ಕಾಳಿಂಗರಾಯರು ಶಾಲೆಯಲ್ಲಿ ಕಲಿತದ್ದು ಬಹುಕಮ್ಮಿ. ರಂಗಮಂದಿರದಲ್ಲಿ ಕಲಿತದ್ದು ಅತಿ ಹೆಚ್ಚು; ಅವರಿವರ ಸ್ನೇಹ ಸಂಪರ್ಕದಿಂದ ಕಲಿತದ್ದು ಅಪಾರ! ಅಲ್ಲದೇ ಅವರು ಬಾಲ್ಯದಲ್ಲಿ ಕಂಠ ಪಾಠ ಕ್ರಮದಿಂದ ಕಲಿತ ಅಮರಕೋಶ, ಲಲಿತಾ ಸಹಸ್ರನಾಮ, ಶಿವಸ್ತುತಿಯ ಶ್ಲೋಕಗಳು, ಇವುಗಳನ್ನು ಗಟ್ಟು ಮಾಡಿಟ್ಟುಕೊಂಡಿದ್ದರು ತಮ್ಮ ಕೊನೆಯ ಉಸಿರಿರುವ ತನಕ. ಈ ಕಾರಣದಿಂದಲೇ ರಾಯರಿಗಿದ್ದುದು ಅಂತಹ ವಾಕ್‌ಶುದ್ಧಿ.

ತಾರುಣ್ಯ ತಲುಪುತ್ತಿದ್ದಂತೆ ಅವರು ಓದಿದ ಕನ್ನಡ ಹಾಗೂ ಇಂಗ್ಲೀಷ್ ಕಾದಂಬರಿಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಕನ್ನಡ ಸಾಹಿತ್ಯದ ಮೇಲೆ ಕಾಳಿಂಗ ರಾಯರಿಗಿದ್ದ ಹಿಡಿತ ಅಸಾಧಾರಣವಾದ್ದು, ಆಶ್ಚರ್ಯಕರವಾದ್ದು! ಸಾಹಿತ್ಯ ಶುದ್ಧಿ ರಾಯರಿಗೆ ಹುಟ್ಟಿನಿಂದಲೆ ಬಂದದ್ದೇನೊ! ಅವರು ಮಾತನಾಡುತ್ತಿದ್ದಾಗ, ಅದಕ್ಕಿಂತ ಕನ್ನಡಗೀತೆಗಳನ್ನು ಹಾಡುತ್ತಿದ್ದಾಗ ಕನ್ನಡದ ಅತಿ ಕ್ಲಿಷ್ಟಪದಗಳೂ ರಾಯರ ನವಿರು ನಾಲಗೆಯ ಮೇಲೆ ನರ್ತಿಸುತ್ತಿದ್ದವು. ಹಾಡುವುದಿರಲಿ, ಓದುವುದೂ ಕಷ್ಟವೆನಿಸಿದ್ದ ಜಿ.ಪಿ. ರಾಜರತ್ನಂರವರ ರತ್ನನ ಪದಗಳನ್ನು ಸರಳವಾಗಿ, ಭಾವಪೂರ್ಣವಾಗಿ, ಕೇಳುಗರ ಹೃನ್ಮನಗಳನ್ನು ಕೊಳ್ಳೆ ಹೊಡೆಯುವ ಧಾಟಿಯಲ್ಲಿ ಹಾಡಬಹುದೆಂಬುದನ್ನು ಮೊಟ್ಟ ಮೊದಲಿಗೆ ತೋರಿಸಿಕೊಟ್ಟವರೇ ಕಾಳಿಂಗರಾಯರು! ಪಂಡಿತರ ವಲಯದಲ್ಲಷ್ಟೇ ಗುರುತಿಸುವಂತಿದ್ದ ಅನೇಕ ಕವಿಗಳ ಕೃತಿಗಳನ್ನು ಪಾಮರರ ಮಟ್ಟದಲ್ಲೂ ರಂಜಿಸುವಂತೆ ಮಾಡಿ ಅವರ ಹೆಸರುಗಳಿಗೆ ನಾಡಿನಾದ್ಯಂತ ಚಾಲನೆಯನ್ನಿತ್ತವರು ಕಾಳಿಂಗರಾಯರು!

