ಕಾಳಿಂಗರಾಯರು ಹಾಡುತ್ತಿದ್ದ ಜಾನಪದ ಗೀತೆಗಳ ಸೊಬಗೇ ಸೊಬಗು. ‘ಅದು ಬೆಟ್ಟ ಇದು ಬೆಟ್ಟವೋ ನಂಜುಂಡ’, ‘ಬೆಟ್ಟ ಬಿಟ್ಟಿಳಿಯುತ್ತ ಬಂದಾಳೆ ಚಾಮುಂಡಿ’, ‘ಬಾರಯ್ಯ ಬೆಳುದಿಂಗಳೆ’, ‘ಚೆಲುವಯ್ಯ ಚೆಲುವೋ’ ‘ಮೂಡಲ್ ಕುಣಿಗಲ್ ಕೆರೆ’ ಹೀಗೆ ಒಂದರ ಮೇಲೊಂದರಂತೆ ಹಾಡುತ್ತಿದ್ದರು. ಏನೇ ಹಾಡುತ್ತಿದ್ದರೂ ಪಕ್ಕವಾದ್ಯದವರತ್ತ ಸದಾ ಕಾಲ ನಿಗವಿರಿಸಿ ಬಿಗಿ ಮುಷ್ಟಿಯನ್ನು ಅವರತ್ತ ಚಾಚುತ್ತಾ ವಾದ್ಯವೃಂದದವರ ನುಡಿತವನ್ನು ನಿಯಂತ್ರಿಸುತ್ತಿದ್ದರು. ಕಾಳಿಂಗರಾಯರು, ಮೋಹನ್‌ಕುಮಾರಿ, ಸೋಹನ್ ಕುಮಾರಿ ಈ ಮೂವರೂ ಒಟ್ಟಾಗಿ ಹಾಡುತ್ತಿದ್ದಾಗ ಹಾಡಿನ ಸಾಲುಗಳನ್ನು ವಿಭಜಿಸಿ ಹಾಡುತ್ತಿದ್ದ ರೀತಿ ಅಮೋಘ.ನಮ್ಮಲ್ಲಿ ಆ ರೀತಿ ವೃಂದಗಾನವನ್ನು ಹಾಡುವವರು ಅತಿ ವಿರಳ. ಕುವೆಂಪು ಅವರ ‘ಘೋರಾಂಧಕಾರದಲಿ ಕಾರ್ಮುಗಿಲ ಮುಟ್ಟು’ ಎಂಬ ಹಾಡನ್ನು ರಾಯರು ಹಾಡುವಾಗ ಕೇಳುಗರ ಮೈಯಲ್ಲಿ ವಿದ್ಯುತ್ ಸಂಚಾರವಾದ ಅನುಭವವಾಗುತ್ತಿತ್ತು. ಹಾಗೆಯೇ ‘ಬೆಟ್ಟ ಬಿಟ್ಟಿಳಿಯುತ್ತ ಹೊರಟಾಳೆ’ ಎಂಬ ಗೀತೆಯನ್ನು ಹಾಡುವಾಗ ಸಾಕ್ಷಾತ್ ಚಾಮುಂಡಿ ದೇವತೆಯೇ ಬೆಟ್ಟವನ್ನು ಮೆಟ್ಟಿಲು ಮೆಟ್ಟಿಲಾಗಿ ಇಳಿದು ಬರುತ್ತಿರುವಳೋ ಏನೋ ಎಂಬ ಭಾವನೆ ಮೂಡುತ್ತಿತ್ತು. ಕೆ.ಎಸ್. ನರಸಿಂಹಸ್ವಾಮಿಯವರ ‘ಒಂದಿರುಳ ಕನಸಿನಲಿ’ ಹಾಡಿನ ಕಡೆಯ ನುಡಿ ‘ನೀವು ಬೇಲಿಗೆ ಬಂದು, ಅಲ್ಲಿ ನನ್ನನು ಕಂಡು, ಕುಶಲವನು ಕೇಳಿದಾಗ… ಕಣ್ಣಲೇನೋ ನಿಂದು, ತುಟಿಯಲೇನೋ ಬಂದು, ಕೆನ್ನೆ ಕೆಂಪಾದುದಾಗ.’ ಎಂದು ಹಾಡುವಾಗ, ಕೊನೆಯ ‘ಕೆನ್ನೆ ಕೆಂಪಾದುದಾಗ’ ಅನ್ನುವ ಪದಗಳಿಗೆ ರಾಯರು ಒತ್ತುಕೊಟ್ಟು ಹಾಡುತ್ತಿದ್ದಂತೆ ತನ್ಮಯರಾಗಿ ಕೇಳುತ್ತಿದ್ದ ಹೆಂಗಸರೆಲ್ಲಾ ನಾಚಿ ನೀರಾಗುತ್ತಿದ್ದರು. ಹೀಗೆಯೇ ‘ರವ್ವೀ ಕಾಣದ್ ಕವ್ವೀ ಕಂಡ ಅಂಬೋದ್ ಕವಿಗಳ ತತ್ವ, ಆದ್ರೆ ಕವ್ವೀ ಕಾಣದ್ ಕುಡ್ಕ ಕಂಡ ಅಂಬೋದ್ ಕುಡ್ಕರ್‌ಮಾತ್ವ’ ಎಂದು ರಾಯರು ಎಳೆದೆಳೆದು ಹಾಡಿದಾಗ ಸಭಿಕರಿಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಅವರಂತೆ ಅಮಲನ್ನು ಅನುಭವಿಸಿ ಅನುಭವಿಸಿ ಹಾಡುವ ಮತ್ತೊಬ್ಬ ಗಾಯಕನನ್ನು ನಾನು ಕಂಡಿಲ್ಲ. ಈ ಮಾತಿಗೆ ನಮ್ಮ ಸಿ. ಅಶ್ವಥ್ ಹೊರತು. ಈ ಇದನ್ನು ನಮ್ಮ ಸುಗಮ ಸಂಗೀತ ಗಾಯಕರೆಲ್ಲಾ ನಮ್ರತೆಯಿಂದ ಒಪ್ಪಿಕೊಳ್ಳಲೇಬೇಕು.

ಕಾಳಿಂಗರಾಯರು ಕೆಲವು ಕಾರ್ಯಕ್ರಮಗಳಲ್ಲಿ ಯಥೇಚ್ಛವಾಗಿ ನಾನಾ ರೀತಿಯ ವಾದ್ಯಗಳನ್ನು ಬಳಸಿಕೊಂಡು ಹಾಡುತ್ತಿದ್ದುದುಂಟು. ಆದರೆ ಬಹುತೇಕ ಕಾರ್ಯಕ್ರಮಗಳಲ್ಲಿ ಅವರು ಹಿತಮಿತವೆಂಬಂತೆ ಕೆಲವೇ ವಾದ್ಯಗಳನ್ನು ಬಳಸುತ್ತಿದ್ದರು.

ರಾಯರ ಕಾಲದಲ್ಲೂ ಕೆಲವು ಮಂದಿ ಸುಗಮ ಸಂಗೀತವನ್ನು ಹಾಡುವ ಕಲಾವಿದರಿದ್ದರು – ನಿಜ. ಆದರೆ ಸುಗಮ ಸಂಗೀತ ವೇದಿಕೆಯನ್ನು ಭದ್ರವಾಗಿ ಅದುಮಿ ಹಿಡಿದಿದ್ದ ಕಾಳಿಂಗರಾಯರ ವಜ್ರಮುಷ್ಟಿ ಅವರ ಕೊನೆಯ ದಿನಗಳವರೆಗೆ ಸಡಿಲವಾಗಲೇ ಇಲ್ಲ. ಆ ವೇದಿಕೆಯ ಸಾರ್ವಭೌಮನಾಗಿ ರಾಯರು ತಮ್ಮ ಅಂತ್ಯದವರೆಗೂ ಮೆರೆದಾಡಿದರು. ಮೈಸೂರು ಅನಂತ ಸ್ವಾಮಿ ಈ ಮಾತಿಗೆ ಹೊರತು. ಇದು ನನ್ನ ಅನಿಸಿಕೆ :

ಕನ್ನಡ ಗೀತೆ, ಜಾನಪದ ಗೀತೆ, ದೇವರ ನಾಮ, ವಚನಗಳನ್ನು ಸುಲಭವಾಗಿ, ಭಾವಪೂರ್ಣವಾಗಿ, ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಟ್ಟು ಹಾಡುವ ವಿಧಾನವನ್ನು ತೋರಿಸಿಕೊಟ್ಟವರೇ ಪಿ. ಕಾಳಿಂಗರಾಯರು ಎಂದರೆ ಅತಿಶಯೋಕ್ತಿಯೇನಲ್ಲ.

