ಪ್ರಸ್ತಾವನೆ

ವಸಾಹಾತುಶಾಹಿ ಸಂದರ್ಭದಲ್ಲಿ ಆಂಗ್ಲರ ಆಧುನಿಕ ವಿಚಾರಗಳು ಮತ್ತು ವೈಚಾರಿಕ ದೃಷ್ಟಿಕೋನಗಳು, ಭಾರತೀಯ ಸಮಾಜವು ಕಟ್ಟಿಕೊಂಡಿದ್ದ ಪರಂಪರೆಯ ಪರಿಕಲ್ಪನೆಯೊಂದಿಗೆ ಮುಖಾಮುಖಿಯಾದ ಪರಿಣಾಮ ನಮ್ಮ ಶ್ರೇಣಿಕೃತ – ಉಳಿಗಮಾನ್ಯ ಸಮಾಜದೊಳಗೆ ಆಧುನಿಕ ಸಂಸ್ಕೃತಿಯ ಮಾರುತವೊಂದು ಬಲವಾಗಿ ಬೀಸತೊಡಗಿತ್ತು. ಅದರ ಪರಿಣಾಮವಾಗಿ, ಅದುವರೆಗೂ ರಾಜಪ್ರಭುತ್ವದ ನೆರಳಲ್ಲಿದ್ದು ಸನಾತನ ಪರಂಪರೆಯ ಬೇರುಗಳನ್ನ ಹಿಡಿದು ಜೀಕುತ್ತಾ ಭಾರತಾಂಬೆಗೆ ನಮ್ಮ ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಿದ್ದ, ಹಲವು ಹಳೆ ಮನಸ್ಸುಗಳ ನಡುವೆಯೇ ಆಧುನಿಕ ಸಮಾಜದ ಕನಸು ಕಾಣುವ ವಿಚಾರವಾದಿ ಸೃಜನಶೀಲ ವಲಯವೊಂದು ಹಟ್ಟಿಕೊಂಡಿತು.

ಈ ಸೃಜನಶೀಲ ವಿಚಾರವಾದಿ ವಲಯವು ಅಂದಿನ ಸಮಾಜ ವ್ಯವಸ್ಥೆಯ ಕೊಳಕುತನದಲ್ಲಿ ಹುದುಗಿ ಹೋಗಿದ್ದ ಬಾಲ್ಯವಿವಾಹ, ಬಹುಪತ್ನಿತ್ವ, ಜಾತಿಭೇದ, ವರ್ಗಭೇದ ಮೊದಲಾದ ಸಮಸ್ಯೆಗಳ ಬಗ್ಗೆ ಒಂದು ರೀತಿಯ ಪ್ರತಿಭಟನಾತ್ಮಕ ಧೋರಣೆಯನ್ನು ತನ್ನ ಸೃಜನಶೀಲ ಚೌಕಟ್ಟಿನಲ್ಲಿ ಬಳಸಿಕೊಳ್ಳತೊಡಗಿತು. ಹೀಗೆ ಇಪ್ಪತ್ತನೇ ಶತಮಾನದ ಆದಿಯ ದಶಕಗಳಲ್ಲಿ ಆಧುನಿಕ ಪರಿಸರಕ್ಕೆ ಪ್ರವೇಶ ಪಡೆದ ಆ ವಿಚಾರವಾದಿ ವಲಯದೊಳಗೆ ಮಂಡಿಸಲ್ಪಟ್ಟ ಆಧುನಿಕ ವಿಚಾರಗಳ ಸೃಜನಶೀಲತೆಯ ಬಳ್ಳಿ, ಪ್ರಾಚೀನ ಪರಂಪರೆಯ ಅಡ್ಡಬೇರುಗಳ ಮೇಲೆಯೇ ಹರಿದು ಚಿಗುರೊಡೆಯುತ್ತಾ ಸಾಗುತ್ತಾ…. ನವೋದಯ ಸಾಹಿತ್ಯವೆಂಬ ತೊರೆಯಾಗಿ ತನ್ನದೇ ಆದ ದಾರಿಯನ್ನು ಕ್ರಮಿಸಿಕೊಳ್ಳುತ್ತ ಮುನ್ನುಗ್ಗ ತೊಡಗಿತ್ತು.

ಇಂತಹ ಒಂದು ಸಂಧಿಕಾಲದಲ್ಲಿ ಈ ವಿಚಾರವಾದಿ ಬರಹಗಾರರು ತಮ್ಮ ಸಮಾಜದಲ್ಲಿದ್ದ ವರ್ಗಭೇದ ನೀತಿ, ಅಸ್ಪಶ್ಯತೆ, ಬಡತನ ಮುಂತಾದ ಸಮಸ್ಯೆಗಳಿಗಿಂತಲೂ ಮುಖ್ಯವಾಗಿ ಸ್ತ್ರೀ ಸಂಕುಲವನ್ನೇ ಮುರಿದು ಮುಕ್ಕುತ್ತಿದ್ದ ಲಿಂಗಭೇದ ನೀತಿಯ ವಿರುದ್ಧವಾಗಿ ಸೃಜನಶೀಲ ಹೋರಾಟಕ್ಕಿಳಿದಿದ್ದು ಗಮನಾರ್ಹವಾದ ಮಾನವೀಯ ಸಂಗತಿ. ಸ್ತ್ರೀ ಶಿಕ್ಷಣ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಕೇಶಮಂಡನ ಮುಂತಾದ ಸ್ತ್ರೀ ಸಮಸ್ಯೆಗಳ ನಿವಾರಣೆಯತ್ತಲೇ ನವೋದಯದ ಪುರುಷ ಸಾಹಿತಿಗಳು ತಮ್ಮ ಸೃಜನಶೀಲತೆಯನ್ನು ಕೇಂದ್ರಿಕರಿಸಿಕೊಂಡ ಸಂದರ್ಭದಲ್ಲೇ ಸಮಾಜದ ಕೆಲವು ವರ್ಗಗಳ ಮಹಿಳೆಯರಿಗೆ ಸಮಾಜದ ಸುಧಾರಣಾವಾದಿ ಪ್ರಜ್ಞೆಯಿಂದಲೋ ಅಥವಾ ಉದಾರವಾದಿ ಮನೋಧರ್ಮದಿಂದಲೋ ಏನೋ…. ಒಟ್ಟಿನಲ್ಲಿ ಶಿಕ್ಷಣಕ್ಕೆ ಅವಕಾಶದೊರೆತು ಅವರೊಳಗೆಯೂ ಮಹಿಳಾ ಸಂಕುಲದಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆನ್ನುವಂತಹ ಪ್ರೇರಣೆಯುಂಟಾಯ್ತು.

ಇಂತಹ ಅಪೂರ್ವ ಕಾಲಘಟ್ಟದಲ್ಲಿ ಪುರುಷಪ್ರಧಾನ ಸಮಾಜದಿಂದ ನಿರ್ಮಿತವಾದ ಸಾಂಪ್ರದಾಯಿಕ ಚೌಕಟ್ಟನ್ನು ಮೀರುವ ಮನಸ್ಥಿತಿಯುಳ್ಳ ಕೆಲವು ಮಹಿಳಾ ಬರಹಗಾರರು ಕಾಣಿಸಿಕೊಂಡರು. ಸ್ತ್ರೀಯರಿಗೆ ಅಕ್ಷರಾಭ್ಯಾಸವೇ ನಿಷಿದ್ಧ, ಸ್ತ್ರೀಯರು ಕತೆ ಕಾದಂಬರಿಗಳನ್ನು ಓದುವುದೇ ಮಹಾಪರಾಧ ಎಂಬ ಮನೋಭಾವವಿದ್ದ ಸಾಂಪ್ರದಾಯಿಕ ಸಮಾಜದಲ್ಲಿ ಶ್ರೀಮತಿ ತಿರುಮಲಾಂಬ, ಆರ್ ಕಲ್ಯಾಣಮ್ಮ, ಕೊಡಗಿನ ಗೌರಮ್ಮ, ಶ್ಯಾಮಲಾದೇವಿ ಬೆಳಗಾಂವ್ ಕರ್, ಸರಸ್ವತೀದೇವಿ ರಾಜವಾಡೆ ಮುಂತಾದ ಸ್ತ್ರೀವಾದಿ ಪ್ರಜ್ಞೆಯುಳ್ಳ ಕತನಗಾರ್ತಿ ಕನ್ನಡ ನವೋದಯ ಸಾಹಿತ್ಯ ಲೋಕದ ಕ್ಷಿತಿಜದಲ್ಲಿ ಮೂಡಿ ಬಂದರು.

ಅಂದಿನ ಸಮಾಜದಲ್ಲಿ ಹಲವು ಸಾಮಾಜಿಕ ಸಮಸ್ಯೆಗಳ ಜತೆಗೆ ವಸಾಹತುಶಾಹಿ ವ್ಯವಸ್ಥೆಯ ಶೋಷಣೆಯನ್ನು ಕುರಿತು ಹಲವು ಬವಣೆಗಳು ಈ ಮಹಿಳಾ ಬರಹಗಾರರ ದಿವ್ಯ ಪ್ರಜ್ಞೆಗೆ ದಕ್ಕಿದ್ದರೂ, ಅವರು ಅವೆಲ್ಲವನ್ನೂ ನಿರ್ಲಕ್ಷಿಸಿ ಅತ್ಯಂತ ಮುಖ್ಯವಾದ ಸಮಸ್ಯೆ ಎಂದು ತಮ್ಮ ಬರಹಗಳಿಗೆ ಆಯ್ದಯಕೊಂಡಿದ್ದು ಸ್ತ್ರೀಪರ ಕಾಳಜಿಯುಳ್ಳ ವಸ್ತುಗಳನ್ನು ಮಾತ್ರ ಇವರ ಬರಹಗಳೆಲ್ಲವೂ ವಿಶೇಷವಾಗಿ ಅಂದಿನ ಸಮಕಾಲೀನ ಸಮಾಜದಲ್ಲಿದ್ದ ಲಿಂಗಬೇಧನೀತಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ಹಲವು ಸಾಮಾಜಿಕ ಸಮಸ್ಯೆಗಳನ್ನು ಕುರಿತದ್ದಾಗಿದ್ದವು.

