ಬದುಕಿನ ಬತ್ತಿ ಆರಿದ ಹೊತ್ತು

ಗೌರಮ್ಮನವರ ಕ್ರಿಯಾಮುಖಿಯಾದ ಸ್ವಭಾವ, ಅವರ ಚುರುಕುತನ, ಚಟುವಟಿಕೆ ಕಂಡವರಿಗೆ, ಇಷ್ಟೊಂದು ಕ್ರಿಯಾಶೀಲತೆ ಹೀಗೆ ಒಂದೆಡೆ… ಒಬ್ಬರಲ್ಲಿಯೆ ಶೇಖರಗೊಳ್ಳುವುದಕ್ಕೆ ಸಾಧ್ಯವೇ ಎಂಬ ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿಗೆ ಅವರುಬದುಕಿನಲ್ಲಿ ಉತ್ಸಾಹಿಯಾಗಿದ್ದವರು. ಸೊಪ್ಪು – ತರಕಾರಿಗಳ ಕೈತೋಟ ಮಾಡುವುದರಿಂದ ಹಿಡಿದು ಹೂ – ತೋಟ ಬೆಳೆಸುವುದರಲದಲಿ ನಿಷ್ಣಾತರಾಗಿದ್ದ ಗೌರಮ್ಮನವರು ಅಡುಗೆಯಲ್ಲೂ ಕೂಡಾ ಅಷ್ಟೇ ಪ್ರವೀಣೆ. ಕಸೂತಿ ಹಾಕುವುದರ ಜೊತೆಗೆ ಟೆನಿಸ್ ಆಟದಲ್ಲಿ ಬಲು ಚುರುಕು. ಈಜು ಕೂಡ ಇವರಿಷ್ಟದ ಕ್ರೀಡೆ. ಆಗಷ್ಟೇ ಈಜು ಕಲಿತು ಮೀನಿನಂತೆ ಈಜುತ್ತಿದ್ದ ಗೌರಮ್ಮನವರು ಬಿಡುವಾದಾಗಲೆಲ್ಲಾ ಈಜಲು ಹಾರುತ್ತಿದ್ದುದು ಹರದೂರಿನ ಹಟ್ಟಿಹೊಳೆಗೆ. ಇದನ್ನು ‘ಹರದೂರ ಹೊಳೆ ‘ ಎಂದೂ ಕರೆಯುತ್ತಾರೆ. ಈ ಹೊಳೆಯೇ ಮುಂದೆ ಹೋಗಿ ಮಸಾಪುರ ಹೊಳೆಯನ್ನು ಸೇರಿ ಅಲ್ಲಿಂದ ಮುಂದುವರೆದು ಹಾರಂಗಿ ಹೊಳೆಯಾಗುತ್ತದೆ. ಆ ಹೊಳೆಯ ನಂತರ ಕಾವೇರಿಯನ್ನು ನದಿಯನ್ನು ಸೇರುತ್ತದೆ.

ಗೌರಮ್ಮನವರು ತಮ್ಮ ವಾಸ್ತವ್ಯವನ್ನು ಗುಂಡುಕುಟ್ಟಿ ಬಂಗ್ಲೆಯ ಪಕ್ಕದಲ್ಲಿದ್ದ ತಮ್ಮ ಹಳೆಮನೆಯಿಂದ ಸುಮರು ಮೂರು ಫರ್ಲಂಗ್ ದೂರದಲ್ಲಿರುವ ಮತ್ತು ಯಲಕ್ಕಿ ಗುಂಡಿಗೆ ಸುಮರು ಒಂದುವರೆ ಫರ್ಲಂಗ್ ಹತ್ತಿರದಲ್ಲಿದ್ದ ಯುರೋಪಿಯನ್ ಬಂಗ್ಲೆಗೆ (ಎಸ್ಟೇಟ್ ಮಾಲೀಕ ಗುಂಡುಕಟ್ಟಿ ಮುಂಜುನಾಥಯ್ಯನವರು ಹೊಸದಾಗಿ ಖರೀದಿಸಿದ್ದ) ಬದಲಾಯಿಸಿದ ನಂತರ ಅವರು ಬಿಡುವಾದಾಗಲೆಲ್ಲ ಈಜುವುದಕ್ಕೆ ತೆರಳುತ್ತಿದ್ದುದು – ತಮ್ಮ ಮನೆ ಬಳಕೆಗೆ ನೀರು ತರುತ್ತಿದ್ದ ಯಾಲಕ್ಕಿ ಗುಂಡಿಗಿಂತ ಕೂಗಳತೆಯ ದೂರದಲ್ಲಿದ್ದ ಹರದೂರು ಹೊಳೆಗೆ. ತಮ್ಮ ಸೋದರನಷ್ಟೇ ಇಷ್ಟದ ಮೈದುನ ಗೋವಿಂದಯ್ಯನವರಲ್ಲಿ ಈಜು ಕಲಿತಿದ್ದ ಗೌರಮ್ಮನವರು… ಬೇಸಿಗೆ ದಿನಗಳಲ್ಲಿ ಸಾಮಾನ್ಯವಾಗಿ ದಿನವೂ ತೆರಳುತ್ತಿದ್ದುದು ಸಮಾನ ಮನಸ್ಕ ಆತ್ಮೀಯರೊಂದಿಗೆ. ಕೆಲವೊಮ್ಮೆ ಪತಿ ಗೋಪಾಲಕೃಷ್ಣಯ್ಯ ಹಾಗೂ ಮೈದುನ ಗೋವಿಂದಯ್ಯನವರೂ ಅವರೊಂದಿಗೆ ಈಜಿಗೆ ತೆರಳುತ್ತಿದ್ದುದು ಇತ್ತು.

ಆದರೆ ಅಂದು… ಅಂದರೆ ಹಟ್ಟಿಹೊಳೆ ಗೌರಮ್ಮನವರು ಜೀವವನ್ನು ನುಂಗಿದ ದಿನ ಅವರ ಪತಿ ಗೋಪಾಲಕೃಷ್ಣಯ್ಯನವರು ಮಡದಿಯೊಂದಿಗೆ ಈಜಲು ತೆರಳಬೇಕಾಗಿತ್ತು. ಆದರವರು ಕಾರ್ಯನಿಮಿತ್ತ ಕುಶಾಲನಗರಕ್ಕೆ ಹೊರಡುವುದು ಅನಿವಾರ್ಯವಾಗಿದ್ದ ಕರಣ… ಅಂದು ಗೌರಮ್ಮನವರು ಈಜಿಗೆ ತೆರಳಿದ್ದ ತನ್ನ ಹಿರಿಯಣ್ಣ ಸುಬ್ರಾಯರ ಮಗ ೧೫ ರ ಹರೆಯದ ಗೋವಿಂದ ಶರ್ಮನ (ವಿಶು)ಜೊತೆ. ಅವರಿಬ್ಬರು ಹಟ್ಟಿಹೊಳಗೆ ಬರುವಷ್ಟರಲ್ಲೇ ಎಸ್ಟೇಟ್ ಮಾಲೀಕ ಗುಂಡುಕುಟ್ಟಿ ಮಂಜುನಾಥಯ್ಯನವರಾಗಲೇ ಅಲ್ಲಿ ಈಜುತ್ತಿದ್ದರು…

ಗೌರಮ್ಮನವರು ಎಂದಿನಂತೆ ತಮ್ಮ ಮೈದುನ ಪರವೊರಿನಿಂದ ತಂದಿದ್ದ ಈಜುಡುಗೆಯನ್ನು ಧರಿಸಿ, ತಾವು ಈಜಬೇಕಾಗಿದ್ದ ಮಡುವಿನ ಮೇಲಿನಿಂದ.. ಅಡ್ಡ ಬೆಳೆದಿದ್ದ ಮರದ ಕೊಂಬೆಯನ್ನು ಹತ್ತಿ… ಅತ್ಯಂತ ಉತ್ಸಾಹದಿಂದ ಮಡುವಿಗೆ ಹಾರಿದ್ದಾರಷ್ಟೆ… ಹಾಗೆ ಹಾರಿದ ಗೌರಮ್ಮ ಮತ್ತೆ ಮಡುವಿನಿಂದ ಮೇಲೆ ಬರಲೇ ಇಲ್ಲ!

ಗೌರಮ್ಮನವರು ಯಾವತ್ತೂ ಅದೇ ಮಡುವಿಗೆ… ಅದೇ ಕೊಂಬೆಯಿಂದ ಹಾರಿ ಜೊತು ಈಜುತ್ತಿದ್ದದು ಮಾಮೂಲಾಗಿತ್ತು. ಆದರೆ ಆ ದಿನ ಅವರ ಆ ಪ್ರೀತಿಯ ಮಡು ಅವರಿಗೆ ಹೇಗೆ ಕೈ ಕೊಟ್ಟಿತು… ಎಂದು ಅವರ ಸಾವಿನ ಕಾಲಕ್ಕೆ ಎಳೆ ಹುಡುಗನಾಗಿದ್ದು ಈಗ ವೃದ್ಯಾಪ್ಯದ ಅಂಚಿನಲ್ಲಿರುವ ಮಗನಲ್ಲಿ ಕೇಳಿದರೆ ಮಗ ಕೊಡುವ ವಿವರಣೆ ಹೀಗಿದೆ:

ಗೌರಮ್ಮನವರು ಹೊಳೆ ಸುಳಿಗೆ ಸಿಲುಕಿ ಜೀವ ಕಳೆದುಕೊಂಡ ಸುದ್ದಿ ಕೇಳಿ ಕನ್ನಡದ ಹಲವು ಸಾಹಿತಿಗಳು ಬರಹ – ಕವನಗಳ ಮುಖೇನ ತಮ್ಮ ದುಃಖವನ್ನು ಅಭಿವ್ಯಕ್ತಿಸಿಕೊಂಡರು ತಂಗಿಯಂತೆ ಕಾಣುತ್ತಿದ್ದ ಬೇಂದ್ರೆಯವರೂ ಆ ಸಂದರ್ಭದಲ್ಲಿ ತುಂಬಿ ಬಂದ ದುಃಖ ಭಾವಗಳಿಂದಲೇ ‘ತಂಗಿ ಗೌರಮ್ಮ’ ಎಂಬ ಕವನವೊಂದನ್ನು ಬರೆದು, ಗೌರಮ್ಮನವರ ಸುಂದರ, ಸುಖದಾಂಪತ್ಯದ ಚಿತ್ರಣವನ್ನು ಆ ಕವನದಲ್ಲಿ ಕಟ್ಟಿಕೊಟ್ಟು ಕನ್ನಡಿಗರ ಮುಂದೆ ನಿಲ್ಲಿಸಿದ್ದಾರೆ ; ಆ ಕವನ ಹೀಗಿದೆ:

ತಂಗಿ ಗೌರಮ್ಮ

ಜಲದೇವತೆ ವನದೇವತೆ ಒಂದಡೆಯಲಿ ಸೇರಿ ಬಿನದಿಸುತಿಹ ಹೊಳೆಮಡುವಿಗೆ ನೀನೀಸಲು ಹಾರಿ ತಾಯೊಡಲನು ಕೂಸಾಟಕೆ ತಾಯ್ಮಡಲಿಗೆ ಬೀರಿ ತೀರಲು, ಜಡವಾಗಳೆ ಕಾವೇರಿಯೇ ತಂಪೇರಿ? ನೆನೆದರೆಯೇ ನಾ ನಡುಗುವೆ ಇದು ಆದುದದೆಂತೋ? ಎಲ್ಲಿಂದೀ ಎಳೆಜೀವಕೆ ಸಾವೆಂಬುದು ಬಂತೋ? ಪತಿಯೊಲವಿನ ಸುತನೊಲವಿನ ಕೆಳೆಯೊಲವಿನ ತಂತು ಜಗ್ಗದೆ ನಿನ್ನನು ಮೇಲಕೆ? ನೀ ಮುಳುಗಿದೆಯೆಂತು?

