ನಮ್ಮ ಭರತದೇಶ ಪುಣ್ಯಭೂಮಿಯೆಂದು ಹೆಸರು ವಾಸಿಯಾಗಿದೆ. ದಕ್ಷಿಣ ಭಾರತದಲ್ಲಿ ಚೇರ, ಚೋಳ, ಪಾಂಡ್ಯ ಮೊದಲಾದ ಹಲವು ಅರಸು ವಂಶಗಳವರು ಆಳಿದರು.

ಕಾವೇರಿ ನದಿ ಹರಿಯುವ ಚೋಳನಾಡಿಗೆ ಕಾವೇರಿ ಪಟ್ಟಣ ಎಂಬುದು ರಾಜಧಾನಿ. ಚೇರನಾಡಿಗೆ ವಂಜಿ ನಗರ ರಾಜಧಾನಿಯಾಗಿತ್ತು. ಪಾಂಡ್ಯ ನಾಡಿಗೆ ಮಧುರೆ ರಾಜಧಾನಿಯಾಗಿತ್ತು.

ಕಾವೇರಿ ಪಟ್ಟಣದಲ್ಲಿ ಅನೇಕ ಪ್ರತಿಷ್ಠಿತ ವ್ಯಾಪಾರಿಗಳು ವಾಸವಾಗಿದ್ದರು. ಮಾನಾಯಗನ್ ಎಂಬ ವರ್ತಕ ಆ ನಗರದಲ್ಲಿ ಹೆಚ್ಚಿನ ಶ್ರೀಮಂತಿಕೆಯನ್ನು ಪಡೆದಿದ್ದನು. ಅವನಿಗೆ ವಂಶದ ಕೀರ್ತಿಯನ್ನು ಬೆಳಗಿಸಲು ಜನಿಸಿದವಳು ಏಕೈಕ ಪುತ್ರಿ ಕನ್ನಗಿ. ಕನ್ನಗಿ ಸೌಂದರ್ಯದಲ್ಲಿ ಲಕ್ಷ್ಮಿಯಾಗಿದ್ದಳು. ಬುದ್ಧಿವಂತಿಕೆಯಲ್ಲಿ ಸರಸ್ವತಿಯಾಗಿದ್ದಳು. ಪ್ರೀತಿಯಲ್ಲಿ ಲೋಕಮಾತೆ ಪಾರ್ವತಿಯಂತೆ ಬೆಳಗುತ್ತಿದ್ದಳು. ಹೀಗೆ ಕನ್ನಗಿ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರಳಾಗಿದ್ದಳು.

ಅದೇ ಊರಿನಲ್ಲಿ ಮಾಚಾತ್ತುವಾನ್ ಎಂಬ ಶ್ರೇಷ್ಠ ವ್ಯಾಪಾರಿಯಿದ್ದನು. ಅವನು ದಾನ ಔದಾರ್ಯಗಳಿಗೆ ಬಹು ಪ್ರಸಿದ್ಧಿಯನ್ನು ಪಡೆದಿದ್ದನು. ಅವನಿಗೆ ಒಬ್ಬನೇ ಮಗ, ಕೋವಲನ್ ಎಂದು ಹೆಸರು. ಜನರು ಅವನ ಅಪೂರ್ವ ರೂಪವನ್ನೂ, ಬುದ್ಧಿಕೌಶಲವನ್ನೂ, ಪರಾಕ್ರಮವನ್ನೂ ಮೆಚ್ಚಿದ್ದರು. ಕೋವಲನ್, ಕನ್ನಗಿ ಇಬ್ಬರ ಕುಟುಂಬಗಳೂ ಸಿರಿವಂತವಾಗಿದ್ದವು. ಇಬ್ಬರೂ ರೂಪದಲ್ಲಿ, ಗುಣದಲ್ಲಿ ಕೀರ್ತಿ ಪಡೆದವರು. ಅವರ ತಂದೆ ತಾಯಿಯರು ಕೋವಲನ್-ಕನ್ನಗಿಯರ ಮದುವೆ ಮಾಡಿದರು. ಈ ಮದುವೆ ಬಹು ವೈಭವದಿಂದ ನಡೆಯಿತು.ಈ ಮದುಎಗೆ ಚೋಳ ಚಕ್ರವರ್ತಿ ಮಾವಣ್ಣಕ್ಕಿಳ್ಳಿ ಬಂದು ವಧೂವರರನ್ನು ಆಶೀವರ್ದಿಸಿ ಬಹು ಅಮೂಲ್ಯವಾದ ಉಡುಗೊರೆಗಳನ್ನು ಕೊಟ್ಟನು.

ಕೋವಲನ ತಂದೆ ತಾಯಿಗಳು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಆ ದಂಪತಿಗಳಿಗೆ ಅತಿ ವೈಭವಪೂರ್ಣವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿಕೊಟ್ಟರು. ಅವರ ಸೇವೆಗಾಗಿ ದಾಸ-ದಾಸಿಯರನ್ನೂ, ಸಕಲ ಐಶ್ವರ್ಯಗಳನ್ನೂ ಕೊಟ್ಟರು. ಕನ್ನಗಿ ತನ್ನದೇ ಆದ ಮನೆಯಲ್ಲಿ ಗಂಡನೊಂದಿಗೆ ಸಂತೋಷದಿಂದ ಇದ್ದಳು. ತನ್ನಪತಿಗೆ ಯಾವುದೇ ವಿಧದಲ್ಲಿ ತೊಂದರೆಯಾಗದಂತೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಳು. ಉತ್ತಮ ಗೃಹಿಣಿಯಾಗಿ, ಮನೆಗೆ ಬಂದ ಅತಿಥಿಗಳ ಭಾಗ್ಯ ದೇವತೆಯಾಗಿ, ಬಡವರಿಗೆ ಕೊಡುವ ಕೊಡುಗೈ ದಾನಿಯಾಗಿ, ತನ್ನ ಬಂಧು ಬಾಂಧವರಿಗೆ ಪ್ರೀತಿಯ ಮಗಳಾಗಿ, ಸರ್ವ ಜನರ ಹೃದಯಕ್ಕೆ ಆನಂದವನ್ನು ಕೊಡುವ ಮಾಂಗಲ್ಯಮಣಿಯಾಗಿ ತನ್ನ ಜೀವನವನ್ನು ಕಳೆಯುತ್ತಿದ್ದಳು. ಅವರಿಬ್ಬರ ಜೀವನದಲ್ಲಿ ಕೊರತೆ ಎಂಬುದು ಇರಲಿಲ್ಲ. ಅವರ ತಂದೆತಾಯಿಯರಿಗೆ ಅವರನ್ನು ನೋಡುವುದೇ ಹಬ್ಬ.

ಮಾಧವಿಯ ನೃತ್ಯ

ಅದೇ ಊರಿನಲ್ಲಿ ಚಿತ್ರಾಪತಿ ಎಂಬವನ ಮನೆತನ ಕಲಾ ನೈಪುಣ್ಯಕ್ಕೆ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಚಿತ್ರಾಪತಿಯ ಮಗಳು ಮಾಧವಿ. ಮಾಧವಿ ಎಲ್ಲ ಕಲೆಗಳಲ್ಲಿ ಚಾತುರ್ಯವನ್ನು ಪಡೆದಳು. ಸಂಗೀತ, ಭರತಶಾಸ್ತ್ರ, ಅಭಿನಯ ಕಲೆಗಳಲ್ಲಿ ಅಪೂರ್ವವಾದ ಜ್ಞಾನವನ್ನು ಪಡೆದಳು. ಸಂಗೀತ, ಭರತಶಾಸ್ತ್ರ, ಅಭಿನಯ ಕಲೆಗಳಲ್ಲಿ ಅಪೂರ್ವವಾದ ಜ್ಞಾನವನ್ನು ಪಡೆದಳು. ಹೀಗೆ ಎಳೆಯ ವಯಸ್ಸಿನಲ್ಲಿಯೇ ಮಾಧವಿ ತನ್ನ ಕಲಾಕುಶಲತೆಗೆ ಖ್ಯಾತಳಾಗಿ ಚೋಳ ರಾಜೇಂದ್ರನ ಮುಂದೆ ತನ್ನ ನೈಪುಣ್ಯವನ್ನು ತೋರುವ ಸಾಮರ್ಥ್ಯವನ್ನು ಪಡೆದಳು.

ಕಾವೇರಿ ಪಟ್ಟಣದಲ್ಲಿ ವರ್ಷವರ್ಷವೂ ಇಂದ್ರೋತ್ಸವವು ವೈಭವದಿಂದ ನಡೆಯುತ್ತಿತ್ತು. ಇಂದ್ರೋತ್ಸವವೆಂದರೆ, ಮಳೆಯ ದೇವತೆಯಾದ ಇಂದ್ರನನ್ನು ಪೂಜಿಸುವ ಹಬ್ಬ. ಈ ಉತ್ಸವ ಚೈತ್ರ ಪೂರ್ಣಿಮೆಯ ದಿನದಿಂದ ಪ್ರಾರಮಭವಾಗಿ ಇಪ್ಪತ್ತೆಂಟು ದಿನಗಳವರೆಗೆ ನಡೆಯುತ್ತಿತ್ತು.

ಆ ಸಮಯದಲ್ಲಿ ಕಾವೇರಿ ಪಟ್ಟಣವನ್ನು ವೈಭವ ಪೂರ್ಣವಾಗಿ ಅಲಂಕರಿಸುತ್ತಿದ್ದರು. ಎಲ್ಲಿ ನೋಡಿದರೂ ತಳಿರುತೋರಣಗಳು. ಈ ಇಂದ್ರಮಹೋತ್ಸವದಲ್ಲಿ ಅರಸನಿಂದ ಹಿಡಿದು ಸಾಮಾನ್ಯ ಪೌರರವರೆಗೂ ಯಾರಾದರೂ ಭಾಗವಹಿಸಬಹುದಾಗಿತ್ತು. ಎಲ್ಲೆಲ್ಲೂ ನೃತ್ಯ-ಗೀತ, ಆನಂದ-ವಿನೋದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸೈನಿಕರು ತಮ್ಮ ಅರಸನಿಗೆ ವಿಜಯ ವೈಭವಗಳು ದೊರೆಯಲಿ ಎಂದು ದೇವರಲ್ಲಿ ಮೊರೆಯಿಡುತ್ತಿದ್ದರು. ಸ್ತ್ರೀಯರು ದೇವಾಲಯಗಳಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. ಮನೆಮನೆಗಳಲ್ಲಿ ದೀಪೋತ್ಸವವನ್ನು ಮಾಡುತ್ತಿದ್ದರು. ಪಟ್ಟಣದ ರಾಜ ವಿದೀಗಳಲ್ಲಿ ರಾಜನ ಅಧಿಕಾರಿಗಳು ಬೆಳ್ಳಿಯಲ್ಲಿ ಮಾಡಿದ ಇಂದ್ರನ ಉತ್ಸವಮೂರ್ತಿಯನ್ನು ನಿರ್ಮಿಸಿ, ಕಾವೇರಿಯಿಂದ ನೀರು ತಂದು ಅಭಿಷೇಕ ಮಾಡುತ್ತಿದ್ದರು. ಹೀಗೆ ಈ ಉತ್ಸವದಲ್ಲಿ ಸಂಗೀತ, ಸಾಹಿತ್ಯ, ಕಲಾವೃಂದಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತ್ತಿತ್ತು. ಅಂತೂ ಸಂಭ್ರಮ, ಸಂತೋಷಗಳ ಕಾಲ ಈ ಉತ್ಸವ.

ಒಂದು ವರ್ಷ ಇಂದ್ರೋತ್ಸವ ಕಾಲಿಟ್ಟಿತು. ಆ ವರ್ಷದ ವೈಶಿಷ್ಟ್ಯ ಮಾಧವಿಯ ಕಲಾಪೂರ್ಣ ನೃತ್ಯ.

ಚೋಳರಾಜನ ಅರಮನೆಯ ನೃತ್ಯಮಂಟಪವನ್ನು ಅನೇಕ ಪ್ರತಿಭಾವಂತ ಶಿಲ್ಪಶಾಸ್ತ್ರಜ್ಞರು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರು. ರಂಗಮಂಟಪದಲ್ಲಿ ನೆರಳೇ ಬೀಳಬಾರದು, ಹಾಗೆ ದೀಪಗಳ ಬೆಳಕನ್ನು ಹೊಂದಿಸಿದ್ದರು. ಮಾಧವಿಯ ನೃತ್ಯವನ್ನು ನೋಡಬೇಕು ಎಂದು ಸಾವಿರಾರು ಜನ ಕಾತುರದಿಂದ ಕಾಯುತ್ತಿದ್ದರು.

ಒಂದು ಶುಭ ಮುಹೂರ್ತದಲ್ಲಿ ಚೋಳ ರಾಜೇಂದ್ರನು ಆಸನದಲ್ಲಿ ಕುಳಿತಿದ್ದಾಗ ಮಾಧವಿಯು ಸಕಲ ಅಲಂಕಾರ ಭೂಷಿತೆಯಾಗಿ ಪ್ರವೇಶಿಸಿದಳು. ತನ್ನ ಬಲಗಾಲನ್ನು ವೇದಿಕೆಯ ಮೇಲಿಟ್ಟಳು. ನೃತ್ಯ ಪ್ರಾರಂಭವಾಯಿತು. ಆ ಲಾವಣ್ಯವತಿಯು ವಿವಿಧ ಭಾವ ಭಂಗಿಗಳಿಂದ ಸಂಗೀತ, ತಾಳ, ಮದ್ದಳೆಗಳಿಗೆ ಅನುಗುಣವಾಗಿ, ಹಾಡಿನ ಅರ್ಥ-ಭಾವ ಹೃದಯವನ್ನು ಹೊಗುವಂತೆ ನೃತ್ಯ ಮಾಡಿದಳು. ಎಷ್ಟು ನೋಡಿದರೂ ಇನ್ನೂ ನೋಡಬೇಕು ಎನ್ನಿಸುವಂತಹ ನೃತ್ಯ. ರಾಜ- ಸಾಮಾನ್ಯ ಜನ ಎಲ್ಲ ಅವಳ ನೃತ್ಯಕ್ಕೆ ಮೈಮರೆತರು.

ಮಾಧವಿಯ ನೃತ್ಯವನ್ನು ನೋಡಿ ಸವಿದವರಲ್ಲಿ ಕಲಾ ರಸಿಕನಾದ ಕೋವಲನ್ ಒಬ್ಬ. ಅವನು ತನ್ನನ್ನು ತಾನೇ ಸಂಪೂರ್ಣವಾಗಿ ಮರೆತನು. ಕಲಾರಸಿಕನಾದ ಕೋವಲನು ಹೃದಯ ಮಾಧವಿಯಲ್ಲಿ ಸಂಪೂರ್ಣವಾಗಿ ಲೀನವಾಯಿತು. ಈ ಮಧ್ಯದಲ್ಲಿ ಮಾಧವಿಯೂ ಕೋವಲನ ಕಡೆ ನೋಡಿದಳು. ಇಬ್ಬರಿಗೂ ಪ್ರೀತಿ ಮೂಡಿತು.

ಮಾಧವಿ-ಕೋವಲನ್

ನೃತ್ಯ ಮುಗಿಯಿತು. ರಾಜನು ಮಾಧವಿಗೆ ಅನೇಕ ಬಹುಮಾನಗಳನ್ನು ಕೊಟ್ಟು ಸನ್ಮಾನಿಸಿದನು. ಒಂದು ಸಾವಿರದ ಎಂಟು ಬಂಗಾರದ ನಾಣ್ಯಗಳನ್ನೂ ಒಂದು ಮಾಣಿಕ್ಯಗಳ ನವಹಾರವನ್ನೂ ಮಾಧವಿಗೆ ಕಾಣಿಕೆಯಾಗಿ ಕೊಟ್ಟನು.

ಅಂದೇ ಮಾಧವಿಯ ದಾಸಿಯೊಬ್ಬಳು ಮುಖ್ಯ ಬೀದಿಗಳಿಗೆ ಹೋದಳು; ರಾಜನು ಕೊಟ್ಟ ಹಾರಕ್ಕೆ ಎರಡರಷ್ಟು ಬೆಲೆಯನ್ನು ಯಾರು ಕೊಟ್ಟು ಕೊಂಡರೆ ಅವರ ಜೊತೆಗೆ ಮಾಧವಿಯು ಇರುತ್ತಾಳೆ ಎಂದು ಸಾರಿದಳು.

ಆ ಹಾರದ ಬೆಲೆಯೇ ಬಹು ಹೆಚ್ಚು. ಅದಕ್ಕೆ ಎರಡರಷ್ಟನ್ನು ಕೊಟ್ಟು ಕೊಳ್ಳಬೇಕು ಎಂದರೆ ಯಾರಿಗೆ ಸಾಧ್ಯ? ಶ್ರೀಮಂತರು ಎನ್ನಿಸಿಕೊಂಡವರು ಹಿಂದೆಗೆದರು. ಆದರೆ ಕೋವಲನ್ ಮಾಧವಿಯ ನೃತ್ಯವನ್ನು ಕಂಡು ಬೆರಗಾಗಿದ್ದ, ಅವಳಲ್ಲಿ ಪ್ರೇಮ ಬಂದಿತ್ತು. ಅವನು ಆ ಹಾರವನ್ನು ದಾಸಿ ಹೇಳಿದ ಬೆಲೆಗೆ ಕೊಂಡ. ಆನಂತರ ಮಾಧವಿಯ ಬಳಿಗೆ ಹೋದ. ಅವಳಿಗೆ ತನ್ನ ಪ್ರೇಮದ ಕಾಣಿಕೆಯಾಗಿ ಹಾರವನ್ನು ಕೊಟ್ಟ. ಮಾಧವಿ ಅವನ ಪ್ರೇಮವನ್ನು ಮೆಚ್ಚಿದಳು. ಅಂದಿನಿಂದ ಕೋವಲನ್ ಮಾಧವಿಯ ಮನೆಯಲ್ಲೆ ಉಳಿದ. ಅವಳೊಡನೆ ಸಂತೋಷವಾಗಿದ್ದು ಕನ್ನಗಿಯನ್ನು ಸಂಪೂರ್ಣವಾಗಿ ಮರೆತ. ಮಾಧವಿಯೂ ಅವನೊಡನೆ ತನ್ನ ಪತಿಯಂತೆಯೇ ಪ್ರೀತಿ, ಗೌರವಗಳಿಂದ ಬಾಳಿದಳು.

ಅನೇಕ ದಿನಗಳು ಕಳೆದವು. ಕೋವಲನ್ ದೂರವಾದ ಎಂದು ಕನ್ನಗಿಗೆ ತುಂಬ ದುಃಖವಾಯಿತು. ಅತ್ತು ಅತ್ತು ಅವಳ ಕಣ್ಣುಗಳು ಕೆಮಪಾದವು. ಗಂಡನ ಚಿಂತೆಯಿಂದ ಅವಳು ಮಂಕಾದಳು. ಯಾವ ಒಡವೆಗಳೂ ಬೇಡವಾದವು. ಮಂಗಳಾಭರಣಗಳು, ಸುಗಂಧದ್ರವ್ಯಗಳು ಎಲ್ಲವನ್ನೂ ದೂರ ಇಟ್ಟಳು. ಆದರೆ ತನ್ನ ಪತಿಯನ್ನಾಗಲೀ, ವಿಧಿಯನ್ನಾಗಲೀ ದೂಷಿಸಲಿಲ್ಲ. ತಾಳ್ಮೆಯಿಂದ ಕಷ್ಟವನ್ನು ಅನುಭವಿಸಿದಳು.

ಕೋವಲನ್ ಮಾಧವಿಯೊಡನೆ ಬಹಳ ಸುಖದಿಂದ ದಿನಗಳನ್ನು ಕಳೆದ. ಅವಳ ಹೆಸರಿನಲ್ಲಿ ದಾನಧರ್ಮಗಳನ್ನು ಮಾಡಿದ. ಬರಬರುತ್ತ ಅವನ ಹಣ ಕರಗುತ್ತ ಬಂದು. ಮಾಧವಿಗೆ ಒಂದು ಹೆಣ್ಣುಮಗುವಾಯಿತು. ಅವಳಿಗೂ ಕೋವಲನಿಗೂ ಬಹಳ ಸಂತೋಷವಾಯಿತು. ಕೋವಲನ್ ಅನೇಕ ದಾನಗಳನ್ನು ಮಾಡಿದ.

ಮಗುವಿಗೆ ಹೆಸರು ಇಡಬೇಕೆಲ್ಲವೆ? ಯಾವ ಹೆಸರಿಡುವುದು? ಈ ಯೋಚನೆಯಲ್ಲಿದ್ದಾಗ ಕೋವಲನಿಗೆ ತನ್ನತಂದೆ ತಾಯಿಗಳಿಂದ ಕೇಳಿದ ಒಂದು ಅಪೂರ್ವ ಘಟನೆಯ ನೆನಪಾಯಿತು.

ಕೋವಲನ ಪೂರ್ವಜರು ಹಡಗು ವ್ಯಾಪಾರದಲ್ಲಿ ಬಹು ಪ್ರಸಿದ್ಧಿಯನ್ನು ಹೊಂದಿದ್ದರು. ಒಂದು ಸಾರಿ ಅವರು ಹಡಗಿನಲ್ಲಿ ಕುಳಿತು ವ್ಯಾಪಾರಕ್ಕೆ ಹೋಗುತ್ತಿರುವಾಗ, ನೀರಿನ ಮಧ್ಯದಲ್ಲಿ ಭಯಂಕರವಾದ ಬಿರುಗಾಳಿ ಬೀಸಿತು. ಹಡಗು ಭಯಂಕರವಾದ ಅಪಘಾತಕ್ಕೆ ಸಿಕ್ಕುತ್ತದೆ, ಇನ್ನೇನು ಮುಳುಗೇಹೋಯಿತು ಎನ್ನುವಂತಿತ್ತು. ಅಷ್ಟರಲ್ಲಿ ಹಡಗಿನಲ್ಲಿ ಕುಳಿತ ಕೋವಲನ ಪೂರ್ವಜರು ತಮ್ಮ ಕುಲದೈವವಾದ ಮಣಿಮೇಖಲಾ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರು. ತಮ್ಮನ್ನು ಕಷ್ಟದಿಂದ ಪಾರುಮಾಡಲು ಬೇಡಿಕೊಂಡರು. ಆಗ ದೇವಿ ಅವರ ಪ್ರಾರ್ಥನೆಯನ್ನು ಮನ್ನಿಸಿ ಅವರನ್ನು ರಕ್ಷಿಸಿದಳು. ಅಂದಿನಿಂದ ಕೋವಲನ ಮನೆಯವರು ಮಣಿಮೇಖಾಲಾ ದೇವಿಯ ಪರಮ ಭಕ್ತರಾಗಿದ್ದರು.

ಕೋವಲನ್ಗೆ ಇದೆಲ್ಲ ನೆನಪಾಯಿತು. ತನ್ನಮಗಳಿಗೆ ಮಣಿಮೇಖಲಾ ಎಂದು ಹೆಸರಿಟ್ಟನು. ಅವನಿಗೆ ತನ್ನ ಮಗಳಲ್ಲಿ ಬಹು ಪ್ರೀತಿ. ಮಾಧವಿ ಮಗಳ ಸೌಂದರ್ಯವನ್ನು ಕಂಡು ಹಿಗ್ಗುತ್ತಿದ್ದಳು. ಕೋವಲನ್-ಮಾಧವಿಯರ ಆನಂದಕ್ಕೆ ಪಾರವೇ ಇಲ್ಲದಾಯಿತು.

ಮಾಧವಿ ದೂರವಾದಳು

ಹಲವು ವರ್ಷಗಳು ಸರಿದವು. ಮತ್ತೊಂದು ವರ್ಷ. ಆ ವರ್ಷವೂ ಇಂದ್ರೋತ್ಸವ ಕಾಲಿಟ್ಟಿತು. ಕೋವಲನ್-ಮಾಧವಿ ವಿಹಾರಕ್ಕೆ ಸಮುದ್ರ ತೀರದಲ್ಲಿ ಬಿಡಾರವನ್ನು ಹಾಕಿಕೊಂಡರು. ಕಾವೇರಿಯು ಸಮುದ್ರವನ್ನು ಸೇರುವ ಆ ಸ್ಥಳದಲ್ಲಿ ನೂರಾರು ಜನ ನೆರೆದಿದ್ದರು, ಸುಂದರವಾದ ದೃಶ್ಯವನ್ನು ನೋಡಿ ಕಣ್ಣಿಗೂ ಮನಸ್ಸಿಗೂ ಹಬ್ಬ ಮಾಡಿಕೊಳ್ಳುತ್ತಿದ್ದರು. ಶ್ರುತಿ ಮಾಡಿದ ವೀಣೆಯನ್ನು ಮಾಧವಿ ಕೋವಲನಿಗೆ ಕೊಟ್ಟಳು. ಕೋವಲನ್ ಕಾವೇರಿಯನ್ನು ಒಂದು ಹೆಣ್ಣಿಗೆ ಹೋಲಿಸಿ ಸಮುದ್ರರಾಜನಲ್ಲಿ ಕೂಡುವ ಒಂದು ಅಪೂರ್ವ ದೃಶ್ಯವನ್ನು ಬಹು ಮನೋಜ್ಞವಾಗಿ ಬಣ್ಣಿಸಿ ಹಾಡಿದನು. ಮಾಧವಿ ಅದೇ ವೀಣೆಯನ್ನು ತೆಗೆದುಕೊಂಡು ಕೋವಲನ್ ಹಾಡಿದ ರೀತಿಯಲ್ಲಿಯೇ ಚೋಳರಾಜೇಂದ್ರ ನನ್ನು ಕುರಿತು ಹಾಡಿದಳು.