ಅದರಲ್ಲೂ ರತ್ನನ ಪದಗಳಾದ ‘ಬ್ರಹ್ಮ ನಿಂಗೆ ಜೋಡಸ್ತೀನಿ ಎಂಡ ಮುಟ್ಟಿದ್ ಕೈನ’, ‘ನೀನ್ನನ್ನಟ್ಟೀಗ್ ಬೆಳ್ಕಂಗಿದ್ದಿ ನಂಜಿ’ ‘ಕುಡ್ಕರ್‌ಮಾತ್ವ ತಿಳ್ಕಳ್ದೇನೆ ಮೂಕ್ಬಾರ್ದವರ್ನ ಕೆಳ್ಗೆ; ಇಂತಹ ಪದ್ಯಗಳನ್ನು ಹಾಡುವಾಗ ರಾಯರು ತನ್ಮಯರಾಗಿಬಿಡುತ್ತಿದ್ದರು. ‘ರತ್ನನ ಪದ’ ಗಳಲ್ಲಿ ಬರುವ ಬಹುತೇಕ ಹಾಡುಗಳನ್ನು ಹಾಡುವ ಅಮಲೇರಿದ ಎಂಡ ಕುಡ್ಕ ರತ್ನನೇ ಆಗಿಬಿಡುತ್ತಿದ್ದರು. ಆಗವರಲ್ಲಿ ಅಂತಹ ತನ್ಮಯತೆ, ತಲ್ಲೀನತೆ, ಭಾವೋದ್ರೇಕ!

ಕಾಳಿಂಗರಾಯರು ಧೂಮಪಾನ ಪ್ರಿಯರು. ಅಷ್ಟೇ ಅಲ್ಲ, ಪನ ಪ್ರಿಯರೂ ಸಹ. ರಾಯರ ಕೈಯಲ್ಲಿ ಹೊತ್ತಿಹೊಗೆಯಾಡುತ್ತಿದ್ದ ಸಿಗರೇಟು ವಿರಮಿಸುತ್ತಿದ್ದುದೇ ಅಪರೂಪಕ್ಕೆ. ಕುಡಿಯಲು ಕೂತಾಗಲಂತೂ ಸಿಗರೇಟು ಸೇವನೆಗೆ ಲೆಕ್ಕವಿಲ್ಲ. ನನಗೆ ತಿಳಿದಿರುವಂತೆ ದಿನಕ್ಕೆ ಸುಮಾರು ಎರಡು ಡಬ್ಬ ‘೫೫೫’ ಸಿಗರೇಟನ್ನು ಸೇದುತ್ತಿದ್ದರು. ಇವಿಲ್ಲದೇ ಕಾಳಿಂಗರಾಯರಿಗೆ ನಿದ್ದೆಯೇ ಬರುತ್ತಿರಲಿಲ್ಲ. ಅವರು ನಿದ್ರಿಸಲು ಹಾಸಿಗೆಯನ್ನೇರುತ್ತಿದ್ದುದು, ಸರಿಸುಮಾರು ರಾತ್ರಿ ಎರಡೂವರೆ ಘಂಟೆಯ ನಂತರ; ಮನೆಯವರೆಲ್ಲರು ಮಲಗಿದರೂ ಇವರು ಮಲಗುತ್ತಿರಲಿಲ್ಲ. ಅವರ ಮುದ್ದಿನ ಫಿಲಿಪ್ಸ್ ರೇಡಿಯೋ ಪಕ್ಕದಲ್ಲಿ ಕುಳಿತು ಅದರ ಬಿರಟೆಗಳನ್ನು ತಿರುಚುತ್ತಾ, ಭಾರತದ ವಿವಿಧ ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದ ಸಂಗೀತ, ಸುದ್ದಿ, ಇತ್ಯಾದಿಗಳನ್ನು