ಎರಡನೆಯ ಬಾಲಬೋಧೆಯಲ್ಲಿ ಕೂಡ ಶ್ರೀನಿವಾಸರಾವ್ ರಮ್ಯವಾದ ಸುಲಭ ಪದ್ಯಗಳನ್ನು ಪ್ರಕಟಿಸಿ ಹೊಸ ಹೊಳಹಿನ ಸಾಹಿತ್ಯಕ್ಕೆ ನಾಂದಿಯಾಗಿಸಿದರು. ಬಾಲಭೋಧೆಯಲ್ಲಿ ವಿಶೇಷವಾಗಿ ಸರಳ ಕಥೆಗಳಿಗೆ ಮತ್ತು ಇಂಪಾದ ಪದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಅಂತರಂಗದಲ್ಲಿ ಮಕ್ಕಳ ಕಲಿಕೆಯ ಉದ್ದೇಶವನ್ನೇ ಹೊದಿದ್ದರೆಂಬುದು ಗ್ರಹಿಸಬೇಕಾದ ಸಂಗತಿ. ಈ ಬಾಲಭೋಧೆಗಳ ಆನಂತರ ಪ್ರಕಟವಾದ ಕೆಲವು ರೀಡರ‍್ಗಳು-ಒಂದನೆಯ ಪುಸ್ತಕ, ಎರಡನೆಯ ಎರಡನೆಯ ಪುಸ್ತಕ-ನಿಜವಾದ ಅರ್ಥದಲ್ಲಿ ಮೊತ್ತ ಮೊದಲಿನ ಮಕ್ಕಳ ಪುಸ್ತಕಗಳು. ಇವುಗಳಲ್ಲಿ ತಿಳಿವಳಿಕೆ ಕೊಡವು ತಿಳಿಯಾದ ಪಾಠಗಳು, ಪುಟ್ಟ ಪುಟ್ಟ ವಾಕ್ಯಗಳಲ್ಲಿ ರಚನೆಯಾದ ಕಥೆಗಳು, ಸುಲಭವಾಗಿ ಅರ್ಥವಾಗುವ ಶ್ರಾವ್ಯಗುಣವುಳ್ಳ ಪದ್ಯಗಳು ಬಂದವು. ಧರಣಿ ಮಂಡಲಮಧ್ಯದೊಳಗೆ, ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲಿ ಇತ್ಯಾದಿ ಪದ್ಯಗಳು ಪ್ರಕಟವಾದದ್ದು ಈ ಪುಸ್ತಕಗಳಲ್ಲಿ ಎಂಬುದು ಮಹತ್ವದ ಸಂಗತಿ.

ಮಕ್ಕಳಿಗೆ ತಿಳಿವಳಿಕೆ ನೀಡುವ, ಸುಲಭವಾಗಿ ಅರ್ಥವಾಗುವ ಶ್ರವ್ಯಪ್ರಧಾನವಾದ ಪದ್ಯರಚನೆ ಬಂದವು. ಇಟ್ಟರೆ ಸಗಣಿಯಾದೆ, ನೊಗವನೆತ್ತಿ ಕೊರಳೊಳಿಡುವ ಪಾಡಿಲ್ಲ ಎಂಬಂತಹ ರಚನೆಗಳು ಜನಪ್ರಿಯವಾದವು. ಇಷ್ಟಾದರೂ ಇವುಗಳ ಕರ್ತೃತ್ವ ನಿಗೂಢವಾಗಿಯೇ ಇದೆ. ಮಕ್ಕಳಿಗೆ ಕಥೆ ಹೇಳಲೆಂದೇ ನೀತಿಚಿಂತಾಮಣಿಯಂಥ ಪಠ್ಯಪುಸ್ತಕದ ಮೂಲಕ ಮಕ್ಕಳ ಸಾಹಿತ್ಯವನ್ನು ಬೆಳೆಸಿದವರಲ್ಲಿ ಎಂ. ಎಸ್ ಪುಟ್ಟಣ್ಣ (೧೮೫೪- ೧೯೩೦) ಅಗ್ರಗಣ್ಯರು ಪ್ರಾಥಮಿಕ ಶಾಲೆಯ ಮೂರನೆಯ ವರ್ಗದ ಒಂದನೆಯ ತರಗತಿಗೆ ಎಂ. ಎಸ್. ಪುಟ್ಟಣ್ಣನವರ ‘ಕನ್ನಡ ಒಂದನೆಯ ಪುಸ್ತಕವು ಪಠ್ಯವಾಗಿತ್ತು’ ೧೫೦ ಕಥೆಗಳ ಸಂಕಲನವನ್ನು ಹೊರತಂದ ಎಂ. ಎಸ್. ಪುಟ್ಟಣ್ಣ ಅವರನ್ನು ಮರೆಯುವಂತಿಲ್ಲ. ಪುರಾಣ, ಇತಿಹಾಸ, ಆದರ್ಶ ಬದುಕನ್ನು ಪರಿಚಯಿಸುತ್ತ ಮಕ್ಕಳನ್ನು ರಂಜಿಸುವಲ್ಲಿ ಈ ಕಥಾ ಸಂಕಲನ ಯಶಸ್ವಿಯಾಯಿತು. ಮಾತ್ರವಲ್ಲ: ಇಂದಿಗೂ ಪ್ರತ್ಯೇಕ ಕಥಾ ಸಂಕಲನವಾಗಿ ಮತ್ತು ಪಠ್ಯಪುಸ್ತಕದ ಪಾಠಗಳಾಗಿ ಮಾನ್ಯವಾಗಿದೆ. ಇದರಿಂದ ಪ್ರೇರಿತರಾದ ಪುಟ್ಟಣ್ಣ ಅವರು ಮಾಡಿದುಣ್ಣೋ ಮಹಾರಾಯ ಎಂಬ ಕಾದಂಬರಿಯನ್ನೂ ಪ್ರಕಟಿಸಿದ್ದು ವಿಶೇಷ. ಜತೆಗೆ ಅವರು ಬರೆದಿರುವ ನೀತಿಚಿಂತಾಮಣಿ ಅತ್ಯಂತ ಜನಪ್ರಿಯವಾದ ಮಕ್ಕಳ ಪುಸ್ತಕ. ಇದರಲ್ಲಿ ವಿಶೇಷ ಕಥೆಗಳಿದ್ದು ಮಕ್ಕಳಿಗೆ ನೀತಿಯನ್ನು ಹೇಳುವುದರೊಂದಿಗೆ ರಂಜನೀಯವಾಗಿ ಮನವರಿಕೆ ಮಾಡಿಕೊಡುವ ಶೈಲಿಯನ್ನು ಬಳಸಿರುವುದು ಪುಟ್ಟಣ್ಣ ನವರ ವಿಶೇಷತೆ. ಇದರಿಂದಲೇ ಇಂದಿಗೂ ಸಹ ಸಂಪುಟದ ಅನೇಕ ಕಥೆಗಳು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡಿರುವುದು ಗಮನಾರ್ಹ.

