ಕಿತ್ತೂರಿನಿಂದ ಮರಳಿಬಂದ ಬಳಿಕ ಇನ್ನೂ ಯಾವ ಹೊಣೆಗಾರಿಕೆ ನಿಶ್ಚಿತವಾಗದೇ ಆನಂದಕಂದರು ಬೆಟಗೇರಿಯಲ್ಲಿಯೇ ಇರುತ್ತಿದ್ದರು. ಆ ದೀಪಾವಳಿಯ ಸಮಯ ಮಹಾತ್ಮಾ ಗಾಂಧೀಜಿಯವರು ಬೆಳಗಾವಿಗೆ ಆಗಮಿಸುವವರಿದ್ದರು. ಮನೆಯಲ್ಲಿ ಆಚರಿಸಲಿರುವ ಹಬ್ಬದ ಪೂಜಾವಿಧಿಗಳನ್ನು ಲೆಕ್ಕಿಸದೇ ಆನಂದಕಂದರು ಬೆಳಗಾವಿಗೆ ಹೊರಟು ನಿಂತರು. ಅದಾಗಲೆ ಗಾಂಧೀಜಿಯವರ ಪ್ರಭಾವ ಯುವ ಆನಂದಕಂದರ ಮೇಲೆ ಸಾಕಷ್ಟು ಬೀರಿತ್ತು. ಬೆಳಗಾವಿಯ ಕೋಟೆಯ ಪಕ್ಕದ ವಿಶಾಲ ಬಯಲಿನಲ್ಲಿ ಸೇರಿದ ಜನಸಾಗರವನ್ನು ಕಂಡು ಆನಂದಕಂದರು ಸೋಜಿಗಗೊಂಡಿದ್ದರು. ಆ ಸಮಯ ಗಾಂಧೀಜಿ ಇನ್ನೂ ಅಂಗಿ ಟೊಪ್ಪಿಗೆ ಧರಿಸುತ್ತಿದ್ದರು. ಗಾಂಧೀಜಿಯವರ ಜತೆಗಾರನಾಗಿ ಮೌಲಾನಾ ಶೌಕತ್‌ಅಲಿ ಅವರು ಬಂದಿದ್ದರು. ಅವರಿಬ್ಬರನ್ನೂ ವೇದಿಕೆಯ ಮೇಲೆ ನೋಡಿದಾಗ, ಅವರು ಆಕಾರದಲ್ಲಿ ಅಜಗಜಾಂತರ ಎಂದು ಆನಂದಕಂದರು, ಅಜ-ಗಜಗಳೆಂದು ಬಿಡಿಸಿಯೇ ಹೇಳಿದ್ದಾರೆ.

ಅಂದಿನ ಸಭೆಯಲ್ಲಿ ತರುಣ ಆನಂದಕಂದರ ಮನಸ್ಸನ್ನು ಘಾಸಿಗೊಳಿಸುವ ಒಂದು ಪ್ರಸಂಗ ಜರುಗಿತು. ಕನ್ನಡಿಗರೊಬ್ಬರು ಮರಾಠಿ ಮೇಲಿನ ಅಭಿಮಾನದಿಂದ ಮರಾಠಿಯಲ್ಲಿಯೇ ಒಂದು ಪದ್ಯರಚಿಸಿ ಹಾಡಿದರು. ಇನ್ನೊಂದು ನೋವಿನ ಸಂಗತಿಯೆಂದರೆ ಅಲ್ಲಿ ಗಾಂಧೀಜಿಯವರ ದರ್ಶನಕ್ಕಾಗಿ ಬಂದ ಸಾವಿರಾರು ಜನ ಹಳ್ಳಿಗರು ಕನ್ನಡದವರಾಗಿದ್ದು, ಎಲ್ಲ ಕಾರ್ಯಕಲಾಪಗಳು ಅವರಿಗೆ ತಿಳಿಯದ ಭಾಷೆಯಲ್ಲಿಯೇ ಜರುಗಿದವು. ‘ಬ್ರಿಟಿಷರು ಭಾರತೀಯರ ಮೇಲೆ ಅನ್ಯಾಯ-ದಬ್ಬಾಳಿಕೆ ಮಾಡಿದಂತೆ, ಬೆಳಗಾವಿಯ ರಾಜಕೀಯ ಧುರೀಣರು ಕನ್ನಡಿಗರ ಮೇಲೆ ಮಾಡುವ ಅನ್ಯಾಯ-ದಬ್ಬಾಳಿಕೆ ಅಲ್ಲವೆ ಇದು?’ ಎಂಬ ಆತ್ಮಾಭಿಮಾನದ ನೋವಿನಿಂದ, ವ್ಯಥೆಯಿಂದ ಆನಂದಕಂದರು ಬೆಟಗೇರಿಗೆ ಮರಳಿ ಬಂದಿದ್ದರು.

