೧೯೫೦ರ ಸುಮಾರು. ಶಿವಸ್ವಾಮಿಯವರು ಮೈಸೂರು ಆಕಾಶವಾಣಿ ಕೇಂದ್ರಕ್ಕೆ ವರ್ಗವಾಗಿ ಬಂದರು. ಆಗ ಮೈಸೂರಿನ ಚೆಲುವಾಂಬ ಮ್ಯಾನ್‌ಶನ್ (C.F.T.R.I.) ಸಭಾಂಗಣದಲ್ಲಿ ಆಕಾಶವಾಣಿ ವತಿಯಿಂದ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅದರಲ್ಲಿ ಹಲವು ಕಲಾವಿದರು ಖ್ಯಾತ ಕವಿಗಳ ಭಾವಗೀತೆಗಳನ್ನು ಹಾಡುವುದಿತ್ತು. ನಮ್ಮ ಕಾಳಿಂಗರಾಯರು ಅಂದು ಜಿ.ಪಿ. ರಾಜರತ್ನಂರವರ ‘ರತ್ನನ ಪದ’ಗಳನ್ನು ಹಾಡುವುದಿತ್ತು.

ಇದಕ್ಕೆ ಮೊದಲು ‘ರತ್ನನ ಪದ’ಗಳನ್ನು ಗಾಯಕರಾರೂ ಹಾಡುತ್ತಿರಲಿಲ್ಲ. ಈ ರತ್ನನ ಪದಗಳು ಹಾಡುವುದಕ್ಕೂ ಬರುತ್ತವೆ ಎಂಬುದನ್ನು ಮೊಟ್ಟ ಮೊದಲಿಗೆ ತಮ್ಮದೇ ಶೈಲಿಯಲ್ಲಿ ಅಲ್ಲಲ್ಲಿ ಹಾಡಿ ಸಾಬೀತುಗೊಳಿಸಿದವರು ಡಾ. ಎಚ್.ಕೆ. ರಂಗನಾಥ್‌ ಎಂದು ಕೇಳಿದ್ದೇನೆ. ಆದರೆ ಪೂರ್ಣ ಪ್ರಮಾಣದಲ್ಲಿ ವಾದ್ಯವೃಂದದ ನೆರವಿನಿಂದ, ಪಾಶ್ಚಾತ್ಯ ಸಂಗೀತದ ಸೊಗಡನ್ನು ಸೇರಿಸಿ ಎಲ್ಲ ವರ್ಗದ ಜನರೂ ಮೆಚ್ಚುವಂತೆ ರತ್ನನ ಪದಗಳನ್ನು ಮೂಲತಃ ಹಾಡಲಾರಂಭಿಸಿದ್ದು ಕಾಳಿಂಗರಾಯರೇ ಎಂದರೆ ತಪ್ಪಾಗಲಾರದು.