ಕನ್ನಡದ ಹಿರಿಯ ಸಾಹಿತಿಗಳು, ಖ್ಯಾತ ಸಂಶೋಧಕರೂ ಆದ ಎಸ್. ಜಿ. ನರಸಿಂಹಾಚಾರ್ಯರು (೧೮೬೨) ಬಾಲಸಾಹಿತ್ಯಕ್ಕೆ ಅಮೂಲ್ಯಕೊಡುಗೆಯನ್ನು ನೀಡಿದ್ದಾರೆ. ಇವರು ರಚಿಸಿರುವ ಗೋವಿನಬಾಳು, ಹೊಗೆಯ ಗಾಡಿ ಅತ್ಯಂತ ಜನಪ್ರಿಯವಾದ ಕೃತಿಗಳು. ಮಕ್ಕಳೂ ಕೂಡಾ ಇಂತಹ ಕವಿತೆಗಳನ್ನು ಆಸಕ್ತಿಯಿಂದಲೇ ಸ್ವೀಕರಿಸುತ್ತಿದ್ದರು. ಇಂದಿಗೂ ಸಹ ಅವುಗಳಲ್ಲಿರುವ ಪದ್ಯಗಳನ್ನು ಪಠ್ಯವಾಗಿಯೋ ಮಕ್ಕಳ ಕಂಠಪಾಠಕ್ಕೋ ಬಳಸುವ ರೂಢಿಯಿದೆ. ಕಾಳಿದಾಸನ ರಘುವಂಶದಿಂದ ದಿಲೀಪಚರಿತೆ, ಅಜನೃಪಚರಿತೆಯನ್ನು ಅವರು ಅನುವಾದಿಸಿದ್ದಾರೆ. ಇವು ಪುಟ್ಟ ಷಟ್ಪದಿಗಳಾಗಿದ್ದು ನಿರರ್ಗಳವಾದ ಸುಂದರ ರಚನೆಯಾಗಿವೆ. ಶಾಲೆಯ ಮಕ್ಕಳ ಭಾವಗ್ರಹಣ ಸಾಮರ್ಥ್ಯವನ್ನು ಹಿಡಿದು ಅವರಲ್ಲಿ ಭಾಷೆ, ಸಾಹಿತ್ಯಗಳ ಅಭಿರುಚಿ, ಆಸಕ್ತಿಗಳನ್ನು ಬೆಳೆಸಲು ಪಠ್ಯ ಸಮಿತಿಗಳ ನಿಯಮಾನುಸಾರ ಅವರು ಕನ್ನಡ ನಾಲ್ಕನೆಯ ಮತ್ತು ಆರನೆಯ ಪುಸ್ತಕಗಳನ್ನು (೧೮೯೭-೧೯೦೨) ಹಿಂದೂದೇಶದ ನಾಗರಿಕ, ಬಾಲ ಭೂವಿವರಣೆ (೧೯೦೨-೧೯೧೧) ಎಂಬುದನ್ನು ರಚಿಸಿದರು. ಈಸೋಪನ ನೀತಿಕತೆಗಳು, ಗಲಿವರನ ದೇಶಸಂಚಾರ ಕೃತಿಗಳು ಅಲಭ್ಯವಾಗಿದ್ದು, ವಿದ್ಯಾದಾಯಿನಿ ಪತ್ರಿಕೆಯಲ್ಲಿ ಅವರು ಮಕ್ಕಳಿಗಾಗಿಯೇ ಬರೆದ ಕೆಲವು ವಸ್ತು ಪಾಠಗಳು ಜನಪ್ರಿಯವಾಗಿದೆ. ಜಯರಾಯಾಚಾರ್ಯರು ಅನುಕರಣಗೀತಗಳಲ್ಲಿ ಹೆಚ್ಚಿನ ಸಾಧನೆ ಮಾಡಿದವರು. ಅವರ ನವಿಲೆ, ನವಿಲೆ ನಲಿದಾಡು, ಚಂದ್ರನನ್ನು ತೋರಿಸುವ ಹಾಡು, ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ಎಂಬ ಹಾಡುಗಳು ಮುಖ್ಯವಾಗಿವೆ ಸೋಸಲೆ ಅಯ್ಯಾ ಶಾಸ್ತ್ರಿಗಳು ರಚಿಸಿದ ಸ್ವಾಮಿ ದೇವನೆ ಲೋಕ ಪಾಲನೆ ಹಾಡು ಪ್ರಾರ್ಥನಾ ಗೀತವಾಗಿ ಬಹಳ ಕಾಲ ರೂಢಿಯಲ್ಲಿದ್ದು, ಜನಪ್ರಿಯವಾಗಿದೆ.

ಮಂಡ್ಯ ಜಿಲ್ಲೆ ಮದ್ದೂರಿನ ದೇಶಹಳ್ಳಿಯವರಾದ ಎಂ.ಎಲ್. ಶ್ರೀಕಂಠೇಗೌಡ ಅವರು ಶ್ರೇಷ್ಠ ಅನುವಾದಕರಂತೆ ಮಕ್ಕಳ ಸಾಹಿತ್ಯಕ್ಕೆ ಘನವಾದ ಕಾಣಿಕೆ ನೀಡಿದ್ದಾರೆ. ಅವರು ಸೃಜಿಸಿದ ಪುಷ್ಪಮಂಜರಿಯ ಕಥೆ, ಕೋತಿಯೂ ಕನ್ನಡಿಯೋ, ಭೂಲೋಕದಲ್ಲಿ ಯಮ, ಬುದ್ಧಿವಂತರ ಕಥೆ, ಭಕ್ತಿಪಾಠ ಮೊದಲಾದ ಕಥಾಸಂಕಲನಗಳು ಜನಪದ ಧಾಟಿಯಲ್ಲಿದ್ದು ಕುತೂಹಲಭರಿತವಾಗಿವೆ. ಕಿತ್ತೂರು ರಾಣಿ, ಗನೂರು ರಾಣಿ ಎಂಬ ಐತಿಹಾಸಿಕ ಜೀವನ ಚಿತ್ರಗಳನ್ನು ರಚಿಸಿದ್ದರೂ ಪ್ರೌಢವೆನ್ನಿಸಿವೆ. ಆದರೂ ಮಕ್ಕಳಿಗೆ ಐತಿಹಾಸಿಕ ವಿಚಾರಗಳನ್ನು ತಿಳಿಯಲು ಪ್ರೇರಕವಾದಂತಿವೆ.

ಮೈಸೂರು ಪ್ರಾಂತದಲ್ಲಿ ಪಠ್ಯಪುಸ್ತಕಗಳ ಮೂಲಕ ಮಕ್ಕಳ ಸಾಹಿತ್ಯ ಪ್ರಸಾರಗೊಂಡಂತೆ ಧಾರವಾಡ ಪ್ರಾಂತದಲ್ಲೂ ಹಲವರು ದುಡಿದಿದ್ದಾರೆ. ಬೆಳಗಾಂ ನಾರ್ಮಲ್ ಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದ ಗಂಗಾಧರೇಶ್ವರ ಮಡಿವಾಳೇಶ್ವರ ತುಮರಿ (೧೯೨೭-೧೮೭೭) ಅವರು ರಚಿಸಿದ ಕನ್ನಡ ಕವಿತಾಸಂಗ್ರಹ ಎಂಬ ಎರಡು ಸಂಕಲನಗಳು ಸರಳ ಪದ್ಯಗಳಿಂದ ಕೊಡಿದ್ದು ಬಹುಕಾಲ ಪಠ್ಯವಾಗಿದ್ದವು. ಗೌರೀಶ ಕಾವ್ಯನಾಮವನ್ನು ಹೊಂದಿದ್ದ ಶಿವರುದ್ರಪ್ಪ ಸೋಮಪ್ಪ ಕುಲಕರ್ಣಿ ಅವರು ಬರದ ಪದ್ಯಗಳು, ನನ್ನ ತಾಯಿ, ನಾಡನೆಲೆಗಾರ ಕಥಾಸಂಕಲನಗಳು ಅಂದಿನ ಪಠ್ಯಪುಸ್ತಕಗಳ ಮೂಲಕ ಮಕ್ಕಳು ಸಾಹಿತ್ಯವನ್ನು ಅರಿಯುವಂತಾಯಿತು. ಗದ್ದಿಗೆಯ್ಯ ಹೊನ್ನಾಪುರಮಠ ಅವರು ರಚಿಸಿದ ನೀತಿಮಂಜರಿ ಅಪರೂಪದ ಕೃತಿ. ಸರಳ ಓಜಸ್ವಿ ಗದ್ಯಶೈಲಿಯಲ್ಲಿ ಇವರು ಭಾಷಾಂತರಕಾರರಾಗಿಯೂ ಪ್ರಸಿದ್ಧರು. ಕನ್ನಡ ಕಾವ್ಯಸಿರಿಯನ್ನು ಜೀವಂತಗೊಳಿಸಿದರು.

