‘ಕೇಳಿದಿರಾ? ನಾ. ಕಸ್ತೂರಿಯವರು ನಮ್ಮ ಕಾಲೇಜಿಗೆ ಸೂಪರಿಂಟೆಂಡೆಂಟರಾಗಿ ಬರ‍್ತಾರಂತೆ’ ಅಂದರು ನನ್ನ ಸಹೋದ್ಯೋಗಿ ಚಂದ್ರಶೇಖರಯ್ಯನವರು. ಹೌದಾ, ತುಂಬ ಒಳ್ಳೆಯ ಸುದ್ದಿ’ ಎಂದೆ ನಾನು.

ಅದು ಐವತ್ತರ ದಶಕದ ಕಾಲ. ಆಗ ತಾನೇ ನಾನು ನನ್ನ ಬಿ.ಎ. ಅನರ‍್ಸ್ ಮುಗಿಸಿ ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಲೆಕ್ಟರರ್‌ಆಗಿ ನೇಮಕಗೊಂಡು ಐದಾರು ತಿಂಗಳಾಗಿತ್ತು. ನಾನು ಕೆಲಸಕ್ಕೆ ಸೇರಿದಾಗ ಕಾಲೇಜಿನ ಸೂಪರಿಂಟೆಂಡೆಂಟರು (ಆಗಿನ್ನೂ ಪ್ರಿನ್ಸಿಪಾಲ್ ಎಂಬ ಹೆಸರು ಇಂಟರ್‌ಮೀಡಿಯೇಟ್ ಕಾಲೇಜಿನ ಆಡಳಿತದ ಮುಖ್ಯಸ್ಥರನ್ನು ಕುರಿತು ಬಳಕೆಯಾಗುತ್ತಿರಲಿಲ್ಲ.) ಪ್ರೊ.ತ್ಯಾಗರಾಜನ್. ಇಂಗ್ಲೀಷಿನಲ್ಲಿ ಘನ ವಿದ್ವಾಂಸರು. ಅತ್ಯಂತ ಮೋಹಕವಾದ ವಾಗ್ಮಿ. ಅವರಿಗೂ ನನ್ನ ಬಗ್ಗೆ ಒಳ್ಳೆಯ ವಿಶ್ವಾಸ ಬೆಳೆದಿತ್ತು. ಅವರ ಬಗ್ಗೆ ನನಗೂ ಗೌರವಪೂರ್ವಕವಾದ ಅಭಿಮಾನ. ಈ ತ್ಯಾಗರಾಜನ್ ಅವರಿಗೆ ಬೆಂಗಳೂರಿಗೆ ವರ್ಗವಾಗಿ, ಅವರ ಸ್ಥಾನದಲ್ಲಿ ನಾ. ಕಸ್ತೂರಿಯವರು ಬರುತ್ತಾರೆ ಎಂಬ ಸುದ್ದಿ ನನಗೆ ತುಂಬ ಕುತೂಹಲವನ್ನು ಹುಟ್ಟಿಸುವಂಥದಾಗಿತ್ತು. ಯಾಕೆಂದರೆ ಕಸ್ತೂರಿಯವರು ತುಂಬ ಪ್ರಸಿದ್ಧರಾದ ಹಾಸ್ಯ ಸಾಹಿತಿ ಎಂದು ಹೆಸರಾಗಿದ್ದರು. ಅವರ ‘ಶಂಖವಾದ್ಯ’ ‘ಅನರ್ಥಕೋಶ’ ಎಂಬ ಪುಸ್ತಕಗಳನ್ನೂ, ‘ಕೊರವಂಜಿ’ ಪತ್ರಿಕೆಯಲ್ಲಿ ಬರುತ್ತಿದ್ದ ಅವರ ನಗೆಬರಹಗಳನ್ನೂ ಓದಿ ಖುಷಿಪಟ್ಟು ಆಕರ್ಷಿತನಾಗಿದ್ದೆ. ಆದರೆ ಅವರನ್ನು ಎಂದೂ ಮುಖತಃ ನೋಡುವ ಅವಕಾಶವೇ ನನಗಿರಲಿಲ್ಲ. ನಾನು ಮಹಾರಾಜಾ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಅವರು ಬಹುಶಃ ಬೆಂಗಳೂರಿನಲ್ಲಿ ಇದ್ದರೆಂದು ಕಾಣುತ್ತದೆ. ಅವರು ನನ್ನ ಗುರುಗಳಾದ ಶ್ರೀ ಕುವೆಂಪು ಅವರಿಗೆ ಪರಮಾಪ್ತರೆಂದೂ ಕೇಳಿದ್ದೆ. ಇಂಥ ಸಾಹಿತಿಯೊಬ್ಬರು ನಾನು ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಕಾಲೇಜಿಗೆ ಸೂಪರಿಂಟೆಂಡೆಂಟರಾಗಿ ಬರುತ್ತಾರೆಂಬ ಸುದ್ದಿ ಸಹಜವಾಗಿಯೆ ನನ್ನ ಪಾಲಿಗೆ ಸಂತೋಷದಾಯಕವಾಗಿತ್ತು.