ಬಾಲ್ಯವಿವಾಹ, ವಿಧವಾವಿವಾಹ, ಬಾಲ್ಯವೈಧವ್ಯ ಸಮಸ್ಯೆಯ ಜತೆಗೆ ವರದಕ್ಷಿಣೆ, ವಿಷಮಮದುವೆ ಇತ್ಯಾದಿ ಸ್ತ್ರೀಸಂಬಂಧಿ ಸಮಸ್ಯೆಗಳು ನವೋದಯ ಸಾಹಿತ್ಯದ ಮಹಿಳಾ ಕಥೆಗಾರ್ತಿಯರ ಪ್ರಜ್ಞೆಯೊಳಗೆ ಹುದುಗಿ ಕೂತ ಸಂವೇದನಾಪೂರ್ಣ ವಿಷಯಗಳಾಗಿದ್ದವು.

ಸ್ತ್ರೀ ಸಂಕುಲಕ್ಕೆ ಕಂಟವಾಗಿದ್ದ ಸ್ತ್ರೀ ಶಿಕ್ಷಣ ವಿರೋಧ, ವಿಧವಾ ವಿವಾಹ ವಿರೋಧ, ಬಾಲ್ಯವಿವಾಹ, ಬಾಲವೈಧವ್ಯ ಮುಂತಾದ ಮಾನವೀಯ ಸಮಸ್ಯೆಗಳಿಗೆ ನವೋದಯ ಕಾಲಘಟ್ಟದ ಆರಂಭದ ತಲೆಮಾರಿನ ಮಹಿಳೆಯರಾದ ನಂಜನಗೂಡು ತಿರುಮಲಾಂಬ, ಆರ್ ಕಲ್ಯಾಣಮ್ಮ ಹಾಗೂ ಕೊಡಗಿನ ಗೌರಮ್ಮನವರು ತಮ್ಮ ತಮ್ಮ ಬರಹಗಳ ಮೂಲಕ ತೀವ್ರ ಪ್ರತಿರೋಧ ಒಡ್ಡಿದ್ದರೂ ಮೂವರೂ ಆ ಸಮಸ್ಯೆಗಳನ್ನು ಕಂಡಿರುವ ದೃಷ್ಟಿಕೋನಗಳು ಮಾತ್ರ ವಿಭಿನ್ನವಾದುದು.

ಶ್ರೀಮತಿ ತಿರುಮಲಾಂಬಾ ಅವರು ೧೯೧೩ ರ ತಮ್ಮ ‘ಸುಶೀಲೆ’ ಕಾದಂಬರಿಯಲ್ಲಿ ಸುಶೀಲೆಯ ಪಾತ್ರದ ಮೂಲಕ ಸ್ತ್ರೀ ಶಿಕ್ಷಣವನ್ನು ಸಮರ್ಥಿಸುವ ಮತ್ತು ಪ್ರಚಾರ ಮಾಡುವ ಕಾರ್ಯವನ್ನು ಮಾಡಿದ್ದರು. ವಿಧವೆಯರ ಕೇಶತ್ವ, ವಿಧವಾವಿವಾಹ ಮೊದಲಾದ ವಿಷಯಗಳನ್ನು ಅಂದಿನ ಸನಾತನ ಪ್ರಜ್ಞೆಯನ್ನು ಹೊಂದಿದ್ದ ಸಮಾಜವು ವಿರೋಧಿಸಿದ್ದ ಸಂದರ್ಭದಲ್ಲೇ, ‘ನಭಾ’ ಕಾದಂಬರಿಯನ್ನು ಬರೆದ (೧೯೧೪) ತಿರುಮಲಾಂಬ ಅವರು ಅಂದಿನ ದಿನಗಳಲ್ಲಿ ವಿಧವೆಯರಿಗಿದ್ದ ಅಭದ್ರತೆ, ವಿಧವೆಯರಿಗೆ ಎದುರಾಗುತ್ತಿದ್ದ ಸಮಸ್ಯೆಗಳ ಚಿತ್ರಣವನ್ನು ಈ ಕೃತಿಯಲ್ಲಿ ವಾಸ್ತವವಾಗಿ ಹಿಡಿದುಕೊಡುವ ಮತ್ತು ಸಮಾಜದೆದುರು ಬಿಚ್ಚಿಡುವ ಪ್ರಯತ್ನವನ್ನು ತಮ್ಮ ಮಿತಿಯೊಳಗೆ ಮಾಡಿದ್ದರು. ಈಕಾದಂಬರಿಯಲ್ಲಿ, ಕಥಾನಾಯಕಿ ಬಾಲವಿಧವೆ ನಭಾಳ ಪಾತ್ರದ ಮೂಲಕವೇ ವಿಧವೆಯೊಬ್ಬಳು ‘ಮರುವಿವಾಹವಾಗದೆ’ ವೈಧವ್ಯವನ್ನು ಕಟ್ಟುನಿಟ್ಟಿನಿಂದ ಅನುಸರಿಸುತ್ತ ಸನಾತನ ಧರ್ಮವನ್ನು ಪಾಲಿಸಬೇಕೆನ್ನುವುದನ್ನು ಹೇಳಿಸುವುದು ತಿರುಮಲಾಂಬ ಅವರ ಯೋಚನಾಕ್ರಮ ಅಂದಿನ ಸಮಾಜದ ಸಾಂಪ್ರದಾಯಿಕ ನೆಲೆಗಿಂತ ಬೆರೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸ್ವತಃ ಬಾಲವಿಧವೆಯಾಗಿದ್ದು, ಬಾಲವೈಧವ್ಯದ ಭೀಕರತೆಯನ್ನು ಬಲ್ಲಂತಹ ತಿರುಮಲಾಂಬ ಅವರೇ ಈ ವಿಚಾರದಲ್ಲಿ ಜೀವಪರ ಹಾಗೂ ಪ್ರಗತಿಪರವಾಗಿರದೇ ಇರುವುದು ಅವರೊಳಗಿನ ಪುರೋಗಾಮಿ ಪ್ರಜ್ಞೆಯನ್ನು ಪ್ರತಿಬಿಂಬಿಸುವಂತಿದೆ.