ಕೋವಲನ್ ಹಾಡನ್ನು ಕೇಳಿದ. ಅದನ್ನು ತಪ್ಪು ಅರ್ಥ ಮಾಡಿಕೊಂಡ. ಮಾಧವಿ ಬೇರೆ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ. ಅವಳನ್ನು ಏನನ್ನೂ ಕೇಳಲಿಲ್ಲ. ಒಂದು ಮಾತನ್ನೂ ಆಡದೆ ಎದ್ದು ತನ್ನ ಸೇವಕರೊಡನೆ ಹೊರಟುಹೋದ.

ಮಾಧವಿಯ ಹೃದಯ ಕಳವಳಗೊಂಡಿತು. ಕಣ್ಣಿನಲ್ಲಿ ನೀರು ತುಂಬಿತು. ಮಾಧವಿ ಕೋವಲನ್ನನ್ನು ಪ್ರೀತಿಸುತ್ತಿದ್ದಳು, ಆದುದರಿಂದ ಮರುದಿನ ತನ್ನಹತ್ತಿರ ಬಂದೇಬರುತ್ತಾನೆ ಎಂದು ನಂಬಿಕೊಂಡು ಭಾರವಾದ ಹೃದಯದಿಂದ ಮನೆಗೆ ಹೋದಳು.

ಮತ್ತೆ ಕನ್ನಗಿಯೊಡನೆ

ಈ ದಿನಗಳನ್ನು ಕನ್ನಗಿ ತನ್ನ ಮನೆಯಲ್ಲಿ ಬಹು ದುಃಖದಿಂದ ಕಳೆಯುತ್ತಿದ್ದಳು. ಅವಳ ಬಾಲ್ಯ ಸ್ನೇಹಿತೆ ದೇವಂದಿ ಅವಳ ಮನೆಗೆ ಬಂದಳು. ಕನ್ನಗಿ ಎಂದಿಗಿಂತ ದುಃಖದಲ್ಲಿದ್ದಳು. ದೇವಂದಿ ಅವಳನ್ನು, “ಇದೇನು? ಇಷ್ಟು ದುಃಖದಲ್ಲಿ ಮುಳುಗಿದ್ದೀಯೆ?”ಎಂದು ಕೇಳಿದಳು. ಆಗ ಕನ್ನಗಿ ಹಿಂದಿನ ರಾತ್ರಿ ತನಗೆ ಕೆಟ್ಟ ಕನಸಾಯಿತು ಎಂದು ಹೇಳಿ, ಅದನ್ನು ವರ್ಣಿಸಿದಳು: “ದೇವಂದಿ, ನಾನೂ ನನ್ನ ಪತಿಯೂ ಯಾವುದೋ ಒಂದು ರಾಜ್ಯಕ್ಕೆ ಹೋಗಿದ್ದೆವು. ಅಲ್ಲಿ ನನ್ನ ಗಂಡ ಒಂದು ದೊಡ್ಡ ಅಪವಾದಕ್ಕೆ ಗುರಿಯಾದ. ಆಗ ನಾನು ಹೋಗಿ ರಾಜಸಭೆಯಲ್ಲಿ ರಾಜನೊಂದಿಗೆ ವಾದ ಮಾಡಿದೆ. ರಾಜನಿಗೂ, ಆ ಊರಿಗೂ ಶಾಪವನ್ನು ಕೊಟ್ಟು ನಾಶ ಮಾಡಿದೆ. ಅನಂತರ ನಾನು ನನ್ನ ಗಂಡನೊಡನೆ ಸೇರಿದೆ.”

ದೇವಂದಿ, “ಇದು ಅಶುಭ ಸೂಚನೆ. ನೀನು ಇಂದು ಕಾವೇರಿ ಸಂಗಮದ ಹತ್ತಿರದಲ್ಲಿರುವ ಕಾಮದೇವನ ಗುಡಿಗೆ ಹೋಗು. ಕಾಮದೇವನನ್ನು ಪೂಜಿಸು. ಅವನ ಆಶೀರ್ವಾದವಾದರೆ ಮತ್ತೆ ನಿನ್ನ ಗಂಡನನ್ನು ಸೇರುತ್ತಿ” ಎಂದು ಹೇಳಿದಳು. ಕನ್ನಗಿಯು, “ದೇವಂದಿ, ನನ್ನ ಗಂಡನನ್ನು ಬಿಟ್ಟು ಬೇರೆಯಾವ ದೇವರನ್ನು ಪೂಜಿಸಲಿ? ಆತನೇ ನನ್ನ ದೇವರು” ಎಂದಳು.

ಅವಳಿನ್ನೂ ಮಾತನ್ನು ಮುಗಿಸಿರಲಿಲ್ಲ. ಕೋವಲನ್ಮನೆಯಲ್ಲಿ ಕಾಲಿಟ್ಟ! ಕನ್ನಗಿಯ ಕಣ್ಣುಗಳು ಅರಳಿದವು, ಸಂತೋಷ ಉಕ್ಕಿ ಬಂದಿತು. ಕೋವಲನ್ ಅವಳನ್ನು ನೋಡಿದ. ಬಾಡಿದ ಹೂವಿನಂತೆ ಕಾಂತಿಯನ್ನು ಕಳೆದ ಕೊಂಡಿದ್ದಳು, ದೇಹವೆಲ್ಲ ಸೊರಗಿಹೋಗಿತ್ತು. ಕೋವಲನಿಗೆ ತುಂಬ ದುಃಖವಾಯಿತು.

ಕೋವಲನ್ ಹೇಳಿದ: ’ಕನ್ನಗಿ, ನಾನು ನಿನ್ನನ್ನು ವಂಚಿಸಿ ಇಷ್ಟು ದಿನಗಳೂ ದೂರವಿದ್ದೆ; ಮೋಸಗಾತಿಯಲ್ಲಿ ಪ್ರೀತಿಯಿಟ್ಟು ಎಲ್ಲ ಐಶ್ವರ್ಯವನ್ನೂ ಕಳೆದುಕೊಂಡೆ. ನಿನ್ನಂತಹ ಒಳ್ಳೆಯವಳನ್ನು ದುಃಖಪಡಿಸಿದೆ. ನನಗೇ ನಾಚಿಯಾಗುತ್ತಿದೆ.” ಕನ್ನಗಿ ಗಂಡನನ್ನು ಕುರಿತು, “ನೀವು ಯಾವುದಕ್ಕೂ ಚಿಂತೆ ಮಾಡಬೇಡಿ, ಹಣವಿಲ್ಲೆಂದು ವ್ಯಥೆಪಡಬೇಡ. ನಿಮ್ಮ ಸಂತೋಷಕ್ಕೆ ಯಾವುದೇ ರೀತಿಯಲ್ಲಿ ಕೊರತೆಯಾಗಬಾರದು. ನನ್ನ ಹತ್ತಿರ ನಮ್ಮ ತಂದೆಯವರು ಕೊಟ್ಟ ಬಹುಬೆಲೆಬಾಳುವ ನೂಪುರಗಳಿವೆ. ಅವುಗಳನ್ನು ತೆಗೆದುಕೊಂಡು ಹೋಗಿ” ಎಂದು ಹೇಳಿದಳು. ಕೋವಲನ್‌ಗೆ ಅವಳ ಔದಾರ್ಯವನ್ನು ನೋಡಿ ಸಂತೋಷವಾಯಿತು. ಹೃದಯ ತುಂಬಿ ಬಂತು. ಅವನು ಹೇಳಿದ; “ಇವುಗಳಲ್ಲಿ ಒಂದನ್ನೂ ಮಾರಿದರೂ ತಕ್ಕಷ್ಟು ಹಣ ಬರುತ್ತದೆ. ಅದೇ ಬಂಡವಾಳವಾಯಿತು, ಅದನ್ನು ಇಟ್ಟಕೊಂಡು ಹಣವನ್ನೆಲ್ಲಾ ಸಂಪಾದಿಸುತ್ತೇನೆ. ಈ ಊರಿನಲ್ಲಿ ಇರುವುದು ಬೇಡ. ಬೇರೆ ಎಲ್ಲಿಗಾದರೂ ಹೋಗಿ ಸುಖವಾಗಿ ಜೀವಿಸೋಣ.”

ಮಧುರೆಗೆ

ಕನ್ನಗಿ ಗಂಡನ ಮಾತಿಗೆ ಪ್ರತಿ ಹೇಳಲಿಲ್ಲ. ಕೂಡಲೇ ಹೊರಟುನೀಂತಳು. ಇಬ್ಬರೂ ಆ ರಾತ್ರಿಯೇ ಪ್ರಯಾಣ ಹೊರಟರು. ರಾತ್ರಿಯಲ್ಲಿ ಅವರು ಹೋಗುತ್ತಿದ್ದಾಗ, ದಾರಿಯಲ್ಲಿ ಒಬ್ಬ ಜೈನ ಸಂನ್ಯಾಸಿಯ ಪರಿಚವಾಯಿತು. ಕವುಂದಿ ಅಡಿಗಳು  ಎಂದು ಅವರು ಪ್ರಸಿದ್ಧರು. ಅವರು ಅವರಿಬ್ಬರನ್ನೂ ಮಾತನಾಡಿದರು, ಅವರು ಯಾರು ಎಂದು ತಿಳಿದುಕೊಂಡರು. ಅನಂತರ, “ನೀವು ಹೀಗೆ ಇಬ್ಬರೇ ಪ್ರಯಾಣ ಮಾಡುವುದು ಸರಿಯಲ್ಲ, ನಾನು ನಿಮ್ಮ ಜೊತೆಗೆ ಮಧುರೆಗೆ ಬರುತ್ತೇನೆ” ಎಂದು ಹೇಳಿ ಅವರೊಂದಿಗೆ ಪ್ರಯಾಣ ಹೊರಟರು.

ಬಿಸಿಲಿನಲ್ಲಿ ಪ್ರಯಾಣ ಕಷ್ಟ. ಆದುದರಿಂದ ಇವರು ಸಾಧ್ಯವಾದ ಮಟ್ಟಿಗೂ ಹಗಲಿನಲ್ಲಿ ಪ್ರಯಾಣ ಮಾಡದೆ ರಾತ್ರಿ ಚಂದ್ರನ ತಂಪಾದ ಕಿರಣಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಕವುಂದಿ ಅಡಿಗಳು ಪಾಂಡ್ಯರಾಜನ ವೈಭವ, ಕೀರ್ತಿ, ನ್ಯಾಯ, ಧರ್ಮಗಳನ್ನು ವರ್ಣಿಸುತ್ತ, ಜೈನಧರ್ಮದ ತತ್ವಗಳನ್ನು ವಿವರಿಸುತ್ತ ಪ್ರಯಾಣದ ಆಯಾಸವನ್ನು ಮರೆಸುತ್ತಿದ್ದರು.

ಅನೇಕ ದಿನಗಳು ಪ್ರಯಾಣ ಮಾಡಿ ಅವರು ಮಧುರೆ ತಲುಪಿದರು. ನಗರದ ಸಮೀಪಕ್ಕೆ ಬಂದಾಗ ಬೆಳಗಿನ ಜಾವವಾಗಿತ್ತು. ಅಲ್ಲಿಯ ದೇವಾಲಯಗಳಲ್ಲಿ ಮೊಳಗುವ ನಗಾರಿಗಳ ಶಬ್ದ, ಮಂಗಳಧ್ವನಿಗಳು ಕೇಳಿ ಬರುತ್ತಿದ್ದವು. ಮಧುರೆ ನಗರದ ಸುತ್ತ ವೈಗೈನದಿ ಹರಿಯುತ್ತದೆ. ಮೂವರೂ ಅದರ ದಡಕ್ಕೆ ಬಂದರು.

ಊರನ್ನು ತಲುಪಲು ಈ ಪ್ರಯಾಣಿಕರು ನದಿಯನ್ನು ದಾಟಬೇಕಲ್ಲ?ದೋಣಿಯಲ್ಲಿ ಕುಳಿತು ಊರಿನ ಮಹಾದ್ವಾರದ ಕಡೆಗೆ ಹೊರಟರು. ಕನ್ನಗಿಯ ಮನಸ್ಸಿಗೆ ಸಮಾಧಾವವಿಲ್ಲ. ಹಿಂದೆ ಅವಳು ಕಂಡ ಕೆಟ್ಟ ಕನಸಿನ ನೆನಪೇ ಮರುಕಳಿಸಿ ಬರುತ್ತಿತ್ತು. ಆದರೆ ಕನ್ನಗಿ ತನ್ನ ಬೇಸರವನ್ನೂ, ಭಯವನ್ನೂ ತೋರಿಸಲಿಲ್ಲ. ಗಂಡ ಸಮಾಧಾನವಾಗಿ ಸಂತೋಷವಾಗಿ ಇರುವುದೇ ಅವಳಿಗೆ ಬೇಕಾಗಿತ್ತು.

