ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದ ಹಿಂಭಾಗದ ರಸ್ತೆಯಲ್ಲಿ ಒಂದು ವಠಾರ. ಆ ವಠಾರದ ಎಡಬಲದಲ್ಲಿ ಎರಡೆರಡು ಸಣ್ಣ ಹೆಂಚಿನ ಮನೆಗಳು. ಇವುಗಳ ಮಧ್ಯೆ ಹಿಂಭಾಗಕ್ಕೆ ಒಂದು ಸಣ್ಣ ಮನೆ. ಮರದ ಜಾಲರಿಯ ಮಧ್ಯೆ ಇದ್ದ ಮುಂಬಾಗಿಲನ್ನು ತೆರೆದೊಡನೆ ಕಾಣುತ್ತಿದ್ದುದು ಒಂದು ಸಣ್ಣ ವರಾಂಡಾ. ಅಲ್ಲಿ ಗೋಡೆಗೆ ಒರಗಿರುತ್ತಿದ್ದ imported model ಬೈಸಿಕಲ್ಲು. ಇದನ್ನು ಕಾಳಿಂಗರಾಯರು ಹಾಗೂ ಅವರ ಶಿಷ್ಯ ರಾಮನಾಥ್‌ಉಪಯೋಗಿಸುತ್ತಿದ್ದರು. ಆ ವರಾಂಡಾ ಎಡಪಕ್ಕಕ್ಕೆ ಒಂದು ‘೧೦ x ೧೦’ ಅಡಿ ವಿಸ್ತಾರದ ಕೊಠಡಿ. ಅದರೊಳಗೆ ಬಾಗಿಲ ಪಕ್ಕಕ್ಕೆ ಇರಿಸಿದ್ದ ಟೇಬಲ್ಲು. ಮತ್ತದರ ಮೇಲೊಂದು ಪುರಾತನ ಕಾಲದ ಫಿಲಿಪ್ಸ್ ರೇಡಿಯೋ. ಆ ರೇಡಿಯೋ ಮೇಲೆ ಆರೇಳು ಇಂಚು ಎತ್ತರದ, ವಿಶಿಷ್ಟ ಭಂಗಿಯಲ್ಲಿ ನಿಂತಿರುವ ಕೈಲಾಸಂರ ವಿಗ್ರಹ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ್ದು – ಆರ್.ಎಸ್. ನಾಯ್ಡು ಅವರಿಂದ. ಈ ಆರ್. ಎಸ್. ನಾಯ್ಡು ವಿಶ್ವವಿಶ್ಯಾತಿಯನ್ನು ಪಡೆದಿದ್ದ ಶಿಲ್ಪಿ. ಶುಭ್ರವಾದ ನಿಕ್ಕರ್, Close neck ಬನಿಯನ್, ಅವರು ಸದಾಕಾಲ ತೊಡುತ್ತಿದ್ದ ಉಡುಪು. ಶೃಂಗಾರ ಶೇಖರರಾಯರಿಗೆ ಆತ ತದ್ವಿರುದ್ಧ. ಅವರಿಂದ ಇವರಿಗೆ ಈ ಕೊಡುಗೆ. ಆ ಕೈಲಾಸಂರ ವಿಗ್ರಹದ ಪಕ್ಕಕ್ಕೆ ಪ್ರಖ್ಯಾತ ಚಲನಚಿತ್ರ ನಟ, ದಿಗ್ದರ್ಶಕ, ನಿರ್ಮಾಪಕ ರಾಜ್‌ಕಪೂರ್‌ರವರು ಕಾಳಿಂಗರಾಯರ ಕೈಕುಲುಕುತ್ತ ಇರುವ ಫೋಟೋ. ಆ ಟೇಬಲ್ ಪಕ್ಕಕ್ಕೆ ಒಂದು ಮರದ ಕುರ್ಚಿ. ಅದರೆದುರು ಐದಾರು ಮೋಡಾಗಳು. ಎಲ್ಲದರ ಮೇಲೂ ಹತ್ತಿಯ ಮೆತ್ತನೆ. ಯಾರೇ ಬರಲಿ, ಎಂಥವರೇ ಬರಲಿ ಅವರು ಕೂರಬೇಕಾದದ್ದು ಈ ಮೋಡಾಗಳ ಮೇಲೆಯೇ. ಇನ್ನೂ ಹೆಚ್ಚು ಜನ ಬಂದಾಗ ಚಾಪೆ ಹಾಸುತ್ತಿದ್ದರು. ಕಾಳಿಂಗರಾಯರು ಮಾತ್ರ ಮನೆಯಲ್ಲಿದ್ದಾಗ ಬಹುಪಾಲು ಕಾಲ ಆ ಕುರ್ಚಿಯಲ್ಲಿ ಆಸೀನರಾಗಿರುತ್ತಿದ್ದರು. ಅದೇ ಅವರ ಸಿಂಹಾಸನ. ಅದರಲ್ಲಿ ಕೂತು ಚಿಟಿಕೆ ಹೊಡೆಯುತ್ತಾ ಸಿಗರೇಟು ಸೇದುವುದೆಂದರೆ ರಾಯರಿಗೆ ಆಪ್ಯಾಯಮಾನ. ರಾಯರಿದ್ದ ವಠಾರದ ಬಗ್ಗೆ ಇನ್ನಷ್ಟು ಮಾತು :

– ಆ ವಠಾರದಲ್ಲಿದ್ದವರೇ ರಾಯರ ಪ್ರಜಾವರ್ಗ. ಮತ್ತೆ ಅದರ ಸುತ್ತಲಿದ್ದ ಎತ್ತರದ ಗೋಡೆಗಳೇ ರಾಯರಿಗೆ ಬಲಭದ್ರ ಕೋಟೆ –  ಆ ವಠಾರ ದಲ್ಲಿದ್ದವರೆಲ್ಲ ಮಧ್ಯಮ ವರ್ಗದ ಜನ. ಅವರಿಗೆ ಈ ನಾಡಿನಾದ್ಯಂತ, ದೇಶದಾದ್ಯಂತ ಖ್ಯಾತಿವೆತ್ತು ಕಂಗೊಳಿಸುತ್ತಿದ್ದ ಕಾಳಿಂಗ ರಾಯರು ತಮ್ಮೊಡನೆ ತಮ್ಮ ವಠಾರದಲ್ಲಿದ್ದುದು ಹೆಗ್ಗಳಿಕೆ, ಹೆಮ್ಮೆಯ ವಿಷಯ. ರಾಯರೆಂದರೆ ಅವರಿಗೆಲ್ಲ ಪಂಚಪ್ರಾಣ. ರಾಯರೇ ಅವರೆಲ್ಲರಿಗೂ ರಾಜ, ಮಹಾರಾಜ, ಏನೆಲ್ಲ.

ಇನ್ನು ವರಾಂಡದ ಒಳಪಕ್ಕಕ್ಕೆ ಒಂದು ಸಣ್ಣ ಹಜಾರ, ಅಲ್ಲೊಂದು ಮಂಚ. ಅದು ಒಬ್ಬರಿಗಷ್ಟೇ ಆಗುವಂಥಾದ್ದು. ಅರ್ಥಾತ್‌single cotಉ, ರಾಯರಿಗಷ್ಟೇ ಮೀಸಲು. ಅದೇ ಕಾಳಿಂಗರಾಯರ ಹಂಸ ತೂಲಿಕಾತಲ್ಪ. ಆ ಹಜಾರದ ಮಿಕ್ಕೆಲ್ಲ ಜಾಗ ಖಾಲಿ. ಹಜಾರಕ್ಕೆ ಅಂಟಿಕೊಂಡಂತೆ ಪುಟ್ಟದೊಂದು ಅಡಿಗೆ ಮನೆ. ಅದರೊಳಗೆ ಮೂಲೆಯಲ್ಲಿ ಸಣ್ಣದಾದ ಬಚ್ಚಲುಮನೆ. ಇದ್ದೊಂದು ಕಿಟಕಿ, ಎರಡು ಬಾಗಿಲುಗಳಿಗೆ ತೆಳುಬಟ್ಟೆಯ ಪರದೆ. ಇದೇ ಕಾಳಿಂಗರಾಯರು ಅನೇಕ ವರ್ಷ ಆರೋಗ್ಯಭಾಗ್ಯವನ್ನು ಅನುಭವಿಸುತ್ತಾ ಆನಂದದಿಂದ ಬದುಕಿ ಬಾಳಿದ ಮನೆ. ಹೀಗಿದ್ದ ರಾಯರ ಮನೆ ಚಿಕ್ಕದಾಗಿದ್ದರೂ ಚೊಕ್ಕವಾಗಿರುತ್ತಿತ್ತು. ಮನೆ ಹೇಗೇ ಇರಲಿ ಅದನ್ನು ಓರಣವಾಗಿಡುವುದನ್ನು ನಮ್ಮ ಗೃಹಿಣಿಯರನೇಕರು ಮೋಹನ್ ಸೋಹನ್‌ರಿಂದ ಕಲಿಯಬೇಕು. ಅವರ ಮನೆಯಲ್ಲೆಲ್ಲ ಕಣ್ಣಾಡಿಸಿದರೂ ಕೊಳೆ ಬಟ್ಟೆಗಳಾಗಲೀ ಕಸಕಡ್ಡಿಗಳಾಗಲೀ ಎಲ್ಲೂ ಕಾಣಿಸುತ್ತಿರಲಿಲ್ಲ. ಮನೆ ಸದಾಕಾಲ ಶುಭ್ರವಾಗಿರುತ್ತಿತ್ತು. ಇಷ್ಟಾಗಿ ರಾಯರ ಮನೆಯಲ್ಲಿ ಗೋಡೆ ಕಪಾಟುಗಳಾಗಲೀ, ಆಲ್‌ಮೇರಾಗಳಾಗಲೀ ಇರಲಿಲ್ಲ. ಆದರೆ ಮನೆಯಲ್ಲಿದ್ದ ಐದಾರು ಮಂದಿ ತಮ್ಮ ಬಟ್ಟೆಬರೆಗಳನ್ನು ಇತರರಿಗೆ ಕಾಣಿಸದಂತೆ ಅದೆಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರೋ ಆ ದೇವರೇ ಬಲ್ಲ. ಇಷ್ಟೆಲ್ಲಾ ಇದ್ದೂ ನಮ್ಮವರಲ್ಲಿ ಬಹುತೇಕ ಮಂದಿಯ ಮನೆಗಳು ಅಪರೂಪಕ್ಕೆ ಒಪ್ಪವಾಗಿರುತ್ತವೆ. ಮನೆಯನ್ನು ಅಂದವಾಗಿಡುವುದೂ ಒಂದು ವಿಶಿಷ್ಟವಾದ ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡಿದ್ದವರು ಸೋಹನ್, ಮೋಹನ್.

