೧೯೨೦ರಲ್ಲಿ ಧಾರವಾಡದಲ್ಲಿ ಕರ್ನಾಟಕ ಏಕೀಕರಣದ ಗುರಿಯನ್ನಿಟ್ಟುಕೊಂಡು ‘ಕರ್ನಾಟಕ ರಾಜಕೀಯ ಪರಿಷತ್ತಿ’ನ ಮೊಟ್ಟಮೊದಲನೆಯ ಅಧಿವೇಶನವು ನಡೆಯಿತು. ಬ್ಯಾಹಟ್ಟಿ ಸುಬ್ಬರಾಯರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಮೈಸೂರು ಸಂಸ್ಥಾನದ ಹಿಂದಿನ ದಿವಾನರಾದ ವ್ಹಿ. ಪಿ. ಮಾಧವರಾಯರು ಈ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಕಾವ್ಯಾನಂದರು ತರುಣ ಆನಂದಕಂದರನ್ನು ಕಿತ್ತೂರಿನಿಂದ ಸ್ವಯಂಸೇವಕನೆಂದು ಧಾರವಾಡದ ಈ ಸಭೆಗೆ ಕಳುಹಿಸಿಕೊಟ್ಟಿದ್ದರು. ಅಂಥ ಭವ್ಯ ಸಮ್ಮೇಳನವನ್ನು ಆನಂದಕಂದರು ಪ್ರಥಮ ಸಲ ಕಂಡಿದ್ದು. ಮೊದಲೆ ಕನ್ನಡ-ಕರ್ನಾಟಕತ್ವದ ಬಗೆಗೆಸ್ವಾಭಿಮಾನ ಬೆಳೆಸಿಕೊಂಡಿದ್ದ ಆನಂದಕಂದರು ಕನ್ನಡ ಸ್ವಯಂಸೇವಕನಾಗಿ ಹಗಲಿರುಳೆನ್ನದೆ ಓಡಾಡಿ ಕೆಲಸ ಮಾಡಿದರು. ಧಾರವಾಡದ ಉಳವಿ ಬಸಪ್ಪನ ಗುಡ್ಡದ ಮೇಲೆ ಭವ್ಯವಾದ ಸಭಾಮಂಟಪವನ್ನು ನಿರ್ಮಿಸಲಾಗಿತ್ತು. ಆ ಏಕೀಕರಣದ ಸಭೆಗಾಗಿ ಬಂದ ಅನೇಕ ಜನ ಕನ್ನಡದ ಪ್ರತಿಷ್ಠಿತರನ್ನು ಕಂಡು ಆನಂದಕಂದರಿಗೆ ಆನಂದಕವಾಗಿದ್ದುದು ಸಹಜ.

ಬಾಗಿಲುಕೋಟೆಯ ಕೆರೂರ ವಾಸುದೇವಾಚಾರ್ಯರನ್ನು ಇಲ್ಲಿಯೇ ಪ್ರಥಮ ಸಲ ಕಂಡಿದ್ದು. ಆನಂದಕಂದರು ಬೆಟಗೇರಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆರೂರ ವಾಸುದೇವಾಚಾರ್ಯರ ‘ಶುಭೋದಯ’ ವಾರಪತ್ರಿಕೆ ಬರುತ್ತಿದ್ದು, ಅದರಿಂದ ತುಂಬ ಪ್ರಭಾವಿತರಾಗಿದ್ದರು. ಆ ಪತ್ರಿಕೆಯನ್ನು ಓದುವುದೆಂದರೆ ಆನಂದಕಂದರಿಗೆ ಹಬ್ಬದೂಟ, ‘ಶುಭೋದಯ’ವನ್ನು ಬೇಗ ಪಡೆಯಬೇಕೆಂದು, ಬೆಟಗೇರಿಯಿಂದ ನಾಲ್ಕು ಮೈಲಿ ದೂರದ ಅಂಚೆಕಚೇರಿಯಿದ್ದ ಹಳ್ಳಿಗೆ ಹೋಗಿ ಅದನ್ನು ತೆಗೆದುಕೊಂಡು ಬರುತ್ತಿದ್ದರಂತೆ. ಆ ಪತ್ರಿಕೆಯ ಮೂಲಕ ಕೆರೂರ ವಾಸುದೇವಾಚಾರ್ಯರ ಬಗೆಗೆ ಒಂದು ಬಗೆಯ ಅಭಿಮಾನ ವಿಶ್ವಾಸ ಮೂಡಿದ್ದು ಸ್ವಾಭಾವಿಕ.

