ಆ ಕಾಲದಲ್ಲಿ, ಅಂದರೆ ಕಾಳಿಂಗರಾಯರು ತುಂಬು ತಾರುಣ್ಯದಲ್ಲಿದ್ದಾಗ ಅವರಿಗೆ ಸಿಗುತ್ತಿದ್ದ ಸಂಭಾವನೆ ಎಷ್ಟಿತ್ತೆಂದರೆ, ಮದರಾಸಿನ ಅತ್ಯುತ್ತಮ ಸಂಗೀತಗಾರರನ್ನುಳಿದು ನಮ್ಮಲ್ಲಿಯ ಬಹುಮಂದಿ ಸಂಗೀತ ಕಲಾವಿದರು ಅಷ್ಟೊಂದು ಸಂಭಾವನೆಯನ್ನು ಪಡೆಯುವುದಿರಲಿ, ಯೋಚಿಸುವುದೂ ಸಾಧ್ಯವಿರಲಿಲ್ಲ. ಅಲ್ಲದೆ ರಾಯರ ಸಂಗೀತ ಕಾರ್ಯಕ್ರಮಗಳಿಗೆ ಸೇರುತ್ತಿದ್ದಷ್ಟು ಜನ ಉಳಿದ ಕಲಾವಿದರ ಕಾರ್ಯಕ್ರಮಕ್ಕೆ ಅಷ್ಟು ಅಪಾರ ಸಂಖ್ಯೆಯಲ್ಲಿ ಸೇರುತ್ತಿರಲಿಲ್ಲ. ಕಾರಣವಿಷ್ಟೆ, ಕಾಳಿಂಗರಾಯರ ಸಂಗೀತದ ಸರಕು ಪಂಡಿತ ಪಾಮರರನ್ನೆಲ್ಲಾ ಒಂದಲ್ಲ ಒಂದು ರೀತಿಯಿಂದ ರಂಜಿಸುತ್ತಿತ್ತು. ರಾಯರ ವ್ಯಕ್ತಿತ್ವ, ಹಾಡುವಾಗ ಅವರು ತೋರುತ್ತಿದ್ದ ಹಾವಭಾವ, ಧೀಮಂತ ನಿಲವು, ಇವುಗಳೇ ಹಲವರನ್ನು, ಅಂದರೆ ಸಂಗೀತ ತಿಳಿಯದವರನ್ನೂ ರಂಜಿಸುತ್ತಿತ್ತು ! ವೇದಿಕೆಯನ್ನೇರಿ ಮೈಕ್ ಮುಂದೆ ನಿಲ್ಲುತ್ತಿದ್ದಂತೆಯೇ ಪ್ರೇಕ್ಷಕ ವರ್ಗದ ಮಟ್ಟವನ್ನರಿತು ಆ ಮಟ್ಟದ ಜನ ಮೆಚ್ಚುವ ರೀತಿಯಲ್ಲಿ ಹಾಡಿ ಎಲ್ಲರಿಂದಲೂ ‘ಭೇಷ್’ ಎನ್ನಿಸಿಕೊಳ್ಳುತ್ತಿದ್ದುದು ಕಾಳಿಂಗರಾಯರ ವೈಶಿಷ್ಟ್ಯ.

ಅಲ್ಲದೆ ಕಾಳಿಂಗರಾಯರ ಕಾರ್ಯಕ್ರಮಗಳು ಅವರು ಬೀಡು ಬಿಟ್ಟೆಡೆಯಲ್ಲೆಲ್ಲಾ ದಿಢೀರನೆ ಏರ್ಪಾಡಾಗುತ್ತಿತ್ತು. ಒಂದು ಕಾರ್ಯಕ್ರಮಕ್ಕೆಂದು ಹೋಗಿ ಒಂದು ಡಜ್ಹನ್ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದುದು ರಾಯರಿಗೆ ಮಾಮೂಲು. ಅಲ್ಲದೆ ಭದ್ರಾವತಿ, ಧಾರವಾಡ, ಮದ್ರಾಸು ಇಂತಹ ಊರುಗಳಲ್ಲಿರುವ ಆಕಾಶವಾಣಿ ಕೇಂದ್ರದವರು ತಮ್ಮ ಸ್ಥಳಕ್ಕೆ ಕಾಳಿಂಗರಾಯರು ಬಂದಿರುವ ಸುಳಿವು ಸಿಕ್ಕುತ್ತಿದ್ದಂತೆ ಅವರನ್ನು ಕರೆಸಿಕೊಂಡು ಹಾಡಿಸಿ ಅವುಗಳನ್ನು ಧ್ವನಿಮುದ್ರಿಸಿಕೊಂಡು ರಾಯರಿಗೆ ಸೂಕ್ತ ಸಂಭಾವನೆಯನ್ನು ನೀಡುತ್ತಿದ್ದುದು ಸಾಮಾನ್ಯ ಸಂಗತಿ. ಕರ್ನಾಟಕದ ಎಲ್ಲ ಆಕಾಶವಾಣಿ ಕೇಂದ್ರದವರಿಗೂ ಕಾಳಿಂಗರಾಯರೆಂದರೆ ಅಷ್ಟೊಂದು ಅಭಿಮಾನ, ಪ್ರೀತಿ.