ರಾಯರ ಮನೆಯ ಈ ಹೆಂಗಸರು ಸದಾಕಾಲವೂ ಶುಚಿರ್ಭೂತ ರಾಗಿರುತ್ತಿದ್ದುದು ಅಚ್ಚರಿಯ ಸಂಗತಿ. ಕಾರ್ಯಕ್ರಮವಿರಲಿ ಬಿಡಲಿ, ಮುಂಜಾನೆ ಏಳೆಂಟು ಗಂಟೆಯ ಹೊತ್ತಿಗೆ ಮನೆ ಕೆಲಸವನ್ನೆಲ್ಲಾ ಮುಗಿಸಿ ಅಲಂಕರಿಸಿ ಕೊಂಡು ಮನೆಯಲ್ಲಿರುತ್ತಿದ್ದರು. ಅಲಂಕಾರವೂ ಅಷ್ಟೇ. ಈ ಸೋಹನ್‌ಮೋಹನ್‌ರ ಆಕೃತಿ, ಉಡಿಗೆ ತೊಡಿಗೆ, ಅಲಂಕಾರ ಇವೆಲ್ಲ ಏಕರೀತಿ, ಅವಳಿ ಜವಳಿಗಳಂತೆ. ವ್ಯತ್ಯಾಸವಿಷ್ಟೆ, ಮೋಹನ್‌ಕುಮಾರಿಯ ಮುಖ, ಮುದ್ದು ಮುಖ, ಬಲು ಆಕರ್ಷಕ. ಅದೇ ಸೋಹನ್‌ಕುಮಾರಿಯವರ ಮುಖದಲ್ಲಿ ಆ ನುಣುಪು ನವಿರು ಇರಲಿಲ್ಲ ಅಷ್ಟೇ. ಅವರ ಮನೆಯಲ್ಲಿ ಸೋಂಬೇರಿಯಾಗಿ ಅಸ್ತವ್ಯಸ್ತವಾಗಿ ಇರ್ತುದ್ದುದು ಕಾಳಿಂಗರಾಯರೇ. ಮನೆಯವರ ಪಾಲಿಗೆ ರಾಯರೇ ಒಂದು ತುಂಟ ಮಗುವಿದ್ದಂತೆ. ಬಹಳ ಹೊತ್ತು ಮಲಗುತ್ತಿದ್ದ ರಾಯರನ್ನು ಬೆಳಿಗ್ಗೆ ಎಬ್ಬಿಸುವುದೇ ಭಗೀರಥ ಪ್ರಯತ್ನವೆಂಬಂತಾಗುತ್ತಿತ್ತು, ಇವರಿಗೆ. ಬೆಳಿಗ್ಗೆ ಹತ್ತು ಹನ್ನೊಂದಾದರೂ ರಾಯರು ಏಳುತ್ತಿರಲಿಲ್ಲ. ಅವರನ್ನೆಬ್ಬಿಸುವ ಕಾರ್ಯವನ್ನು ರಾಜೇಶ್ವರಿಯವರು ಹಾಗೂ ಮೋಹನ್ ಬೆಳಿಗ್ಗೆ ಒಂಬತ್ತರಿಂದಲೇ ಆರಂಭಿಸುತ್ತಿದ್ದರು. ಈ ಕುಂಭಕರ್ಣನನ್ನು ಎಬ್ಬಿಸಿ ಅವರು ಸಫಲರಾಗುತ್ತಿದ್ದುದು ಹತ್ತು – ಹನ್ನೊಂದರ ಹೊತ್ತಿಗೆ.

ಸೂರ್ಯದೇವ ನೆತ್ತಿಯ ಮೇಲೆ ಬರುವ ಹೊತ್ತಿಗೆ ಎದ್ದು ಮೈಮುರಿದು ಆಕಳಿಸುತ್ತಿದ್ದ ಈ ಸೂರ್ಯವಂಶಿ ಒಂದು ಡೋಸ್ ಬಿಸಿಬಿಸಿ ಕಾಫಿ ಕುಡಿದು, ಒಂದು ಸಿಗರೇಟನ್ನು ಸೇದಿ ಮತ್ತೆ ಜೋರಾಗಿ ಆಕಳಿಸಿ, ನಂತರ ಮೈಮುಚ್ಚ ರಗ್ಗು ಹೊದ್ದು ಮಗುವಿನಂತೆ ಮುದುಡಿಕೊಂಡು ಮತ್ತಷ್ಟು ಹೊತ್ತು ಮಲಗುತ್ತಿದ್ದುದು ಇವರ ಮಾಮೂಲು.

