೧೯೪೧, ‘ಸಂಗೀತ ಸಾಮ್ರಾಜ್ಯ ನಾಟಕ ಮಂಡಳಿ’ ಯ ಸುಬ್ಬಯ್ಯ ನಾಯ್ಡು ಹಾಗೂ ಆರ್. ನಾಗೇಂದ್ರರಾಯರು ಶೂದ್ರಕ ಮಹಾಕವಿಯ ‘ವಸಂತಸೇನಾ’ (ಮ್ಯಚ್ಛಕಟಿಕ) ನಾಟಕದ ಚಲನಚಿತ್ರ ರೂಪವನ್ನು ತೆಗೆಯಲು ನಿರ್ಧರಿಸಿದರು. ಈ ಮೊದಲು ವಸಂತಸೇನಾ ಚಿತ್ರವನ್ನು ಭವನಾನಿಯವರು (ಏಣಾಕ್ಷಿ ರಾಮರಾವ್) ಮೂಕಿ ರೂಪದಲ್ಲಿ ೧೯೩೮ ರಲ್ಲಿ ತಯಾರಿಸಿದ್ದು ಅದರಲ್ಲಿ ಕೈಲಾಸಂ, ಬಿ.ಎಸ್. ರಾಮರಾವ್, ಕೆ.ವಿ. ಅಯ್ಯರ್ ಮುಂತಾದವರೆಲ್ಲಾ ಭಾಗವಹಿಸಿದ್ದು. ಕೈಲಾಸಂರ ಶಕಾರನ ಪಾತ್ರ ಬಹುಮೆಚ್ಚಿಗೆಯನ್ನು ಪಡೆದಿತ್ತು. ಈಗಲೂ ತಾವು ತಯಾರಿಸುತ್ತಿರುವ ವಸಂತಸೇನಾ ಚಿತ್ರದಲ್ಲಿ ಶಕಾರನ ಪಾತ್ರವನ್ನು ನೀವೇ ಮಾಡಬೇಕೆಂದು ಕೈಲಾಸಂರ ಶಿಷ್ಯರಾಗಿದ್ದ ಆರ್. ನಾಗೇಂದ್ರರಾಯರು ಕೈಲಾಸಂರನ್ನು ಬಹುವಾಗಿ ಪ್ರಾರ್ಥಿಸಿದರಂತೆ. ಆದರೆ ಮೂಲವ್ಯಾಧಿಯಿಂದ ನರಳುತ್ತಿದ್ದ ಕೈಲಾಸಂ ಇದಕ್ಕೊಪ್ಪಲಿಲ್ಲ. ಬದಲಿಗೆ ನಾಗೇಂದ್ರರಾಯರೇ ಆ ಪಾತ್ರವನ್ನು ಮಾಡಬೇಕೆಂದು ಹೇಳಿ ಅವರನ್ನು ಒಪ್ಪಿಸಿದರಂತೆ. ನಾಗೇಂದ್ರರಾಯರು ಮಾಡಿದ ಆ ಶಕಾರನ ಪಾತ್ರವೂ ಬಹುಜನಪ್ರಿಯತೆಯನ್ನು ಗಳಿಸಿತು.

ಅಲ್ಲದೆ ವಸಂತಸೇನಾ ಚಿತ್ರಕ್ಕೆ ಕಾಳಿಂಗರಾಯರು ಸಂಗೀತ ನಿರ್ದೇಶನ ಮಾಡಿದ್ದೇ ಅಲ್ಲದೆ ಆ ಚಿತ್ರದಲ್ಲಿ ಬೌದ್ಧಭಿಕ್ಷುವಿನ ಪಾತ್ರವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಚಿತ್ರದ ಹಾಡುಗಳೆಲ್ಲಾ ಬಹು ಜನಪ್ರಿಯವಾಯಿತಲ್ಲದೆ ಇಂದಿಗೂ ಅದರ ಹಾಡುಗಳು ಕೇಳಲು ಹಿತವೆನ್ನಿಸುತ್ತವೆ. ಅಂತಹ ಸರಳವಾದ, ಇಂಪಾದ ಮಟ್ಟುಗಳನ್ನು ರಾಯರು ಈ ಚಿತ್ರದ ಗೀತೆಗಳಿಗೆ ಅಳವಡಿಸಿದ್ದಾರೆ.