ತಿರುಮಲಾಂಬ ಅವರಲ್ಲಿ ‘ವಿಧವಾವಿವಾಹ’ ದ ಬಗ್ಗೆ ಸನಾತನ ಪ್ರಜ್ಞೆಯೊಂದು ಕೆಲಸ ಮಾಡಿದ್ದಾರೆ, ಅವರದ್ದೇ ಸಮಕಾಲೀನರಾಗಿದ್ದು ಸ್ವತಹ ಬಾಲವಿಧವೆಯಾಗಿದ್ದ ಅರ್. ಕಲ್ಯಾಣಮ್ಮನವರು ಆ ಸಮಸ್ಯೆಯನ್ನು ಕಂಡಿದ್ದೇ ವಿಭಿನ್ನ ದೃಷ್ಟಿಕೋನದಿಂದ.ಆರ್. ಕಲ್ಯಾಣಮ್ಮನವರು ತಮ್ಮ ಕಾದಂಬರಿ ‘ನಿರ್ಭಾಗ್ಯ ವನಿತೆ’ ಯಲ್ಲಿ ಕಥಾನಾಯಕಿ ಬಾಲವಿಧವೆ ಇಂದಿನರೆಗೆ ‘ಆರ್ಯಾ ಸಮಾಜ’ದಲ್ಲಿ ಮರುವಿವಾಹ ಮಾಡಿಸುವ ಮೂಲಕ ಸನಾತನ ಸಂಪ್ರದಾಯಗಳ ಕಟ್ಟುಗಳ ಬಿಗಿಯನ್ನು ಸಡಿಲಿಸುವಂತೆ ಜೀವಪರ ಪ್ರಜ್ಞೆಯನ್ನು ತೋರಿದ್ದಾರಾದರೂ ಆರ್ಯಾ ಸಮಾಜದಲ್ಲಿ ಮರು ಮದುವೆ ಮಾಡಿಸುವ ಮೂಲಕ ಸನಾತನ ಮನಸ್ಸುಗಳಿಗೆ ಸ್ವಲ್ಪ ಸಮಾಧಾನ ತರಲು ಕಥಾನಾಯಕಿ ಪ್ರಯತ್ನಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಅದುವರೆಗೂ ಇವರಿಬ್ಬರು ನಿರ್ವಹಿಸಿದ್ದ ಆ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ – ಬಾಲ್ಯವೈಧವ್ಯ – ವಿಧವಾವಿವಾಹ ಮುಂತಾದ ಕಥಾ ವಸ್ತುಗಳನ್ನು ಕಥೆಗಾರ್ತಿ ಕೊಡಗಿನ ಗೌರಮ್ಮನವರು ನಿರ್ವಹಿಸಿದ ರೀತಿಯೇ ಅತೀ ಪ್ರಗತಿಪರವಾದದ್ದು. ಅವರ ‘ಪುನರ್ವಿವಾಹ’ ಎಂಬ ಸಣ್ಣ ಕಥೆಯಲ್ಲಿ ಕಥಾನಾಯಕಿ ಬಡ ಬಾಲವಿಧವೆಯ ರೂಪಕ್ಕೆ ತೀರಾ ಮೋಹಗೊಂಡು ನಡುಹರೆಯದ ಸಿರಿವಂತ ವಿಧುರನೊಬ್ಬ ಆಕೆ ಏರಿರುವ ವೈಧವ್ಯಪಟ್ಟದ ಅರಿವಿಲ್ಲದೆ, ಆಕೆಯ ಒಪ್ಪಿಗೆಯನ್ನೂ ನಿರೀಕ್ಷಿಸದೆ ಆಕೆಯನ್ನು ಮದುವೆಯಾಗಲು ಮುಂದಾಗುತ್ತಾನೆ. ಮದುವೆ ಇನ್ನೇನು ಹತ್ತಿರ ಬರುತ್ತಿದೆ ಎನ್ನುವಾಗ ಆ ಬಾಲವಿಧವೆ ಚೀಟಿಯ ಮುಖಾಂತರ ಆತನನ್ನು ಗುಟ್ಟಾಗಿ ಭೇಟಿಗೆ ಆಹ್ವಾನಿಸುತ್ತಾಳೆ. ಆಸಂದರ್ಭದಲ್ಲಿ ವಿಧುರನ ಜೊತೆಗೆ ತನ್ನ ವೈಧವ್ಯದ ಕತೆಯನ್ನು ಆಕೆ ಪ್ರಸ್ತಾಪಿಸುತ್ತಾಳೆ ತಾನು ಮೋಹಿಸಿದ ಸುಂದರಿ ಬಾಲವಿಧವೆ ಎಂದು ತಿಳಿದೊಡೆನೆ ದಿಕ್ಕೆಟ್ಟು ಕಂಗಾಲಾದ ವಿಧುರ ನೀನು ವಿಧವೆ ಎಂದು ತಿಳಿದಿದ್ದರೆ ನಿನ್ನ ಮುಖ ಸಹ ನೋಡುತ್ತಿರಲಿಲ್ಲ. ಸಮಾಜದಲ್ಲಿ ನಡೆಯದಿರುವ ಕಾರ್ಯವನ್ನು ನಡೆಸಿ ನಾನು ಪರರ ಹಾಸ್ಯಕ್ಕೆ ಈಡಾಗ ಬೇಕೇನು ಸಮಾಜದಲ್ಲಿ ಇದು ನಡೆದರೂ ಸಹ, ನಾನು ನನ್ನ ಪವಿತ್ರಕುಲವನ್ನು ವಿಧವಾವಿವಾಹದಿಂದ ಕಲುಷಿತ ಮಾಡುವುದಿಲ್ಲ. ಪ್ರತೀದಿನ ಬೆಳಗಾದೊಡನೆ ವಿಧವೆಯ ಕೆಟ್ಟಮುಖ ನೋಡುವ ಬಯಕೆ ನನಗಿಲ್ಲ ಎಂದು ವಿಧವೆಯನ್ನು ಮೂದಲಿಸುತ್ತಾನೆ. ಅಂದಿನ ಸಾಮಾಜಿಕ ಪರಿಸ್ಥಿತಿಯ ಚಿತ್ರಣ ಕಥಾಪಾತ್ರದ ವೈಯಕ್ತಿಕ ಅಭಿಪ್ರಾಯವಾಗಿ ಅಸಹಜವಾಗಿ ಹೊರಹೊಮ್ಮಿಯಾದರೂ ವಿಧುರನ ಬಿರುನುಡಿಗೆ ‘ಬಾಲವಿಧವೆ’ ತೋರಿದ ಉಗ್ರ ಪ್ರತಿಭಟನೆಯು ಪ್ರಗತಿಪರ ಚಿಂತಕಿ ಗೌರಮ್ಮನವರು ಬಯಸುತ್ತಿರುವ ಸಾಮಾಜಿಕ ಬದಲಾಣೆಯ ಅಬಿವ್ಯಕ್ತಿಯೂ ಹೌದು.

ವಿಧುರರಿಗೊಂದು ನೀತಿ, ವಿಧವೆಯರಿಗೊಂದು ನೀತಿಯಿರುವ ಅಂದಿನ ಸಮಾಜವನ್ನು ತೀಕ್ಷ್ಣವಾಗಿ ಟೀಕಿಸುವ ಕಥಾನಾಯಕಿ ಬಾಲವಿಧವೆ ಆ ವಿಧುರನತ್ತ ವ್ಯಂಗ್ಯದ ಮಾತುಗಳನ್ನು ಎಸೆಯುತ್ತಾ “ಏನಂದಿರಿ? ಬೆಳಗಾದೊಡನೆ ನಿಮಗೆ ವಿಧವೆಯ ಮುಖ ನೋಡುವ ಅಪೇಕ್ಷೆ ಇಲ್ಲವೆ? ನಿಮ್ಮಂತವರ ಮೋಹಕ್ಕೆ ಬಲಿಯಾಗಿ ಬುದ್ಧಿ ಬರುವ ಮೊದಲೇ ವಿಧವೆಯರಾಗಿರುವ ನನ್ನಂತಹ ಲಕ್ಷೋಪಲಕ್ಷ ಸಹೋದರಿಯರು ಎಂದಿನವರೆಗೆ ಸಮಾಜದ ಅನ್ಯಾಯಕ್ಕೆ ತುತ್ತಾಗುತ್ತಾರೋ ಅಂದಿನವರೆಗೆ ಈ ಹಿಂದೂ ಸಮಾಜದ ಉನ್ನತಿ ಆಗಲಾರದೆಂದು ತಿಳಿಯಿರಿ. ಈ ರೀತಿಯ ಅನ್ಯಾಯದಿಂದ ಎಷ್ಟು ಹಿಂದೂ ವಿಧವೆಯರು ನಿರ್ಲಜ್ಯತನದ ಜೀವನವನ್ನು ಅವಲಂಭಿಸಿದ್ದಾರೆ? ಎಷ್ಟು ವೇಶ್ಯೆಯರ ಸಂಖ್ಯೆಯು ಹೆಚ್ಚಾಗಿದೆ? ಎಷ್ಟು ಬಾಲಹತ್ಯೆ, ಭ್ರೂಣಹತ್ಯೆ ನಡೆಯುತ್ತದೆ ಗುತ್ತಿದೆಯೆ? ಇದಕ್ಕೆಲ್ಲ ಯಾರು ಕಾರಣರು? ಅಜ್ಞಾನಿಯಾದ ಚಿಕ್ಕ ಬಾಲೆಯೇ? ಶಾಸ್ತ್ರ ಶಾಸ್ತ್ರ ಎಂದು ಬಡಿದುಕೊಂಡು ಜಾತಿ ಕೆಡುತ್ತಸೆ ಎಂಬ ಹೆದರಿಕೆಯಿಂದ ಎಳೆಮಕ್ಕಳನ್ನು ಮುದುಕರ ಕೊರಳಿಗೆ ಕಟ್ಟುವ ತಂದೆ ತಾಯಿಗಳೆ ? ಅಥವ ನಿಮ್ಮಂತಹ ಕಾಮುಕರೆ ? ಅಲ್ಲ, ತಪ್ಪು ನಿಮ್ಮದಲ್ಲ. ಸಹಾಯಹೀನರಾದ ಚಿಕ್ಕ ಹುಡುಗಿಯರೇ ತಪ್ಪುಗಾರರು” ಎಂದು ವಿಧುರನನ್ನು ವ್ಯಂಗ್ಯವಾಗಿ ಮೂದಲಿಸುತ್ತ ಇಡೀ ಪುರುಷ ಸಮಾಜವನ್ನು ಖಂಡಿಸಿ ಪ್ರತಿಭಟಿಸುತ್ತಾಳೆ.ಬಾಲವಿಧವೆಯ ಪಾತ್ರವನ್ನು ಸ್ತ್ರೀವಾದಿ ಪ್ರಜ್ಞೆಯುಳ್ಳ ಕಥೆಗಾರ್ತಿ ಗೌರಮ್ಮನವರು ಆದುನಿಕ ಸ್ತ್ರೀಯ ಪ್ರತೀಕವಾಗಿ ಕರೆದಿದ್ದಾರೆ ಎಂಬುದು ಅತ್ಯಂತ ಸ್ಪಷ್ಟ.

ತಿರುಮಲಾಂಬ, ಕಲ್ಯಾಣಮ್ಮನವರ ನಡುವೆಯೇ ಬದುಕಿದ್ದ ಕೊಡಗಿನ ಕಥೆಗಾರ್ತಿ ಗೌರಮ್ಮನವರೊಳಗೆ ಬಂಡಾಯ ಪ್ರಜ್ಞೆ ಅವರಿಬ್ಬರಿಗಿಂತಲೂ ಅದೆಷ್ಟು ತೀವ್ರವಾಗಿತ್ತೆಂದರೆ ಅವರ “ಅಪರಾಧಿ ಯಾರು” ಎಂಬ ಕಥೆಯನ್ನು ಕಥಾನಾಯಕಿ ಶ್ರೀಮಂತ ಧಣಿಯಿಂದ ಅತ್ಯಾಚಾರಕ್ಕೊಳಗಾಗಿ ಹಿಂದೂ ಸಮಾಜದಿಂದಲೇ ಬಹಿಷ್ಕರಿಸಲ್ಪಟ್ಟು ಆತ್ಮಹತ್ಯೆಯ ಪ್ರಯತ್ನದಲ್ಲಿದ್ದಾಗ ಮುಸ್ಲಿಂ ಸಮುದಾಯದವರು ಆಕೆಯನ್ನು ರಕ್ಷಿಸಿ, ನೆಮ್ಮದಿಯ ನೆಲೆಯನ್ನು ಒದಗಿಸಿದಾಗ ಆಕೆ ಸ್ವಯಂಪ್ರೇರಿತಳಾಗಿ ತನ್ನನ್ನು ರಕ್ಷಿಸಿದ ಇಸ್ಲಾಂಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಇಲ್ಲಿ ಅಬಲೆ ಕಥಾನಾಯಕಿ ಹಿಂದೂ ಸಮಾಜ ನಡೆಸಿಕೊಂಡ ರೀತಿಯನ್ನು ಪ್ರತಿಭಟಿಸುವ ಕತೆಗಾರ್ತಿ ಗೌರಮ್ಮನವರು, ಆಕೆಯನ್ನು ಮುಸ್ಲಿಂ ಜನಾಂಗಕ್ಕೆ ಸೇರಿಸುವ ಮೂಲಕ ತೋರಿದ ಬಂಡಾಯ ಪ್ರಜ್ಞೆ ಆ ಕಾಲಘಟ್ಟಕ್ಕೆ ತೀರಾ ಅನನ್ಯವಾದುದು.

ಆ ಕಾಲದಲ್ಲೇ ಇಂತಹ ಅಪರೂಪದ ಬಂಡಾಯ ಪ್ರಜ್ಞೆಯನ್ನು ತನ್ನ ಬರಹ ಮತ್ತು ಬದುಕಲ್ಲಿ ಮೈಗೂಡಿಸಿಕೊಂಡಿದ್ದ ಕೊಡಗಿನ ಗೌರಮ್ಮನವರು ತನ್ನ ಸುತ್ತಲಿದ್ದ ಶ್ರೇಣಿಕೃತ ವ್ಯವಸ್ಥೆಯನ್ನು ಮೀರಿ ನಿಂತು ತಾನು ಕಂಡುಂಡ ಸಂವೇದಿಸಿದ ಜೀವನನುಭವಗಳ ಘಟನೆಗಳಿಗೆ ಕಥಾರೂಪ ಕೊಟ್ಟ ದಿಟ್ಟ ಸಂವೇದಾಶೀಲ ಕಥೆಗಾರ್ತಿಯು ಹೌದು.

ಗೌರಮ್ಮನವರ ಬಾಲ್ಯ

ಕನ್ನಡ ನವೋದಯ ಸಾಹಿತ್ಯ ಸಂಸ್ಕೃತಿ ಪರಂಪರೆಯಲ್ಲಿ ಬಂಡಾಯ ಮನೋಭಾವದ ಕಥೆಗಾರ್ತಿ ಎಂದೇ ಸೇರ್ಪಡೆಗೊಂಡ ಕೊಡಗಿನ ಗೌರಮ್ಮನವರು ಹುಟ್ಟಿದ್ದು ೦೫.೦೩.೧೯೧೨ ರಂದು, ಕೊಡಗಿನ ಮಡಿಕೇರಿಯಲ್ಲಿ. ಮಡಿಕೇರಿಯಲ್ಲಿ ವಕೀಲರಾಗಿದ್ದ ಎನ್. ಎಸ್. ರಾಮಯ್ಯನವರು ಗೌರಮ್ಮನವರ ತಂದೆ; ತಾಯಿ ನಂಜಕ್ಕನವರು.

ಗೌರಮ್ಮನವರ ಕಥನ ಪ್ರತಿಭೆ ಅರಳಿ ಫಲಕೊಟ್ಟಿದ್ದು ಶುಂಠಿಕೊಪ್ಪದ ಗುಂಡು ಕುಟ್ಟಿಯಲ್ಲಾದರೂ, ಅವರ ಬಾಲ್ಯವರಳಿದ್ದು ಮಾತ್ರ ಘಟ್ಟದ ಒಡಲಲ್ಲಿರುವ ಮಡಿಕೇರಿ ನಗರದಲ್ಲಿ. ಗೌರಮ್ಮನವರ ಪೂರ್ವಜರು ದಕ್ಷಿಣ ಕನ್ನಡದ ವಿಟ್ಲ ಸೀಮೆಯ ಹವ್ಯಕ ಬ್ರಾಹ್ಮಣರು. ಈ ಹವ್ಯಕ ಸಂತಾನದ ಕೊಂಬೆಯೊಂದು ಬದುಕುವ ದಾರಿ ಹುಡುಕುತ್ತ ಕೊಡಗಿಗೆ ವಲಸೆ ಬಂದು ಅಲ್ಲೇ ಬೇರಿಳಿಸಿಕೊಂಡಿದ್ದರಿಂದ ಮುಂದೆ ಆ ಕೊಂಬೆಯ ‘ಚಿಗುರೆಲೆ’ ಗೌರಮ್ಮನವರೂ ಕೊಡಗಿನವರಾದರು.

ಎನ್ ಎಸ್ ರಾಮಯ್ಯ – ನಂಜಕ್ಕ ದಂಪತಿಗಳಿಗೆ ಕೊನೆಯ ಮಗಳು ಗೌರಮ್ಮಳೆಂದರೆ ಬಲು ಪ್ರೀತಿ ಆಕೆ ಅವರ ಕಣ್ಣಮುತ್ತು. ಆಕೆ ಕೇಳಿದ್ದನ್ನಲ್ಲ ಇಲ್ಲವೆನ್ನಲಾಗದಷ್ಟು ಕೊಂಡಾಟ. ಆ ಕಾರಣಕ್ಕೆ ಗೌರಮ್ಮ ಬಲ್ಯದಲ್ಲೇ ಸ್ವಲ್ಪ ಹಠಮಾರಿಯೆ.

ಗೌರಮ್ಮನಿಗೆ ಆರು ವರ್ಷವಿದ್ದಾಗ ಅವರ ತಂದೆತಾಯಿಯರು ಕಾಶೀಯಾತ್ರೆಗೆ ಹೊರಟುನಿಂತಾಗ ಮಗು ಗೌರಮ್ಮನ ಹಠಕ್ಕೆ ಮಣಿದು ಆಕೆಯನ್ನೂ ಅವರು ತಮ್ಮೊಡನೆ ಯಾತ್ರೆಗೆ ಕರೆದೊಯುತ್ತಾರೆ. ಆ ಯಾತ್ರಯ ಸಂದರ್ಭದಲ್ಲಿ ಗೌರಮ್ಮನವರ ತಾಯಿಯವರು ತೀವ್ರ ಅನಾರೋಗ್ಯ ಪೀಡಿತರಾಗಿ ಯಾತ್ರೆಯ ಮಧ್ಯೆಯೇ ತೀರಿಕೊಳ್ಳುತ್ತಾರೆ. ತೀವ್ರ ಆತಂಕ – ದುಃಖದ ಮಡುವಲ್ಲಿದ್ದ ಅಪ್ಪನ ಕೈಹಿಡಿದು ಹೊರಟ ಬಾಲೆ ಗೌರಮ್ಮ ಆ ಕಾಶೀ ಪಟ್ಟಣದ ಜನಗದ್ದಲದಲ್ಲಿ ಇದ್ದಕ್ಕಿದ್ದಂತೆ ಅಪ್ಪನ ಬೆರಳಕೊಂಡಿ ಕಳಚಿಕೊಂಡು ಕಣ್ಮರೆಯಾಗುತ್ತರೆ.ದುಃಖಿತ ತಂದೆಯ ತೀವ್ರ ಹುಡುಕಾಟದ ಫಲವಾಗಿ ಮಗು ಕಾಶೀ ಪಟ್ಟಣದ ಪೊಲೀಸ ಠಾಣೆಯಲ್ಲಿ ಪತ್ತೆಯಾಗುತ್ತದೆ.

ಹಾಗೆ ಕಾಶೀ ಪಟ್ಟಣದಲ್ಲಿ “ಮರುಜನ್ಮ” ಪಡೆದ ಬಾಲೆ ಗೌರಮ್ಮಳಿಗೆ ಕೆಲವೇ ತಿಂಗಳಲ್ಲಿ ಶಾಲೆಯ ಮಡಟ್ಟಿಲು ಹತ್ತುವ ಕಾಲ ಕೂಡಿ ಬರುತ್ತದೆ. ಶಾಲೆಯ ಮೆಟ್ಟುಕಲ್ಲು ಏರುವ ಹಂತದಲ್ಲಂತೂ ಗೌರಮ್ಮ “ತಾನೂ ಏರಿದರೆ, ಕಾನ್ವೆಂಟ್ ಶಾಲೆಯ ಮೆಟ್ಟಿಲನ್ನೇ ಏರುವುದು” ಎಂದು ಹಠ ಹಿಡಿದು ಕೂತಾಗ ಅಪ್ಪಯ್ಯ ಮಗಳನ್ನು ಮಡಿಕೇರಿಯ ಕಾನ್ವೆಂಟಿಗೆ ಕಳುಹಿಸುವ ವ್ಯವಸ್ಥೆಯನ್ನೇ ಮಾಡಿದ್ದರು. ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ಗಿ ಪಾರಂ ಮುಗಿಸುವ ಹೊತ್ತಿಗಾಗಲೇ, ಗೌರಮ್ಮನವರು ಆಧುನಿಕ ಆಲೋಚನೆಯ ಆಕರ್ಷಕ ತೆಳುಕಾಯದ ಹುಡುಗಿಯಾಗಿದ್ದು….. ಆ ಹೊತ್ತಿಗಾಗಲೇ ಅವರು ಹಸೆಮಣೆ ಏರಿಯಾಗಿತ್ತು.