ಮುಂದೆ ಆನಂದಕಂದರು ೧೯೨೧ ರಲ್ಲಿ ಬೆಳಗಾವಿಯ ರಾಷ್ಟ್ರೀಯ ಶಾಲೆಯ ಶಿಕ್ಷಕರಾಗಿ ಬಂದು ಅಲ್ಲಿಯ ಸ್ವರಾಜ್ಯ ಆಶ್ರಯದಲ್ಲಿ ವಾಸಿಸುತ್ತಿದ್ದರು. ಬೆಳಗಾವಿಯ ಸಾರ್ವಜನಿಕ ಚಟುವಟಿಕೆಗಳಲ್ಲಿ ಕನ್ನಡಕ್ಕೆ ಗೌಣಸ್ಥಾನವಿರುವುದನ್ನು ಕಂಡು ಆನಂದಕಂದರ ಮನಸ್ಸಿಗೆ ನೋವಾಗಿತ್ತು. ಅಲ್ಲಿ ಕನ್ನಡಕ್ಕೆ ಒಂದು ಸ್ಥಾನಮಾನ ಸಿಗುವಂತೆ ಹೋರಾಡಲು ನಿರ್ಧರಿಸಿದರು. ಆ ಕಾಲಕ್ಕೆ ಬೆಳಗಾವಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಸಭೆ ಸೇರಿಯೇ ಸೇರುತ್ತಿತ್ತು. ಪ್ರತಿಯೊಂದು ಸಭೆಯ ಪ್ರಾರಂಭದ ಪದಗಳು-ಗೀತೆಗಳು ಮರಾಠಿಯವೇ ಇರುತ್ತಿದ್ದವು. ಇಷ್ಟೇ ಅಲ್ಲ, ಅಲ್ಲಿ ಕೆಲವು ಪ್ರಸಂಗಗಳು ರಾಷ್ಟ್ರಾಭಿಮಾನಕ್ಕಿಂತ ಮಹಾರಾಷ್ಟ್ರ ಅಭಿಮಾನವನ್ನು ಪ್ರಚೋದಿಸುವಂಥವುಗಳಾಗಿದ್ದವು. “ಇವು ನಿಲ್ಲಬೇಕು, ಎಂದು ಹೇಳುವ ಗಂಡೆದೆ ಯಾರಲ್ಲಿಯೂ ಇರಲಿಲ್ಲ” ಎಂದು ಆನಂದಕಂದರು ಹೇಳುತ್ತಾರೆ.

ಬೆಳಗಾವಿಯಲ್ಲಿ ಕನ್ನಡ ವಾತಾವರಣ ಬೆಳೆಯಲು ಆನಂದಕಂದರು ಒಂದು ಉಪಾಯ ಹುಡುಕಿದರು. ಕನ್ನಡದಲ್ಲಿ ಬೇರೆ ಬೇರೆ ಬಗೆಯ ರಾಷ್ಟ್ರೀಯ ಪದ್ಯಗಳನ್ನು ರಚಿಸಿ, ತಮ್ಮ ವಿದ್ಯಾರ್ಥಿಗಳಿಗೆ ಕಲಿಸತೊಡಗಿದರು. ಇದಕ್ಕಾಗಿ ಇನ್ನೊಂದು ಹಂಚಿಕೆಯನ್ನೂ ಹೂಡಿದರು. ಎಲ್ಲ ಸಭೆಗಳಿಗೆ ತಮ್ಮ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದರು. ಅವರ ಜತೆ ವೇದಿಕೆಯ ಹತ್ತಿರ ಕುಳಿತುಕೊಳ್ಳುತ್ತಿದ್ದರು. ಸಭೆ ಆರಂಭಿಸುವ ಮುಂಚೆ ತಮ್ಮ ವಿದ್ಯಾರ್ಥಿಗಳನ್ನು ವೇದಿಕೆಗೆ ಕಳುಹಿಸಿ, ಕನ್ನಡ ಹಾಡುಗಳನ್ನು ಹೇಳಿಸುತ್ತಿದ್ದರು. ದಿಟ್ಟ ಸ್ವಭಾವದ ವಿದ್ಯಾರ್ಥಿಗಳು ಧೈರ್ಯದಿಂದ ಕನ್ನಡ ಹಾಡುಗಳನ್ನು  ಹಾಡಿ ಬರುತ್ತಿದ್ದರು.

