ಎಚ್.ವೈ. ಸರಸ್ವತಮ್ಮ ಅವರ ಮಕ್ಕಳ ಸಚಿತ್ರ ಭಾರತ, ಅಜ್ಜಿಯರಾಜು ಶಿಶುಗೀತಗಳು, ವೈ.ಎಸ್. ಗುಂಡಪ್ಪ ಅವರ ಧ್ರುವಬಾಲ, ಗೋಲಿಯಮೈಮೆ, ತೋಳರಾಯನ ಸಭೆ, ಕಾಸಿನಗಂಟು ಗಮನಾರ್ಹ ಕೃತಿಗಳು, ರಾಘವ ಎಂಬ ಕಾವ್ಯನಾಮದಿಂದ ಬರೆದ ಎಂ.ವಿ.ಸೀತಾರಾಮಯ್ಯ ಅವರ ಹೂವಾಡಗಿತ್ತಿ, ಕುಮಾರ ಗೌತಮ ನಾಟಕ ಹೆಸರಾಂತ ರಚನೆಗಳು.ತಮ್ಮ ಮನೆಯನ್ನೇ ಮಕ್ಕಳ ಮಂಟಪವಾಗಿ ಪರಿವರ್ತಿಸಿದರು ಬಿ.ಎಸ್. ಪಾಂಡುರಂಗರಾಯರು. ಕಲ್ಲುಸಕ್ಕರೆ ಬೆಟ್ಟ ಎಂಬ ಸಾಹಸ ಕಥೆ ಮಕ್ಕಳ ಮನವನ್ನು ತಣಿಸಿದ ಕೃತಿ.ಮರವೇರಿದ ಹುಂಜ, ಮಳೆರಾಯ, ಪುಟಾಣಿ ಗೆಳೆಯ, ಆದರ್ಶ ಸೋದರರು, ಧೀರಮಗ, ಎಳೆಯಭಾರತ ಮಹಾತ್ಯಾಗಿ, ಮಹಾಮಾತೆ ಕೃತಿಗಳು ಮಕ್ಕಳ ಲೋಕದ ಕೈಪಿಡಿಗಳು. ಮಕ್ಕಳ ಸಾಹಿತ್ಯದ ಹೆಜ್ಜೆಪಾಡು ಎಂಬ ಸಮೀಕ್ಷಾರೂಪದ ಗ್ರಂಥವನ್ನೂ ರಚಿಸಿದ್ದಾರೆ.

ಮತಿಘಟ್ಟ ಕೃಷ್ಣಮೂರ್ತಿ ಅವರ ಗುರುವಾಕ್ಯ, ಜಾಣಕತ್ತೆ, ನೊಣದ ಹೆಸರು ಕೇಳಿದ್ದು ಮೊದಲಾದವು ಸಂವಾದಪೂರ್ಣ ಕಥಾಸಂಕಲನಗಳು, ಆರ್.ಎಸ್. ರಾಮರಾಯ ಅವರ ಬಾವುಟ, ಹರಿಶ್ಚಂದ್ರ, ಅತ್ತಿಮಬ್ಬೆ ಕೃತಿಗಳೊಂದಿಗೆ ೯ನೆಯ ತರಗತಿಯವರಿಗಾಗಿ ಸಾಹಸಭೀಮವಿಜಯ, ಗದ್ಯಮಂಜರಿ ಎಂಬ ಕೃತಿಗಳನ್ನು ರೂಪಿಸಿದ್ದಾರೆ.ವರದರಾಜ ಹುಯಿಲಗೊಳ ಅವರು ಹೋರಾಟದ ವೀರರು, ಸಾಹಸಜೀವಿಗಳು ಎಂಬ ಕೃತಿಯಲ್ಲಿ ಸಾಹಸದ ಕಥೆಗಳನ್ನು ಹೇಳಿದ್ದಾರೆ. ಸಾಹಿತ್ಯಮಂಜರಿ, ಸಾಹಿತ್ಯ ಮಧುಸಂಚಯ, ಕನ್ನಡ ಸಾಹಿತ್ಯ ಪ್ರವೇಶ ಎಂಬ ಶಾಲಾ ಪಠ್ಯ ಪುಸ್ತಕಗಳನ್ನು ರಚಿಸಿಕೊಟ್ಟಿದ್ದಾರೆ. ಅವೆಲ್ಲವೂ ಮಕ್ಕಳ ಸಾಹಿತ್ಯ ಸಂಕಲನಗಳೇ ಆಗಿವೆ ಎಂಬುದು ಮಹತ್ವದ ಸಂಗತಿ.

ಡಾ. ಸಿದ್ದಯ್ಯ ಪುರಾಣಿಕರು ಆಧುನಿಕ ವಚನಕಾರರಾಗಿ ಪ್ರಸುದ್ಧರಾದಂತೆ ಮಕ್ಕಳ ಸಾಹಿತ್ಯ ರಚನೆಯಲ್ಲೂ ಸಿದ್ದಹಸ್ತರೆನಿಸಿದ್ದಾರೆ. ಗಿಲ್ ಗಿಲ್ ಗಿಲಗಚ್ಚಿ, ತುಪ್ಪಾ ರೊಟ್ಟಿಗೇಗೆ, ತಿರುಗಲೆ ತಿರುಗಲೆ ತಿರುಗುಯ್ಯಾಲೆ ಎಂಬ ಕವಿತಾ ಸಂಕಲನಗಳು ಪ್ರಸಿದ್ಧವಾಗಿವೆ.ನ್ಯಾಯ ನಿರ್ಣಯ ಎಂಬ ಮಕ್ಕಳ ನಾಟಕ ಕೂಡ ಜನಪ್ರಿಯವಾಗಿದೆ. ಅನಂತರಾಮು ಬೋಸಗೆ ಅವರು ರಚಿಸಿರುವ ಕೆನೆಮೊಸರು, ಚಂದ್ರನ ಕಡೆಗೆ ಕೃತಿಗಳು ರೋಚಕವಾಗಿವೆ. ಎಸ್.ಅನಂತ ನಾರಾಯಣ ಅವರ ಹುಲಿಪಟ್ಟೆ, ಮೊದಲಾದ ನ್ಯಾಯ ಮಕ್ಕಳ ಮನ ರಂಜಿಸುವ ಕೃತಿಗಳು.

ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಿಸುಸಂಮೇಶರ ಹೆಸರು ಮೌಲಿಕವಾದುದು.೧೯೫೫ರಲ್ಲೇ ಭಾರತೀಯ ಸಾಹಿತ್ಯ ಭಂಡಾರ ಗ್ರಂಥಮಾಲೆಯನ್ನು ಆರಂಭಿಸಿ ಮಕ್ಕಳ ಸಾಹಿತ್ಯವನ್ನು ರಚಿಸಲು ಮುಂದಾದರು. ತಮ್ಮ ಸಾಹಿತ್ಯ ಬದುಕಿನುದ್ದಕ್ಕೂ ಮಕ್ಕಳ ಸಾಹಿತ್ಯವನ್ನೇ ಬರೆದ ಹಿರಿಯ ಸಾಹಿತಿ, ನಮ್ಮ ಮನೆ, ನರಿಯ ಪಜೀತಿ, ಯಾರು ಜಾಣರು, ಕಳ್ಳಸಿಕ್ಕ, ಮಂಕುಮರಿ, ಚತುರ ಚಾಣಾಕ್ಷ ಮೊದಲಾದ ಕೃತಿಗಳು ಪ್ರಸಿದ್ದವಾಗಿವೆ. ಇವರ ನನ್ನ ಗೆಳೆಯ ಎಸ್ಕಿಮೋ ಇಗ್ಲಿಯನ್ ಎಂಬ ಕೃತಿ ರಾಷ್ಟ್ರ ಪ್ರಶಸ್ತಿ ಪಡೆದಿದೆ.ಈ ಕಾಲದವರೇ ಆದ ಪಳಕಳ ಸೀತಾರಾಮಭಟ್ಟರು ಮಕ್ಕಳ ಸಾಹಿತ್ಯ ಗುಣಮಟ್ಟವನ್ನು ಎತ್ತಿಹಿಡಿದವರು.ಬಾಲರ ಬಾವುಟ, ಪುಟ್ಟನ ಪೀಪಿ, ತಿಮ್ಮನ ತುತ್ತೂರಿ, ಗಾಳಿಪಟ ಮೊದಲಾದ ಮೂವತ್ತೈದಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿದ್ದಾರೆ. ರಸಿಕ ಪುತ್ತಿಗೆ ಕಾವ್ಯನಾಮದ ಸುಬ್ರಮಣ್ಯ ಆಚಾರ್ಯರ ಇಲಿಗೆ ಅಂಜದ ಹುಲಿ, ತುಂಟತನದ ಕಥೆಗಳು, ತಪೋವನದ ಸಾಹಸಿಗರು, ಸುಕ್ಕಿನುಂಡೆಸುಬ್ಬ ಮೊದಲಾದ ಕಥಾಸಂಕಲನಗಳು ಗಮನಾರ್ಹವಾದವು. ರಂಜನೀಯ ಕಥೆಗಳನ್ನೊಳಗೊಂಡ ಸಂಚಯಗಳಾಗಿವೆ. ಸುಖ್ಯಾತ ಕಾದಂಬರಿಕಾರರಾದ ಎಸ್.ವಿ. ಶ್ರೀನಿವಾಸರಾವ್ ಅವರು ಮಕ್ಕಳಿಗಾಗಿಯೇ ಇಪ್ಪತ್ತೈದು ಪುಸ್ತಕಗಳನ್ನು ಬರೆದಿದ್ದಾರೆ. ಜೀವನಚರಿತ್ರೆ, ವಿಜ್ಞಾನ, ಪುರಾಣವನ್ನಾಧರಿಸಿದ ಅದ್ಭುತಸೃಷ್ಟಿ. ಅವರ ಹಾರೋಹನುಮ ಕೃತಿಗಳು ಜನಪ್ರಿಯವಾಗಿವೆ. ಕೆರೂರು ವಾಸುದೇವಾಚಾರ್ಯರ ಗಂಗರಾಜ ದುರ್ವೀನೀತ, ಅಬ್ದುಲ್ ಕಲಾಂ ಅಜಾದ್, ಗುರುನಾನಕ್ ಮೊದಲಾದ ಐತಿಹಾಸಿಕ ಕೃತಿಗಳನ್ನು ಹೆಸರಿಸಬಹುದು.

ಮಕ್ಕಳ ಸಾಹಿತ್ಯ ರಂಗಕ್ಕೆ ಮಹಿಳಾ ಸಾಹಿತಿಗಳ ಕಾಣಿಕೆ ದೊಡ್ಡದು. ಮಕ್ಕಳ ಮನಸ್ಸನ್ನು ಅರಿತು, ಅವರ ಸಾಮರ್ಥ್ಯ, ಅಭಿರುಚಿಗೆ ತಕ್ಕಂತೆ ಬರೆಯುವ ಹಲವು ಮಂದಿ ಮಹಿಳಾ ಸಾಹಿತಿಗಳಿದ್ದಾರೆ. ಮಕ್ಕಳಕೂಟದ ಕಲ್ಯಾಣಮ್ಮ ಎಂದೇ ಜನಮಾನಸ ದಲ್ಲಿರುವ ಕಲ್ಯಾಣಮ್ಮ ಅವರು ಸರಸ್ವತಿ ಎಂಬ ಪತ್ರಿಕೆಯನ್ನು ಹೊರಡಿಸಿ, ಸುಮಾರು ನಾಲ್ಕು ದಶಕಗಳ ಕಾಲ ನಡೆಸಿದರು. ಮಕ್ಕಳ ಬಾವುಟ ಎಂಬ ಪ್ರತ್ಯೇಕ ವಿಭಾಗವನ್ನೇ ತೆರೆದರು. ನಾಟಕ ಕಥೆಗಳನ್ನು ಬರೆದು ಪ್ರಕಟಿಸಿದ್ದಲ್ಲದೆ ಹಲವರಿಗೆ ಪ್ರಕಟಣಾ ಅವಕಾಶ ಮಾಡಿದವರು. ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರಿಂದ ಸುವರ್ಣ ಪದಕದ ಬಹುಮಾನ ಪಡೆದಿದ್ದ ಇವರ ಸೇವಾಕಾರ್ಯಗಳು ಮಹತ್ವದ್ದು.ಮಕ್ಕಳ ಲೋಕವನ್ನೇ ಸೃಷ್ಟಿಸಿದ ಧೀಮಂತ ಮಹಿಳೆ. ನಿರುಪಮಾ ಅವರು ಬರೆದಿರುವ ಸುವರ್ಣ ಸಾಹಸ, ಚಂದಕ್ಕಿಮಾಮ, ಮರ್ಯಾದೆ ರಾಮಣ್ಣನ ಕಥೆಗಳು, ಪಂಚತಂತ್ರದ ಕಥೆಗಳು ಪ್ರಮುಖವಾಗಿವೆ. ಅವರು ಮಕ್ಕಳ ಸಾಹಿತ್ಯದ ಬಗೆಗೆ ವಿಮರ್ಶಾ ಕೃತಿಗಳನ್ನೂ ಬರೆದಿದ್ದಾರೆ. ಡಾ. ಸರೋಜಿನಿ ಮಹಿಷಿ ಅವರ ಮುಳ್ಳುಗುಲಾಬಿ ಎಂಬ ಕವನ ಸಂಕಲನದಲ್ಲಿ ಕಥನಕವನ, ಸಮರಗೀತೆ, ಪ್ರಾಣಿಗಳೇ ಸಂಭಾಷಣೆ ನಡೆಸುವ ತಂತ್ರ ವಿಧಾನದ ಸಾಹಿತ್ಯವನ್ನು ರಚಿಸಿದ್ದಾರೆ. ಬಿ.ಎಸ್. ರುಕ್ಕಮ್ಮ ಅವರು ಬರೆದ ಪೇಬರನ ಕೀಟಲೋಕ, ಮೇರಿಕ್ಯೂರಿ ಮಕ್ಕಳಿಗೆ ಪ್ರಿಯವಾದ ವೈಜ್ಞಾನಿಕ ಕೃತಿಗಳು, ಅನುಪಮಾ ನಿರಂಜನ ಅವರು ಬರೆದ ದಿನಕ್ಕೊಂದು ಕಥೆ ಎಂಬ ಹೆಸರಿನಲ್ಲಿ ಹನ್ನೆರಡು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗಾಯತ್ರಿಮೂರ್ತಿ ಅವರು ವೈಜ್ಞಾನಿಕ ಕಥೆಗಳನ್ನು ಬರೆಯುವಲ್ಲಿ ಹೆಸರಾದವರು. ಗಾಳಿ, ಬೆಳಕು, ನೀರು, ಶಾಖ, ಶಬ್ದ ಮೊದಲಾದ ವಿಚಾರಗಳನ್ನು ಕುರಿತು ಅತ್ಯಂತ ಸರಳವಾಗಿ ಬರೆದಿದ್ದಾರೆ. ಎನ್. ಎಸ್. ಸರಸ್ವತಿ ಅವರ ಭೂತಯ್ಯನ ಗುಡಿ, ವನಮಾಲಾ ಅವರ ಬುದ್ಧಿಬಲದ ಕಥೆಗಳು, ಭಾರತೀದೇವಿ ಅವರ ಬುದ್ಧಿವಂತರು, ಜಿ. ವಿಮಲಾ ತುಂಡರತೇರು, ಇಂದಿರಾಹಾಲಂಬಿ ಅವರ ಜೊತೆಯಲ್ಲಿ ಇರುವವರು, ಎಸ್.ಕೆ. ರಮಾದೇವಮ್ಮ ಅವರ ರಷ್ಯನ್ ಮಕ್ಕಳ ಕಥೆಗಳು, ಶರ್ವಾಣಿ ಅವರ ಭೂತದ ಲಥೆಗಳು ಜಿ. ಅನುರಾಧ ಅವರ ಮೈದಾನದ ಪ್ರಸಂಗ ಮೊದಲಾದ ಕೃತಿಗಳನ್ನು ಉಲ್ಲೇಖಿಸಬಹುದು. ತಿರುಮಲಾಂಬ, ಆರ್ಯಾಂಬ ಪಟ್ಟಾಭಿ, ಎ. ಪಿ. ಮಾಲತಿ, ಟಿ.ಸುನಂದಮ್ಮ ಇವರ ರಚನೆಗಳೂ ಕೂಡ ಮಕ್ಕಳ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

