ಇಂದು, ಅಂದರೆ ೧-೬-೧೯೯೩ ರಂದು ಬೆಳಿಗ್ಗೆ ಇಲ್ಲಿ ಬೆಂಗಳೂರಿನ ಹನುಮಂತನಗರದಲ್ಲಿರುವ ಎಸ್.ಎನ್. ಶಿವಸ್ವಾಮಿಯವರನ್ನು ಭೇಟಿಯಾಗಿದ್ದೆ. ಶಿವಸ್ವಾಮಿಯವರು ಕಾಳಿಂಗರಾಯರನ್ನು ೧೯೪೪ರ ಸುಮಾರಿನಿಂದಲೇ ಬಲ್ಲವರು. ಆ ಸಮಯದಲ್ಲಿ ಶಿವಸ್ವಾಮಿಯವರು ಮದರಾಸಿನ ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಆಗಿಂದಾಗ್ಗೆ ರಾಯರನ್ನು ಲಘು ಸಂಗೀತ ಹಾಗೂ ನಾಟಕದ ಕಾರ್ಯಕ್ರಮಗಳಿಗೆ ಕರೆಸಿಕೊಳ್ಳುತ್ತಿದ್ದರಂತೆ. ಹೀಗೆ ಕಾಳಿಂಗರಾಯರು ಆಕಾಶವಾಣಿಗೆ ಬಂದಾಗಲೆಲ್ಲಾ ಅವರಿಗೆ ಆ ಕಾಲದಲ್ಲಿ ಸಿಗುತ್ತಿದ್ದ ಸಂಭಾವನೆ ನಲವತ್ತೋ ಐವತ್ತೋ, ಅಷ್ಟೆ. ಆ ಕಾಲಕ್ಕೆ ಅದೇ ದೊಡ್ಡ ಮೊತ್ತ.

ಮದರಾಸಿನಲ್ಲಿ ಕಾಳಿಂಗರಾಯರು ವಾಸಿಸುತ್ತಿದ್ದುದು ಸಣ್ಣ ಮನೆಯೊಂದರಲ್ಲಿ. ಅದಕ್ಕವರು ನೀಡುತ್ತಿದ್ದ ಬಾಡಿಗೆ ಇಪ್ಪತ್ತಿರಬಹುದು. ಆ ದಿಶೆಯಲ್ಲಿ ದುಸ್ತರದ ಜೀವನವನ್ನೇ ನಡೆಸುತ್ತಿದ್ದರೂ ಧಾರಾಳ ಮನೋಭಾವ ಮಾತ್ರ ರಾಯರಲ್ಲೆಂದೂ ಕಮ್ಮಿಯಾಗಿರಲಿಲ್ಲ. ಅಲ್ಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮವನ್ನು ಕೊಡಲು ಹೋದಾಗಲೆಲ್ಲಾ ತಮ್ಮೆದುರು ತಂಬೂರಿ, ಹಾರ್ಮೋನಿಯಂಗಳನ್ನು ತಂದಿರಿಸುತ್ತಿದ್ದ ನಿಲಯದ ಸೇವಕರಿಗೆ ಪ್ರತಿಬಾರಿಯೂ ಕಾರ್ಯಕ್ರಮದ ನಂತರ ತಮಗೆ ಸಲ್ಲುತ್ತಿದ್ದ ಸಂಭಾವನೆಯಲ್ಲಿ ಒಂದೆರಡು ರೂ. ‘ಟಿಪ್ಸ್’ ಕೊಡುವುದನ್ನು ರಾಯರು ಮರೆಯುತ್ತಿರಲಿಲ್ಲವಂತೆ.

ಮತ್ತೆ ಕಾಳಿಂಗರಾಯರ ಗುಣಗಾನವನ್ನು ಮಾಡುತ್ತಾ ಶಿವಸ್ವಾಮಿಯವರು ಈ ಮಾತುಗಳನ್ನಾಡಿದರು.

“ಕಾಳಿಂಗರಾಯರಿಗೆ ಆ ಕಾಲದಲ್ಲಿ ಅಂಥ ಹೇಳಿಕೊಳ್ಳುವಂಥ ವರಮಾನವೇನೂ ಇರಲಿಲ್ಲ. ಆರ್ಥಿಕವಾಗಿ ತೊಂದರೆಯಲ್ಲೇ ಇದ್ದರು. ಆದರೂ ಎಷ್ಟೇ ತೊಂದರೆಯಲ್ಲಿದ್ದರೂ ತಮ್ಮ ಕಷ್ಟಕಾರ್ಪಣ್ಯವನ್ನು ಅವರೆಂದೂ ಯಾರಿಗೂ ಹೇಳುತ್ತಿರಲಿಲ್ಲ.”