ಲೋಕಮಾನ್ಯ ಟಿಳಕರ ಸ್ವರಾಜ್ಯ ನಿಧಿಗಾಗಿ ಆಗ ಬೆಳಗಾವಿಯಲ್ಲಿ ಭಿಕ್ಷೆ ಎತ್ತುವ ಕಾರ್ಯಕ್ರಮ ಪ್ರಾರಂಭವಾಗಿತ್ತು. ಈ ಹಿಂದೆ ಹೇಳಿದ ಕನ್ನಡಿಗನೇ ರಚಿಸಿದ ಮರಾಠಿ ಪದ್ಯವೊಂದನ್ನು-

“ಘಾಲಾ ಘಾಲಾ ಭಿಕ್ಷಾ ತುಮ್ಹೀ ದೇಶ ರಕ್ಷಾಯಾ!”

-ಎಂದು ಹೇಳುತ್ತ ಮೊದಲದಿನ ತಿರುಗಾಡಿದ ಬಳಿಕ, ಮರುದಿನ ಆನಂದಕಂದರೇ ರಚಿಸಿದ-

“ಭಿಕ್ಷೆಯ ನೀಡಿರಿ ಬಾಂಧವರೆ ನೀವ್‌
ಭಿಕ್ಷೆಯ ನೀಡಿರಿ ಭಗಿನಿಯರೇ!”

-ಎಂಬ ಹಾಡೇ ಉಚ್ಚ ಸ್ವರದಲ್ಲಿ ಕೇಳಿ ಬರುತ್ತಿತ್ತು. ಇಂಪಾಗಿದ್ದ ಈ ಹಾಡಿಗೆ ಮರಾಠಿಗರೂ ಧ್ವನಿಗೂಡಿಸುತ್ತಿದ್ದರು. ಕನ್ನಡದ ಹಾಡಿನ ಕಂಪನ್ನು ಕೇಳಿ, ಜನರು ಮನೆಬಾಗಿಲಿಗೆ ಬಂದು ಅದರ ರಸಸ್ವಾದನೆ ಮಾಡತೊಡಗಿದರು.

ಬೆಳಗಾವಿ ಕರ್ನಾಟಕದ್ದೆಂದು ರಾಷ್ಟ್ರೀಯ ಮಹಾಸಭೆ ಒಪ್ಪಿಕೊಂಡಿದ್ದರೂ, ಕರ್ನಾಟಕ ಕಾಂಗ್ರೆಸ್‌ ಸಮಿತಿಯ ವತಿಯಿಂದಲೇ ನಡೆಯುತ್ತಿದ್ದ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿ ಮರಾಠಿ ವಿದ್ಯಾರ್ಥಿಗಳು ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಹಾಡುಗಳನ್ನೇ ಹಾಡುತ್ತಿದ್ದರು. ಅವರ ಹಾಡುಗಳನ್ನು ಕೇಳಿ ಕನ್ನಡ ವಿದ್ಯಾರ್ಥಿಗಳಿಗೆ ಅವಮಾನವೆನ್ನಿಸಿದರೂ ಅವರು ಸಹಿಸಿಕೊಳ್ಳಬೇಕಾಗಿತ್ತು. ಈ ಪರಿಸ್ಥಿತಿಯನ್ನು ನಿವಾರಿಸಲು ಆನಂದಕಂದರು,

“ನಾನಿದನೇ ಹಾಡುವೆನು ಹಾಡು
ನನ್ನದು ಈ ಕನ್ನಡ ನಾಡು!”

