ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ
ಯಾವ ಸಾಲೊ ಇದು, ಬಂದುದೇಕೊ ಇದು, ಎಲ್ಲಿನ್ನು ಉಳಿದ ಚರಣ ?
ಹಲವು ಕತ್ತಲನು ಈಸಿ, ಹುಡುಕಿ, ತಡಕಾಡಿಕೊಂಡು ಜೊತೆಯ,
ಹಿಂದು ಮುಂದುಗಳ ಕೊಂಡಿ ಕಳಚಿ ಬಂತಾವ ಭಾವ ಕಿರಣ ?

ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ
ಚಿಕ್ಕೆಗಳಿಬ್ಬನಿ ಮಿರುಮಿರುಗುತಿರಲು ಅಲ್ಲಲ್ಲ್ಲಿಯೆ ಜಾಲದಲಿ’

ಅಗೊ ಬಂತು ಮತ್ತೊಂದು ಸಾಲು. ಬೇರೊಂದು ದಿಕ್ಕಿನಿಂದ
ಎಲ್ಲೊ ಏನೊ ಜೊತೆಗಿದ್ದು ಮತ್ತೆ ಅಗಲಿದ್ದ ಮುಖದ ನೆನಪು.
ಎರಡು ಸಾಲು ಸಂಸಾರ ಹೂಡಿ ಒಂದಿರುಳು ಚೈತ್ರದಲ್ಲಿ,
ಮರುದಿನದ ಬೆಳಗು ಮೈತುಂಬ ಕಾಂತಿ, ಕುಡಿಮಿಂಚು ಹೆಜ್ಜೆಯಲ್ಲಿ.

ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ
ಚಿಕ್ಕೆಗಳಿಬ್ಬನಿ ಮಿರುಮಿರುಗುತಿರಲು ಅಲ್ಲಲ್ಲ್ಲಿಯೆ ಜಾಲದಲಿ
ಮರ ಮರದ ಕೆಳಗೆ ಗೆರೆ ಬರೆದ ನೆರಳ ಸಂಶಯದ ಮೋಡಿಯಲ್ಲಿ’

ಸಂಸಾರ ಸಾಗಿ ವರುಷ ಒಂದಾಗಿ ಪಡೆದೊಂದು ಕುಡಿಯ ಹೂವು
ಒಂದರಿಂದ ಮತ್ತೊಂದು ಹುಟ್ಟಿ ತಬ್ಬಿರುವುದಿಲ್ಲಿ ಚೆಲುವು,
ಬಿದ್ದ ಬಿತ್ತ ಮೇಲೆದ್ದು ನಿಂತು ಹಿಡಿದೆತ್ತಿ ಹೊನ್ನ ತೆನೆಯ,
‘ಇಗೊ ತಗೋ ನಿನಗೆ ಸಂದಾಯವಾಯ್ತೆ ನೀ ಕೊಟ್ಟ ಪ್ರೀತಿಭಾರ’.

ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ
ಚಿಕ್ಕೆಗಳಿಬ್ಬನಿ ಮಿರುಮಿರುಗುತಿರಲು ಅಲ್ಲಲ್ಲ್ಲಿಯೆ ಜಾಲದಲಿ
ಮರ ಮರದ ಕೆಳಗೆ ಗೆರೆ ಬರೆದ ನೆರಳ ಸಂಶಯದ ಮೋಡಿಯಲ್ಲಿ
ಇನ್ನು ಯಾವುದಕೆ ಹೊಂಚುತಿರುವುದೋ ಇಂಥ ಮಾಟದಲ್ಲಿ?

ಯಾವ ಮಗ್ಗ ಇದು ! ಯಾರು ನೇಯುವರೊ, ಕಾಣದಲ್ಲ ಲಾಳಿ !
ಕನಸಿನಿಂದ ಎಚ್ಚರದ ದಡಕೆ ಬಂದಿರುವ ಸೊಗದ ದಾಳಿ !
ದಿನವು ಹಡಗುಗಳು ಬಂದು ತಂಗುವುವು ಈ ತೆಂಗು ತೀರದಲ್ಲಿ
ಏನು ಬರುವುವೋ, ಎಷ್ಟು ಬರುವುವೋ, ಹೇಗೆ ಬರುವುವೋ,
ನಿಲುವು ಪ್ರಶ್ನೆಯಲ್ಲಿ.