ಕೆಲವೇ ದಿನಗಳಲ್ಲಿ ಕಸ್ತೂರಿಯವರು ಬಂದು ಛಾರ್ಜು ವಹಿಸಿಕೊಂಡರು. ಅವರು ಮೊದಲ ನೋಟಕ್ಕೆ ಅಂತಹ ಆಕರ್ಷಕ ವ್ಯಕ್ತಿಯಂತೇನೂ ತೋರಲಿಲ್ಲ. ಕುವೆಂಪು, ತೀಂನಶ್ರೀ, ಡಿ.ಎಲ್.ನರಸಿಂಹಾಚಾರ್, ಶಿವರಾಮಕಾರಂತ, ಅನಕೃ ಇಂತಹ ಪ್ರಭಾವಶಾಲಿ ವ್ಯಕ್ತಿತ್ವದ ಸಾಹಿತಿಗಳನ್ನು ನೋಡಿದ್ದ ನನಗೆ, ಮಧ್ಯಮಗಾತ್ರದ, ಕಂದುಬಣ್ಣದ, ಮೊಂಡು ಮೂಗಿನ, ಕೀಚು ದನಿಯ, ಬೋಳು ತಲೆಯ, ಜುಬ್ಬಾ ಕಚ್ಚೆ ಪಂಚೆಯ ನಾ. ಕಸ್ತೂರಿಯವರನ್ನು ಕಂಡು ಒಂದು ರೀತಿಯಲ್ಲಿ ಇವರೆಂಥಾ ಸಾಹಿತಿಗಳಪ್ಪಾ-ಅನ್ನಿಸಿತು. ಆದರೆ ಕ್ರಮೇಣ ಅವರ ಜತೆಯ ಒಡನಾಟ ಬೆಳೆದಂತೆ, ಅವರ ಆತ್ಮೀಯವಾದ ನಡವಳಿಕೆ, ಅವರ ಮಾತುಗಳಲ್ಲಿ ತಾನೇ ತಾನಾಗಿ ಸಹಜವಾಗಿ ಪುಟಿಯುವ ವಿನೋದ, ಯಾವುದೇ ತೋರಿಕೆಯಿಲ್ಲದ, ಎಲ್ಲರೂ ತನ್ನವರೆಂಬ ಪ್ರೀತಿಯಿಂದ ನಡೆಯಿಸಿಕೊಳ್ಳುವ ಸೌಜನ್ಯ, ಮಾತಿಗೆ ನಿಂತರೆ ನಗೆಯ ಹೊನಲನ್ನೆ ಹರಿಸುವ ವಾಗ್‌ವಿಲಾಸ -ಇತ್ಯಾದಿಗಳಿಂದ ಕಸ್ತೂರಿಯವರು ಕಾಲೇಜಿನ ಎಲ್ಲ ಅಧ್ಯಾಪಕರನ್ನೂ, ವಿದ್ಯಾರ್ಥಿಗಳನ್ನೂ, ದಾವಣಗೆರೆಯ ಜನಮನವನ್ನೂ ಗೆದ್ದುಕೊಂಡುಬಿಟ್ಟರು. ನನ್ನನ್ನಂತೂ, ಶ್ರೀ ಕುವೆಂಪು ಅವರ ಶಿಷ್ಯನೆಂಬ ಕಾರಣಕ್ಕೆ ಮತ್ತು ನಾನೂ ಪದ್ಯ ಬರೆಯುತ್ತೇನೆ ಎಂಬ ಕಾರಣಕ್ಕೆ (ನನ್ನ ಮೊದಲ ಕವನ ಸಂಗ್ರಹ ಇನ್ನೂ ಪ್ರಕಟವಾಗುವುದರಲ್ಲಿತ್ತು), ತುಂಬ ಅಕ್ಕರೆಯಿಂದ ನೋಡಿಕೊಳ್ಳುತ್ತ ಏಕವಚನ ಸಂಬೋಧನೆಯ ಆತ್ಮೀಯತೆಯ ವಲಯದೊಳಗೆ ಸೇರಿಸಿಕೊಂಡು ಬಿಟ್ಟಿದ್ದರು.

ನಾನಾಗ ಕಾಲೇಜಿನಲ್ಲಿ ಒಳ್ಳೆಯ ಅಧ್ಯಾಪಕನೆಂದು-ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಹೆಸರು ಮಾಡಿದ್ದರೂ, ಕಾಲೇಜಿನಿಂದಾಚೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ, ಏನು ಮಾತನಾಡಬೇಕೆಂಬುದು ತೋರದೆ ಎಷ್ಟೋ ವೇಳೆ ನಡುಗಿ, ಬಾಯಿ ತೊದಲಿ, ಕನಿಕರಕ್ಕೆ ಈಡಾಗುವ ಭಯ ನನ್ನನ್ನು ಆವರಿಸಿಕೊಂಡುಬಿಡುತ್ತಿತ್ತು. ಸದ್ಯ ಯಾರಾದರೂ ಕರೆಯದಿದ್ದರೆ ಸಾಕು ಅಂದುಕೊಳ್ಳುತ್ತಿದ್ದೆ. ಇಂಥ ಸಂದರ್ಭದಲ್ಲಿ ಕಸ್ತೂರಿಯವರು ಒಂದು ಯೋಜನೆ ಹಾಕಿದರು: ಕಾಲೇಜಿನ ವಿವಿಧ ವಿಷಯಗಳ ಅಧ್ಯಾಪಕರು, ಶನಿವಾರ ಭಾನುವಾರಗಳಲ್ಲಿ ದಾವಣಗೆರೆಯ ಸುತ್ತಣ ಹಳ್ಳಿಗಳಿಗೆ ಹೋಗಿ, ಅಲ್ಲಿ ಪಂಚಾಯಿತಿ ಹಾಲ್‌ನಲ್ಲೋ ಸ್ಕೂಲಿನಲ್ಲೋ, ಚಾವಡಿಗಳಲ್ಲೋ, ಕೊನೆಗೆ ಮರದ ಕೆಳಗಾದರೂ ಸರಿ, ಆ ಊರಿನ ಸಭೆಯ ಮುಂದೆ ಉಪಯುಕ್ತವಾಗುವಂಥ ಏನಾದರೊಂದು ವಿಷಯವನ್ನು ಕುರಿತು ಮಾತನಾಡಬೇಕು. ‘ಏನ್ರಯ್ಯಾ, ನೀವೆಲ್ಲ ದೊಡ್ಡ ದೊಡ್ಡ ಪಂಡಿತರು, ಆ ಪಾಂಡಿತ್ಯ ನಿಮ್ಮಲ್ಲೆ, ನಿಮ್ಮ ವಿದ್ಯಾರ್ಥಿಗಳಿಗಾಗಿ ಮಾತ್ರ ಇರಬೇಕೆ? ಈ ಹಳ್ಳಿ ಜನ ಕಾಲೇಜಿಗೆ ಬರೋದಕ್ಕೆ ಸಾಧ್ಯವೇ? ನೀವು ಕಲಿತಿದ್ದನ್ನು, ತಿಳಿದುಕೊಳ್ಳಲು ಅವರಿಗೂ ಹಕ್ಕಿಲ್ಲವೆ. ಕಾಲೇಜುಗಳಿಗೆ ಬರಲಾರದ ಜನರ ಬಳಿಗೆ ಕಾಲೇಜೇ ಹೋಗಬೇಕು. ಆಗ ಮಾತ್ರ ನೀವು ಕಲಿತದ್ದಕ್ಕೆ ಸಾರ್ಥಕ’ ಎಂದು ನಮ್ಮನ್ನೆಲ್ಲ ತರಾಟೆಗೆ ತೆಗೆದುಕೊಂಡರು. ಸರಿ, ಈ ಯೋಜನೆಗೆ ಅವರೇ ನೇತಾರರು. ಅವರೇ ಅಧ್ಯಕ್ಷರು. ಇಡೀ ವರ್ಷ ಯಾವ ಯಾವ ಶನಿವಾರ, ಭಾನುವಾರ, ಯಾರು ಯಾರು ಯಾವ ಯಾವ ಹಳ್ಳಿಯಲ್ಲಿ ಹೋಗಿ ಭಾಷಣ ಮಾಡಬೇಕು ಎಂಬ ವೇಳಾಪಟ್ಟಿಯನ್ನು ತಯಾರಿಸಿದರು. ಒಂದು ದಿನ ಆ ಊರ ಜನಕ್ಕೆ ಗ್ರಾಮ ನೈರ್ಮಲ್ಯ ಕುರಿತು ಉಪನ್ಯಾಸ; ಇನ್ನೊಂದು ದಿನ ವಿವೇಕಾನಂದರನ್ನು ಕುರಿತು ಉಪನ್ಯಾಸ. ಒಂದು ದಿನ ಹಳ್ಳಿಗಳ ಆರ್ಥಿಕ ಸುಧಾರಣೆ ಕುರಿತು ಉಪನ್ಯಾಸವಾದರೆ ಮತ್ತೊಂದು ದಿನ ಕುಮಾರವ್ಯಾಸನನ್ನೊ, ಜನಪದ ಸಾಹಿತ್ಯವನ್ನೋ ಕುರಿತು ಉಪನ್ಯಾಸ. ಈ ನೆಪದಲ್ಲಿ ನನ್ನ ಕಾಲಿನ ನಡುಕ ಕಡಿಮೆಯಾಯಿತು. ಮಾತನಾಡುವ ಧೈರ್ಯ ಬಂದಿತು. ಅಂತೂ ನನ್ನನ್ನೂ ನನ್ನಂಥವರನ್ನೂ ಈ ಯೋಜನೆಯ ಗರುಡಿಯಲ್ಲಿ ಪಳಗಿಸಿದರು. ಅಷ್ಟೇ ಅಲ್ಲ, ಹಳ್ಳಿ ಹಳ್ಳಿಗಳಲ್ಲಿ ಈ ಬಗೆಯ ಕಾರ‍್ಯಕ್ರಮಗಳು ಏರ್ಪಾಡಾದಾಗ, ನೆರೆದ ಹಳ್ಳಿಯ ಜನರೆದುರು, ನಿಮ್ಮಲ್ಲಿ ಯಾರಾದರೂ ಹಾಡು ಹೇಳುವವರಿದ್ದೀರಾ ಬನ್ನಿ; ಏಕಪಾತ್ರಾಭಿನಯದವರಿದ್ದೀರಾ ಬನ್ನಿ, ಮಿಮಿಕ್ರಿ ಮಾಡುವರಿದ್ದೀರಾ ಬನ್ನಿ, ಭಾಷಣ ಮಾಡುವವರಿದ್ದೀರಾ ಬನ್ನಿ’ ಎಂದು ಅವರನ್ನೂ, ಈ ಕಾರ್ಯಕ್ರಮಗಳ ಜತೆಗೆ ಸಕ್ರಿಯವಾಗಿ ಕೂಡಿಸಿಕೊಳ್ಳುತ್ತಿದ್ದರು. ಸಭೆಯ ಕಾರ‍್ಯಕ್ರಮದ ಕೊನೆಗೆ ಅಧ್ಯಕ್ಷರಾದ ಅವರ ಮಾತು ಬರಿ ಮಾತಲ್ಲ, ನಗೆಯ ಬುಗ್ಗೆ. ಕಸ್ತೂರಿಯವರು ಕನ್ನಡ ಜನರ ಜತೆ ಬೆರೆತದ್ದು ಹೀಗೆ: ಅವರ ಪ್ರೀತಿಯನ್ನು ಗಳಿಸಿಕೊಂಡದ್ದು ಹೀಗೆ.