ಹೀಗೆ ಚೆಲುವಂಬ ಅರಮನೆಯಲ್ಲಿ ಕಾಳಿಂಗರಾಯರು ಎಂಡಕ್ಕುಡ್ಡ ರತ್ನನ ಪದಗಳನ್ನು ಹಾಡುತ್ತಾರೆಂಬುದು ತಿಳಿದಾಗ, ಆಹ್ವಾನಿತ ಶ್ರೋತೃಗಳ ಪೈಕಿ ಹಲವು ಮಡಿವಂತ ಮುದಿಯರು ಮೂಗು ಮುರಿಯುತ್ತಾ ‘ಇದೇನಿದು, ರತ್ನನ ಪದಗಳ್ನ ಹಾಡೋದೂಂದ್ರೇನು? ಅದೇನು ಭಾವಗೀತೆಯೇ, ದೇವರನಾಮವೇ, ಇಲ್ಲಾ ವಚನವೇ? ಅಲ್ಲವಲ್ಲ! ಅಲ್ಲದೆ ಕ್ಲಿಷ್ಟವಾದ, ಒತ್ತಕ್ಷರಗಳಿಂದ ಕೂಡಿದ ಪದಗಳು. ಪ್ರಾಸಬದ್ಧವಾದ ಸಾಲುಗಳು, ಇವನ್ನ ಓದೋದಕ್ಕೇ ಕಷ್ಟ. ಇನ್ನು ಅವನ್ನ ಹಾಡೋದಕ್ಕೆ ಹೇಗೆ ಸಾಧ್ಯ?’ ಎಂದು ತಮ್ಮ ತಮ್ಮಲ್ಲೇ ಚರ್ಚಿಸುತ್ತಿರಲು ಎದುರಿಗೆ ರಂಗವೇದಿಕೆಯ ತೆರೆ ಸರಿಯುತ್ತಿದ್ದಂತೆ, ಮಧ್ಯದಲ್ಲಿ ಮೈಕ್ ಹಿಡಿದು ಮೈಕೇಲ್ ಜಾಕ್ಸನ್ನಿನಂತೆ ಟಿಪ್-ಟಾಪಾಗಿ ನಿಂತಿದ್ದ ರಾಯರು ನಗುತ್ತಾ ನಲಿಯುತ್ತಾ ಬೀಗುತ್ತಾ ಬಾಗುತ್ತಾ ‘ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡಮುಟ್ಟಿದ್ ಕೈನಾ’ ಪದ್ಯವನ್ನು ಹಾಡಲಾರಂಭಿಸಿದಂತೆ, ಇದುವರೆಗೂ ಇರಸು – ಮುರಿಸಿನಿಂದ ಮುಖಗಂಟಿಕ್ಕಿ ಮುದುಡಿ ಕುಳಿತಿದ್ದ ಮಡಿವಂತ ಮುದುಕರ ಮುಖವೂ ಮೊರದಗಲವಾಗಿ ಹುಬ್ಬುಗಳ ಗಂಟು ಸಡಿಲವಾಯಿತು. ತಮ್ಮ ಅಕ್ಕಪಕ್ಕದ ಹಿಂದು ಮುಂದಿನ ಸಾಲುಗಳಲ್ಲಿ ಸಾಲುಗಟ್ಟಿ ಕುಳಿತಿದ್ದವರು, ಹೆಣ್ಣು ಗಂಡಾದಿಯಾಗಿ, ವಯೋಮಿತಿಯ ಅಂತರವಿಲ್ಲದೆ, ರಾಯರು ಸಂಭ್ರಮದಿಂದ ಹಾಡುತ್ತಿದ್ದ ಸಾಲು ಸಾಲನ್ನೂ ಸಂತೋಷದಿಂದ ಸ್ವಾಗತಿಸಿ, ಒಪ್ಪಿ ಮೆಚ್ಚುಗೆಯಿಂದ ಚಪ್ಪರಿಸಿ ಚಪ್ಪಾಳೆ ತಟ್ಟುತ್ತಿರಲು, ಅವರೊಟ್ಟಿಗೆ ಅನುಮಾನಪಟ್ಟಿದ ಆ ಹಲವು ಮುದಿಗೊಡ್ಡುಗಳೂ ಮೈಮರೆತು ಸೇರಿ, ಸರ್ವರೂ ಸಂತೋಷ ಸಾಗರದಲ್ಲಿ ಮುಳುಗಿಹೋದರಂತೆ!

