ಸಾಹಿತ್ಯದ ವೈವಿಧ್ಯತೆಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ವಿಶಿಷ್ಟ ಸ್ಥಾನ ಎಂದಿನಿಂದಲೂ ಇದೆ. ಆದರೆ ಮಕ್ಕಳ ಬುದ್ಧಿಶಕ್ತಿ, ಮನೋಸಾಮರ್ಥ್ಯ ಹಾಗೂ ಆಸಕ್ತಿಯನ್ನಾಧರಿಸಿ ರಚಿತವಾದ ಕೃತಿಗಳು ಜಗತ್ತಿನ ಸಾಹಿತ್ಯ ಪರಿಧಿಯಲ್ಲೇ ಕಡಿಮೆ ಪ್ರಮಾಣದಲ್ಲಿವೆ. ಚಿಣ್ಣರ ಬಗೆಗಿನ ಸಾತ್ವಿಕ ದೃಷ್ಟಿಕೋನ ಹಾಗೂ ಸಾಹಿತ್ಯ ಮನೋಭಿಲಾಷೆಯನ್ನು ಹೊಂದಿರುವ ಸಮಾಜ ಮಾತ್ರ ಅಂಥ ಮಾದರಿಯ ಸಾಹಿತ್ಯವನ್ನು ಹೆಚ್ಚಾಗಿ ಸೃಷ್ಟಿಸುತ್ತವೆ. ಮಕ್ಕಳ ಸಾಹಿತ್ಯ ಎಷ್ಟು ಕಾಲ ಕಳೆದರೂ ತೀವ್ರ ಬದಲಾವಣೆಗೆ ಒಳಗಾದ ಸಾರ್ವಕಾಲಿಕ ಸಾಹಿತ್ಯ. ಒಂದು ವಸ್ತು, ವಿಷಯವನ್ನು ಆಧರಿಸಿ ಅನೇಕರು ಬರೆದರೂ ಚರ್ವಿತ-ಚರ್ವಣ ಎನ್ನಿಸಿಕೊಳ್ಳುವುದಿಲ್ಲ. ಸರಳ, ಸುಂದರತೆಯೊಂದಿಗೆ ಕುತೂಹಲ ಹಾಗೂ ರಂಜನೀಯ ಗುಣವನ್ನು ಪ್ರಧಾನವಾಗಿ ಹೊಂದಿರುವುದರಿಮದ ನಿತ್ಯ ನೂತನವೆನ್ನಿಸುತ್ತದೆ.

ಮಕ್ಕಳ ಸಾಹಿತ್ಯದ ಮೂಲ ನೆಲೆಯೂ ಜನಪದ ಸಾಹಿತ್ಯವೇ ಆಗಿದೆ. ‘ಅಜ್ಜಿ ಕತೆ’ ಎಂದೇ ಪ್ರಸಿದ್ದವಾದ ಕತೆಗಳು, ಶಿಶುಪ್ರಾಸಗಳು, ಗೀತೆಗಲು, ಸರಳ ಒಗಟುಗಳು ಮುಖ್ಯವೆನ್ನಿಸಿವೆ. ಪರಿಸರ, ಪ್ರಾಣಿ ಹಾಗೂ ಮಹಾಪುರಷರ ಸಾಧನೆಯನ್ನು ಅದ್ಬುತ ಕಲ್ಪನಾ ಪ್ರೌಢಿಮೆಯಲ್ಲಿ ಟಂಕಿಸಿದ ಪ್ರಕಾರ ಅದು. ಶಿಷ್ಟ ಸಾಹಿತ್ಯದಲ್ಲೂ ಈ ಪ್ರಕಾರಗಳೇ ಹೆಚ್ಚಾಗಿರುವುದರೊಂದಿಗೆ ಅಲ್ಲಲ್ಲಿ ಕೆಲವು ದೃಶ್ಯರೂಪಕಗಳು, ಜೀವನ ಚಿತ್ರಗಳು, ಕತೆಯನ್ನೇ ಹೋಲುವ ಪ್ರಬಂಧಗಳು ಸೇರಿಕೊಂಡಿವೆ. ಪಠ್ಯಪುಸ್ತಕಗಳಿಗಾಗಿ ರಚಿಸಿದ ಗದ್ಯ-ಪದ್ಯಗಳು ಸಹ ಮಕ್ಕಳ ಸಾಹಿತ್ಯ ವ್ಯಾಪ್ತಿಗೆ ಬರುತ್ತವೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ರಾಮಾಯಣ, ಮಹಾಭಾರತ, ಪುರಾಣ, ಪಂಚತಂತ್ರ, ಹಿತೋಪದೇಶದ ಕಥೆಗಳು ದೇಶ ಭಾಷೆಯ ಮೂಲಕ ಹರಿದುಬಂದವು. ಮಕ್ಕಳ ಮನಸ್ಸನ್ನು ರಂಜಿಸುವುದರೊಂದಿಗೆ ನೀತಿಬೋಧಕಗಳಾಗಿಯೂ ಕಾರ್ಯ ನಿರ್ವಹಿಸಿವೆ.ಆದರೆ ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲ ಬೇರುಗಳಿರುವುದು ಜಾನಪದದಲ್ಲಿ ಎಂಬುದನ್ನು ಮರೆಯುವಂತಿಲ್ಲ.

ಇಂದಿನ ದಿನಗಳಲ್ಲಿ ಮಕ್ಕಳಿಗೆ ಕನ್ನಡ ಪದ್ಯಗಳ ಬಗೆಗೆ ದಿವ್ಯ ನಿರ್ಲಕ್ಷ್ಯ. ಇಂಗ್ಲಿಷ್ ಕವಿತೆಗಳೇ ಪ್ರಿಯವಾದಂತೆ ತೋರುತ್ತದೆ. ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮ ಪೋಷಕರ ಒತ್ತಾಸೆಯದಾಗಿದೆ. ಅದರಲ್ಲಿ ಮಧ್ಯಮ ವರ್ಗದವರ ಮಕ್ಕಳಲ್ಲಿ ಭವಿಷ್ಯಾಲೋಚನೆ, ವೃತ್ತಿಯ ಆತಂಕ ಪ್ರಧಾನವಾದರೆ, ಶ್ರೀಮಂತರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದರಿಂದ ಇಂಗ್ಲಿಷ್ ಮಾಧ್ಯಮ ಅನಿವಾರ್ಯ ಎಂಬ ಭ್ರಮೆ ಮನೆ ಮಾಡಿದೆ. ವಾಸ್ತವವಾಗಿ ಮಕ್ಕಳಲ್ಲಿ ಭಾಷೆಯ ಬಗೆಗೆ ಮೇಲು-ಕೀಳು ಎಂಬ ಭಾವನೆ ಇಲ್ಲ. ಅವರಿಗೆ ನಿರ್ಮಿಸುವ ಪರಿಸರವೇ ಅದಕ್ಕೆ ಕಾರಣವಾಗಿದೆ. ಮಾತೃಭಾಷೆಯ ಬಗೆಗೆ ತೋರುವ ಅಸಡ್ಡೆ ಸಾಂಸ್ಕೃತಿಕ ಭಾವನೆಗಳಿಗೂ ಅನ್ವಯಿಸುತ್ತದೆ. ಕನ್ನಡದಲ್ಲಿ ಎಷ್ಟು ಅದ್ಭುತವಾದ ಕಾವ್ಯಕೃತಿಗಳು ಬಂದಿವೆ, ಎಂತಹ ಅಪರೂಪದ ಸಾಹಿತಿಗಳಿದ್ದಾರೆ, ಎಂಬುದೆಲ್ಲಾ ಸತ್ಯ. ಆದರೆ ಮಕ್ಕಳಿಗೆ ಸರಿಯಾಗಿ ಅರ್ಥವಾಗದ ಇಂಗ್ಲಿಷ್ ರೈಮ್ಸ್ ಗಳು, ಕವಿತೆಗಳು ಇಷ್ಟವಾಗುವುದಕ್ಕೆ ಕಾರಣ ಹೇಳುವುದು ಕಷ್ಟ. ನಮ್ಮ ಮಕ್ಕಳಿಗೆ ಕವಿಗಳು ಕಂಡು, ಅನುಭವಿಸಿ ಬರೆದ ಪದ್ಯಗಳನ್ನು ಗ್ರಹಿಸಲು, ಅಂತಹ ಪರಿಸರ ಈ ಹೊತ್ತು ಉಳಿದಿದೆಯೇ? ಕೊಳ, ಕಾಡು, ಪ್ರಾಣಿ, ಪಕ್ಷಿ, ಪೊದರು, ಜಾತ್ರೆ, ಬೆಂಡು, ಬತಾಸು ಮೊದಲಾದುವು ನಗರದ ಮಕ್ಕಳಿಗೆ ಎಲ್ಲಿ ಲಭ್ಯ? ಹಾಗೆ ದೊರೆತರೂ ಅದಕ್ಕೆ ಸಮಯವಾದರೂ ಇದೆಯೇ? ಹಳ್ಳಿ ಮಕ್ಕಳು ಸಹ ಅದನ್ನೆಲ್ಲಾ ತೊರೆದು ನಗರವನ್ನು ಅನುಕರಿಸುವ ಹವಣೆಯಲ್ಲಿದ್ದಾರೆ.ಇದರಿಂದ ಜಾತ್ರೆಗಳು, ಹಬ್ಬಗಳು ಸಂಭ್ರಮವನ್ನು ಕಳೆದುಕೊಂಡಿವೆ. ಅದ್ಭುತವಾದ, ರಮ್ಯವಾದ ಎಷ್ಟೋ ಮಕ್ಕಳ ರಚನೆಗಳು ಮರೆಯಾಗುತ್ತಿವೆ. ಅವು ಪುಸ್ತಕ ರೂಪದಲ್ಲಿದ್ದರೂ ಮಕ್ಕಳಿಗೆ ಅಪರಿಚಿತವಾದಂತೆ ತೋರುತ್ತಿವೆ.