ತಮ್ಮ ಪರಿಸ್ಥಿತಿ ದಾರುಣವಾಗಿದ್ದರೂ ಅದು ಇತರರಿಗೆ ತಿಳಿಯದಿರಲೆಂದೋ ಏನೋ, ಸದಾಕಾಲವೂ ಶುಚಿರ್ಭೂತರಾಗಿ ಗರಿಗರಿಯಾಗಿ ಇಸ್ತ್ರೀ ಮಾಡಿ ಬಟ್ಟೆಗಳನ್ನು ತೊಟ್ಟು, ಠಾಕು ಠಿಕಾಗಿ ಓಡಾಡುತ್ತಿದ್ದರಂತೆ.

ಆಗ ಇವರೇ ಕುಚೇಲನ ಪುತ್ರ, ಕಾಸು ಕಾಸಿಗೂ ಹಪಹಪಿಸುತ್ತಿದ್ದ ಕಾಲ. ಆದರೂ ಇವರ ನಯ, ನಾಜೂಕು, ನಡತೆಯನ್ನು ಕಂಡು ಇವರ ಬಳಿ ಹೆಚ್ಚು ಹಣವಿರಬಹುದೆಂದು ಭಾವಿಸಿ ಬಂದ ಕೆಲವರು ‘ಕಾಳಿಂಗರಾಯರೇ. ಕಷ್ಟದಲ್ಲಿದ್ದೇನೆ. ಕಾಸೇನಾದರೂ ಇದ್ದರೆ ಕೊಡುತ್ತೀರಾ?’ ಎಂದು ಇವರೆ ದುರು ಕೈಚಾಚಿ ಯಾಚಿಸಿದವರಿಗೆ ಹಿಂದೆ ಮುಂದೆ ನೋಡದೆ ತಮ್ಮ ಬಳಿ ಏನಿತ್ತೋ ಎಷ್ಟಿತ್ತೋ ಅದನ್ನು ಆ ಬೇಡಿದವರ ಕೈಗಿತ್ತು ಅವರ ಬೆನ್ನು ತಟ್ಟಿ ಕಳಿಸುತ್ತಿದ್ದರಂತೆ. ಅಷ್ಟು ಸರಳ ಹೃದಯದ, ಧಾರಾಳ ಮನಸ್ಸಿನ, ತೆರೆದ ಮನದ ವ್ಯಕ್ತಿಗಳು ನಮ್ಮಲ್ಲೆಷ್ಟು ಜನ ಎನ್ನುತ್ತಾರೆ ಶಿವಸ್ವಾಮಿಯವರು.

