ಕಾಳಿಂಗರಾಯರು ಕಣ್ಮುಚ್ಚುವ ಕೆಲವೇ ದಿನ ಮುಂಚೆ, ಪ್ರಾಯಶಃ ೧೯೮೧ರ ಸೆಪ್ಟೆಂಬರ್ ಹದಿನೈದರ ಸಂಜೆ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿಟೌನ್ ಹಾಲಿನಲ್ಲಿ ಪಂಡಿತ್ ಮಲ್ಲಿಕಾರ್ಜುನ ಮನ್ಸೂರರಿಗೆ ಶಾಲು ಹೊದಿಸಿ ಹಾರ ಹಾಕುವ ಕಾರ್ಯವನ್ನು ಕಾಳಿಂಗರಾಯರಿಗೆ ವಹಿಸಲಾಗಿತ್ತು. ಮನ್ಸೂರರ ಆತ್ಮಿಯ ಗೆಳೆಯರಾಗಿದ್ದ ಕಾಳಿಂಗರಾಯರಿಗೆ ವಹಿಸಲಾಗಿತ್ತು. ಮನ್ಸೂರರ ಆತ್ಮೀಯ ಗೆಳೆಯರಾಗಿದ್ದ ಕಾಳಿಂಗರಾಯರು ಈ ಕಾರ್ಯವನ್ನು ಬಹುಸಂತೋಷದಿಂದ ಒಪ್ಪಿ ಕಾರ್ಯನಿರ್ವಹಿಸಲು ಆಗಮಿಸಿದ್ದರು. ತಮ್ಮ ಕಾರ್ಯದ ಸರದಿ ಬರುತ್ತಿದ್ದಂತೆ ಹಾರ ಹಿಡಿದು ಕಾರ್ಯಕರ್ತರ ಸಹಾಯದಿಂದ ಕುಂಟುತ್ತಾ ವೇದಿಕೆಯನ್ನೇರಿದ ರಾಯರು ಅವರಿಗೆ ಸಹಾಯ ಮಾಡಲು ಮುಂದಾದ ಇ.ಆರ್. ಸೇತೂರಾಮ್ ಅವರನ್ನು ತಬ್ಬಿ ‘ನೋಡದ್ರಾ ಸೇತೂರಾಮ್, stage ಮೇಲಕ್ಕೆ ಹಾರಿ ಬರ್ತಿದ್ದ ನನ್ನ ಸ್ಥಿತಿ ಹೇಗಾಗಿದೆ ನೋಡಿ’, ಎಂದು ನುಡಿದಾಗ ಅಲ್ಲಿದ್ದವರೆಲ್ಲಾ ರಾಯರ ದುರ್ಬಲ ಸ್ಥಿತಿಯನ್ನು ಕಂಡು ಮರುಕಗೊಂಡರು. ಇದೇ ನಮ್ಮ ಕಾಳಿಂಗರಾಯರನ್ನು ಪ್ರೇಕ್ಷಕರು ವೇದಿಕೆಯೊಂದರ ಮೇಲೆ ಅಂತಿಮವಾಗಿ ಕಂಡದ್ದು.

