ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಹಿಂದಿರುವ ಹಲವು  ಪ್ರೇರಣೆಗಳಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದರ, ಮಹಾತ್ಮಾಗಾಂಧಿ ಮತ್ತು ಯೋಗಿ ಶ್ರೀ ಅರವಿಂದರ ವ್ಯಕ್ತಿತ್ವ ಮತ್ತು ವಿಚಾರಗಳ ಪ್ರಭಾವವು ಬಹುಮುಖ್ಯವಾದದ್ದು. ಅದುವರೆಗಿನ ಸಾಂಪ್ರದಾಯಿಕ ಮತಧರ್ಮಗಳನ್ನು ಕುರಿತ ಶ್ರದ್ಧೆಗಿಂತ ಬೇರೆಯೆ ಆದ ಒಂದು ಆಧ್ಯಾತ್ಮಿಕ ನಿಲುವನ್ನೂ, ರಾಷ್ಟ್ರೀಯತೆಯ ಕಲ್ಪನೆಯನ್ನೂ, ಹೊಸ ಸಾಮಾಜಿಕ ವೈಚಾರಿಕತೆಯಿಂದ ನಿಷ್ಟನ್ನವಾದ ಒಂದು ಉದಾರ ಮಾನವತಾವಾದವನ್ನೂ ಅಂದಿನ ಸಾಹಿತ್ಯಕ್ಕೆ ತಂದುಕೊಟ್ಟ ಈ ಮಹಾಸತ್ವರ ವ್ಯಕ್ತಿತ್ವ, ಜೀವನ-ಸಾಧನೆ-ಬೋಧನೆಗಳನ್ನು ಕುರಿತ ಪ್ರತ್ಯೇಕವಾದ ಸಾಹಿತ್ಯ ಪ್ರಕಾರವೊಂದು ಅಂದಿನ ಎಲ್ಲ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿಯೂ ಆವಿಷ್ಕಾರಗೊಂಡಿತು. ಅದನ್ನು ಇಂದು ಶ್ರೀ ರಾಮಕೃಷ್ಣ- ವಿವೇಕಾನಂದ ಸಾಹಿತ್ಯ, ಗಾಂಧೀ ಸಾಹಿತ್ಯ, ಅರವಿಂದ ಸಾಹಿತ್ಯ ಎಂದು ಗುರುತಿಸುತ್ತೇವೆ. ಇವುಗಳಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದ ಸಾಹಿತ್ಯದ ಒಂದು ವಿಶೇಷ ಲಕ್ಷಣವೆಂದರೆ: ಸಾಹಿತ್ಯದ ಇತರ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಕೇವಲ ಸಾಹಿತಿಗಳಾದರೆ, ಶ್ರೀರಾಮಕೃಷ್ಣ-ವಿವೇಕಾನಂದ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿಸಿಕೊಂಡವರು ಕೇವಲ ಸಾಹಿತಿಗಳು ಮಾತ್ರವಲ್ಲ, ಭಕ್ತರು, ಸಾಧು ಸಂತರು ಕೂಡಾ. ಈ ಸಾಹಿತ್ಯ ಶ್ರೀರಾಮಕೃಷ್ಣ-ವಿವೇಕಾನಂದರ ಬದುಕು-ಬರೆಹ- ಸಾಧನೆ-ಬೋಧನೆಗಳನ್ನು ಕುರಿತದ್ದು ಮಾತ್ರವಲ್ಲ; ಯಾವ ಆಧ್ಯಾತ್ಮಿಕ ಪರಂಪರೆಗೆ ಶ್ರೀರಾಮಕೃಷ್ಣ ವಿವೇಕಾನಂದರು ಸೇರಿದ್ದರೋ,  ಆ ಪರಂಪರೆಯನ್ನು ಆಧುನಿಕ ಯುಗದ ಆವಶ್ಯಕತೆಗಳಿಗೆ ತಕ್ಕಂತೆ ವ್ಯಾಖ್ಯಾನಿಸುವ ಮತ್ತು ಲೋಕ ಕಲ್ಯಾಣಕ್ಕೆ ಪ್ರಾಯೋಗಿಕವಾಗಿ ವಿನಿಯೋಗಿಸುವ, ಹಾಗೂ ಅದಕ್ಕೆ ಅಗತ್ಯವಾಗುವ ವೈಚಾರಿಕತೆಯನ್ನು ಪ್ರಸಾರ ಮಾಡುವ ಸಾಂಸ್ಕೃತಿಕ ಉದ್ದೇಶದ್ದು ಕೂಡಾ. ಹಾಗೆ ನೋಡಿದರೆ ಗಾಂಧಿ ಅರವಿಂದರಿಗೆ ಹಿನ್ನೆಲೆಯಾದ, ಶ್ರೀರಾಮಕೃಷ್ಣ -ವಿವೇಕಾನಂದರ ವ್ಯಕ್ತಿತ್ವದ ಯುಗಪರಿವರ್ತನ ಕಾರಿಯಾದ ಚಿಂತನ ಪ್ರಭಾವವು, ಗಾಂಧಿ-ಅರವಿಂದರ ಮೇಲೂ ಚಾಚಿಕೊಂಡಿರುವುದರಿಂದ, ಆಧುನಿಕ ಭಾರತದ ಬದುಕಿನಲ್ಲಿ ಮೊತ್ತಮೊದಲ ಬಾರಿಗೆ ಸಂಭವಿಸಿದ ನವೀನ ಉತ್ಕಾ ಂತಿಯ ಮೂಲ ಶ್ರೀರಾಮಕೃಷ್ಣ-ವಿವೇಕಾನಂದರೆಂದೇ ಹೇಳಬಹುದು. ಅದರಲ್ಲೂ ಲೋಕ ಲೋಚನಗಳನ್ನು ತನ್ನೆಡೆ ಸೆಳೆದು, ತಮ್ಮ ಪಾಂಚಜನ್ಯ ಸದೃಶವಾದ ವಾಣಿಯಿಂದ, ಪೂರ್ವ ಪಶ್ಚಿಮಗಳೆರಡನ್ನೂ ಬೆರಗು ಗೊಳಿಸಿದ ಸ್ವಾಮಿವಿವೇಕಾನಂದರೆ, ಶ್ರೀರಾಮಕೃಷ್ಣರ ನಿಧಿಯೂ ಪ್ರತಿನಿಧಿಯೂ ಉತ್ಸವ ಮೂರ್ತಿಯೂ ಆಗಿ ಮುನ್ನೆಲೆಗೆ ಬಂದು ನಿಲ್ಲುತ್ತಾರೆ. ಮತ್ತು ತಮ್ಮ ವ್ಯಕ್ತಿತ್ವದ ಅಯಸ್ಕಾಂತ ಶಕ್ತಿಯಿಂದ, ಎಚ್ಚತ್ತ ತರುಣ ಚೇತನಗಳನ್ನು ಆಕರ್ಷಿಸುತ್ತಾರೆ. ಕನ್ನಡ ನವೋದಯ ಸಾಹಿತ್ಯ ಸಂದರ್ಭದಲ್ಲಿ ಹೀಗೆ ವಿವೇಕಾನಂದರಿಂದ ಆಕರ್ಷಿತರಾದ ತರುಣ ಚೇತನಗಳಲ್ಲಿ ಕುವೆಂಪು ಮುಖ್ಯರಾದವರು.

ಕುವೆಂಪು ಆಗ ಮೈಸೂರಿನ ವೆಸ್ಲಿಯನ್ ಮಿಶನ್ ಹೈಸ್ಕೂಲಿನ ವಿದ್ಯಾರ್ಥಿ. ಇಂಗ್ಲಿಷ್ ಸಾಹಿತ್ಯದ ರುಚಿ ಹತ್ತಿದ ಕಾಲ. ಡೇನಿಯಲ್ ಢೆಫೋ ಬರೆದ ರಾಬಿನ್ ಸನ್ ಕ್ರೂಸೋ ಎಂಬ ಪುಸ್ತಕವನ್ನು, ಕೆ.ಆರ್. ಆಸ್ಪತ್ರೆಯ ಎದುರಿನ ಪಬ್ಲಿಕ್  ಲೈಬ್ರರಿಯ ಕಪಾಟುಗಳಲ್ಲಿ ಹುಡುಕುತ್ತಿರುವಾಗ ಅವರ ಕಣ್ಣಿಗೆ ಬಿದ್ದಿತಂತೆ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ! ಈ ಕುರಿತು ಕುವೆಂಪು ತಮ್ಮ ‘ನೆನಪಿನ ದೋಣಿ’ ಎಂಬ ಆತ್ಮಕಥನದಲ್ಲಿ ಹೀಗೆ ದಾಖಲಿಸುತ್ತಾರೆ: ‘ಹೀಗೆ ನೋಡುತ್ತಿದ್ದಾಗಲೆ ನನಗೆ ನನ್ನ ಜೀವನದ ದಿಕ್ಕನ್ನೆ ತಿರುಗಿಸಿ, ನನ್ನ ಬದುಕನ್ನೆಲ್ಲ ಮರ್ತ್ಯದಿಂದ ಅಮರ್ತ್ಯಕ್ಕೆ ಬೀಸಿದ ಭಗವತ್ ಕೃಪಾ ರೂಪದ ಶ್ರೀರಾಮಕೃಷ್ಣ ವಿವೇಕಾನಂದ ವಿಷಯಕವಾದ ಕೃತಿ ಶ್ರೇಣಿಯ ದರ್ಶನವಾದದ್ದು’. (ಪು ೯೮) ಆಗ ಕುವೆಂಪುವಿಗೆ ಕೇವಲ ಹದಿನೆಂಟು ವರ್ಷ.