ಕೆ. ಎಸ್. ನಿಸಾರ್ ಅಹಮದ್ ಅವರ ರಚಿಸಿರುವ ಹಕ್ಕಿಗಳು, ಶಿಲೆಗಳು, ಖನಿಜಗಳು, ಪಟ್ಟ ಸಂತರು ಮತ್ತು ಕಲೆಗಳು ಪುಸ್ತಕಗಳು ಜನಪ್ರಿಯವಾಗಿವೆ. ಹಕ್ಕಿಗಳು ಕೃತಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ರಾಜಶೇಖರ ಭೂಸನೂರು ಮಠ ಅವರು ವೈಜ್ಞಾನಿಕವಾಗಿ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಕ್ಷಸ ದೀಪ, ಕಾನನದ ಕಥೆಗಳು, ನೇತ್ರಬಂಧ, ಚಂದ್ರನ ಕಥೆ, ಮಂಗಳ ಲೋಕದಲ್ಲಿ ಮೊದಲಾದ ಪುಸ್ತಿಕೆಗಳನ್ನು ರಚಿಸಿದ್ದಾರೆ. ಹ.ರಾ. ಕಿದಿಯೂರ ಅವರು ಚಿತ್ರಸಹಿತವಾದ ಕಡ್ಡಿಗುಮ್ಮ, ನರಿಯಣ್ಣ ಕಥೆಗಳು, ಮೂರ್ಖಕತ್ತೆ, ಹೊಂಡಕ್ಕೆಬಿದ್ದ ಹುಲಿರಾಯ ಕಥಾಸಂಕಲನಗಳನ್ನು ಪ್ತಕಟಿಸಿದ್ದಾರೆ. ಇವುಗಳಲ್ಲಿ ರಂಜನೆಗಿಂತಲೂ ಜ್ಞಾನಸಿಂಚನ ಪ್ರಧಾನವಾಗಿದೆ.

ರಾಘವೇಂದ್ರ ಇಟಗಿ ಅವರು ವಸುಂಧರಾ ಗೀತೆಗಳು ಬಾಲಗೀತಾವಲಿ, ಆಗಸನ ತೋಟದ ಹೂಗಳು ಎಂಬ ಉತ್ತಮ ಕವನ ಸಂಕಲನಗಳನ್ನು ಪ್ರಕಟಿಸಿ ಪ್ರಸಿದ್ಧರಾಗಿದ್ದಾರೆ. ಎಂ.ಡಿ. ಗೋಗೇರಿ ಅವರ ಕುರಿಮರಿ ಬೇಕೆ? ಅಕ್ಕ, ಚುನಾವಣೆಗೆ ನಿಂತ ನಮ್ಮ ಕಡೇ ಮನಿಹನಿಮಂತ ಎಂಬ ಕೃತಿಗಳು ಗಮನ ಸೆಳೆಯುತ್ತವೆ.

ಬಿ.ಆರ್. ವಾಡಪ್ಪಿ ಅವರ ರಾಯರಸೋಲು, ನಿತ್ಯನಾಟಕಗಳು ಎಂಬ ನಾಟಕಗಳು, ಮುಳ್ಳುಕಂಟಿ, ಗುಡುಗುಮಿಂಚು ಎಂಬ ಕವನ ಸಂಕಲನಗಳು. ಕನ್ನಡ ಬರಹ ಎಂಬ ಲೇಖನಮಾಲೆ ಮಕ್ಕಳಿಗಾಗಿಯೇ ಬರೆದಂಥವು. ಚಿ. ಗೋ ರಮೇಶ್, ಸಂಪೂರು ವಿಶ್ವನಾಥ, ಪ. ರಾಮಕೃಷ್ಣಶಾಸ್ತ್ರೀ, ಕಮಲಾರಾಮಸ್ವಾಮಿ, ಟಿ. ಎಸ್. ನಾಗರಾಜಶೆಟ್ಟಿ, ಬಿ. ಎ. ಸನದಿ, ಶಂ. ಗು. ಬಿರದಾರ, ನರಹರಿಶರ್ಮ, ಈಶ್ವರ ಕಮ್ಮಾರ, ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ, ಎಚ್. ಎಸ್. ವೆಂಕಟೇಶಮೂರ್ತಿ, ಜಂಬೂನಾಥ ಕಂಚ್ಯಾಣಿ, ಚನ್ನವೀರ ಕಣವಿ, ವಿ. ಜಿ. ಭಟ್ಟ, ಕಯ್ಯಾರ ಕಿಂಞ್ಞಣ್ಣರೈ, ಪರುಶರಾಮ ಚಿತ್ರಗಾರ, ಜಿ.ಎನ್. ಲಕ್ಷ್ಮಣಪೈ ಮೊದಲಾದ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಣನೀಯವಾದುದು. ಪಠ್ಯಪಸ್ತಕ, ಆಯ್ದ ಕವಿತೆಗಳು ಮೊದಲಾದ ಮಾಧ್ಯಮಗಳು ಮೂಲಕ ಮಕ್ಕಳಿಗೆ ಪರಿಚಿತರಾಗಿರುವ ಸಾಹಿತಿಗಳು ಹೆಚ್ಚಿನ ಕುತೂಹಲಾಸಕ್ತಿಗೆ ಪ್ರೇರಕರಾಗಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯ ನವೋದಯ, ಪ್ರಗತಿಶೀಲ, ನವ್ಯ ಬಂಡಾಯ, ದಲಿತಸಾಹಿತ್ಯವೆಂಬ ಮಜಲುಗಳನ್ನು ಗುರುತಿಸಿಕೊಂಡು ಬೆಳೆಯಿತು. ಅದಕ್ಕೆ ತನ್ನದೇ ಆದ ಹಿನ್ನೆಲೆ, ಪ್ರೇರಣೆ, ಪ್ರಭಾವ, ಸ್ವರೂಪಗಳಿರುವುದಾದರೂ ಸಣ್ಣಕತೆ, ಕವಿತೆಯ ಜತೆಗೆ ಕಾದಂಬರಿ, ಪ್ರಬಂಧ ಜೀವನಚರಿತ್ರೆ, ಅನುವಾದ, ವಿಜ್ಞಾನ ಸಾಹಿತ್ಯದಂತ ಹೊಸ ಪ್ರಕಾರಗಳು ಸೇರಿಕೊಂಡವು. ಮಕ್ಕಳಸಾಹಿತ್ಯ ನವೋದಯ ಸಂದರ್ಭದಲ್ಲಿ ಬಂದಷ್ಟು ಸಮೃದ್ಧವಾಗಿ ಉಳಿದ ಮಜಲುಗಳ ಸಂದರ್ಭದಲ್ಲಿ ರಚನೆಯಾಗಲಿಲ್ಲ! ಅಂದಿನ ಅಗತ್ಯತೆ, ಪ್ರೇರಣೆಯನ್ನಾಧರಿಸಿ ತನ್ನದೇ ಆದ ಪಥವನ್ನು ತೆರೆದುಕೊಂಡಿತು.

ಸ್ವಾತಂತ್ರದ ವೇಳೆಗೆ ಶಾಲಾಪಠ್ಯಪುಸ್ತಕಗಳಿಗಾಗಿ ಸಿದ್ಧವಾಗುತ್ತಿದ್ದ ಸಾಹಿತ್ಯ ಭದ್ರವಾದ ಅಡಿಪಾಯ ಹಾಕಿತು. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಹೆಸರು ಮಾಡಿದ್ದ ಹಿರಿಯ ಸಾಹಿತಿಗಳೇ ಮಕ್ಕಳ ಸಾಹಿತ್ಯವನ್ನು ಬರೆಯಲು ಮುಂದಾದರು. ೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯದ ವಿಂಗಡಣೆಯಾದಾಗ ವಿಶಾಲ ಮೈಸೂರು ರಾಜ್ಯದ ಕನ್ನಡ ಭಾಷಿಕ ಪ್ರದೇಶಗಳು ಒಗ್ಗೂಡಿದವು. ಏಕಪ್ರಕಾರದ ಪಠ್ಯಪುಸ್ತಕ ರಚನೆಗಾಗಿ ಸಿದ್ಧತೆ ನಡೆಯಿತು! ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರವಲ್ಲದೆ ಪ್ರತ್ಯೇಕ ಕೃತಿಗಳು ವಿಶೇಷವಾಗಿ ಬಂದವು. ಮಾಧ್ಯಮಗಳ ಪ್ರೋತ್ಸಾಹಕರ ಯೋಜನೆಯಿಂದ ಮಕ್ಕಳ ವಿಭಾಗವನ್ನೆ ಆರಂಭಿಸಿದ್ದು ಮಹತ್ವದ ಸಂಗತಿ. ಸ್ಪರ್ಧೆ, ಬಹುಮಾನ, ಪ್ರಸಾರದ ದೃಷ್ಟಿಯಿಂದಲೂ ವಿವಿಧ ಲೇಖಕರ ಬಗೆ ಬಗೆಯ ರಚನೆಗಳು ಬಂದವು. ಅನುವಾದಗಳೂ ಸೇರಿದವು. ೧೯೭೯ ರಲ್ಲಿ ಅಂತಾರಾಷ್ಟ್ರೀಯ ಮಕ್ಕಳ ವರ್ಷವನ್ನು ಆಚರಿಸುವ ನೆಪದಲ್ಲಿ ಮತ್ತಷ್ಟು ಪ್ರೋತ್ಸಾಹ ಲಭ್ಯವಾಯಿತು.

ಮಕ್ಕಳ ಸಾಹಿತ್ಯವು ಸರಳತೆ, ಪ್ರಾಸಬದ್ದತೆ, ಪ್ರಾದೇಶಿಕತೆಯೊಂದಿಗೆ ಅವರಿಗೆ ನಿಲುಕುವ ವಸ್ತುಗಳನ್ನು ಆಧರಿಸುವುದು ಅನಿವಾರ್ಯ. ಅಂತೆಯೇ ಜ್ಞಾನವನ್ನು ಹೆಚ್ಚಿಸುವ, ಭಾಷಾ ಕೌಶಲ ಬೆಳೆಸುವ, ರಂಜನೆ ನೀಡುವಂಥ ರಚನೆ ಅಗತ್ಯವಾದ ಅಪೇಕ್ಷೆ. ನಮ್ಮಲ್ಲಿ ಕವನ, ಕಥೆ ಬಂದಷ್ಟು ಸಮೃದ್ದವಾಗಿ ಇತರ ಪ್ರಕಾರಗಳು ಮಕ್ಕಳ ಸಾಹಿತ್ಯದಲ್ಲಿ ಬರಲಿಲ್ಲ! ಜೀವನಚಿತ್ರಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ನಾಟಕ, ಶಾಲಾ ವಾರ್ಷಿಕೊತ್ಸವ ಹಾಗೂ ಪಠ್ಯದಲ್ಲಿ ಆಯ್ದ ಒಂದು ಭಾಗವನ್ನು ನಿಗದಿ ಪಡಿಸುವುದಕ್ಕೆ ಸೀಮಿತಗೊಂಡಿತು. ಮಕ್ಕಳ ಪಾತ್ರಗಳೇ ಪ್ರಧಾನವಾಗಿರುವ ನಾಟಕಗಳೂ ಕಡಿಮೆ.೧೯೨೫ ರಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದ ಶ್ರೀಕೃಷ್ಣಗಾರುಡಿ, ಕಂಸವಧೆ, ಶ್ರೀಕೃಷ್ಣ ಪಾರಿಜಾತ, ಭಕ್ತ ಮಾರ್ಕಂಡೇಯ, ಧ್ರುವ, ಪ್ರಹ್ಲಾದ ಮೊದಲಾದವು ಪುರಾಣವನ್ನು ಆಧರಿಸಿದರೂ ಗಮನ ಸೆಳೆದಿವೆ. ಕುವೆಂಪು ರಚಿಸಿದ ನನ್ನ ಗೋಪಾಲ, ಮೋಡಣ್ಣನ ತಮ್ಮ ಕೃತಿಗಳನ್ನು ಹೆಸರಿಸಬೇಕು. ಪುರಾಣ, ಇತಿಹಾಸದ ವಸ್ತುವನ್ನಾಧರಿಸಿದ ಭಕ್ತಿಪೂರ್ಣ ನಾಟಕಗಳು ಬಂದಿವೆ.

ಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಗೊಂಡ ಕಾದಂಬರಿಗಳು ಬಂದಿವೆಯಾದರೂ ಮಕ್ಕಳ ಓದುವುದಕ್ಕೆ ದೊಡ್ಡದೆನ್ನಿಸಿವೆ. ರಸಿಕ ಪುತ್ತಿಗೆ ಅವರ ಕೆಂಪುಕಾರು, ಎಂ. ಪಿ. ಮನೋಹರಚಂದ್ರನ್ ಅವರ ಅಮಾನುಷರು ಮೊದಲಾದ ಕಾದಂಬರಿಗಳು ಪ್ರಕಟವಾಗಿವೆಯಾದರೂ ಅಭ್ಯಸದ ದೃಷ್ಟಿಯಿಂದ ಕಡಿಮೆ, ಪಠ್ಯಪುಸ್ತಕಗಳಿಗೆ ಅಳವಡಿಸಲಾಗದಷ್ಟು ವಿಸ್ತಾರವಾಗಿವೆ. ಪ್ರತ್ಯೇಕವಾಗಿ ಮಕ್ಕಳ ಓದುವಿಕೆ ಕಡಿಮೆಯಿದ್ದು ಪ್ರಸಾರದ ದೃಷ್ಟಿಯಿಂದ ಕೊರತೆಯೇ ಆಗಿದೆ.

