಿ ದಿನ ಬಾಳೆ ಹಣ್ಣನ್ನು ಕೊಟ್ಟು, “ಯಾರಿಗೂ ಕಾಣದ ಹಾಗೆ ತಿನ್ನಿ” ಎಂದು ಪರೀಕ್ಷೆಮಾಡಿದುದನ್ನು ವರ್ಣಿಸಿದ್ದಾರೆ.

ದೇವರ ದರ್ಶನ

“ಕನಕದಾಸರು ದೇವರನ್ನು ಕಂಡವರು” ಎಂದು ಗುರುಗಳು ಹೇಳಿದರಲ್ಲವೆ?

ಇದರನಂತರ ಒಂದು ಸ್ವಾರಸ್ಯಕರ ಸಂಗತಿ ನಡೆಯಿತು ಎಂದು ಭಕ್ತರು ಹೇಳುತ್ತಾರೆ.

“ಸ್ವಾಮೀ, ನಾವೂ ದೇವರನ್ನು ಕಾಣಬೇಕು. ನಮಗೂ ಸಾಕ್ಷಾತ್ ದೇವರ ದರ್ಶನವಾಗಬೇಕು” ಎಂದು ದುಂಬಾಲು ಬಿದ್ದರು ಶಿಷ್ಯರು.

ವ್ಯಾಸರಾಯರು ನಸುನಕ್ಕು “ಆಗಲಿ” ಎಂದು ಹೇಳಿ ಕನಕದಾಸರನ್ನು ಕರೆಕಳಿಸಿದರು. ಅವರೆದುರಿಗೆ ಕನಕದಾಸರು ಬಂದು ಕೈಜೋಡಿಸಿ ನಿಂತರು. ವ್ಯಾಸರಾರರು,

“ಈ ನನ್ನ ಶಿಷ್ಯರಿಗೆಲ್ಲ ಸಾಕ್ಷಾತ್ ಸ್ವಾಮಿಯನ್ನು ನೋಡುವ ಬಯಕೆಯಾಗಿದೆ. ಅವರಿಗೆ ದೇವರ ದರ್ಶನ ಮಾಡಿಸು” ಎಂದರು.

“ಸರಿ ಸ್ವಾಮೀ, ನಾಳೆಯೇ ಮಾಡಿಸುತ್ತೇನೆ. ಸನ್ನಿಧಾನ ದೇವರ ಪೂಜೆ ಮಾಡುವ ವೇಳೆಗೆ ದೇವರನ್ನು ತೋರಿಸುತ್ತೇನೆ” ಎಂದರು ಕನಕದಾಸರು.

ಮರುದಿನ ವ್ಯಾಸರಾಯರ ಪೂಜಾ ಸಮಯಕ್ಕೆ ಮಠದಲ್ಲಿ ಜನರ ನೂಕುನುಗ್ಗಲು. “ನಾವು ಕಣ್ಣಾರೆ ದೇವರನ್ನು ಕಾಣುತ್ತೇವೆ” ಎಂದು ಮೈಯೆಲ್ಲ ಕಣ್ಣಾಗಿ ಜನರು ಉತ್ಸುಕರಾಗಿ ಕುಳಿತಿದ್ದರು.

ಕನಕನಾಯಕ ಕನಕದಾಸನಾಗುವ ಮುನ್ನ ಆದಿಕೇಶವನು, “ನೀನು ಕರೆದಾಗ ನೀನು ಬಯಸಿದ ರೂಪದಲ್ಲಿ ಬಂದು ದರ್ಶನವನ್ನು ಕೊಡುತ್ತೇನೆ” ಎಂದು ಮಾತು ಕೊಟ್ಟಿದ್ದನಷ್ಟೆ. ಆದರೆ ಸಕಲ ಜನಸಮೂಹಕ್ಕೆ ದೇವದರ್ಶನದ ಭಾಗ್ಯವೆಲ್ಲಿ? ಅದಕ್ಕೆ ತಕ್ಕ ಸಾಧನೆ ಮಾಡದೆ, ಮನಸ್ಸನ್ನು ಬೆಳೆಸಿಕೊಳ್ಳದೆ ಇದ್ದ ಜನಸಮೂಹಕ್ಕೆ ಭಗವಂತನು ಕಾಣಿಸಿಕೊಳ್ಳುವನೆ?”

ಆದರೆ ಭಗವಂತನು ಕೊಟ್ಟ ಭಾಷೆಯ ಮೇರೆಗೆ ಕನಕದಾಸರು ಕರೆದುದರಿಂದ ಭಗವಂತನು ಪ್ರತ್ಯಕ್ಷವಾಗಲೇಬೇಕಲ್ಲವೇ?

ಭಗವಂತ ಕೇಳಿದ: “ಕನಕ, ಯಾವ ರೂಪದಲ್ಲಿ ದರ್ಶನವನ್ನು ಕೊಡಲಿ?”

“ಭೈರವ ರೂಪದಲ್ಲಿ ಬನ್ನಿ” ದಾಸರು ಬಿನ್ನವಿಸಿದರು.

ಸ್ವಲ್ಪಹೊತ್ತು ಕಳೆಯಿತು. ಗುರು ವ್ಯಾಸರಾಯರು ಪೂಜೆ ನಡೆಸುತ್ತಿದ್ದಾರೆ.

ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ನಾಯಿ ಮಠವನ್ನು ಹೊಕ್ಕಿತು.

ಅದನ್ನು ಕಾಣುತ್ತಲೆ ವ್ಯಾಸರಾಯರು, ಕನಕದಾಸರು ಮತ್ತು ಪುರಂದರದಾಸರು “ಧನ್ಯರಾದೆವು, ಧನ್ಯರಾದೆವು” ಎಂದು ಮನದಲ್ಲಿ  ಅಂದುಕೊಂಡು ಗೌರವದಿಂದ ಕೈ ಮುಗಿದು ತಲೆಬಾಗಿದರು.

ಆದರೆ ಮಠದಲ್ಲಿ ಆಕಸ್ಮಿಕವಾಗಿ ಪ್ರವೇಶಿಸಿದ ನಾಯಿಯನ್ನು ಕಂಡು ಅಲ್ಲಿ ನೆರೆದ ಜನರು,

“ಥೂ ಹಾಳು ನಾಯಿ! ಇಲ್ಲೇಕೆ ಬಂದಿದೆ? ಮುಟ್ಟೀತು” ಎಂದು ಅದನ್ನು ಓಡಿಸತೊಡಗಿದರು.

ಜನರೆಲ್ಲ ನಾಯಿಯನ್ನು ಓಡಿಸತೊಡಗಿದರು.