ಕೇಳುವುದು. ಇಲ್ಲಿಯ ಎಲ್ಲ ಕೇಂದ್ರಗಳು ರಾತ್ರಿ ಹನ್ನೊಂದರ ನಂತರ ‘ಶುಭರಾತ್ರಿ’ ಹೇಳಿ ತೆಪ್ಪಗಾದ ಮೇಲೆ, ಪರದೇಶಗಳಿಂದ ತೂರಿಬರುತ್ತಿದ್ದ ಪಾಶ್ಚಾತ್ಯ ಸಂಗೀತವನ್ನು ಆಲಿಸಲು ಆರಂಭಿಸುತ್ತಿದ್ದರು. ಅವುಗಳ ಪೈಕಿ ಅರಬ್ಬರ ಸಂಗೀತವೆಂದರೆ ರಾಯರಿಗೆ ಬಹು ಪ್ರಿಯ. ಅಂತೂ ಒಟ್ಟಿನಲ್ಲಿ ಅದೂ ಇದೂ ಕೇಳುತ್ತಾ ರಾತ್ರಿ ಎರಡು ಎರಡೂವರೆಯ ತನಕ ಎದ್ದಿರುತ್ತಿದ್ದರು. ಸಂಗೀತ ಕೇಳುವುದಕ್ಕಷ್ಟೇ ಅವರು ಅಷ್ಟು ಹೊತ್ತು ಎದ್ದಿರುತ್ತಿದ್ದರು ಎಂದರೆ ತಪ್ಪಾದೀತು. ಮುಖ್ಯವಾಗಿ ಅಷ್ಟು ಹೊತ್ತಿನವರೆಗೆ ಅವರು ಎದ್ದಿರುತ್ತಿದ್ದುದು ಸಿಗರೇಟು ಸೇವನೆಗಾಗಿ. ಅವರು ಮಲಗುವುದಕ್ಕೇ ಮುಜುಗರ ಪಡುತ್ತಿದ್ದರು. ಹಾಗೆಯೇ ಅವರು ಬೆಳಿಗ್ಗೆ ಏಳುತ್ತಿದ್ದುದೂ ಹತ್ತು ಹನ್ನೊಂದರ ನಂತರ. ಏಳುತ್ತಿದ್ದಂತೆಯೇ ಬಿಸಿಬಿಸಿ ಕಾಫಿಯನ್ನು ಮನೆಯವರು ಅವರ ಮುಂದೆ ಹಿಡಿಯಬೇಕು.ಅದನ್ನು ರಾಯರು ಚಪ್ಪರಿಸಿ ಗುಟುಕರಿಸುತ್ತಾ ಎರಡು ಮೂರು ಸಿಗರೇಟನ್ನು ಉರುಬುವರು. ನಂತರ ಮತ್ತೊಂದು ಡೋಸ್ ಕಾಫಿ ಹೀರಿ ಒಂದೆರಡು ಸಿಗರೇಟು, ಬೆಂಕಿ ಪೊಟ್ಟಣವನ್ನು ಹಿಡಿದು ಕಕ್ಕಸ್ಸಿನ ಕಡೆ ರಾಯರು ಕಾಲು ಹಾಕುವರು. ಅಲ್ಲಿಂದ ಒಳಬರುತ್ತಿದ್ದಂತೆ ಕಾಫಿಯನ್ನು ಮತ್ತೆ ಹಿಡಿದು ಸ್ವಾಗತಿಸಬೇಕು. ರಾಯರು ದನ್ನು ಹೀರುತ್ತಾ ಹಾಗೇ ಇನ್ನೆರಡು ಸಿಗರೇಟನ್ನು ಸೇದುವರು. ನಂತರ ಮುಖ ಕ್ಷೌರ. ಆಗಲೂ ಪಕ್ಕದಲ್ಲಿ ಕಾಫಿ ಸಿಗರೇಟು ಸಿದ್ಧವಾಗಿರಬೇಕು ನಂತರ ಸ್ವಲ್ಪ ಅದೂ ಇದೂ. ಮಾತು. ಆಮೇಲೆ ಹಂಡೆಯ ಬಿಸಿನೀರಿಗೆ ಒಂದಷ್ಟು ಪಾಶ್ಚಾತ್ಯ ಸುಗಂಧ ದ್ರವ್ಯವನ್ನು ಸುರಿದು ಸ್ನಾನ ಮಾಡಿ, ನಂತರ ಮನೆ ದೇವತೆ ಚಾಮುಂಡಿಗೆ ನಮಸ್ಕಾರ. ಹೊರಬರುತ್ತಿದ್ದಂತೆ ಶುಭ್ರವಾಗಿ ಒಗೆದು ಗರಿಗರಿಯಾಗಿರುತ್ತಿದ್ದ ಸ್ಯಾಂಡೋ ಬನಿಯನ್ ಹಾಗೂ ಚೆಡ್ಡಿಯನ್ನು ಧರಿಸಿ ಕನ್ನಡಿಯ ಮುಂದೆ ನಿಂತು ರಾಯರು ತಮ್ಮ ಅಂಗಸೌಷ್ಠವವನ್ನು ನೋಡಿಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದವರು ಅವರ ಬೈಸೆಪ್ಸನ್ನು ಮುಟ್ಟಿ ಪ್ರಶಂಸಿಸಿ ರಾಯರ ಆರೋಗ್ಯ ಭಾಗ್ಯವನ್ನು ಹೊಗಳಬೇಕು. ಆಗ ರಾಯರಿಗೆ ಎಲ್ಲಿಲ್ಲದಾನಂದ. ಉಬ್ಬಿ ಹೋಗುತ್ತಿದ್ದರು. ಉತ್ತಮ ವ್ಯಾಯಾಮ ಪಟುಗಳಿಗಿರುವ ಅಂಗಸೌಷ್ಠವವಿಲ್ಲದಿದ್ದರೂ ರಾಯರ ಮೈ ಕೈ ಕಾಲುಗಳು ಸೈ ಎಂಬುವಷ್ಟರ ಮಟ್ಟಿಗೆ ಸೊಗಸಾಗಿದ್ದುದೇನೋ ನಿಜ. ಸುಮಾರು ಐದೂವರೆ ಅಡಿಗಳಷ್ಟು ಇದ್ದ ಕಾಳಿಂಗರಾಯರ ದೇಹವರ್ಣ ತಿಳಿಗೆಂಪು. ತೇಜಸ್ಸಿನಿಂದ ಕೂಡಿದ ಮುಖ. ಸದಾ ಏನನ್ನೋ ಹುಡುಕುವಂತಿದ್ದ ತೀಕ್ಷ್ಣವಾದ ದೃಷ್ಟಿ. ನವಿರಾದ ಮೂಗಿನಡಿಯಲ್ಲಿ ನಲಿದಾಡುತ್ತಿದ್ದ ತಳ್ವಾರ್ ಕಟ್ ಮೀಸೆ. ಕಿವಿಗಳ ಕೆಳಮಟ್ಟಕ್ಕೆ ಸರಿಯಾಗಿ ಕತ್ತರಿಸಿದ್ದ ಸೈಡ್ ಲ್ಯಾಕ್‌ಗಳು. ತಲೆಯ ಮೇಲೆ ಅರೆಬರೆ ನರೆತ ಕೂದಲು. ಅದೂ ಎಣಿಸುವಷ್ಟು. ಕಾಳಿಂಗರಾಯರ ಮುಖಮಂಡಲ ಹೀಗಿದ್ದರೂ ಅವರು ಮನ್ಮಥ ಸ್ವರೂಪಿ. ಹತ್ತು ಜನರ ನಡುವೆ ಎದ್ದು ಕಾಣುವ ರೂಪು, ತೇಜಸ್ಸು.