‘ನೀನು ಏನು ಪದ್ಯ ಬರೆದಿದ್ದೀಯ, ತಗೊಂಡು ಬಾರಯ್ಯ ಕೇಳೋಣ’ ಅಂದರು ಒಂದು ದಿನ. ನನ್ನ ಕವಿತೆಯ ಹಸ್ತಪ್ರತಿ ಹಿಡಿದು ಹೋದೆ ಅವರ ಮನೆಗೆ. ಅದೇ ಸಮಯಕ್ಕೆ ಮೈಸೂರಿನಲ್ಲಿ ನನ್ನ ಪ್ರಿಯ ಗುರುಗಳಾದ ತ.ಸು. ಶಾಮರಾಯರು ನನ್ನ ಕವಿತೆಗಳ ಸಂಗ್ರಹವೊಂದನ್ನು (ಇದೇ ಮೊದಲ ಸಂಗ್ರಹ: ‘ಸಾಮಗಾನ’) ಅಚ್ಚು ಮಾಡಿಸುತ್ತಿದ್ದರು-ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಲ್ಲಿ. ಈ ವಿಷಯ ತಿಳಿದು ತುಂಬ ಸಂತೋಷಪಟ್ಟರು ಕಸ್ತೂರಿಯವರು. ಅವರ ಮನೆಗೆ ಹೋದಾಗ, ಅವರ ದೇವರ ಕೋಣೆಯಲ್ಲಿ ಸಾಯಿಬಾಬಾನ ದೊಡ್ಡ ಫೋಟೋವೊಂದನ್ನು ನೋಡಿದೆ. ‘ಇವರ‍್ಯಾರು ಸಾರ್’ ಎಂದೆ. ‘ಅವರು ಸಾಯಿಬಾಬಾ ಅಂತ ಕಣಯ್ಯ, ದೊಡ್ಡ ಸಾಧುಗಳು’. ಅವರ ಬಗ್ಗೆ ನಿಧಾನವಾಗಿ ಹೇಳ್ತೀನಿ. ಈಗ ನಿನ್ನ ಪದ್ಯ ತೋರಿಸು ಎಂದರು. ತೋರಿಸಿದೆ, ಓದಿದೆ. ‘ಚೆನ್ನಾಗಿ ಬರೀತಿಯಯ್ಯ, ಒಂದು ದಿನ ಕಾಲೇಜಿನ ಯೂನಿಯನ್‌ನಲ್ಲಿ ಓದುವಂತೆ. ಏರ್ಪಾಡು ಮಾಡೋಣ’ ಅಂದರು. ಕೆಲವೇ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿ ಹಾಗೂ ಅಧ್ಯಾಪಕರ ಸಭೆ ಸೇರಿಸಿ, ನಾನು ಕಾವ್ಯ ವಾಚನ ಮಾಡುವಂತೆ ಏರ್ಪಡಿಸಿ, ಅವರೇ ಸಭೆಯ ಅಧ್ಯಕ್ಷತೆ ವಹಿಸಿ, ಸಭೆಯ ಮುಂದೆ ನನ್ನನ್ನು ಹೊಗಳಿ ಬೆನ್ನು ತಟ್ಟಿದರು. ಇದೇ ಮೊಟ್ಟ ಮೊದಲು, ಸಭೆಯೆದುರು ನಾನು ಕಾವ್ಯವಾಚನ ಮಾಡಿ, ಜನ ನನ್ನನ್ನು ‘ಕವಿ’ ಎಂದು ಗುರುತಿಸಿದ್ದು.

ಆಗ ಬೆಂಗಳೂರಿಂದ ಹಾಸ್ಯಕ್ಕೆ ಮೀಸಲಾದ ಪತ್ರಿಕೆಯೊಂದು ಪ್ರಕಟವಾಗುತ್ತಿತ್ತು. ಅದರ ಹೆಸರು ‘ಕೊರವಂಜಿ’. ‘ರಾಶಿ’ (ಡಾ.ಶಿವರಾಂ)ಯವರು ಅದರ ಸಂಪಾದಕರು. ಹೀಗೆ ಹಾಸ್ಯಕ್ಕೆ ಮೀಸಲಾದ ಪತ್ರಿಕೆಯೊಂದು ಪ್ರಕಟವಾಗತೊಡಗಿದ್ದು ಇದೇ ಮೊದಲೋ ಏನೋ. ಅದರಲ್ಲಿ ಕಸ್ತೂರಿಯವರದೇ ಸಿಂಹಪಾಲು. ಕಸ್ತೂರಿಯವರೇ ಬೇರೆ ಬೇರೆ ಹೆಸರುಗಳಲ್ಲಿ ಇದರ ಪುಟ ತುಂಬಿಸುತ್ತಾರೆಂದೂ ಕೇಳಿದ್ದೆ. ‘ರಾಶಿ’, ‘ಕೇಫ’, ‘ಅರಾಸೆ’, ‘ಹಾರಾ’ ಇತ್ಯಾದಿಯಾಗಿ ಈ ಹೊತ್ತು ಹಾಸ್ಯ ಸಾಹಿತ್ಯದಲ್ಲಿ ಹೆಸರು ಮಾಡಿರುವ ಅನೇಕರು ಅಂದು ಪತ್ರಿಕೆಯ ಮೂಲಕ ವಿನೋದದ ವಾತಾವರಣವನ್ನು ನಿರ್ಮಿಸಿದ್ದರು. ಒಂದು ದಿನ ‘ಕೊರವಂಜಿ’ ಪತ್ರಿಕೆಯನ್ನು ತೋರಿಸಿ ‘ನೋಡಯ್ಯ, ನೀನೂ, ಏನಾದರೂ ಒಂದಿಷ್ಟು ಬರೆಯಬೇಕು ಇದಕ್ಕೆ; ಬರೀ ಗಂಭೀರವಾಗಿದ್ದರೆ ಏನೂ ಪ್ರಯೋಜನವಿಲ್ಲ’  ಅಂದರು. ನಾನು ತುಂಬ ಸಂಕೋಚದಿಂದ, ‘ನೋಡೋಣ ಸಾರ್’ ಎಂದೆ. ಕಸ್ತೂರಿಯವರ ಸೂಚನೆ ವ್ಯರ್ಥವಾಗಲಿಲ್ಲ. ನಾನೂ ಕೆಲವು ಹಾಸ್ಯ ಕವಿತೆಗಳನ್ನು ಬರೆದು ಅವರಿಗೆ ತೋರಿಸಿದೆ. ‘ಭೇಷ್ ಚೆನ್ನಾಗಿವೆ ಕಣಯ್ಯ; ಈ ಕವನ ಬರೆದ ಕವಿಗೆ ಒಂದು ಕಾವ್ಯನಾಮ ಕೊಡೋಣ’ ಎಂದು ಸ್ವಲ್ಪ ಹೊತ್ತು ಯೋಚಿಸಿ ‘ದಿಬ್ಬಯ್ಯ’ ಅಂತ ಇಡೋಣವೆ’ – ಅಂದರು. ನಾನು ನಕ್ಕು ‘ಆಗಲಿ ಸಾರ್’ ಎಂದೆ.