-ಎಂದು ಕನ್ನಡ ನಾಡಿನ ಪವಾಡವನ್ನು ರಚಿಸಿ, ತಮ್ಮ ವಿದ್ಯಾರ್ಥಿಗಳಿಗೆ ಈ ಹಾಡನ್ನು ಕಲಿಸಿದರು. ಕನ್ನಡ ವಿದ್ಯಾರ್ಥಿಗಳು ಸರಾಗವಾಗಿ ಈ ಹಾಡನ್ನು ಹಾಡುತ್ತಲಿದ್ದರೆ ಮರಾಠಿ ವಿದ್ಯಾರ್ಥಿಗಳು ಬೆರಗಾಗಿ ನೋಡುತ್ತ ನಿಲ್ಲುತ್ತಿದ್ದರು.

ಮರಾಠಿ ಹುಡುಗರು,

“ಭಾಷಾ ಆಮುಚೀಛಾನ್‌-ಮರಾಠೀ
ಭಾಷಾ ಆಮುಚೀ ಛಾನ್‌….”

ಎಂದು ಅಭಿಮಾನದಿಂದ ಪ್ರತಿಯಾಗಿ ಹಾಡುತ್ತಿದ್ದರು. ಕನ್ನಡ ವಿದ್ಯಾರ್ಥಿಗಳು ತಮ್ಮ ಭಾಷೆಯ ಮೇಲ್ಮೆಯ ವಿಚಾರವಾಗಿ ಒಂದು ಹಾಡನ್ನು ಅಪೇಕ್ಷಿಸುವಾಗ

“ಎನಿತು ಇನಿದು ಈ ಕನ್ನಡ ನುಡಿಯು!
ಮನವನು ತಣಿಸುವ ಮೋಹನ ಸುಧೆಯು||”

-ಎಂಬ ಗೀತೆಯನ್ನು ಆನಂದಕಂದರು ರಚಿಸಿಕೊಟ್ಟರು. ಅಂದಿನ ಆ ಕನ್ನಡದ ವಿದ್ಯಾರ್ಥಿಗಳು ಈ ಪದ್ಯವನ್ನು ಉತ್ಸಾಹದಿಂದ ಹಾಡಿರಬೇಕು. ಆದರೆ ಈ ಗೀತೆ ಕನ್ನಡದಲ್ಲಿ ಶಾಶ್ವತವಾಗಿ ತನ್ನ ನೆಲೆಯನ್ನು ಕಂಡುಕೊಂಡಿತು.

ರಾಷ್ಟ್ರೀಯ ಶಾಲೆಯ ನಿತ್ಯದ ಪ್ರಾರ್ಥನೆಯಲ್ಲಿ ಶಾಂತಕವಿಗಳ “ರಕ್ಷಿಸು ಕರ್ನಾಟಕ ದೇವಿ!” ಎಂಬ ಗೀತೆಯನ್ನು ಸೇರಿಸಲು ಆನಂದಕಂದರು ಅಲ್ಲಿಯ ಮುಖ್ಯಾಧ್ಯಾಪಕರಿಗೆ ಸೂಚಿಸಿದ್ದರು. ಅದರಂತೆ ಅವರು ಒಪ್ಪಿಕೊಂಡು ಕನ್ನಡದ ಈ ನಾಡಗೀತೆಯನ್ನು ದಿನಾಲು ಹಾಡಿಸುತ್ತಿದ್ದಾಗ, ಆನಂದಕಂದರ ಕನ್ನಡ ಅಭಿಮಾನಕ್ಕೆ ರೆಕ್ಕೆ-ಪುಕ್ಕ ಮಾಡಿದ್ದವು.