ವಸಂತ ಸೇನಾ ಚಿತ್ರದ ಹಾಡುಗಳನ್ನು ಜನಪ್ರಿಯವಾಗುತ್ತಿದ್ದಂತೆ ಮೈಸೂರಿನ ನವಜ್ಯೋತಿ ಸ್ಟುಡಿಯೋ ಮಾಲೀಕ ರಮಯ್ಯನವರಿಂದ ಕಾಳಿಂಗರಾಯರಿಗೆ ಕರೆ ಬಂತು. ಕಾಳಿಂಗರಾಯರು ಮದರಾಸನ್ನು ಬಿಟ್ಟು ಮೈಸೂರಿನಲ್ಲಿ ನೆಲೆಸಲು ಚಿತ್ರ ನಿರ್ದೇಶಕ ಎಚ್.ಎಸ್. ಕೃಷ್ಣಸ್ವಾಮಿ, ಅ.ನ.ಕೃ. ಹಾಗೂ ರಾಮಯ್ಯನವರೇ ಕಾರಣ. ರಾಮಯ್ಯನವರು ತಮ್ಮ ನವಜ್ಯೋತಿ ಸ್ಟುಡಿಯೋವಿನಲ್ಲಿ ‘ಶ್ರೀಕೃಷ್ಣ ಲೀಲಾ’ ಎಂಬ ಕನ್ನಡ ಚಿತ್ರವನ್ನು ತೆಗೆಯುತ್ತಿದ್ದರು. ಅದರಲ್ಲಿರುವ ಕೆಲವು ಹಾಡುಗಳನ್ನು ಕಾಳಿಂಗರಾವ್ ಹಾಗೂ ಮೋಹನ್‌ಕುಮಾರಿಯವರು ಹಾಡಿರುವುದಲ್ಲದೆ ರಾಯರದ್ದೇ ಸಂಗೀತ ನಿರ್ದೇಶನ. ನಂತರ ಶಂಕರ್‌ಸಿಂಗ್‌ರವರು ತಯಾರಿಸಿದ ‘ಬ್ಲ್ಯಾಕ್ ಮಾರ್ಕೆಟ್’ ‘ಭಕ್ತ ರಾಮದಾಸ್’, ‘ಮಹಾಶಿಲ್ಪಿ’ ಚಿತ್ರದ ಸಂಗೀತವೂ ಕಾಳಿಂಗರಾಯರದ್ದೆ. ಈ ಕೆಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಿಸುವುದರ ಜೊತೆಗೆ ತಾವೇ ಕೆಲವು ಗೀತೆಗಳನ್ನು ಹಾಡಿದ್ದಾರೆ.

’ಭಕ್ತ ರಾಮದಾಸ್’ ಚಿತ್ರಕ್ಕೆ ರಾಯರು ಸಂಗೀತ ನಿರ್ದೇಶಿಸುತ್ತಿದ್ದಾಗ ಒಂದು ವಿಚಿತ್ರ ಪ್ರಸಂಗ ನಡೆಯಿತಂತೆ. ಕಾಳಿಂಗರಾಯರು ನವಜ್ಯೋತಿ ಸ್ಟುಡಿಯೋದಲ್ಲಿ ಯಾರೊಡನೆಯೋ ಮಾತನಾಡುತ್ತಾ ಕುಳಿತಿದ್ದರಂತೆ. ಆ ವೇಳೆಗೆ ಸ್ಟುಡಿಯೋದ ಹೊರ ಬಾಗಿಲ ಬಳಿ ಭಿಕ್ಷುಕಿಯೊಬ್ಬಳು ಹಾಡುತ್ತಾ ಬಂದಳು. ಆಕೆ ಮುಸಲ್ಮಾನರವಳು. ಪುಟ್ಟ ಹುಡುಗಿ. ಎತ್ತರದ ಧ್ವನಿಯಲ್ಲಿ ಆಕೆ ಹಾಡುತ್ತಿದ್ದ ಹಿಂದಿಯ ಹಾಡು ಕಾಳಿಂಗರಾಯರ ಕಿವಿಗೆ ಬೀಳುತ್ತಿದ್ದಂತೆ ರಾಯರ ಕಿವಿ ಚುರುಕಾಯಿತು. ಆಕೆಯನ್ನು ಒಳಕ್ಕೆ ಕರೆದು ಮತ್ತೆ ಒಂದೆರಡು ಹಾಡುಗಳನ್ನು ಹೇಳಿಸಿದರು. ಇದನ್ನೆಲ್ಲ ನೋಡುತ್ತಿದ್ದ ಶಂಕರ್‌ಸಿಂಗ್‌ರವರಿಗೆ ಎಲ್ಲಿಲ್ಲದ ಆಶ್ಚರ್ಯ ಹಾಗೂ ಕುತೂಹಲ.