ಬಾಲ್ಯದ ಅರಳುಕಾಲ

ಗೌರಮ್ಮನವರು ಹೈಸ್ಕೂಲಿನ ಮೆಟ್ಟಿಲೇರಿ ವರ್ಷ ಕಳೆಯುವುದರೊಳಗೆ ಅಪ್ಪ ಮನೆಯಲ್ಲಿ ಆಕೆಯ ಮದುವೆಯ ಪ್ರಸ್ತಾಪವನ್ನು ಎತ್ತಿದಾಗ… ಮೈತುಂಬ ಆತ್ಮವಿಶ್ವಾಸ ಹಾಗೂ ಆರೋಗ್ಯಕರ ಹಠವನ್ನು ತುಂಬಿಸಿಕೊಂಡಿದ್ದ ಗೌರಮ್ಮನವರು ದಿಟ್ಟವಾಗಿಯೇ ಅಪ್ಪನಿಗೆ ಅನ್ನುತ್ತಾರೆ – ‘ಮದುವೆ ಮಾಡಿದರೆ ನಾನಂತೂ ಮೆಟ್ರಿಕ್ ಮುಗಿವವರೆಗೆ ಗಂಡನ ಮನೆಗೆ ಹೋಗುವವಳಲ್ಲ; ನಿನ್ನೊಟ್ಟಿಗೇ ಇರುವವಳು; ಗಂಡ ಬೇಕಿದ್ದರೆ ಇಲ್ಲೇ ಬಂದಿರಲಿ….. ‘ ಎಂದು.

ಗೌರಮ್ಮನಿಗೆ ಹದಿಮೂರರ ವಯಸ್ಸಿನಲ್ಲೇ ಅವರಿಗಿಂತ ವಯಸ್ಸಿನಲ್ಲೇ ಅವರಿಗಿಂತ ಏಳು ವರ್ಷ ಹಿರಯವರಾದ ಹಾಗೂ ಅವರ ತಂದೆಗೆ ಅತ್ಯಂತ ನಿಕಟವರ್ತಿ ಕುಟುಂಬದವರಾದ ಬಿ.ಟಿ.ಗೋಪಾಲಕೃಷ್ಣ ಎಂಬವರ ಜತೆ ವಿವಾಹವಾಗುತ್ತದೆ. ಮದುವೆಯ ಪ್ರಸ್ತಾಪದ ಸಂದರ್ಭದಲ್ಲಿ ಮಡಿಕೇರಿಯ ಸರಕಾರಿ ಟ್ರಡಜರಿನಲ್ಲಿ ಶರಾಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಪಾಲಕೃಷ್ಣಯ್ಯನವರು ಕೆಲವು ‘ಲೌಕಿಕ ಕೌಶಲ್ಯದ’ ಕೊರತೆಯಿಂದಾಗಿ – ಹಿರಿಯರ ಸಲಹೆಯಂತೆ ಆ ಸರಕಾರಿ ಕೆಲಸವನ್ನು ತೊರೆದು, ತನ್ನ ಸೋದರ ಸಂಬಂಧಿಯ (ತಾಯಿಯ ಅಕ್ಕನ ಮಗಳ ಗಂಡ ಗುಂಡುಕುಟ್ಟಿ ಮಂಜುನಾಥಯ್ಯನವರು) ಹರದೂರು ಎಸ್ಟೇಟಿಗೆ ಮ್ಯಾನೇಜರ್ ಆಗಿ ಸೇರಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ.

ಗಂಡನ ಉದಾರತನ ಹಾಗೂ ತಮ್ಮಲ್ಲಿರುವ ಹಠದಿಂದಾಗಿ… ಮೆಟ್ರಿಕ್ ಮುಗಿಸುವವರೆಗೂ ಅಪ್ಪನ ಮನೆ ಬಿಟ್ಟು ಮಿಸುಕಾಡದ ಗೌರಮ್ಮನವರು, ತಮ್ಮ ಶಿಕ್ಷಣದ ಜತೆ ಜತೆಗೇ ತನ್ನ ದಾಂಪತ್ಯ ಜೀವನದ ದಾರಿಯನ್ನೂ ಕಹಿಗೊಳಿಸದೆ ಅದನ್ನು ಸುಗಮವಾಗಿಯೇ ಮುಂದುವರೆಸಿದ ಸೂಕ್ಷ್ಮಜ್ಞೆಯೂ ಹೌದು.

ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸವೇ ಅನಗತ್ಯ. ಹೇಗಿದ್ದರೂ ಅವರ ಬದುಕು – ಜಾಣ್ಮೆ ಅಡುಗೆ ಮನೆಗಷ್ಟೇ ಸೀಮಿತ ಎಂಬ ಮನಸ್ಥಿತಿಯ ಸಮಾಜವ್ಯವಸ್ಥೆ ಇದ್ದ ಆ ಕಾಲದಲ್ಲಿ, ಗೌರಮ್ಮನವರು ಮೆಟ್ರಿಕ್ ಪಾಸಾಗಿ ಈಜು ಕಲಿತು, ಟೆನಿಸ್ ಆಟದಲ್ಲಿ ಪ್ರವೀಣೆ ಕೂಡಾ ಅಗಿದ್ದರು. ಗೌರಮ್ಮನವರ ಹದಿಹರೆಯದ ದಿನಗಳು ಅವರ ಸೃಜನಶೀಲ ಬದುಕಿಗೆ ಸ್ವಾಗತದ ತೋರಣ ಕಟ್ಟುವಂತೆ ಅತ್ಯಂತ ಸೃಜನಾತ್ಮಕ ಚಟುವಟಿಕೆಯಲ್ಲೇ ಉರುಳತೊಡಗಿದ್ದವು.

ಬಾಲ್ಯದಿಂದಲೇ ತಮ್ಮ ಕೌಟುಂಬಿಕ ಪರಿಸರದಲ್ಲಿ ಕಾಲಕಾಲಕ್ಕೆ ತಕ್ಕಂತೆ ನಡೆಯುತ್ತಿದ್ದ ತಾಳಮದ್ದಲೆ ಹಾಗೂ ಯಕ್ಷಗಾನ ಬಯಲಾಟಗಳೊಳಗಿನ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಮೃದ್ಧಿಗೆ ಮಾರುಹೋದ ಗೌರಮ್ಮನವರು, ಆ ಕಲೆಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗದೆ ತಮ್ಮನ್ನೂ ಆ ಸಾಂಸ್ಕೃತಿಕ ಕಲೆಗಳಲ್ಲಿ ತೊಡಗಿಸಿಕೊಂಡದ್ದು ಆ ಕಾಲದಲ್ಲದು ವಿಶೇಷವೇ ಸರಿ. ಮಹಿಳೆಯರಿಗೆಂದಿಗೂ ಸಲ್ಲದಂತಿದ್ದ ಆ ಸಾಂಸ್ಕೃತಿಕ ಜಗತ್ತಿಗೆ ತಮ್ಮನ್ನು ತೆರೆದುಕೊಂಡ ಗೌರಮ್ಮನವರು ನಿಧಾನಕ್ಕೆ ಸಾಹಿತ್ಯ ವಲಯದ ಚೆರ್ಚೆಗೂ ತಮ್ಮ ಸಂವೇದನೆಯನ್ನು ಮೀಸಲಿಡತೊಡಗಿದ್ದರು. ಹೈಸ್ಕೂಲ್ ಮೆಟ್ಟಿಲೇರುವ ಮೊದಲೇ ಕನ್ನಡದ ಕಾದಂಬರಿಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದ ಗೌರಮ್ಮನವರಿಗೆ ಗಳಗನಾಥರ ಕಾದಂಬರಿಗಳೆಂದರೆ ತುಂಬ ಇಷ್ಟ.

ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದೊಡನೆ ಅಪ್ಪನ ಮನೆಯಿಂದ ಹರದೂರಿನ ಗುಂಡುಕುಟ್ಟಿಯಲ್ಲಿದ್ದ ಗಂಡನ ಮನೆ ದಾರಿ ಹಿಡಿದು ಗೌರಮ್ಮನವರು, ಹರದೂರಿನಂತಹ ಹಳ್ಳಿಯಲ್ಲಿದ್ದೂ ವಿಶಾಲವಾದ ಹೊರಜಗತ್ತಿಗೆ ತಮ್ಮ ಹೃದಯವನ್ನು ನಿಧಾನವಾಗಿ ತೆರೆದುಕೊಳ್ಳುತ್ತ, ತಮ್ಮ ಪುಟ್ಟ ಬರಹಗಳಲ್ಲಿ ಜಾತ್ಯಾತೀತ ಮನೋಧರ್ಮದ ತೀರಾ ಆರೋಗ್ಯಕರ ನಿಲುವಿನ ವಿಚಾರಗಳನ್ನು ಅಭಿವ್ಯಕ್ತಿಸುತ್ತಲೇ ನೇರ, ನಿರ್ಮಲ, ನಿರ್ಭಯವುಳ್ಳ ಆಧುನಿಕ ಮನೋಭಾವದ ಬರಹಗಾರ್ತಿಯಾಗಿ ರೂಪುಗೊಳ್ಳತೊಡಗಿದರು.