ಸುಗಮ ಸಂಗೀತವನ್ನು ಹಾಡುವುದರಲ್ಲಿ ಖ್ಯಾತಿವೆತ್ತಂತೆ. ಗೀತರೂಪಕಗಳನ್ನು ಸಾದರಪಡಿಸುವುದರಲ್ಲೂ ಕಾಳಿಂಗರಾಯರು ಪ್ರಸಿದ್ಧರಾಗಿದ್ದರು. ಕುವೆಂಪು ಹಾಗೂ ಶಿವರಾಮಕಾರಂತರು ರಚಿಸಿರುವ ಕೆಲವು ಗೀತರೂಪಕಗಳನ್ನು ರಾಯರು ಬಹುರಂಜನಾತ್ಮಕವಾದ ರೀತಿಯಲ್ಲಿ ಪ್ರಯೋಗಿಸುತ್ತಿದ್ದರು. ಇವುಗಳ ಪೈಕಿ ಹಲವಾರು ಬಾರಿ ಪ್ರಯೋಗ ಕಂಡದ್ದು ಶಿವರಾಮ ಕಾರಂತರ ‘ಸತ್ಯವಾನ್ ಸಾವಿತ್ರಿ’ ಎಂಬ ಗೀತರೂಪಕ. ಅದರಲ್ಲಿ ಬರುವ ಸತ್ಯವಾನ ಹಾಗೂ ಯಮನ ಪಾತ್ರಗಳ ಹಾಡುಗಳನ್ನು ಕಾಳಿಂಗರಾಯರೂ, ಸಾವಿತ್ರಿಯ ಪಾತ್ರದ ಗೀತೆಗಳನ್ನು ಮೋಹನ್ ಕುಮಾರಿಯವರೂ ನೇಪಥ್ಯದಲ್ಲಿ ಹಾಡುತ್ತಿದ್ದರು : ಸಾವಿತ್ರಿಯಾಗಿ ಸೋಹನ್ ಕುಮಾರಿ, ಸತ್ಯವಾನನಾಗಿ ರಾಮನಾಥ್, ಯಮನಾಗಿ ವಿರೂಪಾಕ್ಷ ಹೀಗೆ ಈ ಪಾತ್ರಧಾರಿಗಳು ರಾಯರ ಹಾಡಿಗನುಗುಣವಾಗಿ ತುಟಿ ಚಲಿಸುತ್ತಾ ಅಭಿನಯಿಸುತ್ತಿದ್ದರು. ಈ ಗೀತರೂಪಕವನ್ನು ಆ ಕಾಲದಲ್ಲಿ ಮೆಚ್ಚದ ವ್ಯಕ್ತಿಯೇ ಇರಲಿಲ್ಲ. ಈ ರೂಪಕದಲ್ಲಿ ಬರುವ ಚಿತ್ರಗುಪ್ತರ ಮಾತನ್ನು, ಅಣಕು ನಗುವನ್ನು ರಾಯರ ಜೊತೆ ನೇಪಥ್ಯದಲ್ಲಿ ನಿಂತು ನಾನು ನೀಡುತ್ತಿದೆ. ಈ ವಿಚಾರವಾಗಿ ನಡೆದ ಒಂದು ಸ್ವಾರಸ್ಯ ಪ್ರಸಂಗ ಎಂದಿಗೂ ಮರೆಯದಂತಹುದು –

೧೯೫೬-೫೭. ಮೈಸೂರಿನ ಪುರಸಭೆಯಲ್ಲಿ ಕಾಳಿಂಗರಾಯರ ರಸಮಂಜರಿ ಕಾರ್ಯಕ್ರಮ. ಮುಖ್ಯ ಅತಿಥಿ ಕೆಂಗಲ್ ಹನುಮಂತಯ್ಯನವರು. ಈ ಕಾರ್ಯಕ್ರಮದಲ್ಲಿ ರಾಯರ ಸಂಗೀತ ಹಾಗೂ ‘ಸತ್ಯವಾನ್ ಸಾವಿತ್ರಿ’ ಗೀತರೂಪಕ, ನಂತರ ನನ್ನ ತಂಡದವರಿಂದ ‘ಅಳಿಯ ದೇವರು’ ನಾಟಕ ಎಂದು ಏರ್ಪಾಡಾಗಿತ್ತು. ಪುರಸಭೆ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ರಾಯರ ಸುಮಧುರ ಕಂಠಸಿರಿಯಿಂದ ಹೊರಹೊಮ್ಮಿದ ಧ್ವನಿ ಅಲೆ ಅಲೆಯಾಗಿ ಪ್ರವಹಿಸಿ ಆಲಿಸುತ್ತಿದ್ದ ಸಭಿಕರ ಮೇಲೆ ಸಮ್ಮೋಹನಾಸ್ತ್ರವನ್ನೇ ಪ್ರಯೋಗ ಮಾಡಿದಂತೆ ಭಾಸವಾಗುತ್ತಿತ್ತು. ಹೀಗೆ ಸುಮಾರು ಎರಡು ಘಂಟೆಗಳ ಕಾಲ ಹಾಡಿದ ರಾಯರು ವಾದ್ಯ ವೃಂದದವರಿಗೆ ಕೆಲ ನಿಮಿಷ ನುಡಿಸುತ್ತಿರಲು ಹೇಳಿ ನೇಪಥ್ಯಕ್ಕೆ ಬಂದು ‘ಸತ್ಯವಾನ್ ಸಾವಿತ್ರಿ’ಗೆ ಎಲ್ಲರೂ ಸಿದ್ಧರಾಗಿದ್ದಾರೆಯೇ ಎಂದು ವಿಚಾರಿಸಲು, ಆ ಗೀತರೂಪಕದಲ್ಲಿ ಪ್ರತಿಬಾರಿಯೂ ಯಮನ ಪಾತ್ರ ನಿರ್ವಹಿಸುತ್ತಿದ್ದ ವಿರೂಪಾಕ್ಷ (ಈತ ಮೈಸೂರಿನ ನೂರಡಿ ರಸ್ತೆಯಲ್ಲಿರುವ ‘ನಾಗಣ್ಣಸ್ಟೋರ್ಸ್’ ಅಂಗಡಿಯ ಮಾಲಿಕ, ಅಜಾನುಬಾಹು, ಯಮನ ಪಾತ್ರಕ್ಕೆ ಹೇಳಿ ಮಾಡಿಸಿ ದಂತಿದ್ದವನು, ‘ಸ್ತ್ರೀರತ್ನ’ ಎಂಬ ಕನ್ನಡ ಚಿತ್ರದಲ್ಲಿ ಯಮನ ಪಾತ್ರ ನಿರ್ವಹಿಸಿ ಹೆಸರು ಪಡೆದವನು) ಕಾರಣಾಂತರದಿಂದ ಬರಲಾಗಲಿಲ್ಲ. ಆತ ಬಂದಿರಲಿಲ್ಲ. ರಾಯರಿಗೆ ಕಸಿವಿಸಿಯಾಯಿತು. ಅಷ್ಟು ಸೊಗಸಾಗಿ ಸಿದ್ಧಪಡಿಸಿದ್ದ ಆ ಗೀತರೂಪಕವನ್ನು ಅನ್ಯಾಯವಾಗಿ ನಿಲ್ಲಿಸಬೇಕಾಗಿ ಬಂತಲ್ಲ ಎಂದು ಖಿನ್ನರಾದರು. ಇದನ್ನೆಲ್ಲ ಗಮನಿಸುತ್ತಿದ್ದ ನಾನು ಪಕ್ಕದಲ್ಲೇ ಇದ್ದ ಮೋಹನ್‌ಕುಮಾರಿಯವರನ್ನು ‘ಏನಮ್ಮಾ ಇದೆಲ್ಲಾ, ಯಾಕ್ಹೀಗೇ’ ಎನ್ನಲು ಅವರು ನಡೆದ ವಿಚಾರವನ್ನು ತಿಳಿಸಿದರು. ಕಾಳಿಂಗರಾಯರು ‘ಸತ್ಯವಾನ್ ಸಾವಿತ್ರಿ’ ರೂಪಕವನ್ನು ನಿರ್ದೇಶಿಸುತ್ತಿದ್ದುದನ್ನು ನಾನು ಸಾಕಷ್ಟು ಬಾರಿ ನೋಡಿದ್ದೆನಾದ್ದರಿಂದ ಅದರಲ್ಲಿಯ ಯಮನ ಪಾತ್ರವನ್ನು ನಾನೇ ಮಾಡುವುದಾಗಿ ರಾಯರಿಗೆ ಹೇಳಿದೆ. ಕಾಳಿಂಗರಾಯರಿಗೆ ಶಾಕ್ ಹೊಡೆದಂತಾಯಿತು, ಎದ್ದವರೇ ನನ್ನ ಭುಜ ಹಿಡಿದು ಜಗ್ಗುತ್ತ ‘It’s fantastic Mr. Rao but how? ಆ ಯಮನ ಪಾರ್ಟ್ ಮಾಡೋ ವಿರೂಪಾಕ್ಷೀಗೆ ತಂದಿರೋ ಡ್ರೆಸ್ಸು ನಿಮ್ಗೆಲ್ಲಿ ಸೂಟ್ ಆಗುತ್ರೀ? ಅವ್ನೂಂದ್ರೆ ರಾಕ್ಷಸ. ನೀವು ಕಡ್ಡಿ ಪೈಲ್ವಾನ್ ! ಹ್ಯಾಗ್ಹೊಂದ್ಸೋದು?’ ಎಂದರು. ಅದಕ್ಕೆ ನಾನು ‘ಏನು ಯೋಚಸ್ಬೇಡಿ ರಾಯ್ರೆ. ಹೇಗಿದ್ರೂ ಅಳಿಯ ದೇವರು ನಾಟಕದಲ್ಲಿ ನಾನು ಮಾಡೋ ಹಿರಣ್ಯ ಕಶಿಪು ಡ್ರೆಸ್ ಇದ್ದೇ ಇದ್ಯಲ್ಲಾ. ಅದನ್ನೇ ಯಮನ ಪಾರ್ಟಿಗೂ ಹಾಕ್ಕೊಂಡು ನಿಭಾಯಿಸ್ತಿನೀ’ ಎಂದವನೆ ಕೇವಲ ಐದಾರು ನಿಮಿಷದಲ್ಲಿ ನಾನು ಯಮನ ಪಾತ್ರ ನಿರ್ವಹಿಸಲು ಸಿದ್ಧನಾದೆ. ಆ ಸತ್ಯವಾನ್ ಸಾವಿತ್ರಿಯಲ್ಲಿ ನಾನು ಯಮನ ಪಾತ್ರವನ್ನು ಮಾಡಿಯೂ ಬಿಟ್ಟೆ. ಕಾರ್ಯಕ್ರಮ ಮುಗಿದ ಮೇಲೆ ಕಾಳಿಂಗರಾಯರಿಗೆ ಹಸ್ತಲಾಘವವನ್ನಿತ್ತ ಹನುಮಂತಯ್ಯನವರು ‘ಪ್ರೋಗ್ರಾಂ ತುಂಬಾ ಚೆನ್ನಾಗಿತ್ತು ಕಾಳಿಂಗರಾಯ್ರೆ. ಆದರೆ ಆ ಸತ್ಯವಾನ್ ಸಾವಿತ್ರೀಲಿ ಯಮನ ಪಾರ್ಟ್ ಮಾಡೋದಕ್ಕೆ ಬೇರೆ ಯಾರೂ ಸಿಗ್ಲಿಲ್ವೇ ನಿಮ್ಗೆ? ಯಮ ಎಲ್ಲಾದ್ರೂ ಅಷ್ಟು ಪೀಚಾಗಿದ್ನೇನ್ರಿ’ ಎನ್ನಲು ಕಾಳಿಂಗರಾಯರು ನಗುತ್ತ ‘ಏನೋ ಸಾರ್ ನನ್ಗಿನ್ನೂ ಆ ಯಮಧರ್ಮರಾಯನ ದರ್ಶನವಾಗಿಲ್ಲ. ಅವನ ಪರ್ಸನಾಲಿಟಿ ಹೇಗಿತ್ತೋ ಯಾರಿಗ್ಗೊತ್ತು ಸಾರ್?’ ಎನ್ನಲು ಹನುಮಂತಯ್ಯನವರು ಗಟ್ಟಿಯಾಗಿ ನಗುತ್ತಾ ‘ಅದೇನೋ ಸರೀನ್ನಿ ನೀವು ಕಲಾವಿದರು ಏನ್ಬೇಕಾದ್ರೂ ಮಾಡ್ಬಿಡ್ತೀರಿ. But one thing is certain. ನನ್ಗೆ ಇದ್ವರ್ಗೂ ಯಮಾಂದ್ರೆ ಹ್ಯಾಗೋ ಏನೋ ಅಂಬೋ ಭಯ ಕಾಡಸ್ತಿತ್ತು. ಆದ್ರೆ ಈವತ್ತು ನಿಮ್ಮ ಬೆದರ‍್ಬೊಂಬೆ ಯಮನ್ನ ನೋಡದ್ಮೇಲೆ ಆ ಭಯ ನಿವಾರಣೆಯಾಯ್ತು’ ಎಂದಾಗ ಅಲ್ಲಿದ್ದವರೆಲ್ಲ ಗಹಗಹಿಸಿ ನಕ್ಕರು.