ಹೆಬ್ಬಾಗಿಲನ್ನು ತಲುಪಿ ಊರನ್ನು ಪ್ರವೇಶಿಸಿದುದಾಯಿತು. ಬೆಳಗಾಗುವುದರೊಳಗಾಗಿ ಒಂದು ಬ್ರಾಹ್ಮಣರ ಅಗ್ರಹಾರಕ್ಕೆ ಬಂದು ಸೇರಿದರು. ಕವುಂದಿ ಅಡಿಗಳನ್ನೂ ಕನ್ನಗಿಯನ್ನೂ ಅಗ್ರಹಾರದಲ್ಲಿ ಬಿಟ್ಟು ಕೋವಲನ್ ಸ್ನಾನ ಪೂಜೆ ಮೊದಲಾದವುಗಳನ್ನು ಮಾಡಲು ಒಂದುಕೊಳಕ್ಕೆ ಹೋದ.

ಮಾಧವಿಯ ಪತ್ರ

ಮಾಧವಿ ಹಾಡಿದ ಹಾಡನ್ನು ತಪ್ಪಾಗಿ ತಿಳಿದುಕೊಂಡು ಕೋವಲನ್ ಸಿಟ್ಟು ಮಾಡಿಕೊಂಡು ಹೊರಟ, ಅಲ್ಲವೆ? ಮಾಧವಿಯು, ಆಗ ಅವನು ಕೋಪ ಮಾಡಿಕೊಂಡಿದ್ದರೂ ಅನಂತರ ಮತ್ತೆ ಬರುತ್ತಾನೆ ಎಂದು ಸಮಾಧಾನ ಮಾಡಿಕೊಂಡು, ದೈರ್ಯ ತಂದುಕೊಂಡು ಮನೆಗೆ ಹೋದಳು. ಕಾದಳು, ಕಾದಳು, ಅವಳಿಗೆ ಏನೂ ಬೇಡವಾಯಿತು. ಸದಾ ಕಣ್ಣಿನಲ್ಲಿ ನೀರೇ, ಆದರೆ ಕೋವಲನ್ ಬರಲಿಲ್ಲ.

ಕಡೆಗೆ ಮಾಧವಿಗೆ ತಿಳಿಯಿತು, ಕೋವಲನ್ ಊರನ್ನು ಬಿಟ್ಟುಹೊರಟ ಎಂದು . ಪಾಪ, ಅವಳು ಏನು ಮಾಡಬೇಕು? ಕೌಶಿಕನ್ ಎಂಬುವನೊಬ್ಬ ಬ್ರಾಹ್ಮಣ, ಅವಳ ಪರಿಚಯದವನು. ಅವನನ್ನು ಕರೆದು, “ಕೋವಲನ್‌ಗೆ ಒಂದು ಕಾಗದ ಬರೆದು ಕೊಡುತ್ತೇನೆ. ದಯವಿಟ್ಟು ಅವನನ್ನು ಹುಡುಕಿಕೊಂಡು ಹೋಗಿ, ಕಾಗದವನ್ನು ತಲುಪಿಸಿ” ಎಂದು ಕೇಳಿಕೊಂಡಳು. ಅವನೂ ಒಪ್ಪಿದ

ಮಧುರೆಯಲ್ಲಿ ಕೋವಲನ್ ಕೊಳಕ್ಕೆ ಹೋದ, ಅಲ್ಲವೆ? ಅಲ್ಲಿಗೆ ಕೌಶಿಕನೂ ಅಕಸ್ಮಾತ್ತಾಗಿ ಬಂದ.

ಕೌಶಿಕನು ಕೋವಲನನ್ನು ನೋಡಿದ. ಮುಖ ಕೋವಲನಂದತೆಯೇ ಕಂಡಿತು. ಆದರೂ ಕೋವಲನ ಮುಖದಲ್ಲಿ ಚಿಂತೆ; ಮೈ ಕೃಶವಾಗಿತ್ತು, ’ಇವನು ಕೋವಲನೇ?” ಎಂದು ಕೌಶಿಕನಿಗೆ ಅನುಮಾನವಾಯಿತು. ಅನುಮಾನ ಪರಿಹಾರವಾಗುವುದು ಹೇಗೆ? ಕೌಶಿಕನು ಒಂದು ಮಾಧವಿಯ ಬಳ್ಳಿಯನ್ನು ಕುರಿತು ಹೀಗೆ ಹೇಳಿದ; “ಎಲೈ ಮಾಧವಿಯೇ, ನಿನಗೆ ಏನಾಗಿದೆ? ಇಷ್ಟೊಂದು ಏಕೆ ಬಾಡಿಹೋಗಿರುವೆ? ನಮ್ಮ ಕೋವಲನ್ ಬಿಟ್ಟ ಮಾಧವಿಯಂತೆ ಬಾಡಿ ಹೋಗಿರುವಿಯಲ್ಲಾ?”

ಕೋವಲನಿಗೆ ಈ ಮಾತುಗಳನ್ನು ಕೇಳಿ ಆಶ್ಚರ್ಯ ವಾಯಿತು. ಮಾಧವಿ-ಕೋವಲನ್ ಎಂದು ಈತ ಯಾರ ವಿಷಯ ಹೇಳುತ್ತಿದ್ದಾನೆ ಎನ್ನಿಸಿತು. “ನೀನು ಹೇಳುತ್ತಿರುವುದು ಯಾರ ವಿಷಯ?” ಎಂದು ಕೇಳಿದನು. ಕೌಶಿಕನಿಗೆ ಇವನೇ ಕೋವಲನ್ ಎಂದು ಗೊತ್ತಾಯಿತು. ಅವನು “ಅಯ್ಯಾ ಕೋವಲನ್, ನಿನ್ನ ತಂದೆತಾಯಿಗಳು ನಿನ್ನ ಅಗಲುವಿಕೆಯಿಂದ ಬಹು ದುಃಖಪಡುತ್ತಿದ್ದಾರೆ. ನಿನ್ನ ಬಂಧು ಬಾಂಧವರು ಉಸಿರಿಲ್ಲದಂತೆ ಆಗಿದ್ದಾರೆ. ದಿಕ್ಕುದಿಕ್ಕುಗಳಿಗೆ ನಿನ್ನನ್ನು ಹುಡುಕಲು ಜನರನ್ನು ಕಳಿಸಿದ್ದಾರೆ. ನನ್ನನ್ನು ಮಾಧವಿ ಕಳುಹಿಸಿದ್ದಾಳೆ. ಅವಳ ದುಃಖವನ್ನು ಬಣ್ಣಿಸುವಂತಿಲ್ಲ. ಬಹು ದುಃಖದಿಂದ ಪರಿತಪಿಸುತ್ತಿದ್ದಾಳೆ. ತನ್ನದುಃಖವನ್ನೆಲ್ಲ ನನ್ನ ಮುಂದೆ ತೋಡಿಕೊಂಡಳು. ಒಂದು ಕಾಗದವನ್ನು ಬರೆದು, ನಿನಗೆ ತಲುಪಿಸಬೇಕು ಎಂದು ಕೊಟ್ಟಿದ್ದಾಳೆ” ಎಂದು ಹೇಳಿದ. ಮಾಧವಿ ಕೊಟ್ಟಿದ್ದ ಕಾಗದವನ್ನು ಕೋವಲನ್ಗೆ ಕೊಟ್ಟ.

ಅರಸನೇ, ನೀನು ಅಧರ್ಮಿ!’

ಕೋವಲನ್ ಕಾಗದವನ್ನು ಕೌಶಿಕನ ಕೈಯಿಂದ ತೆಗೆದುಕೊಂಡನು. ಮಾಧವಿಯ ಜೊತೆಯಲ್ಲಿ ತಾನು ಕಳೆದ ಸಂತೋಷದ ದಿನಗಳ ನೆನಪಾಯಿತು. ಕಣ್ಣಿನಲ್ಲಿ ನೀರು ತುಂಬಿತು. ಕಾಗದವನ್ನು ಕೂಡಲೆ ಒಡೆದು ಓದಬೇಕೆಂಬ ಕಾತರ. ಆದರೂ ಒಂದು ಕ್ಷಣ ಹಾಗೆಯೇ ನಿಂತುಕೊಂಡನು. ಅನಂತರ ಪತ್ರವನ್ನು ಒಡೆದು ಓದಿದನು. ಮಾಧವಿ ಬರೆದಿದ್ದಳು: “ನಿಮ್ಮ ಪಾದಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಾನು ಹಾಡಿದ ಹಾಡು ನಿಮಗೆ ಬೇರೆ ಅರ್ಥ ಕೊಡಬಹುದು ಎಂದು ತಿಳಿಯದೆ ಹಾಡಿದೆ. ನನ್ನ ಅವಿವೇಕದ ಕಾರಣದಿಂದ ನೀವು ಅರ್ಧರಾತ್ರಿಯಲ್ಲಿ ನಿಮ್ಮ ತಂದೆತಾಯಿಗಳಿಗೆ ತಿಳಿಸದೇ ನಗರವನ್ನು ಬಿಟ್ಟುಹೋದಿರಿ. ನೀವು ಸಮಾಧಾನದಿಂದಿರಿ ಇಷ್ಟೇ ನನ್ನ ಆಸೆ. ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.”

ಕೋವಲನ್ ಕಾಗದವನ್ನು ಓದಿದ. ತಾನು ಮಾಧವಿ ಹಾಡಿದ ಹಾಡನ್ನು ತಪ್ಪು ತಿಳಿದೆ, ಅವಳು ನಿರಪರಾಧಿ ಎಂದು ತಿಳಿಯಿತು. ಆ ಪತ್ರವನ್ನು ಕೌಶಿಕನಿಗೆ ಹಿಂದಕ್ಕೆ ಕೊಟ್ಟು, “ಈ ಪತ್ರವನ್ನು ನನ್ನ ತಂದೆತಾಯಿಗಳಿಗೆ ಮುಟ್ಟಿಸು” ಎಂದು ಹೇಳಿ ಅಲ್ಲಿಂದ ಹೊರಟುಬಿಟ್ಟ.

ಕೋವಲನು ಕವುಂದಿ ಅಡಿಗಳೂ, ಕನ್ನಗಿಯೂ ಇದ್ದ ಸ್ಥಳಕ್ಕೆ ಹಿಂದಿರುಗಿದ. ಅವರನ್ನು ಕರೆದುಕೊಂಡು ಪ್ರಯಾಣ ಬೆಳೆಸಿದ. ಮಧುರೆಗೆ ಬಹು ಹತ್ತಿರ ಒಂದು ಭದ್ರಕಾಳಿಯ ದೇವಾಲಯ. ಮೂವರೂ ಅಲ್ಲಿಗೆ ಬಂದರು. ಅದರ ಹತ್ತಿರ ಮಾದರಿ ಎಂಬಾಕೆ ವಾಸಿಸುತ್ತಿದ್ದಳು. ಅವಳಿಗೆ ಬಹು ದಿನಗಳಿಂದ ಕವುಂದಿ ಅಡಿಗಳ ಪರಿಚಯ. ಆಕೆ ಬಂದು ಅವರಿಗೆ ನಮಸ್ಕರಿಸಿದಳು. ಆಗ ಕವುಂದಿ ಅಡಿಗಳು ಪರಮ ಸಂತೋಷದಿಂದ, “ಮಾದರಿ, ಈ ದಂಪತಿಗಳು ಬಹು ಪುಣ್ಯ ಜೀವಿಗಳು. ಕಾವೇರಿ ಪಟ್ಟಣದವರು. ಒಂದು ಕಾಲಕ್ಕೆ ಬಹು ಶ್ರೀಮಂತಿಕೆಯನ್ನು ಅನುಭವಿಸಿದವರು. ಆದರೆ ಈಗ ದುರದೃಷ್ಟದಿಂದ ಕಡು ಬಡವರಾಗಿದ್ದಾರೆ. ಇವರು ಒಂದು ನೆಲೆಗೆ ಬರುವ ತನಕ ಇವರನ್ನು ಕಾಪಾಡುವದು ನಿನ್ನ ಕರ್ತವ್ಯ” ಎಂದು ಹೇಳಿದರು. ಆಕೆಗೂ ಆ ದಂಪತಿಗಳನ್ನು ಕಂಡು ಪೂಜ್ಯ ಭಾವ ಬಂದಿತು. ಸಂತೋಷದಿಂದ ಅವರನ್ನು ಮಧುರೆ ನಗರಕ್ಕೆ ಕರೆದುಕೊಂಡು ಹೋದಳು. ಕವುಂದಿ ಅಡಿಗಳು ಸಮಾಧಾನದಿಂದ ತಮ್ಮ ದಾರಿಯನ್ನು ಹಿಡಿದರು.