ಪಠಾಸು ಪೆಟ್ಲು ಒಳಜೇಬಲ್ಲಿ
ಕಾಸಿನ ಸಾಲು ಕಳ್ಳಜೇಬಲ್ಲಿ,
ಚಿನ್ನಿ ದಾಮಡು ಎಡಬಲದಲ್ಲಿ
ಬಂದ ಬಂದ ಸಂತಮ್ಮಣ್ಣ

ಪಠಾಸು ಪಟ್ಲನ್ನು ಎಷ್ಟು ಮಕ್ಕಳು ನೋಡಿದ್ದರೆ? ಕಾಸಿನ ಪರಿಚಯ ಇದೆಯೇ? ಚಿನ್ನಿ, ದಾಂಡು ಅವರ ಗ್ರಹಿಕೆಗೆ ಬರುತ್ತದೆಯೇ? ಈಗಿರುವುದು ಏನಿದ್ದರೂ ವೀಡಿಯೋ ಗೇಮ್, ಕಂಪ್ಯೂಟರ್ ಗೇಮ್, ಕ್ರಿಕೆಟ್ ! ಇಂದಿನ ಮಕ್ಕಳಿಗೆ ಚಿನ್ನಿ, ದಾಂಡು, ಲಗೊರಿ, ಕುಂಟೋಬಿಲ್ಲೆ, ಮರಕೋತಿ ಇಂತಹ ಆಟಗಳು ಅರ್ಥವಾಗುವುದೇ ಇಲ್ಲ.

ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಮಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜತೆಯಲಿ ಸಾಗಿಸಿದ

ಈ ಕವಿತೆ ಎಷ್ಟು ಅರ್ಥಪೂರ್ಣವಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸಂತೆಗೆ ಹೋಗಿ ಪದಾರ್ಥಗಳನ್ನು ತಂದಿಡುವ ಪದ್ಧತಿಯೇ ಕಡಿಮೆಯಾಗುತ್ತಿದೆ. ಹೇರಿಗಾಗಿ ಕತ್ತೆ ಸಾಕುವ ಅಗತ್ಯವೇ ಇಲ್ಲದ್ದರಿಂದ ಹಿಂಡಿಯ ಪ್ರಮೇಯವೇ ಬರುವುದಿಲ್ಲ. ಮಣದ ಅಳತೆಯ ಕ್ರಮ ಏನು ಮಾಡಿದರೂ ಅರ್ಥವಾಗದು. ಅಜ್ಜನ ಕೋಲಿದು ನನ್ನಯ ಕುದುರೆ ಎಂದು ಹಾಡಲಿಕ್ಕೆ ಮನೆಯಲ್ಲಿ ಅಜ್ಜನೇ ಇರದ ವಿಭಕ್ತ ಕುಟುಂಬ! ಅಜ್ಜನೊಂದಿಗೆ ಮೊಮ್ಮಕ್ಕಳ ಒಡನಾಟವೇ ಸೊರಗಿರುವಾಗ ಏಕಾಕಿತನದ ಅನುಭವವಾಗದಿರದು. ಅಜ್ಜನ ಕೋಲನ್ನು ಕುದುರೆಯಾಗಿ ಮಾಡಿಕೊಂಡು ಆಡುವ ಸ್ಥಿತಿ ಇಂದಿನ ಮಕ್ಕಳಿಗಿಲ್ಲ. ಬದುಕಿನ ಅವಿಭಾಜ್ಯ ರೂಪಕಗಳಂತಿದ್ದ ಕನ್ನಡ ಪದ್ಯಗಳೂ ಅಪರಿಚಿತವಾಗಿವೆ.

ಹಿಂದೆ ಮಕ್ಕಳಿಗೆ ಬಾಯಿಪಾಠದ ಪದ್ಧತಿಯಿತ್ತು. ಎಲ್ಲರೂ ಕಲೆತು ಪದ್ಯಗಳನ್ನು ಹೇಳುವ ಕ್ರಮವಿತ್ತು. ಅದು ಮನರಂಜನೆಯ ಸಾಧನವಾಗಿ, ನೀತಿಬೋಧೆಯಾಗಿ ಅನುಷ್ಠಾನಗೊಳ್ಳುತ್ತಿತ್ತು. ಇಂದು ಇವು ಅಪರಿಚಿತವಾದಂತೆ ತೋರುತ್ತಿವೆ. ಸಂಬಂಧಗಳಲ್ಲೇ ಉಂಟಾಗುತ್ತಿರುವ ಬಿರುಕಿನಿಂದಾಗಿ ಕಾವ್ಯವೂ ಕೂಡಾ ಸವಕಲಾಗಿದೆ. ತಾವು ಕಾಣದ, ಅನುಭವಿಸದ ವಸ್ತು, ವರ್ಣನೆಯಲ್ಲಿ ತಾದಾತ್ಮ್ಯಗೊಳ್ಳುವುದಾದರೂ ಹೇಗೆ ಸಾಧ್ಯ? ಅದರಲ್ಲಿ ಪ್ರೀತಿ ಆಸಕ್ತಿಯಾದರೂ ಬೆಳೆಯುವುದು ಹೇಗೆ? ಬದುಕಿನ ನಿತ್ಯ ಸತ್ಯಗಳು, ಸಾಮಾನ್ಯ ಜನರ ದೈನಂದಿನ ಸಹಜ ಕ್ರಿಯೆಗಳೂ ಯಾಂತ್ರಿಕವಾಗುತ್ತಿರುವಾಗ ಬದುಕಿನೊಂದಿಗೆ ಪರಂಪರೆಯ ಪರಿಪಾಕದಲ್ಲಿ ಸ್ಪುರಣಗೊಂಡ ಕವಿತೆಗಳಿಗೆ ಅರ್ಥ ತುಂಬುವ ಸಾಮರ್ಥ್ಯ ಪೋಷಕರಿಗಾಗಲೀ ಶಿಕ್ಷಕರಿಗಾಗಲೀ ಉಳಿದಿದೆಯೇ? ಅನುಭವಿಸಿ ಸವಿಯಲು ಮಕ್ಕಳಿಗೆ ಅವಕಾಶವಿದೆಯೇ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮಕ್ಕಳಿಗೆ ಪರಿಚಿತ ಜಗತ್ತಿನ ದರ್ಶನ ಮಾಡಿಸುವುದರಿಂದ ಸಂತಸದಿಂದ ಗ್ರಹಿಕೆಯೂ ಹೆಚ್ಚಿ ಆತ್ಮವಿಶ್ವಾಸ ಮೂಡುತ್ತದೆ ಎಂಬ ತಾತ್ತ್ವಿಕ ಕಲ್ಪನೆಯೇ ಮರೆಯಾದಂತಿದೆ.