ನಾಯಿ ನೇರವಾಗಿ ಅಡುಗೆಮನೆಯನ್ನು ತಲುಪಿತು. ದೇವರನ್ನು ಕಾಣಲು ಕಾತರರಾಗಿದ್ದ ಜನರು ಈ ನಾಯಿಯನ್ನು ಬೆನ್ನಟ್ಟಿಕೊಂಡು, “ಥೂ, ಹಾಳಾದ ನಾಯಿ! ದೇವರ ನೈವೇದ್ಯಕ್ಕೆ ಸಿದ್ಧವಾದ ಪದಾರ್ಥಕ್ಕೆ ಬಾಯಿ ಹಾಕುವಂತಿದೆ. ಹೊಡೆದಟ್ಟಿರಿ ಇದನ್ನು ಹೊರಗೆ” ಎಂದು ಆರ್ಭಟಿಸುತ್ತ ಕೈಗೆ ಸಿಕ್ಕ ವಸ್ತುವಿನಿಂದ ಆ ನಾಯಿಯನ್ನು ಹೊಡೆಯಲು ಪ್ರಾರಂಭಿಸಿದರು. ನಾಯಿ ಹೊರಗೋಡಿ ಮಾಯವಾಯಿತು.

ವ್ಯಾಸರಾಯರ ಪೂಜೆ ಮುಗಿಯಿತು. ಊಟವಾಯ್ತು. ಮಠದಲ್ಲಿ ಸೇರಿದ ಭಕ್ತವೃಂದ, “ದೇವರು ಬರಲಿಲ್ಲ; ದೇವರೆಲ್ಲಿ?” ಎಂದು ಕೇಳತೊಡಗಿದರು.

ವ್ಯಾಸರಾಯರು ಕನಕದಾಸರಿಗೆ, “ಕನಕಾ, ಭಕ್ತರಿಗೆ ದೇವರ ದರ್ಶನ ಮಾಡಿಸಲಿಲ್ಲವೇನಪ್ಪ? ದೇವರ ದರ್ಶನವಾಗಲಿಲ್ಲವೆಂದು ಅವರು ಗೊಣಗುತ್ತಿದ್ದಾರೆ” ಎಂದರು ಮುಗಳ್ನಗೆ ನಗುತ್ತ.

ಕನಕದಾಸರೆಂದರು “ಮಹಾಸ್ವಾಮಿ, ಎಲ್ಲರೂ ಸ್ವಾಮಿಯ ದರ್ಶನ ಪಡೆದರಲ್ಲ? ನಾಯಿಯ ರೂಪದಲ್ಲಿ ಬಂದ ದೇವರಿಗೆ ಒನಕೆ, ಸೌಟುಗಳಿಂದ ಪ್ರಸಾದ ಕೊಟ್ಟು ಕಳುಹಿಸಿದರು ಇವರೆಲ್ಲ, ನಾನೇನು ಮಾಡಲಿ?”

ನೆರೆದ ಜನ ಚಕಿತರಾದರು. ನಾಯಿ ರೂಪದಲ್ಲಿ ಬಂದ ಭಗವಂತನನ್ನು ತಾವು ಗುರುತಿಸಲಿಲ್ಲ, ಹೊಡೆದೆವು ಎಂದು ವ್ಯಥೆಪಟ್ಟರು.

ಕನಕದಾಸರನ್ನು ಕುರಿತ ಅನೇಕ ಸುಂದರ ಕಥೆಗಳಲ್ಲಿ ಇದು ಒಂದು.

ಗೋವಿಂದ ಸಲಹೆನ್ನನು

ಕನಕದಾಸರು ತಿರುಪತಿ ತಿಮ್ಮಪ್ಪನ ವರಪ್ರಸಾದವಾಗಿ ಹುಟ್ಟಿದವರಷ್ಟೆ. ಕನಕದಾಸರಿಗೆ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಪಡೆಯಬೇಕೆಂಬ ಆಸೆ ಹೆಚ್ಚಾಯಿತು. ಅವರ ತಿರುಪತಿಯ ಯಾತ್ರೆಯದೂ ಒಂದು ರೋಮಾಂಚಕ ಕಥೆ.

ತಿರುಪತಿಯ ಶ್ರೀ ವೆಂಕಟೇಶ್ವರನು ದೇವಸ್ಥಾನದ ಪಾರುಪತ್ಯಗಾರರ ಕನಸಿನಲ್ಲಿ ಕಾಣಿಸಿಕೊಂಡು,

ನನ್ನ ಪರಮಭಕ್ತ ಕನಕದಾಸ ಬರುತ್ತಿದ್ದಾನೆ; ಆತನನ್ನು ಸಕಲ ಮರ್ಯಾದೆಗಳೊಂದಿಗೆ ಸ್ವಾಗತಿಸಿ” ಎಂದು ಹೇಳಿದ.

ಪಾರುಪತ್ಯಗಾರರು ಕನಕದಾಸರ ಬರುವಿಗಾಗಿ ಬೆಟ್ಟದ ಅಡಿಯಲ್ಲಿ ಕಾಯುತ್ತ ನಿಂತರು. ಅವರು ಕನಕದಾಸರನ್ನು ಈ ಮೊದಲು ನೋಡಿರಲಿಲ್ಲ. ತಂಬೂರಿ ಮೀಟುತ್ತ ಬಂದರು ಕನಕದಾಸರು ಅವರನ್ನು ಕಂಡು ಇವರೇ ಕನಕದಾಸರಾಗಿರಬಹುದು ಎಂಬ ಸಂಶಯ ಬಂದಿತು ಅಧಿಕಾರಿಗೆ. ಆದರೆ ಕನಕದಾಸರ ತೀರ ಸರಳ ವೇಷಭೂಷಣದಿಂದಾಗಿ ಅವರಿಗೆ ನಂಬಿಕೆ ಬರಲಿಲ್ಲ. ಅವರು ಕನಕದಾಸರನ್ನೆ ಕೇಳಿದರು.

“ಕನಕದಾಸರಂಬುವವರೊಬ್ಬರು ಬರುವವರಿದ್ದರು. ಅವರು ತಿಮ್ಮಪ್ಪನ ಪರಮಭಕ್ತರಂತೆ. ಆ ಕನಕದಾಸರೆಲ್ಲಿ ನಿಮಗೆ ಗೊತ್ತೆ?”

ಕನಕದಾಸರು ನಸುನಗುತ್ತ ಉತ್ತರ ಕೊಟ್ಟುರು:

“ಕನಕದಾಸರು ಮುಂದೆ ಬರುವವರ ಹಿಂದೆ ಇದ್ದಾರೆ ಮತ್ತು ಹಿಂದೆ ಬರುತ್ತಿರುವವರ ಮುಂದೆ ಇದ್ದಾರೆ.”

ಪಾರುಪತ್ಯಗಾರರಿಗೆ ಇದು ಹುಡುಗಾಟಿಕೆಯ ಉತ್ತರ ಎನ್ನಿಸೊತು.

“ಯಾರಲೇ ನೀನು ಹುಚ್ಚಪ್ಪ? ಯಾತರವನು ನೀನು?” ಎಂದು ಕೇಳಿದರು ಪಾರುಪತ್ಯಗಾರರು.

ಕನಕದಾಸರು ಶಾಂತಿಯಿಂದಲೇ,

ಯಾತರವನೆಂದುಸುರಲಿ ಜಗ
ನ್ನಾಥ
ಮಾಡಿದನು ನರಜನ್ಮವ

ಎಂದು ಆರಂಭಿಸಿ,

ನಿಶ್ಚಿಂತ ನಿರ್ದೋಷ ನೆಲೆಯಾದಿ
ಕೇಶವನ
ಹುಚ್ಚೇರಿದೆನಗೆ
ಇನ್ಯಾತರ
ಕುಲವಯ್ಯ? ಇನ್ಯಾತರ ಕುಲವಯ್ಯ?

ಎಂದು ಹಾಡಿ ಮುಗಿಸಿದರು.

ಪಾರುಪತ್ಯಗಾರರು ಈತ ಹುಚ್ಚ ಎಂದು ನಿರ್ಣಯಿಸಿದರು. ದಾಸರು ಮುಂದೆ ನಡೆದರು.

ತಿರುಪತಿಯ ದೇವಸ್ಥಾನದಲ್ಲಿ ಭಕ್ತ ಸಮೂಹ ಕಿಕ್ಕಿರಿದು ನೆರೆದಿತ್ತು. ಕನಕದಾಸರಿಗೆ ಒಳಗೆ ಹೋಗಿ ದೇವರ ದರ್ಶನ ಪಡೆಯಲಾಗಲಿಲ್ಲ. ತಿನ್ನಲು ಅನ್ನ ಪ್ರಸಾದ ದೊರೆಯಲಿಲ್ಲ. ಇರಲು ಸ್ಥಳವೂ ಸಿಕ್ಕಲಿಲ್ಲ. ಹಸಿವಿನ ಬಾಧೆ ತಾಳಲಾರದೆ ಅಲ್ಲೇ ಕುಸಿದು ಕುಳಿತರು. ರಾತ್ರಿಯಾಯಿತು. ಸಹಿಸಲಾರದಷ್ಟು ಚಳಿ.

ಕನಕದಾಸರಿಗೆ ಶ್ರೀನಿವಾಸನ ಮೇಲೆ ಕೋಪಬಂದಿತು. ಹಾಡಿದರು.

ಒಡಲು ತುಂಬಲು ಮಿಕ್ಕ ಭಕ್ತರ ನೋಡದೆ
ಒಡವೆ
ಗಳಿಸುವ ಲೋಭಿಶೆಟ್ಟಿ”

ನನ್ನನ್ನು ಯಾತಕೆ ಕರೆಸಿಕೊಂಡೆ” ಎಂದು ಪರಿಪರಿಯಾಗಿ ದೂರಿದರು. (ಮೇಲುನೋಟಕ್ಕೆ ನಿಂದನೆಗಳಿಂದ ತುಂಬಿದ ಇಂಥ ಪದಗಳಿಗೆ “ನಿಂದಾಸ್ತುತಿ ಪದ” ಗಳೆಂದು ಹೆಸರು. ದೇವರ ಅನನ್ಯ ದಾಸರಾದವರು ಈ ಬಗೆಯ ನಿಂದಾಸ್ತುತಿಯ ಪದಗಳನ್ನು ವಿನೋದಕ್ಕಾಗಿ ರಚಿಸುತ್ತಾರೆ. ಈ ಪದವು ಸಹ ಅಂಥದೇ ಒಂದು.)

ಈ ಪದದಲ್ಲಿಯ ಚುರುಕು ಮುಟ್ಟಿತೋ ಎಂಬಂತೆ ಸಾಕ್ಷಾತ್ ತಿರುಪತಿ ಶ್ರೀನಿವಾಸನು ಸ್ವತಃ ಕನಕದಾಸರು ಕುಸಿದು ಕುಳಿತಿದ್ದೆಡೆಗೆ ಬಂದು ಮೃಷ್ಟಾನ್ನ ಬೋಜನವನ್ನು ನೀಡಿದನಂತೆ, ತನ್ನದೇ ಪೀತಾಂಬರ ಒಂದನ್ನು ಅವರ ಮೇಲೆ ಹೊದ್ದಿಸಿ ಹೋದನಂತೆ.

ಬೆಳಗಾಯಿತು.

ದೇವರ ಪ್ರತಿಮೆಯ ಮೇಲಿದ್ದ ಪೀತಾಂಬರ ಮಾಯ! ಅರ್ಚಕರಿಗೆ ಮೈ ನಡುಗಿತು. ಪಾರುಪತ್ಯಗಾರರವರೆಗೆ ಸುದ್ದಿ ಮುಟ್ಟಿತು. ಎಲ್ಲರಿಗೂ ಆಶ್ಚರ್ಯ. ಪೀತಾಂಬರಕ್ಕಾಗಿ ಹುಡುಕಾಟ ಪ್ರಾರಂಭವಾಯಿತು. ಹುಡುಕುತ್ತ ಹುಡುಕುತ್ತ ಜನ ಕನಕದಾಸರಿದ್ದ ಕಡೆಗೆ ಬಂದರು. ಒಂದು ಮೂಲೆಯಲ್ಲಿ ಪೀತಾಂಬರ ಹೊದೆದುಕೊಂಡು ಮಲಗಿದ್ದರು ಕನಕದಾಸರು.

ಇದನ್ನು ಕಾಣುತ್ತಲೆ ಜನ ಕೆಂಡವಾದರು, ಕನಕದಾಸರ ಸುತ್ತ ಎಲ್ಲರೂ ಸೇರಿಕೊಂಡರು. ಅವರನ್ನು “ಕಳ್ಳ, ನಾಚಿಕೆ ಇಲ್ಲದವನು” ಎಂದು ಹೀನಾಮಾನವಾಗಿ ಬಯ್ದರು. ಮನಸ್ಸು ಬಂದಂತೆ ಹೊಡೆದರು.

ಕನಕದಾಸರಿಗೆ ದಿಕ್ಕು ತೋರಲಿಲ್ಲ. ತಾವು ತಪ್ಪೇ ಮಾಡಿಲ್ಲ. ಆದರೆ ಬೈಗಳು, ಏಟುಗಳು! ತಾವು ಹಿಂದೆ ದೇವರನ್ನು ನಾಯಿಯ ರೂಪದಲ್ಲಿ ಕರೆಸಿ ಜನರಿಂದ ಬಡಿಸಿದ್ದು ನೆನಪಾಯಿತು; ದೇವರನ್ನು ಲೋಭಿಶೆಟ್ಟಿ ಎಂದು ಜರೆದದ್ದೂ ನೆನಪಾಯಿತು. ತಾವು ದೇವರಿಗೆ ಕೊಡಿಸಿದ ಹೊಡೆತ ಮತ್ತು ಮಾಡಿದ ನಿಂದನೆಗಳಿಗೆ ಪ್ರತೀಕಾರವಾಗಿ ತಮಗೆ ಈಗ ಈ ಪರಿ ಏಟು ಮತ್ತು ನಿಂದನೆಗಳನ್ನು ದೇವರು ಕೊಡಿಸುತ್ತಿದ್ದಾನೆ ಎಂದು ಅವರು ಭಾವಿಸಿದರು. ದೇವರಿಗೇ ಸಿಟ್ಟು ಬಂದರೆ ಯಾರು ಕಾಪಾಡಬೇಕು? ಆತನಲ್ಲದೆ ತಮ್ಮನ್ನು ಇನ್ನಾರು ಕ್ಷಮಿಸುವವರು ಎಂದು ಭಾವಿಸಿ ಕನಕದಾಸರು ಆತನ ಮೊರೆಹೊಕ್ಕರು.

ಗೋವಿಂದ ಸಲಹೆನ್ನನು ಸದಾನಂದ
ಗೋವಿಂದ
ಸಲಹೆನ್ನ ಕುಮುದಲೋಚನ
ಸೇವಕರಡಿಯ
ಸೇವಕನಯ್ಯ, ಗೋವಿಂದಾ

ಎಂದು ವಿನೀತರಾಗಿ ಬೇಡಿಕೊಂಡರು. ಆಗ, ತಿರುಪತಿಯ ಶ್ರೀನಿವಾಸನು ಒಬ್ಬ ಬಾಲಕನಿಗೆ ಪ್ರೇರಣೆ ಮಾಡಿದ, ಅವನ ಮೂಲಕ, “ಈತನೇ ಕನಕದಾಸ, ನಾನೆ ಈತನಿಗ ರಾತ್ರಿ ಪೀತಾಂಬರ ಹೊದೆಸಿದ್ದು. ಈತ ಕಳ್ಳನಲ್ಲ; ನನ್ನ ಪರಮಭಕ್ತ ಎಂದು ಹೇಳಿದ.

ಹುಡುಗನ ಮಾತನ್ನು ಕೇಳಿ ಅರ್ಚಕರೂ ಇತರ ಜನರೂ ಬೆಚ್ಚಿದರು.

ಸ್ವಾಮಿಯ ಪರಮಪ್ರಿಯ ಭಕ್ತರಾದ ಕನಕದಾಸರು ಇವರೇ! ಇವರಿಗೆ ಎಷ್ಟು ಅಪಮಾನ ಮಾಡಿದೆವಲ್ಲ ಎಂದು ಅವರು ವಿಷಾದಪಟ್ಟರು. ದೇವಸ್ಥಾನದ ಪಾರು ಪತ್ರಗಾರರು ಕನಕದಾಸರನ್ನು ಸಕಲ ಮರ್ಯಾದೆಗಳೊಂದೆಗೆ ದೇವಸ್ಥಾನ ಕರೆದುಕೊಂಡು ಹೋದರು. ವೆಂಕಟೇಶ್ವರನ ಸೇವೆಗೆ ಅನುಕೂಲ ಒದಗಿಸಿದರು.

ತಮ್ಮ ಮನದಣಿಯೆ ತಿಮ್ಮಪ್ಪನಿಗೆ ಸೇವೆ ಸಲ್ಲಿಸಿದ ಕನಕದಾಸರು ಉಡುಪಿಗೆ ಪ್ರಯಾಣ ಬೆಳೆಸಿದರು.

ಉಡುಪಿಯಲ್ಲಿ ಶ್ರೀ ಕೃಷ್ಣನ ಗುಡಿಗೆ ಹೋದರೆ ಒಂದು ಸಣ್ಣ ಕಿಂಡಿಯನ್ನು ನೋಡಬಹುದು. ಅದಕ್ಕೆ “ಕನಕ ಕಿಂಡಿ” ಎಂದೇ ಹೆಸರು. ಇದರದ್ದೇ ಒಂದು ಸುಂದರವಾದ ಕಥೆ ಇದೆ.

ಕನಕದಾಸರು ಹುಟ್ಟಿನಿಂದ ಬ್ರಾಹ್ಮಣರಲ್ಲವಲ್ಲ? ಆದುದರಿಂದ ಅವರನ್ನು ದೇವಸ್ಥಾನದ ಒಳಕ್ಕೆ ಬಿಡಲು ದೇವಾಲಯದ ಅರ್ಚಕರು ಒಪ್ಪಲಿಲ್ಲ.

ದೇವರ ಮಹಾ ಪುಜೆ ನಡೆವ ಸಮಯವದು. ಗರ್ಭ ಗುಡಿಯಿಂದ ಶ್ರೀಗಂಧ, ಹೂಮಾಲೆಗಳ ಪರಿಮಳ ತಾನೇ ತಾನಾಗಿ ಹೊರಸೂಸುತ್ತಿತ್ತು. ಜಾಗಟೆ, ನಗಾರಿ, ಘಂಟಾ ನಿನಾದದಿಂದ ವಾತವರಣವೆಲ್ಲ ತುಂಬಿಕೊಂಡಿತ್ತು. ಅರ್ಚಕರ ಮಂತ್ರಪಠಣ ತಡೆ ಇಲ್ಲದೆ ಸಾಗಿತ್ತು. ಶ್ರೀಮೂರ್ತಿಯ ಪೂಜೆ, ಅಲಂಕಾರವನ್ನು ನೋಡಲು ಭಕ್ತಜನರು ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಿದ್ದರು.

ಶ್ರೀ ಕೃಷ್ಣನನ್ನು ನೋಡಬೇಕೆಂದೇ ಕನಕದಾಸರು ಬಹು ದೂರದಿಂದ ಬಂದಿದ್ದರು. ಆದರೆ ಅವರು ಒಳಗೆ ಕಾಲಿಡುವಂತಿರಲಿಲ್ಲ. ಗುಡಿಯ ಪಟ್ಟಂಗಣದಲ್ಲಿಯೇ ಅತ್ತಿತ್ತ ಸುತ್ತಾಡಿ ಸ್ವಾಮಿಯ ಪ್ರತಿಮೆಯ ದರ್ಶನವಾದೀತೆ ಎಂದು ಹಂಬಲಿಸುತ್ತಿದ್ದರು. ತುದಿಗಾಲ ಮೇಲೆ ನಿಂತು ನೋಡಿದರು, ಕಟ್ಟೆಯ ಮೇಲೇರಿ ಕಂಡರು. ಹೇಗೆ ನಿಂತರೂ, ಎಲ್ಲಿ ಹೋದರು ದೇವರ ವಿಗ್ರಹ ಕಣ್ಣಿಗೆ ಕಾಣಬರುವಂತಿರಲಿಲ್ಲ.

ಕನಕದಾಸರು ಬಹಳ ಖಿನ್ನರಾದರು. ಶ್ರೀ ಕೃಷ್ಣ ಮಂಗಳಮೂರ್ತಿಯು ಅಷ್ಟು ಹತ್ತಿರವಿತ್ತು. ಆದರೆ ಅವರು ಕಾಣುವಂತಿರಲಿಲ್ಲ!