ಹೀಗೆ ಆ ಭಿಕ್ಷುಕಿ ಒಂದೆರಡು ಹಾಡುಗಳನ್ನು ಹಾಡಿದ ಮೇಲೆ ಕಾಳಿಂಗರಾಯರು ಚಪ್ಪಾಳೆ ತಟ್ಟಿ “This street singer is god sent, I will use her as playback signer in this picture’ ಎಂದವರೇ ಏನು ಅರ್ಥವಾಗದೆ ಕಣ್ಣು ಕಣ್ಣು ಬಿಡುತ್ತ ನಿಂತಿದ್ದ ಆ ಹೆಣ್ಣಿಗೆ ಕೂಡಲೇ ತನ್ನ ಮನೆಯವರನ್ನು ಕರೆದುಕೊಂಡು ಬರಬೇಕೆಂದೂ, ಮಿಕ್ಕ ವಿಷಯವನ್ನು ತಾವು ಅವರೊಡನೆ ಮಾತನಾಡುವುದಾಗಿಯೂ ತಿಳಿಸಿ ಕಳಿಸಿದರು. ಕಾಳಿಂಗ ರಾಯರು, ಮೊದಲಿನಿಂದಲೂ ಪ್ರಯೋಗ ಪ್ರಿಯರೆಂಬುದು ಶಂಕರ್‌ಸಿಂಗ್‌ರವರಿಗೆ ತಿಳಿದಿತ್ತು. ಹೆಚ್ಚೇನೂ ಮಾತನಾಡದೆ ‘OK Rao, go ahead’ ಎಂದು ಒಪ್ಪಿಗೆಯನ್ನಿತ್ತರು. ನಂತರ ತನ್ನ ತಂದೆಯೊಡನೆ ಬಂದ ಆ ಭಿಕ್ಷುಕಿಯನ್ನು ಸ್ಟುಡಿಯೋದಲ್ಲೇ ಒಂದೆರಡು ದಿನ ಇರುವಂತೆ ಒಪ್ಪಿಸಿ, ‘ರಾಮದಾಸ್’ ಚಿತ್ರದ ಒಂದು ಸನ್ನಿವೇಶಕ್ಕೆ ಬರೆಸಿದ್ದ ‘ಉಡುಜಾ, ಉಡುಜಾ ಪಂಛೀ’ ಎಂಬ ಹಾಡನ್ನು ಆಕೆಗೆ ವಾದ್ಯವೃಂದದೊಡನೆ ಹೇಳಿಕೊಟ್ಟು ರೆಕಾರ್ಡ್ ಮಾಡಿಯೇ ಬಿಟ್ಟರು ಕಾಳಿಂಗರಾಯರು ! ಪ್ರಾಯಶಃ ಈ ಸಂಗತಿ ಅಂದು ನವಜ್ಯೋತಿಯಲ್ಲಿ ನಡೆದ ರೆಕಾರ್ಡ್ ಅಷ್ಟೇ ಅಲ್ಲ, ವಿಶ್ವದಲ್ಲೆ ಇದೊಂದು ರೆಕಾರ್ಡ್ ಪ್ರಕರಣವೆಂದರೆ ತಪ್ಪಾಗದು ! ಅಂತಹ ಧೈರ್ಯ, ದಿಟ್ಟ ನಿಲುವು ಕಾಳಿಂಗರಾಯರದ್ದು.

ಪಂತುಲು ಅವರು ನಿರ್ಮಿಸಿದ ‘ಕಿತ್ತೂರು ಚೆನ್ನಮ್ಮ’ ಎಂಬ ಚಿತ್ರದಲ್ಲಿ ರಾಜಾಶಂಕರ್ ಅಭಿನಯಕ್ಕಳವಡಿಸಿ ಕಾಳಿಂಗರಾಯರು ಹಾಡಿದ ‘ತಾಯಿ ದೇವಿಯನು ಕಾಣೆ ಹಂಬಲಿಸಿ’ ಎಂಬ ಹಾಡು ಬಹು ಮೆಚ್ಚಿಗೆ ಪಡೆಯಿತಲ್ಲದೆ ಆ ಹಾಡಿಗೆ ಪ್ರಶಸ್ತಿಯೂ ದೊರೆಯಿತು.

‘ಕೈವಾರ ಮಹಾತ್ಮೆ’ ಎಂಬ ಚಿತ್ರದಲ್ಲಿ ‘ಓಂ ನಮೋ ನಾರಾಯಣಾ’ ಎಂಬ ಹಾಡನ್ನು ಕೇಳುವಾಗ ಕಾಳಿಂಗರಾಯರು ಅದೆಷ್ಟು ಎತ್ತರದ ಧ್ವನಿಯಲ್ಲಿ ನಿರಾಯಾಸವಾಗಿ ಹಾಡಬಲ್ಲವರಾಗಿದ್ದರೆಂಬುದು ಅರಿವಾಗುತ್ತದೆ. ದರ್ಬಾರಿ ಕಾನಡದಲ್ಲಿ ಹಾಡಿರುವ ಆ ಹಾಡು ಕೇಳಲು ಅದೆಷ್ಟು ಮಧುರ !