ಇಂಗ್ಲಿಷ್ ರೈಮ್ಸ್‌ಗಳು, ಕವಿತೆಗಳು ಅರ್ಥಪೂರ್ಣವಾವು ಎಂದಲ್ಲ. ಅವು ಅನುಭವಜನ್ಯವಾಗಲು ಸಾಧ್ಯವೇ ಇಲ್ಲ. ನಮ್ಮದೆನ್ನುವ ಸಂವೇದನೆಯೂ ಅಲ್ಲಿಲ್ಲ. ಅವುಗಳಿಗಿಂತ ಕನ್ನಡದಲ್ಲಿ ಬಮದಿರುವ ಅನುವಾದಗಳೇ ಆಪ್ಯಾಯಮಾನವಾಗಿದೆ. ಮಿಗಿಲಾಗಿ ಕನ್ನಡಿಗರ ಸೃಷ್ಟಿಗಿಂತ ವಿಶೇಷವಾದದ್ದೇನೂ ಅಲ್ಲಿಲ್ಲ. ಆದರೆ ವಿಚಿತ್ರ ಆಕರ್ಷಣೆಗೆ ಮಾಧ್ಯಮದ ಪ್ರೇರಣೆಯ ಜತೆಗೆ ಅಂತಹ ಪರಿಸರ ನಿರ್ಮಾಣವೇ ಕಾರಣವಾಗಿದೆ. ಕನ್ನಡದಲ್ಲಿರುವ ಮಂಗಗಳ ಉಪವಾಸ, ಬಣ್ಣದ ತಗಡಿನ ತುತ್ತೂರಿ, ಹಾವಿನ ಹಾಡು, ಮಂಗನ ಮದುವೆ, ಕರಡಿಯ ಕುಣಿತ, ಗಡಿಯಾರ, ಪುಣ್ಯಕೋಟಿಯ ಕಥೆ, ಅಂಚೆಯ ಅಣ್ಣ, ಗೊವಿನಬಾಳು, ತಿರುಕನಕನಸು, ಹೂವಾಡಗಿತ್ತಿ ಮೊದಲಾದ ಕವಿತೆಗಳು ಎಷ್ಟು ಆಪ್ತವಾಗಿ ಖುಷಿ ಕೊಡುತ್ತವೆ. ಕನ್ನಡ ಜಾಯಮಾನವನ್ನು ಅನುಸಂಧಾನದ ಮೂಲಕ ಅದರ ಧ್ವನಿಗನುಗುಣವಾಗಿ ರೂಪಿತವಾದ ಈ ಕವಿತೆಗಳಲ್ಲಿ ಸ್ವಾರಸ್ಯ ಮಡುಗಟ್ಟಿದೆ. ಅವುಗಳಲ್ಲಿರುವ ಕಲ್ಪನೆ ಮತ್ತು ವರ್ಣನೆಯೇ ರೋಚಕವಾದುದು. ಆದರೆ ಇಂಗ್ಲಿಷ್ ವ್ಯಾಮೋಹದಲ್ಲಿ ಅವೆಲ್ಲಾ ಹಳೆಯದಾಗಿ ಕಾಣುತ್ತಿವೆ. ಭಾಷಾ ಅಭಿಮಾನದ ಕೊರತೆಯಿಂದ ಮಹತ್ವದ ರಚನೆಗಳೂ ಕೂಡ ಜಡತ್ವದಿಂದ ಬಳಲುತ್ತಿವೆ. ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ ಪದ್ಯಗಳನ್ನು ಕೂಡ ಪರೀಕ್ಷೆಯ ದೃಷ್ಟಿಯನ್ನು ಮೀರಿ ಮಕ್ಕಳು ಇಚ್ಚಿಸಲಾರರು ಆಧುನಿಕ ವಿಷಯಗಳನ್ನು ಒಳಗೊಂಡ ಪದ್ಯ ಸಂಕಲನಗಳು, ಸಿ.ಡಿ, ಕ್ಯಾಸೆಟ್‌ಗಳು ಬಂದಿರುವುದಾದರೂ ಅವುಗಳೂ ಸಹ ಎಲ್ಲೋ ಒಂದು ನೆಲೆಯಲ್ಲಿ ಇಂದಿನ ಮಕ್ಕಳಿಗೆ ಕೊರತೆಯಾಗಿ ಕಾಣುತ್ತಿವೆ. ಕನ್ನಡ ಭಾಷೆ, ಕಾವ್ಯಕ್ಕೆ ಪ್ರಾದೇಶಿಕ ಶಕ್ತಿ ಕುಂದುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಗುವಿಗೆ ಅಲ್ಲಿನ ಪದಗಳು, ಪರಿಕಲ್ಪನೆಗಳು ಸುಲಭವಾಗಿ ಕಾಣುವುದು ಸಹಜ. ಅಲ್ಲಿ ಒತ್ತು, ದೀರ್ಘ, ಗಣಿತ, ಸಮಾಸಗಳ ಗೋಜಲುಗಲಿಲ್ಲ. ಸಮೂಹ ಮಾಧ್ಯಮಗಳೂ ಕೂಡ ಇಂಗ್ಲಿಷ್ ಶಬ್ದಗಳನ್ನೇ ಹೆಚ್ಚಾಗಿ ಪ್ರಯೋಗಿಸುತ್ತಿದ್ದು, ಇಂಗ್ಲಿಷ್ ಸಲೀಸು ಎಂಬ ಮನೋಭಾವ ಬೆಳೆದಿದೆ. ಕನ್ನಡ ಬಲ್ಲವರೂ ಸಹ ಹೆಚ್ಚಾಗಿ ಇಂಗ್ಲಿಷ್ ಬಳಸುವ ಪ್ರವೃತ್ತಿಯಿಂದಾಗಿ ಮಕ್ಕಳಿಗೆ ಎಷ್ಟೋ ಕನ್ನಡ ಪದಗಳ ಪರಿಚಯವೇ ಇಲ್ಲದಂತಾಗಿರುವುದು, ಒಂದೊಮ್ಮೆ ಪರಿಚಿತವಿರುವುದಾದರೂ ಅವುಗಳ ಬಗ್ಗೆ ಕೀಳರಿಮೆ ಬೆಳೆದಿರುವುದು ದುರಂತ.

ಮಕ್ಕಳ ದೃಷ್ಟಿಯಲ್ಲಿ ಕನ್ನಡ ಕ್ಲಿಷ್ಟ, ಪೋಷಕರಿಗೆ ಅದು ಕಷ್ಟ. ಇದರಿಂದ ಕನ್ನಡ ಸಾಹಿತ್ಯ ಹೇಗೆ ಅರ್ಥವಾದೀತು? ಕನ್ನಡ ನೆಲದ ಮಕ್ಕಳೇ ಕನ್ನಡ ಸಾಹಿತ್ಯವನ್ನು ಶ್ರದ್ಧಾಸಕ್ತಿಯಿಂದ ಆಲಿಸಿವ, ಗ್ರಹಿಸುವ, ಅನುಭವಿಸಿ ಪ್ರಶಂಸಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿರುವುದರಿಂದ ಸಹಜವಾಗಿ ಅವರಲ್ಲಿ ಸೃಜನಶೀಲ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ಮಾತೃಭಾಷಾ ಶಿಕ್ಷಣದ ಕೊರತೆಯಿಂದಾಗಿ ತನ್ನ ನೆಲದ ಭಾಷಾ ಸಾಹಿತ್ಯವು ಸೊರಗುತ್ತಿದೆ ಎಂಬುದು ಸುಳ್ಳಲ್ಲ. ಇಂದಿನ ಸಾಹಿತ್ಯದ ವಸ್ತುಸ್ವರೂಪವೇ ಬದಲಾಗಿದೆ. ಇಂದು ಯಾವ ಮಕ್ಕಳಾದರೂ ಅಧ್ಯಾಪಕರಾಗಬೇಕೆಂದು ಬಯಸುತ್ತಾರೆಯೇ? ಹೋಗಲಿ ಪೋಷಕರಾದರೂ ಅಪೇಕ್ಷಿಸುತ್ತಾರೆಯೇ? ಮಧ್ಯಮ ವರ್ಗದವರ ದೃಷ್ಟಿಯಲ್ಲಿ ಇಂಜಿನಿಯರ್, ವೈದ್ಯರ ಹೊರತಾಗಿ ಇತರ ವೃತ್ತಿಗಳು ಕಳಪೆಯೇ ಸರಿ. ಕನ್ನಡ ಗೀತಗಳನ್ನು ಹಾಡಲೂ ಸಹ ಹಿಂದಿ ಭಾಷಾ ಹಿನ್ನೆಲೆ ಗಾಯಕರೇ ಬೆಕು. ಅವರು ಹಾಡಿದರೇ ಶ್ರೇಷ್ಠ ಮತ್ತು ಖುಷಿ ! ಜತೆಗೆ ಕನ್ನಡ ಪುಸ್ತಕಗಳ ಬೆಲೆಯೂ ಹೆಚ್ಚೇ ಇದೆ.ಪುಸ್ತಕಗಳನ್ನು ಖರ್ಚು ಮಾಡುವ ಸಾಹಸಕ್ಕೆ ತಗಲುವ ವೆಚ್ಚ ಲೇಖಕರ ಪರಿಶ್ರಮ ಹಾಗೂ ಮುದ್ರಣ ವೆಚ್ಚಕ್ಕಿಂತ ದುಪ್ಪಟ್ಟಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಅಪ್ಪಟ ಓದುಗರ ಸಂಖ್ಯೆಯೇ ಕುಂದಿದೆ ಎಂಬುದು ಅಪ್ರಿಯ ಸತ್ಯ.