ಕಾಳಿಂಗರಾಯರು ತಮ್ಮ ವೃಂದದವರೊಡನೆ ಮೈಸೂರನ್ನು ಬಿಟ್ಟು ಹೊರಟರೆಂದರೆ ಮತ್ತೆ ಅವರು ಮೈಸೂರಿಗೆ ಎಂದು ಹಿಂತಿರುಗುತ್ತಾರೆಂದು ಹೇಳಲಾಗುತ್ತಿರಲಿಲ್ಲ. ಅವರ ಜೊತೆ ಒಮ್ಮೊಮ್ಮೆ ನಾನೂ ಹಾಗೂ ಶ್ರೀನಿವಾಸರಾವ್ ಹೋಗುತ್ತಿದ್ದೆವು. ರಾಯರ ಜೊತೆ ಊರಿಂದೂರಿಗೆ ಹೋಗುತ್ತಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಅಡ್ಡಾಡುವುದೆಂದರೆ ನಮಗೆ ಎಲ್ಲಿಲ್ಲದ ಮೋಜು. ಹೀಗೆ ಅವರ ಜೊತೆ ಹೋದಾಗ ನಾವೂ ಶೃಂಗಾರ ಶೇಖರರಂತೆ ಸೂಟು ಬೂಟು ಹಾಕಿಕೊಂಡು ರಾಯರ ಹಿಂಬದಿಯಲ್ಲಿ ನಿಂತು ಹಾಡಿದ್ದುಂಟು. ಹಾಡಿದ್ದುಂಟು ಎನ್ನುವುದಕ್ಕಿಂತ ತುಟಿ ಅಲ್ಲಾಡಿಸುತ್ತಿದ್ದುದುಂಟು ಎನ್ನುವುದು ಸೂಕ್ತ.

ಸಾಮಾನ್ಯವಾಗಿ ಕಾಳಿಂಗರಾಯರ ಕಾರ್ಯಕ್ರಮ, ಅವರ ಅವಧಿ, ರಾಯರಿಗೆ ಸಲ್ಲಿಸಬೇಕಾದ ಸಂಭಾವನೆ, ವಾದ್ಯದವರನ್ನು ಯಥಾರೀತಿ ಗೊತ್ತುಪಡಿಸುವುದು ಇತ್ಯಾದಿ ಈ ಎಲ್ಲ ಜವಾಬ್ದಾರಿಯನ್ನು ಸೋಹನ್‌ಕುಮಾರಿಯವರು ವಹಿಸಿಕೊಂಡು ನಿರ್ವಹಿಸುತ್ತಿದ್ದರು.

ಕಾಳಿಂಗರಾಯರು ತಮ್ಮ ಸಿರಿಕಂಠದ ಸಂಗೀತದಿಂದ ಕೇಳುವವರ ಮೇಲೆ ಅದೆಂತಹ ಪ್ರಭಾವ ಬೀರಿದ್ದರೆಂದರೆ ಒಮ್ಮೆ, ಅಂದರೆ ೧೯೬೬ ರಲ್ಲಿ ಮೈಸೂರಿನ ಸುಬ್ರಾಯನ ಕೆರೆಯ ಪಕ್ಕಕ್ಕೆ ಇರುವ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಅಲ್ಲಿಯ ಯುವಕರೆಲ್ಲಾ ಸೇರಿ ಶ್ರೀಗಣಪತಿ ಹಬ್ಬದ ಅಂಗವಾಗಿ ಹತ್ತು ಹದಿನೈದು ದಿನ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಒಂದು ದಿನ ನಮ್ಮ ಕಾಳಿಂಗರಾಯರ ಸಂಗೀತ ಏರ್ಪಾಡಾಗಿತ್ತು. ಏನಿಲ್ಲವೆಂದರೂ ಸುಮಾರು ಆರೇಳು ಸಾವಿರ ಜನ ಸೇರಿದ್ದರೇನೋ ! ಸೀತಾವಿಲಾಸ್ ಛತ್ರದ ವೃತ್ತದಿಂದ ಹಿಡಿದು ಸದ್ವಿದ್ಯಾ ಪಾಠಶಾಲೆಯವರಗೆ ಆ ರಸ್ತೆಯಲ್ಲಿ ಯಾವ ವಾಹನವು ಸಂಚರಿಸಲು ಸಾಧ್ಯವಾಗದಂತೆ ಜನ ತುಂಬಿದ್ದರು. ಆ ದಿನಗಳಲ್ಲಿ ಕಾಳಿಂಗರಾಯರ ಸ್ಟಾರ್ ವ್ಯಾಲ್ಯೂ ಎಷ್ಟಿತ್ತೆಂಬುದಕ್ಕೆ ಅಂತಹ ಜನ ಸಾಗರವೇ ಸಾಕ್ಷಿ.