ಉಡುಪಿಯ ಶ್ರೀ ಕೃಷ್ಣ ಮೂರ್ತಿ ಸಾಮಾನ್ಯ ಪ್ರತಿಮೆಯಲ್ಲ. ದ್ವಾಪರ ಯುಗದಲ್ಲಿ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ತನ್ನ ಅಷ್ಟ ಮಡದಿಯರಿಗೆ ಸಾಲಿಗ್ರಾಮ ಶಿಲೆಯಿಂದ ಈ ಮೂರ್ತಿಯನ್ನು ಸದ್ಧಪಡಿಸಿ ಕೊಟ್ಟಿದ್ದನಂತೆ. ಮುಂದೆ ಕಲಿಯುಗದಲ್ಲಿ ಶ್ರೀಮನ್ಮಧ್ವಾಚಾರ್ಯರಿಗೆ ಈ ವಿಗ್ರಹವು ಗೋಪಿಚಂದನದಲ್ಲಿ ದೊರಕಿತು. ಆಚಾರ್ಯರು ಈ ಪವಿತ್ರ ವಿಗ್ರಹವನ್ನು ಉಡುಪಿಯಲ್ಲಿ ಸ್ಥಾಪಿಸಿದರು. ಎಲ್ಲ ದೇವಾಲಯಗಳಲ್ಲಿ ಇರುವಂತೆ ಇಲ್ಲಿಯೂ ಸಹ ವಿಗ್ರಹವು ಪೂರ್ವಾಭಿಮುಖವಾಗಿತ್ತು.

ಕನಕದಾಸರಿಗೆ ತಡೆಯಲಾರದಷ್ಟು ದುಃಖವಾಯಿತು. ದೇವಸ್ಥಾನದ ಹಿಂಬದಿಗೆ ಹೋಗಿ, “ದೇವಾ, ನನಗೆ ದರ್ಶನವನ್ನು ಕರುಣಿಸುವುದೆಲ್ಲವೆ? ನಾನು ಕೆರೆದಾಗ ಪ್ರತ್ರಕ್ಷನಾಗುತ್ತೇನೆ ಎಂದು ಭರವಸೆ ನೀಡೆದ್ದೆಯಲ್ಲ?” ಎಂದು ಹಂಬಲಿಸಿದರು.

ಇದ್ದಕ್ಕಿದಂತೆ,

ಗುಡುಗು ಗುಡುಗಿತೋ, ಸಿಡಿಲು ಸಿಡಿಯಿತೋ ಅಥವಾ ಕಾಡಿನ ಒಡಲೇ ಬಿರಿದೊಡೆಯಿತೋ ಎಂಬಂತ ಘನಗರ್ಜನೆಯಾಗಿ ದೇವಾಲಯದ ಹಿಂಭಾಗದ ಗೋಡೆಯಲ್ಲಿ ಬಿರುಕು ಬಿದ್ದಿತು. ಕಿವಿಗಡಚಿಕ್ಕುವ ಘೋಷವಾದ್ಯಗಳ ನಡುವೆ ಮಂಗಳಾರತಿ ಮಾಡುತ್ತಿದ್ದ ಅರ್ಚಕರು, ಪೂಜೆ ನೋಡಲು ನೆರೆದ ಭಕ್ತರು ನೋಡ ನೋಡುತ್ತಿದ್ದಂತೆ ಶ್ರೀ ಕೃಷ್ಣನ ಮಂಗಳಮೂರ್ತಿ ಅರ್ಧವೃತ್ತದಲ್ಲಿ ತಿರುಗಿ ಪಶ್ಚಿಮಕ್ಕೆ ಮುಖಮಾಡಿ ನಿಂತು ಕೊಂಡಿತು! ಗೋಡೆಯ ಬಿರುಕಿನಲ್ಲಿ ನಗೆಮೊಗದ ಶ್ರೀ ಕೃಷ್ಣನ ಪಾವನ ಮೂರ್ತಿ ಕನಕದಾಸರಿಗೆ ಎದುರಾಗಿ ನಿಂತಿತು. ಅವರ ಮೈ ಪುಳಕಗೊಂಡಿತು. ಸಂತೋಷದಿಂದ ಕಣ್ಣುಗಳಲ್ಲಿ ನೀರು ಹರಿಯಿತು. ಕನಕದಾಸರು ಸ್ವಾಮಿಯ ಶ್ರೀಮೂರ್ತಿಗೆ ಸಾಷ್ಟಾಂಗ ವಂದಿಸಿದರು. ಭಗವಂತನ ನಾಮ ಸಂಕೀರ್ತನದಲ್ಲಿ ಮೈಮರೆತರು.

 

ಗೋಡೆಯ ಬಿರುಕಿನಲ್ಲಿ ನಗೆಮೊಗದ ಶ್ರೀಕೃಷ್ಣನ ಪಾವನಮೂರ್ತಿ ಕನಕದಾಸರಿಗೆ ಎದುರಾಗಿ ನಿಂತಿತು.

ಆ ಕಾಲಕ್ಕೆ ಶ್ರೀ ವಾದಿರಾಜಸ್ವಾಮಿಗಳು ಸೋದೆ ಮಠದ ಸ್ವಾಮಿಗಳಾಗಿದ್ದರು. ಸೋದೆಯೂ ಶ್ರೀಮನ್ಮಧ್ವಾಚಾರ್ಯರು ಸ್ಥಾಪಿಸಿದ ಎಂಟು ಮಠಗಳಲ್ಲಿ ಒಂದು ಮಠ. ಶ್ರೀ ವಾದಿರಾಜ ಸ್ವಾಮಿಗಳು ವ್ಯಾಸರಾಯರ ಶಿಷ್ಯಂದಿರು. ಹೀಗಾಗಿ ಅವರಿಗೆ ಕನಕದಾಸರ ಮಹಿಮೆ ಗೊತ್ತಿತ್ತು. ಕನಕದಾಸರು ತೋರಿದ ಈ ಪವಾಡವು ಜನಮನದಲ್ಲಿ ಶಾಶ್ವತವಾಗಿ ಉಳಿಯಲೆಂದು ಗೋಡೆಯಲ್ಲಿ ಬಿಟ್ಟ ಬಿರುಕಿನಲ್ಲಿ ಭಕ್ತಜನರಿಗೆ ಈ ಕಿಂಡಿಯ ಮುಲಕ ಶ್ರೀ ಕೃಷ್ಣನ ದಿವ್ಯ ಮೂರ್ತಿ ಕಾಣುವಂತೆ ಏರ್ಪಡಿಸಿದರು. ಈ ಕಿಂಡಿಯೇ ಕನಕನ ಕಿಂಡಿ. ವಿಗ್ರಹದ ದರ್ಶನವನ್ನು ಈಗಲೂ ಜನರು ಈ ಕನಕನ ಕಿಂಡಿಯ ಮುಖಾಂತರವೇ ಪಡಿಯುವುದು.

ಹರಿಯ ದಾಸರ ದಾಸ

ಕನಕದಾಸರು ಅನೇಕ ದಿನಗಳು ಉಡುಪಿಯಲ್ಲಿದ್ದು ವಾದಿರಾಜಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾಲ ಕಳೆದರು. ಆಮೇಲೆ ಅಲ್ಲಿಂದ ಅವರು ಬೇಲೂರಿಗೆ ಬಂದರು. ಬೇಲೂರಿನಲ್ಲಿ ಆಕಾಲದ ಶ್ರೀ ವೈಕುಂಠದಾಸರು ಎಂಬ ಹೆಸರಿನ ಹರಿದಾಸೋತ್ತಮರೊಬ್ಬರಿದ್ದರು.