ಚಿತ್ರಸಹಿತವಾದ ರೋಚಕ ಕಥಾಬಿತ್ತಿಗಳು ಮಕ್ಕಳನ್ನು ಆಕರ್ಷಿಸುತ್ತವೆ. ನಿರೂಪಣೆಯಲ್ಲಿ ಚಿತ್ರವೇ ಪ್ರಧಾನವಾಗಿದ್ದು ಸಂಭಾಷಣೆಯಿಂದ ಕೂಡಿದ ದೃಶ್ಯಾವಳಿಗಳಿರುತ್ತವೆ. ಪತ್ರಿಕೆಗಳಲ್ಲಿ ಹೆಚ್ಚಾಗಿ ಪ್ರಕಟವಾಗವ ಚಿತ್ರಕಥೆಗಳು ಪುಸ್ತಕ ರೂಪದಲ್ಲಿ ಬರುತ್ತಿವೆ. ಫ್ಯಾಂಟಮ್, ಚಾಣಕ್ಯ, ರಾಮನ್, ಕಿಟ್ಟುಪಟ್ಟು ಮೊದಲಾದ ಸಂಚಿಕೆಗಳು ಪತ್ರಿಕೆಗಳನ್ನು ಆಶ್ರಯಿಸಿವೆ. ಚಿತ್ರ ಮತ್ತು ಫ್ಯಾಂಟಸಿ ಸಾಹಸಗಳಿಂದಾಗಿ ಹೆಚ್ಚು ಜನಪ್ರಿಯವಾಗಿವೆ. ಮಹಾಪುರುಷರ ಜೀವನ ಚಿತ್ರಗಳು ಇತಿಹಾಸ, ಪುರಾಣ ಮತ್ತು ವಿಜ್ಞಾನ ಜಗತ್ತಿನ ಪ್ರಾತಿನಿಧಿಕ ರೂಪವಾಗಿರುತ್ತವೆ ಆದರ್ಶದೋಪಾದಿಯಲ್ಲಿ ಮಕ್ಕಳ ಮನಸ್ಸಿನಲ್ಲಿ ನೆಲೆಯೂರುತ್ತವೆ. ರಾಷ್ಟ್ರೋತ್ಥಾನ ಬಳಗದವರು ಪ್ರಕಟಿಸಿದ ಸಾವಿರಾರು ಪುಸ್ತಿಕೆಗಳು ಈ ಮಾದರಿಯವಾಗಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜೀವನಾದರ್ಶ, ಸಿದ್ದಿಯನ್ನು ಅರಿಯಲು ಪ್ರೇರಕ ಮತ್ತು ಪೋಷಕ ಕೃತಿಗಳು.

ವಿಜ್ಞಾನದ ಅಧ್ಯಯನ ಬಹಳ ಹಿಂದಿನಿಂದ ಇರುವುದಾದರೂ ವೈಜ್ಞಾನಿಕ ವಿಷಯವನ್ನೊಳಗೊಂಡ ಮಕ್ಕಳ ಸಾಹಿತ್ಯ ಕೃತಿಗಳು ವಿಶೇಷವಾದವು. ವೈಯಕ್ತಿಕ ರಚನೆಯೊಂದಿಗೆ ಭಾರತೀಯ ವಿಜ್ಞಾನ ಕೇಂದ್ರ, ವಿಜ್ಞಾನ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಅಧ್ಯಯನ ಕೇಂದ್ರಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ ಬಗೆ ಬಗೆಯ ಪುಸ್ತಕಗಳನ್ನು ಪ್ತಕಟಿಸಿವೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರದ ವಿಷಯಗಳೊಂದಿಗೆ ವಿಜ್ಞಾನಿಗಳ ಜೀವನ-ಸಾಧನೆಯನ್ನು ಕುರಿತ ಕೃತಿಗಳೂ ಬಂದಿವೆ. ಈ ನಿಟ್ಟಿನಲ್ಲಿ ಎನ್. ವಾಸುದೇವ, ನಾಗೇಶ ಹೆಗ್ಗಡೆ, ಜಿ.ಟಿ. ನಾರಾಯಣರಾವ್, ಗಾಯತ್ರಿ ಮೂರ್ತಿ, ಸರಿತಾ ಜ್ಞಾನಾನಂದ, ಡಾ. ಗಿರಿಜಮ್ಮ ಮೊದಲಾದವರ ರಚನೆಗಳನ್ನು ಗಮನಿಸಬಹುದು. ಪಠ್ಯಪುಸ್ತಕಗಳಲ್ಲಿ ನಿರ್ದಿಷ್ಟ ವಿಷಯ ವಿಶ್ಲೇಷಣೆ ಮುಖ್ಯವಾಗಿದ್ದರೆ ಇತರ ಕೃತಿಗಳಲ್ಲಿ ವಿಚಾರ ವೈವಿಧ್ಯತೆ ಇರುತ್ತದೆ. ಮಂತ್ರವಿದ್ಯೆ, ಆಕಾಶಕಾಯಗಳು, ಸೌರಮಂಡಲ, ಪ್ರಸಿದ್ಧ ವಿಜ್ಞಾನಿಗಳು, ಹಕ್ಕಿಗಳು, ವಿಜ್ಞಾನಿಗಳೊಡನೆ ರಸನಿಮಿಷಗಳು, ಕಾಂತಗಳು, ಹಾರುವ ಕಾರು, ಭೂಮಿ, ಆಯಸ್ಕಾಂತ, ಸೌರಶಕ್ತಿ, ಪರಿಸರ, ಜನಸಂಖ್ಯೆ, ಬಾನಾಮತಿ, ಬೆಳಕು, ಗಾಳಿ, ನೀರು, ಆಹಾರದ ಬಗೆಗೆ ಕೃತಿಗಳು ರಚನೆಯಾಗಿವೆ. ಮಕ್ಕಳಿಗೆ ನಿರ್ದಿಷ್ಟ ವಿಷಯದಲ್ಲಿ ಮಾಹಿತಿ ಒದಗಿಸುವ ಪ್ರಂಬಂಧ ರೂಪದ ಕೈಪಿಡಿಗಳಾಗಿವೆ.

ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಟೂನ್ ಮಾದರಿಯ ಸಾಹಸ ಕತೆಗಳ ಪುಸ್ತಕಗಳು ಬಂದಿವೆಯಾದರೂ ಅವುಗಳ ಪ್ರಮಾಣ ಕಡಿಮೆ. ಸೃಜನಾತ್ಮಕತೆ, ಅರಳು ಪ್ರತಿಭೆಯಂಥ ವೈಜ್ಞಾನಿಕ ಲೇಖನ ಕೃತಿಗಳು ಮಕ್ಕಳ ಆಸಕ್ತಿಯನ್ನು ಹೆಚ್ಚಿಸಿ ಬೌದ್ದಿಕ ಕಸರತ್ತನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಡಾ. ಭಾಸ್ಕರ್ ರಾವ್ ಅವರ ಪ್ರಯತ್ನ ಶ್ಲಾಘನೀಯವಾದುದು. ಕ್ರೀಡೆ, ಯೋಗಾಸನ, ಶಿಲ್ಪಕಲೆ, ಕಲೆ, ದೈನಂದಿನ ಜೀವನವನ್ನು ಕುರಿತಂತೆ ತಿಳಿವು ಮೂಡಿಸುವ ಪುಸ್ತಕಗಳು ಬಂದಿವೆ. ಪತ್ರಿಕೆಗಳು ಇಂತಹ ವಿಷಯಗಳನ್ನು ಪ್ರಸಾರ ಮಾಡುತ್ತಾ ಬಂದಿವೆ. ಪ್ರತಿ ಭಾನುವಾರ ರಾಜ್ಯ ಮಟ್ಟದ ಎಲ್ಲಾ ಪತ್ರಿಕೆಗಳು ಮಕ್ಕಳ ವಿಶೇಷ ಪುಟವನ್ನೇ ಪ್ರಕಟಿಸುತ್ತಿವೆ.ಮಕ್ಕಳ ಸಾಹಿತ್ಯ ಇತ್ತೀಚೆಗೆ ವಿಪುಲವಾಗಿ ಬೆಳೆಯುತ್ತಿದೆ.

ಮಕ್ಕಳ ಸಾಹಿತ್ಯವೆಂದರೆ ಮಕ್ಕಳಿಗಾಗಿಯೇ ರೂಪಿಸಿದ್ದಾಗಿದೆ! ಮಕ್ಕಳ ಮನೋಭೂಮಿಕೆಯನ್ನೇ ಅಳತೆಗೋಲನ್ನಾಗಿ ಮಾಡಿಕೊಂಡು ರಚಿತವಾಗಿದ್ದರೆ ಹೆಚ್ಚು ಮೌಲಿಕವಾಗುತ್ತದೆ. ಚಿಣ್ಣರ ಅನುಭವಕ್ಕೆ ದಕ್ಕದ ಅವರ ಗ್ರಹಿಕೆಗೆ ಬಾರದ ಕೃತಿ ಎಷ್ಷೇ ಶ್ರೇಷ್ಠ ಎನ್ನಿಸಿಕೊಂಡಿದ್ದರೂ ಅದು ಮಕ್ಕಳ ಸಾಹಿತ್ಯದ ಜಾಯಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಪ್ರೇರಕ ಗುಣಗಳಿದ್ದಲ್ಲಿ ಮುಗ್ದ ಮನಸ್ಸಿಗೆ ರಂಜನೆಯೊಂದಿಗೆ ಜ್ಞಾನಾರ್ಜನೆಯನ್ನೂ ನೀಡುತ್ತದೆ. ಅಲ್ಲಿನ ಕಾವ್ಯಶಿಲ್ಪವು ಪ್ರೌಢತೆ, ವೈಚಾರಿಕತೆ ಇತ್ಯಾದಿ ಮಾನದಂಡಗಳನ್ನು ಮೀರಿದ್ದು. ಅಮೂರ್ತತೆ, ಸಂಕೀರ್ಣತೆ, ಆದರ್ಶ, ಮೌಲ್ಯ ಮೊದಲಾದ ವಿಶ್ಲೇಷಣಾತ್ಮಕ ವಿಚಾರಗಳು ಗೌಣವಾಗಿರಬೇಕು. ಸಿಕ್ಕು-ಗೊಂದಲ ರಹಿತವಾದ ಭಾಷೆಯ ಸರಳತೆ ಅಪೇಕ್ಷಣೀಯವಾದುದು. ಉತ್ತಮ ಪ್ರಾರಂಭ, ಕುತೂಹಲಪೂರಿತ ಬೆಳವಣಿಗೆ, ಊಹೆಗೆ ನಿಲುಕುವ ಮುಕ್ತಾಯ ಹಾಗೂ ಕ್ರಮಬದ್ಧತೆಯಿಂದ ನೇರವಾಗಿ ಅರ್ಥವಾಗುವಂತಿದ್ದರೆ ಅದೊಂದು ಮೇಲ್ಮಟ್ಟದ ರಚನೆಯಾಗಿ ಉಳಿಯುತ್ತದೆ. ಸಾಮಾನ್ಯ ಅಂಶವನ್ನು ಅದ್ಬುತ ಕಲ್ಪನಾ ವಿಲಾಸದಲ್ಲಿ ಹೆಣೆಯುವುದು ಮಕ್ಕಳ ಸಾಹಿತ್ಯದ ತಂತ್ರರಹಸ್ಯ.

ಉದಾತ್ತತೆ, ಸಂಕ್ಷಿಪ್ತತೆ ಮಕ್ಕಳ ಸಾಹಿತ್ಯದ ಮತ್ತೊಂದು ಗುಣ. ಲಂಬಿಸಿದರೆ ಅದು ಶುಷ್ಕವೆನ್ನಿಸುತ್ತದೆ. ಬೆಳವಣಿಗೆಯು ಮಹತ್ವದ ಅಂಶವೊಂದನ್ನು ಹೇಳುವ ಹಂಬಲವನ್ನು ಹೊಂದಿರಬೇಕು. ಬುದ್ಧಿವಂತಿಕೆ, ಆಸೆ, ಮೋಸ, ಕಳ್ಳತನ, ಸುಳ್ಳು ಕುಶಲತೆಯ ತಂತ್ರ, ಸ್ನೇಹ, ಎಚ್ಚರ ಮೊದಲಾದ ಪರಿಕಲ್ಪನೆಗಳನ್ನು ದೃಷ್ಟಾಂತಗಳ ಮೂಲಕ ಸೂಚಿಸಿ ಅರಿವನ್ನು ಮೂಡಿಸಬಹುದು. ಇದಕ್ಕೆ ಪ್ರಾಣಿಗಳನ್ನು ಪಾತ್ರಗಳನ್ನು ಮಾಡಿಕೊಳ್ಳುವ ಮತ್ತು ಜನಪದ ಪುರಾಣ, ಕಾವ್ಯಗಳಿಂದ ವಸ್ತುವನ್ನು ಪಡೆದು ವಿಶೇಷ ದೃಷ್ಟಿಯಿಂದ ನೋಡುವ ಪದ್ಧತಿ ಇದೆ. ಪ್ರಕೃತಿವೈವಿಧ್ಯ, ಅಮಾನುಷ ಪಾತ್ರ ಸೃಷ್ಟಿ. ರೋಮಾಂಚನ ಘಟನೆಗಳು ವೈಜ್ಞಾನಿಕ ಪರಿಣಾಮ, ಮಹಾಪುರುಷರ ಬದುಕು, ವಾಸ್ತವಪ್ರಸಂಗಗಳು ಸೂಕ್ಷ್ಮ ಮನಸ್ಸಿನ ಸುಪ್ತ ಪ್ರಜ್ಞೆಯ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುವುದರಿಂದ ಪ್ರೇರಕ ಅಂಶಗಳಾಗುತ್ತವೆ.