ಜಾತಿರೋಗದ ಭೀತಿ ಕಳೆಯುತ
ನೀತಿ ಮಾರ್ಗದಿ ನಡೆವೆವು
ಒಂದೆ ಮಾನವ ಕುಲವು ಎನ್ನುತ
ವಿಶ್ವಧರ್ಮವ ಪಡೆವೆವು

ದಿನೇ ದಿನೇ ಜಾತಿ ಸಮಸ್ಯೆ ಜಟಿಲವಾಗುತ್ತಿರುವಾಗ ಸೂಕ್ಷ್ಮ ಸಂವೇದನೆಯ ಮಗುವಿಗೆ ಈ ಪದ್ಯ ವಿಪರ್ಯಾಸವಾಗಿ ತೋರಿದರೆ ಆಶ್ಚರ್ಯವಿಲ್ಲ. ಎಂದಾದರೂ ಜಾತಿ ಮತ್ಸರ, ಮತಾಂತರದ ಕ್ರಿಮಿಗಳನ್ನು ತೊಡೆಯಲು ಹಿರಿಯರಾದ ನಾವು ನಿಷ್ಠೆಯಿಂದ ಪ್ರಯತ್ನಿಸಿದ್ದೇವೆಯೇ? ದೇಶ ಸೇವೆಗೆ ದೇಹ ಸವೆಸುವ ದೀಕ್ಷೆ ತೊಡುವುದಿರಲಿ, ಮನಸ್ಸನ್ನಾದರೂ ಅತ್ತ ತಿರುಗಿಸಿದ್ದೇವೆಯೇ? ಪ್ರತಿನಿತ್ಯ ಭ್ರಷ್ಟಾಚಾರ, ಕೊಲೆ, ಸುಲಿಗೆ, ಭಯೋತ್ಪಾದನೆ ಮೊದಲಾದ ಅನ್ಯಾಯಗಳೇ ಮಗುವಿನ ಕಣ್ಣೆದುರಿಗೆ ವಿಶೇಷವಾಗಿ ಮಾಧ್ಯಮಗಳ ಮೂಲಕ ಕಾಣಿಸುತ್ತಿರುವಾಗ ಐಕ್ಯತೆಯನ್ನು ಬಿಂಬಿಸುವ ಈ ಕಾವ್ಯಭಾಗ ಹೇಗೆ ಅರ್ಥಪೂರ್ಣವಾದೀತು? ಒಂದೇ ಮಾನವ ಕುಲ, ವಿಸ್ವಧರ್ಮದ ಕಲ್ಪನೆ ಅರಿವಿಗೆ ಬರಲು ಸಾಧ್ಯವೇ? ಅದು ಕೇವಲ ಪದಲಾಲಿತ್ಯ, ಸರಳತೆ, ಭಾವದ ಹೊಸತನದಿಂದ ಆತ್ಮೀಯವಾಗಬೇಕೇ ಹೊರತು ವಾಸ್ತವತೆಯ ದೃಷ್ಟಿಯಿಂದ ದೂರವೇ ಉಳಿಯುತ್ತದೆ. ಇಂತಹ ಪರಿಸರದಲ್ಲಿ ಕಾವ್ಯ ಮತ್ತು ವಾಸ್ತವ ಬದುಕಿನ ನಡುವೆ ವೈರುಧ್ಯ ಕಾಣುವುದು ಸಹಜವಾಗಿದೆ. ಆದರೆ ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಪರಂಪರೆಯೊಂದಿದ್ದು ಅದು ವೈವಿಧ್ಯಮಯವಾಗಿ ಬೆಳೆದು ಬಂದಿದೆ.