ಮಾದರಿ, ಕೋವಲನ್ ಮತ್ತು ಕನ್ನಗಿಯರಿಗಾಗಿ ಒಂದು ಚಿಕ್ಕ ಗುಡಿಸಲನ್ನು ತೆರವು ಮಾಡಿಕೊಟ್ಟಳು. ಅಡಿಗೆಗೆ ಬೇಕಾಗುವ ಪಾತ್ರೆಗಳನ್ನೂ, ಪದಾರ್ಥಗಳನ್ನೂ ಕೊಟ್ಟಳು.

ಕನ್ನಗಿ ಅಂದು ಅಡಿಗೆ ಮಾಡಿ ಗಂಡನಿಗೆ ಸಂತೋಷದಿಂದ ಬಡಿಸಿದಳು. ಅವರಿಬ್ಬರೂ ಹೀಗೆ ಸಂತೋಷವಾಗಿ ಒಟ್ಟಿಗೆ ಇದ್ದು ಬಹಳ ದಿನಗಳಾಗಿದ್ದವು. ಬಹು ಸಂತೋಷದಿಂದ ಕಾಲ ಕಳೆದರು. ಕೋವಲನ್ ತಾನು ಮತ್ತೆ ಕನ್ನಗಿ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು ಎಂದು ಯೋಚನೆಗಳನ್ನು ಮೆಲಕುಹಾಕುತ್ತಿದ್ದನು.

ಅರಮನೆಯ ಅಕ್ಕಸಾಲಿ

ಬೆಳಗಾಯಿತು. ಗಂಡ ಹೆಂಡತಿ ತಮ್ಮ ಮುಂದಿನ ಜೀವನವನ್ನು ಕುರಿತು ಯೋಚಿಸಿ ಕೆಲಸ ಮಾಡಬೇಕಾಗಿತ್ತಲ್ಲವೆ? ಕನ್ನಗಿ ಹತ್ತಿರ ಇದ್ದ ಒಂದು ನೂಪುರವನ್ನು (ಕಾಲ್ಬಳೆ) ಮಾರಲು ಅವರು ತೀರ್ಮಾನಿಸಿದರು. ಕೋವಲನ್ ಅರಮನೆಯ ಅಕ್ಕಸಾಲಿಗರ ಬೀದಿಗೆ ಹೊರಟ.

ದಾರಿಯಲ್ಲಿ ಅರಮನೆಯಿಂದ ರಾಜನ ಅಕ್ಕಸಾಲಿಯು ತನ್ನ ಪರಿವಾರದೊಂದಿಗೆ ಮನೆಗೆ ಬರುತ್ತಿದ್ದ. ಕೋವಲನ್ ಇವನು ಅಕ್ಕಸಾಲಿ ಎಂದು ಗುರುತಿಸಿದ. ಅವನನ್ನು ಕುರಿತು, “ಅಯ್ಯಾ, ಈ ನೂಪುರ ಬಹು ಬೆಲೆಬಾಳುವಂತಹದು. ಇದರ ಬೆಲೆ ಎಷ್ಟಾಗುವದು? ಇದನ್ನು ಯಾರಾದರೂ ಕೊಳ್ಳುವಿರಾ?” ಎಂದು ಕೇಳಿದ. ಅಕ್ಕಸಾಲಿಯು ಕೈಯಲ್ಲಿ ಆ ನೂಪುರವನ್ನು ತೆಗೆದುಕೊಂಡು ನೋಡಿದ. ಅದರ ಸೊಗಸಿಗೆ, ಅದನ್ನು ಮಾಡಿದವರ ಕೌಶಲಕ್ಕೆ ಬೆರಗಾದ. ಆ ಹೊತ್ತಿಗೆ ಮಧುರೆಯ ರಾಣಿಯ ನೂಪುರ ಕಳ್ಳತನವಾಗಿತ್ತು. ರಾಜ್ಯದಲ್ಲೆಲ್ಲ ಅದಕ್ಕಾಗಿ ಹುಡುಕಾಟ. ನೂಪುರವನ್ನು ಕದ್ದವನು ಅರಮನೆಯ ಅಕ್ಕಸಾಲಿಯೇ. ಆ ನೂಪುರವನ್ನೇ ಹೋಲುವ ರಾಣಿಯ ನೂಪುರದ ನೆನಪಾಯಿತು. ರಾಣಿಯ ನೂರಪುರಕ್ಕೂ, ಕನ್ನಗಿಯ ನೂಪುರಕ್ಕೂ ಹೊರಗಿನ ನೋಟಕ್ಕೆ ಯಾವ ವ್ಯತ್ಯಾಸವೂ ಇರಲಿಲ್ಲ. ಆಗ ಧೂರ್ತ ಅಕ್ಕಸಾಲಿಗೆ ಒಂದು ಯೋಜನೆ ಬಂದಿತು ಈ ನೂಪುರವನ್ನು ರಾಜನಿಗೆ ತೋರಿಸಿ, ಅರಸಿಯ ನೂಪುರವನ್ನು ಕದ್ದ ಕಳ್ಳನು ಸಿಕ್ಕಿದ್ದಾನೆ ಎಂದು ರಾಜನಿಗೆ ಹೇಳಿ, ಇವನನ್ನೇ ಅಪರಾಧೀಯನ್ನಾಗಿ ಮಾಡಿಬಿಟ್ಟರೆ…! ತಾನು ಮಾಡಿದ ಕಳ್ಳತನದಿಂದ ತಪ್ಪಿಸಿಕೊಂಡ ಹಾಗಾಯಿತು, ಅಲ್ಲವೆ? ಹೀಗೆ ಯೋಚಿಸಿದ ಅಕ್ಕಸಾಲಿ ಕೋವಲನನ್ನು ಬಹಳ ಸ್ನೇಹದಿಂದ ಮಾತನಾಡಿಸಿದ. “ಇದು ಬಹಳ ಶ್ರೇಷ್ಠವಾದ ಒಡವೆ, ಇದನ್ನು ಬೆಲೆ ಕೊಟ್ಟು ಕೊಂಡುಕೊಳ್ಳಲು ಈ ಊರಿನಲ್ಲಿ ಬೇರೆ ಯಾರಿಗೂ ಸಾಧ್ಯವಿಲ್ಲ. ರಾಜನೇ ಇದನ್ನು ಕೊಂಡುಕೊಳ್ಳಲು ಸಾಧ್ಯ. ನೀನು ದಣಿದಿದ್ದೀಯೆ. ಈ ಸಮೀಪದ ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿರು. ನಾನು ಅರಮನೆಗೆ ಹೋಗಿ ರಾಜನಿಗೆ ತೋರಿಸಿ ಇದಕ್ಕೆ ಎಷ್ಟು ಬೆಲೆ ಕೊಡುತ್ತಾನೆ ಎಂದು ತಿಳಿದುಕೊಂಡು ಬರುತ್ತೇನೆ” ಎಂದ. ಆ ನೂಪುರವನ್ನು ತೆಗೆದುಕೊಂಡು ಅರಮನೆಗೆ ಹೊರಟ. ವಿಧಿ ಕೋವಲನನ್ನು ಮೂಕನನ್ನಾಗಿ ಮಾಡಿತು. ದೇವಾಲಯದಲ್ಲಿ ಮಂಕು ಬಡಿದವನಂತೆ ಕುಳಿತುಕೊಂಡ.

ಕಳ್ಳನನ್ನು ಕೊಲ್ಲಿ!

ಆ ಧೂರ್ತ ಅಕ್ಕಸಾಲಿಯು ಅರಮನೆಯನ್ನು ಪ್ರವೇಶಿಸಿ. ಆ ಹೊತ್ತಿಗೆ ರಾಜನ ಆಸ್ಥಾನದಲ್ಲಿ ಒಂದು ಬಹು ಸುಂದರವಾದ ನೃತ್ಯ ನಡೆಯುತ್ತಿತ್ತು. ರಾಜನು ಆ ನೃತ್ಯವನ್ನು ಬಹು ಆಸಕ್ತಿಯಿಂದ ನೋಡುತ್ತಿದ್ದಾಗ ಪಟ್ಟದ ರಾಣಿ ಪಾಂಡಿಮಾದೇವಿಗೆ ಸಿಟ್ಟು ಬಂದಿತು. ತಲೆನೋವು ಎಂದು ಹೇಳಿ ಸಭಾಮಂದಿರವನ್ನು ಬಿಟ್ಟು ಹೋದಳು. ರಾಣಿಗೆ ಕೋಪ ಬಂದಿದೆ ಎಂದು ರಾಜನಿಗೆ ಅರ್ಥವಾಯಿತು. ಅವನು ನೃತ್ಯ ಮುಗಿದ ಮೇಲೆ ಅವಳನ್ನು ಸಮಾಧಾನಪಡಿಸಲು ಬೇಗ ಬೇಗನೆ ಹೊರಟ. ಅಕ್ಕಸಾಲಿಯು ಅದೇ ಸಮಯದಲ್ಲಿ ಬಂದು ನಮಸ್ಕಾರ ಮಾಡಿ. “ಮಹಾರಾಜ, ರಾಣಿಯ ನೂಪುರವನ್ನು ಕದ್ದ ಕಳ್ಳನನ್ನು ನೂಪುರದೊಂದಿಗೆ ಹಿಡಿದಿದ್ದೇನೆ” ಎಂದು ಹೇಳಿದ.

ರಾಣಿಗೆ ಕೋಪ ಬಂದಿದೆ ಎಂದು ಮೊದಲೇ ರಾಜನಿಗೆ ಬೇಸರವಾಗಿತ್ತು. ಅದೇ ಸಮಯದಲ್ಲಿ ಅಕ್ಕಸಾಲಿ ಈ ಮಾತನ್ನು ಹೇಳಿದ. ರಾಜನು ಬೇರೆ ಏನನ್ನೂ ಯೋಚನೆ ಮಾಡದೆ “ಅವನ ಕೈಯಲ್ಲಿ ನೂಪುರವಿದ್ದರೆ ಅವನೇ ಕಳ್ಳ ಎಂದಾಯಿತು. ಅವನಿಗೆ ಮರಣದಂಡನೆಯೇ. ಅವನನ್ನು ಕೊಂದು ನೂಪುರವನ್ನು ತಂದುಬಿಡಿ” ಎಂದು ಆಜ್ಞೆ ಮಾಡಿದ.

ಅಕ್ಕಸಾಲಿಯು ರಾಜನ ಸೇವಕರನ್ನು ಕರೆದುಕೊಂಡು ಕೋವಲನ್ ಇರುವ ಸ್ಥಳಕ್ಕೆ ಬಂದ. ಪಾಪ, ಕೋವಲನ್ ಏನೂ ತೋರದೆ, ಏನೂ ತಿಳಿಯದೆ ಕುಳಿತಿದ್ದ. ದೂರದಲ್ಲಿಯೇ, ಅಕ್ಕಸಾಲಿ ನಿಂತುಕೊಂಡು ಆ ಸೇವಕರನ್ನು ಕುರಿತು, “ಅಲ್ಲಿ ಕುಳಿತಿರುವವನೇ ನಮ್ಮ ರಾಣಿಯವರ ನೂಪುರವನ್ನು ಕದ್ದ ಕಳ್ಳ. ರಾಜನ ಆಜ್ಞೆಯನ್ನು ನಡೆಸಿ” ಎಂದು ಹೇಳಿದ.

ರಾಜನ ಆಳುಗಳು ಕೋವಲನನ್ನು ನೋಡಿದರು. ಅವರಲ್ಲಿ ಒಬ್ಬ ಅಕ್ಕಸಾಲಿಯನ್ನು ಕುರಿತು “ಅಯ್ಯಾ, ಇಲ್ಲಿ ಕುಳಿತಿರುವ ಮನುಷ್ಯನನ್ನು ನೋಡಿದರೆ ಇವನು ಕಳ್ಳನಂತೆ ಕಾಣಿಸುವುದಿಲ್ಲ. ಕಳ್ಳತನ ಮಾಡಿದವನ ಮುಖದಲ್ಲಿ ಕಾಣುವ ಭಯ ಇವನ ಮುಖದಲ್ಲಿಲ್ಲ. ಇವನನ್ನು ಕೊಲ್ಲುವುದು ಸರಿಯಲ್ಲ” ಎಂದ.

ಬುದ್ದಿವಂತನಾದ ಅಕ್ಕಸಾಲಿ ಹೇಳಿ: “ಅಯ್ಯೋ ಮೂರ್ಖನೇ, ನಿನಗೆ ಕಳ್ಳರ ವಿಷಯ ಗೊತ್ತಿಲ್ಲ. ಇಂದ್ರನ ಕೊರಳಿನಲ್ಲಿ ಇರುವ ಹಾರವನ್ನು ಅವನಿಗೆ ತಿಳಿಯದಂತೆ ಕದಿಯುವ ಕಳ್ಳರಿದ್ದಾರೆ. ರಾಜಾಜ್ಞೆಯ ಪ್ರಕಾರ ಇವನನ್ನು ಕೊಲ್ಲದಿದ್ದರೆ ಇವನು ನಿನ್ನ ಕಣ್ಣಿಗೆ ಮಣ್ಣೆರಚಿ ಓಡಿಹೋಗುವನು. ಹಾಗೇನಾದರೂ ಸಂಭವಿಸಿದರೆ ಮಹಾರಾಜರ ಕೋಪಾಗ್ನಿಯಲ್ಲಿ ನೀನು, ನಾನು ಇಬ್ಬರೂ ನಾಶವಾಗಬೇಕಾಗುತ್ತದೆ.”