ಇವೆಲ್ಲಾ ಕಾಳಿಂಗರಾಯರು ಕನ್ನಡ ಚಲನಚಿತ್ರಗಳ್ಲಿ ನಿರ್ದೇಶನ ನೀಡಿ ಅವುಗಳ ಪೈಕಿ ಕೆಲವದರಲ್ಲಿ ಹಾಡಿ. ಅಭಿನಯಿಸಿರುವ ವಿಷಯವಾಯಿತು. ಅಲ್ಲದೆ “ಶಶಿಧರನ್” ಎಂಬ ಮಲಯಾಳಿ ಚಿತ್ರಕ್ಕೆ ಸಂಗೀತ ನಿರ್ದೇಶಿಸಿ ಅದರಲ್ಲಿ ಕಾಳಿಂಗರಾಯರು ಹಾಗೂ ಮೋಹನ್‌ಕುಮಾರಿ ಹಾಡಿಯೂ ಇದ್ದಾರೆ. ಈ ರೀತಿ ಮಲಯಾಳಿ ಚಿತ್ರಕ್ಕೆ ಮೊಟ್ಟ ಮೊದಲಿಗೆ ಸಂಗೀತ ನಿರ್ದೇಶಿಸಿದ ಖ್ಯಾತಿ ನಮ್ಮ ಕಾಳಿಂಗ ರಾಯರದು ಎಂದು ಕೇಳಿದ್ದೇನೆ. ನಂತರ ಮತ್ತೊಂದು ಮಲಯಾಳಂ ಚಿತ್ರಕ್ಕೂ (೧೯೫೬-೫೭) ಕಾಳಿಂಗರಾಯರೇ ಸಂಗೀತ ನಿರ್ದೇಶಿಸಿ, ತಮ್ಮ ಸಹ ಸಂಗೀತ ನಿರ್ದೇಶಕರಾಗಿದ್ದ ಜಿ.ಕೆ. ವೆಂಕಟೇಶ್‌ರವರಿಗೆ ಆ ಕಾರ್ಯದ ಹೆಗ್ಗಳಿಕೆ ಸಿಗುವಂತೆ ರಾಯರು ಸೂಚಿಸದರಂತೆ. ಇದು ರಾಯರ ಉದಾರ ವ್ಯಕ್ತಿತ್ವ. ಮೇಲಿನ ಈ ಎರಡು ಚಿತ್ರಗಳಿಗೆ ಟಿ. ಜಾನಕೀರಾಮ್‌ರವರು ನಿರ್ದೇಶಕ ರಾಗಿದ್ದು, ದೊರೆ (ದೊರೆ ಭಗವಾನ್‌ರ ಪೈಕಿ) ಯವರು ಛಾಯಗ್ರಾಹಕರಾಗಿ ದುಡಿದರು ಎಂದು ಕೇಳಿದ್ದೇನೆ.

ಒಟ್ಟಿನಲ್ಲಿ ಈ ಎಲ್ಲಾ ಚಿತ್ರಗಳಲ್ಲೂ ಕಾಳಿಂಗರಾಯರನ್ನು ಅವರ ವಿವಿಧ ವಯೋ ಅವಧಿಯಲ್ಲಿ ನಾವು ಕಾಣಬಹುದು. ಅಲ್ಲದೇ ರಾಯರಿಗೆ ಸಂಗೀತ ನಿರ್ದೇಶನದಲ್ಲಿದ್ದ ಅಪಾರ ಪರಿಶ್ರಮ, ಕುಶಲತೆಯನ್ನು ಗುರುತಿಸಬಹುದು.

ಕನ್ನಡ ನಾಡಿನ ಈ ಮಹಾ ಕಲಾವಿದನ ನೆನಪಾಗಿ ಅವರು ಸಂಗೀತ ನಿರ್ದೇಶನ ನೀಡಿರುವ ಚಿತ್ರಗಳನ್ನು ಅವು ನಾಶವಾಗುವ ಮೊದಲು ಕರ್ನಾಟಕ ಫಿಲಂ ಛೇಂಬರಿನವರೋ ಅಥವಾ ಸರ್ಕಾರದವರೋ ಆಸ್ಥೆವಹಿಸಿ ಕಲೆಹಾಕಿ ಸಂರಕ್ಷಿಸುವುದು ಅತ್ಯಗತ್ಯವೆಂದು ನಾನು ಭಾವಿಸುತ್ತೇನೆ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಇವು ಬಹು ಉಪಯುಕ್ತ.