ಗೌರವಸ್ತ್ರ ಗೌರಸ್ಮಿತ ಗೌರವದೀ ಗೌರೀ ಮಿಂಚಿದಳದೊ ಬಾನಂಚಿಗೆ ಕಾವೇರಿಯ ಕುವರಿಬೆಳುಂದಿಗಳೆ ಕರುವಿಟ್ಟಿತೊ ನಿರ್ಮಲಮೂರ್ತಿ ಮೊದಲಿಲ್ಲಿಯೆ ಕುಡಿಬಿಟ್ಟಿತೊ ಮುಗಳಿಟ್ಟಿತೊ ಕೀರ್ತಿ? ಉಷೆಸುರಿಸುವ ಇಬ್ಬನಿಯೊಲು ಕರುಣೆಯ ಕಂಬನಿಯ ಬಾಳ್ ಬಳ್ಳಿಗೆ ಬೀರಿದೆ ನೀ ಮಧುಹಾಸ್ಯದ ಹನಿಯ.

ಕಥೆಗಾರ್ತಿ ಗೌರಮ್ಮನವರ ಸಾವಿನ ನಂತರ ೧೯೩೯ ರಲ್ಲಿ ಪ್ರಕಟಗೊಂಡ ಅವರ ಮೊದಲ ಕಥಾಸಂಕಲನ ‘ಕಂಬನಿಗೆ ‘ ದಿ ೨.೮.೧೯೩೯ರಂದು ಮುನ್ನುಡಿ ಬರೆದ ಬೇಂದ್ರೆಯವರು ಆ ಮುನ್ನುಡಿಯಲ್ಲೂ ತಂಗಿ ಗೌರಮ್ಮನವರ ಬಗ್ಗೆ ಹೀಗೆ ಕಂಬನಿ ಮಿಡಿದಿದ್ದಾರೆ:

ತಂಗಿ ಗೌರಮ್ಮನವರ ಕಥಾಸಂಗ್ರಹಕ್ಕೆ ಮುನ್ನುಡಿಯನ್ನು ಬರೆಯಲು ನಾನು ಒಪ್ಪಿಕೊಂಡಾಗ ಅವರು ಇಷ್ಟು ಆಕಸ್ಮಾತ್ತಾಗಿ, ದಾರುಣವಾಗಿ ನಮ್ಮನ್ನಗಲಿ ಹೋಗುವರೆಂದು ನಾನು ಭಾವಿಸಿರಲಿಲ್ಲ. ಅವರ ಕಥಾಸಂಗ್ರಹಕ್ಕೆಕಂಬನಿಯೆಂಬ ಹೆಸರನ್ನು ಸೂಚಿಸಿದಾಗ ಅವರನ್ನುಕುರಿತೇ ಕಂಬನಿಗಳುರುಳುವವೆಂದು ನಾನು ಎಣಿಸಿರಲಿಲಲ್ಲ. ಯಾವ ಕೆಲಸ ಸಂತೋಷ ಅಭಿಮಾನಗಳೆಂದು ನಾನು ಬಗೆದಿದ್ದೆನೋ ಅದರೊಳಗಿನ ಅಬಿಮಾನ ಉಳಿದಿದೆ; ಆದರೆ ಸತೋಷದ ಅಸ್ಥಳವನ್ನು ಸಂತಾಪವು ವ್ಯಾಪಿಸಿದೆ. ಸಂತೋಷದಂತೆಯೇ ಸಂತಾಪದಲ್ಲಿಯೂ ಒಂದು ವಿವಿಧ ಸವಿಯಿರುವುದಾದರೂ ಅದೆಲ್ಲವೂ ಕಣ್ಣೀರು ಸವರಿದ ನಾಲಗೆಯಿಂದ ಪೆಪ್ಪರಮಿಂಟು ಚಪ್ಪರಿಸಿದಂತೆಯೇಸರಿ. ಗೌರಮ್ಮನವರ ಜೀವನದಲ್ಲಿ ಒಂದು ಬಗೆಯ ಸಮಾಧಾನವಿದ್ದರೂ ಅವರ ಜೀವನ ಸಹಾನುಭೂತಿಯಲ್ಲಿ ಪರಗತದಃಖಾಸ್ವಾದನೆಯಿಂದ ಬಂದ ಮಧುರ ವಿಷಾದಕ್ಕೆ ಅಪಾರವಾದ ಸ್ಥಳವಿತ್ತು. ಅಂತೆಯೇ, ಅವರ ಕಥಾಫಲಗಳಿಗೆ ಬೇವಿನ ಹಣ್ಣುಗಳ ಕಟುಮಧುರತೆಯಿದೆ.ಉದಿತೋದಿತ ಕೀರ್ತಿಯ ಕಥೆಗಾರ್ತಿಯರು ಅಕಾಲಿಕ ಮರಣವುಕಟುಮಧುರ ! ಅವರ ಸಹಾನುಭೂತಿಯ ಕಥಾ ವಸ್ತುಗಳು ಕಟುಮಧುರ ! ಎರಡರಿಂದುದುರುವ ಕಂಬನಿಗಳೂ ಕಟುಮಧುರ! ಒಂದಕ್ಕೊಂದು ಹೊಂದಿಕೆಯಗಿಯೇ ಇದೆ!

ಗೌರಮ್ಮನವರ ಸಾವಿಗೆ ಇದೇ ಸಂದರ್ಭದಲ್ಲಿ ಕಂಬನಿ ಮಿಡಿದ ಕನ್ನಡದ ಸಾಹಿತಿ ದಿ. ಮಲ್ಲಾರಿ ಅವರು ೩.೮.೧೯೩೯ ರಂದು ಗವರಮ್ಮನವರ ಬಗ್ಗೆ ನೋವಿನಿಂದ ಬರದ ಕವನದ ಒಂದು ತುಣುಕು ಇಲ್ಲಿದೆ.

ಕನ್ನಡದ ತೋಟವನ್ನು ಕೃಷಿಮಾಡಿ ಜೀವನವ ನೆರೆದೋವ ತೋಟಗತ್ತಿ ಹೋದ ಮೇಗೆ ಇನ್ನು ರಸಚಿಗುರು ಮೊಗಬತ್ತಿ ಬನ ಮೌನದಲಿ ಮರುಗದೋ ಅರಳು ಕಂಬನಿಗಳಾಗೆ!

ಹಾಗೆಯೇ ಕನ್ನಡದ ಮತ್ತೊಬ್ಬ ಬರಹಗಾರ ದಿ. ಪಿ.ವಿ ಆಚಾರ್ಯ ಅವರುಗೌರಮ್ಮನವರ ಸಾವಿಗೆ ಭಾವಪೂರ್ಣವಾಗಿ ಕಂಬನಿ ಮಿಡಿದಿದ್ದು ಹೀಗೆ –

ಬರಡು ಕೊರಡ ಕೊನೆಯೊಳಿಂದು ಚಿಗುರು ಕೊನರಿ ಕಾಂಬುದೊಂದು ಹೆಣ್ಣು ಜೀವವೊಂದು ಎರೆದುದಿದಕೆ ನೊಂದ ಕಂಬನಿ ಕಠೆದಕೊಡವು ಒಡೆದರೇನು? ಮಿಡಿದ ತಂತಿ ಡಿದರೇನು? ನುಡಿದ ನಾದ ನುಡಿಸದೇನು ವೀಣೆಯೊಡಲ ಕಾಹಿನಿ? ಎಂದು.

ಅಕಾಲ ಸಾವಿಗೀಡಾದ ಈ ಸುಸಂಸ್ಕೃತ ಭಾವಜೀವಿ, ಸ್ನೇಹಪೂರ್ಣವ್ಯಕ್ತಿತ್ವದ ಕಥನಗಾರ್ತಿಯ ಕಥನಗಳ… ಶಕ್ತಿ ಓಘ, ಲಾಲ್ಯಿತ್ಯ, ಜೀವಂತಿಕೆಯನ್ನು ಕಂಡಾಗ ‘ಗೌರಮ್ಮನವರ ಸಾವಿನಿಂದ ಕನ್ನಡ ಕಥನಲೋಕ’ ಬಡವಾಯಿತು ಎಂಬ ಅವರ ಸಾಹಿತ್ಯಾಭಿಮಾನಿಗಳ ಅನಿಸಿಕೆಗಳಲ್ಲಿ ಖಂಡಿತ ಯಾವ ಉತ್ಪ್ರೇಕ್ಷೆಯೂ ಇಲ್ಲ.