ಕಸ್ತೂರಿಯವರು ಈ ಹೆಸರು ಕೊಟ್ಟಿದ್ದಕ್ಕೆ ಒಂದು ಕಾರಣವಿದೆ: ಪ್ರಭುಪ್ರಸಾದರು ನನ್ನ ಆಪ್ತ ಸ್ನೇಹಿತರಲ್ಲಿ ಒಬ್ಬರು. ನಾನೂ ಅವರು ದಾವಣಗೆರೆ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಾಗಿದ್ದ ಕಾಲದಲ್ಲೇ ‘ಕ್ಲಾಸ್‌ಮೇಟ್’ಗಳು. ಆದರೆ ಆ ಪೂರ್ವಪರಿಚಯ ನಾನು ಮೈಸೂರು ಮಹಾರಾಜಾ ಕಾಲೇಜಿನಿಂದ ಕನ್ನಡ ಬಿ.ಎ. ಅನರ‍್ಸ್ ಪಾಸ್ ಮಾಡಿಕೊಂಡು, ದಾವಣಗೆರೆಗೆ ಬಂದ ಮೊದಲಲ್ಲಿ ಗಾಢವಾದ ಸ್ನೇಹದಲ್ಲಿ ಪರಿಣಮಿಸಿತು. ಆ ವೇಳೆಗೆ ಅವರು ಇಂಗ್ಲಿಷ್ ಎಂ.ಎ.ಯನ್ನು (ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಎಂದು ಕಾಣುತ್ತದೆ) ಪಾಸ್ ಮಾಡಿಕೊಂಡು ದಾವಣಗೆರೆಯಲ್ಲೆ, ಹೈಸ್ಕೂಲೊಂದರಲ್ಲಿ ಶಿಕ್ಷಕರಾಗಿದ್ದರು. (ಆನಂತರ ಅವರು ಕಾಲೇಜು ಅಧ್ಯಾಪಕರಾಗಿ, ಪ್ರಿನ್ಸಿಪಾಲರೂ ಆದರು) ಆಗ ದಿನಾ ಸಂಜೆ ನಾವಿಬ್ಬರೂ ದಾವಣಗೆರೆಯ ಊರಾಚೆಯ ಬಯಲ ಕಡೆ ‘ವಾಕಿಂಗ್’ ಹೋಗಿ, ಒಂದು ಎತ್ತರವಾದ ದಿಬ್ಬವನ್ನು ನಮ್ಮ ನಿಲುಗಡೆಯನ್ನಾಗಿ ಆಯ್ದುಕೊಂಡು ಕೂತುಕೊಳ್ಳುತ್ತಿದ್ದೆವು. ಆ ದಿಬ್ಬದ ಮೇಲೆ ಕೂತು, ಎದುರಿಗೆ ತೆನೆಯೆತ್ತಿದ ಜೋಳದ ಹೊಲಗಳ ವಿಸ್ತಾರವನ್ನೂ, ಸಂಜೆ ಬಾನಿನ ವಿವಿಧ ವರ್ಣ ವಿನ್ಯಾಸಗಳನ್ನು ಬಿಂಬಿಸುತ್ತಾ ಥಳಥಳ ಹೊಳೆಯುವ ಕೆರೆಯ ಹರಹನ್ನೂ ನೋಡುತ್ತ ಸಾಹಿತ್ಯ, ಅಧ್ಯಾತ್ಮ ಮೊದಲಾದ ವಿಷಯಗಳನ್ನು ಚರ್ಚಿಸುತ್ತ, ಕತ್ತಲಾಗುವವರೆಗೂ ಆ ದಿಬ್ಬದ ಮೇಲೆ ಕೂತಿದ್ದು ನಮ್ಮ ನಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದೆವು. ಈ ಸಂಗತಿಯನ್ನು ಪತ್ತೆ ಹಚ್ಚಿದ ಕಸ್ತೂರಿಯವರು ನಾನು ಬರೆದ ಹಾಸ್ಯ ಕವಿತೆಗಳಿಗೆ ‘ದಿಬ್ಬಯ್ಯ’ ಎಂದು ಕಾವ್ಯನಾಮವೊಂದನ್ನು ಆವಿಷ್ಕಾರ ಮಾಡಿಬಿಟ್ಟರು.

ಕೆಲವು ವರ್ಷಗಳ  ಕಾಲ ಕಸ್ತೂರಿಯವರ ಪ್ರೇರಣೆಯಿಂದ ನಾನು ಬರೆದ ಹಲವು ಹಾಸ್ಯಕವಿತೆಗಳು, ‘ಕೊರವಂಜಿ’ ಮಾಸಪತ್ರಿಕೆಯಲ್ಲಿ ‘ದಿಬ್ಬಯ್ಯ’ ಎಂಬ ಅಂಕಿತದೊಂದಿಗೆ ಪ್ರಕಟವಾದವು. ಅಂದು ನಾನು ಬರೆದು, ಪ್ರಕಟವಾದ ಹಾಸ್ಯ ಕವನವೊಂದು ಹೀಗಿದೆ-

ಇಂದ್ರಭವನದಲಿ ಚಂದ್ರ ಮೂಡಿತೋ
ದೋಸೆ ಹೆಂಚಿನಲ್ಲಿ
ಮೂಡಿತೆಂಬೆಯೊ
, ಮತ್ತೆ ಮುಳುಗಿತೋ
ಉದರ ಗಗನದಲ್ಲಿ!