ನಂತರ ಕಾಳಿಂಗರಾಯರು ಈ ಗೀತರೂಪಕವನ್ನು ಹಲವಾರು ಬಾರಿ ಅಲ್ಲಲ್ಲಿ ನಡೆಸಿದರು. ಆದರೆ ಯಮನ ಪಾತ್ರವನ್ನು ವಿರೂಪಾಕ್ಷ ಮುಂದೆಂದೂ ನನಗೆ ಬಿಟ್ಟು ಕೊಡಲಿಲ್ಲ. ಏನೇ ಕೆಲಸವಿದ್ದರೂ ಎಲ್ಲವನ್ನೂ ಬದಿಗೊತ್ತಿ ಬಂದು ಆ ಪಾತ್ರವನ್ನು ಬಹು ಯಶಸ್ವಿಯಾಗಿ ಮಾಡುತ್ತಿದ್ದ.

ವಿರೂಪಾಕ್ಷ ರಾಕ್ಷಸಾಕೃತಿಯ ಆಳು. ಆದರೆ ಅವನ ಹೃದಯ ಬಲು ಮೃದು. ಕರುಳು ಹೆಂಗರುಳು, ಸ್ನೇಹಜೀವಿ. ಕಾಳಿಂಗರಾಯರು ಎಂದರೆ ಅವನಿಗೆ ಪ್ರಾಣ. ಪಾಪ, ಇದ್ದಕ್ಕಿದ್ದಂತೆ ಒಂದು ದಿನ ನಮ್ಮೆಲ್ಲರನ್ನೂ ಬಿಟ್ಟು ಹೊರಟು ಹೋದ. ಅವನು ಸತ್ತಸುದ್ದಿಯನ್ನು ಕೇಳಿದ ಕಾಳಿಂಗರಾಯರು ದಿನವಿಡೀ ದುಃಖಿಸಿದರು. ಅವರನ್ನಂದು ಸಮಾಧಾನಪಡಿಸುವಲ್ಲಿ ನಮಗೆ ಸಾಕಾಯಿತು ! ಸ್ವಂತ ಸಹೋದರನನ್ನೇ ಕಳೆದುಕೊಂಡಂತೆ ಕಾಳಿಂಗರಾಯರಂದು ಕಣ್ಣೀರಿಟ್ಟರು.

ಅಂದಿನಿಂದ ಮುಂದೆ ರಾಯರು ಎಂದೂ ‘ಸತ್ಯವಾನ್ ಸಾವಿತ್ರಿ’ಯನ್ನು ಆಡಿಸಲಿಲ್ಲ. ಆತ್ಮೀಯ ಸ್ನೇಹಿತರೆಂದರೆ ರಾಯರಿಗೆ ತಮ್ಮ ಮಡದಿ ಮಕ್ಕಳಿಗಿಂತ ಹೆಚ್ಚು.

ವಿರೂಪಾಕ್ಷ ಹಾಗೂ ನಾನು ‘ಹೋಗೋ – ಬಾರೋ’ ಸ್ನೇಹಿತರು. ಈಗಲೂ ಮೈಸೂರಿನ ನೂರಡಿ ರಸ್ತೆಯಲ್ಲಿ ಓಡಾಡುವಾಗ ‘ನಾಗಣ್ಣ ಸ್ಟೋರ್ಸ್’ ಹತ್ತಿರ ಬಂದೊಡನೆ ಈ ಕಡೆ ತಿರುಗಿ ನೋಡುತ್ತೇನೆ. ಆ ಅಂಗಡಿಯ ಗಲ್ಲದ ಮೇಲೆ ಕುಳಿತಿರುತ್ತಿದ್ದ ವಿರೂಪಾಕ್ಷ ನಗೆ ಬೀರುತ್ತಾ ನನ್ನತ್ತ ಕೈ ಬೀಸುತ್ತಿದ್ದ ಆ ದಿನಗಳು ಜ್ಞಾಪಕಕ್ಕೆ ಬರುತ್ತವೆ. ಕರುಳು ಚುರುಗುಟ್ಟುತ್ತದೆ. ಕಣ್ಣು ತುಂಬುತ್ತದೆ. ತಲೆತಗ್ಗಿಸಿ ಮುಂದೆ ನಡೆಯುತ್ತೇನೆ.