ತ.ರಾ.ಸು ಅವರ ಪ್ರಖ್ಯಾತ ಕಾದಂಬರಿ ‘ಹಂಸಗೀತೆ’ ಹಿಂದಿಯಲ್ಲಿ ‘ಬಸಂತ್‌ಬಹಾರ್’ ಎಂದು ಚಿತ್ರಿತವಾಗಿ ಜಯಭೇರಿ ಹೊಡೆಯಿತು. ಈ ಹಂಸಗೀತೆಯ ಬಗ್ಗೆ ತ.ರಾ.ಸು. ಅವರೊಡನೆ ಚರ್ಚಿಸಲು ಚಿತ್ರ ನಿರ್ಮಾಪಕರ ಜೊತೆ ಭರತ್‌ಭೂಷಣ್‌ರವರು ಮೈಸೂರಿಗೆ ಬಂದಿದ್ದರು. ಆ ಚಿತ್ರದ ಸಂಗೀತ ನಿರ್ದೇಶನವನ್ನು ನಮ್ಮ ಕಾಳಿಂಗರಾಯರೇ ನಿರ್ವಹಿಸುತ್ತಾರೆಂದು ಸುದ್ದಿ ಹಬ್ಬಿತ್ತು. ಆದರೆ ಅದು ಹಾಗಾಗಲಿಲ್ಲ. ಆ ಅವಕಾಶ ಸಿಕ್ಕಿದ್ದರೆ ಕಾಳಿಂಗರಾಯರ ಕೀರ್ತಿಪ್ರಾಯಶಃ ದೇಶದಾದ್ಯಂತ ಹರಡಿ ಇವರು ಕರ್ನಾಟಕದಿಂದ ಕಳಚಿಕೊಂಡು ಬೊಂಬಾಯಿಯಲ್ಲಿ ಬಿಡಾರ ಹೂಡುವಂತಾಗುತ್ತಿತ್ತೋ ಏನೋ, ಆದರೆ ಮೈಸೂರಿನ ಬಿಡಾರ ಕೃಷ್ಣಪ್ಪನವರ ರಾಮಮಂದಿರದ ಹಿಂದಿದ್ದ ಅವರ ಪುಟ್ಟ ಬಿಡಾರದಲ್ಲೇ ರಾಯರು ಬೀಡುಬಿಟ್ಟಿರಬೇಕೆಂದು ಭಗವಂತನ ಅಣತಿಯಾಗಿದ್ದುದರಿಂದ ರಾಯರು ಬೊಂಬಾಯಿ ಸೇರುವುದು ಸಾಧ್ಯವಾಗಲಿಲ್ಲ.

ಮತ್ತೆ ರಾಜ್‌ಕಪೂರ್ ಅವರ ಸಹಾಯಕರಾಗಿದ್ದು ಅವರ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಕನ್ನಡಿಗ ಕೀರ್ತಿರಾಜ್‌ಎಂಬುವರು ಮೈಸೂರಿಲ್ಲಿ ಕನ್ನಡ ಚಿತ್ರವೊಂದನ್ನು ತೆಗೆಯುವ ಸನ್ನಾಹ ಮಾಡಿದರು. ಆ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನು ಕಾಳಿಂಗರಾಯರು ಹೊತ್ತಿದ್ದರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ನಡೆದ ಆ ಚಿತ್ರದ ಮುಹೂರ್ತಕ್ಕೆ ಕೀರ್ತಿರಾಜ್ ತಮ್ಮ ಗುರು ರಾಜ್‌ಕಪೂರ್‌ರವರನ್ನೇ ಕರೆಸಿದ್ದರು. ಮುಹೂರ್ತದ ನಂತರ ರಾಜ್‌ಕಪೂರ್‌ರವರು ಆ ಕನ್ನಡ ಚಿತ್ರದ ಕಥೆಯನ್ನು ಕೇಳಿ ಅದರ ಹಿಂದೀ ಅವತರಣವನ್ನು ಜೊತೆ ಜೊತೆಯಾಗಿಯೇ ಮಾಡಿ ಮುಗಿಸುವ ಸಲಹೆಯನ್ನು ಕೀರ್ತಿ ರಾಜರಿಗೆ ನೀಡಿದರೆಂದು ಕೇಳಿದ್ದೇನೆ. ಆದರೆ ಆ ಚಿತ್ರದ ಕೆಲಸ ಮುಹೂರ್ತದ ನಂತರ ಮುಂದುವರಿಯಲಿಲ್ಲ. ಇದರಿಂದಲೂ ರಾಯರು ಕರ್ನಾಟಕದಿಂದ ಕಳಚಿಕೊಳ್ಳಲು ಸಾಧ್ಯವಾಗಲಿಲ್ಲ.