ನಮ್ಮ ಜನತೆಯಲ್ಲಿ ವಿದ್ಯಾಪ್ರಸಾರವಾಗುವ ಮೊದಲು ಬಹುಜನಪಾಲಿನ ಯಾವತ್ತೂ ಸಾಹಿತ್ಯ-ಜಾನಪದ ಸಾಹಿತ್ಯವೇ, ಕತೆಗಳೂ ಕವನಗಳೂ ಗಾದೆಗಳೂ ಇತರ ತಿಳಿವುಗಳೂ ಲಿಖಿತ ರೂಪದಲ್ಲಿರುವುದನ್ನು ಓದಿ ತಿಳಿಯದ ಜನತೆಯೇ ಪರಮಾಧಿಕ. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಕನ್ನಡ ಭಾಷೆಗಳಂತೆ ಜನಪದ ಸಾಹಿತ್ಯ ಸಂಪತ್ತು ಸಮೃದ್ಧವಾಗಿದೆ. ವಿವಿಧ ವಿದ್ವಾಂಸರು ಅಪರೂಪದ ಸಾಹಿತ್ಯವನ್ನು ಸಂಪಾದಿಸಿದ್ದಾರೆ. ವರದರಾಜ ಹುಯಿಲಗೋಳರು ಸಂಪಾದಿಸಿದ ವಿವಿಧ ದೇಶದ ಜನಪದ ಕಥೆಗಳು, ಉಷಾದೇವಿ ಅವರು ಸಂಗ್ರಹಿಸಿದ ಜನಪದ ಕಥೆಗಳು, ಎನ್.ಬಸವಾರಾಧ್ಯರು ಕಲೆಹಾಕಿರುವ ಅಪ್ಪಯ್ಯ ಮತ್ತು ಬಾಯಿಶೂರ- ಕೈಶೂರ, ಜೋತಿಷಿಯವರಮಗ ಮತ್ತು ಕೊಡದಣ್ಣ-ಬಿಡದಣ್ಣ, ಹ.ಕ.ರಾಜೇಗೌಡರು ಸಂಪಾದಿಸಿರುವ ಜನಪದ ನೀತಿಕಥಗಳು ಪ್ರಮುಖವಾಗಿವೆ. ಸಾಹಿತ್ಯರಂಗಕ್ಕೆ ಮುದ್ರಣಕಲೆ ಹಾಗೂ ಶಿಕ್ಷಣ ಕ್ರಮ ಹೊಸತನವನ್ನು ತಂದಿತು. ಇದರಿಂದಲೇ ಮಕ್ಕಳಸಾಹಿತ್ಯ ಪ್ರಸಾರವು ಚುರುಕುಗೊಂಡು ವಿಸ್ತೃತವಾಯಿತು.ಹೊಸ ವಿಚಾರಗಳ ಅಭಿವ್ಯಕ್ತಿಗಿಂತ ಹಳೆಯದರಲ್ಲಿ ಹೆಚ್ಚಿನ ಆಸಕ್ತಿಯಿದ್ದಿತು. ಧಾರ್ಮಿಕ ಕೃತಿಗಳಿಗಿದ್ದ ಮಹತ್ವವೂ ಇದಕ್ಕೆ ಕಾರಣ. ಪಾಶ್ಚಾತ್ಯ ಸಂಪರ್ಕಕ್ಕೆಮೊದಲು ಪರಂಪರಾಗತ ಪದ್ಧತಿ ರೂಢಿಯಲ್ಲಿದ್ದಿತು. ಧೂಳಾಕ್ಷರ, ಕಡತ, ಹಸ್ತಪ್ರತಿ ಇವುಗಳ ಆಧಾರದಿಂದ ಶಿಕ್ಷಣ ನೀಡುತ್ತಿದ್ದರು. ಶೀಲ ಸಂವರ್ಧನೆಯೇ ವಿದ್ಯಾರ್ಜನೆಯ ಗುರಿಯೆಂದನಿಸಿ ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಮೂಲಕ ಎಳೆವೆಯಿಂದಲೇ ಪೋಷಿಸಲಾಗುತ್ತಿತ್ತು. ಅಂತಯೇ ಊರೂರಿನ ಶಾಗಳಲ್ಲೂ ಇತರ ಕಡೆಗಳಲ್ಲಿಯೂ ಕುಮಾರವ್ಯಾಸ, ಜೈಮಿನಿ ಭಾರತಗಳು, ಬಸವಪುರಾಣ, ರಾಜಶೇಖರ ವಿಳಾಸ, ಹರಿಭಕ್ತಿಸಾರ, ದಾಸರ ಹಾಡುಗಳು, ಸರ್ವಜ್ಞನ ತ್ರಿಪದಿಗಳು ಇವುಗಳ ವಾಚನ ನಡೆದು ಆ ಪದ್ಯಗಳು ‘ಅನಕ್ಷರಸ್ಥ’ ಜನರ ಬಾಯಲ್ಲಿಯೂ ನಲಿದಾಡುತ್ತಿದ್ದವು. ಈ ಬಗೆಯ ಕಾವ್ಯಮೂಲಕವಾದ ಶಿಕ್ಷಣವು ಕರ್ನಾಟಕದ ಒಮದು ಪ್ರತ್ಯೇಕ ವೈಶಿಷ್ಟ್ಯವೆಂಬುದಾಗಿ ಮುಂಬಯಿ ಪ್ರಾಂತದ ಅಧಿಕಾರಿಗಳು ಉಲ್ಲೇಖಿಸಿದುದಿದೆ. ಶಿಕ್ಷಣ ಸೀಮಿತವಲಯಕ್ಕೆ ಮಿಸಲಾದುದರಿಂದ ಮತ್ತು ಕಾವ್ಯಪಠನಕ್ಕಷ್ಟೇ ಮಿತಗೊಂಡಿದ್ದರಿಂದ ಅದರಲ್ಲೂ ನಿರ್ದಿಷ್ಟ ಪಠ್ಯಗಳು ನಿಗದಿಗೊಳ್ಳದಿರುವ ಕಾರಣದಿಂದಾಗಿ ಸುಧಾರಣಾ ನೀತಿಯನ್ನು ಅನುಸರಿಸಲಾಯಿತು. ಸಾರ್ವತ್ರಿಕಶಿಕ್ಷಣ ಕ್ರಮಕ್ಕೆ ಅದು ಮೊದಲಾಯಿತು. ಗೌರ್ನರ್ ಗಳಾಗಿದ್ದ ಮದ್ರಾಸಿನ ಮುನ್ರೋ (೧೮೧೯/೨೦) ಮುಂಬಯಿಯ ಎಲ್ ಫಿನ್ ಸ್ಟನ್ (೧೯೨೭) ಕನ್ನಡ ಪ್ರದೇಶಗಳಲ್ಲಿ ಶಾಲೆಯನ್ನು ತೆರೆಯಲು ಮುಂದಾದರು. ಆದರೆ ಕನ್ನಡ ಪಠ್ಯಪುಸ್ತಕಗಳ ರಚನೆಯ ನೇತೃತ್ವ ವಹಿಸಿಕೊಂಡವರೆಂದರೆ ಧಾರವಾಡ ವಿಭಾಗದ ಅಸಿಸ್ಟೆಂಟ್ ಕಲೆಕ್ಟರ್ ಆಗಿದ್ದ ವಾಲ್ಟರ್ ಎಲಿಯಟ್, ಈತನ ಕಾಲ ಸುಮಾರು ೧೮೩೩. ಶಾಲೆ ಆರಂಭದ ಹತ್ತು ವರ್ಷಗಳ ತರುವಾಯ ರಚಿತವಾದ ಪುಸ್ತಕಗಳಲ್ಲಿ ಈಸೊಪನ ಕತೆಗಲ ಮುದ್ರಣವೇ ಮೊದಲನೆಯದು. ಇದರಲ್ಲಿ ಹೊಸತೇನೂ ಇಲ್ಲವಾದರೂ ಮಕ್ಕಳು ನಿರ್ದಿಷ್ಟವಾಗಿ ಅಭ್ಯಾಸ ಮಾಡುವ ಪಠ್ಯವಾಗಿ ನಿಗದಿಯಾಯಿತು. ಆನಂತರ ೧೮೩೬ರಲ್ಲಿ ಸಂಣ ಹಿತೋಪದೇಶ ಎಂಬ ಕನ್ನಡ ಪುಸ್ತಕ ಕಲ್ಲಚ್ಚಿನ ಮೂಲಕ ಪ್ರಕಟವಾಯಿತು. ಇದಕ್ಕೂ ಮೊದಲು ಅಂದರೆ ೧೮೧೦ರಲ್ಲಿ ಬಳ್ಳಾರಿಯಲ್ಲಿ ನೆಲೆಸಿದ್ದ ಪ್ರೊಟೆಸ್ಟೆಂಟ್ ಮಿಷನರಿ ರೆ. ಜಾನ್ ಹ್ಯಾಡ್ಸ್ ಹಾಗೂ ಆ ಬಳಿಕ ಬಂದ ರೀವ್ ಎಂಬುವವರುಗಳೇ ಕನ್ನಡಾಂಗ್ಲ ಶಬ್ದಕೋಶ, ವ್ಯಾಕರಣ, ಬೈಬಲ್ಲುಗಳ ಕನ್ನಡಾನುವಾದಗಳಿಗೆ ಪ್ರಯತ್ನಿಸಿ ಹೊಸಗನ್ನಡ ಅರುಣೋದಯಕ್ಕೆ ಮೂಲ ಪುರುಷರೆನ್ನಿಸಿಕೊಂಡರು. ಆದರೆ ಈ ಪುಸ್ತಕಗಳಲ್ಲಿ ಮಕ್ಕಳ ಸಾಹಿತ್ಯ ವ್ಯಾಪ್ತಿಗೆ ನಿಲುಕುವ ಅಂಶಗಳು ಸ್ಪುಟವಾಗಿದ್ದಂತೆ ತೋರದು.

ಮಕ್ಕಳ ಸಾಹಿತ್ಯ ನಿಜವಾಗಿ ರೂಪುಗೊಂಡದ್ದು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ತರುವಾಯ. ಕ್ರಿ. ಶ. ಸುಮಾರು ೧೧೩೦ ರಲ್ಲಿದ್ದ ದುರ್ಗಸಿಂಹನು ಸಂಸ್ಕೃತದಲ್ಲಿದ್ದ ಪಂಚತಂತ್ರವನ್ನು ಕರ್ನಾಟಕ ಪಂಚತಂತ್ರವೆಂದು ಕನ್ನಡಕ್ಕೆ ತಂದನು. ಪ್ರಾಣಿಗಳೇ ಪಾತ್ರಧಾರಿಗಳಾಗಿದ್ದು ಸರಳ, ಸುಂದರಗಳು ಮಕ್ಕಳನ್ನು ಆಕರ್ಷಿಸಿದವು. ಮುಮ್ಮಡಿ ಕೃಷ್ಣರಾಜ ಒಡೆಯರು (೧೭೯೪-೧೮೬೮) ಪಂಚತಂತ್ರದ ಕಥೆಗಳನ್ನು ಪ್ರಕಟಿಸಿದ್ದರು. ಮಕ್ಕಳಿಗೆ ಒಂದು ಉತ್ತಮ ಕೈಪಿಡಿ ಲಭ್ಯವಾಯಿತು. ಆದರೂ ಕೇವಲ ಕಥೆಗಳಿಗೆ ಸೀಮಿತಗೊಂಡಿತ್ತು.

ವಾಲ್ಟೇರ್ ಎಲಿಯೆಟ್ ಪ್ರಕಟಿಸಿದ್ದ ಸಂಣಹಿತೋಪದೇಶವಾಗಲಿ, ೧೮೪೬ ರ ಭಗವದ್ಗೀತೆಯ ಅನುವಾದವಾಗಲೀ ೧೮೬೩ ರಲ್ಲಿ ವೆಂಕಟರಂಗೋಕಟ್ಟಿಯವರು ಅನುವಾದಿಸಿದ್ದ ಅರೇಬಿಯನ್ ನೇಟ್ಸ್ ಆಗಲೀ, ಇವೆಲ್ಲವೂ ಬಾಲಸಾಹಿತ್ಯದ ಮಿತಿಗೆ ಭಾರವಾದವು. ರಾಮಾಯಣ, ಮಹಾಭಾರತ, ಪುರಾಣ, ವಚನ, ದಾಸರಪದಗಳು ಮೊದಲಾದವು ನೀತಿಬೋಧಕಗಳಾಗಿವೆ ಬಳಕೆಯಾದವೇ ವಿನಾ ಮಕ್ಕಳ ಸಾಹಿತ್ಯವಾಗಿ ಮಾನ್ಯವಾದಂತಿಲ್ಲ. ಆದರೆ ಒಂದು ಉತ್ತಮ ಕವಿತೆಗಿರುವ ಎಲ್ಲ ಗುಣಗಳು ವಚನ ಕೀರ್ತನೆಗಳಿಗಿದ್ದು ಗೇಯತೆಯಿಂದ ಕೆಡದಂತೆ ಬರೆಯುತ್ತಿದ್ದರು. ಮಕ್ಕಳನ್ನು ರಂಜಿಸುವ, ಮುದನೀಡುವ ಪ್ರಕ್ರಿಯೆಗಿಂತ ನಡೆ-ನುಡಿತಿದ್ದುವ ಸಾಧನಗಳಾಗಿ ಬಳಕೆಯಾಗಿವೆ. ಸಂಪ್ರದಾಯದ ಕಂಠಪಾಠದಲ್ಲಿ ಭಾವ-ಭಾಷೆ ಪ್ರಧಾನವಾಗಿದ್ದು ಮಕ್ಕಳ ಪರಿಕಲ್ಪನೆ ಮುಖ್ಯವೆನ್ನಿಸಿಲ್ಲ. ಮಕ್ಕಳ ಶಿಕ್ಷಣದ ಉದ್ದೇಶದಿಂದ ಕೃತಿಗಳು ರಚನೆಯಾಗಲಿಲ್ಲವಾಗಿದ್ದು, ಅನಿವಾರ್ಯವೆಂಬತೆ ಸಿದ್ದವಾಗಿರುವ ಕಾವ್ಯಕೃತಿಗಳಿಂದ ಆಯ್ದ ಭಾಗಗಳನ್ನಷ್ಟೆ ಪರಿಗಣಿಸಿದ್ದರಿಂದ ಗೊಂದಲಗಳು ನಿರ್ಮಾಣವಾದವು. ಇಂತಹ ಪರಿಸ್ಥಿತಿ ಬಹಳ ಕಾಲ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕಾಡಿದೆ ಆದರೂ ಸಹ ಅದಕೊಂದು ನಿರ್ದಿಷ್ಟ ರೂಪ ಕೊಡಲು ಪಾಶ್ಚಾತ್ಯರ ಶಿಕ್ಷಣ ಕ್ರಮವೇ ಆಗಮಿಸಬೇಕಾಯಿತು.

ಪಾಶ್ಚಾತ್ಯರಲ್ಲಿ ಸುಮಾರು ಹದಿನೈದನೆಯ ಶತಮಾನದ ವೇಳೆಗೆ ಮಕ್ಕಳ ಸಾಹಿತ್ಯ ಅಂಕುರಿಸಿದ್ದಿತು. ಪಾಶ್ಚಾತ್ಯ ಪಾದ್ರಿಗಳಿಂದಲೇ ಕನ್ನಡದಲ್ಲಿ ಕೂಡ ಮಕ್ಕಳ ಸಾಹಿತ್ಯ ಚಿಗುರೊಡೆದು ಸ್ಪುಟಗೊಂಡಿತು. ನಿಜವಾದ ಮಕ್ಕಳ ಸಾಹಿತ್ಯ ಪರಿಕಲ್ಪನೆ ಆಮದು ಸಾಮಗ್ರಿಯಿಂದ ರೂಪಿತವಾಗಿದೆ. ಆಧುನಿಕ ಮಾದರಿಯ ಮಕ್ಕಳ ರಚನೆಗೆ ಇಂಗ್ಲಿಷ್ ಸಂಸ್ಕೃತಿಯ ಪ್ರೇರಣೆ ಒದಗಿಸಿತು. ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯ ಎಂಬ ಪ್ರತ್ಯೇಕ ಪ್ರಕಾರ ಕಂಡು ಬಂದುದು ಆಂಗ್ಲರ ಆಳ್ವಿಕೆಯ ಕಾಲದಲ್ಲಿಯೇ ಅದುವರೆಗಿನ ಸಾಹಿತ್ಯ ಗದ್ಯ-ಪದ್ಯ ಚಂಪೂಕಾವ್ಯಗಳ ರಚನೆಯಲ್ಲಿಯೇ ನಮ್ಮ ಪೂರ್ವದ ಕವಿಗಳು ಮೇಲ್ಮೈಯನ್ನು ತೋರಿದ್ದಾರೆ. ಅದುವರೆಗಿನ ಕಠಿಣವಾದ ಕಾವ್ಯಾಭ್ಯಾಸದಲ್ಲಿ ತತ್ತ್ವಾರ್ಥಚಿಂತನೆ, ಉಪದೇ ಪ್ರಧಾನವಾಗಿದ್ದಿತೇ ವಿನಾ ಮಕ್ಕಳ ಮನಸ್ಸನ್ನು ಮುದಗೊಳಿಸುವ ತಾತ್ತ್ವಿಕ ನಿಷ್ಟೆ ಇಲ್ಲದಿರುವುದು ಸುವ್ಯಕ್ತಗೊಂಡಿದೆ.

ಬಾದಾಮಿ ಕೃಷ್ಣರಾಯರು ಬಾಲಮಿತ್ರ ಕಾವ್ಯನಾಮದಿಮದ ಬಾಲರಾಮಾಯಣ, ಬಾಲಭಾರತವನ್ನು ಪ್ರಕಟಿಸಿದರು. ಜಂಗಮ ಕೋಟೆ ಕೃಷ್ಣಶಾಸ್ತ್ರಿಗಳು ಕಿಂಡರ್ ಗಾರ್ಡನ್ ಎಂಬ ಕೃತಿಯನ್ನು ಹೊರತಂದರು. ಇದೇ ಸಂದರ್ಭದಲ್ಲಿ ಕೊಲಾರದ ವೈ. ಎನ್. ಗುಂಡಪ್ಪ ಅವರು ತೋಳರಾಯನಸಭೆ ಇತ್ಯಾದಿ ಸಂಕಲನವನ್ನೂ ಅರ್ಮಿನಭಾವಿಯ ನಾರಾಯಣ ರಾಯರ ಮಕ್ಕಳ ಕಥೆಗಳು ಎಂಬ ಸಂಕಲನವನ್ನು ಪ್ರಕಟಿಸಿದರು. ಈ ಕೃತಿಗಳು ಮಕ್ಕಳ ವಯೋಮಾನ ಹಾಗೂ ಸಾಮರ್ಥ್ಯವನ್ನು ಆಧರಿಸಿದ್ದವು ಎನ್ನುವುದಕ್ಕಿಂತಲೂ ಸರಳವಾಗಿದ್ದವು. ಆಕರ್ಷಣೀಯವಾಗಿದ್ದು ಮಕ್ಕಳ ಮನೋಭೂಮಿಕೆಗೆ ಹೊಂದಿಕೊಳುಳುವ ನಿರೂಪಣೆಯಿಂದ ಕೂಡಿದ್ದವು.