ಉತ್ತರ ಕರ್ನಾಟಕ ಗದ್ಯಶ್ಯೆಲಿಗೆ ರೂಪು ಕೊಟ್ಟವರಲ್ಲಿ ವೆಂಕಟರಂಗೋಕಟ್ಟಿ (೧೮೩೩-೧೯೦೯) ಪ್ರಮುಕರು. ಅಧ್ಯಾಪಕ, ನಾಟಕಕಾರ, ಪತ್ರಕರ್ತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದಿರುವ ಅವರು ಕನ್ನಡ ಭಾಷಾಭಿವೃದ್ಧಿಗಾಗಿ ಅಹರ್ನಿಶಿ ದುಡಿದಿದ್ದಾರೆ. ಕನ್ನಡ ೫ ಮತ್ತು ೬ ನೆಯ ಪುಸ್ತಕಗಳನ್ನು ರಚಿಸಿ ಮಕ್ಕಳಸಾಹಿತ್ಯವನ್ನು ಸಂಪನ್ನಗೊಳಿಸಿದರು. ಅವರು ತಯಾರಿಸಿದ ಕನ್ನಡ ಆರನೆಯ ಪುಸ್ತಕ, ಸರಳ ಪದ್ಯ-ಗದ್ಯಗಳ ಸಂಕಲನವಾಗಿದೆ. ಶಾಲೆಗೆ ಸಂಬಂಧಿಸಿದಂತೆ ಲಘು ವ್ಯಾಕರಣ, ಭೂಗೋಳಶಾಸ್ತ್ರ, ಬೊಗೋಳ ವಿದ್ಯಾ ಮೊದಲಾದ ಪುಸ್ತಕಗಳನ್ನು ಸಿದ್ಧಪಡಿಸಿದರು. ಅವರು ಅಂದು ರಚಿಸಿದ ಕನ್ನಡ ೬ನೆಯ ಪುಸ್ತಕದಲ್ಲಿನ ವಿಜ್ಞಾನ, ಸಾಹಿತ್ಯ, ತತ್ವಜ್ಞಾನ, ಶರೀರಸಾಸ್ತ್ರ ಮೊದಲಾದವುಗಳನ್ನು ಕುರಿತು ಪಾಠಗಳನ್ನು ಆವಲೋಕಿಸಿದರೆ ಈಗಿನ ಶಿಕ್ಷಣ ಮಟ್ಟ ಬಹುಕುಸಿದಿದೆ ಅನ್ನಿಸಿದೆ ಇರದು. ಅಷ್ಟು ಶ್ರೇಷ್ಟ ದರ್ಜೆಯ ಪಠ್ಯಪುಸ್ತಕಗಳನ್ನು ರಚಿಸಿದ ಹೆಗ್ಗಳಿಕೆ ಅವರದ್ದು. ಮಕ್ಕಳಸಾಹಿತ್ಯದಸಾರಸ್ವತ ಲೋಕಕ್ಕೆ ವೆಂಕಟರಂಗೋಕಟ್ಟಿ ಅವರು ಅಮೂಲ್ಯ ಕೊಡುಗಡ ನೀಡಿದ್ದಾರೆ.