ಬಾಲ್ಯ ಜೀವನಾನುಭವದ ಸಿಂಹಾವಲೋಕನ ಕ್ರಮವೂ ಮಕ್ಕಳ ಸಾಹಿತ್ಯದ ಯಶಸ್ಸಿಗೆ ಸ್ಪೂರ್ತಿ ನೀಡುತ್ತದೆ. ಏಕತಾನತೆಯ ಜಡತ್ವವನ್ನು ಹೊರದೂಡಿ ಆತ್ಮವಿಶ್ವಾಸವನ್ನು ಮೂಡಿಸಿವ ಶಕ್ತಿ ಮಕ್ಕಳ ಸಾಹಿತ್ಯಕ್ಕಿದೆ. ದೊಡ್ಡವರೂ ಓದಿ ಆನಂದಿಸಬಹುದು. ಅರ್ಥಪೂರ್ಣ ಸನ್ನಿವೇದಿಂದ ಮಕ್ಕಳ ಕೀಳರಿಮೆಯ ಪ್ರವೃತಿ ಅಳಿದು ವೈಜ್ಞಾನಿಕ ಅರಿವು ಮೂಡುತ್ತದೆ. ವಿಚಾರಶಕ್ತಿ ಹಾಗೂ ಕಲ್ಪನಾ ಸಾಮರ್ಥ್ಯವನ್ನು ವಿಕಾಸಗೊಳಿಸಿ ಔಪಚಾರಿಕ ಶಿಕ್ಷಣಕ್ಕೂ ನೆರವು ನೀಡುತ್ತದೆ.ಇದರಿಂದಲೇ ಪ್ರಾಥಮಿಕ ಹಂತದ ಪಠ್ಯಪುಸ್ತಕಗಳ ಪ್ರಮುಖ ಭಾಗ ಮಕ್ಕಳ ಸಾಹಿವೇ ಆಗಿರುತ್ತದೆ. ಮಕ್ಕಳ ಚಟುವಟಿಕೆಯನ್ನರಿತ ಕವಿಯ ಹೃದಯ ಪರಕಾಯ ಪ್ರವೇಶ ಮಾಡಿ ಅನುಭವಗಳಿಗೆ ಮೂರ್ತರೂಪ ಕೊಡುವುದೇ ಮಕ್ಕಳ ಸಾಹಿತ್ಯ.

ಮಕ್ಕಳ ಸಾಹಿತ್ಯ ಸರಳವಾಗಿರುತ್ತವೆ. ಅದೇ ಅದರ ಶ್ರೇಷ್ಠ ಗುಣ. ಆದರೆ ರಚನೆ ಅಷ್ಟೇ ಕಷ್ಟ. ಮಕ್ಕಳ ಬೌದ್ಧಿಕ, ಶೈಕ್ಷಣಿಕ, ಸಾಮಾಜಿಕ, ನೈತಿಕ, ಭಾಷಿಕ ಕ್ಷಿತಿಜವನ್ನು ರಂಜನೀಯವಾಗಿ ವಿಸ್ತರಿಸಬಹುದಾದ ಕಾರ್ಯ ಅದು. ಮಕ್ಕಳ ಪರಿಸರಕ್ಕೆ ನಿಲುಕುವ ವಸ್ತು ವಿಶ್ಲೇಷಣೆಯಾಗುತ್ತದೆ. ಖಚಿತ ಅಭಿಪ್ರಾಯದ ಪೂರ್ಣತೆಯನ್ನು ಮೂಡಿಸಲಾಗದಿದ್ದರೂ ಜ್ಞಾನ ವಿಕಾಸಕ್ಕೆ ಪೂರಕವಾಗುವಂತಿರಬೇಕು. ಸಂದಿಗ್ದತೆಗೆ ಎಡೆಯಿಲ್ಲದೆ ಚೊಕ್ಕ ಬರಹದ ಮಾದರಿಯಾಗಿರಬೇಕು. ಮಕ್ಕಳಿಗಾಗಿಯೇ ಬರೆಯಲು ಹೊರಟರೂ ಎಷ್ಟೋ ವೇಳೆ ಚಿಂತನೆ ಹಾಗೂ ಅಭಿವ್ಯಕ್ತಿ ಆ ಉದ್ದೇಶವನ್ನು ಮೀರುತ್ತದೆ.

ಮಕ್ಕಳಿಗಾಗಿ ಬರೆಯಬೇಕೆಂಬ ಉತ್ಸಾಹಶೀಲ ಸಾಹಿತಿಗಳು ಅನೇಕರಿದ್ದಾರೆ. ಅದೊಂದು ವಿಶೇಷ ಕಲೆ ಆರೋಗ್ಯಕರ ಬೆಳವಣಿಗೆಯನ್ನು ಕಾಣುವ ವಸ್ತವಿನ ಆಯ್ಕೆ, ಸರಳ ಭಾಷೆಯ ಸೊಬಗು, ಉತ್ತಮ ನಿರೂಪಣೆ, ಆಸಕ್ತಿದಾಯಕ ಬಣ್ಣನೆ, ಬಹುವರ್ಣದ ಪೂರಕ ಚಿತ್ರಗಳು ಇರಬೇಕು. ಮಕ್ಕಳ ವಯಸ್ಸು ಮತ್ತು ಸಾಮರ್ಥ್ಯದ ಹಿನ್ನೆಲೆಯಲ್ಲೇ ಆದರ್ಶ ಮೌಲ್ಯಗಳು ಹಿತವಾಗಿರಬೇಕು. ನಾಡು-ನುಡಿಯ ಬಗೆಗೆ ಪ್ರೇಮವನ್ನು ಬೆಳೆಸುವ ವಿವೇಕ ಸಾರ್ವಕಾಲಿಕವಾದುದು. ಜ್ಞಾನಾರ್ಜನೆಯೊಂದಿಗೆ ರಂಜನೀಯತೆಯ ರಹಸ್ಯವನ್ನು ಮರೆಯಬಾರದು.

ಕತೆಗಳಂತೆಯೇ ಚುಟುಕುಗಳು, ಪ್ರಾಸ ಸಹಿತ ಪದ್ಯಗಳು. ಆಟಿಕೆಯ ರೂಪದಲ್ಲಿ ಗಮನ ಸೆಳೆಯುತ್ತವೆ. ಶ್ರಾವ್ಯ ಗುಣವನ್ನು ಹೊಂದಿರುವುದರಿಂದ ಮಕ್ಕಳ ಭಾವನೆ, ಭಾಷೆ, ಅಭಿರುಚಿಯನ್ನು ಆಧರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಎಷ್ಟೋ ವೇಳೆ ಪ್ರಾಸ, ಲಯದಿಂದಲೇ ಜನಪ್ರಿಯವಾಗುತ್ತವೆ. ಮಕ್ಕಳ ಮನಸ್ಸಿಗೆ ನವಚೇತನವನ್ನೊದಗಿದಿಸಿ ಸ್ಮೃತಿ ಪಟಲದಲ್ಲಿ ಹೆಚ್ಚುಕಾಲ ಉಳಿಯುತ್ತವೆ. ತ್ರಾಸವಿಲ್ಲದೆ ಓದಿಕೊಂಡು ಹೋಗುವ ಮತ್ತು ಅವರ ತುಟಿಗಳ ಮೇಲೆ ಆಗಾಗ ಲಾಸ್ಯವಾಡುವ ಪ್ರಿಯ ಸಾಹಿತ್ಯ ಅದು