ಅಕ್ಕಸಾಲಿ ಒಬ್ಬ ಆಳಿನೊಂದಿಗೆ ಮಾತನಾಡುತ್ತಿರುವಾಗಲೇ ಇನ್ನೊಬ್ಬ ಸೇವಕನು ಖಡ್ಗವನ್ನು ಒರೆಯಿಂದ ಎಳೆದ, ಕೋವಲನ ಕತ್ತಿನ ಮೇಲೆ ಹೊಡೆದೇ ಬಿಟ್ಟ. ತಲೆಯು ಕತ್ತಿನಿಂದ ಬೇರೆಯಾಯಿತು, ನೆಲಕ್ಕುರುಳಿತು. ರಕ್ತವು ಭೂಮಿಯ ಮೇಲೆ ಚಿಮ್ಮಿತು. ಕೋವಲನ ಪ್ರಾಣ ಹಾರಿಹೋಯಿತು.

ಯಾವ ಅಪರಾಧಕ್ಕಾಗಿ?

ಈ ಹೊತ್ತಿಗೆ, ಕನ್ನಗಿಯ ಜೊತೆಗಿದ್ದ ಮಾದರಿ ಅನೇಕ ಅಪಶಕುನಗಳನ್ನು ಕಂಡಳು. ಅವಳ ಮನಸ್ಸಿಗೆ ಆತಂಕವಾಯಿತು. ಕನ್ನಗಿಯೂ ಗಂಡನ ಬರುವಿಕೆಯ ನಿರೀಕ್ಷೆಯಲ್ಲಿದ್ದಳು. ಸಂಜೆಯಾದರೂ ಅವನು ಬರಲಿಲ್ಲ. ಅವಳ ಮನಸ್ಸಿನಲ್ಲಿಯೂ ಏನೋ ಭಯ, ಆತಂಕ. ಕನ್ನಿಗಯ ಹೃದಯದ ವ್ಯಾಕುಲತೆ ನಿಮಷನಿಮಿಷಕ್ಕೆ ಹೆಚ್ಚಾಗಯಿತು. ಮಾದರಿ ಕನ್ನಗಿಗೆ ಸಮಾಧಾನವನ್ನು ಹೇಳಿದಳು. ಕೇರಿಯ ಹೆಣ್ಣುಮಕ್ಕಳೆಲ್ಲ ಸೇರಿ ಅವರ ಕುಲದೈವವಾದ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿದರು.

ಅಂತೂ ಆ ರಾತ್ರಿ ಕಳೆದು ಬೆಳಗಾಯಿತು.

ಮಾದರಿ ಬೆಳಗಾಗುತ್ತಲೆ ವೈಗೈ ನದಿಯ ಸ್ನಾನಕ್ಕೆ ಹೋದಳು. ಕನ್ನಗಿಯು ಗಂಡನು ಬರಲಿಲ್ಲವೆಂದು ದುಃಖದಿಂದ ಯೋಚನಾಮಗ್ನಳಾಗಿದ್ದಳು. ಬೆಳಗಿನ ಜಾವದಲ್ಲಿ ಮಾದರಿಯ ಕೇರಿಯ ಹೆಣ್ಣುಮಕ್ಕಳು ಅರಮನೆಗೆ ಹಾಲು ಕೊಡಲು ಹೋದಾಗ ಕೋವಲನನ್ನು ಕೊಂದ ಸುದ್ದಿ ಅವರಿಗೆ ತಿಳಿಯಿತು. ಕೂಡಲೇ ಆ ಹೆಣ್ಣುಮಕ್ಕಳು ಮಾದರಿಯ ಮನೆಗೆ ಓಡಿಬಂದರು. ಆದರೆ ಮಾದರಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಪಕ್ಕದ ಮನೆಯ ಹೆಣ್ಣುಮಕ್ಕಳಿಗೆ ಕೋಲವನ ಕೊಲೆಯ ಸುದ್ದಿಯನ್ನು ಹೇಳುತ್ತಿದ್ದರು. ಅವರ ಮಾತನ್ನು ಕೇಳಿದ ಕನ್ನಗಿಗೂ ಈ ಸುದ್ದಿ ತಿಳಿಯಿತು. ಅವಳಿಗೆ ದಿಗ್ಭ್ರಮೆಯಾಯಿತು. ದುಃಖ ತಡೆಯಲಾರದೆ ಕೆಳಕ್ಕೆ ಬಿದ್ದಳು.

”ಕೋವಲನ್ ನೂಪುರವನ್ನು ಕದ್ದ ಕಳ್ಳ ಎಂದು ಅವನನ್ನು ರಾಜನ ಆಳುಗಳು ಕೊಂದರು’

ಈ ಮಾತನ್ನು ಕೇಳಿ ಕನ್ನಗಿಗೆ ತಡೆಯಲಾರದ ದುಃಖದೊಡನೆ ಭುಗಿಲೆನ್ನುವ ಕೋಪವೂ ಉಕ್ಕಿಬಂತು. ತನ್ನ ಗಂಡನು ಸತ್ತದ್ದೂ ಅಲ್ಲದೆ ಈ ಅಪವಾದ ಬೇರೆ! ಅವಳ ರೂಪ ಉಗ್ರವಾಯಿತು. ಬಿಚ್ಚಿದ ಕೂದಲನ್ನು ಬಿಟ್ಟುಕೊಂಡು ಕೈಯಲ್ಲಿ ಉಳಿದ ಒಂದು ನೂಪುರವನ್ನು ಹಿಡಿದು ಬೀದಿಯಲ್ಲಿ ಓಡುತ್ತಾ ಹೊರಟಳು. ರಾಜ ಬೀದಿಯಲ್ಲಿಯ ಜನ ಇವಳನ್ನು ಕಂಡು ಹೆದರಿದರು. ಯಾರಿಗೂ ಅವಳನ್ನು ಮಾತನಾಡಿಸುವ ಧೈರ್ಯವೇ ಇಲ್ಲ. ಜನರು ’ನಮ್ಮ ರಾಜ ತಪ್ಪು ಮಾಡಿದ. ನಮ್ಮ ಸಂಸ್ಕೃತಿಯ ಪತನವಾಯಿತು. ನ್ಯಾಯ-ಅನ್ಯಾಯಗಳ ತೀರ್ಮಾನವಿಲ್ಲದೇ ಅರಸ ದುಡುಕಿದ. ಪಾಂಡ್ಯರಾಜರ ಕೀರ್ತಿ ಮಣ್ಣುಗೂಡಿತು’ ಎಂದು ಮಾತನಾಡಿಕೊಳ್ಳುತ್ತಿದ್ದರು. “ಅಯ್ಯೋ, ಇಲ್ಲಿ ನ್ಯಾಯ ಎಂಬುದೇ ಇಲ್ಲವೇ? ನನ್ನ ಮೊರೆಯನ್ನು ಯಾರೂ ಕೇಳುವುದಿಲ್ಲವೇ?” ಎಂದು ಕೇಳುತ್ತ ಓಡಿದಳು ಕನ್ನಗಿ.

ಓಡಿ ಓಡಿ ಕನ್ನಗಿ ಕೋವಲನನ್ನು ಕೊಂದ ಸ್ಥಳವನ್ನು ಸೇರಿದಳು. ನೆಲದಲ್ಲಿ ಬಿದ್ದಿದ್ದ ಗಂಡನ ದೇಹವನ್ನು ನೋಡಿ ಅವಳಿಗೆ ದುಃಖವನ್ನು ತಡೆಯಲು ಸಾಧ್ಯವಾಗಲಿಲ್ಲ. ದೊಪ್ಪನೆ ಕೋವಲನ ದೇಹದ ಮೇಲೆ ಬಿದ್ದಳು. ಬಿಕ್ಕಿ ಬಿಕ್ಕಿ ಅತ್ತಳು. “ಅಯ್ಯೋ ದೇವರೇ, ಕೋಮಲವಾದ ಶರೀರಕ್ಕೆ ಇಂತಹ ಘೋರ ಶಿಕ್ಷೆಯೇ? ಯಾವ ಅಪರಾಧಕ್ಕಾಗಿ? ನಿರಪರಾಧಿಯನ್ನು ಕೊಲ್ಲುವ ಮನಸ್ಸು ಯಾರಿಗೆ ಬಂದಿತು?” ಎಂದು ಅತ್ತಳು. ರಕ್ತದ ಮಡುವಿನಲ್ಲಿ ಬಿದ್ದ ತಲೆಯನ್ನು ತೆಗೆದುಕೊಂಡು ದೇಹಕ್ಕೆ ಜೋಡಿಸಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು. ಗಂಡನ ಹೆಣವನ್ನು ಕುರಿತುಲ, “ಅಳುತ್ತಿರುವ ನನಗೆ ಸಮಾಧಾನದ ಮಾತನ್ನು ಹೇಳುವುದಿಲ್ಲವೆ ಪ್ರಭು?” ಎಂದು ಬೇಡಿದಳು.

’ನೀನು ಇಲ್ಲಿಯೇ ಇದ್ದು ನಾನು ನಿರಪರಾಧಿ ಎಂಬುದನ್ನು ತೋರಿಸು. ನನ್ನ ಒಳ್ಳೆಯ ಹೆಸರನ್ನು ಉಳಿಸು’ ಎಂದು ಗಂಡ ಹೇಳುತ್ತಿದ್ದಾನೆ ಎನ್ನಿಸಿತು ಕನ್ನಗಿಗೆ.

ತಕ್ಷಣವೇ ಅವಳು ಅಲ್ಲಿಂದ ಎದ್ದು ಗಂಡನ ರಕ್ತವನ್ನು ಹಣೆಗೆ ತಿಲಕವನ್ನಾಗಿಟ್ಟುಕೊಂಡು ಕೈಯಲ್ಲಿ ನೂಪುರವನ್ನು ತೆಗೆದುಕೊಂಡು ಪಾಂಡ್ಯರಾಜ ನಡುಂಚೆಳಿಯನ್ ಅರಮೆನಗೆ ಧಾವಿಸಿ ಹೊರಟಳು.

ರಾಜಾ, ನೀನು ಅಧರ್ಮಿ!

ಕೋವಲನ ಕೊಲೆಯಾದ ರಾತ್ರಿ ಪಾಂಡ್ಯರಾಜನ ರಾಣಿಗೆ ಒಂದು ಭೀಕರ ಕನಸು ಬಿದ್ದಿತು. ಆ ಕನಸನ್ನು ತನ್ನ ಗಂಡನಿಗೆ ಹೀಗೆ ವಿವರಿಸಿದಳು. “ಬಹು ಭಯಂಕರವಾದ ಕನಸನ್ನು ಕಂಡೆ. ನಾಲ್ಕು ದಿಕ್ಕುಗಳು ನಡುಗುತ್ತಿದ್ದವು. ನ್ಯಾಯದ ಗಂಟೆ ಸದಾಕಾಲ ಅದುರುತ್ತಿತ್ತು. ಸೂರ್ಯನನ್ನು ಕರಿಮೋಡಗಳು ಸಂಪೂರ್ಣವಾಗಿ ನುಂಗಿದ್ದವು. ಹಗಲಿನಲ್ಲಿಯೇ ನಕ್ಷತ್ರಗಳೆಲ್ಲಾ ಉದುರಿ ಬೀಳುತ್ತಿದ್ದವು. ರಾಜನ ದಂಡವೂ, ಬಿಳಿಯ ಛತ್ರಿಯೂ ನೆಲದಲ್ಲಿ ಬಿದ್ದುಹೋದವು. ಈ ಘಟನೆಯನ್ನು ಕಂಡು ನನ್ನ ಮನಸ್ಸು ತುಂಬಾ ಕಳವಳಗೊಂಡಿದೆ.” ರಾಜನು ರಾಣಿಯನ್ನು ಸಮಾಧಾನಪಡಿಸಿ ಅಂದಿನ ಸಭೆಯ ಕಾರ್ಯಕಲಾಪಗಳಲ್ಲಿ ಮಗ್ನನಾದ.