ಗೌರಮ್ಮನವರ ಬರಹ

ಗೌರಮ್ಮನವರು ಕನ್ನಡ ಕಥಾಲೋಕಕ್ಕೆ ಪ್ರವೇಶ ಪಡೆದಿದ್ದು ನವೋದಯ ಸಾಹಿತ್ಯ ಸಂದರ್ಭದಲ್ಲಿ. ಅಂದಿನ ಸಮಾಜದಲ್ಲಿ ಹಲವು ಸಮಾಜಿಕ ಸಮಸ್ಯೆಗಳ ಜೊತೆಗೆ ವಸಾಹತುಶಾಹಿ ವ್ಯವಸ್ಥೆಯಡಿಯ ಶೋಷಣೆಯನ್ನು ಕುರಿತು ಹಲವು ಬವಣೆಗಳು ಈ ಬರಹಗಾರ್ತಿಉ ದಿವ್ಯಪ್ರಜ್ಞೆಗೆ ದಕ್ಕಿದ್ದರೂ ಅವೆಲ್ಲವನ್ನೂ ನಿರ್ಲಕ್ಷಿಸಿ – ಅತ್ಯಂತ ಮುಖ್ಯವಾದ ಸಮಸ್ಯೆ – ಎಂದು ತಮ್ಮ ಬರಹಗಳಿಗೆ ಪ್ರಮುಖವಾಗಿ ಅವರು ಆಯ್ದುಕೊಂಡಿದ್ದ, ಸ್ತ್ರೀಪರ ಕಳಜಿಯುಳ್ಳ ಕಥಾವದ್ತುಗಳನ್ನು! ಅವರು ಬಾಲ್ಯವಿವಾಹ, ಬಾಲವೈಧವ್ಯ, ವಿಧವಾವಿವಾಹ ಸಮಸ್ಯೆಗಳಂತಹ ಕಥಾವಸ್ತುಗಳ ಜತೆಗೆ ವರ್ಗಬೇಧ, ಮತಾಂತರ, ಸ್ತ್ರೀಶಿಕ್ಷಣ, ವರದಕ್ಷಿಣೆ, ಹದಿಹರೆಯದ ಸಮಸ್ಯೆ ಇತ್ಯಾದಿ ಕಥಾವಸ್ತುಗಳನ್ನು ನಿರ್ವಹಿಸಿದ ರೀತಿಯೇ ಅತ್ಯಂತ ಜೀವಪರವಾದುದು. ಈ ಕರಣಕ್ಕಾಗಿಯೇ ಇವರನ್ನು ಕನ್ನಡದ ಪ್ರಥಮ ಬಂಡಾಯ ಹಾಗೂ ಸ್ತ್ರೀ ವಿಮೋಚನಾವಾದಿ ಮನೋಭಾವದ ಕಥೆಗಾರ್ತಿ ಎಂದೇ ಗುರುತಿಸಬಹುದಾಗಿದೆ. ಗೌರಮ್ಮನವರು ತಮಗೆ ಮೌಢ್ಯವೆನಿಸಿರುವ ಹಳೆಯ ಜೀವವಿರೋಧಿ ಕಂದಾಚಾರ ಸಂಪ್ರದಾಯಗಳನ್ನು ಓದುಗರ ಮನ ಮುಟ್ಟುವಂತೆ ಚಿತ್ರಿಸಿ, ಆ ಸಂಪ್ರದಾಯಗಳನ್ನು ತನ್ನ ಪಾತ್ರಗಳ ಮೂಲಕ ಚರ್ಚಿಸಿ ಟೀಕಿಸಿ ಓದುಗರ ಸಂಪ್ರದಾಯ ಸಮಾಜದ ಮುಂದಿಟ್ಟರು.

ಅಂದಿನ ಸಾಮಾಜಿಕ ಸಮಸ್ಯೆಗಳಲ್ಲಿ ಅತೀ ಅಮಾನವೀಯವಾದುದು ವಿಧವಾ ಸಮಸ್ಯೆ. ವಿಧವೆಯರ ದೀನ ಬದುಕು. ಗೌರಮ್ಮನವರು ತೀರ ಹತ್ತಿರದಲ್ಲೇ ಅಂತಹ ಬದುಕನ್ನು ಕಂಡು ನೊಂದಿರಬಹುದಾದ ಕಾರಣಕ್ಕಾಗಿಯೇ ಏನೋ ತಮ್ಮ ‘ವಾಣಿಯ ಸಮಸ್ಯೆ’, ‘ಒಂದು ಪುಟ್ಟ ಚಿತ್ರ’, ‘ಅಪರಾಧಿ ಯಾರು?,’ ದಂತಹ ಕಥೆಗಳಲ್ಲಿ ವಿಧವೆಯರ ಅಂತರಂಗದೊಳಗಿನ ನೋವಿನ ಕಡಲ ಪ್ರಕ್ಷುಬ್ದ ಅಲೆಗಳನ್ನು ಚಿತ್ರಿಸುತ್ತ…. ಆ ನೋವಿನಲೆಗಳಿಗೆ ಕಾರಣವಾಗಿರುವ ಕ್ರೂರ ಪುರುಷ ಮನಸ್ಸುಗಳನ್ನು ಅನಾವರಣ ಮಡುವ ಪರಿ ಹೇಗಿದೆಯೆಂದರೆ ಸನಾತನ ಪರಂಪರೆಯನ್ನು ಆರಾಧಿಸುವ ಸಂಪ್ರದಾಯಸ್ಥರತ್ತ ‘ಕಾಸದ ಕಬ್ಬಿಣದ ನೀರು’ ಎಸೆದು ‘ಮಂಗಳಾರತಿ’ ಮಾಡಿದಂತಿದೆ.

ಅವರು ಆ ಕಥೆಗಳನ್ನು ಹೊಸೆದ ಕಾಲವನ್ನು ಗಮನಿಸಿದರೆ ಅಂದಿನ ಸಮಾಜದಲ್ಲಿದ್ದ ಲಿಂಗಭೇದ ನೀತಿಯನ್ನು ತಮ್ಮ ಕಥಾಪಾತ್ರಗಳ ಮೂಲಕ ಒಷ್ಟು ನೇರ ಮತ್ತು ವ್ಯಂಗ್ಯವಾಗಿ ಟೀಕಿಸಿ, ಆನೀತಿಗೆ ಆಕ್ರೋಶ – ಆವೇಶ ವ್ಯಕ್ತಪಡಿಸಿದ ಬಂಡಾಯ ಕಥನಕಾರ್ತಿ ಆ ಕಾಲಘಟ್ಟದಲ್ಲಿ ಇನ್ನೊಬ್ಬರಿಲ್ಲ ಎಂಬುದು ಕೂಡಾ ಅಷ್ಟೇ ನಿಜ.

ಅವರ ಮೊದಲ ಕಥೆ ‘ಪುನರ್ವಿವಾಹ’ದಲ್ಲಿ ವಿದುರರಿಗೊಂದು ನೀತಿ – ವಿಧವೆಯರಿಗೊಂದು ನೀತಿ ಇರುವ ಕೊಳಕು ಸಮಾಜವನ್ನು ‘ವಿಶೇಷವಾಗಿ ಉಜ್ಜಿ ತೊಳೆಯಲು’ ಕಥೆಗಾರ್ತಿ ಕಥಾನಾಯಕಿಯ ಪಾತ್ರದ ಮೂಲಕ ಸುದೀರ್ಘ ಭಾಷಣಕೊಡಿಸುವುದು ಮತ್ತು ಬಾಲವಿಧವೆಯರು ಪರಧರ್ಮಗಳಿಗೆ ಸೇರುವುದಕ್ಕೆ ಹಾಗೂ ದೀನವಾಗಿ ವೇಶ್ಯಾಜೀವನಕ್ಕೆ ತಳ್ಳಲ್ಪಟ್ಟು ನಿರ್ಲಜ್ಜ ಬದುಕು ನಡೆಸುತ್ತಿರುವುದಕ್ಕೆ ಈ ಹಿಂದೂ ಸಮಾಜ ಮತ್ತು ಸಂಪ್ರದಾಯ ಹೇಗೆ ಕಾರಣ ಎಂಬುದನ್ನು ಕೂಡಾ ಪಾತ್ರದ ಮೂಲಕ ವಿಮರ್ಶಿಸುವುದು – ಗೌರಮ್ಮನವನ್ನೊಳಗಿರುವ ಸ್ತ್ರೀಪರ ಚಿಂತನೆ ಹಾಗೂ ಸ್ವಜನ ಪಕ್ಷಪತವಿಲ್ಲದೆ ಸುಧಾರಕ ದೃಷ್ಟಿ ಎಷ್ಟು ತೀಕ್ಷ್ಣವಾದುದು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಗೌರಮ್ಮನವರು ೧೯೩೪ ರಲ್ಲಿ ಬರೆದ ‘ಅಪರಾಧಿ ಯಾರು?’ ಎಂಬ ಕಥೆಯಲ್ಲಿ ಅವರು ವಿಶೇಷವಾಗಿ ಹಿಂದೂ ಸಮಾಜದ ಮೇಲೆ ಮಾಡಿದ ‘ಟೀಕಾಪ್ರಹಾರ,’ ಅವರೊಳಗಿನ ಪ್ರಗತಿಶೀಲ – ಬಂಡಾಯ ಪ್ರಜ್ಞೆಯನ್ನು ಪ್ರತಿಬಿಂಬಿಸುವಂತಹದ್ದು. ಈ ಕಥೆಯಲ್ಲಿ ಹಿಂದೂ ಸಮಾಜ ಅಬಲೆ ಹೆಣ್ಣನ್ನು ಆತ್ಮಹತ್ಯೆಯ ಸಂಕಷ್ಟಕ್ಕೆ ತಳ್ಳಿದಾಗ ಆಕೆಯನ್ನು ಮುಸ್ಲಿಂ ಸಮುದಾಯ ರಕ್ಷಿಸಿ ಆಕೆಯ ಇಷ್ಟದಂತೆ ತನ್ನ ಧರ್ಮಕ್ಕೆ ಸ್ವೀಕರಿಸುತ್ತದೆ.