ಅವರ ಮಾತು ನಿಜ, ಇದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಒಮ್ಮೆ ಮೈಸೂರಿನ ಮೆಟ್ರೋಪೋಲಿನಲ್ಲಿ ರಾಯರು ಕುಡಿಯುತ್ತ ಕೂತಿದ್ದರು. ಅವರನ್ನರಸಿ ಅಲ್ಲಿಗೊಬ್ಬ ಬಂದ. ಕಪ್ಪಗೆ, ತೆಳ್ಳಗೆ, ಉದ್ದವಾಗಿದ್ದ ಆ ವ್ಯಕ್ತಿ ಸಾಕಷ್ಟು ಬಳಲಿ ಬೆಂಡಾಗಿರುವುದು ಆತನ ಸ್ವರೂಪದಿಂದಲೇ ಸಾಬೀತಾಗುವಂತಿತ್ತು. ಆತ ರಾಯರೆದುರು ನಿಂತು ಕೈ ಮುಗಿಯುತ್ತಾ ಅತಿ ದೈನ್ಯತೆಯಿಂದ ಹಾಗೂ ಕ್ಷೀಣಸ್ವರದಲ್ಲಿ ‘ಸಾರ್‌’ ಎಂದ. ಕತ್ತೆತ್ತಿ ನೋಡಿದ ರಾಯರು ಅವನನ್ನು ದಿಟ್ಟಿಸಿ ‘ಓಹೋ, ಏನಯ್ಯ ಏನ್ಸಮಾಚಾರ?’ ವಾಸ್ನೆ ಹಿಡ್ಕೊಂಡೇ ಬಂದ್ಬಿಟ್ಯಾ?’ ಅನ್ನಲು ಆತ ಮತ್ತಷ್ಟು ಹತ್ತಿರ ಸರಿದು ‘ಅರ್ಜೆಂಟಾಗಿ ಸ್ವಲ್ಪ ದುಡ್ಬೇಕಿತ್ತು ಸಾರ್’ ಅಂದ. ಅದಕ್ಕೆ ಕಾಳಿಂಗರಾಯರು ಮೆದುವಾಗಿ ನಕ್ಕು ‘ಕುಡ್ಯೋದಕ್ಕೋ?’ ಎಂದರು. ಅದಕ್ಕವನು ತನ್ನ ಕೆನ್ನೆಗಳನ್ನು ತಟ್ಟಿಕೊಳ್ಳುತ್ತಾ ‘ಛೆ ಛೆ ಅದಕ್ಕಲ್ಲಾ ಸಾರ್, ನನ್ನ ಹೆಂಡ್ತೀಗೆ ಹೆರಿಗೆ ಟೈಮು. ಆಸ್ಪತ್ರೇಲಿ ಅಡ್ಮೀಟ್ ಮಾಡಿದ್ದೀನಿ ಸಾರ್’ ಎಂದು ಗಿಂಜುತ್ತಾ ಕೈ ಜೋಡಿಸಲು ರಾಯರು ‘ಎಷ್ಟು ಬೇಕಿತ್ತಯ್ಯ?’ ಎಂದರು. ಅದಕ್ಕಾತ ‘ನೂರು ಸಾರ್’ ಅಂದ. ರಾಯರು ತಮ್ಮ ಪ್ಯಾಂಟಿನ ಹಿಪ್‌ಪಾಕೆಟ್ಟಿನಿಂದ ಪರ್ಸನ್ನು ತೆಗೆದು ಇಣುಕಿದರು. ಅದರಲ್ಲಿದ್ದುದು ಇಪ್ಪತ್ತೋ ಮೂವತ್ತೋ (ಆ ಕಾಲದಲ್ಲಿ ಒಂದು ಬಾಟಲ್ ಕಿಂಗ್ ಫಿಷರ್‌ನ ಬೆಲೆ ಕೇವಲ ಒಂದೂ ಮುಕ್ಕಾಲು ರೂಪಾಯಿ) ನಂತರ ‘ನೀನು ಕೇಳ್ತಿರೋಷ್ಟು ದುಡ್ಡಿಲ್ವಲ್ಲಾ’ ಎಂದರು ರಾಯರೆನ್ನಲು, ಆ ವ್ಯಕ್ತಿ ರಾಯರ ಪಕ್ಕದಲ್ಲಿ ಮಂಡಿಯೂರಿ ‘ಹಾಗನ್ಬೇಡಿ ಸಾರ್, ನಿಮ್ಮನ್ನೇ ನಂಬ್ಕೊಂಡಿದೀನಿ’ ಎಂದು ಕಣ್ಣೀರಿಟ್ಟ ಕಾಳಿಂಗರಾಯರು ಹಿಂದೆ ಮುಂದೆ ಯೋಚಿಸದೆ ತಾವು ತೋರುಬೆರಳಿನಲ್ಲಿ ತೊಟ್ಟಿದ್ದ ಉಂಗುರವನ್ನೇ ಆತನ ಕೈಗಿತ್ತು, ‘ಆಯ್ತು, ಹೋಗಿ ಇದನ್ನ ಅಡವಿಟ್ಟು ಸದ್ಯಕ್ಕೆ ಹಣಾನ ಹೊಂದಸ್ಕೊ, ಹೋಗು’ ಎನ್ನಲು ಆತ ಆ ಉಂಗುರದ ಸಹಿತ ರಾಯರಿಗೆ ಕೈ ಜೋಡಿಸಿ ‘ನಿಮ್ಮ ಈ ಋಣಾನ ಹೇಗ್ಸಾರ್ ತೀರಸ್ಲೀ?’ ಎನ್ನಲು, ರಾಯರು ‘ಆ ಮಾತೆಲ್ಲ ಈಗ್ಬೇಡ, ಮೊದ್ಲು ಕೆಲ್ಸ ನೋಡು’ ಎಂದರು.