ಗಂಡನ ಶವವನ್ನು ಬಿಟ್ಟು ಹೊರಟ ಕನ್ನಗಿ ಅರಮನೆಯ ಬಾಗಿಲಿಗೆ ಧಾವಿಸಿಬಂದಳು. ಅರಮನೆಯ ಬಾಗಿಲಲ್ಲಿ ರಾಜಭಟರು ಕಾವಲಿದ್ದರು. ಅವರು ಕನ್ನಗಿಯನ್ನು ತಡೆದರು. ಅಬಲೆ, ಕೋಮಲೆ ಆದ ಕನ್ನಗಿ ಈಗ ಸಿಟ್ಟಿನಿಂದ ಉರಿಯುತ್ತಿದ್ದಳು. ರಾಜನ ಸೇವಕರಿ ಹೇಳಿದಳು; “ಬುದ್ಧಿಯಿಲ್ಲದ ಅರಸನಿಗೆ ಸೇವಕರಾದವರೇ, ಮೊದಲು ಬಾಗಿಲನ್ನು ತೆಗೆದು ನನ್ನನ್ನು ಒಳಗೆ ಬಿಡಿ, ನಾನು ರಾಜನನ್ನು ಕಾಣಬೇಕು.”

ಆಳುಗಳು ಅವಳನ್ನು ಕಂಡು, ಅವಳ ಮಾತನ್ನು ಕೇಳಿ ಚಕಿತರಾದರು. ಒಬ್ಬನು ತನ್ನ ಮನಸ್ಸಿನಲ್ಲಿ, ’ಇವಳನ್ನು ನೋಡಿದರೆ ನಮ್ಮ ಊರಿನವಳಲ್ಲ; ಎಷ್ಟು ಭಯಂಕರ ಸ್ವರೂಪ ತಾಳಿದ್ದಾಳೆ! ದುರ್ಗೆ, ಕಾಳಿಯರಂತೆ ಕಾಣುತ್ತಾಳೆ! ಏನಾದರೂ ಆಗಲಿ, ಇವಳನ್ನು ಒಳಗೆ ಬಿಡೋಣ’ ಎಂದು ಭಾವಿಸಿದ. ಕನ್ನಗಿಯನ್ನು ಕುರಿತು, “ತಾಯಿ, ಸ್ವಲ್ಪ ನಿಲ್ಲು. ನಾನು ಒಳಗೆ ಹೋಗಿ ರಾಜನಿಗೆ ನಿನ್ನ ಕೋರಿಯನ್ನು ತಿಳಿಸಿಬರುತ್ತೇನೆ” ಎಂದು ಹೇಳಿ ಹೋದ. ರಾಜನಿಗೆ “ಸ್ವಾಮಿ ಒಬ್ಬ ಹೆಣ್ಣುಮಗಳು ತಮ್ಮಲ್ಲಿ ನ್ಯಾಯಕ್ಕಾಗಿ ಬಂದಿದ್ದಾಳೆ. ಅವಳನ್ನು ಒಳಗೆ ಕರೆದುಕೊಂಡು ಬರಲೇ? ಎಂದು ಬಿನ್ನವಿಸಿಕೊಂಡ. ಈ ಮಾತನ್ನು ಕೇಳಿಯೇ ಅಲ್ಲಿ ಕುಳಿತ ರಾನಿಯ ಹೃದಯವನ್ನು ಯಾವುದೋ ಭಯ ಆವರಿಸಿತು.

ಅರಸನು “ಆಕೆಯನ್ನು ಕರೆದುಕೊಂಡು ಬಾ” ಎಂದ.

ಕನ್ನಗಿ ರಾಜಸಭೆಯನ್ನು ಭದ್ರಕಾಳಿಯಂತೆ ಪ್ರವೇಶಿಸಿದಳು. ಭಯಂಕರವಾದ ಕೆಂಪು ಕಣ್ಣುಗಳು, ಬಿಚ್ಚಿದ ತಲೆಗೂದಲು, ಹಣೆಯಲ್ಲಿ ರಕ್ತದ ತಿಲಕ. ಅವಳ ರೂಪವನ್ನು ಕಂಡೇ ರಾಜ ಹಾಗೂ ರಾಣಿ ವ್ಯಾಕುಲಗೊಂಡರು. ಕನ್ನಗಿ ಬಿರುಗಾಳಿಯಂತೆ ಒಳಕ್ಕೆ ನುಗ್ಗಿದಳು. ರಾಜದಂಪತಿಗಳನ್ನು ನೋಡಿ ಒಂದು ಕ್ಷಣ ಹಾಗೆಯೇ ನಿಂತಳು.

ಅರಸನು ಅವಳನ್ನು ಕುರಿತು, “ತಾಯಿ, ನೀನು ಯಾರು? ಇಷ್ಟೊಂದು ಆಕ್ರೋಶವೇಕೆ? ಏನಾಯಿತು?” ಎಂದು ಕೇಳಿದ.

ಕನ್ನಗಿ ಅರಸನಿಗೆ ಹೀಗೆಂದಳು: “ತಿಳಿವಳಿಯಿಲ್ಲದ ರಾಜನೇ, ನಾನು ಯಾರೆಂದು ಕೇಳುವಿಯಾ? ಪಾರಿವಾಳವನ್ನು ಕಾಪಾಡುವುದಕ್ಕೆ ಗಿಡುಗನಿಗೆ ತನ್ನ ತೊಡೆಯ ಮಾಂಸವನ್ನೇ ಕೊಟ್ಟು ಕಾಪಾಡಿಸಿದ ಶಿಬಿ ಚಕ್ರವರ್ತಿಯ ನಾಡಿನವಳು ನಾನು. ಕಾವೇರಿ ಪಟ್ಟಣದ ವರ್ತಕ ಪರಂಪರೆಯಲ್ಲಿ ಶ್ರೇಷ್ಠನಾದ ಕೋವಲನ ಹೆಂಡತಿ ನಾನು. ನಿನ್ನ ರಾಜ್ಯದಲ್ಲಿ ನಿರಪರಾಧೀಯಾದ ನನ್ನ ಗಂಡನ ಕೊಲೆಯಾಯಿತು. ನೀನು ಅನ್ಯಾಯವಾಗಿ ಕೊಂದ ಕೋವಲನ ಹೆಂಡತಿ ಕನ್ನಗಿ ನಾನು.”

ಆಗ ರಾಜನು ಕನ್ನಗಿಯನ್ನು ಕುರಿತು “ತಾಯಿ, ಕಳ್ಳನನ್ನು ಕೊಲ್ಲುವದು ರಾಜಧರ್ಮ, ಅದು ಅನ್ಯಾಯವಲ್ಲವಲ್ಲ? ಇದು ನಮ್ಮ ರಾಜ್ಯದ ನ್ಯಾಯರೀತಿ” ಎಂದ. ಕನ್ನಗಿ “ಅರಸನೇ, ನಿನಗೆ ನ್ಯಾಯ-ಅನ್ಯಾಯಗಳ ಅರ್ಥವೇ ಗೊತ್ತಿಲ್ಲ, ನೀನು ಅಧರ್ಮಿ!” ಎಂದಳು.

ನೂಪುರ ಯಾರದು?

ರಾಜನು ಹೇಳಿ: “ಅಮ್ಮ, ನಿನ್ನ ಗಂಡನು ರಾಣಿಯ ನೂಪುರವನ್ನು ಕದ್ದ. ನೂಪುರ ಅವನ ಕೈಯಲ್ಲಿಯೇ ಇದ್ದಿತು. ಅದರಿಂದಲೇ ತಿಳಿಯುವುದಿಲ್ಲವೆ ಅವನೇ ಕಳ್ಳ ಎಂದು? ಅವನಿಗೆ ಶಿಕ್ಷೆಯಾಯಿತು. ತಪ್ಪೇನು?”

“ರಾಜ, ಅದು ನಿನ್ನ ಹೆಂಡತಿಯ ನೂಪುರವಲ್ಲ, ನನ್ನ ನೂಪುರ.”

“ಅಮ್ಮ, ರಾಣಿಯ ನೂಪುರದಲ್ಲಿ ಒಳಗಡೆ ಮುತ್ತುಗಳಿವೆ.”

“ರಾಜ, ನನ್ನ ನೂಪುರದಲ್ಲಿ ಒಳಗಡೆ ನವಮಾಣಿಕ್ಯಗಳಿವೆ”

ಕನ್ನಗಿಯ ಮಾತುಗಳನ್ನು ಕೇಳಿ ರಾಜನಿಗೆ ಕಳವಳ ವಾಯಿತು.

“ಹಾಗಾದರೆ ನೂಪುರಗಳ ಪರೀಕ್ಷೆಯಾಗಲಿ” ಎಂದ ರಾಜ.

ಕೋವಲನ ಕೈಯಲ್ಲಿದ್ದ ನೂಪುರ ಅಕ್ಕಸಾಲಿಯ ಹತ್ತಿರವಿತ್ತು, ಅಲ್ಲವೆ? ರಾಜನು ಅದನ್ನು ತರಿಸಿಕೊಟ್ಟ. ಕನ್ನಗಿ ಆ ನೂಪುರವನ್ನು ತೆಗೆದುಕೊಂಡು ಸಿಂಹಾಸದನ ಮೆಟ್ಟಿಲುಗಳ ಮೇಲೆ ಹೊಡೆದಳು.

ನೂಪುರದೊಳಗಿನಿಂದ ನವಮಾಣಿಕ್ಯಗಳು ಸಿಡಿದವು. ಒಂದು ಮಾಣಿಕ್ಯ ರಾಜನ ತುಟಿಗೇ ಬಿಡಿಯಿತು.

ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ದಿಗ್ಭ್ರಮೆಯಾಯಿತು. ಕರುಳನ್ನು ಕತ್ತರಿಸಿದಂತಾಯಿತು. “ಅಯ್ಯೋ, ಒಬ್ಬ ಅಕ್ಕಸಾಲಿಯ ಮಾತುಗಳನ್ನು ಕೇಳಿ, ಧರ್ಮ ವಿರುದ್ಧವಾಗಿ ನಡೆದ ನಾನು ಈ ನಾಡಿನ ರಾಜನಾಗಿರಲು ಯೋಗ್ವನೇ? ನನ್ನ ಬಾಳು ಇಲ್ಲಿಗೆ ಮುಗಿಯಲಿ” ಎಂದು ದುಃಖಪಟ್ಟ ದುಃಖವನ್ನು ತಡೆಯಲಾರದೆ ಆತನ ಪ್ರಾಣಪಕ್ಷಿ ಹಾರಿಹೋಯಿತು. ಅವನ ರಾಣಿ ದುಃಖದ ಭಾರವನ್ನು ಸಹಿಸಲಾರದೆ ತನ್ನ ಗಂಡನ ಪಾದಗಳಲ್ಲಿ ಬಿದ್ದು ಪ್ರಾಣ ಬಿಟ್ಟಳು.

ಕನ್ನಗಿ ಆ ಘೋರ ದೃಶ್ಯವನ್ನು ನೋಡಲಾರದೆ ಆಸ್ಥಾನದಿಂದ ಹೊರಗೆ ಬಂದಳು. ಅವಳ ಕೋಪ ಇನ್ನೂ ಆರಿರಲಿಲ್ಲ. “ಈ ನಗರವು ಬೆಂದುಹೋಗಲಿ!” ಎಂದು ಶಾಪಕೊಟ್ಟಳು. ಸತ್ಯವಾಗಿ, ಕೆಟ್ಟ ಯೋಚನೆಯನ್ನೇ ಮಾಡದೆ ಬದುಕಿದ ಕನ್ನಗಿಯ ಶಾಪ ಕೂಡಲೇ ಫಲಿಸಿತು. ಅಗ್ನಿಯ ಜ್ವಾಲೆಗಳು ಎಲ್ಲ ಕಡೆಗೂ ವ್ಯಾಪಿಸಿದವು. ಸಕಲ ಸೌಭಾಗ್ಯದಿಂದ ಕೂಡಿದ ನಗರ ಬೆಂಕಿಯಲ್ಲಿ ನಾಶವಾಗುತ್ತಿತ್ತು.

ಹೀಗೇಕಾಯಿತು?