ಇನ್ನು ಉಡುಗೆ ತೊಡಿಗೆ. ಕಾಳಿಂಗರಾಯರು ಶೃಂಗಾರ ಪ್ರಿಯರು. ಸೂಟು, ಬೂಟು, ಟೈ ಕಟ್ಟಿಕೊಂಡು ಮೆರೆದಾಡುವುದೆಂದರೆ ಅವರಿಗೆ ಆಪ್ಯಾಯಮಾನ. ಎಂತಹ ಸುಡು ಬೇಸಿಗೆಯಲ್ಲೂ ಉಲ್ಲನ್ ಸೂಟ್ ಧರಿಸಿ ಓಡಾಡುತ್ತಿದ್ದುದನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಪಂಚೆ, ಪೈಜಾಮ, ಜುಬ್ಬ ತೊಟ್ಟು ರಾಯರು ಮನೆಯಿಂದ ಹೊರಬಂದುದನ್ನು ನನ್ನ ಅವರ ಮೂವತ್ತೈದು ವರ್ಷಗಳ ಸ್ನೇಹ ಸಂಪರ್ಕದ ದಿನಗಳಲ್ಲಿ ಎಂದೂ ಕಂಡಿಲ್ಲ.

ಕಾಳಿಂಗರಾಯರು ಇದ್ದುದೇ ಹಾಗೆ. ಆಗಾಗ ತ.ರಾ.ಸು. ಅವರು ಕಾಳಿಂಗರಾಯರ ಜೊತೆ ಮಾತನಾಡಲು ಅವರ ಮನೆಗೆ ಬರುತ್ತಿದ್ದರು. ರಾಯರ ಠೀವಿ, ಶೃಂಗಾರದ ಸೊಬಗನ್ನು ನೋಡಿ ‘you are a born Prince, I say’ ಎನ್ನುತ್ತಿದ್ದರು. ಆ ಮಾತು ಅಕ್ಷರಶಃ ನಿಜ. ಅವರು ಬದುಕಿದಷ್ಟು ದಿನವೂ ರಾಜಕುಮಾರನಂತೆಯೇ ಬಾಳಿ ಬದುಕಿದರು. ಮಹಾ ಅಚ್ಚುಕಟ್ಟಿನ ಮನುಷ್ಯ. ಬೂಟಿಗೆ ಲೇಸು ಕಟ್ಟುವುದರಿಂದ ಹಿಡಿದು ಟೈ ಕಟ್ಟುವವರೆಗೆ ಎಲ್ಲವನ್ನೂ ತಮಗೆ ತೃಪ್ತಿಯಾಗುವವರೆಗೆ ತಡೆದು, ಅಳೆದು ಶೃಂಗರಿಸಿಕೊಳ್ಳುತ್ತಿದ್ದರು. ಸಂಗೀತ ಕಾರ್ಯಕ್ರಮವಿದ್ದಾಗಲಂತೂ ರಾಯರ ಶೃಂಗಾರದ ಸೊಬಗಿಗೆ ಎಣೆಯೇ ಇರುತ್ತಿರಲಿಲ್ಲ.

ಹೀಗವರು ಸೂಟುಧಾರಿಯಾಗಿ ಓಡಾಡುತ್ತಿದ್ದರೆ, ತಿಳಿದವರನ್ನು ಬಿಟ್ಟು ಉಳಿದವರಿಗೆ ಇವರು ಸಂಗೀತ ವಿದ್ವಾಂಸರು ಎಂಬ ಕಲ್ಪನೆಯೂ ಬರುತ್ತಿರಲಿಲ್ಲ. ರಾಯರನ್ನು ಇಂತಹ ವಸ್ತ್ರವೈಭವದಲ್ಲಿ ಕಂಡಾಗಲೆಲ್ಲಾ ಇವರು ಯಾರೋ ಆಂಗ್ಲಭಾಷಾ ಪ್ರಾಧ್ಯಾಪಕರೊ, ವಿದೇಶದಿಂದ ಬಂದಿರುವ ವೈದ್ಯರೋ, ವಿಜ್ಞಾನಿಯೋ, ಹೀಗೆ ಮತ್ತೇನೋ ಇರಬಹುದೆಂದು ಅನ್ನಿಸುತ್ತಿತ್ತೇ ಹೊರತು, ಖಂಡಿತ ಅವರೊಬ್ಬ ಗಾಯಕ ಶಿಖಾಮಣಿಯೆಂದು ಊಹಿಸಲಾಗುತ್ತಿರಲಿಲ್ಲ!