ಹೀಗೆ ‘ಕೃತಿ ಶ್ರೇಣಿ’ಯ ಪರಿಚಯವಾದ ನಂತರ ಕುವೆಂಪು ಶ್ರೀರಾಮಕೃಷ್ಣ ಪರಮ ಹಂಸರ ಸರ್ವಧರ್ಮ ಸಮನ್ವಯ ತತ್ವದಿಂದ ಮತ್ತು ಸ್ವಾಮಿವಿವೇಕಾನಂದರ ಪ್ರಖರವಾದ ವೈಚಾರಿಕ ದೀಪ್ತಿಯಿಂದ ಸಂಪೂರ್ಣ ಆ ಕರ್ಷಿತರಾಗಿ, ಶ್ರೀರಾಮಕೃಷ್ಣ ಪರಮಹಂಸರನ್ನು ತಮ್ಮ ಅಂತರತಮ ಗುರುವನ್ನಾಗಿಯೂ, ವಿವೇಕಾನಂದರನ್ನು ತಮ್ಮ ಮಾರ್ಗದರ್ಶಕರನ್ನಾಗಿಯೂ ಸ್ವೀಕರಿಸಿದರು. ಈ ನಡುವೆ ಸುಮಾರು ನಾಲ್ಕುವರ್ಷಗಳ ಕಾಲಮಾನದಲ್ಲಿ ಇತರ ವಿಷಯಗಳ ಜತೆಗೆ, ರಾಮಕೃಷ್ಣ ವಿವೇಕಾನಂದರ ಕೃತಿಗಳನ್ನು, ಓದುವ, ಅವುಗಳನ್ನು ಕುರಿತು ಸ್ನೇಹಿತರ ಗೋಷ್ಠಿಗಳಲ್ಲಿ ಉತ್ಸಾಹದಿಂದ ಚರ್ಚಿಸುವ, ಸಾರ್ವಜನಿಕ ಸಮಾರಂಭಗಳಲ್ಲಿ ವಿವೇಕಾನಂದರನ್ನು ಕುರಿತು ಉಪನ್ಯಾಸವನ್ನು ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ, ಅವರಿಗೆ ಶ್ರೀರಾಮಕೃಷ್ಣ ಮಹಾಸಂಘದ ಮತ್ತು ಮೈಸೂರಿನಲ್ಲಿ ಶ್ರೀರಾಮಕೃಷ್ಣಾಶ್ರಮ ಇರುವ ಸಂಗತಿಯೇ ತಿಳಿದಿರಲಿಲ್ಲವಂತೆ. ಈ ಕುರಿತು ಕುವೆಂಪು ಹೇಳುತ್ತಾರೆ. ‘ಶ್ರೀ ರಾಮ ಕೃಷ್ಣರ ಜೀವನ ಚರಿತ್ರೆ ಮತ್ತು ಸ್ವಾಮಿ ವಿವೇಕಾನಂದರ ಭಾಷಣಗಳನ್ನು ಓದಿ ಸಂಪೂರ್ಣವಾಗಿ ಪ್ರಭಾವಿತನಾಗಿದ್ದರೂ, ನಿತ್ಯವೂ ಅವರನ್ನು ನೆನೆದು ಪ್ರಾರ್ಥಿಸಿ ಪೂಜಿಸುತಿದ್ದರೂ, ನನಗೆ ಶ್ರೀರಾಮಕೃಷ್ಣ ಮಿಶನ್ನಿನ ವಿಚಾರವಾಗಲೀ, ಶ್ರೀ ರಾಮಕೃಷ್ಣಾಶ್ರಮಗಳ ವಿಚಾರವಾಗಿಯಾಗಲೀ ಗೊತ್ತಿರಲಿಲ್ಲ. ತಿಳಿಯ ಬೇಕೆಂಬ ಆಸಕ್ತಿಯೂ ಇರಲಿಲ್ಲ’ (ನೆನಪಿನ ದೋ ಪು ೪೨೦). ಕುವೆಂಪು ಅವರಿಗೆ ತಾವಿರುವ ಮೈಸೂರಿನಲ್ಲಿಯೆ ಒಂದು ರಾಮಕೃಷ್ಣಾಶ್ರಮವಿದೆ ಎಂಬುದು ತಿಳಿಯದೆ ಹೋದರೂ, ಶ್ರೀರಾಮಕೃಷ್ಣಾಶ್ರಮ ಕುವೆಂಪುವನ್ನು ಸೂಕ್ಷ್ಮವಾಗಿ ಗಮನಿಸದೆ ಇರಲಿಲ್ಲ-ಅದೂ ಮಾತೃವಾತ್ಯಲ್ಯವೇ ಮೂರ್ತಿವೆತ್ತ ಸ್ವಾಮಿ ಶ್ರೀ ಸಿದ್ಧೇಶ್ವರಾನಂದರ ಕಣ್ಣುಗಳ ಮೂಲಕ. ಒಮ್ಮೆ ವಿದ್ಯಾರ್ಥಿಯಾದ ಕುವೆಂಪು ಅವರಿಗೆ ಭಯಂಕರವಾದ ಅನಾರೋಗ್ಯವಾಗಿ, ಅವರನ್ನು ಅವರಿದ್ದ ಕೊಳಕು ಕೊಠಡಿಯಿಂದ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಅವರು ಗುಣಮುಖರಾದ ನಂತರ ಶ್ರೀರಾಮಕೃಷ್ಣಾಶ್ರಮಕ್ಕೆ ಸ್ಥಳಾಂತರಿಸಿ, ಮುಂದೆ ನಿರಂತರವಾಗಿ ಹತ್ತುವರ್ಷಗಳ ಕಾಲ ಕುವೆಂಪು ಅವರ ಬದುಕು ಆಶ್ರಮದ ಶ್ರೀರಕ್ಷೆಯೊಳಗೆ ಅರಳಿಕೊಳ್ಳುವಂತೆ ಏರ್ಪಡಿಸಿದವರು ಅಂದಿನ ಶ್ರೀರಾಮಕೃಷ್ಣಾ ಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಶ್ರೀ ಸಿದ್ಧೇಶ್ವರಾನಂದರೇ! ಕುವೆಂಪು