ಆ ಸಮದಯಲ್ಲಿ ನಗರದೇವತೆ ಮಧುರಾದೇವಿ ಕನ್ನಗಿಗೆ ಪ್ರತ್ಯಕ್ಷಳಾದಳು. “ಅಮ್ಮಾ ನಿನ್ನ ದುಃಖದ ಆಳವನ್ನು ನಾನು ಅರಿತಿದ್ದೇನೆ. ನನ್ನ ಮಾತನ್ನು ಕೇಳು. ಪಾಂಡ್ಯ ಅರಸರುನೀತಿವಂತರು. ಅರಸನು ಮಾಡಿದ ಅನ್ಯಾಯಕ್ಕೆ ಕಾರಣವಿಲ್ಲದೆ ಇಲ್ಲ. ನಿನ್ನ ಪೂರ್ವಜನ್ಮದ ಕರ್ಮಫಲಗಳಿಂದ ಈ ರೀತಿ ಕಷ್ಟವನ್ನು ಅನುಭವಿಸುವಂತಾಯಿತು” ಎಂದು ಹೇಳಿ, ಕನ್ನಗಿಯ ಹಿಂದಿನ ಜನ್ಮದ ಕಥೆಯನ್ನು ಹೇಳಿದಳು. ’ಸಿಂಗಪುರ ದೇಶದಲ್ಲಿ ವಸುಂಬ ರಾಜ ಆಳುತ್ತಿದ್ದ. ಒಂದು ದಿವಸ ಸಿಂಗಪುರದ ಬೀದಿಯಲ್ಲಿ ಸಂಗಮ ಎಂಬುವನು ವ್ಯಾಪಾರಕ್ಕೆ ಬಂದಿದ್ದ. ಆಗ ಭರತ ಎಂಬ ರಾಜನ ಕಾವಲುಗಾರ ಸಂಗಮನನ್ನು ನೋಡಿ ಇವನು ಶತ್ರು ದೇಶದ ಗೂಢಾಚರ ಎಂದು ರಾಜನ ಹತ್ತಿರ ಕರೆದುಕೊಂಡು ಹೋದ. ನಿರಪರಾಧೀಯಾದ ಅವನಿಗೆ ರಾಜನು ಮರಣದಂಡನೆಯನ್ನು ವಿಧಿಸಿದ. ಆಗ ಸಂಗಮನ ಹೆಂಡತಿ ನೀಲಿ ಎಂಬುವಳು ತನ್ನ ದುಃಖವನ್ನು ತಡೆಯಲಾರದೆ ಊರನ್ನೇ ಬಿಟ್ಟು ಹೋದಳು. ಹತ್ತಿರದ ಒಂದು ಬೆಟ್ಟದ ಮೇಲೆ ಹದಿನಾಲ್ಕು ದಿನಗಳ ಕಾಲ ದುಃಖಪಟ್ಟಳು. ಅನಂತರ ಅವಳು ’ನನ್ನ ದುಃಖ್ಕೆ ಕಾರಣರಾದವರು ನನ್ನ ಹಾಗೆಯೇ ದುಃಖವನ್ನು ಅನುಭವಿಸುವಂತಾಲಿ’ ಎಂದು ಶಾಪ ಕೊಟ್ಟುಬೆಟ್ಟದಿಂದ ಬಿದ್ದು ಸತ್ತಳು. ಅದೇ ಭರತ ಈಗ ಕೋವಲನ್ ಆಗಿ ನಿನಗೆ ಪತಿಯಾಗಿದ್ದ. ನೀನೂ ಸಹಿತ ನಿನ್ನ ಪತಿಯನ್ನು ಹದಿನಾಲ್ಕನೆಯ ದಿವಸ ಸೇರುವೆ.” ಹೀಗೆ ಮಧುರಾ ದೇವಿ ಕನ್ನಗಿಗೆ ಸಮಾಧಾನ ಮಾಡಿ ಮರೆಯಾದಳು. ನಗರವನ್ನು ಸುಡುತ್ತಿದ್ದ ಬೆಂಕಿಯನ್ನು ಶಾಂತಮಾಡಿದಳು.

ಈ ನಗರವು ಬೆಂದು ಹೋಹಲಿ’

ಮತ್ತೆ ಕನ್ನಗಿ-ಕೋವಲನ್

ಕನ್ನಗಿ ಆ ಊರನ್ನು ತೊರೆದು ಹಗಲೂ ರಾತ್ರಿ ನಡೆಯುತ್ತ ಚೇರನಾಡಿನ ರಾಜಧಾನಿಯಾದ ವಂಜಿ ನಗರಕ್ಕೆ ಬಂದಳು. ನಗರದ ಒಂದು ದೊಡ್ಡ ಬೆಟ್ಟವನ್ನು ಹತ್ತಿ ಒಂದು ಮರದ ಕೆಳಗೆ ತನ್ನ ಗಂಡನ ದಾರಿಯನ್ನು ನೋಡುತ್ತ ನಿಂತಳು. ಹದಿನಾಲ್ಕು ದಿನಗಳು ಕಳೆದವು.ದೇವತೆಗಳು ಕೋವಲನನ್ನು ಕರೆತಂದರು. ದೇವರಥದಲ್ಲಿ ಕುಳಿತು ತನ್ನಪತಿಯೊಡನೆ ಕನ್ನಗಿ ಸ್ವರ್ಗಕ್ಕೆ ಹೋದಳು.

ಕನ್ನಗಿ, ಕೋವಲನ್ರ ಮರಣದ ಸುದ್ದಿ ಕೇಳಿದ ಅವರತಂದೆತಾಯಿಗಳು ಬಹು ವ್ಯಥೆಪಟ್ಟರು. ಕೋವಲನ ತಾಯಿ, ಕನ್ನಗಿಯ ತಾಯಿ ಅಗ್ನಿಪ್ರವೇಶ ಮಾಡಿದರು. ಕೋವಲನ ತಂದೆ, ಕನ್ನಗಿಯ ತಂದೆ ಐಶ್ವರ್ಯವನ್ನು ದಾನ ಮಾಡಿ ಸಂನ್ಯಾಸಿಗಳಾದರು. ಮಾಧವಿ ತನ್ನ ಸಕಲ ಐಶ್ವರ್ಯವನ್ನೂ ದಾನಮಾಡಿ ಸಂನ್ಯಾಸಿನಿಯಾದಳು. ಮಣಿಮೇಖಲೆಯನ್ನು ಗುರುಗಳಾದ ಅರವಣ ಅಡಿಗಳ ಹತ್ತಿರ ಧರ್ಮ ಉಪದೇಶಕ್ಕಾಗಿ ನಿಲ್ಲಿಸಿದಳು. ಮಾದರಿಗೆ ’ಆ ದಂಪತಿಗಳನ್ನು ಕಾಪಾಡಲು ನನ್ನಿಂದ ಆಗಲಿಲ್ಲವಲ್ಲ! ಎಂದು ಬಹಳ ದುಃಖವಾಯಿತು. ಬೆಂಕಿಯಲ್ಲಿ ಬಿದ್ದು ಪ್ರಾಣತ್ಯಾಗ ಮಾಡಿದಳು. ಕವುಂದಿ ಅಡಿಗಳ್ ’ಇಂತಹ ಪುಣ್ಯಜೀವಿಗಳಿಗೆ ಹೀಗಾಯಿತಲ್ಲಾ!’ ಎಂದು ವಿಷಾದಪಟ್ಟು, ಸಲ್ಲೇಖನ ಎಂಬ ವ್ರತವನ್ನು ತೆಗೆದುಕೊಂಡು ಪ್ರಪಂಚವನ್ನು ಬಿಟ್ಟರು.

ಈ ಎಲ್ಲ ಸಂಗತಿ ಚೇರರಾಜ ಶೆಂಗುತ್ತುವನ್ ಎಂಬಾತನಿಗೆ ತಿಳಿಯಿತು. ಮಧುರೆಯ ಆಸ್ಥಾನದಿಂದ ಬಂದ ಆಸ್ಥಾನಕವಿ ಶಾತ್ತನ್ನಾರ್, ಅರಸನ ತಮ್ಮ ಇಳಂಗೋ ಅಡಿಗಳ್, ಹಾಗೂ ಚೇರಮಾದೇವಿ ಈ ಘಟನೆಯ ವಿವರವನ್ನು ಕೇಳಿದರು. ಆಗ ಶಾತ್ತನ್ನಾರ್ ’ಅವಳ ಕಥೆ ನನಗೆ ಗೊತ್ತಿದೆ’ ಎಂದು ಕನ್ನಗಿಯ ಕಥೆಯನ್ನು ಹೇಳಿದರು.

ಕನ್ನಗಿಯ ಕಥೆಯನ್ನು ಕೇಳಿ ಚೇರಮಾದೇವಿಗೆ ಮನಸ್ಸು ಕರಗಿತು. ಅಲ್ಲದೆ ಅವಳ ಸತ್ಯದ ಶಕ್ತಿಯನ್ನು ಕೇಳಿ ಅವಳು ಬೆರಗಾದಳು. ಆ ವೀರಮಾತೆಗಾಗಿ ಒಂದು ಸ್ಮಾರಕವನ್ನು ಸ್ಥಾಪಿಸಬೇಕು ಎಂದು ಅವಳು ತೆಂಗುತ್ತವನನನ್ನು ಪ್ರಾರ್ಥಿಸಿದಳು. ರಾಜ ಒಪ್ಪಿದ. ಹಿಮಾಲಯದಿಂದ ಅಮೃತಶಿಲೆಯ ಕಲ್ಲುಗಳನ್ನು ತಂದು ಕನ್ನಗಿಯ ಶಿಲಾಮೂರ್ತಿಯನ್ನು ರಚಿಸಿ ವಂಜಿ ನಗರದಲ್ಲಿ ಸ್ಥಾಪಿಸಿದರು. ಈ ಸಮಾರಂಭಕ್ಕೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಅರಸರು ಬಂದಿದ್ದರು.

ಲಂಕೆಯಿಂದ ಗಜಬಾಹು ಎಂಬ ರಾಜನು ಬಂದಿದ್ದನು. ಇಂದಿಗೂ ವಂಜಿ ನಗರದ ಮಕ್ಕಳಾದ ಮಲಯಾಳಿಗಳು ಭಗವತೀ ಎಂಬ ಹೆಸರಿನಲ್ಲಿ ಕನ್ನಗಿಯನ್ನು ಪೂಜಿಸುತ್ತಾರೆ.

ಶಿಲಪ್ಪದಿಗಾರಂ

ಕನ್ನಗಿಯ ಕಥೆಯನ್ನು ಇಳಂಗೋ ಅಡಿಗಳ್ ’ಶಿಲಪ್ಪದಿಗಾರಂ’ ಎಂಬ ಸುಂದರ ಕಾವ್ಯದಲ್ಲಿ ಹೇಳಿದ್ದಾರೆ. (’ಇಳಂಗೋ ಅಡಿಗಳ್’ ಎಂದರೆ ಎಳೆಯ ರಾಜ, ರಾಜ ಕುಮಾರ ಎಂದು ಅರ್ಥ ಕಾಣುತ್ತದೆ) ಶುಲಂಬು ಎಂದರೆ ನೂಪುರ, ಅದರ ಮಹತ್ವ (ಅಧಿಕಾರ)ವನ್ನು ವರ್ಣಿಸುವ ಕಾವ್ಯ ’ಶಿಲಪ್ಪದಿಗಾರಂ’ (ರಚನೆ ಕ್ರಿ.ಶ. ೯ನೇ ಶತಮಾನ). ಈ ಕಾವ್ಯ ತಮಿಳು ಭಾಷೆಯಲ್ಲಿದೆ. ಈಗ ದೊರೆತಿರುವ ತಮಿಳು ಕಾವ್ಯಗಳಲ್ಲಿ ಇದೇ ಬಹು ಹಿಂದಿನದು.

ಈ ಕಾವ್ಯನ್ಯಾಯದ ಮಹತ್ವವನ್ನು ತೋರಿಸಿ ಕೊಡುತ್ತದೆ. ಮಾಡಿದ ತಪ್ಪಿಗೆ ಶಿಕ್ಷೆ ಉಂಟೇ ಉಂಟು. ಒಬ್ಬ ಮನುಷ್ಯ ಅನ್ಯಾಯ ಮಾಡಿದರೆ ಅವನು ಶಿಕ್ಷೆಯನ್ನೂ ಕಷ್ಟವನ್ನೂ ಇಂದಲ್ಲ ನಾಳೆ ಅನುಭವಿಸಲೇಬೇಕಾಗುತ್ತದೆ. ತಪ್ಪು ಮಾಡಿದ ಕೂಡಲೇ ಶಿಕ್ಷೆ ಆಗದಿರಬಹುದು. ಆದರೆ ತಡವಾಗಿಯಾದರೂ ಶಿಕ್ಷೆ ಆಗದೆ ಇರುವುದಿಲ್ಲ. ದೊಡ್ಡ ಸ್ಥಾನದಲ್ಲಿರುವವರಂತೂ ಬಹು ಎಚ್ಚರಿಕೆಯಿಂದ ನಡೆಯಬೇಕು. ಅವರು ತಪ್ಪು ಮಾಡಿದರೆ, ಅವರೂ ಶಿಕ್ಷೆಯನ್ನು ಅನುಭವಿಸಬೇಕು, ಅಲ್ಲದೆ ಇತರರಿಗೂ ಅವರಿಂದ ಕಷ್ಟ, ದುಃಖ. ಪಾಂಡ್ಯರಾಜ ಆತುರದಿಂದ ಅನ್ಯಾಯ ಮಾಡಿದುದಕ್ಕೆ ಇಡೀ ಮಧುರಾ ನಗರವೇ ಸುಟ್ಟುಹೋಯಿತು. ಸಾಮಾನ್ಯ ಮನುಷ್ಯನಾಗಲಿ, ದೊಡ್ಡ ಅಧಿಕಾರದಲ್ಲಿರುವವರಾಗಲಿ ನ್ಯಾಯವನ್ನು ಪರಿಪಾಲಿಸಬೇಕು. ಇಲ್ಲವಾದರೆ ದುಃಖ ಕಟ್ಟಿಟ್ಟದ್ದೇ.