ಶಿಕ್ಷಣ ತಜ್ಞರಾಗಿದ್ದ ಡೆಪ್ಯೂಟಿ ಚನ್ನಬಸಪ್ಪ (೧೮೩೪-೧೮೮೧) ಅವರು ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಗೌರವವನ್ನು ತಂದುಕೊಟ್ಟವರು. ಕನ್ನಡ ಶಾಲೆಗಳ ಸ್ಥಾಪನೆಯೊಂದಿಗೆ ಇಂಗ್ಲಿಷ್-ಕನ್ನಡ ನಿಘಂಟು ರಚನೆ ಮತ್ತು ಕನ್ನಡ ಕ್ರಮಿಕ ಪುಸ್ತಕಗಳನ್ನು ರೂಪಿಸುವಲ್ಲಿ ವಿಶೇಷವಾಗಿ ದುಡಿದಿದ್ದಾರೆ. ಶಾಂತಕವಿ ನಾಮಾಂಕಿತದ ಬಾಳಾಚಾರ್ಯ ಗೋಪಾಳಾಚಾರ್ಯಸಕ್ಕರಿ (೧೮೫೬-೧೯೨೦) ಅವರು ಕವಿ, ಕೀರ್ತನಕಾರರಾಗಿ ಪ್ರಸಿದ್ಧರು. ಅಧ್ಯಾಪಕರಾಗಿದ್ದ ಶಾಂತಕವಿ ಅವರು ೩೫ ನಾಟಕಗಳನ್ನು ರಚಿಸಿ ಕನ್ನಡ ರಂಗಭೂಮಿಗೆ ಹೊಸಪಥವನ್ನು ತೆರೆದರು. ಬಯಲಾಟ, ನಾಟಕದ ಪದ್ಯಗಳನ್ನು ಹಾಡಿ ಪ್ರಸಾರ ಮಾಡಿದರು ಕನ್ನಡ ದಾಸಯ್ಯ, ರಕ್ಷಿಸು ಕರ್ನಾಟಕ ದೇವಿಯಂಥ ಕವನಗಳು ಜನಪ್ರಿಯವಾಗಿವೆ. ಗೌರೀಶ ಅಂಕಿತದ ಶಿವರುದ್ರಪ್ಪ ಸೋಮಪ್ಪ ಕುಲಕರ್ಣಿ (೧೮೬೯-೧೯೦೮) ಹಾಗೂ ಗ. ಹ. ಹೊನ್ನಾಪುರಮಠ (೧೮೭೦-೧೯೩೩) ಇವರು ಸಾಧನೆಯೂ ಕೂಡ ಪ್ರಾತಃಸ್ಮರಣೀಯವಾದುದು. ಇವರು ಮಕ್ಕಳ ಪಠ್ಯಪುಸ್ತಕ ರಚನೆಯಲ್ಲಿ ವೆಂಕಟರಂಗೊಕಟ್ಟಿ, ಗಂಗಾಧರೇಶ್ವರ ಮಡಿವಾಳೇಶ್ವರ ತುರಮರಿ ಅವರೊಂದಿಗೆ ದುಡಿದವರಾಗಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಭಾಗದಿಂದ ಮಹತ್ವದ ಮಕ್ಕಳ ಸಾಹಿತಿಗಳು ಬಂದಿದ್ದಾರೆ. ಅಂಥವರಲ್ಲಿ ಪಂಜೆ ಮಂಗೇಶರಾಯರು (೧೮೭೪-೧೯೩೭ ಕನ್ನಡ ನಾಡು-ನುಡಿ-ಶಿಕ್ಷಣಕ್ಕಾಗಿ ಸಲ್ಲಿಸಿರುವ ಸೇವೆ ಅಪಾರ, ಪಂಜೆ ಅವರು ಮಕ್ಕಳಿಗಾಗಿ ಪದ್ಯ ಪುಸ್ತಕಗಳನ್ನು ಸಂಪಾದಿಸಿದ್ದು, ಅದರಲ್ಲಿ ಕನ್ನಡ ಮೊದಲನೆಯ ಪದ್ಯಪುಸ್ತಕ ೧೯೧೨. ಎರಡನೆಯದು ೧೯೧೯, ಮೂರನೆಯದು ೧೯೨೭ ರಲ್ಲಿ ಪ್ರಕಟವಾಗಿದೆ. ಇವುಗಳಲ್ಲಿ ಅವರ ಸ್ವರಚಿತ ಕವನಗಳೂ ಸೇರಿವೆ. ಅಧ್ಯಾಪಕರಾಗಿದ್ದ ಪಂಜೆ ಅವರು ವಿದ್ಯಾರ್ಥಿಗಳಿಗೆ ಕನ್ನಡ ಕವಿತೆಯ ಸ್ವರೂಪವನ್ನು ಮನನ ಮಾಡಿಕೊಟ್ಟು ವಿಸ್ತೃತಗೊಳಿಸಿದರು. ಅವರು ಬರೆದ ನಾಗರಹಾವೇ, ಉದಯರಾಗ, ಸಂಜೆಹಾಡು, ಬೆಕ್ಕಿಗೆ ಗಂಟೆ ಕಟ್ಟುವವರಾರು, ಎಲ್ಲಿಭೂರಮೆದೇವಸನ್ನಿದಿ ಎಂಬ ಸುಂದರ ಕವನಗಳು ಮಕ್ಕಳನ್ನು ರಂಜಿಸಿದವು. ಇಲಿಗಳ ಥಕ್ಕಥೈ, ಗುಡುಗುಡು ಗುಮ್ಮಟ ದೇವರು, ಬಿಟ್ಟಿ ಬಸವಯ್ಯ, ಮೂರು ಕರಡಿಗಳು ಮೊದಲಾದ ಸ್ವಾರಸ್ಯಭರಿತ ಪುಟ್ಟ ಕಥಗಳು ಆಕರ್ಷಿಸಿದವು. ಮಕ್ಕಳ ಮನೊಭೂಮಿಕೆಯ ಹದವನ್ನು, ನವಿರಾದ ಬಯಕೆಯನ್ನು ಅರ್ಥಮಾಡಿಕೊಂಡು ಅವರನ್ನು ಪ್ರಪುಲ್ಲಗೊಳಿಸುವಂತೆ ಅಷ್ಟೇ ರಸವತ್ತಾಗಿ ಬರೆದ ಮಹತ್ವದ ಮಕ್ಕಳ ಸಾಹಿತ್ಯದ ಅಗ್ರಗಣ್ಯರೆಂದರೆ ಪಂಜೆ ಮಂಗೇಶರಾಯರು, ಮಕ್ಕಳ ಮೈ ಮರೆಸುವಂತಹ ಹಾಡಿ-ಕುಣಿಯುವಂಥ ಕವನ, ಕಥೆಗಳನ್ನು ಕೊಟ್ಟ ಆಚಾರ್ಯ ಪುರುಷ, ಮಕ್ಕಳಿಗಾಗಿಯೇ ತಮ್ಮ ಸಾಹಿತ್ಯ ಪ್ರಭೆಯನ್ನು ಮೀಸಲಿರಿಸಿದ ಅಪರೂಪದ ಸಾಹಿತಿ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಮಕ್ಕಳಿಗಾಗಿಯೇ ಬಲಮಂಡಲ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಮಕ್ಕಳ ಸಾಹಿತ್ಯವನ್ನು ಪ್ರಸಾರ ಮಾಡಿದ ಕ್ರಿಯಾಶೀಲರು. ಪಂಜೆ ಮಂಗೇಶರಾಯರು ಹಳೆ ಬೇರಿನ ಹೊಸ ಚಿಗುರಿಗಾಗಿ, ಕನ್ನಡ ನಾಡು ನುಡಿ ಶಿಕ್ಷಣಕ್ಕಾಗಿ ಕಳಕಳಿಯಿಂದ ಕೈಂಕರ್ಯವೆಸಗಿ ಹೊಸಗನ್ನಡ ಸಾಹಿತ್ಯದ ಪ್ರವರ್ತಕರಾಗಿ ತಮ್ಮ ಅಸಾಧಾರಣ ಬುದ್ಧಿಮತ್ತೆಯಿಂದ ಸಾಧಾರಣ ಜನರೂ ಅರಿತುಕೊಳ್ಳುವಂತಹ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಹನೀಯರು. ಪಂಜೆಯವರು ತಮ್ಮ ಹೊಸ ದೃಷ್ಟಿಕೋನಗಳಿಂದ, ಹೊಸ ಮೌಲ್ಯಗಳಿಂದ ಕನ್ನಡದ ಬದುಕಿಗೆ, ಕನ್ನಡ ಸಾಹಿತ್ಯಕ್ಕೆ ಹೊಸ ಚಾಲನೆ ನಿಡಿದರಲ್ಲದೆ ಪಂಡಿತಮಾನ್ಯರ ಕೈಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಶಿಕ್ಷಣ ಕ್ರಮದಲ್ಲಿ ಹೊಸತನವನ್ನು ತಂದರು. ಹೊಸಗನ್ನಡ ಸಾಹಿತ್ಯಕ್ಕೆ ಸಣ್ಣಕಥೆ, ಮಕ್ಕಳ ಕಥೆ, ಮಕ್ಕಳ ಕವನ, ಪ್ರಬಂಧ ಮೊದಲಾದ ಪ್ರಕಾರಗಳಲ್ಲಿ ದುಡಿದು ಅದರ ಪ್ರವರ್ತಕರೂ ಆದರು. ದಕ್ಷಿಣ ಕನ್ನಡದವರೇ ಆದ ತೋನ್ಸೆ ಮಂಗೇಶರಾಯರು ಯಾವುದೇ ಮಾದರಿ ವಿಜ್ಞಾನ ರೂಪಿಸಿದ ಧೀಮಂತರು. ಎಂ. ಎನ್. ಕಾಮತ್ ಅವರು ಸಂಪಾದಕರಾಗಿದ್ದ ಭೋಧಿನಿ ಪತ್ರಿಕೆಯ ಮೂಲಕ ಸ್ತ್ರೀಧರ್ಮ, ಗ್ರಾಮೋನ್ನತಿ ಮೊದಲಾದ ಅಂಶಗಳ ಜತೆಗೆ ಮಕ್ಕಳಿಗೆ ಉಪಯುಕ್ತ ವಾಗುವ ವಿಜ್ಞಾನ ಅಂಶಗಳನ್ನು ಬೆಳಕಿಗೆ ತಂದರು. ಪದಾರ್ಥ ವಿಜ್ಞಾನ ಶಾಸ್ತ್ರ ಸಸ್ಯ ಜಗತ್ತು ಹಗೂ ಪ್ರಾಣಿ ಪಕ್ಷಿ ಪ್ರಪಂಚವನ್ನು ಸಚಿತ್ರವಾಗಿ ದಾಖಲಿಸಿರುವ ಕೃತಿ ಕೂಡ ಅಷ್ಟೇ ಮಹತ್ವದ್ದು.

ಉಳ್ಳಾಲ ಮಂಗೇಶರಾಯರು ಶಿಕ್ಷಣದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದು ಬಾಲಸಾಹಿತ್ಯಕ್ಕೆ ಅವರ ಕೊಡುಗೆ ಹಿರಿದಾದುದು. ಮಾತಾಡೋ ರಾಮಪ್ಪ, ಬಿಟ್ಟಿ ಬಸವಯ್ಯ, ಜೋಡು ನಕ್ಷತ್ರ, ಅಜ್ಜಿ ಸಾಕಿದ ಮಗು ಮೊದಲಾದ ಪುಸ್ತಿಕೆಗಳು ಅವರಿಂದ ರಚಿತವಾದವು. ಸುವಾಸಿನಿ ಪತ್ರಿಕೆಯಲ್ಲಿ ಕೂಡ ದರ್ಗಾವತಿ, ವೀರಮತಿ, ಶೈಲಿನಿ ಮೊದಲಾದ ಕಥೆಗಳನ್ನು ಬರೆದರು. ಹೊಸಗನ್ನಡ ಪಾಠಮಾಲೆ ಎಂಬ ಪುಸ್ತಕವನ್ನು ಎಂಟನೆಯ ತರಗತಿಗಾಗಿ ರಚಿಸಿಕೊಟ್ಟರು. ಬಾಲಸಾಹಿತ್ಯದ ಪರಿಕಲ್ಪನೆಯನ್ನು ಈ ಕೃತಿಗಳಿಂದ ತಿಳಿಯಬಹುದಾಗಿದೆ.