ಕೆರೂರ ವಾಸುದೇವಾಚಾರ್ಯರು ಸಭಾಮಂಟಪದ ಹೊರಗಡೆಯಲ್ಲಿ ನಿಂತಾಗ, ಧನ್ಯತೆಯಿಂದ ಅವರು ಕಾಲು ಮುಟ್ಟಿ ನಮಸ್ಕರಿಸಿದ ಆನಂದಕಂದರು “ನಾನೊಬ್ಬ ನಿಮ್ಮ ಪತ್ರಿಕೆಯ ಪ್ರಿಯವಾಚಕ” ಎಂದು ಪರಿಚಯಿಸಿಕೊಂಡಿದ್ದರು. ಆಚಾರ್ಯರು ನಸುನಗೆ ಬೀರಿ ಯುವಕ ಆನಂದಕಂದರ ಕೈ ಹಿಡಿದು ಆತ್ಮೀಯತೆಯಿಂದ ಕುಲುಕಿದಾಗ ಆನಂದಕಂದರಿಗೆ ಧನ್ಯತಾಭಾವ ಉಂಟಾಗಿತ್ತು.

ಏಕೀಕರಣ ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮವನ್ನು ಕುತೂಹಲಿಯಾಗಿ ಆನಂದಕಂದರು ನಿರೀಕ್ಷಿಸುತ್ತಿದ್ದರು. ಒಂದು ಬಗೆಯ ಕನ್ನಡದ ಕೆಚ್ಚು ಬೆಳೆಯುತ್ತಿದ್ದಂತೆ ಅಭಿಮಾನದಿಂದ ನಲಿಯುತ್ತಿದ್ದರು. ಆ ಪರಷತ್ತಿನ ಸಭೆಯಲ್ಲಿ ‘ಕರ್ನಾಟಕ ಒಂದು ಸ್ವತಂತ್ರ ಪ್ರಾಂತವಾಗಬೇಕು!” ಎಂಬ ಬೇಡಿಕೆಯ ಗೊತ್ತುವಳಿ ಸರ್ವಾನುಮತದಿಂದ ಪಾಸಾದಾಗ “ಕರ್ನಾಟಕ ಮಾತಾಕೀ ಜಯ್‌!’ ಎಂದು ಆನಂದಕಂದರು ಮೈಮರೆತು ಅತ್ಯುತ್ಸಾಹದಿಂದ ಕೂಗಿದ್ದರು. ಇಡೀ ಸಭಾಂಗಣ ಬೆರಗುಗಣ್ಣಿನಿಂದ ಇವರನ್ನು ನೋಡುತ್ತಿತ್ತು. ಅದೇ ಕಾಲಕ್ಕೆ ಆನಂದಕಂದರು ಪ್ರತಿನಿಧಿಗಳಾಗಿ ಮಂಗಳೂರಿನಿಂದ ಏಕೀಕರಣದ ಸಭೆಗೆ ಬಂದ ದ.ಕೃ. ಭಾರದ್ವಾಜ ಹಾಗೂ ಆತ್ಮರಾಮ ಶಾಸ್ತ್ರಿ ಓಡ್ಲಮನೆ ಅವರ ಪರಿಚಯವನ್ನು ಮಾಡಿಕೊಂಡರು. ಈ ಪರಿಚಯಕ್ಕೆ ಕೂಡ ‘ಭಕ್ತಿಸಂದೇಶ’ ಎಂಬ ಮಾಸ ಪತ್ರಿಕೆಯೇ ಕಾರಣವಾಗಿತ್ತು. ಬೆಟಗೇರಿಯಲ್ಲಿದ್ದಾಗ ಈ ಪತ್ರಿಕೆಯನ್ನು ಆನಂದಕಂದರು ತರಿಸುತ್ತಿದ್ದರು. ಕನ್ನಡದಲ್ಲಿ ಆ ಸಮಯ ಪತ್ರಿಕೆಗಳ ಕೊರತೆ ಇದ್ದರೂ ಆನಂದಕಂದರು ಅಲ್ಲಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳನ್ನು ತರಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು. ಅವರ ಕನ್ನಡದ ಹಾಗೂ ಸಾಹಿತ್ಯದ ಹಸಿವನ್ನು ಎತ್ತಿ ತೋರುತ್ತದೆ. ಹೀಗಾಗಿ ಅಂದಿನ ಬಹಳಷ್ಟು ಪತ್ರಿಕೆಗಳ ಪರಿಚಯ, ಅವರಿಗೆ ಚಿಕ್ಕ ವಯಸ್ಸಿನಿಂದಲೇ ಇತ್ತು. ದ.