ಕಾಳಿಂಗರಾಯರು ಹಾಡುವ ಶೈಲಿಯೂ ವಿಶಿಷ್ಟವಾದುದು. ಮಿಕ್ಕ ಸಂಗೀತಗಾರರಂತೆ ಅವರೆಂದೂ ಕುಳಿತು ಹಾಡಿದವರಲ್ಲ. ಯಾವುದೇ ಸಮಾರಂಭವಾಗಲಿ, ಎಂತಹ ವೇದಿಕೆಯೇ ಆಗಲಿ, ರಾಯರು ನಿಂತೇ ಹಾಡುತ್ತಿದ್ದರು. ಸಾಮಾನ್ಯವಾಗಿ ಎರಡು ಘಂಟೆಗಳ ಕಾಲ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿದ್ದುದು ಅವರ ಪದ್ಧತಿ. ಆದರೆ ಜನರ ಒತ್ತಾಸೆಯ ಬೇಡಿಕೆ ಚೀಟಿಗಳಿಗೆ ಮಣಿದು ಇನ್ನೆರಡು ತಾಸು ಹಾಡಿದ ಕಾರ್ಯಕ್ರಮಗಳೇ ಅನೇಕ.

ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಿದ್ದರು. ಕೆಲವು ಬಾರಿ ಆ ಹಾಡಿಗೆ ಅಳವಡಿಸಿರುವ ‘ಮೋಹನ’ ಹಾಗೂ ‘ಬಾಗೇಶ್ವರಿ’ ರಾಗಗಳನ್ನು ಹಲವು ನಿಮಿಷ ಸವಿಸ್ತಾರವಾಗಿ ಆಲಾಪಿಸಿ ನಂತರ ಹಾಡಿನ ನುಡಿಗಳನ್ನು ಹಾಡುತ್ತಿದ್ದುದುಂಟು ಅದು ಮುಗಿಯುತ್ತಿದ್ದಂತೆಯೇ ಸಭಿಕರಿಂದ ಚಪ್ಪಾಳೆಯ ಸುರಿಮಳೆ. ಅದನ್ನು ಕೇಳುತ್ತಿದ್ದಂತೆ ರಾಯರಿಗೆ ರಂಗೇರುತ್ತಿತ್ತು. ಕೋಟನ್ನು ಕಳಚಿ ಧ್ವನಿವರ್ಧಕದ ಹಿಡಿಗೆ ಅದನ್ನು ತೂಗು ಹಾಕಿ, ಟೈಯನ್ನು ಸಡಿಲಗೊಳಿಸಿ, Full cuff ತೋಳನ್ನು ಮೊಣಕೈಯವರೆಗೆ ಮಡಚಿಕೊಳ್ಳುತ್ತಾ, ಮೈಕಿಗೆ ಮುತ್ತಿಡುವಷ್ಟು ಹತ್ತಿರಕ್ಕೆ ಬಾಯನ್ನಿರಿಸಿಕೊಂಡು ‘ಶ್ವಣಂತು ವಿಶ್ವೇ… ಅಮೃತಸ್ಯ ಪ್ರುತಾಃ’ ಎಂಬ ಸಂಸ್ಕೃತ ಶ್ಲೋಕದೊಡನೆ ಆರಂಭಿಸಿ ಅದು ಮುಗಿಯುತ್ತಿದ್ದಂತೆ ತಮ್ಮೆರಡು ಕೈಗಳನ್ನೂ ಭಾವನಾತ್ಮಕ ಭಂಗಿಯಿಂದ ಬೀಸಿ ಮೇಲೆತ್ತಿ ಬೇಂದ್ರೆಯವರ ಗಂಗಾವತರಣದ ‘ಇಳಿದು ಬಾ ತಾಯೆ ಇಳಿದು ಬಾ’ ಗೀತೆಯನ್ನು ಹಾಡಲಾರಂಭಿಸುತ್ತಲೇ ಕೇಳುಗರಿಗೆ ಮೈ ಜುಂ ಎನಿಸುತ್ತಿತ್ತು.