ಸ್ತ್ರೀಯರಿಗೆ ಓದು ಅಗತ್ಯವಿಲ್ಲ, ಎಂಬ ಮನೋಭಾವವಿದ್ದ ಸಾಂಪ್ರದಾಯಿಕ ಸಮಾಜದಲ್ಲಿ ಸ್ವತಃ ಅಂದಿನ ವೈಧವ್ಯದ ಬೀಕರತೆಯನ್ನು ಯಥೇಚ್ಛವಾಗಿ ಉಂಡು, ಸ್ತ್ರೀವಾದಿ ಪ್ರಜ್ಞೆಯುಳ್ಳ ಬರಹಗಾರ್ತಿಯರಾಗಿ ರೂಪುಗೊಂಡು ಶ್ರೀಮತಿ ತಿರುಮಲಾಂಬ ಮತ್ತು ಆರ್ ಕಲ್ಯಾಣನಮ್ಮನವರು ಕನ್ನಡದ ನವೋದಯ ಸಾಹಿತ್ಯಮಾಲೆಗಳಿಗೆ ತಮ್ಮ ಸಾಹಿತ್ಯಕೃತಿಗಳನ್ನು ಪೋಣಿಸುತ್ತಿದ್ದಾಗ… ಈ ಗೌರಮ್ಮಳಿನ್ನೂ ಎಳೆಬಾಲೆ!

ಶ್ರೀಮತಿ ತಿರುಮಲಾಂಬ ಮತ್ತು ಆರ್ ಕಲ್ಯಾಣಮ್ಮನವರು ತಮ್ಮ ಬರಹಗಳ ಮೂಲಕ ಜಡ್ಡುಗಟ್ಟಿದ ಸಾಂಪ್ರದಾಯಿಕ ಸಮಾಜ ವ್ಯವಸ್ಥೆಗೆ ತೀವ್ರ ಪ್ರತಿರೋಧ ಒಡ್ಡಿದ್ದರು. ಆದರೆ ಕಥಾವಸ್ತು ನಿರ್ವಹಣೆಯ ಕೆಲವು ಸಂದರ್ಭದಲ್ಲಂತು ಅವರಿಬ್ಬರಲ್ಲೂ ಸಾಂಪ್ರದಾಯಿಕವಾಗಿ ಹರಿದುಬಂದ ಸನಾತನ ಪ್ರಜ್ಞೆಯೊಂದು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿದುದ್ದನ್ನು ಸೃಜನಶೀಲೆ ಗೌರಮ್ಮನವರು ಗಮನಿಸಿದ್ದರು. ಈ ಕಾರಣಕ್ಕಾಗಿ ಅವರು ತಮ್ಮ ಬರವಣಿಗೆಯ ಸಂದರ್ಭದಲ್ಲಿ, ಇಂತಹ ಸ್ತ್ರೀ ಕೇಂದ್ರಿತ ಸಮಸ್ಯೆಗಳನ್ನೇ ಕಥಾವಸ್ತುಗಳನ್ನಾಗಿ ಆಯ್ಕೆ ಮಾಡಿಕೊಂಡರೂ ಆ ಸಮಸ್ಯೆಗಳನ್ನು ಅವರು ವಿಭಿನ್ನ ದೃಷ್ಟಿಕೋನದಿಂದ ಕಂಡದ್ದಲ್ಲದೆ ಅದನ್ನು ನಿರ್ವಹಿಸಿದ ರೀತಿಯಂತೂ ಅವರಿಬ್ಬರಿಗಿಂತಲೂ ತುಂಬ ಪ್ರಗತಿಪರವಾಗಿತ್ತು. ಗೌರಮ್ಮನವರು ತಮ್ಮ ಕಥೆಗಳಲ್ಲಿ ಸಂಪ್ರದಾಯವು ಧರ್ಮದ ಹೆಸರಿನಲ್ಲಿ ಹೆಣ್ಣುಸಂಕುಲದ ಮೇಲೆ ತೋರುತ್ತಿದ್ದ ಕುಟಿಲತೆಯನ್ನು ಚಿತ್ರಿಸುತ್ತಲೇ, ಅದನ್ನು ಕಥಾಪಾತ್ರಗಳ ಮೂಲಕ ಪ್ರಶ್ನಿಸುತ್ತ ಸನಾತನ ಸಂಪ್ರದಾಯದ ಕಟ್ಟುಗಳ ಬಿಗಿಯನ್ನು ಸಡಲಿಸುವಂತಹ ಹಾಗೂ ಬಂಡಾಯ ಪ್ರಜ್ಞೆಯನ್ನು ತೋರುವಂತಹ ಕಥಾವಸ್ತು – ಪಾತ್ರಗಳನ್ನು ನಿರ್ವಹಿಸಿದ್ದಂತೂ ಆ ಕಾಲಘಟ್ಟಕ್ಕೆ ತೀರಾ ಅನನ್ಯವಾದುದಾಗಿತ್ತು.

ಸಾಹಿತ್ಯಸಾಂಸ್ಕೃತಿಕ ಲೋಕದಲ್ಲಿ ಗೌರಮ್ಮ

ಹದಿಹರೆಯದ ಗೌರಮ್ಮನವರು ಸಾಹಿತ್ಯ, ಸಂಸ್ಕೃತಿ, ಜೀವನಪ್ರೀತಿ ತುಂಬಿದ್ದ ಸರಳ ಬದುಕಿಗಾಗಿ ಹಾತೊರೆಯುತ್ತ ಹೊಸ ಬಗೆಯ ಆರೋಗ್ಯಕರ ಚಿಂತನೆಯ ದಾರಿಯಲ್ಲಿ ಸಾಗುತ್ತಿರುವಾಗಲೇ ದೇಶದೆಲ್ಲೆಡೆ ಸ್ವಾತಂತ್ರ ಹೋರಾಟದ ಬಿಸಿ ಏರತೊಡಗಿತ್ತು. ಗೌರಮ್ಮನವರು ಓದುತ್ತಿದ್ದ ‘ಕೊಡಗು’, ‘ಕರ್ಮವೀರ’, ‘ಸತ್ಯಶೋಧನೆ’, ‘ಗಳಗನಾಥ ಕಾದಂಬರಿಗಳು’ ಹಾಗೂ ಸುಬೋಧ ಕುಸುಮಾಂಜಲಿಯು ಪ್ರಕಟಿಸಿದ್ದ “ದೇಶಭಕ್ತರ ಚರಿತ್ರೆಗಳು”, ‘ಕಾನಾಡ ಧುರೀಣ’ ಮುಂತಾದ ಬರಹಗಳ ಪ್ರಭಾವದಿಂದ, ಅವರೊಳಗೆ ರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಕಾಳಜಿಯುಂಟಾಗಿ ತಾಯಿನಾಡಿನ ಸ್ವಾತಂತ್ರ ಚಳುವಳಿಯತ್ತ ಅವರು ಆಕರ್ಷಿತರಾದರು. ಮಹಾತ್ಮಾಗಾಂಧಿ ಆರಂಭಿಸಿದ ಕರ ನಿರಾಕರಣ ಚಳುವಲಿ, ಖಾದಿ ಚಳುವಲಿಯ ಬಗ್ಗೆ ತೀರಾ ಒಲವುಳ್ಳವರಾಗಿದ್ದ ಗೌರಮ್ಮನವರು ಖಾದಿ ಬಟ್ಟೆಯ ಪ್ರಿಯರಾದರು. ತಮ್ಮ ೧೬ನೇ ವಯಸ್ಸಿನಿಂದಲೇ ಖಾದಿ ಸೀರೆಯನ್ನು ಉಡಲಾರಂಭಿಸಿದ ಎಳೆತರುಣಿ ಗೌರಮ್ಮನವರು ತಮ್ಮ ೨೨ ನೇ ವಯಸ್ಸಿನಲ್ಲಿ ಗಾಂಧೀಜಿಯವರ ಮನಸ್ಸನ್ನು ಗೆದ್ದ ಸಂಗತಿ ಕೊಡಗಿನ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ದಾಖಲಾಗುವಂತಹದ್ದು….

