ಮುಚ್ಚಿಹೋದ ಅಂಬಾ ಪ್ರಸಾದಿತ ನಾಟಕ ಮಂಡಳಿಯಿಂದ ಹೊರಬಂದಾಗ ಕಾಳಿಂಗರಾಯರಿಗೆ ಇಪ್ಪತ್ತೆರಡು ವರ್ಷದ ಪ್ರಾಯ. ಮೂಲೆಯಲ್ಲಿ ಮುಸುಕು ಹಾಕಿಟ್ಟಿದ್ದ ತಮ್ಮ ತಂಬೂರಿಯನ್ನು ಹೊರತೆಗೆದು ಶ್ರುತಿ ಮಾಡಿದರು; ಮಧ್ಯರಾತ್ರಿಯವರೆಗೆ ಸಂಗೀತ ಸಾಧನೆ. ಯಮ ಸಾಧನೆ. ದಿನನಿತ್ಯ ಹತ್ತು ಹನ್ನೆರಡು ತಾಸು ನಿರಂತರ ಸಾಧನೆ. ಕಟ್ಟಿಕೊಂಡಿದ್ದ ಶ್ವಾಸ ಬಿಟ್ಟುಕೊಂಡಿತು. ಮತ್ತೆ ರಾಯರ ಮುಖ ನವವರ್ಚಸ್ಸಿನಿಂದ ಮಿರುಗಲಾರಂಭಿಸಿತು. ಕರೆ ಬಂದ ಕಡೆ ಕಚೇರಿ ಮಾಡಲಾರಂಭಿಸಿದರು; ಹಿಂದೂಸ್ತಾನೀ ಶೈಲಿಯಲ್ಲಿ; ಆಗ್ರಾ ಘರಾನಾ ಪದ್ಧತಿಯಲ್ಲಿ.

ಮದರಾಸಿನ, ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆ. ಸ್ಥಾಪಕರು ಡಾ|| ಸಿ. ರಾಜಗೋಪಾಲಚಾರಿ. ಇವರು ಕಾಳಿಂಗರಾಯರ ಸಂಗೀತ ಪ್ರತಿಭೆಯನ್ನು ಗಮನಿಸಿದ್ದರು. ಹೀಗಾಗಿ ಕಾಳಿಂಗರಾಯರ ಕೈಹಿಡಿದು ಕರೆದೊಯ್ದು ತಮ್ಮ ಪ್ರಚಾರ ಸಭೆಯ ಪ್ರಾಚಾರ್ಯರ ಸ್ಥಾನದಲ್ಲಿ ಕೂರಿಸಿದರು. ನಂತರ ರಾಯರು ಅಲ್ಲಿದ್ದ ಎರಡು ಮೂರು ವರ್ಷಗಳ ಕಾಲಾವಧಿಯಲ್ಲಿ ಅಳವಡಿಸಿದ ಪ್ರಯೋಗಗಳು ಒಂದಲ್ಲ, ಎರಡಲ್ಲ. ಪ್ರಚಾರ ಸಭೆಯ ಸಂಗೀತ ವಿಭಾಗ ಗರಿಗೆದರಿದ ನವಿಲಿನಂತೆ ನರ್ತಿಸಲಾರಂಭಿಸಿತು. ದಿನಕಳೆದಂತೆ ರಾಯರ ಶಿಷ್ಯ ವರ್ಗ ಬೆಳೆ ಬೆಳೆದು ಶಿಷ್ಯ ಕೋಟಿಯಾಯಿತು.

ಆ ದಿಶೆಯಲ್ಲಿ ಕಾಳಿಂಗರಾಯರಿಂದ ಸಂಗೀತವನ್ನು ಕಲಿತು ಕೃತಾರ್ಥರಾದವರೆಷ್ಟೋ ಮಂದಿ.  ಆ ಶಿಷ್ಯರೂ ಸಾಮಾನ್ಯ ಮಟ್ಟದವರಲ್ಲ. ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದವರು ವಿದ್ವತ್ತು ಹಾಗೂ ಕೋಮಲವಾದ ಕಂಠಸಿರಿಯಿದ್ದವರಿಗಷ್ಟೇ ಕಾಳಿಂಗರಾಯರು ಸಂಗೀತ ಹೇಳಿಕೊಡುತ್ತಿದ್ದುದರಿಂದ ಇವರನ್ನು ‘ಟಾಪ್ ಕ್ಲಾಸ್ ವಾದ್ಯಾರ್’ ಎಂದೇ ಅಲ್ಲಿಯವರು ಕರೆಯುತ್ತಿದ್ದರು!