ರಾಯರು ತುಂಬುಶಕ್ತಿಯಿಂದ ಕೂಡಿದ್ದು ಕೀರ್ತಿಯ ಉತ್ತುಂಗ ಶಿಖರದ ತುತ್ತ ತುದಿಯ ಸುತ್ತಮುತ್ತ ಸಂಚರಿಸುತ್ತಿದ್ದ ಪರ್ವಕಾಲವದು.

ಕಾಳಿಂಗರಾಯರು ತಾವು ಸಮಾರಂಭಗಳಲ್ಲಿ, ಹಾಡುತ್ತಿದ್ದ ಸಂಗೀತವನ್ನು ರೆಕಾರ್ಡ್ ಮಾಡಿಕೊಳ್ಳಲು ಯಾರಿಗೂ ಸಾಮಾನ್ಯವಾಗಿ ಸಮ್ಮತಿ ಕೊಡುತ್ತಿರಲಿಲ್ಲ. ಈಗಿರುವಂತೆ ಇಷ್ಟು ಸುಲಭವಾಗಿ ಧ್ವನಿಯನ್ನು ಮುದ್ರಿಸಿಕೊಳ್ಳುವ ಸಾಧನಗಳೂ ಆ ಕಾಲದಲ್ಲಿ ಇರಲಿಲ್ಲ. ಧ್ವನಿಮುದ್ರಿಸಿಕೊಳ್ಳಬೇಕಾಗಿದ್ದರೆ ಗ್ರಾಮಾಫೋನ್ ಪೆಟ್ಟಿಗೆಯಂಥ ಗ್ರಂಡಿಗ್ ಟೇಪ್‌ರೆಕಾರ್ಡರೇ ಗತಿ. ಹಾಡುವವರ ಮುಂದೆ ಅದರ ಮೈಕನ್ನಿಟ್ಟು ಧ್ವನಿಯನ್ನು ಸ್ಪೂಲ್‌ಟೇಪಿನಲ್ಲಿ ಹಿಡಿಯಬೇಕಿತ್ತು. ಬಹಳ ಪ್ರಯಾಸದ ಕೆಲಸ.

ಕಾಳಿಂಗರಾಯರ ಅಭಿಮಾನಿಗಳೊಬ್ಬರು ಏನಾದರೂ ಮಾಡಿ ರಾಯರ ಅಂದಿನ ಇಡೀ ಕಾರ್ಯಕ್ರಮವನ್ನು ಧ್ವನಿಮುದ್ರಿಸಿಕೊಳ್ಳುವ ತೀರ್ಮಾನ ಮಾಡಿದರು. ರಾಯರು ಇದಕ್ಕೆ ಒಪ್ಪುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ ಅವರು ಮಾಡಿದ ಉಪಾಯವೆಂದರೆ, ವೇದಿಕೆಯ ಮೇಲೆ ರಾಯರಿಗಾಗಿ ನಿಲ್ಲಿಸಿದ್ದ stand mike ನ ಪಕ್ಕದಲ್ಲಿ ಇನ್ನೊಂದು ಸ್ಟಾಂಡ್‌ಗೆ ಟೇಪ್‌ರೆಕಾರ್ಡರಿನ ಮೈಕನ್ನು ಸಿಕ್ಕಿಸಿ ಅದರ ತಂತಿಯನ್ನು (ಕೇಬಲ್) ಸುಮಾರು ಇನ್ನೂರು ಮುನ್ನೂರು ಅಡಿಗಳಷ್ಟು ದೂರಕ್ಕೆ ಎಳಸಿಕೊಂಡು ತಮ್ಮ ಮನೆಯಲ್ಲಿದ್ದ ಟೇಪ್ ರೆಕಾರ್ಡರ್‌ಗೆ ಹೊಂದಿಸಿ ರೆಕಾರ್ಡ್‌ಮಾಡಿಕೊಂಡರು. ಇವರ ಹೆಸರು ನಂದೀಶ್ವರ್, ಪ್ರಸ್ತುತ ನಾರಾಯಣ ಶಾಸ್ತ್ರಿರಸ್ತೆಯಲ್ಲ ‘ಕಲಾಂಬರ’ ಎಂಬ ಬಟ್ಟೆ ಅಂಗಡಿಯ ಮಾಲೀಕರಾಗಿ ವ್ಯವಹಾರ ನಡೆಸುತ್ತಿದ್ದಾರೆ.