ಮದ್ರಾಸ್ ಪ್ರಾಂತದ ಕನ್ನಡ ಮಕ್ಕಳಿಗೆ ಕೊರಡ್ಕಲ್ ಶ್ರೀನಿವಾಸ್ರಾವ್, ಉಗ್ರಾಣ ಮಂಗೇಶ್ ರಾಯರು, ಎಂ. ಎನ್. ಕಾಮತ್, ಐರೋಡಿ ಶಿವರಾಮಯ್ಯ, ಡಾ. ಕೆ. ಶಿವರಾಮಕಾರಂತರ ಕೊಡುಗೆ ದೊಡ್ಡದು. ಕೊರಡ್ಕಲ್ ಶ್ರೀನಿವಾಸರಾಯರು ಬರೆದ ಪದ್ಯಾವಳಿ ಸಂಕಲನದಲ್ಲಿದ್ದ ಶಿಶು ಗೀತೆಗಳು ಬಹುಜನಪ್ರಿಯವಾಗಿದ್ದವು. ಕೊರಡ್ಕಲ್ ಶ್ರೀನಿವಾಸರಾಯರಿಗೆ ಕನ್ನಡವೆಂದರೆ ಎಲ್ಲಿಲ್ಲದ ಅಭಿಮಾನ. ಸಾಹಿತ್ಯದ ಗಾಢ ಅಧ್ಯಯನ. ದಕ್ಷಿಣ ಕನ್ನಡ ಶಾಲೆಗಳಲ್ಲಿ ಇವರು ರಚಿಸಿದ ಪದ್ಯಾವಳಿ, ಕವನ ಸಂಗ್ರಹಗಳು ಅತ್ಯಂತ ಜನಪ್ರಿಯವಾಗಿತ್ತು. ೧೧ ಆವೃತ್ತಿಗಳನ್ನು ಕಂಡಿರುವ ಈ ಕೃತಿಗಳು ಅತ್ಯಂತ ರಂಜನಿಯವಾಗಿರುವುದರೊಂದಿಗೆ ಬೋಧಪ್ರದವೂ ಆಗಿದ್ದವು. ದಕ್ಷಿಣ ಕನ್ನಡದವರೇ ಆದ ಉಗ್ರಾಣ ಮಂಗೇಶರಾಯರು ೫೦ ಕೃತಿಗಳ ಕರ್ತೃ. ಮಕ್ಕಳಿಗಾಗಿಯೇ ಬರೆದ ಜನನ ಮರಣ, ಬಾರೆನ್ನ ಮುದ್ದು ಗಿಣಿ, ಹಕ್ಕಿ ಜಗತ್ತು, ಹಾಸಿಗೆ, ದೀರ್ಘ ಕವನಗಳಾದರೆ ಕಥೆಯಲ್ಲದ ಕಥೆ, ನಿದ್ದೆ, ಶಾಂತತೆ, ಕುರುಡರ ಕಥೆ, ನವೋದಯದ ಕವನಗಳಾಗಿದ್ದು ಮಕ್ಕಳ ಮನಸ್ಸನ್ನು ವಿಶೇಷವಾಗಿ ಸೆರೆಹಿಡಿದ ಸಂಪುಟಗಳು. ಐರೋಡಿ ಅವರ ಸದಾನಂದ ಪಾಠಶಾಲೆ ಕೃತಿ ಮಕ್ಕಳ ಬೌದ್ಧಿ ಬೆಳವಣಗೆಗೆ ಪೂರಕವಾದಂಥದ್ದು. ರಘುವಂಶ, ಹಿತೋಪದೇಶ, ಮುದ್ರಾರಾಕ್ಷಸ ಮೊದಲಾದ ಕೃತಿಗಳನ್ನು ಸರಳ ಭಾಷೆಯಲ್ಲಿ ರೂಪಾಂತರಿಸಿ ಕೊಟ್ಟರು. ಆರ್ಯನೀತಿ ಕಥಾವಳಿ, ಚರಿತ್ರೆ ಮತ್ತು ಮಕ್ಕಳ ಕಥೆಗಳು, ಚೊಕ್ಕ ಮಾತಿನ ಚಿಕ್ಕ ಕಥೆಗಳು ಮತ್ತು ಮಕ್ಕಳ ಕಥೆಗಳು ಎಂಬ ಶೀರ್ಷಿಕೆಗಳಿಂದ ಸೃಜಿಸಿದ ಮಕ್ಕಳ ಸಾಹಿತ್ಯ ಅಮೋಘವಾದುದು. ಜತೆಗೆ ಶಾಲಾ ವ್ಯಾಕರಣ, ಭಾಷಾ ಪಾಠಾವಳಿ, ಭೊಗೋಳ, ವಿಜ್ಞಾನ ವಿಚಾರಗಳನ್ನು ಮಕ್ಕಳಿಗೆ ತಿಳಿಸುವಲ್ಲಿ ಅಪರೂಪದ ಕೃತಿಗಳನ್ನು ರಚಿಸಿದರು.ಅಂದಿನ ದಿನಗಳಲ್ಲಿ ಪ್ರಚಾರದಲ್ಲಿದ್ದ ಸ್ವಧರ್ಮ, ಸುಬೋಧ, ಕರ್ನಾಟಕ ಕೇಸರಿ. ಸುವಾಸಿನಿ ಮೊದಲಾದ ಪತ್ರಿಕೆಗಳೂ ನೀತಿ ಕಥೆಗಳನ್ನು ಪ್ರಕಟಿಸಿದವು. ಆರ್ಯನೀತಿಕಥೆಗಳು, ಹರ್ಷಚರಿತೆ, ರಾಮಾಯಣ, ಮಹಾಭಾರತ ಕಥೆಗಳು ಪ್ರಧಾನವಾಗಿದ್ದವು. ಇವು ಮಕ್ಕಳ ಮನಸ್ಸನ್ನು ಗೆದ್ದ ಪ್ರಕಾರಗಳಾಗಿವೆ.

ಎಂ.ಎನ್ ಕಾಮತ್ ಅವರು ಭೊಗೋಳದ ಅಧ್ಯಾಪಕರಾಗಿದ್ದರೂ ಕಥೆ, ಕವನ, ಹರಟೆಗಳನ್ನು ಬರೆದರು. ರಂಗಭೂಮಿಗಾಗಿ ದುಡಿದವರು. ಕೃಷ್ಣಸಂಧಾನ, ಚಂದ್ರಹಾಸ, ಅಶ್ವತ್ಥಮೃಗ ಮೌರ್ಯಸಿಂಹಾಸನ, ಕ್ಷಾತ್ರತೇಜಸ್ಸು, ಮಾಧ್ಯಮ ವ್ಯಾಯೋಗ ಅರ್ಜುನನ ಚಾತುರ್ಮಾಸ ಸದ್ರಿಸುಬ್ಬ ಮೊದಲಾದ ನಲವತ್ತು ನಾಟಕಗಳನ್ನು ಬರೆದು ವಿವಿಧ ವೇದಿಕೆಗಳಲ್ಲಿ ಆಡಿಸಿದವರು. ಮಕ್ಕಳ ಶಾಲಾ ವಾರ್ಷಿಕೋತ್ಸವ ಅವರಿಗೆ ವೇದಿಕೆಯಾಗಿತ್ತು! ಎಂಟನೆಯ ತರಗತಿ ತನಕ ಪಠ್ಯಪುಸ್ತಕ ರಚಿಸಿದ್ದ ಇವರ ಬಾಲಕಳೆದನರಿಯ ಉಪದೇಶ, ಸಂತೆಯ ಕುರುಡನ ಹಾಡು ಹೆಚ್ಚು ಪ್ರಸಿದ್ದವಾಗಿವೆ, ಮಕ್ಕಳ ಸಾಹಿತ್ಯಕ್ಕೆ ಅನನ್ಯ ಕಾಣಿಕೆಗಳಾಗಿವೆ ವಿಶೇಷವೆಂದರೆ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಶಾಲಾ ಪ್ರಾರ್ಥನೆಗಾಗಿ ಇಂಗ್ಲಿಷ್ ಪದಗಳನ್ನು ಮಕ್ಕಳಿಂದ ಹಾಡಿಸುತ್ತಿದ್ದಾಗ ರವೀಂದ್ರರ ಗೀತಾಂಜಲಿಯ ಸಾಲುಗಳನ್ನು ಅನುವಾದಿಸಿ ಪ್ರಾರ್ಥನಾ ತೀತವನ್ನಾಗಿ ರೂಪಿಸಿದರು. ಮತ್ರವಲ್ಲ: ಸ್ವತಃ ಸಂಗೀತ ಸಂಯೋಜನೆಯನ್ನು ಮಾಡಿದರು. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಕೊರತೆ ಇದೆ ಎನ್ನುವವರು ಎಂ. ಎನ್. ಕಾಮತ್ ಅವರ ಪುಸ್ತಕಗಲನ್ನು ಅವಶ್ಯವಾಗಿ ನೋಡಬೇಕು.

ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿ ಕರ್ನಾಟಕ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇಕರ್ ಮಂಜಪ್ಪ ಅವರು ಮಕ್ಕಳಿಗಾಗಿಯೇ ಪ್ರತ್ಯೇಕ ಸಾಹಿತ್ಯ ಮಾಲೆಯನ್ನು ಆರಂಭಿಸಿದರು ಏಕಲವ್ಯನ ಕಥೆ, ಬಸವಚರಿತ್ರೆ, ಅಕ್ಕನ ಉಪದೇಶ, ಅಣ್ಣನ ಪ್ರೀತಿ ಮೊದಲಾದ ಕೃತಿಗಳನ್ನು ಬರೆದರು. ಪಂಡಿತ ಚ. ಕವಲಿ ಅವರು ರಚಿಸಿದ ಕನ್ನಡ ಚೆನ್ನುಡಿ ಮಾತಿನ ಮುನ್ನುಡಿ, ಶಂಕರಭಟ್ಟರ ಚೆಲುಗನ್ನಡ ಪಾಠಶಾಲೆ, ಚೆಲುಗನ್ನಡ ಪದ್ಯಶಾಲೆ ವರದರಾಜ ಹುಯಿಲಗೋಳರು ರಚಿಸಿದ ಸಾಹಿತ್ಯ ಮಂಜರಿ ಮಕ್ಕಳ ಸಾಹಿತ್ಯ ಇತಿಹಾಸದ ದೃಷ್ಟಿಯಿಂದ ನೆನೆಯುವಂಥವು.

ಹೊಯ್ಸಳ ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿರುವ ಅರಗಂ ಲಕ್ಷ್ಮಣರಾಯರು ಮಕ್ಕಳ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ನೀಡಿದ ಧೀಮಂತ ಚೇತನ. ಮಕ್ಕಳು, ಹಿರಿಯರು, ಪಂಡಿತರಿಗೂ ಒಪ್ಪಿಗೆಯಾಗುವಂಥ ಸಮನ್ವಯ ಸಾಹಿತ್ಯ ರಚನೆಯಿಂದ ಶಿಶು ಸಾಹಿತ್ಯದ ಪ್ರವರ್ತಕರೆಂಬ ಅಭಿಧಾನಕ್ಕೆ ಪಾತ್ರರಾದರು. ಇವರ ಗದ್ಯ-ಪದ್ಯಗಳೆರಡು ರಂಜನಿಯವಾದವು. ಮಕ್ಕಳಿಗೆ ಮುದ ನಿಡುವ ಚೇತೋಹಾರಿ ರಚನೆಗಳಾಗಿವೆ. ಹೊಯ್ಸಳರ ಬಂದಸಂತಮ್ಮಣ್ಣ, ಸಕ್ಕರೆಗೊಂಬೆ, ರಾಜನ ಬುದ್ಧಿವಂತಿಕೆ, ಆನೆ, ಇರುವೆ ಮೊದಲಾದವು ಮಕ್ಕಳಿಗೆಂದೇ ಬರೆದ ಕಥಾಮಾಲಿಕೆಗಳು, ವೀರಕುಮಾರ, ಬದುಕುವಮಂತ್ರ ಮೊದಲಾದವು ಯುವಕರಿಗೆಂದು ಬರೆದಂಥವು. ಮಕ್ಕಳನ್ನು ನಗಿಸಲೇಂದೇ ಮಗುವಿನ ಕುಗು ಕೃತಿಯನ್ನು ಪ್ರಕಟಿಸಿದ್ದ ಅವರು ಮಕ್ಕಳ ಅಕ್ಕರೆಯನ್ನು ಗಳಿಸಿದ ವಿಶಿಷ್ಟ ಕವಿ. ಮಕ್ಕಳ ನಗುವಿನ ಎಲ್ಲಾ ಆಶಯಗಳನ್ನು, ಸೂಕ್ಷ್ಮತೆಯನ್ನು ಬಲ್ಲ ಅವರ ಮಕ್ಕಳ ಹಾಡುಗಳನ್ನೇ ರಚಿಸಿದರು. ಆಮುಲಕ ಹಿರಿಯರನ್ನು ಪ್ರಪುಲ್ಲಗೊಳಿಸಿದರು. ಅವರು ಚಂದಮಾಮ ಸಂಕಲನಕ್ಕೆ ಬರೆದ ಚಂದಮಾಮ ಎಂಬ ಕವಿತೆ ಇಂದಿಗೂ ಮಕ್ಕಳ ತುಟಿಯಲ್ಲಿ ಲಾಸ್ಯವಾಡುವಂಥದ್ದು. ಇಡೀ ಜಗತ್ತನ್ನೇ ಸಾಹಿತ್ಯದ ವಸ್ತುವಾಗಿಸಿಕೊಂಡ ತಿರುಗಮುರುಗ ಪುಸ್ತಿಕೆ ೧೯೨೩ ರಲ್ಲಿ ಪ್ರಕಟವಾಗಿದ್ದು ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ತಂದಿತು. ಸಂಗೀತ, ಚಿತ್ರ ಹಾಗೂ ರಂಜನೀಯ ಸಾಹಿತ್ಯದಿಂದ ಜನಪ್ರಿಯರಾದ ಹೊಯ್ಸಳರು ಇಂದಿಗೂ ಮನೆ ಮಾತಾಗಿದ್ದಾರೆ.

ಬೆಳ್ಳಾವೆ ವೆಂಕಟನಾರಾಣಪ್ಪನವರು ಪ್ರೌಢ ಸಾಹಿತಿಯಾದಂತೆ ಶಿಕ್ಷಣ ತಜ್ಞರು, ಮಕ್ಕಳ ಸಾಹಿತಿಯು ಆಗಿದ್ದಾರೆ. ಕಿರು ಕಾದಂಬರಿಯಂತಿರುವ ಗುಣಸಾಗರ ಕೃತಿ ವ್ಹಿಟ್ಟಿಂಗ್ ಟನ್ ನ ಚರಿತ್ರೆಯನ್ನು ಆಧರಿಸಿದ್ದಾಗಿದೆ. ವಿದೇಶಿ ಕಥೆಗಳನ್ನು ಕನ್ನಡ ಭಾಷೆಗೆ ತಂದಿದ್ದಲ್ಲದೆ ಜೀವವಿಜ್ಞಾನ ಕೃತಿಯನ್ನು ಅತ್ಯಂತ ಸರಳವಾಗಿ ರೂಪಿಸಿದರು. ಬೇಕಲ ರಾಮನಾಯಕ ಅವರು ಹೆಚ್ಚು ಪ್ರಚಾರಕ್ಕೆ ಬಾರದ ಧೀಮಂತ ಕವಿ. ಮಕ್ಕಳಿಗಾಗಿಯೇ ಬರೆದ ಸಚಿತ್ರ ಬಾಲಗೀತೆ ವಿಶೇಷ ಕೃತಿ. ಅದರಲ್ಲಿ ಅನ್ಯರ ರಚನೆಗಳನ್ನು ಸೇರಿಸಿಕೊಂಡಿದ್ದರು. ಅಧ್ಯಾಪಕರಾಗಿದ್ದ ಅವರು ಮಕ್ಕಳಿಗೆ ಕವನಗಳನ್ನು ಹೇಳಿಕೊಡುತ್ತಾ ಸಂಭ್ರಮಿಸಿದವರು. ಅಭಿನಯ ಗೀತೆಗಳನ್ನು ರಚಿಸಿದ ಅವರು ಗಾಳಿಪಟ, ಚೆಂಡು, ಬುಗರಿ ಮೊದಲಾದ ಆಟಿಕೆಗಳನ್ನು ಕುರಿತು ರಚಿಸಿದ ಕವನಗಳು ಸೊಗಸಾಗಿವೆ. ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದ ಕಮಗೋಡು ನರಸಿಂಹಶಾಸ್ತ್ರಿಗಳು ಪ್ರಭಾತ ಭಾರತ ಎಂಬ ಕೈಬರಹದ ಶಾಲಾಪತ್ರಿಕೆಯನ್ನು ಹೊರಡಿಸಿ ಮಕ್ಕಳ ಮನಸ್ಸನ್ನು ಸಾಹಿತ್ಯದೆಡೆಗೆ ಸೆಳೆದವರು. ಸೀತಾ ವನವಾಸ, ಜೋತಿಷ್ಯ ಕಲ್ಪದ್ರುಮ ಎಂಬ ಕೃತಿಗಳನ್ನು ಅನುವಾದಿಸಿದರು. ಕನ್ನಡ ಹಿತೋಪದೇಶ, ಕನ್ನಡ ಪಂಚತಂತ್ರ ಕೃತಿಗಳು ಮಕ್ಕಳ ಮನವನ್ನು ಗೆದ್ದಿವೆ. ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಎಂದೇ ಪ್ರಸಿದ್ಧರಾಗಿರುವ ಗಳಗನಾಥರು ಸುರಸ ಗ್ರಂಥಮಾಲೆಯನ್ನು ಆರಂಭಿಸಿ ಮಾಸ ಪತ್ರಿಕೆಗಳಲ್ಲಿ ಮಕ್ಕಳ ಲೇಖನಗಳನ್ನು ಬರೆದು ಪ್ರಕಟಿಸಿದರು.