ಈ ಪದ್ಯವನ್ನು ಕೊರವಂಜಿಯ ಪ್ರಧಾನ ಸಂಪಾದಕಾರದ ‘ರಾಶಿ’ (ಡಾ.ಶಿವರಾಂ)ಯವರು ತುಂಬ ಮೆಚ್ಚಿಕೊಂಡರಂತೆ. ಹಾಗೆಂದು ‘ರಾಶಿ’ಯವರೇ ಅನೇಕ ವರ್ಷಗಳ ತರುವಾಯ ನನಗೆ ಹೇಳಿದರು.

ಒಂದು ಮಧ್ಯಾಹ್ನ ತರಗತಿಯ ಪಾಠವನ್ನು ಮುಗಿಸಿಕೊಂಡು ಕಸ್ತೂರಿಯವರನ್ನು ನೋಡೋಣ ಎಂದು ಕಾಲೇಜಿನ ಅವರ ಕಛೇರಿಗೆ ಹೋದೆ. ಸಾಮಾನ್ಯವಾಗಿ ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಅಂದು ಯಾಕೋ ಸ್ವಲ್ಪ ಸುಸ್ತಾದವರಂತೆ ತೋರಿದರು. ನನ್ನನ್ನು ಕಂಡು ‘ಬಾರಯ್ಯ ಬಾ, ಕ್ಲಾಸು ಮುಗಿತೋ’ ಅಂದರು.ನಾನು ‘ಹೌದು ಸಾರ್ ಮುಗೀತು. ಅದ್ಯಾಕೋ ಇವತ್ತು ಸ್ವಲ್ಪ ಆಯಾಸಗೊಂಡವರಂತೆ ಕಾಣುತ್ತೀರಲ್ಲ?’ ಎಂದೆ. ‘ಏನು ಮಾಡೋದಯ್ಯಾ. ಇವತ್ತು ಬೆಳಿಗ್ಗೆಯಿಂದ ಬರೀ ಪುರಂದರದಾಸರ ಕೀರ್ತನೆ ಕೇಳಿ ಕೇಳಿ ಸಾಕಾಗಿದೆ ಕಣಯ್ಯ’ ಅಂದರು. ನನಗೆ ಅರ್ಥವಾಗಲಿಲ್ಲ. ಅವರು ಮಾತನ್ನು ಮುಂದುವರಿಸಿದರು- ‘ಈಗ ಗೊತ್ತಲ್ಲಪ್ಪ, ಫ್ರೀಷಿಪ್ಪು, ಹಾಫ್ ಫ್ರೀಷಿಪ್ಪು, ಸ್ಕಾಲರ್‌ಷಿಪ್ಪು ಡಿಸೈಡ್ ಮಾಡುವ ಕಾಲ. ಅದಕ್ಕಾಗಿ ಹುಡುಗರು ಬೆಳಿಗ್ಗೆಯಿಂದ ಬಂದು ಪೀಡಿಸುತ್ತಾ ಇದ್ದಾರೆ. ಒಬ್ಬ ಬರ‍್ತಾನೆ: ‘ಸಾರ್, ರಾಮಯ್ಯನಿಗೆ ಹಾಫ್‌ಫ್ರೀಷಿಪ್ ಅನೌನ್ಸ್ ಮಾಡಿದ್ದೀರಿ; ವೆಂಕಟಪ್ಪನಿಗೆ ಪುಲ್‌ಫ್ರೀಷಿಪ್ ಕೊಟ್ಟಿದ್ದೀರಿ; ಸೋಮಣ್ಣನಿಗೆ ಸ್ಕಾಲರ್‌ಷಿಪ್ ಕೊಡುವುದಾಗಿ ಹೇಳಿದಿರಿ. ನಂಗ್ಯಾಕೆ ಸಾ ಒಂದು ಹಾಫ್‌ಫ್ರೀಷಿಪ್‌ನಾದ್ರೂ ಕೊಡಬಾರದು?’-ಹೀಗೇ ಪ್ರತಿಯೊಬ್ಬನದೂ ಪುರಂದರದಾಸರ ಕೀರ್ತನೆ ಹಾಗೆ- ‘ಅಜಾಮಿಳನಿಗೆ ನಾರಾಯಣ ಅಂದದ್ದಕ್ಕೆ ಒಲಿದೆ; ದ್ರೌಪದಿ ಕೃಷ್ಣಾ ಎಂದು ಕರೆದದ್ದಕ್ಕೆ ಅಕ್ಷಯವಸ್ತ್ರ ಕೊಟ್ಟೆ; ಗಜೇಂದ್ರ ಸೊಂಡಿಲೆತ್ತಿ ಕೂಗಿದ್ದಕ್ಕೆ ಮೊಸಳೆ ಬಾಯಿಂದ ಬಿಡಿಸಿದೆ. ನನಗ್ಯಾತಕ್ಕೆ ಕೃಪೆ ಮಾಡಬಾರದು?’ ಇದೇ ತಾನೇ ದಾಸರ ಕೀರ್ತನೆಗಳ ಧಾಟಿ! ಬೆಳಗಿಂದ ಈ ನಮ್ಮ ದಾಸರುಗಳು ಮಾಡಿದ್ದೂ ಇದನ್ನೆ ಅಂದರು. ನನಗೆ ಜೋರಾಗಿ ನಗು ಬಂತು.

ನಾವು ಅಧ್ಯಾಪಕರಾಗಿ ಕೆಲಸ ಮಾಡುತ್ತ ಇದ್ದ ಅಂದಿನ ದಿನಗಳಲ್ಲಿ ಮಧ್ಯಂತರ ರಜಾ ದಿನಗಳ ನಂತರ, ಕಾಲೇಜು ಓಪನ್ ಆದ ದಿನವೇ ಕೆಲಸಕ್ಕೆ ಬಂದು ಹಾಜರಾಗಬೇಕಾದದ್ದು ಕಡ್ಡಾಯ. ಅದೊಂದು ದಿನ ಕ್ರಿಸ್‌ಮಸ್ ರಜಾ ಮುಗಿದು ಕಾಲೇಜು ‘ರೀ ಓಪನ್’ ಆಗುವ ದಿನ. ರಜಕ್ಕೆಂದು ತಮ್ಮ ತಮ್ಮ ಊರಿಗೆ ಹೋದ ಅಧ್ಯಾಪಕರೆಲ್ಲ ಹಿಂದಿರುಗಿ ಹತ್ತೂವರೆಗೆ ಸರಿಯಾಗಿ ರಿಜಿಸ್ಟರ್‌ನಲ್ಲಿ ರುಜುಮಾಡಬೇಕು. ಅವತ್ತು ಮೈಸೂರಿನಿಂದ ಬರಬೇಕಾಗಿದ್ದ ಎಸ್. ಅನಂತನಾರಾಯಣ ಮತ್ತು ಮಧುಗಿರಿಯಿಂದ ಬರಬೇಕಾಗಿದ್ದ ನನ್ನ ಸಹೋದ್ಯೋಗಿಯೂ, ಸ್ನೇಹಿತನೂ ಆದ ಜಿ. ಬ್ರಹ್ಮಪ್ಪ-ಇವರಿಬ್ಬರೂ ಕಾಲೇಜು ಪ್ರಾರಂಭವಾಗಿ ಒಂದು ಗಂಟೆಯಾದರೂ ಪತ್ತೆಯಿಲ್ಲ. ಮಧ್ಯಾಹ್ನ ಒಂದೂವರೆಯಾಯಿತು ಗಂಟೆ. ಇನ್ನೇನು ಕಾಲೇಜು ಸೂಪರಿಂಟೆಂಡೆಂಟರು ರೂಲ್ಸು ಪ್ರಕಾರ, ರಿಜಿಸ್ಟರ್‌ನಲ್ಲಿ ಆಬ್ಸೆಂಟ್ ಮಾರ್ಕುಮಾಡಿ, ಯೂನಿವರ್ಸಿಟಿಗೆ ರಿಪೋರ್ಟು ಕಳಿಸಬೇಕು, ಏದುಸಿರುಬಿಡುತ್ತಾ ಬ್ರಹ್ಮಪ್ಪ ಕಸ್ತೂರಿಯವರ ಕೊಠಡಿಗೆ ನುಗ್ಗಿದರು. ಕಸ್ತೂರಿಯವರು ‘ಇದೇನಯ್ಯಾ ಇದು. ರೀ ಓಪನಿಂಗ್ ಡೇ ಅಂತ ಗೊತ್ತಿಲ್ಲವಾ? ಇಷ್ಟೊಂದು ತಡವಾಗೇನಯ್ಯಾ ಬರೋದು’   ಅಂದರು. ಪಾಪ, ಬ್ರಹ್ಮಪ್ಪ ಮಧುಗಿರಿಯಿಂದ ಬರುವ ಬಸ್ಸು ಅದೆಲ್ಲೋ ನಡುದಾರಿಯಲ್ಲಿ ಕೆಟ್ಟು, ಅವರು ದಾವಣಗೆರೆ ತಲುಪುವುದು ತಡವಾಯಿತೆಂಬುದನ್ನು, ಅದು ನಿಜವಾದರೂ ಮೇಲಧಿಕಾರಿಗೆ ಹೇಗೆ ಹೇಳುವುದು- ಹೇಳಿದರೂ, ‘ಒಂದು ದಿನ ಮೊದಲೇ ಬರುವುದಕ್ಕೇನಾಗಿತ್ತು’ ಅಂತ ಅವರೆಂದರೆ ಏನು ಉತ್ತರ ಕೊಡುವುದು. ಈ ಸಂದಿಗ್ಧದಲ್ಲಿ ಬ್ರಹ್ಮಪ್ಪ ಮಾತೇ ಆಡದೆ ಸುಮ್ಮನೆ ನಿಂತರು. ಕಸ್ತೂರಿಯವರು ಎಲ್ಲರನ್ನೂ ನಗಿಸುತ್ತ ನಗುನಗುತ್ತಾ ಇದ್ದರೂ ಯಾರಿಗೂ ಸಲಿಗೆ ಕೊಟ್ಟವರಲ್ಲ; ಕಾಲೇಜಿನ ಆಡಳಿತದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇರುತ್ತಿದ್ದರು. ‘ಏನು ಸುಮ್ಮನೆ ನಿಂತೆಯಲ್ಲ, ನಾನೇನೋ ರಿಪೋರ್ಟ್ ಮಾಡುತ್ತೇನೆ. ಅದೇನು ಸಮಜಾಯಿಷಿ ಕೊಡುತ್ತಿಯೋ ಕೊಟ್ಟುಕೋ’ ಎಂದರು. ಅದಕ್ಕೆ ಬ್ರಹ್ಮಪ್ಪ, ‘ನಿಮ್ಮ ಮನೇಲಿ ಇಟ್ಟು ಬಂದಿದ್ದೀನಿ ಸಾರ್, ಅದಕ್ಕೆ ಸ್ವಲ್ಪ ತಡವಾಯಿತು’ ಎಂದರು. ಕಸ್ತೂರಿಯವರು ‘ಅದೇನ್ರಿ ಅದು? ನಾನು ಕೇಳೋದು ಏನು, ನೀವು ಹೇಳೋದು ಏನು, ನಾನಂತೂ ಯೂನಿವರ್ಸಿಟಿಗೆ ರಿಪೋರ್ಟ್ ಮಾಡಬೇಕಾಗುತ್ತೆ’ ಅಂದರು. ‘ನಾನು ಹೇಳೋದಕ್ಕೆ ಹೊರಟ ವಿಚಾರಾನ, ನೀವು ಯೂನಿವರ್ಸಿಟಿಗೆ ರಿಪೋರ್ಟ್ ಮಾಡೋಕಾಗಲ್ಲ ಸಾರ್’ ಎಂದರು ಬ್ರಹ್ಮಪ್ಪ.  ಕಸ್ತೂರಿಯವರೆ ಚಕಿತರಾಗಿ ‘ಅದೇನ್ರಿ ಅದು ನಾನು ರಿಪೋರ್ಟ್ ಮಾಡಲಾಗದ್ದು’ ಎಂದರು. ಬ್ರಹ್ಮಪ್ಪ ಹೇಳಿದರು, ‘ಊರಿಂದ ನಿಮಗೆ ಅಂತ ತಂದದ್ದು ಸಾರ್, ದಾರೀಲಿ ಬಸ್ಸು ಕೆಟ್ಟು ಲೇಟಾಯಿತು. ಆದರೂ ನಿಮ್ಮ ಮನೇಲಿ ಇಟ್ಟು ಬರೋ ಹೊತ್ತಿಗೆ ಇನ್ನೂ ಲೇಟಾಯಿತು. ಬೇಕಾದರೆ ನಿಮ್ಮ ಮನೆಯವರನ್ನು ಕೇಳಿ ಸಾರ್’ ಎಂದರು. ಕಸ್ತೂರಿಯವರು ಕಕ್ಕಾಬಿಕ್ಕಿಯಾಗಿ ‘ಅದೇನಯ್ಯಾ ನೀನು ಇಟ್ಟು ಬಂದಿರೋದು ಸರಿಯಾಗಿ ಹೇಳಯ್ಯ’ ಅಂದರು. ಬ್ರಹ್ಮಪ್ಪ ಹಸನ್ಮುಖರಾಗಿ, ‘ನಿಮಗೆ ಗೊತ್ತಲ್ಲ ಸಾರ್, ಮಧುಗಿರಿ ಹಲಸಿನ ಹಣ್ಣಿಗೆ ಹೆಸರಾದದ್ದು. ನಿಮಗೆ ಅಂತ ನಮ್ಮ ತೋಟದಿಂದ ಸೊಗಸಾದ ಹಲಸಿನ ಹಣ್ಣು ತಂದೆ ಸಾರ್, -ಅದನ್ನು ಬಸ್ಸಿಂದ ಇಳಿಸಿ ಹೊತ್ತು ತಂದು ನಿಮ್ಮ ಮನೇಲಿ ಇಟ್ಟು ಬಂದಿದ್ದೇನೆ ಸಾರ್’-ಅಂದರು.