`ಅಪರಾಧಿ ಯಾರು?’ ಕಥೆಯ ಕಥಾನಾಯಕಿ ಪುಟ್ಟ ಹೆಣ್ಣುಮಗುವುಳ್ಳ ಒಬ್ಬ ಅನಾಥ ಬಡ ಬ್ರಾಹ್ಮಣ ವಿಧವೆ. ಹೊಟ್ಟೆಪಾಡಿಗಾಗಿ ಅಡುಗೆಯವಳಾಗಿ ಸೇರುತ್ತಾಳೆ. ಅಲ್ಲಿ ಆ ಗಣ್ಯನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಅಪವಾದದ ಹೊರೆಹೊತ್ತು ಆತನ ಕುಮ್ಮಕ್ಕಿನಿಂದ ತನ್ನ ಸಮಾಜದವರಿಂದಲೇ ಬಹಿಷ್ಕಾರ ಹಾಕಿಸಿಕೊಂಡು ಆತನಿಂದಲೇ ಮನೆಯಿಂದ ಹೊರದಬ್ಬಲ್ಪಡುತ್ತಾಳೆ. ತಮ್ಮವರಿಂದ ಬಹಿಷ್ಕರಿಸಲ್ಪಟ್ಟ ಆ ಅಸಹಾಯಕ ಹೆಣ್ಣು ತನಗಿನ್ನು ಆತ್ಮಹತ್ಯೆಯೇ ಗತಿ ಎಂದು ತನ್ನ ಮಗುವಿನೊಂದಿಗೆ ಆ ಕೃತ್ಯಕ್ಕೆ ಮುಂದಾದಾಗ ಪರಿಚಿತ ಮುಸಲ್ಮಾನ ಬಂಧುಗಳು ಆಕೆಯನ್ನು ರಕ್ಷಿಸಿ ‘ನಮ್ಮ ಧರ್ಮದಲ್ಲಿ ನಿನಗೆ ರಕ್ಷಣೆ ಇದೆ’ ಎಂದು ಸಮಧಾನಿಸಿ ಆಕೆಯ ಇಚ್ಛೆಯಂತೆ ಆಕೆಯನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಮತಾಂತರದ ಸುದ್ದಿ ತಿಳಿದಾಕ್ಷಣ ಆ ಹೆಣ್ಣಿಗೆ ಅನ್ಯಾಯ ಎಸಗಿದ ಗಣ್ಯವ್ಯಕ್ತಿ ಊರಿನ ಹಿಂದೂಗಳ ಸಭೆ ಕರೆದು ‘ಮೊನ್ನೆ ದಿನ ಹಿಂದೂ ರಮಣಿಯೊಬ್ಬಳು ಮುಸಲ್ಮಾನ ಧಮ ಸ್ವೀಕರಿಸಿದ್ದು ಊರಿನ ಹಿಂದುಗಳಿಗೆಲ್ಲ ಬಹಳ ವಿಷಾದವನ್ನುಂಟುಮಾಡಿದೆ. ಇನ್ನು ಮುಂದೆ ಈ ರೀತಿಯ ಅನಾಚಾರ ಸಂಭವಿಸಿದಂತೆ ಎಚ್ಚರ ವಹಿಸಬೇಕು ಹಾಗೂ ಹಿಂದೂ ರಕ್ಷಣೆ ಮಾಡಬೇಕು’ – ಎಂದು ತನ್ನ ಅಧ್ಯಕ್ಷತೆಯಲ್ಲೇ ಧರ್ಮರಕ್ಷಣೆಯ ತೀರ್ಮಾನವನ್ನು ಕೈಗೊಳ್ಳುತ್ತಾನೆ.

ಈ ಕಥಾಚೌಕಟ್ಟಿನಲ್ಲಿ ಕಥೆಗಾರ್ತಿ ಗೌರಮ್ಮನವರು, ಮನುಷತ್ವ ತೋರದ ಹಿಂದೂ ಸಮಾಜ ಮತ್ತು ಆ ಸಮಾಜದ ಗಣ್ಯ ಪರುಷರ ಆಷಾಢಭೂತಿತನ ಹಾಗೂ ಪರುಷ ಸಮಾಜವು ಮಹಿಳೆಯರ ಮೇಲೆ ನಡೆಸುವ ಅನ್ಯಾಯವನ್ನು, ಪಾತ್ರಗಳ ಮೂಲಕ ಎಷ್ಟು ಕಟುವಾಗಿ ಮತ್ತು ಮಾರ್ಮಿಕವಾಗಿ ಚಿತ್ರಿಸಿದ್ದಾರೆಂದರೆ – ವಿಧವೆ ಕಥಾನಯಕಿಯ ದುರಂತ ಬದುಕನ್ನು ಕಂಡು ಆಕೆಯ ಮುಸಲ್ಮಾನ ಗೆಳತಿ ತನ್ನ ಅಣ್ಣನಲ್ಲಿ ಹೀಗನ್ನುತ್ತಾಳೆ: ‘ಅನಾಥ ಅಬಲೆಯರು ಅತ್ಯಾಚಾರಿಯ ಅತ್ಯಾಚಾರಕ್ಕೆ ತಾವೇ ಪ್ರಾಯಶ್ಚಿತವನ್ನು ಮಾಡಿಕೊಳ್ಳುವುದು ಅವರ ಜಾತಿಯ ನೀತಿಯಾದರೆ ನಮಗಾ ಜಾತಿಯಲ್ಲಿ ಜನ್ಮಕೊಡದಿದ್ದುದಕ್ಕೆ ದೇವರನ್ನು ಎಷ್ಟು ವಂದಿಸಿದರೂ ಸ್ವಲ್ಪವೇ’ ಎಂದು ಹೀಗೆಯೇ ಕಥಾನಾಯಕಿಯ ದುರಂತವನ್ನು ಕಂಡು ಆಕೆಯದ್ದೆ ಸಮಾಜಕ್ಕೆ ಸೇರಿದ ಮತ್ತೊಬ್ಬಳು ಗೆಳತಿ ಹೀಗನ್ನುತ್ತಾಳೆ: ‘ನಮ್ಮವರ ಹೃದಯದಲ್ಲಿ ಜಾತಿಗಲ್ಲದೆ ದಯೆಗೆ ಎಡೆಯಲ್ಲ. ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ, ಗಂಡಸರು ಈ ನಿಯಮಕ್ಕೆ ಒಳಪಡಬೇಕ್ಕಾಗಿಲ್ಲ. ಇದೇ ನೋಡು ನಮ್ಮ ಜಾತಿಯ ದೊಡ್ಡತನದ ಕುರುಹು; ‘ ಎಂದು.

ಹಿಂದೂ ಸಮಾಜದ ಲಿಂಗಭೇದ ನೀತಿಯನ್ನು ಪ್ರತಿಬಿಂಬಿಸುವ ಈ ಕಥೆ – ಮಾನವೀಯತೆಯನ್ನು ಮರೆತು ಧರ್ಮರಕ್ಷಣೆಯ ಬಗ್ಗೆ ಮಾತಾಡುವ ಪುರುಷ ಕೇಂದ್ರತ ಸಮಾಜದ ಅಮಾನವೀಯ ನಡವಳಿಕೆಯನ್ನು ಹಾಗೂ ಪುರುಷನಿಂದ ಅನ್ಯಾಯಕ್ಕೊಳಗಾದ ಹೆಣ್ಣನ್ನು ಶಿಕ್ಷೆಗೊಳಪಡಿಸುವ ಸಮಾಜದ ತಾರತಮ್ಯ ನೀತಿಯನ್ನು ತೀಕ್ಷ್ಮವಾಗಿ ಖಂಡಿಸುತ್ತದೆ. ಇಲ್ಲಿ ಗೌರಮ್ಮನವರು ಮಹಿಳಾ ಸಂಕುಲಕ್ಕಾಗುವ ಅನ್ಯಾಯವನ್ನು ಪ್ರತಿಭಟಿಸುವಾಗ ‘ತನ್ನವರು ತನ್ನ ಧರ್ಮ’ ಎಂಬ ಪಕ್ಷಪಾತ ತೋರದಿರುಹುದು ಅವರೊಳಗಿನ ಅಪ್ಪಟ ಸ್ತ್ರೀವಿಮೋಚನಾವಾದಿ ಹಾಗೂ ಜೀವಪರ ಪ್ರಜ್ಞೆಗೆ ಸಾಕ್ಷಿ.

ಬರವಣಿಗೆಯ ಆರಂಭದಲ್ಲಿ ಗವರಮ್ಮನವರು ಎಲ್ಲ ಯುವ ಬರಹಗಾರರಂತೆ ತಮ್ಮ ಪ್ರಗತಿಪರ ಚಿಂತನೆಗಳಿಂದ ಹೊಸ ಸಮಾಜ ನಿರ್ಮಾಣದ ಕನಸು ಕಾಣುತ್ತಾ… ತೀವ್ರ ಭಾವಾವೇಷದಿಂದ ತಮ್ಮ ಕಥೆಗಳನ್ನು ಬರೆಯತೊಡಗಿದರೂ… ಕಾಲ ಉರುಳುತ್ತಿದ್ದಂತೆ ಅವರ ಅನುಭವ, ತಿಳುವಳಿಕೆ, ಜೀವನದೃಷ್ಟಿ ವಿಶಾಲವಾಗುತ್ತಲೇ… ಅವರ ಆವೇಶ, ಆಕ್ರೋಶಗಳೆಲ್ಲ ಒಂದು ‘ಹದಕ್ಕೆ’ ಬಂದು ನಿಂತಿತ್ತು – ಎನ್ನುವುದಕ್ಕೆ ಅವರು ತಮ್ಮ ಸಾವಿನ ಹಿಂದಿನ ದಿನವಷ್ಟೇ ಬರೆದು ಮುಗಿಸಿದ್ದ ಕಥೆ ‘ಮುನ್ನಾದಿನ’ ಒಂದು ಅತ್ಯುತ್ತಮ ನಿದರ್ಶನ.

ವಸಂತಗಳು ಸರಿದಂತೆ ತನ್ನ ಭಾವನೆ, ಅನುಭವ, ತಿಳುವಳಿಕೆ ಜೀವನ ದೃಷ್ಟಿಯಲ್ಲಿ ತುಂಬ ಬದಲಾವಣೆ ಅಗಿದೆ – ಎಂಬುದನ್ನು ಗೌರಮ್ಮನವರೇ ಒಂದಡೆ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ: ೧೯೩೧ ರಲ್ಲಿ ತಾವು ಬರೆದ ಮೊದಲ ಕಥೆ ‘ಪುನರ್ವಿವಾಹ’ವನ್ನು ತಮ್ಮ ಮೊದಲ ಕಥಾಸಂಕಲನ ‘ಕಂಬನಿ’ ಯಲ್ಲಿ ಸೇರಿಸುವ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಆ ಕಥೆಯನ್ನು ಓದಿ ಆ ಓದಿನ ನಂತರ ತಮ್ಮಲ್ಲುಂಟಾದ ಭಾವ ಅನಿಸಿಕೆಯನ್ನು ಪ್ರಕಟಿತ ಸಂಕಲನದ ಅದೇ ಕಥೇಯ ಅಡಿಟಿಪ್ಪಣಿಯಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ : ‘ಆಗ ನನಗೀ ಕಥೆ (ಪುನರ್ವಿವಾಹ) ಬಹಳ ಸೊಗಸಾಗಿದೆ ಎಂಬ ಭಾವನೆಯಿತ್ತು. ಈಗ ಓದಿದರೆ ಆಗಿನ ಭಾವನೆಗಳನ್ನೆಲ್ಲ ನೆನಸಿಕೊಂಡರೆ ನಗು ಬರುತ್ತೆ. ಆದರೂ ಮೊಟ್ಟಮೊದಲಿನ ಪ್ರಯತ್ನ ನೋಡಿ. ಅದ್ದರಿಂದ ಈ ಕಥೆಯೆಂದರೆ ಸ್ವಲ್ಪ ಮಮತೆ’ ಎಂದು