ಹೀಗಿದ್ದರೂ ಕಾಳಿಂಗರಾಯರು ಇಲ್ಲೂ ನೆಲಕಚ್ಚಿ ಸ್ಥಗಿತವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ದಿಕ್ಕು ದೆಸೆ ಇಲ್ಲದೇ ದೇಶದೇಶಾಂತರ ಅಲೆದಾಡುತ್ತ ಹಾಡುತ್ತಿರಬೇಕೆಂಬುದೇ ಇವರ ಹಣೆಬರಹವಾಗಿರಬೇಕಾದರೆ ಒಂದು ಕಡೆ ಕುರ್ಚಿಯಲ್ಲಿ ಕೂತಿದ್ದು ಕೊನೆಯವರೆವಿಗೂ ಕಾಲ ಕಳೆಯಯ್ಯಾ ಎಂದರೆ ಹೇಗಾದಿತು? ಆ ಹಿಂದೀ ಪ್ರಚಾರ ಸಭೆಯ ಪ್ರಾಚಾರ್ಯಗಿರಿಯೂ ಇವರಿಗೆ ಒಗ್ಗಲಿಲ್ಲ. ಕೆಲಸಕ್ಕೆ ರಾಜೀನಾಮೆ ಇತ್ತು ಕೈತೊಳೆದುಕೊಂಡರು.

ಮದ್ರಾಸಿನಲ್ಲಿದ್ದಾಗ ಕಾಳಿಂಗರಾಯರು ತಮ್ಮ ಶಿಷ್ಯೆಯರಾಗಿದ್ದ ಸೋಹನ್, ಮೋಹನ್‌ರಿಗೆ ಅವರ ಎಳೆಯ ವಯಸ್ಸಿನಿಂದಲೇ ಸಂಗೀತವನ್ನು ಹೇಳಿಕೊಡಲಾರಂಭಿಸಿದರು. ಆ ಸಮಯದಲ್ಲಿ ಅ.ನ.ಕೃ. ಅವರ ಪ್ರೇರಣೆ ಪ್ರಚೋದನೆಯಿಂದಾಗಿ ರಾಯರು ಯಾವುದೇ ಶಾಸ್ತ್ರೀಯ ಪದ್ಧತಿಯಲ್ಲಿ ಸಂಗೀತ ಹಾಡುವುದನ್ನು ನಿಲ್ಲಿಸಿ ಜನಸಾಮಾನ್ಯರೆಲ್ಲರಿಗೂ ರಂಜನೆ ನೀಡುವ ಜಾನಪದ ಗೀತೆ, ಭಾವಗೀತೆ ದೇವರನಾಮಗಳಿಗೆ ರಾಗ ಸಂಯೋಜಿಸಿ ಹಾಡುವ ಪ್ರವೃತ್ತಿ ಬೆಳೆಸಿಕೊಂಡರು. ಆ ಸಂಕಲ್ಪ ಸಿದ್ಧಾಂತಕ್ಕೆ ರಾಯರು ತಮ್ಮ ಕೊನೆಯತನಕ ಬದ್ಧರಾಗಿದ್ದರು.

ಹೀಗೆ ನವ್ಯಶೈಲಿಯಲ್ಲಿ ಹಾಡಲಾರಂಭಿಸಿದ ಕಾಳಿಂಗರಾಯರಿಗೆ ದಿನಕಳೆದಂತೆ ಎಲ್ಲಿಲ್ಲದ ಬೇಡಿಕೆ, ಬಿಡುವಿಲ್ಲದ ಕಾರ್ಯಕ್ರಮ. ಅವರೊಡನೆ ಮುದ್ದು ಮುಖದ ಬಾಲಕಿಯರಾಗಿದ್ದ ಸೋಹನ್, ಮೋಹನ್‌ರೂ ಹಾಡಲಾರಂಭಿಸಿದ್ದರಿಂದ ಕಾಳಿಂಗರಾಯರ ಕಾರ್ಯಕ್ರಮಕ್ಕೆ ಎಲ್ಲಿಲ್ಲದ ಮೆರುಗು!