ಇದು ನಮ್ಮೆಲ್ಲರ ಅದೃಷ್ಟ. ಆದರೆ ಕಾಳಿಂಗರಾಯರಿಗೆ ದುರದೃಷ್ಟ ಮತ್ತೆ ಮದ್ರಾಸಿನಲ್ಲಿ ‘ನಟಶೇಖರ ಎಂಬ ಚಿತ್ರಕ್ಕೆ ರಾಯರು ಸಂಗೀತ ನಿರ್ದೇಶಕರಾಗಿದ್ದರು. ಅದು ಕಲ್ಯಾಣ್‌ಕುಮಾರ್‌ರವರ ಮೊದಲ ಚಿತ್ರ ಆ ಚಿತ್ರದಲ್ಲೊಂದು ಹಾಸ್ಯಮಯ ಸನ್ನಿವೇಶ. ಅದಕ್ಕೆ ಹೊಂದುವಂತೆ ಹಾಸ್ಯದ ಹೊನಲು ಹರಿಸುವ ಗೀತೆಯೊಂದು ಕಾಳಿಂಗರಾಯರಿಗೆ ಬೇಕಿತ್ತು. ಈ ಬಗ್ಗೆ ಚಿತ್ರ ಸಾಹಿತಿ ನಾಡಿಗೇರ ಕೃಷ್ಣರಾಯರೊಡನೆ ಕುಳಿತು ರಾಯರು ಚಿಂತಿಸುತ್ತಿದ್ದರು. ಎಷ್ಟು ಚರ್ಚಿಸಿದರೂ ನಾಡಿಗೇರರಿಂದ ರಾಯರಿಗೆ ಬೇಕಿದ್ದ ಸಾಹಿತ್ಯ ಹೊರಬರಲಿಲ್ಲ. ಇದನ್ನೆಲ್ಲ ರಾಮನಾಥ್ (ಸೋಹನ್, ಮೋಹನ್‌ರ ತಮ್ಮ) ರಾಯರ ಪಕ್ಕದಲ್ಲಿದ್ದು ಗಮನಿಸುತ್ತಿದ್ದ.

ಈ ರಾಮನಾಥ್ ಕಿಶೋರ್‌ಕುಮಾರ್‌ನ ಧ್ವನಿಯನ್ನು ಅನುಕರಿಸುತ್ತಾ ಆತ ಹಾಡುತ್ತಿದ್ದ ಹಲವು ಹಾಡುಗಳನ್ನು ಹಾಡುತ್ತಿದ್ದುದುಂಟು. ಈ ಸಂದರ್ಭದಲ್ಲಿ ಅವನಿಗೇನನ್ನಿಸಿತೋ ಏನೋ, ರಾಯರ ಕಿವಿಯಲ್ಲಿ ‘ನಾನು ಒಂದು ಹಾಡನ್ನು ಕಟ್ಟಿದ್ದೀನಿ. ತುಂಬಾ ತಮಾಷೆಯಾಗಿದೆ ಹೇಳ್ಲಾ?’ ಎಂದು ರಾಯರ ಮುಖ ನೋಡಿದ.

ಕಾಳಿಂಗರಾಯರು ಮಿಕ್ಕ ಸಮಯದಲ್ಲಿ ಅದೆಷ್ಟು ನಗುಮುಖದಿಂದಿರುತ್ತಿದ್ದರೋ ಅಷ್ಟೇ ಕಠಿಣವಾಗಿ ಕಾಣುತ್ತಿದ್ದರು, ಸಂಗೀತ ನಿರ್ದೇಶಿಸುವ ಸಮಯದಲ್ಲಿ. ಹೀಗೆಂದ ರಾಮನಾಥನ ಮುಖವನ್ನು ಕ್ರೂರವಾಗಿಯೇ ದಿಟ್ಟಿಸಿ, ‘ಸ್ವಲ್ಪ ಸುಮ್ನಿರ‍್ತೀಯಾ, ಪೆದ್ದುಪೆದ್ದಾಗಾಡಬೇಡ’ ಎಂದು ಬಿಟ್ಟರು. ರಾಮನಾಥ ಪೆಚ್ಚು ಬಡಿದು ಹೋದದ್ದನ್ನು ಗಮನಿಸುತ್ತಿದ್ದ ನಾಡಿಗೇರರು ರಾಯರ ಕೈ ಹಿಡಿದು, ‘ಅದ್ಯಾಕೆ ಸಿಟ್ಮಾಡ್ಕೋತೀರಿ ಕಾಳಿಂಗ್ರಾಯ್ರೇ? ಹುಡುಗ ಅದೇನೋ ಬರ‍್ದಿದ್ದೀನೀ ಅಂತಾನೆ. ಕೇಳೋಣ. ಅದಕ್ಕೇನೂ ಕಾಸು ಕೊಡಬೇಕಿಲ್ವಲ್ಲ. ಹೇಳ್ಲಿ ಬಿಡಿ’ ಎನ್ನಲು ರಾಯರ ಒಲ್ಲದ ಮನಸ್ಸಿನಿಂದಲೇ ಮುಖ ಕಿವುಚಿಕೊಂಡು ‘ಸರ‍್ಸರಿ, ಅದೇನು ಬರ‍್ದಿದ್ದೀಯೋ ಹೇಳು’ ಎಂದು ಸಿಗರೇಟು ಹಚ್ಚಿ ಕೂತರು.