ಕನ್ನಡದಲ್ಲಿ ರಂಜನೀಯ ಸಾಹಿತ್ಯಕ್ಕಿಂತ ವೈಜ್ಞಾನಿಕ ಸಾಹಿತ್ಯ ಹೆಚ್ಚಾಗಿ ಬಂದಿದೆ. ಅದು ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡಿದೆ ಎಂಬುದು ಸತ್ಯಸಂಗತಿ. ಸಂಸ್ಕೃತಿಯನ್ನು ಬಿಂಬಿಸುವ, ಪ್ರಸ್ತುತ ವಿದ್ಯಾಮಾನವನ್ನು ಮೂಡಿಸುವ ಮಕ್ಕಳ ಕುತೂಹಲವನ್ನು ತಣಿಸುವ ಸಾಹಿತ್ಯ ಬೆಳೆದು ಬಂದಾಗಲೇ ಮಕ್ಕಳ ಸಾಹಿತ್ಯ ಪ್ರಕಾರದ ಮೌಲ್ಯ ಹೆಚ್ಚುತ್ತದೆ. ಹಿಂದಿನ ರಚನೆಗಳು ಸಾಂಪ್ರದಾಯಿಕ ಅಂಶಗಳಂತೆಯೇ ಸವಕಲಾಗುತ್ತಿವೆ. ಕೇವಲ ಹದಿನಾರು ಅಥವಾ ಹದಿನೆಂಟು ಪಾಯಿಂಟ್ ಗಳಲ್ಲಿ ಮುದ್ರಣ ಮತ್ತು ಬಹುವರ್ಣದ ಚಿತ್ರಗಳಿಂದ ತುಂಬಿದ್ದರೆ ಸಾಲದು. ಅದು ಮಕ್ಕಳ ಮನಸ್ಸನ್ನು ಮುಟ್ಟುವ, ಪ್ರಫುಲ್ಲಗೊಳಿಸುವ ಅಸಕ್ತಿದಾಯಕ ರಚನೆಯಾಗಿರುವುದು ಅನಿವಾರ್ಯ.

ಮನೆ, ಮಾಧ್ಯಮ, ಶಾಲೆ, ಸ್ನೇಹ, ಕ್ರೀಡೆ, ಜಾಹಿರಾತು ಎಲ್ಲವೂ ಪಾಶ್ಚಾತ್ಯ ಅನುಕರಣೆಯೇ ಅಗಿರುವಾಗ ಕನ್ನಡದ ಪರಂಪರೆ, ಸೊಬಗು, ಸೌಂದರ್ಯ, ಮಹತ್ವ, ಇತಿಹಾಸ ಮಿಗಿಲಾಗಿ ಅದರ ಅಂತರಂಗದ ಸ್ವಾರಸ್ಯ ಹೇಗೆ ಅರ್ಥವಾಗಬೇಕು? ದೈನಂದಿನ ಸಾಮಾನ್ಯ ವಿಷಯಗಳನ್ನೂ ಇಂದಿನ ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಅನುವಾದಿಸಿ ಹೇಳಬೇಕಾದ ಪರಿಸ್ಥತಿ ಒದಗಿದೆ. ಓದುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದ್ದು ಅದರಲ್ಲಿ ಕನ್ನಡಕೃತಿಗಳೇ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಹಲವರಿಗೆ ಕನ್ನಡದಲ್ಲಿರುವ ಮಕ್ಕಳ ಸಾಹಿತ್ಯ ಭಂಡಾರದ ಅರಿವಿಲ್ಲ. ಅಂಥವರು ಸತ್ವಪೂರ್ಣ ರಚನೆಗಳೇ ಇಲ್ಲ ಎಂದೋ, ಪಠ್ಯಪುಸ್ತಕಗಳನ್ನಾದರೂ ನೋಡದೆ ಹಿಂದಿದ್ದ ಮಾದರಿಯ ಕಥೆ, ಕವಿತೆಗಳಿಲ್ಲ ಎನ್ನುತ್ತಲೇ ಇತರರನ್ನು ದೂರುತ್ತಾ ಕಾಲ ಕಳೆಯುತ್ತಾರೆ. ದೂರದರ್ಶನದ ಮುಂದೆ ಪ್ರತಿಷ್ಠಾಪನೆಯಾಗುವ ಪರಿಸರದಲ್ಲಿ ಓದುಗರನ್ನು ನಿರೀಕ್ಷಿಸುವಕೆ ನಿರೀಕ್ಷಣೆಯಾಗಿಯೇ ಉಳಿದಿದೆ. ಸರ್ಕಾರದ ಅಂಕಿ-ಅಂಶಗಳಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಬಾಲ್ಯದ ರೋಮಾಂಚನವನ್ನಾಗಲಿ. ಸವಿಬದುಕಿನ ಆಶಯವನ್ನಾಗ ಹಿಡೇರಿಸಿ ಹೇಳುವ ತಾಳ್ಮೆ, ವಿವೇಕ ಎಷ್ಟು ಮಂದಿ ಹಿರಿಯರಲ್ಲಿ ಉಳಿದಿದೆ?ಮಕ್ಕಳಿಗೂ ಅದನ್ನೆಲ್ಲಾ ಕಲಿಯುವ ವ್ಯವಧಾನ ಇಲ್ಲವಾಗಿದೆ. ಹೆಚ್ಚೆಂದರೆ ಯಾಂತ್ರಕವಾಗೆ ಪರೀಕ್ಷೆಗೆ ಕಲಿತು ಮರೆತುಬಿಡುವ ಮನೋಭಾವ ವ್ಯಾಪಕವಾಗಿದಿ. ಇದರಿಂದ ಮಕ್ಕಳ ಸಾಹಿತ್ಯ ಕೊರತೆಯಾಗಿ ಕಾಣುತ್ತಿದೆಯೇವಿನಾ ರಚನಾದೃಷ್ಠಿಯಿಂದಲ್ಲ.ಬಿ.ಎಂ.ಶ್ರೀ ಅವರು ಹೇಳುವಂತೆ

ಪಡುವ ಕಡಲ ಹೊನ್ನ ಹೆಣ್ಣು
ನನ್ನ ಜೀವದುಸಿರು ಕಣ್ಣು
ನಲಿಸಿ ಕಲಿಸಿ ಮನವನೊಲಿಸಿ
ಕುಣಿಸುತಿರುವಳು

ಎಂಬಂತಾಗಿದೆ. ಆದರೆ ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತನ್ನು ಮರೆಯಬಾರದಲ್ಲವೇ? ಮಕ್ಕಳ ಸಾಹಿತ್ಯದ ಉತ್ತಮ ಕೃತಿಯೊಂದು ಒದಗಿಸುವ ಖುಷಿಗೆ ಯಾವ ಸಿದ್ಧಾಂತ ಸಮ!

ಆದರೂ ಮಕ್ಕಳ ಅಭಿರುಚಿ, ಸಾಮರ್ಥ್ಯವನ್ನಾಧರಿಸಿದ ಪುಸ್ತಕಗಳ ಸಂಖ್ಯೆ ಹೆಚ್ಚಿಲ್ಲ. ನಿರ್ದಿಷ್ಟ ವಯೋಮಾನದ ಮಕ್ಕಳ ಭಾವಗ್ರಹಣ, ಸಾಮರ್ಥ್ಯವನ್ನು ಹಿಡಿದು ಅವರಲ್ಲಿ ಭಾಷೆ, ಮಾನವೀಯ ಮೌಲ್ಯ, ಸಾಹಿತ್ಯಭಿರುಚಿಯನ್ನು ಬೆಳೆಸಲೆಂದೇ ಬರೆದ ಪುಸ್ತಕಗಳು ತೀರಾ ಕಡಿಮೆ. ಆದರ್ಶ ಮತ್ತು ಮಾರ್ಗದರ್ಶನ ಮಾಡುವ ಹಿನ್ನೆಲೆಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ಇಷ್ಟಾದರೂ ಮಕ್ಕಳ ಸಾಹಿತಿಗಳಿಗೆ ಹೆಚ್ಚಿನ ಮನ್ನಣೆ ದೊರೆಯದಿರುವುದು ದುರಂತ!