ಹೀಗೆ ಮೊದಲಿಗೆ ಎಲ್ಲ ಕಡೆ ಮನೆಮಾತಾದ ಕಾಳಿಂಗರಾಯರ ಚಿತ್ತ ಚಿತ್ರಸಂಗೀತದತ್ತಲೂ ವಾಲಿತು. ಆ ಸಮಯದಲ್ಲಿ ಮದರಾಸಿನ ಚಿತ್ರ ನಿರ್ಮಾಪಕ ಕೆ. ಸುಬ್ರಹ್ಮಣ್ಯಂ ಎಂಬುವರು ತಮ್ಮ ತಮಿಳು ಚಿತ್ರವೊಂದಕ್ಕೆ ರಾಯರನ್ನು ಸಂಗೀತ ನಿರ್ದೇಶಕರೆಂದು ನೇಮಿಸಿಕೊಂಡರು. ಆದರೆ ಅಲ್ಲಿ ತಮಗೆ ಸಂಗೀತ ನಿರ್ದೇಶಿಸಲು ಪೂರ್ಣ ಸ್ವಾತಂತ್ರ‍್ಯ ಸಿಗದ ಕಾರಣ ರಾಯರು ಸುಬ್ರಹ್ಮಣ್ಯಂರವರ ಚಿತ್ರಕ್ಕೆ ಸಂಗೀತ ನೀಡದೆ ಹೊರಬಂದರು. ನಂತರ ಚಿತ್ರಜಗತ್ತಿಗೇ ದೊಡ್ಡ ಸಲಾಂ ಎಂದು ಸುಮ್ಮನಾದರು. ಇವರೇನೋ ಸುಮ್ಮನಾದರು. ಆದರೆ ಚಿತ್ತಜಗತ್ತು ಸುಮ್ಮನಾಗಲಿಲ್ಲ. ಕಾಳಿಂಗರಾಯರನ್ನು ಸ್ವೇಚ್ಛೆಯಿಂದಿರಲು ಬಿಡಲಿಲ್ಲ. ಕಾಡಲಾರಂಭಿಸಿತು. ಮುಗಿಬಿದ್ದು ಬೇಡಲಾರಂಭಿಸಿತು. ಹೀಗಾಗಿ ‘ಪ್ರೇಮ ಸಾಗರ’ ಎಂಬ ಕನ್ನಡ ಚಿತ್ರಕ್ಕೆ ರಾಯರು ಅಲ್ಲಿಯ ಅಭಿಮಾನಿಗಳ ಒತ್ತಾಸೆಗೆ ಮಣಿದು ಸಂಗೀತ ನಿರ್ದೇಶಿಸಿದರು. ಆ ಚಿತ್ರದ ಹಾಡುಗಳು ಜನಮನ ಸೂರೆಗೊಂಡಾಗ ಚಿತ್ರರಂಗದಿಂದ ರಾಯರಿಗೆ ಎಲ್ಲಿಲ್ಲದ ಬೇಡಿಕೆ. ಈ ನಡುವೆ ಕಾಳಿಂಗರಾಯರಿಗೆ ಕಂಕಣಬಲವೂ ಕೂಡಿಬಂತು ಅನಿರೀಕ್ಷಿತವಾಗಿ.

ಕಾಳಿಂಗರಾಯರು ಇಪ್ಪತ್ತೆರಡರ ಪ್ರಾಯದಲ್ಲಿ ಹುಟ್ಟೂರು ಪಾಂಡೇಶ್ವರಕ್ಕೆ ಹೋಗಿದ್ದಾಗ ಅಲ್ಲಿಗೆ ಸಮೀಪದಲ್ಲಿದ್ದ ಬಾರ್ಕೂರು ಹಳ್ಳಿಯಲ್ಲಿದ್ದ ಮೀನಾಕ್ಷಿ ಎಂಬಾಕೆಯನ್ನು ಮದುವೆಯಾದರು. ಸುಮ್ಮನೆ ಏನಕ್ಕೋ ಪಾಂಡೇಶ್ವರಕ್ಕೆ ಹೋಗಿದ್ದಾಗ ರಾಯರು ಮದುವೆಯಾಗುವ ಕನಸನ್ನೂ ಕಂಡಿರಲಿಲ್ಲ. ಕಲ್ಪಿಸಿಕೊಂಡೂ ಇರಲಿಲ್ಲ. ಹಿರಿಯರ ಬಲವಂತ. ನಡೆದುಹೋಯಿತು.