೧೯೮೧ ಸೆಪ್ಟೆಂಬರ್ ೨೧ರ ಮುಂಜಾನೆ ಸುಮಾರು ಐದರ ಹೊತ್ತು. ಕತ್ತಲೆ ಇನ್ನೂ ಕಳೆದಿರಲಿಲ್ಲ. ಕಾಳಿಂಗರಾಯರು ತಮ್ಮ ಜೀವನದುದ್ದಕ್ಕೂ ಸೂರ್ಯೋದಯವಾದ ಬಹು ಹೊತ್ತಿನ ನಂತರ ಏಳುತ್ತಿದ್ದವರು ಅಂದು ಸೂರ್ಯೋದಯಕ್ಕೆ ಒಂದು ಗಂಟೆ ಮೊದಲೇ ಎದ್ದರು. ಸದ್ದು ಮಾಡದೆ ಸ್ನಾನಗೃಹಕ್ಕೆ ತೆರಳಿ ಮುಂಜಾನೆಯ ಚಳಿಯನ್ನೂ ಲೆಕ್ಕಿಸದೆ ತಣ್ಣೀರಿನಲ್ಲೇ ಸ್ನಾನ ಮುಗಿಸಿ ಹೊರಬಂದು ನೆತ್ತಿಗೆ ದೊಡ್ಡದಾಗಿ ಕುಂಕುಮವನ್ನು ಇಟ್ಟುಕೊಂಡರು. ನಂತರ ಹಜಾರದ ನೆಲದ ಮೇಲೆ ಕೂತು ಕಣ್ಣುಮುಚ್ಚಿ ಎತ್ತರದ ಧ್ವನಿಯಲ್ಲಿ ದೇವೀ ಸ್ತುತಿಯನ್ನು ಅಕ್ಕಪಕ್ಕದ ಹತ್ತಾರು ಮನೆಗಳಿಗೆ ಕೇಳುವಷ್ಟು ಗಟ್ಟಿಯಾಗಿ ಹಾಡಲಾರಂಭಿಸಿದರಂತೆ.

ಅಷ್ಟು ನಸುಕಿನಲ್ಲೆದ್ದ ರಾಯರು ಹೀಗೆ ಅನಿರೀಕ್ಷಿತವಾದ, ಆಶ್ವರ್ಯಕರವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದುದನ್ನು ಮಲಗಿದ್ದಲ್ಲಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸೋಹನ್, ಆಗ ಆ ಕತ್ತಲಿನಲ್ಲಿ ರಾಯರು ಎತ್ತರದ ಧ್ವನಿಯಲ್ಲಿ ಹಾಡಲಾರಂಭಿಸಿದಾಗ ಗಾಬರಿಯಾಗಿ ಹಾಸಿಗೆಯಿಂದೆದ್ದು ಸ್ವಿಚ್ ಒತ್ತಿದರು. ಹಜಾರದಲ್ಲಿ ಬೆಳಕಾಯಿತು, ತಿರುಗಿ ನೋಡಿದರು, ಮತ್ತಷ್ಟು ಗಾಬರಿಯಾಯಿತು.

ಹಜಾರದ ಮಧ್ಯೆ ಒದ್ದೆ ಟವಲನ್ನುಟ್ಟು, ಹಣೆಯಲ್ಲಿ ದೊಡ್ಡದಾಗಿ ಕುಂಕುಮವನ್ನು ಧರಿಸಿ, ಕಣ್ಮುಚ್ಚಿ ಕರಗಳನ್ನು ಜೋಡಿಸಿಕೊಂಡು ಕೈ ಮುಗಿಯುತ್ತಾ ರಾಯರು ದೇವೀಸ್ತುತಿಯನ್ನು ಹಾಡುತ್ತಿದ್ದಾರೆ. ತಾವು ಹಿಂದೆಂದೂ ಕಾಣದ ಮಂದಹಾಸ ಹಾಗೂ ಶಾಂತ ಚಿತ್ತ ಮುಖಭಾವದಿಂದ ಕೂಡಿದ್ದ ರಾಯರು ಯಾವುದರ ಪರಿವೆಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಹಾಡುತ್ತಿದ್ದಾರೆ. ಅದೂ ನಿರರ್ಗಳವಾಗಿ-ನಿರಾತಂಕವಾಗಿ!