ಅವರ ಬದುಕಿನಲ್ಲಿ ಇದೊಂದು ಯೋಗಾಯೋಗ. ಇದನ್ನು ಕುರಿತು ಕುವೆಂಪು ಹೇಳಿಕೊಳ್ಳುತ್ತಾರೆ: ‘ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕಿರುದೊರೆಯಾಗಿ ಹುಟ್ಟಿ, ಗಿರಿವನ ಕಂದರಗಳಲ್ಲಿ ಹರಿದು ಬಂದ ನನ್ನ ಜೀವನ ತರಂಗಿಣಿ ಶ್ರೀ ಗುರುಕೃಪೆಯ ಮಹಾನದಿಯ ಗಂಗಾ ಪ್ರವಾಹಕ್ಕೆ ಸಂಗಮಿಸಿತು’ (ನೆನಪಿನ ದೋ.ಪು ೫೪೭). ಬೇರೊಂದೆಡೆ ಕವಿತೆಯಲ್ಲಿ, ಇದನ್ನು ಕುರಿತು ಉತ್ತರೋತ್ತರೆಯಾದ, ಶ್ರೀ ರಾಮಕೃಷ್ಣ ಪರಮಹಂಸರ, ದಕ್ಷಿಣೇಶ್ವರಿಯಾದ ಜಗನ್ಮಾತೆಯ ಕೃಪೆಯೇ ಕವಿಯನ್ನೆತ್ತಿ ರಕ್ಷಿಸಲು ದಕ್ಷಿಣಕ್ಕೆ ಬಂದಿತೆಂದು-ನೆನೆಯುತ್ತಾರೆ. ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಶ್ರೀರಕ್ಷೆ ಕುವೆಂಪು ಅವರಂಥ ಕವಿಯ ಅಧ್ಯಾತ್ಮಿಕ ಹಾಗೂ ಸಾಹಿತ್ಯಕ ಜೀವನದ ಬೆಳವಣಿಗೆಗೆ ಎಂಥ ಬೆಳಕಿನ ಬೀಡಾಯಿತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದುದಿಲ್ಲ. ಕುವೆಂಪು ಅವರ ಬಹುತೇಕ ಮಹತ್ ಕೃತಿಗಳು ರಚಿತವಾದದ್ದು ಇಲ್ಲಿ. ಅವರ ಆಧ್ಯಾತ್ಮಿಕ ತುಮುಲಗಳನ್ನೂ, ಹಂಬಲಗಳನ್ನೂ, ಕೋರಿಕೆಗಳನ್ನೂ ಆಶಯಗಳನ್ನೂ ಪ್ರಕಟಿಸುವ ‘ಅಗ್ನಿಹಂಸ’ದಂಥ ಸಂಕಲನದೊಳಗಿರುವ ಕವಿತೆಗಳು ರಚಿತವಾದದ್ದು ಇಲ್ಲಿ. ಶ್ರೀರಾಮಕೃಷ್ಣಪರಮಹಂಸ, ಸ್ವಾಮಿವಿವೇಕಾನಂದ ಇವರನ್ನು ಕುರಿತ ಅನನ್ಯವಾದ ಜೀವನ ಕಥೆಗಳು, ಶ್ರೀರಾಮಕೃಷ್ಣ , ವಿವೇಕಾನಂದ, ಶ್ರೀಶಾರದಾದೇವಿ ಅವರನ್ನು ಕುರಿತ ಕವಿತೆಗಳು, ಅವರು ಅನುವಾದಿಸಿದ ವಿವೇಕಾನಂದರ ಸನ್ಯಾಸಿಗೀತೆ ಮತ್ತು ಇತರ ಉಪನ್ಯಾಸಗಳು, ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯ, ಹಾಗೂ ಅವರ ಎರಡು ಬೃಹತ್ ಕಾದಂಬರಿಗಳ ಮೈಯಲ್ಲೂ ಹೆಣೆದುಕೊಂಡಿರುವ ಶ್ರೀರಾಮಕೃಷ್ಣ- ವಿವೇಕಾನಂದರ ನೆನಪುಗಳೂ, ಒಟ್ಟಾರೆಯಾಗಿ ಕುವೆಂಪು ಅವರ ಸಂಸ್ಕೃತಿಪರವಾದ ಇನ್ನೆಷ್ಟೋ ಬರೆಹಗಳು ಕುವೆಂಪು ಅವರು ಕನ್ನಡಕ್ಕೆ ಕೊಟ್ಟ ಶ್ರೀ ರಾಮಕೃಷ್ಣ  ವಿವೇಕಾನಂದ ಸಾಹಿತ್ಯದ ಹರಹನ್ನು ಸೂಚಿಸುತ್ತವೆ. ಶ್ರೀರಾಮಕೃಷ್ಣಾಶ್ರಮದ ಯಾವ ಮಹತ್ವದ ಪ್ರಕಟನೆಯೂ ಕುವೆಂಪು ಅವರ ಮುನ್ನುಡಿಯ ರಜತರೇಖೆಯಿಂದ ಅಂಕಿತವಾಗದೆ ಇಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ, ಕನ್ನಡದಲ್ಲಿ ಶ್ರೀರಾಮಕೃಷ್ಣರ, ಅದಕ್ಕೂ ಮಿಗಿಲಾಗಿ ಸ್ವಾಮಿ ವಿವೇಕಾನಂದರ ವಾಣಿ ಉಜ್ವಲವಾಗಿ ಅನುರಣನಗೊಂಡಿದ್ದರೆ ಅದು ಶ್ರೀ ಕುವೆಂಪು ಅವರ ಮೂಲಕವೇ.

ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ಈ ದೇಶದ ಸಾಮಾನ್ಯ ಜನಸಮುದಾಯದ ಬಗ್ಗೆ ನಾವು ತೋರುತ್ತಿರುವ ನಿರ್ಲಕ್ಷ ವೇ ನಾವು ಮಾಡುತ್ತಿರುವ ರಾಷ್ಟ್ರಮಟ್ಟದ ಒಂದು ಮಹಾಪಾಪ. ಪುರೋಹಿತ ಶಾಹಿ ಮತ್ತು ವಿದೇಶೀ ಪ್ರಭುತ್ವ ಈ ಎರಡೂ ಅವರನ್ನು ತಲೆ ಎತ್ತದಂತೆ ದಮನಗೊಳಿಸುತ್ತಿವೆ’ (My India: The India eternal. P 21).

ಕುವೆಂಪು ಹುಟ್ಟಿ ಬೆಳೆದದ್ದು ಇಂಥ ನಿರ್ಲಕ್ಷಿತ ಶೂದ್ರ ಸಮುದಾಯದಲ್ಲಿ. ಸಹ್ಯಾದ್ರಿಯ ಅರಣ್ಯಪರಿಸರದ ಕೃಷಿಕ ಸಾಮಾಜಿಕ ಸ್ತರದಿಂದ ಬಂದ, ಕುವೆಂಪು ಅವರಿಗೆ, ಬಡತನ, ಅನಕ್ಷರತೆ, ಪುರೋಹಿತಶಾಹಿ ಶೋಷಣೆ, ಮೂಢನಂಬಿಕೆ ಇತ್ಯಾದಿಗಳಿಂದ ತುಳಿತಕ್ಕೆ ಒಳಗಾದ ತಮ್ಮ ಸಮುದಾಯಕ್ಕೆ ಬಿಡುಗಡೆಯ ದಾರಿ ಯಾವುದು ಎಂದು ಯೋಚಿಸುವುದು ಸಹಜವೂ ಅನಿವಾರ್ಯವೂ ಆಗಿತ್ತು. ವಿದೇಶಿ ಪ್ರಭುತ್ವವೂ ಅವರನ್ನು ದಮನಗೊಳಿಸುವ ಒಂದು ಅನಿಷ್ಟವಾಗಿದ್ದದ್ದು ನಿಜವಾದರೂ, ವಿದೇಶೀ ದಬ್ಬಾಳಿಕೆಯನ್ನು ಕುವೆಂಪು ವಿರೋಧಿಸಿದರೂ, ಆ ಮೂಲಕ ಬಂದ ಆಧುನಿಕ ಶಿಕ್ಷಣ, ಮುಖ್ಯವಾಗಿ ಇಂಗ್ಲಿಷ್ ಭಾಷಾಶಿಕ್ಷಣ ಕೆಳವರ್ಗದ ಸಮುದಾಯಕ್ಕೆ ಒಂದು ಬಿಡುಗಡೆಯ ದಾರಿ ಎಂದೇ ಕುವೆಂಪು ಅದನ್ನು ಸ್ವಾಗತಿಸಿದರು. ಯಾಕೆಂದರೆ ಕುವೆಂಪುವಿಗೆ ಜಗತ್ತಿನ ವಿಸ್ತಾರವಾದ ತಿಳಿವಳಿಕೆಯ ಪರಿಚಯಕ್ಕೆ ಕಿಟಕಿಯಂತೆ ವರ್ತಿಸಿದ್ದು ಅಂದಿನ ವಸಾಹತು ಸಂದರ್ಭದ ಶಿಕ್ಷಣದ ಭಾಷೆಯಾದ ಇಂಗ್ಲಿಷೇ. ಅಷ್ಟೆ ಅಲ್ಲ, ಕುವೆಂಪು ಅವರ ಒಳಬದುಕಿನ ಕಿಟಕಿ-ಬಾಗಿಲುಗಳನ್ನು ತೆರೆದ ಶ್ರೀರಾಮಕೃಷ್ಣ ವಿವೇಕಾನಂದರ ಪರಿಚಯವಾದದ್ದೂ ಅವರಿಗೆ ಇಂಗ್ಲಿಷ್ ಭಾಷೆಯ ಮೂಲಕವೇ ಅಥವಾ ಆಧುನಿಕ ಶಿಕ್ಷಣದ ಪರಿಣಾಮವೇ. ಈ ಹಿನ್ನೆಲೆಯಲ್ಲಿ ಕುವೆಂಪು ಯೋಚಿಸಿದ್ದು ಹೀಗೆ: ಶತಶತಮಾನಗಳಿಂದ ಸರಿಯಾದ ಶಿಕ್ಷಣದ ಸವಲತ್ತುಗಳನ್ನು ಪಡೆದುಕೊಳ್ಳಲಾಗದ ಮತ್ತು ಹಿಂದೂ ಪುರೋಹಿತ ಶಾಹಿಯ ಸುಲಿಗೆ-ಶೋಷಣೆಗಳಿಗೆ ನಿರಂತರವಾಗಿ ಒಳಗಾದ, ಹಾಗೂ ತಲೆ ತಲಾಂತರಗಳಿಂದ ಬಂದ ಮೂಢನಂಬಿಕೆ, ಭೂತ ಪ್ರೇತಗಳ ಆರಾಧನೆ ಇತ್ಯಾದಿಗಳಲ್ಲಿ ಸ್ಥಗಿತಗೊಂಡ, ಈ ನಿರ್ಲಕ್ಷಿತ ಜನಸಮುದಾಯದ ಹೊಸ ಎಚ್ಚರಕ್ಕೆ  ಇರುವ ದಾರಿ ಎರಡೇ: ಮೊದಲನೆಯದು, ಅವರಿಗೆ ಹೊಸಕಾಲಕ್ಕೆ ಅಗತ್ಯವಾದ ಶಿಕ್ಷಣದ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದು. ಎರಡನೆಯದು, ಅವರನ್ನು ‘ಹಳೆಯ ಮತಮೌಢ್ಯಗಳಿಂದ ಪಾರುಮಾಡಿ ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ನೀಡಿ, ನಿಜವಾದ ಉಪನಿಷತ್ ಪ್ರಣೀತವಾದ ವೇದಾಂತದ ಅಧ್ಯಾತ್ಮ ಶ್ರೀಯೆಡೆಗೆ ಕರೆದೊಯ್ಯವುದು.’ (ನೆನಪಿನ ದೋ.ಪು ೭೪೪) ವಾಸ್ತವವಾಗಿ ಕುವೆಂಪು ಅವರ ಈ ಚಿಂತನೆಗಳು, ನವಭಾರತನಿರ್ಮಾಣವನ್ನು ಕುರಿತು ಸ್ವಾಮಿ ವಿವೇಕಾನಂದರು ಈ ದೇಶಾದ್ಯಂತ ಮಾಡಿದ ಉಪನ್ಯಾಸಗಳಲ್ಲಿ ಪ್ರಸ್ತಾಪಿತವಾದವುಗಳೇ. ಪುರೋಹಿತ ಶಾಹಿಯನ್ನು ಕುರಿತ ಸಿಟ್ಟು, ಪುರೋಹಿತ ಶಾಹಿ ಶೋಷಣೆ ಮತ್ತು ಮೂಢನಂಬಿಕೆಗಳಿಂದ ಸ್ಥಗಿತಗೊಂಡ ನಿರ್ಲಕ್ಷಿತ ಜನಸಮುದಾಯದ ಬಗ್ಗೆ ಅನುಕಂಪ, ಮತ್ತು ಈ ಜನರ ಬಳಿಗೇ ಶಿಕ್ಷಣವನ್ನು ತೆಗೆದುಕೊಂಡು ಹೋಗಬೇಕೆಂಬ ಅವರ ‘ಸಾರ್ವಜನಿಕ ಶಿಕ್ಷಣದ ಕಲ್ಪನೆ’ ಮತ್ತು ಈ ಜನದಲ್ಲಿ ವೈಚಾರಿಕತೆಯನ್ನು ವೈಜ್ಞಾನಿಕತೆಯನ್ನು ಪ್ರಚೋದಿಸಿ, ಅವರನ್ನು ಪ್ರಚಲಿತ ಹಿಂದೂ ಧರ್ಮದ ಅನಿಷ್ಟಗಳಿಂದ ಪಾರುಮಾಡಿ ‘ಉಪನಿಷತ್ ಪ್ರಣೀತವಾದ ಹಿಂದೂ ಧರ್ಮದ ಅಧ್ಯಾತ್ಮ ಶ್ರೀಯೆಡೆಗೆ ಕರೆದೊಯ್ಯ’ ಬೇಕೆಂಬ ಕಳಕಳಿ ಇವೆಲ್ಲಾ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಮೂಲಕ ಅಭಿವ್ಯಕ್ತವಾದವುಗಳೇ. ಒಂದು ರೀತಿಯಲ್ಲಿ ತಮ್ಮ ಅಂತರನುಭವದ ಅಭಿವ್ಯಕ್ತಿಯಂತಿರುವ ಈ ವಿಚಾರಗಳ ಮಾರ್ಗದರ್ಶನದಲ್ಲಿ ತಮ್ಮ ಜನವನ್ನು ಹಳೆಯ ಮತ ಮೌಢ್ಯಗಳಿಂದ ಪಾರುಮಾಡಿ ಅವರನ್ನು ‘ಉಪನಿಷತ್ ಪ್ರಣೀತವಾದ ವೇದಾಂತದ ಅಧ್ಯಾತ್ಮ ಶ್ರೀಯಡೆಗೆ ಕರೆದೊಯ್ಯಬೇಕೆಂಬುದು’ ಕುವೆಂಪು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ‘ಅವರಿಗೆ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಪರಿಚಯ ಮಾಡಿಕೊಟ್ಟು ಅವರ ಚೇತನವನ್ನು ಮೇಲೆತ್ತಿದರೆ ಆ ಕೆಲಸ ತನ್ನಷ್ಟಕ್ಕೆ ತಾನೆ ಕೈಗೂಡುತ್ತದೆ ಎಂದೂ ನನ್ನ ನಂಬಿಕೆ’ (ನೆನೆಪಿನ ದೋಷ ೭೪೪) ಎಂದು, ೨-೬-೧೯೩೨ ರಂದು ಮಾಳೂರಿನ ಮಲೆನಾಡು ಯುವಕ ಸಂಘದಲ್ಲಿ ತಾವು ಭಾಷಣ ಮಾಡಿದ್ದನ್ನು ದಾಖಲಿಸಿದ್ದಾರೆ. ಅಂದರೆ ಶ್ರೀರಾಮಕೃಷ್ಣ ವಿವೇಕಾನಂದರ ವಿಚಾರಗಳನ್ನು, ತಾವು ಹುಟ್ಟಿಬಂದ ಪರಿಸರದ ಜನಸಮುದಾಯಕ್ಕೆ ಪರಿಚಯ ಮಾಡಿಕೊಂಡುವುದರ ಮೂಲಕವೆ ಈ ಶ್ರೀಸಾಮಾನ್ಯರ ಬದುಕಿಗೆ ಒಂದು ಹೊಸ ಹುಟ್ಟನ್ನು ತರಬಹುದೆಂಬುದು ಕುವೆಂಪು ಅವರ ದೃಢವಾದ ನಂಬಿಕೆಯಾಗಿತ್ತು. ಯಾಕೆಂದರೆ ‘ವರ್ಣಾಶ್ರಮ, ಜಾತಿ ಪದ್ಧತಿ, ಚಾತುರ್ವರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣ ಪಾರಾದಂದೇ, ಹಿಂದೂಮತವು ವೇದಾಂತ  ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನೂ ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರ ಪೀಡನಕರವಾಗಿ, ಪುರೋಹಿತ ಪೀಡೆಯ ‘ಬ್ರಾಹ್ಮಣ್ಯಮಾತ್ರವಾಗಿರುತ್ತದೆ’ (ನೆನಪಿನ ದೋ ೫೫೨-೫೫೩)- ಎನ್ನುವುದು ಕುವೆಂಪು ಅವರ ಸ್ವಾನುಭವ ಜನ್ಯವಾದ ನಿಲುವೂ ಆಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಹಿಂದೂ ಧರ್ಮದ ಯಾವ ಅನಿಷ್ಟ ಹಾಗೂ ಶೋಷಕ ಮತ್ತು ಅವೈಚಾರಿಕ ಮುಖಗಳನ್ನು ಸ್ವಾಮಿ ವಿವೇಕಾನಂದರು ತಮ್ಮ ಅನೇಕ ಉಪನ್ಯಾಸಗಳಲ್ಲಿ ಪ್ರಸ್ತಾಪಿಸುತ್ತಾರೋ, ಅವು ಕುವೆಂಪು ಅವರು ಹುಟ್ಟಿಬೆಳೆದ ಪರಿಸರದ ಮತ್ತು ಅವರ ಬದುಕಿನ ಒಂದು ಭಾಗವೇ ಆದದ್ದರಿಂದ, ಅವುಗಳನ್ನು ಕುರಿತ ಕುವೆಂಪು ಅವರ ಪ್ರತಿಕ್ರಿಯೆಗಳು, ಸ್ವಾಮಿವಿವೇಕಾನಂದರ ಸಾತ್ವಿಕ ಕ್ರೋಧದ ವಿಮರ್ಶನೋಕ್ತಿಗಳೊಂದಿಗೆ ಒಂದು ಬಗೆಯ ಹೃದಯ ಸಂವಾದವನ್ನು ಪಡೆದುಕೊಂಡದ್ದರಿಂದ, ವಿವೇಕಾನಂದರ ವೈಚಾರಿಕ ನಿಲುವು, ಕುವೆಂಪು ಅವರಿಗೆ ಸ್ಫೂರ್ತಿಯೂ ಮಾರ್ಗದರ್ಶಕವೂ ಆಗುತ್ತ, ಕುವೆಂಪು ಅವರ ಸಾಹಿತ್ಯ ನಿರ್ಮಿತಿಯ ಸಂದರ್ಭದಲ್ಲಿ ವಿವೇಕಾನಂದರ ವಿಚಾರಗಳು ಕುವೆಂಪು ಅವರ ವಾಣಿಯಲ್ಲಿ ಪುನರ್ಭವಗೊಂಡಂತೆ ಒಂದು ಬಗೆಯ ಕ್ಷಾತ್ರ ತೇಜಸ್ಸಿನಿಂದ ಪ್ರವಾದಿಯ ಧಾಟಿಯಲ್ಲಿ ಮಂಡಿತವಾಗುತ್ತವೆ. ಅದರಲ್ಲಿಯೂ ಜಾತಿಪದ್ಧತಿ, ವರ್ಣವ್ಯವಸ್ಥೆ ಹುಟ್ಟು ಹಾಕಿದ ಮೇಲುಕೀಳಿನ ಭಾವನೆ, ಸಾಂಸ್ಥಿಕ ಧರ್ಮಗಳ ಹಾಗೂ ಅವುಗಳ ಪ್ರತಿನಿಧಿಗಳಾದ ದೇವಸ್ಥಾನಗಳನ್ನು ಕುರಿತ ನಿರಾಕರಣೆ, ಪುರೋಹಿಶಾಹೀ ಪ್ರವೃತ್ತಿಗಳು ಎಲ್ಲ ಕಾಲಗಳಲ್ಲೂ, ಎಲ್ಲ ಮತ ಧರ್ಮಗಳ ಸಂದರ್ಭದಲ್ಲೂ ನಡೆಯಿಸುತ್ತಿರುವ ಶೋಷಣೆಗಳ ಚಿಕಿತ್ಸೆ, ಮೂಢನಂಬಿಕೆ ಮತ್ತು ಅರ್ಥಹೀನ ಆಚರಣೆಗಳ ಖಂಡನೆ, ಎಲ್ಲಕ್ಕಿಂತ ‘ಸರ್ವೋದಯ’ ಮೂಲವಾದ ಶ್ರೀಸಾಮಾನ್ಯರ ಪರವಾದ ಕಾಳಜಿಗಳು -ಇತ್ಯಾದಿ ಸಮಾಜ ಸುಧಾರಣಾ ನಿಲುವುಗಳ ಅನನ್ಯವಾದ ಪ್ರತಿಪಾದನೆಯಿಂದ ಕುವೆಂಪು ಕೇವಲ ಕವಿಯಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಬಹುಮುಖ್ಯರಾಗುತ್ತಾರೆ. ‘ಯಾವಕಾಲದ ಶಾಸ್ತ್ರವೇನ ಹೇಳಿದರೇನು, ಎದೆಯದನಿಗೂ ಮಿಗಿಲು ಶಾಸ್ತ್ರ- ವಿಹುದೇನು?’ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’, ‘ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರ ಬನ್ನಿ’ ‘ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ’ ‘ವಿಜ್ಞಾನ ದೀವಿಗೆಯ ಹಿಡಿಯಬನ್ನಿ’ ‘ನೂರುದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’ ‘ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಬನ್ನಿರೈ ಮನುಜಮತಕೆ’ ಈ ಬಗೆಯ ಉಕ್ತಿಗಳಿಗೆ ಸಂವಾದಿಯಾಗಬಲ್ಲ ಅಥವಾ ಪ್ರೇರಕವಾಗಿರಬಹುದಾದ ವಿವೇಕಾನಂದರ ಚಿಂತನೆಗಳನ್ನು ಹೆಚ್ಚು ಕಷ್ಟವಿಲ್ಲದೆ ಗುರುತಿಸಬಹುದು. ಎಲ್ಲಕ್ಕಿಂತ ಮುಖ್ಯವಾದ ಮಾತೆಂದರೆ, ಕುವೆಂಪು ಅವರ ವ್ಯಕ್ತಿತ್ವದಲ್ಲಿ ಸೃಜನಾತ್ಮಕ ಪ್ರತಿಭೆ, ವೈಚಾರಿಕತೆ ಮತ್ತು ಒಂದು ಬಗೆಯ ಅಧ್ಯಾತ್ಮ ಪ್ರವೃತ್ತಿ -ಇವುಗಳು ಜನ್ಮಜಾತವಾಗಿ ಇದ್ದುದರಿಂದ, ಅವರಿಂದ ನಿರ್ಮಿತಿಯಾದ, ‘ಶ್ರೀರಾಮಕೃಷ್ಣ- ವಿವೇಕಾನಂದ ಸಾಹಿತ್ಯ’ಕ್ಕೆ, ಬೇರೆ ಯಾರಲ್ಲೂ ಕಾಣದ ಒಂದು ಓಜಸ್ಸು ಪ್ರಾಪ್ತವಾಗಿದೆ ಎಂದು ಹೇಳಬಹುದು.

ಯಾವುದೂ ಸಣ್ಣದಲ್ಲ : ೨೦೦೪