ಈ ಮೀನಾಕ್ಷಿ ಅಷ್ಟಾಗಿ ಕಲಿತವಳಲ್ಲ. ಅಲ್ಲದೆ ಆಕೆಗಾಗಿ ಕೇವಲ ಹನ್ನೆರಡು ವರ್ಷದ ಪ್ರಾಯ! ಸುಂದರಳಾಗಿದ್ದ ಕನ್ಯೆ. ಆದರೆ ಮುಗ್ಧೆ, ಏನೂ ತಿಳಿಯದ ಹೆಣ್ಣು.

ಮದುವೆಯಾದ ತಾರುಣ್ಯದಲ್ಲಿ ಹೆಂಡತಿಯೊಡನೆ ರಾಯರು ಸಂಸಾರ ನಡೆಸುವ ಪ್ರಯತ್ನ ಮಾಡಿದ್ದುಂಟು. ಆದರೆ ಅದು ಸಾಧ್ಯವಾಗಲಿಲ್ಲ ಕೈ ಹಿಡಿದ ಮುಗ್ಧ ಹೆಣ್ಣಿಗೆ ವೃಥಾ ತೊಂದರೆಯಾಗದಿರಲೆಂದು ರಾಯರು ತಮ್ಮ ಪತ್ನಿಯನ್ನು ಪಾಂಡೇಶ್ವರದಲ್ಲೇ ಇರುವಂತೆ ಏರ್ಪಾಡು ಮಾಡಿ ತಾವೊಬ್ಬರೆ ಬೆಂಗಳೂರಿಗೆ ಬಂದುಬಿಟ್ಟರು.

ಹೀಗೆ ಪಾಂಡೇಶ್ವರಕ್ಕೆ ಹಿಂದಿರುಗಿದ ಮೀನಾಕ್ಷಿಗೆ ರಾಯರೊಡನಿದ್ದು ಸಂಸಾರ ಸಾಗಿಸುವ ಸೌಭಾಗ್ಯ ಸಿಗದೇ ಹೋದದ್ದು ದುರದೃಷ್ಟದ ಸಂಗತಿ. ಅಲ್ಲದೆ ಅದೊಂದು ಈಕೆಯ ಬದುಕಿನಲ್ಲಾದ ದುರಂತ.

ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಈ ಮಹಾನ್ ಕಲಾವಿದ ಕಾಳಿಂಗರಾವ್ ಆಕೆಯ ಪಾಲಿಗೆ ಗಗನಕುಸುಮ. ಹೆಂಡತಿಯಾದವಳು ತನ್ನ ಗಂಡನ ಹಿರಿಮೆ ಹೆಗ್ಗಳಿಕೆಯನ್ನು ಅವರಿವರಿಂದ ಕೇಳಿ ಹಿಗ್ಗುವ ಪರಿಸ್ಥಿತಿ. ರಾಯರ ಸಂದರ್ಶನ ಸಾನ್ನಿಧ್ಯ ಮೀನಾಕ್ಷಿಗೆ ದೊರಕುತ್ತಿದ್ದುದು ವರ್ಷದಲ್ಲಿ ಆಗೊಮ್ಮೆ. ಈಗೊಮ್ಮೆ ಅಷ್ಟೇ – ಅಪರೂಪಕ್ಕೆಂಬಂತೆ. ಅಲ್ಲದೆ ಕಾಳಿಂಗರಾಯರು ನಾಡಿನಾದ್ಯಂತ ಕೀರ್ತಿವೆತ್ತ ಕಲಾವಿದರೆಂಬುದು ಮೀನಾಕ್ಷಮ್ಮನವರಿಗೆ ಅರಿವಾಗಿ ಅವರ ಹಾಡವ ವೈಖರಿಯ ಪ್ರತ್ಯಕ್ಷದರ್ಶನವಾದದ್ದು ರಾಯರಿಗೆ ಐವತ್ತೈದರ ಪ್ರಾಯವಿದ್ದಾಗ!