ಗೌರಮ್ಮನವರ ಕಥೆಗಳು ಭಾಷೆ, ತಂತ್ರ ಮತ್ತು ಶೈಲಿಯ ದೃಷ್ಟಿಯಿಂದ ತುಂಬ ಉತ್ಕೃಷ್ಟ. ಅವರ ಕಥೆಗಳಲ್ಲಿ ಸಂಪ್ರದಾಯದ ಬಿಗಿತ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಜೀವನ ಶೈಲಿ, ಹೆಣ್ಣು ಗಂಡುಗಳ ಪ್ರೇಮ – ವಿರಹಗಳ ಬಗ್ಗೆ ವಾಸ್ತವಿಕ ಚಿತ್ರಣವಿದೆ. ಹಾಗೆಯೇ ಹೆಚ್ಚಿನ ಮಹಿಳಾ ಬರಹಗಳಲ್ಲಿರುವಂತೆ ಭ್ರಮೆ, ಕನಸು, ಅತಿರಂಚಿತ ಪ್ರೀತಿ – ಪ್ರೇಮ – ಕಾಮ – ಸಿಟ್ಟು – ಸಿಡುಕು – ದ್ವೇಷ ಮುಂತಾದ ಅವಾಸ್ತವ ಚಿತ್ರಣಗಳು ಇವರ ಕಥೆಗಳಲ್ಲಿಲ್ಲ. ಲಿಂಗಬೇದ ನೀತಿಯಡಿ ಲೋಕದ ನೀತಿ – ನ್ಯಾಯಗಳನ್ನು ಪ್ರಶ್ನಿಸುವ ಇವರ ಕಥೆಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದರೆ ಅವು ಅಂದಿಗೂ ಇಂದಿಗೂ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವಷ್ಟು ವೈಶಿಷ್ಟ್ಯಪೂರ್ಣವಾದುವು.

ಮಹಿಳಾ ಸಾಹಿತಿಗಳನ್ನು ಸಹಾನುಭೂತಿಯಿಂದ ಸ್ವಾಗತಿಸುತ್ತಿದ್ದ ಅಂದಿನ ಆ ಸಾಹಿತ್ಯ ಕಾಲಘಟ್ಟದಲ್ಲಿ ನಮ್ಮ ವರಕವಿ ಬೇಂದ್ರೆಯವರು ಗೌರಮ್ಮನವರ ಮೊದಲ ಕಥಾಸಂಕಲನ ‘ಕಂಬನಿ’ ಕಥೆಗಳನ್ನು (೧೯೩೯ರಲ್ಲಿ ಪ್ರಕಟ) ಕುರಿತು ಹೀಗೆನ್ನುತ್ತಾರೆ:

‘ಶ್ರೀಮತಿ ಗೌರಮ್ಮನವರು ಜೀವಿಸಿದ್ದೆ ೨೭ ವರ್ಷ. ಸಂಗ್ರಹದೊಳಗಿನ ಹನ್ನೆರಡು ಕಥೆಗಳು ಅವರ ಆಯುಷ್ಯದ ಕೊನೆಯ ಏಳು ವರ್ಷಗಳಲ್ಲಿ ಬರೆದವುಗಳು. ಹನ್ನೆರಡೂ ಕಥೆಗಳು ಒಂದಿಲೊಂದು ವಿಧದಿಂದ ಹೆಣ್ಣುಗಂಡಿನ ಜೀವನದ, ಅದರ ಭಾಗ್ಯದುರ್ಭಾಗ್ಯದ, ಪ್ರಯಣದ ಆಖ್ಯಾನಗಳಾಗಿವೆ. ಗಂಡಸಿನ ದೌರ್ಜನ್ಯ, ದಾರಿದ್ರಕುರೂಪತೆಗಳ ದೌರ್ಭಾಗ್ಯ, ಹೆಂಗಸಿನ ಯುಗ ಯುಗದ ದುರ್ವಿಧಿ ವಿಲಾಸ, ಸಮಾಜದ ವಿಪರೀತ ದುರ್ಬುದ್ಧಿ, ಶಿಷ್ಟಾಚಾರಗಳ ಅಂಧವಿರೋಧ ಇವೇ ಮೊದಲಾದ ಕಾರಣಗಳಿಂದ ಸ್ತ್ರೀಯರಿಗಾಗುವ ದುಃಖಕ್ಕಾಗಿ ಗವರಮ್ಮನವರ ಕರುಳಿನ ತಂತಿಯಿಂದ ಮಿಡಿದು ಬಂದ ಮೂಕಶೋಕವು ಹೃದಯಬೇದಕವಾಗಿಯೂ ಹೃದಯ ಬೋಧಕವಾಗಿಯೂ ಆಗಿರುವುದು.

ಇಲ್ಲಿ ಎಲ್ಲ ಕಥೆಗಳೂ ವಿಶೇಷವಾಗಿ ಹೆಣ್ಣಿನ ಹೃದಯವನ್ನೇ ಅವಿಷ್ಕರಿಸುತ್ತಿದ್ದರೂಸನ್ಯಾಸಿ ರತ್ನ,ಹೋಗಿಯೇ ಬಿಟ್ಟಿದ್ದ,ಪ್ರಾಯಶ್ಚಿತ್ತ ಕಥೆಗಳಲ್ಲಿನ ಗಂಡಿನ ಮೂಲಕವಾಗಿ ಪ್ರಣಯವನ್ನು ಪ್ರದರ್ಶಿಸಿದ್ದಾಗಿದೆ. ಮೊದಲಿನೆರಡು ಕಥೆಗಳಲ್ಲಿ ಕತೆಗಾರಿಕೆಯಲ್ಲಿಯೂ ಕಟ್ಟಿನಲ್ಲಿಯೂ ಒಂದು ಚಮತ್ಕಾರವಿದೆ. ಮೂರನೆಯ ಕಥೆಯಲ್ಲಿ ಗಂಡಿನಷ್ಟೆ ಹೆಣ್ಣು ಜೀವಾಳವಾಗಿದೆ.

ದಿನಚರಿ, ಕಾಗದ ಮೊದಲಾದ ಕಥಾಪ್ರಕಾರಗಳನ್ನು ಅವರು ಕೈಯಾಡಿಸಿ ನೋಡಿದ್ದಾರೆ. ಇಲ್ಲದರಲ್ಲಿ ಅವರ ಕೈ ತಡೆಯಿಲ್ಲದೆ ಸಾಗುವುದು. ಆದರೆ ಎಲ್ಲ ಕಥೆಗಳ ನಿಜವಾದ ವೈಲಕ್ಷಣ್ಯವೆಂದರೆ ಮಾನಸ ವ್ಯಾಪರಗಳ ಹೇಳಿಕೆಕೌಸಲ್ಯಾನಂದನ,’ ‘ಸುಳ್ಳುಸ್ವಪ್ನ, ವಾಣಿಯ ಸಮಸ್ಯೆ,ಮುವಿನ ರಾಣಿ’ ‘…ಯಾರು?’ ಮೊದಲಾದವುಗಳಲ್ಲಿ ಗೌರಮ್ಮನವರ ಸಹಾನುಭವವು ನಮ್ಮನ್ನು ಮೆಚ್ಚಿಸುವುದು. ೧೯೩೩ ಅಕ್ಟೋಬರದಲ್ಲಿ ಬರೆದ ಅವರಒಂದು ಪುಟ್ಟ ಚಿತ್ರಕ್ಕೂ೧೯೩೯ರ ಫೆಬ್ರವರಿಯಲ್ಲಿ ಬರೆಯಲಾದಅವಳ ಭಾಗ್ಯಕ್ಕೂ ಆರು ವರ್ಷದ ಅಂತರವಿರುವಂತೆಯೇ ಕಿರಿದರಲ್ಲಿ ಹಿರಿದು ಭಾವ ತುಂಬವ ಅವರ ಕಥೆಗಾರಿಕೆಯ ಬೆಳವಣಿಗೆಯಲ್ಲಾದ ಅಂತರವನ್ನು ಕಂಡು, ಅವರ ಜೀವನದ ಕಥೆ ಇಷ್ಟಕ್ಕೆ ಮುಗಿಯೀತೇಎನಿಸುವುದು.

ಕಥೆಗಳಲ್ಲಿ ಕಟುತ್ವವಿದ್ದರೂ ರೊಚ್ಚಿಲ್ಲ; ಸೋದ್ದೇಶಲೇಖನದ ಸೂಚನೆಯಿದ್ದರೂ ಅವಾಸ್ತವ ಆರ್ಭಟೆಯಿಲ್ಲ; ಕಲೆಯು ನೈಜ್ಯವನ್ನು ಮರೆಮಾಚಿಲ್ಲ.ಎಲ್ಲೆಲ್ಲಿಯೂ ಹೆಣ್ಣಿನ ಹೃದಯದ ಸಾಕ್ಷಿಯನ್ನು ಸಾರುವ ಕಥಾಗುಚ್ಚವೂಶ್ರೀನಿವಾಸ’ ‘ಆನಂದರಕಥೆಗಳನ್ನು ಓದಿದ ವಾಚಕರಿಗೆ ಮನೋವಿಶ್ಲೇಷಣಾತ್ಮಕ ಕಥೆಗಲ ಮಾದರಿಯಾಗಿ ಹೃದಯಂಗಮವಾಗುವದೆಂದು ನಾನು ನಂಬಿದ್ದೇನೆ.

ಗೌರಮ್ಮನವರ ಕಥಾತಂತ್ರ ಆ ಸಾಹಿತ್ಯ ಕಾಲಘಟ್ಟಕ್ಕೆ ತೀರಾ ವಿಶಿಷ್ಟವಾದುದು. ತಮ್ಮ ಕಥಾನಿರೂಪಣಾ ತಂತ್ರವಾಗಿ ದಿನಚರಿ ಹಾಗೂ ಪತ್ರಗಳ ರೂಪದಲ್ಲಿ ಕಥೆ ನಿರೂಪಿಸುವ ಹೊಸ ತಂತ್ರವೊಂದನ್ನು ಅವರು ಅಳವಡಿಸಿಕೊಂಡಿದ್ದು, ಅದು ಅವರ ಕಥಾರಚನಾ ಕೌಶಲ್ಯಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಕಥೆ ‘ಸುಳ್ಳುಸ್ವಪ್ನ’ ದಿನಚರಿಯ ಮಾದರಿಯಲ್ಲಿದ್ದರೆ ‘ನಾಲ್ಕು ಘಟನೆ’ ‘ಒಂದು ಪುಟ್ಟ ಚಿತ್ರ’ ‘ಕೆಲವು ಕಾಗಗದಗಳು’ ಪತ್ರ ರೂಪದಲ್ಲಿರುವ ಕಥೆಗಳು. ಅವರ ‘ಕೆಲವು ಕಾಗದಗಳು’ ಕಥೆಯಲ್ಲಿನ ಕಥಾ ತಂತ್ರಗಾರಿಕೆಯನ್ನು ಕುರಿತು – ಅವರು ಕಥಾ ಬರವಣಿಗೆ ಮಾಡುತ್ತಿರುವಾಗಲೇ ಕನ್ನಡದ ವಿದ್ವಾಂಸರಾದ ಮುಳಿಯ ತಿಮ್ಮಪ್ಪಯ್ಯನವರು ಪ್ರತಿಕ್ರಿಯಿಸಿದ್ದು ಹೀಗೆ :

ಇವು ಕಾಗದ ಪತ್ರಗಳೇ ಆದರೂ ಬರೆದವರ ಜಾಣ್ಮೆಯಿಂದಾಗಿಸಾಹಿತ್ಯ ಸಾಲಿನಲ್ಲಿ ಸೇರಿವೆ. ಕನ್ನಡದಲ್ಲಿ ಇದೊಂದು ಹೊಸ ದಾರಿ. ಬರೆದವರ ವಿಶಿಷ್ಟತೆ, ಪ್ರಾಯ ಮೊದಲಾದವನ್ನೆಣಿಸಿದರೆ ಇವರು ಕನ್ನಡ ಬರಹಗಾರರೊಳಗೆ ಒಂದಡೆಯನ್ನು ಪಡೆದು ಕೊಳ್ಳುವವರೆಂದು ತೋರುತ್ತದೆ. ಇವರು ತಮ್ಮ ಲೇಖನ ಕರ್ತವ್ಯವನ್ನು ಸಾಗಿಸುತ್ತ ಕನ್ನಡವನ್ನು ಬೆಳಗಿಸುವಂತಾಗಲಿ ಎಂದು ನಾನು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ“.

ಕಥೆಗಾರ್ತಿ ಗೌರಮ್ಮನವರು ತಮ್ಮ ಹಲವು ಕಥೆಗಳಲ್ಲಿ ಜೀವಸಹಜವೆನಿಸಿರುವ ಪ್ರಣಯಭಾವದ ಅಭಿವ್ಯಕ್ತಿಯನ್ನು ಅತ್ಯಂತ ಸಹಜ ಹಾಗೂ ಸಮರ್ಥವಾಗಿ ನಿರ್ವಹಿಸಿರುವುದು ಅವರ ಕಥನಗಾರಿಕೆಯ ಮತ್ತೊಂದು ವಿಶೇಷ. ‘ಸನ್ಯಾಸಿ ರತ್ನ’ ‘ಕೌಸಲ್ಯಾನಂದನ’, ‘ಹೋಗಿಯೇ ಬಿಟ್ಟಿದ್ದ’, ‘ಪ್ರಾಯಶ್ಚಿತ’… ಮುಂತಾದ ಕಥೆಗಳಲ್ಲಿ ಪ್ರಣಯ ಭಾವ ಉತ್ಕಟವಾಗಿ ಪ್ರಕಟಗೊಂಡಿದೆ.

ಗೌರಮ್ಮನವರು ಪರಂಪರೆಯ ನಂಬಿಕೆ – ಕಟ್ಟುಪಾಡುಗಳಿಗೆ ಜೋತುಬೀಲದೆ… ಇತ್ತ ಸಂಪ್ರದಾಯ ವಿರೋಧಿ, ಧರ್ಮವಿರೋಧಿ ಎಂಬ ಹೀಗಳಿಕೆಗೂ ತುತ್ತಾಗದೆ, ತಮ್ಮೊಳಗಿನ ಸೂಕ್ಷ್ಮ ಕಥನಗಾರಿಕೆಯ ಮೂಲಕ ‘ಮತಾಂತರ’ ದಂತಹ ಸೂಕ್ಷ್ಮಾತಿಸೂಕ್ಷ್ಮವಿಷಯವನ್ನು ತಮ್ಮ ಕಥನನೇಯ್ಗೆಗೆ ‘ಸರಕಾಗಿ’ ಆಯ್ಕೆ ಮಾಡಿಕೊಂಡಿರುವುದು ಅವರ ಪ್ರಗತಿಪರತೆ ಹಾಗೂ ಅವರೊಳಗೆ ಧರ್ಮತೀತವಾದ ಮಾನವೀಯ ಮನಸ್ಸೊಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಹಸಿವು – ಪ್ರೀತಿ – ಪ್ರಣಯದಂತಹ ಜೀವಜನ್ಯ ಸಂಗತಿಗಳ ಮುಂದೆ, ಮನುಷ್ಯ ನಿರ್ಮಿತ ಜತಿ – ಧರ್ಮಗಳೆಲ್ಲ ತೃಣ ಸಮಾನ ಎನ್ನುವುದನ್ನೂ ಈ ಕಥನಗಾರ್ತಿತಮ್ಮ ಕಥೆಗಳ ಮೂಲಕ ಪ್ರತಿಪಾದಿಸಿದ್ದಾರೆ.

ಗೌರಮ್ಮನವರು ಮೇಲು ಜಾತಿಯ ಸುಶಿಕ್ಷಿತ, ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದಿದ್ದರೂ, ಅವರೂ ತಮ್ಮ ಬದುಕು – ಅನುಭವದಲ್ಲಿ ಕಂಡ ಶೂದ್ರರು, ಆರ್ಥಿಕ ದುರ್ಬಲರ ಸಮಸ್ಯೆಗಳನ್ನೆಲ್ಲ ತಮ್ಮ ಕಥೆಗಳಾದ ‘ ಹೋಗಿಯೇ ಬಿಟ್ಟಿದ್ದ,’ ‘ಅಪರಾಧಿ ಯಾರು,’ ‘ಆಹಿತಿ,’ ‘ಅವಳ ಭಾಗ್ಯ’ ‘ಮುನ್ನಾದಿನ’ ಗಳಲ್ಲಿ ಮಾನವೀಯವಾಗಿ ಹೆಣೆದಿರುವುದು…. ಅವರೊಳಗಿನ ಸೂಕ್ಷ್ಮ ಸಂವೇದನೆ ಹಾಗೂ ಸಾಮಾಜಿಕ ಪ್ರಜ್ಞೆಗೊಂದು ಸಾಕ್ಷಿ.

ಗೌರಮ್ಮನವರು ತಮ್ಮ ಕಥೆಗಳಲ್ಲಿ ಸಾಮಾಜಿಕ ಆದರ್ಶಗಳನ್ನು ಪ್ರತಿಪಾದಿಸುವ ಸಂದರ್ಭ ಅಥವ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಕಥಾ ಚೌಕಟ್ಟಿನಲ್ಲೇ ಪರಿಹಾರ ದೊರಕಿಸುವ ಸಂದರ್ಭದಲ್ಲಿ, ಕಥಾನಿರೂಪಣೆಗೆ ಭಂಗ ತಾರದಂತೆ ಕಲಾತ್ಮಕವಾಗಿಯೇ ವ್ಯಂಗ್ಯವನ್ನು ಬಳಸಿಕೊಂಡಿರುವುದು ಅವರ ಬರವಣಿಗೆಯ ಮತ್ತೊಂದು ವೈಶಿಷ್ಟ್ಯ. ಪುರುಷ ಕೇಂದ್ರಿತ ಸಮಾಜದ ಲಿಂಗಭೇದ ನೀತಿ, ವರ್ಗಭೇದ ನೀತಿ, ಆರ್ಥಿಕ ಅಸಮಾನತೆ, ಶ್ರೇಣಿಕೃತ ಜಾತಿ ವ್ಯವಸ್ಥೆ, ವರದಕ್ಷಿಣೆ, ಬಾಲ್ಯವಿವಾಹ, ವಿಧವಾವಿವಾಹ, ವಮ ದಾಂಪತ್ಯದಂತಹ ಸಮಸ್ಯೆಗಳನ್ನು ನಿರ್ವಹಿಸುವಾಗ ಈ ವ್ಯಂಗ್ಯವು ಪರಿಣಾಮಕಾರಿಯಾಗಿ ‘ಕಾರ್ಯ’ ನಿರ್ವಹಿಸುವಂತೆ ಕಥನಗಾರ್ತಿ ಎಚ್ಚರಿಕೆ ವಹಿಸಿರುವುದು ಅವರ ಕಥನಗಾರ್ತಿ ಎಚ್ಚರಿಕೆ ವಹಿಸಿರುವುದು ಅವರ ಕಥನಗಾರಿಕೆಯೊಳಗಿನ ಒಂದು ಹೆಚ್ಚುಗಾರಿಕೆ.

ಗೌರಮ್ಮನವರು ವರದಕ್ಷಿಣೆ ಸಮಸ್ಯೆಯನಿಟ್ಟು ಬರೆದ ‘ಆಹುತಿ’ ಮತ್ತು ‘ನನ್ನ ಮದುವೆ’ ಎಂಬ ಕಥೆಗಳಲ್ಲಿ ಕಥಾನಾಯಕರಿಬ್ಬರೂ ಬಡ ವಿದ್ಯಾವಂತರು. ವರದಕ್ಷಿಣೆ ಪಡೆದಾದರೂ ವಿದೇಶಕ್ಕೆ ಹೋಗಿ ವಿದ್ಯಾವಂತರಾಗಿ ಮರಳಿ ಬಂದು ಶ್ರೀಮಂತಬದುಕನ್ನು ನಡೆಸಬೇಕು ಎಂಬ ಕನಸುಕಟ್ಟಿಕೊಂಡವರು. ಆ ಕಥಾನಾಯಕರಿಬ್ಬರೊಳಗಿನ ಮಾನವತೆಯ ‘ಕಣ್ಣು’ ಗಳ ಮೇಲೆ ವರದಕ್ಷಿಣೆ ಎಂಬ ಭೂತ ಅಮಲೇರಿ ಕೂತ ಪರಿಯನ್ನು ಗೌರಮ್ಮನವರು ಎಷ್ಟು ಕಲಾತ್ಮಕ, ಸೂಚ್ಯ ಹಾಗೂ ವ್ಯಂಗ್ಯವಾಗಿ ಚಿತ್ರಿಸಿದ್ದಾರೆಂದರೆ ಅದು ಗೌರಮ್ಮನವರ ಕೇವಲ ಕಥನಕೌಶಲ್ಯಕ್ಕೆ ಮಾತ್ರ ನಿದರ್ಶನವಲ್ಲ – ಅದು ಅವರೊಳಗಿನ ಸಾಮಾಜಿಕ ಪ್ರಜ್ಞೆಯ ಅಭಿವ್ಯಕ್ತಿಯೂ ಹೌದು.