ಪಾಶ್ಚಾತ್ಯ ಮಿಶನರಿಗಳು ಮತಪ್ರಸಾರದ ದೃಷ್ಟಿಯಿಂದ ಕಾರ್ಯನಿರ್ವಹಿಸಿದರೂ ಶಿಕ್ಷಣ ಹಾಗೂ ಮುದ್ರಣ ಕ್ಷೇತ್ರದಲ್ಲಿ ತೋರಿದ ಮುತುವರ್ಜಿ ಮಹತ್ವದ್ದು. ಅವರು ಮಾಡಿದ ಕನ್ನಡ ವಾಙ್ಮಯ ಸೇವೆಯಲ್ಲಿ ಮಕ್ಕಳ ಸಾಹಿತ್ಯ ಕೂಡ ಗಣನೀಯವಾದುದು. ಈ ನಿಟ್ಟನಲ್ಲಿ ಬಿ. ಎಚ್. ರೈಸ್ ವಿರಚಿತ ಕನ್ನಡ ಸಂಗೀತಗಳು ಎಂಬ ಪ್ರಾರ್ಥನಾ ಪುಸ್ತಿಕೆ ಮಹತ್ವದ್ದು. ಇದರಲ್ಲಿ ರೈಸ್ ಅವರ ಸ್ವತಂತ್ರ ಕವಿತೆಗಳೂ ಅನುವಾದಗಳೂ ಸೇರಿವೆ. ಬಿಡಿಹಾಳೆಗಳಲ್ಲಿ ದೇವರು ಒಬ್ಬನೇ. ದೇವರು ಪರಮಾತ್ಮ ಎಂಬ ಉಕ್ತಿಗಳಿದ್ದು ಈತ ಅಧ್ಯಾಪಕನಾದ ಮೇಲೆ ಪುಸ್ತಕವನ್ನು ರೂಪಿಸಿದ್ದರು.೧೯೩೯-೧೯೪೧ರ ಅವಧಿಯ ಮೂರುವರ್ಷಗಳಿಗೆ ಕನ್ನಡ ವಾಚನ ಪುಸ್ತಕವನ್ನು ಸಿದ್ಧಪಡಿಸಿದ್ದರು. ಇದರಲ್ಲಿ ಮಕ್ಕಳ ಗೀತಗಳು ಆದೈತೆ ಪಡೆದಿವೆ. ತರುವಾಯ ಜನ್ ಗ್ಯಾರೆಟ್ ರೂಪಿಸಿದ ಚಿಕ್ಕವರಿಗೆ ತಕ್ಕಂತೆ ಪಾಠಗಳು (೧೮೪೭) ಎಂಬ ಕೃತಿ ವಚನಮಾಲೆಗಾಯಾಗಿ ಜನಪ್ರಿಯವಾಗಿತ್ತು. ಶಾಲಾ ಪಠ್ಯಕ್ಕಾಗಿಯೇ ಪಂಚತಂತ್ರವನ್ನು ತಿಳಿಯಾದ ಕನ್ನಡದಲ್ಲಿ ಪ್ರಕಟಿಸಿದ್ದು ವಿಶೇಷ ಸಂಗತಿ, ಆನಂತರ ಬಂದಂಥ ಡ್ಯಾನಿಯಲ್ ಸ್ಯಾಂಡರ್ ಸನ್ ಕನ್ನಡ ಕಥಾಸಂಗ್ರಹ (೧೮೭೩) ಎಂಬ ಅಮೂಲ್ಯ ಕೃತಿಯನ್ನು ಸರಳಗದ್ಯದಲ್ಲಿ ಪ್ರಕಟಿಸಿ ಜನಪ್ರಿಯರಾದರು.

ಆಧುನಿಕ ಸಾಹಿತ್ಯ ನಿರ್ಮಾಣದಲ್ಲಿ ಬಾಸೆಲ್ ಮಿಶನ್ನಿನ ಪಾತ್ರ ಹಿರಿದಾಗಿದೆ. ೧೯೩೮ರಲ್ಲಿ ಆರಂಭವಾದ ಈ ಸಂಸ್ಥೆಯ ಅಡಿಯಲ್ಲಿ ನೂರಾರು ಮಂದಿ ಮಿಶನರಿಗಳು ಕೆಲಸ ಮಾಡಿದ್ದಾರೆ. ಈ ಸಂಸ್ಥೆಯ ಮೂಲಕವಾಗಿಯೇ ಮುದ್ರಣಯಂತ್ರ, ಮೊದಲು ಮಂಗಳೂರಿಗೆ ಬಂದಿತು. ಜೆ.ಮ್ಯಾಕ್ಸ್ ೧೮೬೩ರಲ್ಲಿ ಸಿದ್ಧಪಡಿಸಿದ ಬಾಲಗೀತೆಗಳು ಎಂಬ ಕೃತಿ ಕನ್ನಡ ಮಕ್ಕಳ ಸಾಹಿತ್ಯದ ಪ್ರಥಮ ಕಾವ್ಯಕೃತಿ ಎಂಬ ಅಗ್ಗಳಿಕೆ ಪಾತ್ರವಾಗಿದೆ.

ಪಠ್ಯ ಪುಸ್ತಕ ರಚನಾ ಕಾರ್ಯದಲ್ಲಿ ತೊಡಗಿದ್ದ ರೆವೆರೆಂಡ್ ಜಾರ್ಜ್ ಫರ್ಢಿನಾಂಡ್ ಕಿಟೆಲ್ ಅನುವಾದಿತ ಪಂಚತಂತ್ರ (೧೮೬೪) ಭಕ್ತಿ, ಆಸೆ, ವಸಂತ, ಮಾಯೆ, ದುರ್ಜನ ಸಂಘ ಮೊದಲದ ನುರಾಮೂರು ವಿಷಯಗಳಿಗೆ ಸಂಬಂಧಿಸಿದ ಹಲವು ಕವಿಗಳ ಪದ್ಯಗಳಿರುವ ಸಂಣ ಕರ್ನಾಟಕದ ಕಾವ್ಯಮಾಲೆ (೧೮೬೬) ಎಂಬ ಕೃತಿಗಲನ್ನು ಸಮಕಲಿಸಿದರು. ಇವೆಲ್ಲ ಕ್ರಮಿಕ ಪುಸ್ತಕಗಳಾಗಿ ಕಲಿಕೆಗೆ ಸಾಧನವಾಗುವುದರೊಂದಿಗೆ ಮಕ್ಕಳ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಕ್ರಿಸ್ತಾನುಜವತ್ಸ ಎಮಬುವರು ಬರೆದಿರುವ ಯುವಗೋಪಾಲರತ್ನ, ಬೂಸಿಯ ಕಡೇದಿನಗಳು. ಉಲ್ಲಿಯನ್ ಎಂಬುವನ ಚರಿತ್ರೆ ಮೊದಲಾದವು ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆದಂಥವು ಈ ಪುಸ್ತಿಕೆಗಳಲ್ಲಿ ಮಕ್ಕಳಿಗೆ ಅನುಗುಣವಾದ ಸರಳತೆ, ಸಮಕ್ಷಿಪ್ತತೆ ಇದೆ. ಕಿಟಲ್ ನ ಸಾಹಿತ್ಯ ಸಹಾಯಕನಾಗಿದ್ದ ಜೆ. ಮ್ಯಾಕ್ಸ್ ಅವರು ಕಾವ್ಯಪುಂಜ ಎಂಬ ಕವಿತಾ ಸಂಕಲನವನ್ನು ರಚಿಸಿದ್ದು ಇದರಲ್ಲಿ ಸರಳವಾದ ಕವಿತಗಳೇ ಇದ್ದವು.

ಮತಪ್ರಸಾರದ ಮೂಲ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ ಮಿಶನರಿಗಳು ಕರ್ತವ್ಯಾಸಕ್ತಿಯಿಂದ ದುಡಿದಿದ್ದಾರೆ. ಶಿಕ್ಷಣ ಹಾಗೂ ಸಾಹಿತ್ಯ ರಂಗಕ್ಕೆ ಬುಡಪಾಯ ಹಾಕಿದ್ದಾರೆ. ಶಿಕ್ಷಣದ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯ ರಚನೆ, ಅನುವಾದ, ಸಂಕಲನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಮಹತ್ವದ ಕೃತಿಗಳು ಬಂದಿವೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಾಹಿತ್ಯ ಸಂಪರ್ಕಕ್ಕೆ ನೆರವಾಗುವುದರೊಂದಿಗೆ ಹೊಸದಾರಿಯಲ್ಲಿ ಸಾಗಲು ಇಂಬುನೀಡಿದಂತಾಗಿದೆ.

ಮಕ್ಕಳಸಾಹಿತ್ಯದ ಅನಿವಾರ್ಯತೆ ಶಾಲೆಗಳಲ್ಲಿ ಮೊದಲು ಕಂಡುಬಂದಿತು. ಇದರಿಂದ ಪಾಠಾವಳಿಗಳ ರಚನಾಕಾರ್ಯ ಆರಂಭಗೊಂಡಿತು. ೧೮೬೩ರಲ್ಲಿ ಕನ್ನಡ ಪಾಠಗಳ ಮೊದಲನೆಯ ಪುಸ್ತಕ ಎಂಬ ಹೆಸರಿನ ಪುಸ್ತಿಕೆಯೊಂದು ಪ್ರಕಟವಾಗಿದೆ. ಅದರಲ್ಲಿ ಪದ್ಯಗಂಧಿಯಾದ ಪುಟ್ಟ ಪುಟ್ಟ ವಾಕ್ಯಗಲಿವೆ. ರಚನೆಕಾರರ ಹೆಸರು ಕೂಡಾ ಅದರಲ್ಲಿ ನಮೂದಾಗಿಲ್ಲ. ಜೆ.ಮ್ಯಾಕ್ಸ್ ಪ್ರಕಟಿಸಿರುವರೆನ್ನಬಹುದಾದ ಬಾಲಗೀತಗಳು (೧೮೬೩) ಕೃತಿ ಲಭ್ಯವಿರದೆ ಅದರ ಬಗೆಗಿನ ಮಾಹಿತಿ ಅಧಿಕೃತವೆನ್ನಿಸದು. ಮೈಸೂರಿನ ಸರ್ಕಾರಿ ಕೇಂದ್ರ ಮುದ್ರಣಾಲಯದವರು ೧೮೯೦ರಲ್ಲಿ ಹೊರತಂದಿರುವ ಕನ್ನಡ ಬಾಲಬೋಧೆಪುಸ್ತಕ ಮಹತ್ವದ್ದು. ಇದರಲ್ಲಿ ೬೩ ಪಾಠಗಳಿದ್ದು, ಗದ್ಯರೂಪದ ಸರಳವಾದ ಜನಪ್ರಿಯ ಕಥಾನಕಗಳಾಗಿವೆ.