ಈ ದಿಶೆಯಲ್ಲಿ ರಾಯರು ಕೈಚಾಚಿ ಗಂಗೆಯನ್ನೇ ಕರೆಯಲು ನಿಂತಿರುವರೇನೋ ಎಂಬುವಂತಿರುತ್ತಿತ್ತು ಅವರ ನಿಲುವು. ಆ ಹಾಡು ಮುಗಿಯುತ್ತಿದ್ದಂತೆಯೇ ತಡೆಬಡೆಯಿಲ್ಲದೇ ಒಂದರ ಮೇಲೊಂದರಂತೆ ರಾಜರತ್ನಂ, ಗೋಪಾಲಕೃಷ್ಣ ಅಡಿಗ, ಕುವೆಂಪು, ನರಸಿಂಹಸ್ವಾಮಿ ಇತ್ಯಾದಿ ಸವಿಖ್ಯಾತ ಕವಿಗಳ ಕವನಗಳನ್ನು ಹಾಡುವುದರ ಮಧ್ಯೆ ಅಲ್ಲಲ್ಲಿ ದೇವರ ನಾಮಗಳನ್ನೂ, ವಚನಗಳನ್ನೂ ಹಾಡುತ್ತಿದ್ದರು. ಹೀಗೆ ಸುಮಾರು ಒಂದೂವರೆ ಘಂಟೆಗಳ ಕಾಲ ಹಾಡಿ ಪಕ್ಕಕ್ಕೇ ನೋಡುತ್ತಿದ್ದಂತೆ ಅವರ ಜೊತೆ ಗೂಡಿ ಹಾಡಲು ಮೋಹನ್ ಕುಮಾರಿ ಹಾಗೂ ಸೋಹನ್ ಕುಮಾರಿಯವರು ಬಂದು ರಾಯರ ಅಕ್ಕಪಕ್ಕದಲ್ಲಿ ನಿಲ್ಲುತ್ತಿದ್ದರು. ಹಾಗವರು ನಿಲ್ಲುತ್ತಿದ್ದಂತೆ ಕಾಳಿಂಗರಾಯರು ಜಾನಪದ ಗೀತೆಗಳನ್ನು ಹಾಡಲು ಆರಂಭಿಸುತ್ತಿದ್ದರು; ಮತ್ತೆ ಒಂದು ಘಂಟೆಯ ಕಾಲ. ನಂತರ ‘ಒನ್ಸ್‌ಮೋರು’ ಹಾಗೂ ಚೀಟಿಗಳ ಒತ್ತಾಯಕ್ಕೆ ಮಣಿದು ಇನ್ನಷ್ಟು ಹೊತ್ತು ಹಾಡಿ ನಮ್ರತೆಯಿಂದ ಎಲ್ಲರಿಗೂ ಕೈಮುಗಿದು ಕಾರ್ಯಕ್ರಮವನ್ನು ಮುಕ್ತಾಯಗೊಳಿಸುತ್ತಿದ್ದ ಕಾಳಿಂಗರಾಯರ ಟಿಪಿಕಲ್ ಸ್ಟೈಲು ಅವರಿಗೇ ಮೀಸಲು. ಕಾಳಿಂಗರಾಯರಂತೆ ಹಾಡುವುದು ಹಾಗಿರಲಿ, ಅವರನ್ನು ಯಾವುದೇ ರೀತಿಯಲ್ಲಿ ಅನುಕರಿಸುವುದಕ್ಕೂ ಯಾರಿಂದಲೂ ಸಾಧ್ಯವಾಗಿಲ್ಲ, ಈ ತಹಲ್ವರೆವಿಗೆ. ಈ ಮಾತನ್ನು ನಮ್ಮವರೆಲ್ಲಾ ನಮ್ರತೆಯಿಂದ ಒಪ್ಪಿಕೊಳ್ಳಲೇಬೇಕು.

* * *