ಆ ವೇಳೆಗೆ ಮೋಹನ್ ಕುಮಾರಿಯೂ ಎದ್ದು ಅಕ್ಕ ಸೋಹನ್ರ ಪಕ್ಕ ಸರಿದು ತೆಪ್ಟನೆ ತುಟಿ ಪಿಟಕ್ ಎನ್ನದೆ, ಎವೆ ಇಕ್ಕದೆ ಕಾಳಿಂಗ ರಾಯರನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿದ್ದರು, ಹಿಂದೆಂದೂ ಅವರನ್ನು ನೋಡಿಯೇ ಇಲ್ಲವೇನೋ ಎಂಬಂತೆ. ಈ ಸೋದರಿಯರಿಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಏನು ಮಾಡಬೇಕೆಂಬುದೇ ತೋಚಲಿಲ್ಲ. ರಾಯರು ಹೀಗೇಕೆ ಆಡುತ್ತಿದ್ದಾರೆಂಬುದೂ ಅರ್ಥವಾಗಲಿಲ್ಲ. ಅವರು ನೋಡಲು  ಎಂದಿನಂತೆ ಚೆನ್ನಾಗಿಯೇ ಇದ್ದಾರೆ. ವ್ಯತ್ಯಾಸವೇನಿಲ್ಲ! ರಾಗ, ತಾಳ, ಸ್ಥಾಯಿ, ಸಾಹಿತ್ಯಗಳನ್ನು ತಪ್ಪದೆ ಹಾಡುತ್ತಿದ್ದಾರೆ. ಆದರೆ ಇದೆಲ್ಲಾ ಈಗೇಕೆ? ಈ ಆರಂಭಿಸಿದ್ದಾರೆಯೇ? ಏನಾದರೂ ಹರಕೆ ಹೊತ್ತಿದ್ದಾರೆಯೇ? ದಶಕಗಳಿಂದ ತಮ್ಮಿಂದ ಏನನ್ನೂ ಬಚ್ಚಿಟ್ಟುಕೊಳ್ಳದೆ, ಎಂಥದೆಲ್ಲವನ್ನೂ ಬಿಚ್ಚು ಮನಸ್ಸಿನಿಂದ ತಮ್ಮ ಬಳಿ ತೋಡಿಕೊಳ್ಳುತ್ತಿದ್ದ ಈ ಮನುಷ್ಯ ಈಗ ಈ ಸ್ಥಿತಿಯಲ್ಲಿ ತಮ್ಮಿಂದ ಬಚ್ಚಿಟ್ಟುಕೊಳ್ಳುವ ವಿಚಾರ ತಾನೇ ಏನಿದ್ದೀತು?

ಯಾವುದಕ್ಕೂ ಕಾಳಿಂಗರಾಯರೇ ಉತ್ತರಿಸಬೇಕು. ಆದರೆ ಯಾವಾಗ? ಎಷ್ಟು ಹೊತ್ತಿನ ಮೇಲೆ? ಕಾಲಾಯಿತು, ಅರೆಯಾಯಿತು, ಮುಕ್ಕಾಲಾಯಿತು. ಕೊನೆಗೆ ಆರಾಗಿ ದಿಗಂತದಲ್ಲಿ ಸೂರ್ಯನ ಹೊಂಗಿರಣಗಳು ಮೂಡಿಬೆಳಕಾಯಿತು. ಆದರೆ ರಾಯರ ದೇವೀಸ್ತುತಿ ಮಾತ್ರ ನಿಂತಿರಲಿಲ್ಲ. ಒಂದರ ನಂತರ ಮತ್ತೊಂದು, ಅವರೆಂದೋ ಕಂಠಪಾಠ ಮಾಡಿ ಕಲಿತದ್ದು, ಅವರ ಬಾಲ್ಯದ ದಿನಗಳಲ್ಲಿ. ಈಗದು ರಾಯರ ಕೋಮಲ ಕಂಠದಿಂದ ಅಲೆಅಲೆಯಾಗಿ ಸ್ಫುರಿಸುತ್ತಿದೆ. ದೇವೀಸ್ತುತಿಯ ಅಷ್ಟೊಂದು ಶ್ಲೋಕಗಳು ಅವರಿಗೆ ಬರುವುದೆಂದು ಅದುವರೆಗೆ ಇವರಿಗೇ ತಿಳಿದಿರಲಿಲ್ಲ. ಅಚ್ಚರಿಯಿಂದ ನಿಬ್ಬೆರಗಾಗಿ ಕೇಳುತ್ತಲೇ ಕುಳಿತಿದ್ದರು. ಆ ದಿಶೆಯಲ್ಲಿ ರಾಯರನ್ನು ಮುಟ್ಟಿ ಅಥವಾ ಎಂದಿನಂತೆ ತಟ್ಟಿ ಎಬ್ಬಿಸುವ ರ್ಧೈವಾಗಲೀ, ಮನಸ್ಸಾಗಲೀ ಈ ಸೋದರಿಯರಿಗೆ ಆಗ ಆಗಲಿಲ್ಲ. ಅವರಾಗಿಯೇ ಎಚ್ಚರಗೊಳ್ಳುವವರೆಗೂ ಕಾದು ನೋಡೋಣವೆಂದು ಕದಲದೆ ಕೂತಲ್ಲೇ ಪರಸ್ಪರ ಅಪ್ಪಿ ಕುಳಿತಿದ್ದರು.