ಇನ್ನು ರಾಯರ ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆ ಕೆಲವು ಮಾತು :

ಬಹು ಬೇಡಿಕೆಯಿದ್ದ ದಿನಗಳಲ್ಲಿ, ಬೇಡವೆಂದೂ ಬಂದು ಮುಂದೆ ಸುರಿಯುವ ಹಣದ ರಾಶಿಯಲ್ಲಿ, ಕಾಲುಪಾಲನ್ನಾದರೂ ಕೂಡಿಟ್ಟು ದೂರದ ದುರ್ದಿನಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಜಾಣ್ಮೆಯಿಂದ ಕಾಲ ತಳ್ಳಿ ಕೃತಾರ್ಥರಾಗುವ ಕಲಾವಿದರು ನಮ್ಮಲ್ಲಿ ಬಹು ವಿರಳ. ಕಲಿಯುಗದ ಕರ್ಣ, ಕೊಡುಗೈ ದೊರೆ ಎಂದೆಲ್ಲಾ ಎನಿಸಿಕೊಂಡಿದ್ದ ನಾಟಕ ಶಿರೋಮಣಿ ವರದಾಚಾರ್ಯರು ಅಂದಿನ ದಿನಗಳಲ್ಲೆ, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದರು. ಅವರಾಗ ಮಾಡಿದ ದಾನ ಧರ್ಮಕ್ಕೆ ಲೆಕ್ಕವಿಲ್ಲ. ಬೇಡಿ ಬಂದವರಾರನ್ನೂ ಅವರು ಬರಿಗೈಯಲ್ಲಿ ಕಳುಹಿಸಲಿಲ್ಲ. ಆದರೆ ಆಚಾರ್ಯರು ಕೊನೆಯುಸಿರೆಳೆದಾಗ, ಅವರ ಹಾಸಿಗೆಯ ದಿಂಬಿನಡಿ ಸಿಕ್ಕಿದ್ದು ಮೂವತ್ಮೂರು ರೂಪಾಯಿ. ಅದೂ ಅವರ ಅಭಿಮಾನಿಯೊಬ್ಬರು ಧರ್ಮಾರ್ಥವಾಗಿ ಕೊಟ್ಟದ್ದು. ಕೈಲಾಸಂ ಸತ್ತಾಗ ಅವರ ಜೇಬಿನಲ್ಲಿದ್ದದ್ದು ಒಂದು ರೂಪಾಯಿ ಹನ್ನೆರಡಾಣೆಯಂತೆ. ಅಂತರರಾಷ್ಟ್ರೀಯ ಖ್ಯಾತಿವೆತ್ತು ಉದಯಶಂಕರ್‌ಕಲ್ಕತ್ತದಲ್ಲಿ ಬೀದಿ ಪಾಲಾಗುವ ಸ್ಥಿತಿಗಿಳಿದರು. ಪ್ರಖ್ಯಾತ ಕಲಾವಿದ ಕೆ. ಹಿರಣ್ಣಯ್ಯ ಮಡಿಕೇರಿಯಲ್ಲಿ ಸತ್ತಾಗ ಅವರ ಶವಸಂಸ್ಕಾರಕ್ಕೂ ಹಣವಿಲ್ಲದೆ ಅಲ್ಲಿಯ ಪ್ರೈಮರಿ ಸ್ಕೂಲಿನ ಕನ್ನಡ ಪಂಡಿತರು ಆ ಕೆಲಸವನ್ನ ನೆರವೇರಿಸಬೇಕಾಯಿತಂತೆ. ಬಹುತೇಕ ಮಂದಿ ಕಲಾವಿದರ ಬದುಕು ಬವಣೆ ಹೀಗೆಯೇ. ಕಾಳಿಂಗರಾಯರೂ ಸಹ ಇವರುಗಳಂತೆಯೇ. ತಮ್ಮ ಕೊನೆಗಾಲದ ದಿನಗಳಲ್ಲಿ ಆರ್ಥಿಕವಾಗಿ ಬಳಲಿ ಬೆಂಡಾಗಿದ್ದರು. ಆದರೆ ಹಿಂದೆ? ಅಂದಿನ ದಿನಗಳಲ್ಲಿ, ಅಂದರೆ ಐವತ್ತರ ದಶಕದಲ್ಲಿ ಸುಮಾರು ಒಂದು ಸಾವಿರ ಸಂಭಾವನೆಯನ್ನು ರಾಯರು