ಹತ್ತು ದಿಕ್ಕಿನ ಹೊನಲು ಬಂದಿಲ್ಲಿ ಸಂಧಿಸಿವೆ
ಸಂಯಮದ ಕಟ್ಟೆಯಲಿ ಶಕ್ತಿ ಸೆರೆಯಾದಂತೆ !
ಭೋರ್ಗರೆವ ಜಲರಾಶಿ ತೂಬಿನಲಿ ನುಗ್ಗುತಿದೆ
‘ನೀರು’ ಎಂಬೆನೆ ಇದನು ? ಕ್ರಾಂತಿಗಳ ಸಂತೆ !
ಕೆಳಗೆ ‘ಬೃಂದಾವನ’ದಿ ಕುಣಿ ಕುಣಿವ ಬಣ್ಣಗಳ
ಚಿಲುಮೆ ! ವಿಶ್ವವನೆ ಬೆರಗುಗೊಳಿಸುವ ನೋಟಗಳ
ಕೂಟ ! ಹೊಗಳಿಕೆಗೆ, ಬಲುಸುಲಭ ಮೆಚ್ಚುಗೆಗೆ, ಇದು
ಪಾತ್ರವಾದಂತೆ, ತೂಬಿನಲಿ ದೂರಕೆ ಹರಿದು
ಕೆಸರು ಗದ್ದೆಗಳಲ್ಲಿ ಹಸುರ ಸೃಜಿಸುವ ಮಾಟ-
ದುಸಿರಾಗಿ, ಹೊನ್ನತೆನೆಯಾಗಿ ತೂಗುವ ನೋಟ
ಮೆಚ್ಚುಗೆಗೆ ಹೊರತಾಗಿ, ದಿನ ದಿನದ ಸಾಮಾನ್ಯ
ಸಂಗತಿಯೊಳೊಂದಾಗಿ ಹೋಗಿಹುದು ! ಸಾಮಾನ್ಯ
ರೂಪದಲಿ ಮೈದೋರ್ವ ಮಹಿಮೆಗಿಲ್ಲದ ಹೊಗಳು
ಕುಣಿವಲ್ಪಬಣ್ಣಕ್ಕೆ ಸಲ್ಲುತಿಹುದೇಗಳೂ !