ಆಶ್ಚರ್ಯಚಕಿತರಾದ ಅಕ್ಕಪಕ್ಕದ ಮನೆಯ ಒಬ್ಬಿಬ್ಬರು ಬಂದು, ‘ಇದೇನು? ಹೀಗೇಕೆ? ಏನಾಗಿದೆ ರಾಯರಿಗೆ?’ ಎಂದರು. ಮತ್ತೊಬ್ಬರು ಬಂದು, ‘ಹೀಗೆ ಸುಮ್ಮನೆ ಇದ್ದರೆ ಹೇಗಮ್ಮ ತಾಯಿ? ರಾಯರಿಗೆ ಬುದ್ಧಿಭ್ರಮಣೆಯಾಗಿರಬೇಕು’ ಎಂದು ಸಲಹೆ ಕೊಟ್ಟವರೇ-ವೈದ್ಯರನ್ನು ಕರೆತರಲು ಓಡಿದರು.

ಸುಮಾರು ಆರೂ ಕಾಲು. ಕಾಳಿಂಗರಾಯರು ಕಣ್ತೆರೆದುರು. ಎದುರಿಗೆ ಹೆದರಿ, ಮುದುರಿ, ಗರಬಡಿದವರಂತೆ ತಮ್ಮನ್ನೇ ನೆಟ್ಟ ದೃಷ್ಟಿಯಿಂದ ದಿಟ್ಟಿಸಿ ನೋಡುತ್ತಾ ಎವೆ ಇಕ್ಕದೇ ಕುಳಿತಿದ್ದ ಸೋಹನ್, ಮೋಹನ್ರನ್ನು ಕಂಡಾಗ ರಾಯರ ಕಣ್ಣುಗಳಿಂದ ನೀರು ಹನಿಹನಿಯಾಗಿ ಉರುಳಿತು. ಮೋಹನ್ ಕುಮಾರಿಗೆ ಇದನ್ನೆಲ್ಲಾ ತಡೆದುಕೊಳ್ಳಲಾಗಲಿಲ್ಲ. ಎಂಥ ಕಷ್ಟದ ಪರಿಸ್ಥಿತಿಯಲ್ಲೂ ರಾಯರ ಕಣ್ಣಲ್ಲಿ ನೀರೂರಿದ್ದನ್ನು ಈ ಸೋದರಿಯರು ಕಂಡರಿಯರು. ಮೋಹನ್ಕುಮಾರಿಯ ಮನಸ್ಸು ಬಲು ಮೃದು. ದಿಕ್ಕು ಕಾಣದ ಮಗುವಿನಂತೆ ಬಿಕ್ಕಲಾರಂಭಿಸಿದ ಈಕೆಯನ್ನು ಸೋಹನ್ ‘ಸುಮ್ಮನಿರು’ ಎಂಬಂತೆ ಗದರಿಸಿ ಆ ಸನ್ನಿವೇಶವನ್ನು ತಮ್ಮಿಂದಲೂ ಸಹಿಸಲಸಾಧ್ಯವೆಂದಾದರೂ ಸಮಚಿತ್ತವನ್ನು ಕಳೆದುಕೊಳ್ಳದೇ ರಾಯರ ಪಕ್ಕಕ್ಕೆ ಸರಿದು ತಮ್ಮ ಸೆರಗಿನ ತುದಿಯಿಂದ ರಾಯರ ಕಣ್ಣುಗಳನ್ನು ಒರೆಸಿ ಮೃದು ಮಧುರವಾದ ಧ್ವನಿಯಿಂದ ‘ಯಾಕ್ಹೀಗೆಲ್ಲಾ ಮಾಡ್ತಿದ್ದೀರಿ? ಸೋಹನ್ ಹೇಳಿದ್ದು ತಮಗೆ ಕೇಳಿಸಲೇ ಇಲ್ಲವೇನೋ ಎಂಬಂತೆ this is not the time for us to cry; come on, let us sing’ ಎಂದವರೇ ‘ಏರಿಸಿ ಹಾರಿಸಿ ಕನ್ನಡದ ಬಾವುಟ’ ಎಂಬ ಹಾಡನ್ನು ಹಾಡಲಾರಂಭಿಸಿದರಂತೆ!