ಪಡೆಯುತ್ತಿದ್ದರು ಎಂದರೆ ಅವರು ಯಾವ ಮಟ್ಟದ ಕಲಾವಿದರಾಗಿದ್ದರೆಂಬುದನ್ನು ಓದುಗರು ಊಹಿಸಿಕೊಳ್ಳಬಹುದು. ೧೯೬೫ರ ನಂತರ ಒಂದೂವರೆ ಸಾವಿರ ರೂ. ಸಂಭಾವನೆಯನ್ನು ರಾಯರು ಪಡೆಯುತ್ತಿದ್ದುದನ್ನು ನಾನೇ ಒಮ್ಮೆ ರಾಯರ ಜೊತೆಯಿದ್ದು ಕಂಡಿದ್ದೇನೆ. ತಿಂಗಳಿಗೆ ಏನಿಲ್ಲವೆಂದರೂ ಸಾಕಷ್ಟು ಕಾರ್ಯಕ್ರಮಗಳನ್ನು ರಾಯರು ಕೊಡುತ್ತಿದ್ದರು. ಇದಲ್ಲದೆ ಮೈಸೂರು, ಧಾರವಾಡ, ಮದ್ರಾಸು ಬಾನುಲಿ ಕಾರ್ಯಕ್ರಮಗಳು. ಜೊತೆಗೆ ಅವರ ಧ್ವನಿ ಮುದ್ರಿಕೆ ಕಾರ್ಯ. ಮತ್ತೆ ಚಲನಚಿತ್ರಗಳಲ್ಲಿ ಆಗೀಗ ಎಂಬಂತೆ ಸಂಗೀತ ನಿರ್ದೇಶಕನ ಕೆಲಸ. ಅಲ್ಲದೆ ಆಗಾಗ ಅವರೇ ನೀಡುತ್ತಿದ್ದ ಸಂಗೀತ ಸಂಜೆ ಕಾರ್ಯಕ್ರಮಗಳು. ಹೀಗೆ ರಾಯರ ವರಮಾನಕ್ಕೆ ಆ ದಿನಗಳಲ್ಲಿ ಇತಿಮಿತಿ ಎಂಬುದಿರಲಿಲ್ಲ. ಅಲ್ಲದೆ ಹಣ ಸಂಪಾದಿಸುವುದರಲ್ಲಿ ಕಾಳಿಂಗರಾಯರಿಗೆ ಅದೆಷ್ಟರ ಮಟ್ಟಿನ ಆತ್ಮವಿಶ್ವಾಸ, ಅಹಂ ಇತ್ತೆಂದರೆ ಅವರದೆಷ್ಟೋ ಬಾರಿ ನನ್ನ ರಟ್ಟೆ ಹಿಡಿದು “ನೋಡಯ್ಯ ಕೇಶವರಾಯ…. ಈ ಕಾಳಿಂಗರಾಯ ಒದ್ಕಡೆ ಕರೆನ್ಸಿ ಕಂಡ್ಬರುತ್ತಯ್ಯ” ಎಂದು ತಮ್ಮ ಬೂಟುಕಾಲಿನಿಂದ ಭೂಮಿಯನ್ನು ಒದ್ದು ತೋರುತ್ತಿದ್ದರು. ಇದು ಉತ್ಪ್ರೇಕ್ಷೆಯ ಮಾತಲ್ಲ. ನಿಂತಲ್ಲೇ ನೆಲ ಬಗೆದು ಹಣ ಹೆಕ್ಕುವ ಕಲೆಯನ್ನು ಕಾಳಿಂಗರಾಯರು ಕರಗತ ಮಾಡಿಕೊಂಡಿದ್ದರು. ಆದ್ರೆ ಪ್ರಯೋಜನವೇನು? ಹುಚ್ಚು ಹೊಳೆಯಂತೆ ಹರಿದುಬರುತ್ತಿದ್ದ ಹಣವನ್ನು ಹುಚ್ಚು ಹುಚ್ಚಾಗಿಯೇ ಖರ್ಚು ಮಾಡುತ್ತಿದ್ದರು. ಇವರ ಹಣವನ್ನ ಹರಿದು ಮುಕ್ಕಲು ಸದಾಕಾಲ ಸಿದ್ಧವಿರುತ್ತಿತ್ತು ಗೆಳೆಯರ ಗುಂಪು, ಇವರನ್ನು ಸುತ್ತುವರೆದು. ಬಂದ ಭಾಗ್ಯದ ಬಹುಭಾಗವನ್ನು ಅಂತಹ ಹೊಗಳು ಭಟ್ಟರ ಬಾಯಿಗೇ ಸುರಿದು ಸುರಿದು, ಕೊನೆಗಾಲಕ್ಕೆ ಬರಿಗೈ ದಾಸನಂತಾಗಿ ಬಿಟ್ಟರಲ್ಲಾ! ಇದೆಂತಹ ವೈಫಲ್ಯ? ಮತ್ತಿದೆಂತಹ ದುರಂತ?

* * *