೧೯೩೪ ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಹರಿಜನಕಲ್ಯಾಣ ನಿಧಿ ಸಂಗ್ರಹಣೆಗಾಗಿ ಗಾಂದೀಜಿಯವರು ಕರ್ನಾಟಕದಲ್ಲಿ ೧೨ ದಿನಗಳ ಪ್ರವಾಸವನ್ನು ಕೈಗೊಂಡು, ಫೆಬ್ರವರಿ ೨೨ ರಂದು ಕೊಡುಗು ಜಿಲ್ಲೆಗೆ ಬಂದು ಅಲ್ಲಿ ಎರಡು ದಿನಗಳ ವಾಸ್ತವ್ಯವನ್ನು ಹೂಡುತ್ತಾರೆ. ಈ ಸಂದರ್ಭದಲ್ಲಿ ಊರಿನ ಸ್ವಾಗತ ಮಂಡಳಿಯವರ ಪೂರ್ವ ನಿರ್ಧಾರದಂತೆ, ಗಾಂಧೀಜಿಯವರು ಒಂದು ಸಂಜೆಗೆ ಶುಂಠಿಕೊಪ್ಪದ ಗುಂಡುಕುಟ್ಟಿಯಲ್ಲಿ, ಗೌರಮ್ಮನವರ ಮನೆ ಪಕ್ಕವೇ ಇರುವ, ಆಕೆಯ ಪತಿ ವ್ಯವಸ್ಥಾಪಕರಾಗಿದ್ದ ಗುಂಡುಕುಟ್ಟಿ ಮಂಜುನಾಥಯ್ಯನವರ ಎಸ್ಟೇಟ್ ಬಂಗಲೇಯಲ್ಲೇ ತಂಗುತ್ತಾರೆ. ಈ ವಿಚಾರವನ್ನು ಮೊದಲೇ ತಿಳಿದಿದ್ದ ಗೌರಮ್ಮನವರು ಊರಿನ ಸ್ವಾಗತ ಮಂಡಳಿಯವರಲ್ಲಿ, ‘ಗುಂಡುಕಟ್ಟಿ ಎಸ್ಟೇಟ್ ನಿಂದ ಗಾಂಧೀಜಿಯವರನ್ನು ಕಲ್ಲೆಸೆತದ ದೂರದಲ್ಲಿರುವ ನಮ್ಮ ಮನೆಗೂ ಕರೆತರಬೇಕು, ನಾನವರಿಗೆ ಒಡವೆ ಅರ್ಪಿಸುವುದಿದೆ’ ಎಂದು ಕೋರಿದ್ದರು. ಆದರೆ ಆ ಕೋರಿಕೆಯನ್ನು ಸ್ವಾಗತ ಮಂಡಳಿಯವರು ಗಂಭೀರವಾಗಿ ಪರಿಗಣಿಸದೇ ಇದ್ದಾಗ… ಗೌರಮ್ಮನವರು ಒಂದು ತೆರೆನಾದ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಗಾಂಧೀಜಿಯವರು ಎಸ್ಟೇಟ್ ಬಿಟ್ಟು ಹೊರಟ ಮುಂಜಾನೆಯೇ, ಗೌರಮ್ಮನವರು – ಗಾಂಧಿಜಿಯವರು ತಮ್ಮಂತಹ ಸಾಧಾರಣರ ಮನೆಗಳಿಗೆ ಭೇಟಿ ನೀಡದೆ, ಕೇವಲ ಶ್ರೀಮಂತರ, ಎಸ್ಟೇಟ್ ಮಾಲಿಕರ ಬಂಗಲೆಗಳಿಗೆ ಮಾತ್ರವೇ ಭೇಟಿ ಕೊಡುತ್ತಾರೆ – ಎಂಬ ವರ್ಗಪ್ರಜ್ಞೆಗೆ ಒಳಗಾಗಿ, ತನ್ನಂತಹ ಸಾಮಾನ್ಯರ ಮನೆಗೂ ಮಹಾತ್ಮರು ಬೇಟಿ ಕೊಡುಬೇಕೆಂದು ಆಗ್ರಹಿಸಿ ಹಠ ಹಿಡಿದು, ಅನ್ನ ನೀರು ಬಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ.

ತರುಣಿಯೊಬ್ಬಳು ತನ್ನ ಕಾರಣಕ್ಕೆ ನೊಂದು, ಅನ್ನ ನೀರು ಬಿಟ್ಟು ಹಠ ಹಿಡಿದು ಕೂತಿರುವ ಸುದ್ದಿ, ಸಹಾಯಕರ ಮೂಲಕ ಗಾಂಧೀಜಿಯವರ ಕಿವಿಗೂ ತಲುಪುತ್ತದೆ. ವಿಷಯ ತಿಳಿದು ಹೌಹಾರಿದ ಗಾಂಧೀಜಿಯವರು ಗೌರಮ್ಮನವರನ್ನು ತಮ್ಮಲ್ಲಿಗೆ ಬರಹೇಳಿ ಉಪವಾಸದ ವಿಷಯ ಪ್ರಸ್ತಾಪ ಮಾಡಿದಾಗ, ಗೌರಮ್ಮನವರು ಗಾಂಧಿ ಬಳಿ ಬಂದವರೇ ಮತ್ತೆ ಭಾವೋದ್ವೇಗಕ್ಕೆ ಒಳಗಾಗಿ ಅಳತೊಡಗುತ್ತಾರೆ. ಕುತ್ತಿಗೆಯ ನರ ಬಿಗಿದು ಬಂದು ಆಕೆಗೆ ಮಾತೇ ಆಡಲಾಗದಾಗ, ಗಾಂಧೀಜಿ ಆಕೆಯನ್ನುಸಮಾಧಾನಿಸುತ್ತಾರೆ. ‘ಯಾಕಾಗಿ ಈ ಉಪವಾಸ? ಎಂದು ಗಾಂಧೀಜಿಯವರು ಗೌರಮ್ಮನವರನ್ನು ಕೇಳಿದಾಗ, “ನೀವು ನಮ್ಮಂತಹ ಸಾಧಾರಣ ಮನೆಗೂ ಬರಬೇಕು.ನನ್ನ ಒಡವೆಗಳನ್ನು ನಿಮಗೆ ಅರ್ಪಿಸುವುದಿದೆ” ಎಂದು ಗೌರಮ್ಮನವರನ್ನು ಅನ್ನುತ್ತಾರೆ. ಗಾಂಧೀಜಿಯವರು ತಟ್ಟನೆ “ಆಗಲಿ ಬಹಳ ಒಳ್ಳೆಯ ಮತು, ಆದರೆ ಮೊದಲು ನೀನು ಉಪವಾಸ ಬಿಡಬೇಕು. ಅದಕ್ಕಾಗಿ ಈ ಕಿತ್ತಲೆ ಹಣ್ಣು ತಿನ್ನು” ಎಂದು ಗೌರಮ್ಮನವರಿಗೆ ಕಿತ್ತಳೆ ಹಣ್ಣು ನೀಡಿದಾಗ, ಆಕೆ ಸ್ವೀಕರಿಸದೆ “ಊಹೂಃ ಬೇಡ ಮೊದಲು ನೀವು ನನಗೆ ಮಾತು ಕೊಡಬೇಕು – ನಮ್ಮ ಮನೆಗೆ ಬರುವುದಾಗಿ” ಎಂದು ಹಠ ಹಿಡಿಯುತ್ತಾರೆ. ಆಗ ಗಾಂಧೀಜಿ ಅವರು ‘ಮಾತು ಗೀತು ಕೇಳಬಾರದು ಮಗು, ಈ ಕಿತ್ತಳೆ ಹಣ್ಣು ತಗೋ, ಇದನ್ನು ಮೊದಲು ಬಾಯಿಗೆ ಹಾಕು, ಹಾಗೆಲ್ಲ ಚೌಕಾಸಿ ಮಾಡಬಾರದು. ನಿನಗೆ ನನ್ನ ಮೇಲೆ ನಂಬಿಕೆ ಇರಬೇಕು, ನನ್ನ ದೃಢ ಪ್ರೀತಿಯಲ್ಲಿ ನಿನಗೂ ನಂಬಿಕೆ ಇರಬೇಕು’ ಎಂದು ರಮಿಸುತ್ತಾರೆ. ಆದರೂ ಗೌರಮ್ಮ ಆ ಹಣ್ಣನ್ನು ಸೇವಿಸುವುದಿಲ್ಲ. ಆದರೆ ಗಾಂಧೀಜಿಯವರ ಪಕ್ಕದಲ್ಲಿದ್ದ ಮೀರಾಬೆನ್ ಅವರಿಗೆ ಗಾಂಧೀಜಿಯವರ ಮನದ ನಿರ್ಧಾರ ಅರ್ಥವಾಗಿ, ಕಿತ್ತಳೆ ಹಣ್ಣು ಸುಲಿದು ಗೌರಮ್ಮನವರಿಗೆ ತಿನಿಸುತ್ತಾರೆ.