ಕನಕದಾಸರು ತಮ್ಮ ಹೆಸರು, ಪರಿಚಯಗಳನ್ನು ತಿಳಿಸದೆ ವೈಕುಂಠದಾಸರಲ್ಲಿ ಅನೇಕ ದಿನಗಳವರೆಗೆ ಸೇವಕನಾಗಿ ಕೆಲಸ ಮಾಡಿದರು. ಸಾಮಾನ್ಯವಾಗಿ ಆಳುಗಳು ಕೆಲಸಕ್ಕೆ ಹಿಂದು, ಊಟ ತಿಂಡಿಗೆ ಮುಂದು. ಆದರೆ ಕನಕದಾಸರು ಕೆಲಸದ ಸಮಯದಲ್ಲಿ ಮುಂದೆ ಮುಂದೆ, ಊಟ-ತಿಂಡಿಯ ಸಮಯದಲ್ಲಿ ಕಣ್ಮರೆ. ಇದನ್ನು ಕಂಡ ವೈಕುಂಠದಾಸರ ಮನೆಯವರಿಗೆಲ್ಲ ಅಚ್ಚರಿ. ಅವರು ಒಂದು ಸಲ ಕನಕದಾಸರನ್ನೇ ಕೇಳಿದರು.

“ಯಾರಪ್ಪಾ ನೀನು, ಎಂಥ ಕೆಲಸ ನಿನಗೆ?”

ಕನಕದಾಸರು ತಾವು ಮಾಡುತ್ತಿದ್ದ ಕೆಲಸಗಳನ್ನೆಲ್ಲ ಪದ್ಯರೂಪದಲ್ಲಿ ಪೋಣಿಸಿ ಹೇಳಲು ಪ್ರಾರಂಭಿಸಿದರು. ಕನಕದಾಸರ ಹಾಡುಗಳಲ್ಲೆಲ್ಲ ಕಡೆಗೆ ಆದಿಕೇಶವನ ಹೆಸರು ಬರುತ್ತದೆ. ಅಭ್ಯಾಸಬಲದಿಂದ ಪದ್ಯದ ಕೊನೆಗೆ “ಶ್ರೀ ಆದಿಕೇಶವನ” ಅಂಕಿತವು ತಾನೇತಾನಾಗಿ ಬಂದು ಬಿಟ್ಟಿತು. ಕುತೂಹಲದಿಂದ ಕೇಳುತ್ತ ನಿಂತ ವೈಕುಂಠದಾಸರಿಗೆ ತಟ್ಟನೆ ತಿಳಿಯಿತು, ಸೇವಕ ವೇಷದ ಈ ಮನುಸ್ಯ ಕನಕದಾಸರೇ ಎಂದು. ಅವರು ಎದ್ದು ಬಂದು ಕನಕದಾಸರನ್ನು ಬಿಗಿದಪ್ಪಿಕೊಂಡು,

“ಸ್ವಾಮೀ ಕನಕದಾಸರೇ, ನಿಮ್ಮಂಥ ಮಹಾತ್ಮರು ಹೀಗೆ ಮಾಡಬಹುದೆ? ನನ್ನಂಥವನೂಳಿಗ ಮಾಡಿ ನನ್ನನ್ನು ನಾಚಿಗೆಗೆ ಈಡು ಮಾಡಿದಿರಿ. ನಿಮ್ಮನ್ನು ಈ ಮೊದಲು ಗುರ್ತಿಸಲಾಗಲಿಲ್ಲವಲ್ಲ! ಎಂಥ ದೊಡ್ಡ ತಪ್ಪಾಯ್ತು!” ಎಂದು ಬಹು ವಿಧದಲ್ಲಿ ನೊಂದು ನುಡಿದರು.

ಕನಕದಾಸರು ನಗುತ್ತ, “ದಾಸೋತ್ತಮರೆ, ಇದರಲ್ಲಿ ನಿಮ್ಮದೇನು ತಪ್ಪು? ಇಷ್ಟು ದಿನ ಶ್ರೀ ಹರಿಯ ಸೇವೆ ಮಾಡಿ ಧನ್ಯನಾಗಿದ್ದೆ. ಹರಿದಾಸರ ಸೇವೆ ಮಾಡಿ ಅದರ ಸವಿಗಾಣಬೇಕೆಂದು ಹೀಗೆ ಮಾಡಿದೆ. ದಾಸರ ದಾಸನಾಗುವುದರಲ್ಲಿಯ ಸೌಭಾಗ್ಯ ಹೇಳಲಾರೆ” ಎಂದು ವೈಕುಂಠದಾಸರನ್ನು ಸಮಾಧಾನಪಡಿಸಿದರು.

“ನಾನು ದೇವರ ಪ್ರೀತಿಗೆ ಪಾತ್ರನಾದವ, ದೇವರು ನನಗೆ ಒಲಿದಿದ್ದಾನೆ” ಎಂಬ ಬಿಂಕ ಕನಕದಾಸರ ಹತ್ತಿರ ಸುಳಿಯಲಿಲ್ಲ. ತಾವು, “ಹರಿಯ ದಾಸರ ದಾಸ, ಸೇವಕರ ಸೇವಕನಯ್ಯ” ಎಂಬುದನ್ನು ಹೇಳಿದ್ದು ಮಾತ್ರವಲ್ಲ, ಆಚರಣೆಯಲ್ಲಿ ತೋರಿದರು. ತಮ್ಮ ವಿನಯಸಂಪನ್ನತೆಯನ್ನು ಕನಕದಾಸರು ಬೆಳಗಿದರು.

ಕನಕದಾಸರು ತಮ್ಮ ಕೊನೆಯ ದಿನಗಳನ್ನು ಕಾಗಿನೆಲೆಯ ಶ್ರೀ ಆದಿಕೇಶವನ ಸನ್ನಿಧಿಯಲ್ಲಿಯೇ ಕಳೆದರು. ಒಂದು ದಿನ ದೇವರ ಪೂಜೆ ಮುಗಿಸಿ, ಹರಿ ನಾಮ ಸಂಕೀರ್ಥನೆಯಲ್ಲಿ ತಲ್ಲೀನರಾಗಿದ್ದಾಗ ತಮ್ಮ ಇಷ್ಟದೈವವಾದ ಶ್ರೀ ಆದಿದೇಶವನಲ್ಲಿಯೇ ಲೀನವಾಗಿಬಿಟ್ಟರು ಕನಕದಾಸರು, ಸಾಗರದಲ್ಲಿ ಸೇರಿ ಮರೆಯಾಗುವ ನದಿಯಂತೆ. ಆಗ ಅವರರಿಗೆ ೯೮ ವರ್ಷ ಪ್ರಾಯ.

ಕನಕದಾಸರು ಬೇಲೂರು ಚೆನ್ನಕೇಶವ ಸನ್ನಿಧಾನದಲ್ಲಿ ಅನೇಕ ವರ್ಷಗಳನ್ನು ಕಳೆದರು. ಕನಕದಾಸರು ಇದೇ ಸಂದರ್ಭದಲ್ಲಿ ದೇವತಾಸ್ತುತಿಪರ ಅನೇಕಾನೇಕ ಪದಗಳನ್ನು ರಚಿಸಿದರು. ಅವರ ಮನಸ್ಸಿನಲ್ಲಿ ಭಕ್ತಿಯ ಹೊನಲು ಉಕ್ಕೇರಿದಂತೆ ತಾನೇತಾನಾಗಿ ಹರಿನಾಮ ಸಂಕೀರ್ತನೆಗಳು ರೂಪುಗೊಳ್ಳುತ್ತಿದ್ದವು. ಆಗಲೇ ಜನಮನದಲ್ಲಿ ಕನಕದಾಸರ ಕೀರ್ತನೆಗಳು ಅಚ್ಚು ಒತ್ತಿದ್ದವು.