ದಶಕಗಳಿಂದ ನೂರಾರು ಕಾರ್ಯಕ್ರಮಗಳಲ್ಲಿ ನಿರರ್ಗಳವಾಗಿ ಹಾಡುತ್ತಿದ್ದ ಈ ಹಾಡನ್ನು ರಾಯರು ಇಂದು ಹಾಡಲಾರಂಭಿಸಿದಾಗ ಮಧ್ಯೆ ನುಸುಳಲಾರಂಭಿಸಿದಾಗ ಸೋದರಿಯಬರಿಬ್ಬರಿಗೂ ರಾಯರ ಆರೋಗ್ಯದ ಬಗ್ಗೆ ಆತಂಕವಾಯಿತು.

ಸೋಹನ್ ಕಾಳಿಂಗರಾಯರನ್ನು ಜಗ್ಗುತ್ತಾ ‘ಹೋಗ್ಲಿ  ಸುಮ್ನಿರಿ. ಅಕ್ಕಪಕ್ಕದವರಿಗೆಲ್ಲಾ ತೊಂದ್ರೆ ಆಗ್ತಿದೆ. ಅಲ್ದೆ ನೀವೂ ಬೇಗ್ನೆ ಎದ್ದು ಬಹಳ ಹೊತ್ನಿಂದ ಹಾಡ್ತಿದ್ದೀರಿ. ಸ್ವಲ್ಪ ಹೊತ್ತು ಮಲಕ್ಕೊಳ್ಳಿ’ ಎನ್ನಲು ರಾಯರು  ಇನ್ನೆಲ್ಲಾ ಸ್ವಲ್ಪ ಹೊತ್ತಷ್ಟೇ ಸೋಹನ್, ಹಾಡ್ಬೇಕೂಂತಿರೋದ್ನೆಲ್ಲಾ ಹಾಡಿ ಮಲಕ್ಕೊಂಡ್ಬಿಡ್ತೀನಿ. ಈವತ್ತು ಬೆಳಗಾಗೋದಕ್ಕೆ ಮುಂಚಿನಿಂದ್ಲೇ ಆ ಚಾಮುಂಡಿ ಬಂದು ‘ಬಾ, ಬಾ’ ಅಂತಿದ್ದಾಳೆ. ಆಕೇನೇ ಕರೀತಿರೋವಾಗ ಹೋಗ್ದಿರೋಕೆ ಸಾಧ್ಯವೇ? ಎಲ್ಲಿ ಹಾಡಿ’ ಎಂದವರೇ ಮತ್ತೆ ‘ಬೆಟ್ಟ ಬಿಟ್ಟಿಳಿಯುತ್ತ ಹೊರಟಾಳೆ ಚಾಮುಂಡಿ’ ಎಂಬ ಗೀತೆಯನ್ನು ಗಟ್ಟಿಯಾಗಿ ಹಾಡಲಾರಂಭಿಸಿದರಂತೆ. ಆ ಹಾಡಿನ ಅರ್ಧಭಾಗ ಮುಗಿಯುತ್ತಿದ್ದಂತೆ ತಟ್ಟನೆ ನಿಲ್ಲಿಸಿದ ರಾಯರು ಬಳಿಯಲ್ಲಿದ್ದ ಸೋಹನ್ ಮತ್ತು ಮೋಹನ್ರನ್ನು ಬಾಚಿ ತಬ್ಬಿಕೊಂಡು ತೊದಲುತ್ತಾ ‘ನಾನು ನಿಗೇನನ್ನೂ ಮಾಡ್ಲಿಲ್ಲ. ಹಾಗೇ ಹೋಗ್ತಿದ್ದೀನಿ’ ಎಂದು ಗಳಗಳನೆ ಅಳಲಾರಂಭಿಸಿದರಂತೆ. ಇದರಿಂದ ತತ್ತರಿಸಿ ಹೋಗ ಮೋಹನ್ ರಾಯರನ್ನು ಬಿಗಿಯಾಗಿ ತಬ್ಬಿ ‘ಹಾಗೆಲ್ಲಾ ದಯವಿಟ್ಟು ಮತ್ನಾಡ್ಬೇಡಿ. ಇಷ್ಟು ವರ್ಷ ನಮ್ಮನ್ನ ಮಕ್ಳಂತೆ’ ನೋಡ್ಕೊಂಡು ಬೆಳೆಸಿದ್ದೀರಿ, ಸಮಾಧಾನ ತಂದ್ಕೊಳ್ಳಿ’ ಎಂದು ಸಂತೈಸಲು ಕಾಳಿಂಗರಾಯರು ಅಳುವುದನ್ನು ತಟ್ಟನೆ ನಿಲ್ಲಿಸಿ ಮರುಕ್ಷಣವೇ ವಿಲಕ್ಷಣವಾಗಿ ನಗಲಾರಂಭಿಸಿದರು.

ಹೀಗೆ ಬಳಿಯಲ್ಲಿದ್ದ ಈ ಸಹೋದರಿಯರನ್ನು ಬಿಗಿಯಾಗಿ ಅಪ್ಪಿ ಅಳುತ್ತಲೇ ಇದ್ದರು. ಅಳುತ್ತಳುತ್ತಲಿದ್ದಂತೆ ರಾಯರು ತಮ್ಮ ತಂಗಿಯರಂತಿದ್ದ ಈ ಶಿಷ್ಯೆಯರಿಬ್ಬರನ್ನೂ ಬಲವಾಗಿ ಹಿಡಿದಿದ್ದ ಬಿಗಿತ ಸಡಿಲವಾಯಿತು. ರಾಯರ ಕೈಗಳೆರಡೂ ಜೋತುಬಿದ್ದವು.

‘ಏಕ್ಹೀಗೆ?’ ಎಂದು ಈ ಸೋದರಿಯರು ಮುಖ ಮೇಲೆತ್ತಿದಾಗ ಕಾಳಿಂಗರಾಯರ ಮುಖ ಕೆಳಗಾಗಿದ್ದಿತು! ಈ ಕನ್ನಡ ಕೋಗಿಲೆಯ ಅಂತರಾತ್ಮ ಪರಮಾತ್ಮನ ಪಾದಾರವಿಂದವನ್ನರಸಿ ಹಾರಿಹೋಗಿತ್ತು.

* * *