ಗೌರಮ್ಮನವರು ಹೆಣ್ಣುಗಳ ಭಾವಲೋಕವನ್ನು, ಅವರ ಮಾನಸವ್ಯಾಪರಗಳನ್ನು… ಅವರ ಸುಖಕಷ್ಟಗಳನ್ನು ತಮ್ಮ ಕೆಲವು ಕಥೆಗಳಲ್ಲಿ ಹೆಣ್ಣಿನ ಮೂಲಕವಾಗಿಯೂ ಮತ್ತು ಕೆಲವು ಕಥೆಗಳಲ್ಲಿ ಗಂಡಿನ ಮೂಲಕವಾಗಿಯೂ ವ್ಯಕ್ತಪಡಿಸಿರುವುದು ಕಥೆಗಾರ್ತಿಪುರುಷ ‘ಸಂವೇದನೆ’ ಯ ಬಗ್ಗೆ ಪೂರ್ವಾಗ್ರಹಪೀಡಿತರಾಗಿಲ್ಲ ಹಾಗೂ ಒಬ್ಬ ಬರಹಗಾರ್ತಿಗೆ ಇರಬೇಕಾದ ಸಮತಾಮನೋಭಾವ ಅವರೊಳಗಿದೆ ಎಂಬುದನ್ನು ಸ್ಪಷ್ಟಪಡಿಸುವಂತಿದೆ.

ಇವರ ‘ವಾಣಿಯಸಮಸ್ಯೆ,’ ‘ಅವಳಭಾಗ್ಯ’, ‘ಕೌಸಲನಂದನ’, ‘ಸುಳ್ಳಿಸ್ವಪ್ನ’, ‘ಕೆಲವು ಕಾಗದಗಳು’, ‘ಮರದ ಬೊಂಬೆ’, ‘ಪಾಪನಮದುವೆ’, ‘ಒಂದು ಚಿತ್ರ’ ಮುಂತಾದ ಕಥೆಗಳಲ್ಲಿ ಹೆಣ್ಣಿನ ಹೃದಯದ ಆವಿಷ್ಕಾರವನ್ನು ಹೆಣ್ಣು ಪಾತ್ರಗಳ ಮುಖೇನವಾಗಿಯೂ ಹಾಗೂ….`ಯಾರು? ‘, ‘ನಾಲ್ಕು ಘಟನೆಗಳು’, ‘ಪ್ರಾಯಶ್ಚಿತ್ತ’, ‘ಒಂದುಪುಟ್ಟ ಚಿತ್ರ ‘, ‘ಸನ್ಯಾಸಿ ರತ್ನ’, ‘ಹೋಗಿಯೇ ಬಿಟ್ಟಿದ್ದ’, ‘ಮನುವಿನ ರಾಣಿ’, ‘ಪುನರ್ವಿವಾಹ’, ‘ಆಹುತಿ’, ‘ನನ್ನ ಮದುವೆ’… ಇತ್ಯಾದಿ ಕಥೆಗಳಲ್ಲಿ ಹೆಣ್ಣಿನ ಮಾನಸಲೋಕವನ್ನು ಗಂಡು ಪಾತ್ರಗಳ ಮೂಲಕವಾಗಿ ಬಿಚ್ಚಿಟ್ಟಿದ್ದಾರೆ.

೧೯೪೨ರಲ್ಲಿ ಹೊರಬಂದ ಗೌರಮ್ಮನವರ ಎರಡನೇ ಕಥಾಸಂಗ್ರಹ ‘ಚಿಗುರು’ ವಿಗೂ ಮುನ್ನುಡಿ ಬರೆದ ವರಕವಿ ಬೇಂದ್ರೆಯವರು ಅದರೊಳಗಿನ ಕಥೆಗಳ ಬಗ್ಗೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ:

`ಚಿಗುರು: ತಂಗಿ ಗೌರಮ್ಮನವರ ಎರಡನೆ ಕಥಾಸಂಗ್ರಹ. ಮೊದಲನೆಯದಾದಕಂಬನಿಯಲ್ಲಿ ಹಣ್ಣು ಕಥೆಗಳಿದ್ದುವು. ಇಲ್ಲಿ ಚಿಗುರಿದೆ; ಮಿಡಿಯಿದೆ; ಪಾಡೂ ಇದೆ. ಸಂಗ್ರಹದಲ್ಲಿ ಅವರ ಮೊಟ್ಟಮೊದಲನೆಯ ಕತೆಯಿಂದ ಕಟ್ಟಕೊನೆಯ ಕಥಾಪಥವು ಕಂಗೊಳಿಸುವುದುಕಾಯಿಯ ಗುಣವನ್ನು ಹೀಚಿನಲ್ಲಿ ನೋಡುಎಂದು ಹೇಳುತ್ತಾರೆ. ಆದರೆ ಒಮ್ಮೊಮ್ಮೆ ಅದು ಚಿಗುರಿನಲ್ಲಿಯೂ ಕಾಣುವುದೊ ಏನೋ? ಚಿಗುರು ಹೆಸರು ತಂಗಿ ಗೌರಮ್ಮನವರು ತಮ್ಮ ಕಥಾಸಂಗ್ರಹಕ್ಕೆ ತಾವಿರುವಾಗಲೇ ಸೂಚಿಸಿದ ಹೆಸರು. ಹೆಸರಿನಿಂದ ಕತೆಗಾರ್ತಿಯ ಧೈರ್ಯ ಕಂಡುಬರುತ್ತದೆ. ಕತೆಗಳು ಚಿಗುರಾದರೆ ಅವರ ಹೃದಯದ ಹಣ್ಣುಗಳು ಎಂತಹವಾಗಿರುತ್ತಿದ್ದವು? ಚಿಗುರಿನೊಳಗಿನ ಎಲ್ಲ ಕತೆಯ ವಸ್ತು ಚಿರಂತನವಾದ ವಸ್ತು. ಅದು ಗಂಡು ಹೆಣ್ಣಿನೊಳಗಿನ ಪರಸ್ಪರ ಆಕರ್ಷಣ, ಒಲವು ದಾಂಪತ್ಯ ದುರಂತವೋ ಸುಖ ಮುಕ್ತಿಯೋ ದೇವರೇ ಬಲ್ಲ. ವಾಲ್ಮೀಕಿ ಮುನಿಯು ಕ್ರಂಚಮಿಥುನದಲ್ಲಿ ಕಂಡು ರಾಮಾಯಣದ ತುಂಬೆಲ್ಲ ಮಿಡುಕಿಬರೆದ ಮೂಲ ವಸ್ತುವೆಂದರೆ ಸುಖದಾಂಪತ್ಯ ದರ್ಶನ, ಆದರ ಆಗುಹೋಗು, ಅದರ ಸರಸವಿರಸ, ಅದರ ವಿಧಿ ವಿಲಾಸ ದೈವ ದುರ್ವಿಪಾಕ. ತಂಗಿ ಗವರಮ್ಮನವರ ಹೆಣ್ಣು ಹೃದಯ ವಸ್ತುವನ್ನೇ ಮುಗ್ದ ಅಪೇಕ್ಷೆಯಿಂದ, ಪ್ರೌಢ ವಿವೇಕದಿಂದ, ಸುಧಾರಕ ದೃಷ್ಟಿಯಿಂದ, ಪ್ರೌಢ ವಿವೇಕದಿಂದ, ಸುಧಾರಕ ದೃಷ್ಟಿಯಿಂದ, ಅವರಿಗೇ ಸಹಜವಾದ ಬೆಳೆಯಲಿರುವ ಸಮತೂಕದಿಂದ, ನೀತಿಯ ಗರ್ಭದಲ್ಲಿಯೂ ರಸಪಾಕಗೊಳಿಸುವ ಜಾಣ್ಮೆಯಿಂದ ವಿವಿಧ ಕತೆಗಳಲ್ಲಿ ವಿಸ್ತರಿಸಿದೆ.ಪಾಪನ ಮದುವೆ,ಮರದ ಬೊಂಬೆ, ಕೊನೆಯಕಾಡನ ಕಥೆಇವು ಮೂರೂ ಅವರ ಪರಿಪಕ್ವ ಪರಪಾಕೋನ್ಮುಖ ಸ್ವಾಭಾವಿಕ ಕಥಾ ಕೌಶಲ್ಯದ ಕುರುಹುಗಳಾಗಿ ಉಳಿಯ ಬಲ್ಲವು.

ಗೌರಮ್ಮನವರ ಕಥೆಗಳಲ್ಲಿರುವ ‘ಓದಿಸಿಕೊಂಡು ಹೋಗುವಂತಹ ಸರಳ ಭಾಷೆ’ ಯೇ ಅವರ ಕಥೆಗಳ ಮತ್ತೊಂದು ವೈಶಿಷ್ಟ್ಯ. ಗೌರಮ್ಮನವರು ತಮ್ಮ ಮನೆ ಭಾಷೆ ಅಥವಾ ಆಡುಭಾಷೆ ಆಗಿರುವ ಹವ್ಯಕ ಕನ್ನಡವನ್ನು ಎಲ್ಲೂ ಬಳಸದೆ, ಎಲ್ಲರಿಗೂ ಅರ್ಥವಾಗುವ ಸರಳ – ಸಾಮಾನ್ಯ ಕನ್ನಡ ಭಾಷೆಯನ್ನೇ ಬಳಸಿರುವುದು ಅವರ ಭಾಷೆಯ ಒಂದು ವೈಶಿಷ್ಟ್ಯ. ನವೋದಯ ಸಾಹಿತ್ಯ ಸಂದರ್ಭದ ಇತರ ಬರಹಗಾರ್ತಿಯರ ಬರಹಗಳ ಭಾಷೆಗೆ ಹೋಲಿಸಿದ್ದಲ್ಲಿ, ಗೌರಮ್ಮನ ಸಾಹಿತ್ಯ ಭಾಷೆಯು ಅತೀ ಸ್ವಚ್ಚ, ಸರಳ, ಸಹಜ, ಗ್ರಂಥಸ್ಥ ಮತ್ತು ಸುಲಲಿತವಾದುದು.