ಅವರೇ ಹೇಳಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಈ ದಂಪತಿಗಳನ್ನು ಆಹ್ವಾನಿಸಿ ಅಲ್ಲಿಯ ಜನ ಆದರಿಸಿ ಸನ್ಮಾನಿಸಿದರು. ಉಡುಪಿಯ ವಾದಿರಾಜ ಮಠದವರು ಕಾಳಿಂಗರಾಯರನ್ನು ಭವ್ಯ ರೀತಿಯಲ್ಲಿ ಸನ್ಮಾನಿಸಿದ್ದೇ ಅಲ್ಲದೆ, ಅವರ ಜೊತೆಗೂಡಿ ಬಂದಿದ್ದ ರಾಯರ ಮಡದಿ ಮೀನಾಕ್ಷಮ್ಮನವರಿಗೆ ಶ್ರೀ ಕೃಷ್ಣನ ವಿಗ್ರಹವನ್ನಿತ್ತು ಆಶೀರ್ವದಿಸಿದರಂತೆ.

ಆ ಸಂದರ್ಭದಲ್ಲಿ ಕಾಳಿಂಗರಾಯರು ನಕ್ಕು ನಲಿದು ಭಾವೋದ್ವೇಗದಿಂದ ಹಾಡುವುದನ್ನು ಅಂದೇ ಮೊದಲ ಬಾರಿಗೆ ಮೀನಾಕ್ಷಮ್ಮ ಕಂಡು ಆನಂದಭಾಷ್ಪ ಸುರಿಸಿದರಂತೆ. ಇದೆಂತಹ ವಿಪರ‍್ಯಾಸ?

ಕಾಳಿಂಗರಾಯರ ಮಡದಿ ಮೀನಾಕ್ಷಮ್ಮ ನಾಲ್ಕು ಮಕ್ಕಳ ಮಾತೆ. ಮೊದಲನೆಯವಳು ಪ್ರೇಮ, ನಂತರ ಮೂರು ಮಂದಿ ಗಂಡು ಮಕ್ಕಳು, ಶರತ್, ವಸಂತ್ ಹಾಗೂ ಸಂತೋಷ್.

ಪ್ರಸ್ತುತ ಕಾಳಿಂಗರಾಯರ ಗಂಡು ಮಕ್ಕಳೆಲ್ಲಾ ತಂತಮ್ಮ ಸಂಸಾರದೊಂದಿಗೆ ಸುಖವಾಗಿದ್ದಾರೆ. ಇದು ಸಂತೋಷದ ವಿಷಯ. ಇವರ ಜೊತೆಗೆ ಪ್ರದೀಪ್ ಕುಮಾರ್ ಎಂಬಾತ ರಾಯರ ಉಪಪತ್ನಿ ರಾಜೇಶ್ವರಿ ಎಂಬುವವರ ಪುತ್ರ. ಈ ಇಬ್ಬರೂ ಈಗಿಲ್ಲ. ದಿವಂಗತರಾಗಿ ಕೆಲವು ವರ್ಷಗಳಾಯಿತು. ಪ್ರದೀಪ್ ಕುಮಾರ್ ತುಂಬ ಒಳ್ಳೆಯ ಹುಡುಗ. ಕಲಾವಿದ, ಕನಸುಗಾರ. ತಂದೆ ಕಾಳಿಂಗರಾಯರ ಕೊನೆಗಾಲದಲ್ಲಿ ಅನವರತ ಅವರ ಸೇವೆಯನ್ನು ಪ್ರೀತಿಯಿಂದ ಮಾಡಿದವನು. ಪಾಪ, ನಡುವಯಸ್ಸಿನಲ್ಲೇ ನೆಚ್ಚಿದ್ದ ಎಲ್ಲರನ್ನೂ ಬಿಟ್ಟು ಹೊರಟೇ ಹೋದ, ಆಗಸದತ್ತ. ಅನ್ಯಾಯ.

* * *