ಪ್ರತಿ ಕಾರ್ಯಕ್ರಮದಲ್ಲೂ ಕಾಳಿಂಗರಾಯರೊಡನೆ ಜೊತೆಗೂಡಿ ಹಾಡುತ್ತಿದ್ದವರು ಸೋಹನ್ ಕುಮಾರಿ ಹಾಗೂ ಮೋಹನ್ ಕುಮಾರಿ ಇವರಿಬ್ಬರ ಪೈಕಿ ಸೋಹನ್ ಕುಮಾರಿಯವರ ಕಂಠ ಮಾಧುರ್ಯ ಸಾಧಾರಣ ಮಟ್ಟದ್ದು. ತಾರಕದಲ್ಲಿ ಧ್ವನಿ ಏರಿಸಿ ಹಾಡುವ ಶಕ್ತಿ ಅವರಿಗಿರಲಿಲ್ಲ. ಆದರೆ ಮೋಹನ್‌ಕುಮಾರಿ ರಾಯರಿಗೆ ಸರಿಸಾಟಿಯಾಗಿ ಧೀಮಂತಿಕೆಯಿಂದ ಅವರ ಜೊತೆ ಜೊತೆಗೇ ಹಾಡುತ್ತಿದ್ದರು. ಇದಲ್ಲದೆ ಮೋಹನ್‌ಕುಮಾರಿಯೊಬ್ಬರೇ ಮಧ್ಯೆ ಮಧ್ಯೆ ಕೆಲವು ಹಾಡುಗಳನ್ನು ಬಹು ಭಾವಪೂರ್ಣವಾಗಿ ಹಾಡುತ್ತಿದ್ದರು.

ಹೀಗೆ ಅವರೊಬ್ಬರೇ ಹಾಡುತ್ತಿದ್ದ ‘ಬೇಸಿಗೆಯ ಸಂಜೆಯಿದು. ಬೇಕೆನಗೆ ನಿನ್ನ ಜೊತೆ ಬಾ, ಇನಿಯಾ ಬೇಗ ಬಾ’ ಎಂಬ ಹಾಡು ಕೇಳುತ್ತಿದ್ದಂತೆ ಯುವಕರು ರೋಮಾಂಚಿತರಾಗಿ ‘once more’ ಮಳೆಗರೆದು ಮೋಹನ್‌ಕುಮಾರಿಯವರಿಂದ ಆ ಹಾಡನ್ನು ಮತ್ತೆ ಮತ್ತೆ ಹಾಡಿಸಿದ್ದುಂಟು. ಮತ್ತೆ ಮೋಹನ್ ಹಾಡುತ್ತಿದ್ದ ‘ಯಾಕಳುವೆ ಎಲೆ ರಂಗ’ ಬೇಕಾದ್ದು ನಿನಗೀವೆ. ನಾಕೆಮ್ಮೆ ಕರೆದ ನೊರೆಹಾಲು’ ಎಂಬ ಜೋಗುಳದ ಹಾಡು ಆ ದಿನಗಳಲ್ಲಿ ಬಹುಜನಪ್ರಿಯ. ಇದೆಲ್ಲಾ ಈಗ ಕೇವಲ ನೆನಪು ಮಾತ್ರ, ಕನಸಿನಲ್ಲಾದಂತೆ, ಈ ಮೂವರೂ ಒಟ್ಟಾಗಿ ನಿಂತು ನಲಿನಲಿದು ಹಾಡುತ್ತಿದ್ದ ಆ ಸಂಭ್ರಮದ ಸಂಜೆಗಳು ಮತ್ತೆಲ್ಲಿ ಬಂದಾವು ?!

* * *