ಮತ್ತದೇ ಕಾಲದಲ್ಲೊಮ್ಮೆ ಶಿವಸ್ವಾಮಿಯವರು ಒಂದು ಸಂಗೀತ ಪ್ರಧಾನವಾದ ಐತಿಹಾಸಿಕ ರೂಪಕವನ್ನು ಆಕಾಶವಾಣಿಯಿಂದ ಸಾದರಪಡಿಸಲು ಸಿದ್ಧರಾದರು. ಅಂತಹ ರೂಪಕವನ್ನು ರಚಿಸುವ ಹೊಣೆ ಹೊತ್ತು ‘ತಾನ್ ಸೇನ್’ ಗೀತ ನಾಟಕವನ್ನಿತ್ತವರು. ‘ಕನ್ನಡದ ಆಸ್ತಿ’ ಶ್ರೀ ಮಾಸ್ತಿಯವರು. ಅದರಲ್ಲಿರುವ ತಾನ್‌ಸೇನ್‌ಹಾಗೂ ಬೈಜು ಪಾತ್ರಗಳನ್ನು ನಿರ್ವಹಿಸಲು ವಿದ್ವತ್‌ಪೂರ್ಣವಾಗಿ ಉತ್ತರಾದಿ ಸಂಗೀತ ಪದ್ಧತಿಯಲ್ಲಿ ಹಾಡುವವರು ಬೇಕಿತ್ತು. ಹೀಗಾಗಿ ಸಂಗೀತ ಸ್ಪರ್ಧೆಯಲ್ಲಿ ತಾನ್‌ಸೇನನನ್ನೂ ಮೀರಿ ಹಾಡುವ ಬೈಜುವಿನ ಪಾತ್ರಕ್ಕೆ ಶಿವಸ್ವಾಮಿಯವರು ಆರಿಸಿದ್ದು ನಮ್ಮ ಕಾಳಿಂಗರಾಯರನ್ನು. ಉತ್ತರಾದಿಯಲ್ಲಿ ರಾಯರಿಗಿದ್ದ ಪಾಂಡಿತ್ಯದ ಅರಿವು ಆಗಿನ್ನೂ ಮಾಸ್ತಿಯವರಿಗೆ ಆಗಿರಲಿಲ್ಲ, ಬೈಜುವಿನ ಪಾತ್ರ ನಿಲಯದ ನೇರಪ್ರಸಾರ ದಿಂದ ಹೇಗೆ ಮೂಡಿ ಬಂದೀತೋ ಎಂಬ ಕಳವಳ ಮಾಸ್ತಿಯವರಿಗೆ. ಜೊತೆ ತಾನ್‌ಸೇನ್‌ಪಾತ್ರಧಾರಿಯ ಪ್ರತಿಭೆಯನ್ನೂ ತಿಳಿಯುವ ಕುತೂಹಲ. ಹೀಗಾಗಿ ಈ ರೂಪಕದ ತಾಲೀಮಿನ ಮೊದಲ ದಿನವೇ ಮಾಸ್ತಿಯವರು ಮುನ್ಸೂಚನೆ ಕೊಡದೆ ನಿಲಯದಲ್ಲಿ ಹಾಜರ್!

ಬೈಜು ಪಾತ್ರ ನಿರ್ವಹಿಸಲು ಬಂದ ಕಾಳಿಂಗರಾಯರನ್ನು ಶಿವಸ್ವಾಮಿಯವರು ಮಾಸ್ತಿಯವರಿಗೆ ಪರಿಚಯಿಸಿದರು. ರಾಯರ ಸರಳತೆ, ಸೌಮ್ಯತೆಯನ್ನು ಕಂಡೇ ಮಾಸ್ತಿಯವರು ಅವರತ್ತ ಅರ್ಧ ವಾಲಿದರು. ನಂತರ ಝೇಂಕರಿಸುತ್ತಿದ್ದ ಜೋಡಿ ತಂಬೂರಿಗಳ ಶ್ರುತಿಗೆ ಕಂಠಕೂಡಿಸಿ ಬೈಜುವಿನ ಗೀತೆಗಳನ್ನು ರಾಯರು ಹಾಡಿದಾಗ, ಶತಮಾನಗಳ ಹಿಂದೆ ಅಕ್ಬರನ ಕಾಲದಲ್ಲಿದ್ದ ಹುಚ್ಚ ಬೈಜುವಿನ ಸಾಕ್ಷಾತ್ಕಾರವೇ ಆದಂತಾಗಿ, ಮಾಸ್ತಿಯವರ ಮುಖದಲ್ಲಿ ಮಿನುಗಿದ ಸಂತೋಷ ಸಂತೃಪ್ತಿ ಹಾಗೂ ಮಂದಹಾಸದ ಮೆರುಗನ್ನು ಶಿವಸ್ವಾಮಿಗಳು ಮೆಲುಕು ಹಾಕುತ್ತಾ ವರ್ಣಿಸಿದಾಗ ನನಗೆ ‘ನನ್ನ’ ಕಾಳಿಂಗರಾಯರ ಬಗ್ಗೆ ಹೆಚ್ಚೆಚ್ಚು ಹೆಮ್ಮೆಯಾಯಿತು!

* * *