ಕೃ. ಭಾರದ್ವಾಜರು ಆ ಸಮಯ ಮಂಗಳೂರಿನಿಂದ ‘ಭಕ್ತಿಸಂದೇಶ’ ಎಂಬ ಮಾಸಪತ್ರಿಕೆಯನ್ನು ಹೊರಡಿಸುತ್ತಿದ್ದರು. ಈ ಪತ್ರಿಕೆಯಲ್ಲಿ ಓಡ್ಲಮನೆ ಆತ್ಮಾರಾಮ ಶಾಸ್ತ್ರಿಗಳ ಲೇಖನಗಳು ಪ್ರಕಟವಾಗುತ್ತಿದ್ದವು. ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಲೇಖನಗಳ ಅನುವಾದಗಳು ‘ಭಕ್ತಿಸಂದೇಶ’ದಲ್ಲಿ ಪ್ರಕಟವಾಗುತ್ತಿದ್ದು, ಆನಂದಕಂದರು ಇವುಗಳಿಂದ ಪ್ರಭಾವಿತರಾಗಿ ತುಂಬ ಆಸಕ್ತಿಯಿಂದ ಓದುತ್ತಿದ್ದರು. ರವೀಂದ್ರನಾಠ ಠಾಕೂರರ ಕಥೆ-ಕಿರುನಾಟಕಗಳ ಪರಿಚಯವನ್ನು ಕನ್ನಡಕ್ಕೆ ಮೊದಲಿಗೆ ಈ ಪತ್ರಿಕೆಯ ಮಾಡಿಕೊಟ್ಟಿತ್ತು. ಅದಕ್ಕಾಗಿ ದತ್ತಾತ್ರೇಯ ಕೃಷ್ಣ ಭಾರದ್ವಾಜರು ಆನಂದಕಂದರ ಆರಾಧ್ಯಮೂರ್ತಿಯಾಗಿದ್ದು ವಿಶೇಷವೇನಲ್ಲ. ಈ ಏಕೀಕರಣದ ಪ್ರಥಮ ಅಧಿವೇಶನದಲ್ಲಿ ಅನೇಕ ಕನ್ನಡ ಸಾಹಿತಿಗಳ, ಪತ್ರಕರ್ತರ, ಹಿರಿಯರ ಪರಿಚಯವಾಗಿದ್ದರೂ ವಿಶೇಷವಾಗಿ ಕೆರೂರ ವಾಸುದೇವಾಚಾರ್ಯ ಹಾಗೂ ದ.ಕೃ. ಭಾರದ್ವಾಜ ಅವರ ದರ್ಶನವು ಆನಂದಕಂದರ ಮೇಲೆ ತುಂಬ ಪರಿಣಾಮ ಬೀರಿತ್ತು.

ಧಾರವಾಡದ ಈ ಕರ್ನಾಟಕ ಎಕೀಕರಣದ ಪರಿಷತ್ತು ಆನಂದಕಂದರಿಗೆ ಅನೇಕ ಹೊಸ ವಿಷಯಗಳನ್ನು ಕಲಿಸಿಕೊಟ್ಟಿತ್ತು. ಮುಂದೆ ಕೆಲವೇ ದಿನಗಳಲ್ಲಿ ಸಂಕೇಶ್ವರದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಪರಿಷತ್ತು ಸೇರುವುದಿದ್ದು. ಅದಕ್ಕಾಗಿ ಪುಣೆಯಿಂದ ಲೋಕಮಾನ್ಯ ತಿಲಕರು ಬರುವವರಿದ್ದರು. ಕೆಲವು ದಿನ ಆನಂದಕಂದರು ಕಿತ್ತೂರಿನಿಂದ ಬೆಟಗೇರಿಗೆ ಹೋಗಿದ್ದು, ಆ ರಾಜಕೀಯ ಪರಿಷತ್ತಿಗೆ ಬರಬೇಕೆಂದು ಕಾವ್ಯಾನಂದರು ಇವರಿಗೆ ಪತ್ರ ಬರೆದಿದ್ದರು. ಕಾರಣಾಂತರಗಳಿಂದ ಆನಂದಕಂದರು ಸಂಕೇಶ್ವರಕ್ಕೆ ಹೋಗಲಾರದೇ ಲೋಕಮಾನ್ಯರನ್ನು ಕಾಣುವ ಸಂದರ್ಭ ತಪ್ಪಿದ್ದು, ಮರುವರ್ಷವೇ ಲೋಕಮಾನ್ಯರು ತೀರಿಕೊಂಡಿದ್ದರು.