‘ಮೊದಲೇ ಯಾಕಯ್ಯ ಸರಿಯಾಗಿ ಹೇಳಲಿಲ್ಲ? ಈಗ ಹೋಗು, ಮೊದಲು ಕ್ಲಾಸ್ ತಗೋ. ಸಾಯಂಕಾಲ ಮನೆಗೆ ಬಾ, ಹಲಸಿನ ಹಣ್ಣು ಬಿಚ್ಚೋಣವಂತೆ’ ಅಂದರು ಕಸ್ತೂರಿಯವರು.

ಇವೆಲ್ಲ ಸುಮಾರು ಅರ್ಧಶತಮಾನದ ಹಿಂದಿನ ಕೆಲವು ನೆನಪುಗಳು. ಆನಂತರ ನಿವೃತ್ತರಾದ ಕಸ್ತೂರಿಯವರನ್ನು ನಾನು ಕಂಡದ್ದು, ಪುಟ್ಟಪರ್ತಿಯ ಸಾಯಿಬಾಬಾ ಅವರ ಆಶ್ರಮದಲ್ಲಿ.

ಕೇರಳದಲ್ಲಿ ಹುಟ್ಟಿ, ಕನ್ನಡನಾಡಿಗೆ ಬಂದು, ಕನ್ನಡವನ್ನು ಕಲಿತು, ಅದನ್ನು ಅರಗಿಸಿಕೊಂಡು, ಸೊಗಸಾದ ವಿನೋದ ಸಾಹಿತ್ಯವನ್ನು ಸೃಷ್ಟಿಸಿ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದವರು ನಾ. ಕಸ್ತೂರಿಯವರು. ಇಂಥ ಸಾಹಿತಿಗೆ ಕನ್ನಡ ಜನ ಸರಿಯಾಗಿ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಲಿಲ್ಲ ಎಂಬುದು ದುರದೃಷ್ಟಕರವಾದ ಸಂಗತಿ. ಕೇರಳದವರಾದ ಇವರು ಒಂದು ವೇಳೆ ಮಲೆಯಾಳಿ ಭಾಷೆಯಲ್ಲಿಯೇ ಹಾಸ್ಯ ಸಾಹಿತ್ಯವನ್ನು ಬರೆದಿದ್ದ ಪಕ್ಷದಲ್ಲಿ ಕೇರಳದ ಜನ ಅವರನ್ನು ಹಾಡಿ ಹೊಗಳಿ ಗೌರವಿಸುತ್ತಿದ್ದರೆಂಬುದರಲ್ಲಿ ಸಂದೇಹವೇ ಇಲ್ಲ. ನಾವು ಕನ್ನಡಿಗರು, ನಿಜವಾದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ವಿಚಾರದಲ್ಲಿ ಸ್ವಲ್ಪ ಕೃಪಣರೇ.

ಚದುರಿದ ಚಿಂತನೆಗಳು : ೨೦೦೦