ಕನಕದಾಸರು ಕೇವಲ ಪದ ರಚನೆಯಿಂದ ಮಾತ್ರ ಪ್ರಸಿದ್ಧಿ ಹೊಂದಿದವರಲ್ಲ, ಕಾವ್ಯ ನಿರ್ಮಿತಿಯಲ್ಲಿಯೂ ಅವರು ಸಿದ್ಧಿ ಪಡೆದಿದ್ದರು. ಅವರು ಹರಿದಾಸರು ಮಾತ್ರವಲ್ಲ, ಕವಿಗಳೂ ಆಗಿದ್ದರು. ಅವರು,

೧. ಮೋಹನ ತರಂಗಿಣಿ

೨. ನಳ ಚರಿತ್ರೆ

೩. ಹರಿಭಕ್ತಿಸಾರ

೪.ರಾಮಧಾನ್ಯ ಚರಿತ್ರೆ

ಎಂಬ ನಾಲ್ಕು ಕಾವ್ಯಗಳನ್ನು ರಚಿಸಿದ್ದಾರೆ. “ರಾಮಧಾನ್ಯ ಚರಿತ್ರೆ”ಯಂತೂ ತುಂಬ ಸ್ವಾರಸ್ಯವಾಗಿದೆ. ಶ್ರೀರಾಮಚಂದ್ರನ ಸಿಂಹಾಸನಾರೋಹಣ ಕಾಲಕ್ಕೆ ನೆರೆದ ದೇವತೆಗಳ ಸಮಕ್ಷಮದಲ್ಲಿ ಅಕ್ಕಿ ಮತ್ತು ರಾಗಿಗಳು “ತಾನು ಶ್ರೇಷ್ಠ, ತಾನು ಶ್ರೇಷ್ಠ” ಎಂದು ವಾದ ವಿವಾದ ಹೂಡಿದವಂತೆ. ಈ ವಾದವನ್ನು ಕೇಳಿ ದೇವೇಂದ್ರನು ರಾಗಿಯೇ ಸಾರಯುತ, ಅಕ್ಕಿಯು ನಿಸ್ಸಾರ ಎಂದು ಸಾರಿದಾಗ ಆ ಧಾನ್ಯಕ್ಕೆ ಪ್ರಭು ರಾಮಚಂದ್ರನು “ರಾಘವ ಧಾನ್ಯ” ಎಂದು ಹೆಸರಿಸಿ ಗೌರವಿಸಿದನಂತೆ. ರಾಘವ ಧಾನ್ಯವೇ ಬಳಕೆಯಲ್ಲಿ “ರಾಗಿ” ಎಂದಾಯಿತಂತೆ!

ಈ ಕಾಯಗಳನ್ನಲ್ಲದೆ ಅನೇಕ ಒಗಟಿನ ಪದಗಳನ್ನು ಕನಕದಾಸರು ಬರೆದರು. ಅವು “ಕನಕದಾಸರ ಮುಂಡಿಗೆಗಳು” ಎಂದೇ ಪ್ರಸಿದ್ಧವಾಗಿವೆ. “ನೀರನು ಕಂಡರೆ ಮುಳುಗುತಿದೆ! ತನ್ನ ಮೋರೆಯ ತೋರದೆ ಓಡುತಿದೆ! ಧಾರಿಣಿ ಹಲ್ಲಲಿ ಎಳೆಯುತಿದೆ! ಭೈರವಾಕಾರದಿ ಕೂಗುತಿದೆ!” ಎಂದು ಮುಂತಾಗಿ ಒಗಟಿನಂತೆ ಹಾಡನ್ನು ರಚಿಸಿದ್ದಾರೆ. ಇದರ ಪಲ್ಲವಿಯಲ್ಲಿ “ಜಗದ ಪಂಡಿತರು ಬಿಡಿಸಿ ಪೇಳಿ” ಎಂದು ಆಹ್ವಾನಿಸಿದ್ದಾರೆ. ಈ ಪದ್ಯ ಭಗವಂತನ ಹತ್ತು ಅವತಾರಗಳನ್ನು ವರ್ಣಿಸುತ್ತದೆ.

ತಾವು ಆಚರಿಸಿದ್ದು, ಇತರರಿಗೆ ದಾರಿದೀಪ

ತಲ್ಲಣಿಸದಿರು ಕಂಡ್ಯ ತಾಳು ಮನವೇ!
ಎಲ್ಲರನು
ಸಲಹುವನು ಇದಕ್ಕೆ ಸಂಶಯವಿಲ್ಲ

ಇದು ಒಂದು ಪ್ರಸಿದ್ಧವಾದ ಹಾಡು. ಕನಕದಾಸರು ರಚಿಸಿದ್ದು. “ಮುಂದೇನಾಗುತ್ತದೆ ಎಂದು ಯೋಚಿಸಿ ಕಳವಳಪಡಬೇಡ, ದೇವರು ಎಲ್ಲರನ್ನೂ ಕಾಪಾಡುತ್ತಾನೆ” ಎಂದು ಧೈರ್ಯ ಹೇಳುವ ಈ ಹಾಡಿನ ಮುಂದಿನ ಪಂಕ್ತಿಗಳು ಇವು:

ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು
ಕಟ್ಟಿ ನೀರೆರೆದವರು ಯಾರೋ?
ಪುಟ್ಟಿಸಿದ
ಸ್ವಾಮಿ ತಾ ಹೊಣೆಗಾರನಾಗಿರಲು
ಕೊಟ್ಟು
ರಕ್ಷಿಪನಿದಕೆ ಸಂದೇಹ ಬೇಡ ||

ಅಡವಿಯೊಳಗಾಡುವಾ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ
ಆಹಾರವಿತ್ತವರು ಯಾರೋ?
ಪಡೆದ
ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ
ರಕ್ಷಿಪನಿದಕೆ ಸಂದೇಹ ಬೇಡ ||

ಕಲ್ಲೊಳಗೆ ಹುಟ್ಟಿ ಕೂಗುವ ಪಕ್ಷಿಗಳಿಗೆಲ್ಲ
ಅಲ್ಲಲ್ಲೇ
ಆಹಾರವಿತ್ತವರು ಯಾರೋ?
ಬಲ್ಲಿದನು
ಕಾಗಿನೆಲೆಯಾದಿಕೇಶವರಾಯ
ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ.

ಎಷ್ಟು ಸುಲಭವಾಗಿದೆ ಹಾಡು ಅಲ್ಲವೆ? ಕನಕದಾಸರು ರಚಿಸಿದ್ದೆಲ್ಲ ಹೀಗೆಯೇ- ಸಾಮಾನ್ಯ ಜನರಿಗೂ ಸುಭವಾಗಿ ಅರ್ಥವಾಗುವ ಹಾಗೆ, ಅವರ ಕಣ್ಣಿಗೆ ಚಿತ್ರಕಟ್ಟುವ ಹಾಗೆ.