ತಮ್ಮ ಕಥಾಹಂದರದೊಳಗೆ ತೆಳುವಾದ ಹಾಸ್ಯಪ್ರಜ್ಞೆಯ ಎಳೆಯನ್ನೆಳೆದುಕೊಂಡೇ ಬದುಕನ್ನು – ವ್ಯಕ್ತಿಗಳನ್ನು – ಸಮಸ್ಯೆಗಳನ್ನು ಕಾಣುವುದು ಗೌರಮ್ಮನವರ ಕಥನಗಾರಿಕೆಯೊಳಗಿನ ಕೌಶಲ್ಯದ ಪ್ರತೀಕ. ಇವರ ‘ಪಾಪನ ಮದುವೆ’, ‘ಸನ್ಯಾಸಿ ರತ್ನ’, ‘ಅವಳ ಭಾಗ್ಯ’ ಮುಂತಾದ ಕಥೆಗಳಲ್ಲಿ ಅವರ ಪರಿಹಾಸ್ಯ – ವಿಡಂಬನೆಯ ಪರಿಯನ್ನು ಕಾಣಬಹುದು.

ಇವರ ಬರವಣಿಗೆಯ ಶೈಲಿಯನ್ನು ಹಾಗೂ ವಸ್ತುವೈವಿಧ್ಯವಿರುವ ಅವರ ಕಥೆಗಳಲ್ಲಿರುವ ‘ಓದಿಸಿಕೊಂಡು ಹೋಗುವ ಗುಣ’ವನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಕನ್ನಡದ ಮಹತ್ವದ ಕಾದಂಬರಿಗಾರ ದಿ. ಭಾರತೀಸುತ ಅವರು ಗೌರಮ್ಮನವರ ಸಾಹಿತ್ಯ ಮತ್ತು ಸಾಹಿತ್ಯ ವ್ಯಕ್ತಿತ್ವವನ್ನು ಹೀಗೆ ಗುರುತಿಸಿದ್ದಾರೆ: ‘ಗೌರಮ್ಮನವರ ಸಾಹಿತ್ಯದ ಜೀವನ ಆರೆಂಟು ವರ್ಷಗಳ ಅವಧಿಯದು. ಈ ಅಲ್ಪಕಾಲದಲ್ಲಿ ಅವರು ತಮ್ಮ ಕಥಾಬರವಣಿಗೆಯ ಸಿದ್ಧಿ ಕಂಡುಕೊಂಡರು. ಗೌರಮ್ಮ ಹೊರಟುಹೋದರು. ಆದರೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರು ಚಿರಕಾಲ ಉಳಿಯುವುದು. ಕನ್ನಡ ಕಥೆಗಾರ್ತಿಯರಲ್ಲಿ ಮೊದಲಿಗರೆಂಬ ಅಭಿಮಾನದ ಅಭಿದಾನ ಗೌರಮ್ಮನವರಿಗೇ ಮೀಸಲು’ ಎಂದು.

ಗೌರಮ್ಮನವರ ಕಥೆಗಳಲ್ಲಿರುವ ಮತ್ತೊಂದು ‘ಹೊಸತನ’ವನ್ನೂ ನಾವು ಗುರುತಿಸುವ ಅಗತ್ಯವಿದೆ. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನವನ್ನು ಆತ್ಮಸ್ಥೈರ್ಯವನ್ನು ಅವರ ಮುಂಚಲನೆಯನ್ನು ಕುಂದಿಸಿದವರು… ಬರೀ ಪುರುಷರಷ್ಟೇ ಅಲ್ಲ… ಅದರಲ್ಲಿ ಮಹಿಳೆಯರ ಪಾಲೂ ಸಾಕಷ್ಟಿದೆ ಎಂಬುದನ್ನು ಗೌರಮ್ಮನವರು ತಮ್ಮ ಕೆಲವು ಕಥೆಗಳಲ್ಲಿ ಪ್ರತಿಬಿಂಬಿಸಿರುವುದು ಅವರು ಆ ಕಾಲದ ಇತರ ಕಥನಗಾರ್ತಿಯರಿಗಿಂತ ಇವರು ವಿಭಿನ್ನ ಸಂವೇದನೆ ಉಳ್ಳವರಾಗಿದ್ದರು ಎನ್ನುವುದಕ್ಕೆ ಸಾಕ್ಷಿ.

ಸುಶಿಕ್ಷಿತ ಮೇಲ್ಜಾತಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಗೌರಮ್ಮನವರು ತಾವು ಹುಟ್ಟಿ, ಆಡಿ ಬೆಳೆದ ಕೌಟುಂಬಿಕ ಸಾಂಸ್ಕೃತಿಕ ಪರಿಸರ, ಆ ಪರಿಸರದಲ್ಲಿನ ಉಸಿರುಗಟ್ಟಿಸುವ ಸಂಪ್ರದಾಯ, ಸಾಮಾಜಿಕ ಮೌಢ್ಯಗಳು, ಅಲ್ಲಿರುವ ಹೃದಯ ಶ್ರೀಮಂತಿಕೆ, ಮುಗ್ಧ ಮಾನವಿಕ ಪರಿಸರ ಇವೆಲ್ಲವೂ ತಮ್ಮ ಕಥೆಗಳಲ್ಲಿ ಸಮೃದ್ಧವಾಗಿ ಸಮತೋಲನದಿಂದ ತುಂಬಿ ತುಳುಕಾಡುತ್ತಿರುವಂತೆ ಎಚ್ಚರಿಕೆ ವಹಿಸಿರುವುದು ಅವರ ಕಥನಗಳ ವೈಶಿಷ್ಡ್ಯ.

ಅಂದಿನ ಸಮಾಜ ವ್ಯವಸ್ಥೆ, ಆ ಸಮಾಜದೊಳಗಿನ ಅನಿಷ್ಠಗಳ ಬಗ್ಗೆ ಗೌರಮ್ಮನವರಿರುವ ಅಸಹನೆ, ಸಾತ್ವಿಕ ಸಿಟ್ಟು ಹಾಗೂ ಅದೇ ವ್ಯವಸ್ಥೆಯೊಳಗೆ ನರಳುತ್ತಾ ಬಾಡುವ… ಅಭಾಗ್ಯರ ಬಗ್ಗೆ ಗೌರಮ್ಮನವರ ಕಾಳಜಿ ಇವೆಲ್ಲವೂ ಅವರ ಭಾವಕೋಶದೊಳಗೆ ಹೊರಳಿ ಅವರೊಳಗಿನ ಭಾವಪ್ರೌಢಿಮೆ ಹಾಗೂ ಭಾಷಾ ಪ್ರೌಢಿಮೆಯಿಂದಾಗಿ ಕಥಾರೂಪ ಪಡೆದು ಇಂದಿಗೂ… ಎಂದೆಂದಿಗೂ ಪ್ರಸ್ತುತವೆನಿಸುವ ಕಥೆಗಳಾಗಿ ಉಳಿದಿರುವುದು ಅವರಿಗೆ ಲಥನಕಟ್ಟುವ ಕೆಲೆಗಾರಿಕೆ ಚೆನ್ನಾಗಿ ಸಿದ್ಧಿಸಿತ್ತು ಎನ್ನುವುದಕ್ಕೆ ಅವರ ‘ಮನುವಿನ ರಾಣಿ’ ಕಥೆಯೇ ಅತ್ಯುತ್ತಮ ಸಾಕ್ಷಿ.

ಮಡಿ ಮೈಲಿಗೆಯುಳ್ಳ ಬ್ರಾಹ್ಮಣಿಕೆ ಪರಿಸರದಲ್ಲಿ ಹುಟ್ಟಿ ಬೆಳೆದ ಗೌರಮ್ಮನವರು ಸಂಪ್ರದಾಯ ಸಮಾಜಕ್ಕೆ ಎಂದೂ ಸಹನೀಯವಾಗದ ‘ಅನೈತಿಕ ಜೀವಿಗಳು’ ಎಂದು ತುಚ್ಚೀಕರಿಸಲ್ಪಟ್ಟ ವೇಶ್ಯೆ ಹಾಗೂ ವೇಶ್ಯಾಸಮಸ್ಯೆಯ ಬಗ್ಗೆ ಮಾನವೀಯವಾಗಿ ಬರೆದ ‘ ಮನುವಿನ ರಾಣಿ’ ಎಂಬ ಕಥೆ ಇವರಿಗೆ ಶ್ರೇಷ್ಠ ಕಥೆಗಾರ್ತಿ ಎಂಬ ಪ್ರಸಿದ್ದಿಯನ್ನು ತಂದು ಕೊಟ್ಟಿತು.

ಉಪಸಂಹಾರ

ನಮ್ಮ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಹುರುಳಿಲ್ಲ – ಮಹಿಳೆಯರ ಸಾಹಿತ್ಯದಲ್ಲಿ ಅನುಭವದ ವೈವಿಧ್ಯತೆಯ ಕೊರತೆಯಿದೆ, ಅಧ್ಯಯನದ ಕೊರತೆಯೂ ಇದೆ, ಪರಂಪರೆಯಿಂದ ಹೆಣ್ಣು ಅನುಭವಿಸಿದ ಶೋಷಣೆ, ದೌರ್ಜನ್ಯ, ಅವಹೇಳನಗಳನ್ನು ಪ್ರತಿಬಿಂಬಿಸುವ ಬರಹಗಳು ತೀರಾ ಕಮ್ಮಿ ಎಂಬ ಆರೋಪವಿದೆ. ಹಾಗೆಯೇ ನಮ್ಮ ಬಹಳಷ್ಟು ಬರಹಗಾರ್ತಿಯರು ಪರಂಪರಾಪ್ರಿಯರು; ಪರಂಪರಾಗತವಾಗಿ ಹೆಣ್ಣು ಒಪ್ಪಿಕೊಂಡ ಮೌಲ್ಯಗಳಾದ ತ್ಯಾಗ, ನಿಷ್ಠೆ, ಸಹನೆ, ಪಾತಿವ್ರತ್ಯ ಇವುಗಳನ್ನು ವೈಭವಿಕರಿಸುವ ಕೃತಿಗಳನ್ನೇ ಇವರು ಇತ್ತೀಚಿನವರೆಗೆ ರಚಿಸಿದರು ಎಂಬ ಆರೋಪವೂ ಇದೆ. ಆದರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸುವಷ್ಟು ಮಟ್ಟಿನ ಪ್ರಗತಿಪರ ನಿಲುವಿನ ಕಥೆಗಳನ್ನು ಕೊಡಗಿನ ಗೌರಮ್ಮನವರು ನವೋದಯ ಸಾಹಿತ್ಯ ಕಾಲಘಟ್ಟದಲ್ಲೇ ಕನ್ನಡಿಗರಿಗೆ ನೀಡಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.