ಗದಿಗೆಯ್ಯ ಹೊನ್ನಾಪುರ ಮಠ ಅವರು ಉತ್ತರ ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಕಾರಣರಾದಂತೆ ಭಾರತದ ಮಹಾಪುರುಷರ ಚರಿತ್ರೆಯನ್ನು ಬರೆದವರು. ಬಸವೇಶ್ವರ ಚರಿತ್ರೆ, ಸ್ವಾಮಿ ರಾಮತೀರ್ಥರ ಚರಿತ್ರೆ, ರಾಮಕೃಷ್ಣ ಪರಮಹಂಸರ ಸತ್ಕಥೆಗಳು ಮಹತ್ವದವು. ಮಕ್ಕಳಿಗಾಗಿ ರಚಿಸಿದ ಪಾಶ್ಚಾತ್ಯ ಕಥಾ ಪಪ್ರಂಚವನ್ನು ಪರಿಚಯಿಸುವ ಅಲ್ಲಾವುದ್ದೀನ ಮತ್ತು ಒಂದು ಸೀಜಿಗವಾದ ದೀಪ, ಅಲಿಬಾಬ ಮತ್ತು ೪೦ ಮಂದಿ ಕಳ್ಳರು ಎಂಬ ಕೃತಿಗಳು ಹೆಚ್ಚು ಜನಪ್ರಿಯವಾದಂಥವು.

ಡಾ. ಎ. ಆರ್. ಕೃಷ್ಣಶಾಸ್ತ್ರೀ ಅವರ ನಿರ್ಮಲಭಾರತೀ, ದೇವುಡು ನರಸಿಂಹಶಾಸ್ತ್ರೀ ಅವರ ದೇಶಾಂತರದ ಕಥೆಗಳು, ಬುದ್ಧಿಯ ಕಥೆಗಳು ಎಂಬ ಕಥಾಸರಣಿಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಸುಬೋಧರಾಮರಾಯರು ಮಕ್ಕಳಲ್ಲಿ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥ ಮಹಾನ್ ವ್ಯಕ್ತಿಗಳ ಜೀವನಚಿತ್ರವನ್ನು ಕಥಾಮಾದರಿಯಲ್ಲಿ ಹೊರತಂದರು. ಚಂದ್ರಹಾಸ, ಸಾವಿತ್ರಿ, ಶಿವಾಜಿ, ಗಾಂಧೀಜಿ, ಗೋಖಲೆ, ತಿಲಕ್, ಮೊದಲಾದವರ ಆದರ್ಶಮಯ ಬದುಕು ಚಿತ್ರಣಗೊಂಡಿದೆ.ಎಲ್ಲ ಮತಧರ್ಮಗಳ ಪ್ರಮುಖರನ್ನು ಪರಿಚಯಿಸಿದ ಕೀರ್ತಿ ರಾಮರಾಯರಿಗೆ ಸಲ್ಲುತ್ತದೆ. ಜೀವನಚಿತ್ರಗಳನ್ನು ರೇಖಿಸುತ್ತಲೇ ಆದರ್ಶ ಬದುಕಿನ ಅರಿವನ್ನು ಮೂಡಿಸಿದ ಅವರ ಸಾಹಿತ್ಯ ಮೌಲಿಕವಾದುದು.

ಮಕ್ಕಳ ಸಾಹಿತ್ಯದ ಅನನ್ಯ ಪ್ರತಿಭೆ ಜಿ.ಪಿ. ರಾಜರತ್ನಂ ಸಂಶೋಧಕರೂ, ವಿದ್ವಾಂಸರೂ ಆಗಿದ್ದ ಅವರು ಇತಿಹಾಸವನ್ನು ಮೊಗೆದು ತೆಗೆದು ಬರೆದ ಸಾಹಿತ್ಯ ಚಿರಯುವಾದುದು. ಬೌದ್ಧ, ಹೈನ, ವೈಷ್ಣವ, ಗಾಂಧೀಸಾಹಿತ್ಯಕ್ಕೆ ಸಂಬಂಧಿಸಿದ ಕಥಾಕೋಶವನ್ನೇ ರಚಿಸಿದವರು. ಬಣ್ಣದ ತಗಡಿನ ತುತ್ತೂರಿ, ಕಡಲೆಪುರಿ, ಕೆನೆಹಾಲು, ಮಕ್ಕಳಿಗೆ ಮಣಿದೀಪ, ಬೆಪ್ಪುತಕ್ಕಡಿ, ಐವಾನ್, ಪಂಚತಂತ್ರದ ಕಥೆಗಳು ಜಯವಿಜಯರ ಕಥಗಳು ಮೊದಲಾದವನ್ನು ತಪ್ಪದೆ ಹೆಸರಿಸಲೇಬಾಕಾದಂಥವು. ಗೊಮ್ಮಟಶಿಲ್ಪಿ, ಬಾಹುಬಲಿವಿಜಯ, ಗಂಡುಗೊಡಲಿ ಮೊದಲಾದ ಮಕ್ಕಳ ನಾಟಕಗಳನ್ನೂ ಬರೆದು ಖ್ಯಾತರಾಗಿರುವ ರಾಜರತ್ನಂ ಜನಪ್ರಿಯ ಮಕ್ಕಳ ಸಾಹಿತಿ.