ಜೆ.ಮ್ಯಾಕ್ಸ್ ಮತ್ತು ಕಿಟೆಲ್ ಜತೆಗೂಡಿ ೧೮೬೨ರಲ್ಲಿ ವರ್ತಮಾನ ಸಂಗ್ರಹ ಎಂಬ ಪತ್ರಿಕೆ ಹೊರಡಿಸುತ್ತಿದ್ದರು. ಅಲ್ಲದೆ ಇವರು ಕಾವ್ಯಪುಂಜ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಬಾಲಕರಿಗಾಗಿಯೇ ಕವಿತೆಗಳನ್ನ ರಚಿಸಿದ್ದರು. ಆದರೆ ಇದರಲ್ಲಿರುವ ದಾಸರ ಪದಗಳು, ಸರ್ವಜ್ಞನ ವಚನಗಳು ಮಕ್ಕಳ ಸಾಹಿತ್ಯದ ಪರಿಧಿಯನ್ನು ಮೀರಿವೆ. ಮಕ್ಕಳು ಕಲಿಯಲು ಶಾಲೆಗೆ ಹೋಗುತ್ತಾರೆಂದ ಮಾತ್ರಕ್ಕೆ ಮೀಸೆ ಬಂದವರ ಜಗತ್ತಿನ ನೀತಿಬೋಧನೆ, ಅಧ್ಯಾತ್ಮವನ್ನಾಗಲೀ, ವಿಜ್ಞಾನ ವಿಷಯಗಳ ಅಪರಿಚಿತ ಶಬ್ದಗಳ ಹೊರೆಯನ್ನಾಗಲೀ ತುರುಕಿ ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಪ್ರಯತ್ನ. ಕೇವಲ ಕಂಠಪಾಠದ ಯಾಂತ್ರಿಕ ಸಾಧನೆ ಆಗಬಹುದೇ ಹೊರತು ಮತ್ತೇನಿಲ್ಲ. ಈ ದೃಷ್ಟಿಯಿಂದ ನಮ್ಮ ಶಾಲಾ ಪಠ್ಯಪುಸ್ತಕಗಳೆಲ್ಲವೂ ಒಂದೇ ಹಡು ಹಿಡಿದವು. ಅವು ತಮ್ಮ ಉಪದೇಶಾಮೃತದಿಂದ ಮಕ್ಕಳನ್ನು ನೀತಿವಂತರನ್ನಾಗಿ ಮಾಡುವ ಛಲವುಳ್ಳವು! ಮಕ್ಕಳು ಸಹ ತಮ್ಮ ಸುತ್ತಣ ಜಗತ್ತಿನ ಠಕ್ಕು ಠೌಳಿಗಳನ್ನು ಕಾಣುತ್ತವೆ ಎಂಬುದನ್ನು ತಿಳಿಯಲೊಲ್ಲದ ಹಿರಿಯರ ಪ್ರಯತ್ನ ಅದು! ಇದರಿಂದ ಚ. ವಾಸುದೇವಯ್ಯ (೧೮೫೨-೧೯೪೩) ಅವರ ಬಾಲಭೋಧೆ ಪ್ರಕಟವಾಗುವ ತನಕ ಕನ್ನಡದಲ್ಲಿ ವಸ್ತು, ಭಾಷೆ, ಶೈಲಿ ಒಳತಿರುಳಿನ ದೃಷ್ಟಿಯಿಂದ ನಿಜವಾಗಿ ಮಕ್ಕಳ ಸಾಹಿತ್ಯ ರಚನೆಯಾಗಲಿಲ್ಲ ಎಂದೇ ಹೇಳಬೇಕು, ಅವರಿಗೆ ಮಕ್ಕಳ ಸಾಹಿತ್ಯವಾಗಿ ಸೃಷ್ಟಿಸುವ ಉದ್ದೇಶವೂ ಇದ್ದಂತಿಲ್ಲ. ಆದರೆ ನಿತಿಯುಕ್ತವಾದ ಅಂಶಗಳನ್ನುಕೇಲುವ ಉದ್ದೇಶವಿದ್ದಿತು. ಇದಕ್ಕೆ ದಾಸರ ಪದಗಳು ಹಾಗೂ ಸರ್ವಜ್ಞನ ವಚನಗಳು ಸರಿ ಕಂಡದ್ದರಿಂದ ಅವುಗಳನ್ನು ಹೆಚ್ಚಾಗಿ ಸೇರಿಸಿದಂತಿದೆ. ಆದರೆ ಇಲ್ಲಿ ಸ್ವಲ್ಪ ಮಟ್ಟಿಗೆ ಮಕ್ಕಳ ಸಾಹಿತ್ಯಸ ಪರಿಕಲ್ಪನೆಯ ಬಗೆಗೆ ಗೊಂದಲವಿರುವಂತೆ ತೋರುತ್ತದೆ. ನೀತಿಯುಕ್ತವಾದ ಕಾವ್ಯಭಾಗವನ್ನೇ ಮಕ್ಕಳ ಸಾಹಿತ್ಯವೆಂದು ಪರಿಗಣಿಸಿದಂತೆ ತೋರುತ್ತದೆ. ಚ. ವಾಸುದೇವಯ್ಯನವರು ಬರೆದ ಒಂದನೆಯ ಬಾಲಬೋಧೆ ಸರಳ-ಸುಂದರವಾದ ಆಕರ್ಷಕ ರೀತಿಯಲ್ಲಿ ಮಹತ್ವದ ವಿಚಾರವನ್ನು ಸಂವಹನಗೊಳಿಸುವ ರಚನೆಯಾಗಿದೆ. ಎವರು ಮಕ್ಕಳಿಗಾಗಿ ರಚಿಸಿದ್ದ ಬಾಲಬೋಧೆಗಳು ತಮ್ಮ ಸರಳವಾದ ಗದ್ಯನಿರೂಪಣೆ ಮತ್ತು ಆಕರ್ಷಕ ಭಾಷಾಶ್ಯಲಿಗಳಿಂದ ಅನೇಕ ವರ್ಷಗಳ ಕಾಲ ಪ್ರಾಥಮಿಕ ಶಾಲೆಗಳ ಪಠ್ಯಪುಸ್ತಕಗಳಾಗಿದ್ದು ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ನೆರವಾದವು. ಎಂಬುದಕ್ಕೆ ನಿದರ್ಶವಾದ ಕವಿತೆಯೊಂದು ಇಂತಿದೆ.

ಎಲೆ ಬೆಕ್ಕೆ ರೂಪಿನಿಂದಲೆ
ಹುಲಿಜಾತಿಗೆ ಸೇರ್ದೆನೆಂದು ಗರ್ವಿಸಬೇಡಾ
ಬಲುಮೆಯು ನಿನ್ನಲ್ಲಿಹುದೇ
ನಿಲಿಗಳ ಹಿಡಿವುದರೊಳಾಯ್ತು ನಿನ್ನಯ ಶೌರ್ಯಂ

ಇದರಲ್ಲಿ ಪ್ರಾಸ ಬಿಡದ ಕಂದಪದ್ಯ ಮಾದರಿ ಇರುವುದಾದರೂ ಅಂದಿನ ಮಕ್ಕಳ ಕಲ್ಪನೆಗೆ ಸಾಕ್ಷಿಯಾಗಿದೆ. ಸರಳವಾಗಿದ್ದು ಅರ್ಥಗ್ರಹಿಕೆಯ ಮಾಧ್ಯಮವೆಂಬಂತಿದೆ.