ಕಾಳಿಂಗರಾಯರೆಂದರೆ ರಾಮನಾಥನಿಗೆ ಸಲಿಗೆ ಎಷ್ಟಿತ್ತೋ ಅಷ್ಟೇ ಅವರನ್ನು ಕಂಡರೆ ಹೆದರಿಕೆ. ರಾಯರು ‘ಅದೇನು ಬರ‍್ದಿದ್ದೀಯೋ ಹೇಳು’ ಎಂದೊಡನೆ ತನ್ನ ಪ್ಯಾಂಟು ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದು, ಅದರಲ್ಲಿ ತಾನು ರಚಿಸಿದ್ದ ಹಾಸ್ಯಗೀತೆಯನ್ನು ಹಾಡಲಾರಂಭಿಸಿದ.

ಸಿಗರೇಟು ಸೇದುತ್ತಾ ಸೀರಿಯಸ್ಸಾಗಿ ಹಾಡನ್ನು ಆಲಿಸುತ್ತಿದ್ದ ರಾಯರ ಮುಖ ಸಡಿಲವಾಗಿ, ಎಳೆನಗೆ ಮೂಡಿ, ನಂತರ ಮಿಕ್ಕವರೊಡನೆ ತಾವೂ ಕೂಡಿ ಪಕ್ಕೆ ಬಿರಿಯುವ ಹಾಗೆ ನಗಲಾರಂಭಿಸಿ, ಹಾಡು ಮುಗಿಯುತ್ತಿದ್ದಂತೆ ರಾಮನಾಥನ ಕೈಕುಲುಕಿ ‘O.K. dear boy, this song sutis the situation’ ಎಂದು ಉದ್ಗರಿಸಿ ಆ ಹಾಡನ್ನು ರೆಕಾರ್ಡ್ ಮಾಡಿಬಿಟ್ಟರು ! ರಾಮನಾಥ್ ಹಾಡಿದ ಆ ಹಾಡನ್ನು ಕಾಳಿಂಗರಾಯರು ನಿರ್ದೇಶಿಸುತ್ತಿರುವಂತೆಯೇ ಸನ್ನಿವೇಶವನ್ನು ಚಿತ್ರೀಕರಿಸಿರುವುದರಿಂದ, ರಾಯರು ಸಂಗೀತ ನಿರ್ದೇಶಿಸುತ್ತಿದ್ದ ಠೀವಿಯನ್ನೂ ಆ ಚಿತ್ರದಲ್ಲಿ ನಾವು ನೋಡಬಹುದು. ಆ ಕಾಲದ ಹಿಂದೀ ಚಲನಚಿತ್ರವೊಂದರಲ್ಲಿ ಸೈಗಲ್ (?) ಹಾಡಿದ್ದ ‘ಎಕ್ ದಿಲಕೇ ತುಕಡೇ ಹಜಾರ್ ಹುವೇ, ಕೋಯಿ ಯಹಾ ಗಿರಾ ಕೋಯಿ ವಹಾ ಗಿರಾ’ ಎಂಬ ಜನಪ್ರಿಯವಾಗಿದ್ದ ಹಾಡನ್ನು ಪದಶಃ ತರ್ಜುಮೆ ಮಾಡಿ ‘ಒಂದು ಹೃದಯದ ತುಂಡು ಸಾವಿರ‍್ವಾಯ್ತು, ಕೆಲವು ಅಲ್ಲೀ ಬಿತ್ತು, ಕೆಲವು ಅಲ್ಲೀ ಬಿತ್ತು’ ಎಂದು ರಾಮನಾಥ ರಚಿಸಿದ್ದ, ‘ನಟಶೇಖರ’ ಚಿತ್ರದಲ್ಲಿ ಈ ಹಾಡನ್ನು ಕೇಳಿದ ಜನ ಕೆಲಕಾಲ ನಕ್ಕು ನಲಿದದ್ದುಂಟು.