ಕನಕದಾಸರು ತಮ್ಮ ಹಾಡುಗಳಲ್ಲಿ ಹೇಳಿದಂತೆಯೇ ಬದುದಕಿದವರು. ಕಷ್ಟ ಬರಲಿ ಸುಖ ಬರಲಿ – ನನ್ನ ಬಾಳು ಭಗವಂತನಿಗೆ ಸೇರಿದ್ದು ಎಂದು ನಂಬಿದರು. “ತನು ನಿನ್ನದು ಜೀವನ ನಿನ್ನದು ಸ್ವಾಮಿ” ಎಂದೇ ಒಂದು ಹಾಡಿನಲ್ಲಿ ಹೇಳಿದ್ದಾರೆ.

ಜೀವನದಲ್ಲಿ ಆಚರಣೆ, ನಡತೆ ಇವು ಮುಖ್ಯ, ಹುಟ್ಟು, ಮುಖ್ಯವಲ್ಲ: ಕುಲ ಮುಖ್ಯವಲ್ಲ. ವ್ಯಾಸರಾಯರು, ಪುರಂದರದಾಸರು, ವಾದಿರಾಜರು ಇಂತಹ ಜ್ಞಾನಿಗಳು ಇದನ್ನು ತಿಳಿದವರು, ಜಾತಿ ಕುಲಗಳನ್ನು ನೋಡದೆ ಒಳ್ಳೆಯ ಗುಣ ಇದ್ದವರನ್ನು ಪ್ರೀತಿಯಿಂದ ಗೌರವದಿಂದ ಕಂಡರು. ಆದರೆ ಬಹು ಮಂದಿಗೆ ತಮ್ಮ ಕುಲದ ಗರ್ವ. ಇಂತಹ ಜನಕ್ಕೆ ನಾಲ್ಕು ನೂರು ವರ್ಷಗಳ ಹಿಂದೆ ಕನಕದಾಸರು ಹೇಳಿದ ಬುದ್ಧಿವಾದ ಇಂದೂ ನಾವು ನೆನಪಿಟ್ಟು ಆಚರಿಸಬೇಕಾದಂತಹುದು:

ಕುಲ ಕುಲ ಕುಲವೆನ್ನುತಿಹರು
ಕುಲ
ಯಾವುದು ಸತ್ಯ ಸುಖವುಳ್ಳ ಜನರಿಗೆ ||

ಕನಕದಾಸರು ಹೇಳುತ್ತಾರೆ- ತಾವರೆ ಕೆಸರಿನಲ್ಲಿ ಹುಟ್ಟುತ್ತದೆ, ಆದರೆ ಅದನ್ನು ದೇವರಿಗೆ ಅರ್ಪಿಸುವುದಿಲ್ಲವೆ? ಹಸುವಿನ ಮಾಂಸದಲ್ಲಿ ಹುಟ್ಟಿದ ಹಾಲನ್ನು ಬ್ರಾಹ್ಮಣರೇ ಕುಡಿಯುವುದಿಲ್ಲವೆ? ಕಸ್ತೂರಿಯು ಮೃಗದ ಮೈಯಲ್ಲಿ ಹುಟ್ಟುತ್ತದೆ. ಅದನ್ನು ಬ್ರಾಹ್ಮಣರು ಉಪಯೋಗಿಸುತ್ತಾರೆ ವಿಷ್ಣುವಿನ ಕುಲ ಯಾವುದು? ಕಡೆಗೆ ಕನಕದಾಸರು ಕೇಳುತ್ತಾರೆ.

ಆತ್ಮ ಯಾವ ಕುಲ, ಜೀವ ಯಾವ ಕುಲ?
ತತ್ವೇಂದ್ರಿಯಂಗಳ
ಕುಲ ಪೇಳಿರಯ್ಯ?
ಆತ
ಮಹಾತ್ಮನು ನೆಲೆಯಾದಿಕೇಶವ
ಆತನೊಲಿದ
ಮೇಲೆ ಯಾತರ ಕುಲವಯ್ಯ?

ಕನಕದಾಸರು “ಹರಿಭಕ್ತಸಾರ” ಎಂಬ ಪದ್ಯಗ್ರಂಥವನ್ನು ಬರೆದಿದ್ದಾರೆ. ಇಲ್ಲಿಯೂ ಭಾಷೆ ತುಂಬ ಸುಲಭ. ಕನಕದಾಸರಿಗೆ ಭಗವಂತ ಒಲಿದಿದ್ದ, ಅವರು ಬಯಸಿದಾಗ ಪ್ರತ್ಯಕ್ಷನಾಗುತ್ತಿದ್ದ ಎಂಬ ನಂಬಿಕೆಯನ್ನು ತೋರಿಸುವ ಹಲವು ಸೊಗಸಾದ ಕಥೆಗಳನ್ನು ಓದಿದೆವಲ್ಲ? ಕನಕದಾಸರು ಬಹು ವಿನಯವಂತರು. “ಹರಿಭಕ್ತಿಸಾರ” ದ ಒಂದು ಪದ್ಯ ಹೀಗೆದೆ:

ದಿನ ನಾನು, ಸಮಸ್ತಲೋಕಕೆ
ದಾನಿ
ನೀನು ವಿಚಾರಿಸಲು ಮತಿ
ಹೀನ
ನಾನು, ಮಹಾಮಹಿಮ ಕೈವಲ್ಯಪತಿ ನೀನು |
ಏನು
ಬಲ್ಲೆನು ನಾನು? ನೆರೆ ಸು
ಜ್ಞಾನ
ಮೂರುತಿ ನೀನು, ನಿನ್ನ
ಮಾನರುಂಟೇ
ದೇವ ರಕ್ಷಿಸು ನಮ್ಮನನವರತ||

ಕನಕದಾಸರು ತಮ್ಮ ಅನುಭವವನ್ನೂ ಚಿಂತನೆಯನ್ನೂ ಸುಭವಾಗಿ ನೆನಪಿಟ್ಟುಕೊಳ್ಳಬಹುದಾದ ಸಣ್ಣ ಸರಳ ವಾಕ್ಯಗಳಲ್ಲಿ ಎರಕ ಹೊಯ್ದಿದ್ದಾರೆ. ಇವುಗಳಲ್ಲಿ ಕೆಲವು ಇವು:

೧. ಕುಲಕುಲವೆಂದು ಬಡಿದಾಡದಿರಿ.

೨. ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಗಳ ಕೂಡೆ ಜಗಳ ಲೇಸು.

೩. ಸತ್ಯವಂತರ ಸಂಗವೇ ತೀರ್ಥ.

ಕನಕದಾಸರ ಜೀವನ, ಉಪದೇಶ ಎರಡು ಬಹು ಸರಳ, ಎರಡು ನೂರಾರು ವರ್ಷಗಳು ಕಳೆದರೂ ಬೆಳಗುವ ದಿವ್ಯ ಜ್ಯೋತಿಗಳು.