ಆತ ದಾಪುಗಾಲಿನಿಂದ ಹೆಜ್ಜೆ ಹಾಕುತ್ತಾ ಹೋದ. ಕಾಳಿಂಗರಾಯರ ಕಾರ್ಯಕ್ರಮಗಳಲ್ಲಿ ಒಮ್ಮೊಮ್ಮೆ ಸಿತಾರ್ ವಾದ್ಯ ನುಡಿಸುತ್ತಿದ್ದ ಆ ವ್ಯಕ್ತಿ ಹೋದ. ಹೋದ ಎಂದರೆ ಹೊರಟೇ ಹೋದ. ರಾಯರಿತ್ತ ಉಂಗುರದೊಡನೆ. ಮತ್ತೆ ಕಾಳಿಂಗರಾಯರ ತೋರುಬೆರಳಿನಲ್ಲಿ ಆ ಉಂಗುರವನ್ನು ನಾನು ನೋಡಲಿಲ್ಲ. ಅಲ್ಲದೆ ಆತ ಅಂದು ಹೇಳಿದ್ದೆಲ್ಲಾ ಸುಳ್ಳು ಎಂಬುದು ನಮಗೆ ನಂತರ ತಿಳಿಯಿತು. ಹೀಗೆ ರಾಯರ ಲಕ್ಷ್ಮಿಯನ್ನು ಲಪಟಾಯಿಸುತ್ತಿದ್ದ ಲಫಂಗರೂ ಸಾಕಷ್ಟು ಮಂದಿ ಇದ್ದರು, ಅವರ ಪ್ರೀತಿಯ ಪ್ರಜಾವರ್ಗದಲ್ಲಿ. ಅಲ್ಲದೆ, ಕಾಳಿಂಗರಾಯರ ಉದಾರತೆಯನ್ನು ಕೆಲವು ಮಂದಿ ಬಲು ಕೆಟ್ಟದಾಗಿ ಬಳಸಿಕೊಂಡರು. ಅಂತಹ ಹಲವು ಅಯೋಗ್ಯರ ಯೋಗ್ಯತೆ ಏನೆಂಬುದನ್ನು ಕಾಳಿಂಗರಾಯರು ಅಳೆಯಲೇ ಇಲ್ಲವಲ್ಲಾ. ಜನರನ್ನು ನಂಬಬೇಕು, ನಿಜ. ಆದರೆ ಬಹುವಾಗಿ ನಂಬಿದರೂ ನಷ್ಟ ಗ್ಯಾರಂಟಿ. ಈ ಮಾತಿಗೆ ಅವರ ಉದಾರ ವ್ಯಕ್ತಿತ್ವದ ಬದುಕೇ ಸಾಕ್ಷಿ.

ಇನ್ನೊಮ್ಮೆ ನಾನೂ ಕಾಳಿಂಗರಾಯರೂ ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಬಳಿ ಬರುತ್ತಿದ್ದೆವು. ಆಗ ಹಿಂದಿನಿಂದ ಒಬ್ಬ ಬಾಲಕ ‘ಸಾರ್, ಸಾರ್’ ಎನ್ನುತ್ತ ಇವರತ್ತ ಬಂದ. ಅವನ ಭಿಕ್ಷಾನ್ನದ ಹುಡುಗ. ರಾಯರ ಮನೆಯ ಸಮಿಪದಲ್ಲೇ ಇದ್ದವ. ಆತ ಬಳಿಗೆ ಬಂದೊಡನೆ ರಾಯರು ‘ಏನ್ರಾಜಾ, ಏನ್ಸಮಾಚಾರ? ಚೆನ್ನಾಗಿ ಓದ್ತಾ ಇದೀಯಾ?’ ಎಂದರು. ಬಾಲಕ ‘ಹೂಂ ಸಾರ್’ ಎಂದು ತಲೆಯಾಡಿಸಿ ‘ಪರೀಕ್ಷೆಗೆ ಫೀಸ್ ಕಟ್ಟೋಕೆ ಈವತ್ತೇ ಕಡೆಯ ದಿನಾಂಕ ಸಾರ್. ದುಡ್ಡು ಸಿಗ್ಲಿಲ್ಲ’ ಎಂದು ರಾಗವೆಳೆಯಲು, ಅವನ ಇಂಗಿತವನ್ನರಿತ ಕಾಳಿಂಗರಾಯರು ‘ದುಡ್ಡು ರಸ್ತೇಲಿ ಬಿದ್ದಿರುತ್ತೇನೋ ಸಿಗೋದಕ್ಕೆ? ಎಷ್ಟು ಫೀಸು?’ ಎಂದರು. ಅವನು ‘ಹನ್ನೆರಡು ರೂಪಾಯಿ ಸಾರ್’ ಅಂದ. ‘ಅಷ್ಟೇ ತಾನೆ?’ ಎಂದ ರಾಯರು ತಮ್ಮ ಪರ್ಸಿನಿಂದ ಎರಡು ಹತ್ತರ ನೋಟುಗಳನ್ನು ಆ ಬಾಲಕನ ಕೈಗಿತ್ತು ಮೊದ್ಲು fee ಕಟ್ಟು. ಚೆನ್ನಾಗಿ ಓದು ರಾಜ. You must get a rank’ ಎಂದರು. ಆ ಬಾಲಕ ಇವರಿತ್ತ ಹಣವನ್ನು ತನ್ನ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದು ‘ತುಂಬ ಉಪಕಾರವಾಯ್ತು ಸಾರ್’ ಎಂದು ಹಿರಿಹಿಗ್ಗಿದಾಗ ರಾಯರ ಮುಖದಲ್ಲಿ ಅರಳಿದ ಮಲ್ಲಿಗೆಯ ಹರವನ್ನು ನಾ ಕಂಡೆ. ಆಗ ಅವರಿಗಾದ ಆನಂದ ಹೇಳತೀರದು.

* * *