ಇವರು ಕಾಳಿಂಗರಾಯರ ಕಟ್ಟಾ ಅಭಿಮಾನಿಯಾಗಿದ್ದು ಇಂದಿಗೂ ಅವರ ಬಳಿ ಆ recorded spool ಭದ್ರವಾಗಿದೆ. ಈ ನಂದೀಶ್ವರ್ ನನ್ನ ಆತ್ಮೀಯರೂ ಅಹುದು.

ಹೀಗೆಯಾ ಆ ದಿನಗಳಲ್ಲಿ ಕಾಳಿಂಗರಾಯರು ಹಾಡಿರುವ ಹಲವಾರು ಹಾಡುಗಳ ಸಂಗ್ರಹ, ನಮ್ಮ ಖ್ಯಾತ ಕವಿ ಮಿತ್ರ ಕಿ.ರಂ. ನಾಗರಾಜರ ಬಳಿಯೂ ಇದೆ ಎಂದು ಕೇಳಿದ್ದೇನೆ. ಮೈಸೂರಿನ ರಾಮಸ್ವಾಮಿ ವೃತದಲ್ಲಿರುವ ಸದ್ವೆದ್ಯ ಶಾಲೆಯ ಮಾಲೀಕರಾಗಿದ್ದ ಸೀತಾರಾಂ ಅವರಲ್ಲಿಯೂ ಕಾಳಿಂಗರಾಯರು ಹಾಡಿರುವ ಹಲವಾರು ಅಸಪರೂಪದ ಗೀತೆಗಳ ಧ್ವನಿಮುದ್ರಿತ ಟೇಪ್ ಇದೆ. ಅಲ್ಲದೆ ಎಚ್. ಆರ್. ಲೀಲಾವತಿಯವರಲ್ಲಿಯೂ, ಅಕ್ಕಮಹಾದೇವಿ ಗೀತರೂಪಕದ ಟೇಪಿದೆ. ಇದರಲ್ಲಿ ಕಾಳಿಂಗರಾಯರೊಡನೆ ಲೀಲಾವತಿಯವರೂ ಹಾಡಿದ್ದಾರೆ.

ಪಿ. ಶ್ರೀನಿವಾಸರಾಯರು ‘Kalinga Rao was not a mere singer, more than that he was a great performer! ಎಂದು ರಾಯರ ಬಗ್ಗೆ ಹೇಳುತ್ತಿದ್ದರು.

ಈ ಗುಣ ವಿಶೇಷದಿಂದಲೇ ಕಾಳಿಂಗರಾಯರು ಸುಗಮ ಸಂಗೀತ ಲೋಕದಲ್ಲಿ ಧ್ರುವತಾರೆಯಾಗಿ ಬಹುವರ್ಷ ಬೆಳಗಿದರೆಂದರೆ ಅದು ಖಂಡಿತ ಉತ್ಪ್ರೇಕ್ಷೆಯ ಮಾತಾಗುವುದಿಲ್ಲ!

ಕಾಳಿಂಗರಾಯರ ಅಗಲಿಕೆಯಿಂದ ಲಘು ಸಂಗೀತ ಲೋಕದಲ್ಲಿ ಬಿಟ್ಟಿರುವ ಬಿರುಕು ಸಾಮಾನ್ಯವಾದುದಲ್ಲ. ಅದನ್ನು ತುಂಬಲು ಯಾರು ಬರುತ್ತಾರೋ, ಯಾವಾಗ ಬರುತ್ತಾರೋ… ಪ್ರಾಯಶಃ ಯಾರೂ ಬರಲರಾರು. ಇದು ನನ್ನ ವೈಯಕ್ತಿಕ ಅನಿಸಿಕೆ.

* * *