ಮತ್ತೆ ‘ಹೃದಯವೀಣೆ’ ಎಂಬ ಚಿತ್ರದಲ್ಲಿ ಕಾಳಿಂಗರಾಯರು ಸಂಗೀತ ನೀಡಿದ್ದಲ್ಲದೇ ಮುಖ್ಯಪಾತ್ರವೊಂದನ್ನೂ ಮಾಡಿದ್ದಾರೆ. ಅಲ್ಲದೆ ಬಹು ಹಿಂದೆ ಅಂತರಾಷ್ಟ್ರೀಯ ಖ್ಯಾತಿವೆತ್ತ ಉದಯಶಂಕರ್ (ಪ್ರಖ್ಯಾತ ಸಿತಾರ್ ವಾದಕ ರವಿಶಂಕರ್‌ರವರ ಅಣ್ಣ) ಪ್ರಯೋಗಾತ್ಮಕವಾಗಿ ಮೊದಲಿನಿಂದ ಕಡೆಯವರೆಗೆ ನೃತ್ಯಗಳನ್ನೇ ಸಂಯೋಜಿಸಿ ತೆಗೆದ ಚಿತ್ರ ‘ಕಲ್ಪನಾ’. ಅಂತಹ ನೃತ್ಯಮಯ ಚಿತ್ರವನ್ನು ಇದುವರೆವಿಗೆ ಬೇರಾರೂ ತೆಗೆದಿಲ್ಲ. ಆ ಚಿತ್ರಕ್ಕೆ ‘ಶಿರಾಲಿ’ ಎಂಬುವರೊಡನೆ ಸಂಗೀತ ನಿರ್ದೇಶಿಸಿದ ಹೆಗ್ಗಳಿಕೆ ಕಾಳಿಂಗರಾಯರದು.

ಮತ್ತೆ ‘ತುಂಬಿದ ಕೊಡ’ ಎಂಬ ಚಿತ್ರದಲ್ಲಿ ರಾಯರು ಹಾಡಿರುವ ‘ಅಂತಿಂಥ ಹೆಣ್ಣು ನೀನಲ್ಲ ನಿನ್ನಂಥ ಹೆಣ್ಣು ಇನ್ನಿಲ್ಲ’ ಎಂಬ ಸನ್ನಿವೇಶವನ್ನು ಚಿತ್ರಿಸಲಾಗಿದೆ. ಕೊನೆಯದಾಗಿ ನಮ್ಮ ಕಾಳಿಂಗರಾಯರ ಸಾವನ್ನಪ್ಪುವ ಮುನ್ನ ಕೇವಲ ತಿಂಗಳ ಮುಂಚೆ ‘ತರಂಗ’ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ವನ್ನಿತ್ತರು. ಆದರೆ ಆ ಚಿತ್ರ ಬಿಡುಗಡೆಯಾಗಲಿಲ್ಲ. ಈ ಚಿತ್ರದಲ್ಲಿ ಸಿ. ಅಶ್ವಥ್‌ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಒಂದೊಂದು ಹಾಡೂ ಅಮೋಘ. ಆದರೆ ಇವು ಬೆಳಕು ಕಾಣಲೆ ಇಲ್ಲ.

ಇವಿಷ್ಟು ಕಾಳಿಂಗರಾಯರು ಚಿತ್ರಜಗತ್ತಿನಲ್ಲಿ ನಿರ್ವಹಿಸಿದ ಕೆಲಸಗಳು.

ಶಂಕರ್‌ಸಿಂಗ್ ಅವರ ಪುತ್ರ ರಾಜೇಂದ್ರ ಸಿಂಗ್ (ಬಾಬು) ಅವರ ಸಹಕರವನ್ನು ಪಡೆದು ಕಾಳಿಂಗರಾಯರು ಹಿಂದೆ ಹಾಡಿರುವ ಎಷ್ಟೋ ಹಾಡುಗಳಿಗೆ ಈಗಲೂ ಪುನರ್ಜನ್ಮ ನೀಡಬಹುದು. ಅಂತಹ ಪ್ರೀತಿ, ಉತ್ಸಾಹ, ಅಂತಃಕರಣ, ಅಭಿಮಾನ ನಮ್ಮಲ್ಲಿ ಯಾರಿಗಿದೆ?

ಮೇಲೆ ತಿಳಿಸಿರುವ ಎಲ್ಲ ಚಿತ್ರಗಳಲ್ಲೂ ಕಾಳಿಂಗರಾಯನ ಕೈವಾಡವಿದೆ. ಇದನ್ನೂ ಒಗ್ಗೂಡಿಸಿ ಕಲೆ ಹಾಕುವುದು ಕನ್ನಡಿಗರ ಕರ್ತವ್ಯ. ಅಭಿಮಾನ ಶೂನ್ಯತೆಗೆ ಹೆಸರಾಗಿರುವವರು ನಾವು. ಇಂತಹ ಕೆಲಸಗಳನ್ನು ಮಾಡುತ್ತೇವೆಯೇ? ಕಾದು ನೋಡಬೇಕು.

* * *