೧೯೨೩ರಲ್ಲಿಯೇ ಆನಂದಕಂದರು ಬೆಳಗಾವಿಯಲ್ಲಿ ಕರಗುಪ್ಪಿ ಕೃಷ್ಣರಾಯರು ಪ್ರಕಟಿಸುತ್ತಿದ್ದ ‘ಮಾತೃಭೂಮಿ’ ಮಾಸಪತ್ರಿಕೆಯ ಸಹಸಂಪಾದಕರಾಗಿ ಕನ್ನಡ ಪತ್ರಿಕಾರಂಗದಲ್ಲಿ ಸಂಪಾದಕತ್ವದ ನಾಂದಿ ಹಾಡಿದ್ದರು. ಆನಂದಕಂದರು ಈ ಪತ್ರಿಕೆಯ ಎಲ್ಲ ಹೊಣೆ ಹೊತ್ತು ತಮ್ಮ ಕವಿತೆಗಳನ್ನೂ ಪ್ರಕಟಿಸುತ್ತಿದ್ದರು. ೨೩ ವರುಷದ ತರುಣನಲ್ಲಿ ಅಂಥ ಕೆಚ್ಚು ಇತ್ತು. ‘ಕರ್ನಾಟಕ ಸಿಂಹ’ ಎಂದೆನಿಸಿಕೊಂಡಿದ್ದರೂ ಗಂಗಾಧರರಾವ್‌ ದೇಶಪಾಂಡೆ ಅವರು ಮೊದಲಿನಿಂದಲೂ ಮರಾಠಿ ವಾತಾವರಣಕ್ಕೆ ಹೊಂದಿಕೊಂಡವರು. ಅವರಿಗೆ ಕನ್ನಡದ ಅಭಿಮಾನ ಜಾಗೃತವಾದದ್ದು ‘ಮಾತೃಭೂಮಿ’ ಪತ್ರಕೆಯಲ್ಲಿಯ ಕವಿತೆಗಳನ್ನು ಓದಿಯೇ ಎಂದು ಹೇಳಿಕೊಳ್ಳುತ್ತಲಿದ್ದರು.

ಆನಂದಕಂದರು ಶಿಕ್ಷಕರಾಗಿ ಬೆಳಗಾವಿಯಲ್ಲದೆ, ಯಮಕನಮರಡಿ, ಮೂಡಲಗಿ, ಹುದಲಿಗಳಲ್ಲಿ ಸೇವೆ ಸಲ್ಲಿಸಿ, ಮತ್ತೆ ಈ ವೃತ್ತಿಗೆ ಶರಣು ಹೊಡೆದು ಬಂದರು.

೧೯೨೪ ರಲ್ಲಿ ಮಹಾತ್ಮಾಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನ ಬೆಳಗಾವಿಯಲ್ಲಿ ಜರುಗಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮಹತ್ವದ ಘಟನೆ. ಈ ರಾಷ್ಟ್ರೀಯ ಮಹಾಸಭೆಯಲ್ಲಿ ಹಾಡಲು ಒಂದು ಕನ್ನಡ ಸ್ವಾಗತ ಗೀತ ಬೇಕಾಗಿತ್ತು. ಸ್ವಾಗತ ಮಂಡಳಿಯವರು ಈ ಸ್ವಾಗತ ಗೀತೆಗಾಗಿ ಕರ್ನಾಟಕದ ಖ್ಯಾತ ಕವಿಗಳನ್ನೆಲ್ಲ ಕೇಳಿಕೊಂಡಿದ್ದರು. ಆನಂದಕಂದರೂ ಒಂದು ಗೀತೆಯನ್ನು ರಚಿಸಿ ಸ್ವಾಗತ ಸಮಿತಿಗೆ ಕಳಿಸಿಕೊಟ್ಟಿದ್ದರು. ಆನಂದಕಂದರ ಗೀತೆಯೇ ಸ್ವೀಕೃತವಾದದ್ದು, ಯುವಕ ಆನಂದಕಂದರ ಕಾವ್ಯಶಕ್ತಿಯ ಸಾಮರ್ಥ್ಯಕ್ಕೆ ಇದೊಂದು ಸಾಕ್ಷಿ.

ಆನಂದಕಂದರು ಧಾರವಾಡದ ವಾಸ್ತವ್ಯಕ್ಕಾಗಿ ಮೊದಲ ಸಲ ೧೯೨೫ನೆಯ ಜುಲೈ ತಿಂಗಳಿನಲ್ಲಿ ಬಂದರು. ಧಾರವಾಡದ ರಾಷ್ಟ್ರೀಯ ಶಾಲೆಯ ಶಿಕ್ಷಕರಾಗಿ ಸೇರಿಕೊಂಡಿದ್ದರು. ಆನಂದಕಂದರ ಸಾಹಿತ್ಯ ಅಭಿರುಚಿಯನ್ನು ಅರಿತು, ಶಾಲೆಯ ಪ್ರಾಚಾರ್ಯರಾದ ಸುರೇಂದ್ರ ದೇಸಾಯಿ ಅವರು ಶಾಲೆಯ ಅಂಗವಾಗಿ ಹೊರಡಿಸುತ್ತಿದ್ದ ‘ಸ್ವಧರ್ಮ’ ಮಾಸಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು ಇವರ ಹೆಗಲಿಗೆ ಹಾಕಿದರು.