ಚುಟುಕಗಳ ಬ್ರಹ್ಮ ಎಂದೇ ಜನಮಾನ್ಯರಾಗಿರುವ ದಿನಕರ ದೇಸಾಯಿ ಅವರು ಚುಟುಕಗಳಿಂದಲೇ ಪ್ರಸಿದ್ಧರು. ದಿನಕರ ಚೌಪದಿ, ಹೂಗೊಂಚಲು ಇವರ ಪ್ರಮುಖ ಕೃತಿಳಾದರು ಮಕ್ಕಳ ಬೌದ್ಧಿಕ ಮಟ್ಟಕ್ಕೆ ಪ್ರೌಢವೆನ್ನಿಸುತ್ತವೆ. ಇವುಗಳಲ್ಲಿರುವ ಕಾವ್ಯಧ್ವನಿ ಹಾಗೂ ಅಧ್ಯಾತ್ಮದ ವಿಚಾರಗಳು ಮನೋಭೂಮಿಕೆಗೆ ನಿಲುಕದಿರುವುದರಿಂದ ಇವರ ಕಾವ್ಯಕೃತಿಗಳಿಗಿಂತ ಗದ್ಯಕೃತಿಗಳು ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಕೊಡುಗೆಗಳಾಗಿದೆ. ಚೌಪದಿಯಲ್ಲಿ ಆಯ್ದ ಪದ್ಯಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬಬಹುದೆಂಬುದು ಅಷ್ಟೇ ಮುಖ್ಯವಾದ ಸಂಗತಿ. ಕೊಡಗಿನವರಾದ ಭಾರತೀಸುತ ಅವರು ಇರುವೆಯಾದ ಕಥೆ, ಶೆಟ್ಟರಿಗೆ ಸಿಕ್ಕ ಕೊಪ್ಪರಿಗೆ ಹೊನ್ನು, ಹೋತನಬೆನ್ನೇರಿದತೋಳ, ಗೆಳೆಯ ಮೊಲರಾಯ, ಬೇಸ್ತುಬಿದ್ದ ನರಿ, ಕಳ್ಳರ ಫಜೀತಿ ಮೊದಲಾದವು ಪ್ರಸಿದ್ಧವಾಗಿವೆ. ಇಲಿಮರಿಗಳು ಹಾಡಿದಾಗ ಎಂಬ ಹಾಸ್ಯ ಕೃತಿ ಬಹುಪ್ರಿಯವಾಗಿದ್ದು, ಹಲವು ಆವೃತಿಗಳನ್ನು ಕಂಡಿದೆ. ಜಾನಪದ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಅರ್ಚಕ ವೆಂಕಟೇಶ್ ಅವರು ಮಕ್ಕಳ ಸಾಹಿತ್ಯಕ್ಕೂ ದೊಡ್ಡ ಕಾಣಿಕೆ ನೀಡಿದ್ದಾರೆ. ಪಾನಕ -ಕೋಸಂಬರಿ, ಹರಿದಚಂದ್ರ, ಜತ-ವಿಜಯ, ಪಾವನ ದುರ್ಗ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಸ್ವಾಮಿವಿವೇಕಾನಂದ, ಸುಭಾಸ್ ಚಂದ್ರ ಬೋಸ್ ಮೊದಲಾದ ಸಾಧಕರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ನೆನೆಯಬೇಕಾದ ಮಹನೀಯರೆಂದರೆ ಎನ್. ಪ್ರಹ್ಲಾದ್ ರಾವ್. ಅವರ ಮಿಂಚುಳ್ಳಿ, ಮಹಾಯಾನ, ರಾಜ-ಬೆಸ್ತ, ಸ್ಮೃತಿಕನ್ಯೆ ಮೊದಲಾದ ಕೃತಿಗಳು ಉತ್ತಮ ಕೊಡುಗೆಗಳಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವನ್ನು ಪಡೆದವರಾಗಿದ್ದಾರೆ.

ಧಾರವಾಡದ ಮೇವುಂಡಿ ಮಲ್ಲಾರಿ ಅವರು ಎಪ್ಪತ್ತಕ್ಕೂ ಹೆಚ್ಚು ಮಕ್ಕಳ ಕೃತಿಗಳನ್ನು ಬರೆದವರು. ಪೆದ್ದನಪುರಿ, ಗುಬ್ಬಚ್ಚಿಗೂಡು, ಠಕ್ಕರ ಗುರು, ಪಂಚಶೀಲದ ಪ್ರತಿನಿಧಿಗಳು, ಕರ್ಪೂರಮಂಜರಿ, ಪುರಾಣದ ಕಥೆಗಳು, ಜನಪದ ಕಥೆಗಳು, ಜಾಣಗುಬ್ಬಿ, ಬೆಕ್ಕಿನಂಗಡಿ ಮೊದಲಾದವು ಪ್ರಮುಖ ಕೃತಿಗಳು. ಜಿ.ಎನ್. ಲಕ್ಷ್ಮಣಪೈ ಅವರು ಮಕ್ಕಳ ಸಾಹಿತ್ಯದ ಉಡಿಯನ್ನು ತುಂಬಿದವರಲ್ಲಿ ಇಬ್ಬರು ಶಿಶಿರಗೀತ ಮಾಲೆ, ಅಭಿನಯ ಗೀತಮಂಜರಿ, ಮಂಗನ ಮದುವೆ ಸ್ವರ್ಗ -ನರಕವು. ತೋಳವೂ ಕುರಿಯೂ ಮೊದಲಾದವು ಪ್ರಸಿದ್ಧವಾಗಿದ್ದು. ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಟ್ಟು ಮಕ್ಕಳಿಗೆ ಪ್ರಿಯವೆನ್ನಿಸಿದಂಥವು.

ಮಹಾಕವಿ ಎಂದೇ ಸುವಿಖ್ಯಾತರಾಗಿರುವ ರಾಷ್ಟ್ರಕವಿ ಕುವೆಂಪು ಅವರು ಮಕ್ಕಳ ಸಾಹಿತ್ಯಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಬೊಮ್ಮನಹಳ್ಳಿ ಕಿಂದರಜೋಗಿ, ನನ್ನ ಮನೆ, ಅಮಲನ ಕಥೆ, ಹಾಳೂರು, ಮೇಘಪುರ, ಮರಿವಿಜ್ಞಾನಿ, ನನ್ನಗೋಪಾಲ, ಮೋಡಣ್ಣನ ತಮ್ಮ ಕೃತಿಗಳು ಮಕ್ಕಳಿಗಾಗಿಯೇ ಬರೆದಂಥವು. ಕುವೆಂಪು ಅವರು ಗದ್ಯ, ಕಾವ್ಯಗಳೆರಡರಲ್ಲೂ ಮಕ್ಕಳನ್ನು ಉದ್ದೇಶಿಸಿ ಬರೆದಿದ್ದಾರೆ. ಅವರ ಅನೇಕ ಕೃತಿಗಳು ವಿವಿಧ ತರಗತಿಗಳಿಗೆ ಇಂದಿಗೂ ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿದ್ದು ಹೆಚ್ಚು ಪ್ರಸಿದ್ಧರಾಗಿದ್ದಾರೆ.

ಬಹುಮುಖ ಪ್ರತಿಭೆಯ ಡಾ.ಕೆ. ಶಿವರಾಮ ಕಾರಂತರು ಬಾಲಪ್ರಪಂಚ ಮೂರು ಸಂಪುಟಗಳ ಕಿರಿಯರ ವಿಶ್ವಕೋಶವನ್ನೇ ರಚಿಸಿದರು. ಪಠ್ಯಪುಸ್ತಕಗಳಿಗೆ ಉಪಯುಕ್ತವಾಗಬಲ್ಲ ಕೃತಿಗಳನ್ನೂ ರಚಿಸಿದ್ದಾರೆ. ಚಿತ್ರಕಥಾ ಮಾಲೆಯ ಮೂಲಕ ಮಕ್ಕಳ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನಿಡಿದ ಕಾರಂತರು ಚೆಲುವ ಕನ್ನಡನಾಡು, ಮಂಗನಮದುವೆ, ಮೀಸೆಯನಂಟು, ಹುಲಿರಾಯ, ಗಜರಾಜ, ಸೂರ್ಯ-ಚಂದ್ರ, ಭೂತರಾಧನೆ ಮೊದಲಾದ ೨೫ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಕಾರಂತರು ಪ್ರೌಢಸಾಹಿತ್ಯವನ್ನು ಅಗಾಧವಾಗಿ ರಚಿಸಿ ಕೀರ್ತಿಶಾಲಿಗಳಾದರೂ ಅವರ ಮನಸ್ಸು, ಅಂತರಂಗ ಮಿಡಿದದ್ದು ಮಕ್ಕಳ ಸಾಹಿತ್ಯಕ್ಕೆ.ಒಂದು ಸಂಸ್ಥೆ ಮಾಡಿವ ಕೆಲಸವನ್ನು ಒಬ್ಬರೇ ಮಾಡಿದ್ದಾರೆ. ಅದ್ಬುತ ಜಗತ್ತು ಎಂಬ ವಿಜ್ಞಾನ ಸಂಪುಟವನ್ನು ಹೊರತಂದ ಅವರ ಜ್ಞಾನಬಂಡಾರ ಸರ್ವವ್ಯಾಪಿಯಾದುದು. ಸಾಹಿತ್ಯ ರಂಗದಲ್ಲಿ ಅವರು ಯಾವುದನ್ನು ಬಿಟ್ಟಿದ್ದಾರೆ? ಎಂಬುದೇ ಕೌತುಕದ ಪ್ರಶ್ನೆ ಎಂಬಂತೆ ಕಾರಂತ ಕೊಡುಗೆ ಸಂದಿದೆ.