ಗಾಂಧೀಜಿಯವರು ಎಳೆತರುಣಿಗೆ ಕೊಟ್ಟ ಮಾತಿನಂತೆ, ಗೌರಮ್ಮನವರು ಮನೆಗೆ ಬರುತ್ತಾರೆ. ಮನೆಗೆ ಬಂದ ಗಾಂಧೀಜಿಯವರಿಗೆ ಖಾದಿಧಾರಣೆ ಗೌರಮ್ಮನವರು ತಮ್ಮಲ್ಲಿದ್ದ ಹಲವು ಒಡವೆಗಳನ್ನು ಸ್ವಾತಂತ್ರ ಸಂಗ್ರಾಮದ ನಿಧಿಗಾಗಿ ನೀಡುತ್ತಾರೆ. ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ತನ್ನಮೈಮೇಲಿದ್ದ ಒಡವೆಗಳನ್ನು ಹಾಗೂ ತಮ್ಮ ಸಂಗ್ರಹದಲ್ಲಿದ್ದ ಇತರ ಒಡವೆಗಳನ್ನು ಆಕೆ ಪ್ರೀತಿಯಿಂದ ಗಾಂಧೀಯವರಿಗೆ ನೀಡಿದಾಗ ಗಾಂಧೀಜಿಯವರು ಅವಕ್ಕಾಗುತ್ತಾರೆ. ಈಹೆಣ್ಣೇನಾದರೂ ಭಾವೋದ್ವೇಗಕ್ಕೆ ಒಳಗಾಗಿ ಈ ರೀತಿ ಒಡವೆಗಳನ್ನು ನೀಡುತ್ತದ್ದಾಳೋ ಏನೋ… ಎಂಬ ಗುಮಾನಿಗೆ ಒಳಗಾದ ಗಾಂಧಿಯವರು, ಆಕೆಗೆ ಒಡವೆ ಕೊಡಲು ಗಟ್ಟಿ ಮನಸ್ಸು ಇದೆಯೇ ಇಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳುವುದಕ್ಕಾಗಿ ಆಕೆಯ ಗಂಡನಲ್ಲಿ – ನಿಮಗಿದು ಒಪ್ಪಿಗೆಯೇ? ನಿಮ್ಮ ಆಕ್ಷೇಪಣೆ ಇಲ್ಲವಲ್ಲ? – ಎಂದು ಕೇಳಿದಾಗ ಪತಿ ಬಿ ಟಿ ಗೋಪಲಕೃಷ್ಣ ಅವರು, ‘ಅವಳಿನ್ನು ನನ್ನಲ್ಲಿಆಭರಣ ಬೇಡದಿದ್ದರಾಯಿತು ಎಂದು ನಕ್ಕು ನುಡಿಯುತ್ತಾರೆ. ಆ ಮಾತಿನ ಸಂದರ್ಭದಲ್ಲೇ ಗೌರಮ್ಮನವರು ‘ಈಗ ಕೊಟ್ಟ ಒಡವೆಗಳನ್ನು ಮತ್ತೆ ತೊಡುವುದಿಲ್ಲ’ ಎಂದು ಗಾಂಧೀಜಿಯವರಿಗೆ ಮಾತು ಕೊಡುತ್ತಾರೆ. ಕೊಟ್ಟ ಮಾತಿನಂತೆಯೇ ಅವರು ಬದುಕಿರುವವರಿಗೂ ಮುತ್ತೈದೆ ಒಡವೆಗಳನ್ನಷ್ಟೇ ಧರಿಸುತ್ತಾರೆ.

ಗೌರಮ್ಮ ಮತ್ತು ಗಾಂಧೀಜಿಯವರ ನಡುವಿನ ಈ ಘಟನೆಯನ್ನು ಕನ್ನಡದ ಖ್ಯಾತ ಸಾಹಿತಿಗಳಾದ ಸಿದ್ಧವನಹಳ್ಳಿ ಕೃಷ್ಣಶರ್ಮರು ೧೯೪೨ ರಲ್ಲಿ ಪ್ರಕಟಿಸಿದ ತಮ್ಮ`ಪರ್ಣಕುಟಿ’ ಗ್ರಂಥದಲ್ಲಿ ‘ಅಹಿಂಸೆಯ ಅವತಾರ’ ಎಂಬ ಅಧ್ಯಾಯದಲ್ಲಿ ಅವಿವರವಾಗಿ ದಾಖಲಿಸಿದ್ದಾರೆ.

ಸಂಪೂರ್ಣ ಗಾಂಧೀತತ್ವಕ್ಕೆ ಮಾರುಹೋಗಿದ್ದ ಗೌರಮ್ಮನಿಗೆ ಗಾಂಧೀಜಿಯವರಲ್ಲಿಎಷ್ಟು ಪೂಜ್ಯವಾದ ಪವಿತ್ರವಾದ ಭಾವನೆ ಇತ್ತೆಂದರೆ, ಬಾಪೂಜಿಯವರು ಹರದೂರಿನಲ್ಲಿ ( ಗುಂಡುಕುಟ್ಟಿ ಎಸ್ಟೇಟ್ ನಲ್ಲಿ) ಬಳಸಿದ್ದ ಮೈಸೂರು ಸ್ಯಾಂಡಲ್ ಸಾಬೂನನ್ನು ಗೌರಮ್ಮನವರು ಹಟ್ಟಿಹೊಳೆಗೆ ಬಲಿಯಾದ ನಂತರ, ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತುಸಂಗ್ರಹಾಲಯದಲ್ಲಿ ಅವರ ಇತರ ವಸ್ತುಗಳ ಜತೆ ಗಾಂಧಿ ಬಳಸಿದ್ದ ಈ ಸಾಬೂನನ್ನು ಆಸ್ಥೆಯಿಂದ ಜೋಡಿಸಿಡಲಾಗಿದೆ.

ಗಾಂಧೀಜಿಯವರ ಭೇಟಿ ಸಂದರ್ಭದಲ್ಲಿ ಆಗಿನ್ನೂ ೨೨ ರ ಹರೆಯದಲ್ಲಿದ್ದ ಗವರಮ್ಮನವರಿಗೆ, ನೇರವಾಗಿ ದೇಶದ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲಾಗದಿದ್ದರೂ, ಅವರು ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಆ ಸ್ವಾತಂತ್ರ ಹೋರಾಟಕ್ಕೆ ಅಲ್ಪಸ್ವಲ್ಪ ಅಳಿಲುಸೇವೆ ಸಲ್ಲಿಸಿದ್ದರು. ಇವರು ತಮ್ಮ ಸನಿಹದವರನ್ನು, ಪರಿಚಯಕ್ಕೆ ಬಂದವರನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ನೋಂದಾಯಿಸುತ್ತಿದ್ದರಲ್ಲದೆ, ಕೊಡಗಿನಲ್ಲಿ ಸ್ವಾತಂತ್ರ ಹೋರಾಟಕ್ಕೆ ದುಮುಕಿದ್ದ ಮುಂತಾದ ಹೋರಾಟಗಾರರಿಗೆ ಹೋರಾಟದ ಸ್ಥೈರ್ಯ ತುಂಬುತ್ತಿದ್ದರು, ಗಾಂಧೀಜಿಯವರ ಖಾದಿವ್ರತವನ್ನು ಅವರು ಅಕ್ಷರಶಃ ಪಾಲಿಸುತ್ತ ಆ ಮೂಲಕ ವಸಾಹತು ಶಾಹಿಗೆ ಪುಟ್ಟದಾಗಿಯಾದರೂ ಪ್ರತಿರೋಧವನ್ನುಗೌರಮ್ಮನವರು ಒಡ್ಡಿದ್ದರು.

ಗೌರಮ್ಮನವರನ್ನು ತುಂಬಾ ಹತ್ತಿರದಿಂದ ಬಲ್ಲ ಹಾಗೂ ಒಡನಾಡಿಯಾಗಿದ್ದ ಅವರ ತಂಗಿ ( ಚಿಕ್ಕಪ್ಪನ ಮಗಳು ) ಈಗ ಎಂಬತ್ತೆರಡರ ಇಳಿ ಪ್ರಾಯದಲ್ಲಿರುವ ಹೊನ್ನಮ್ಮ ಅವರು ದುರ್ಮರಣಕ್ಕೀಡಾದ ಅಕ್ಕನ ಬಗ್ಗೆ ಹೀಗನ್ನುತ್ತಾರೆ.

`ನಮ್ಮ ಗೌರಕ್ಕ ತುಂಬ ಚೂಟಿ, ಜಾಣೆ ಕೂಡ. ಎತ್ತರದ ಸುಂದರಿ. ಆ ಕಾಲದಲ್ಲೇ ಕಾನ್ವೆಂಟಲ್ಲಿ ಮೆಟ್ರಿಕ್ ಕಲಿತಾಕೆ. ಆಕೆಯ ಮಾತು ಹಾವ – ಭಾವ ಎಲ್ಲನೂ ನೋಡುದಕ್ಕೆ ಹಳ್ಳಿಮನೆಯ ಎಲ್ಲರಿಗೂ ಒಂಥರಾ ಚೆಂದ. ನಾವು ಹಳ್ಳೀಲಿದ್ವಿ. ಗೌರಕ್ಕ ಆಗಾಗ್ಗೆ ಪಟ್ಟಣದಿಂದ ಹಳ್ಳಿಗೆ ಬರೋಳು. ಆಕೆಯ ನಗು, ಆಕೆಯ ಮಾತು, ಅಕೆಯ ಮೌನ, ಆಕೆಯ ಓದು, ಆಕೆಯ ಚಲನ – ವಲನ ಎಲ್ಲವು ಅವಳಿಗಿಂತ ಚಿಕ್ಕವರಾದ ನಮಗೆ ಒಂಥರಾ ಕುತೂಹಲ. ಆಕಾರಣಕ್ಕೆ ಆಕೆಯ ಸುತ್ತಲೇ ಸುತ್ತುತ್ತಿದ್ವಿ. ಆಕೆ ನಮ್ಗೆ ಅದೂ…. ಇದೂ ಪಟ್ಟಣದ ಸುದ್ದಿ ಹೇಳೋಳು…. ಕತೆ ಹೇಳೋಳು; ಕೆಲವೊಮ್ಮೆ ಗಂಭೀರವಾಗಿ ತನ್ನ ಪಾಡಿಗೆ ಓದುತ್ತಾ ಇರೋಳು… ಕೆಲವೊಮ್ಮೆ ನಮ್ಮ ತುಂಟನತಕ್ಕೆ ಕಣ್ಣಲ್ಲೇ ಗದರಿಸೋಳು.